3597

ಸಯಾಮಿಯೋ, ಅವಳಿ ಜವಳಿಯೋ, ದೇಹ ಬೇರೆ ಆತ್ಮ ಬೇರೆಯೋ?

ಡಬ್ಬಲ್ ಮೀನಿಂಗ್ ಎಂದರೆ ಅಪಾರ್ಥವಾಗಬಹುದು. ಯಾಕೆಂದರೆ ಅದು ಈಗಾಗಲೇ ಡಿಕ್ಷನರಿ ಮೀನಿಂಗ್ ಕಳೆದುಕೊಂಡು ಬೇರೆ ರೀತಿ ಬಳಕೆಯಾಗಿದೆ. ಆದರೆ ಅದಕ್ಕೆ ಶಬ್ದಶಃ ಅರ್ಥ ಕೊಡಬೇಕು ಅಂದರೆ ಎರಡು ಅಥವಾ ದ್ವಂದ್ವ ಅರ್ಥ ಎಂದು ಹೇಳಬಹುದೇ? ಈ ತರಹ ಎರಡೆರಡು ಅರ್ಥ ಕೊಡುವ ಹಾಡುಗಳು ಕನ್ನಡದಲ್ಲಿ ಸಾಕಷ್ಟಿವೆ. ಎರಡರ್ಥವೆಂದರೆ ಒಂದು ಮೇಲ್ನೋಟಕ್ಕೆ ಸಿಗುವಂತದ್ದು ಎರಡನೇಯದ್ದು ಅಶ್ಲೀಲವಾದದ್ದಲ್ಲ. ಮೇಲ್ನೋಟಕ್ಕೆ ಸಿಗುವ ಸಾಮಾನ್ಯ ಅರ್ಥವಾದರೆ ಒಳಹೊಕ್ಕಾಗ ಸಿಗುವುದು ವಿಶೇಷ ಅರ್ಥ.

ಹಲವು ಭಾರಿ ನಮಗೊಂದು ಮಾತು ಹೇಳಬೇಕು. ಅನುಮಾನ ಪರಿಹರಿಸಿಕೊಳ್ಳಬೇಕು ಎಂದಾಗ ನೇರಾನೇರ ಕೇಳಲಾಗುವುದಿಲ್ಲ. ಅದನ್ನು ಪರೋಕ್ಷವಾಗಿ ಕೇಳಬೇಕಾಗುತ್ತೆ ಹೇಳಬೇಕಾಗುತ್ತೆ. ಅದು ಪ್ರೇಮನಿವೇದನೆಯೂ ಆಗಿರಬಹುದು ಮತ್ತೊಂದು ಆಗಿರಬಹುದು. ಕೆಲವೊಂದು ಪರದೆಗಳಿರುತ್ತವೆ ಅವು ಮುಜುಗರ, ಪರಿಸ್ಥಿತಿ, ಸಂದಿಗ್ಧ ಇತ್ಯಾದಿ. ಈ ಕಾರಣಗಳಿಂದ ಅಷ್ಟೂ ಮಾತುಗಳು ಮನಸ್ಸಲ್ಲೇ ಉಳಿದು ಬಿಡುತ್ತವೆ. ಪರದೆ ಆಚೆ ನಿಂತ ವ್ಯಕ್ತಿಯಿಂದ ಉತ್ತರ ಪಡೆಯಲು ಅಥವಾ ಅವನಿಗೆ ಕನಿಷ್ಠ ಪಕ್ಷ ನಮ್ಮ ಮನದಿಂಗಿತ ಹೇಳಲು ನಾವು ಹಿಡಿವ ಹಾದಿಯೇ ಪರೋಕ್ಷವಾದದ್ದಾಗಿರುತ್ತದೆ.

ಎಷ್ಟೋ ಸಲ ಭಾವಗೀತೆಗಳನ್ನು ಕೇಳಿನೋಡಿ. ಅವು ಪ್ರತಿ ಚರಣದ ಅಂತ್ಯಕ್ಕೂ ಒಂದು ಗೊಂದಲ ಹುಟ್ಟಿಸುತ್ತವೆ. ಕವಿ ಹೇಳುತ್ತಿರುವುದು ವಿರಹವೋ ವೈರಾಗ್ಯವೋ? ಎಂಬ ಗೊಂದಲ ಹುಟ್ಟಿಯೇ ಇರುತ್ತೆ. ಯಾಕೆಂದರೆ ಹಾಡಿನ ಕೆಲವು ಸಾಲುಗಳು ಒಂದರ್ಥ ಬಿಂಬಿಸಿದರೆ ಇನ್ನು ಕೆಲವು ಸಾಲುಗಳು ಬೇರೆಯದೇ ಅರ್ಥ ಹೊಮ್ಮಿಸುತ್ತದೆ.

ಕನ್ನಡದ ಮೊದಲಿನ ಚಿತ್ರ ಸಾಹಿತಿಗಳು ಇಂಥ ಒಂದು ದ್ವಂದ್ವಾರ್ಥದ ಹಾಡುಗಳ ಪ್ರಯೋಗ ಮಾಡಿದ್ದಾರೆ ಮತ್ತು ಗೆದ್ದಿದ್ದಾರೆ ಕೂಡಾ. ಮೊದಲನೇ ಚರಣದ ದ್ವಂದ್ವಗಳು ಎರಡನೇ ಚರಣಕ್ಕೆ ಮುಗಿದುಹೋಗುತ್ತವೆ. ಆದರೆ ಕೆಲವೊಂದಿಷ್ಟು ಹಾಡುಗಳು ದ್ವಂದ್ವವನ್ನು ಉಳಿಸಿಯೇ ಹೋಗುತ್ತವೆ.

೧.ತಾವೆಲ್ಲ ಗಾಳಿಮಾತು ಚಿತ್ರದ “ಒಮ್ಮೆ ನಿನ್ನನ್ನು ಕಣ್ತುಂಬ ಕಾಣುವಾಸೆ ಎಲ್ಲಿರುವೆ

” ಎಂಬ ಹಾಡನ್ನು ಕೇಳಿಯೇ ಇರುತ್ತೀರಿ. ಇಡಿಯ ಹಾಡು ಹುಡುಗನೊಬ್ಬನ ವರ್ಣನೆಯೇನೋ ಎನಿಸಿ ಬಿಡುತ್ತೆ. ಆದರೆ ಹಾಡಿನ ಕೊನೆಯ ಮೂರು ಸಾಲು ನಿಮ್ಮನ್ನು ಗೊಂದಲಕ್ಕೀಡು ಮಾಡುತ್ತವೆ.
ಆ ಸಾಲುಗಳು ಇಂತಿವೆ.
“ಮೂಡಣದ ಅಂಚಿನಿಂದ ನಿನ ಪಯಣವೋ
ಮುಂಜಾನೆ ಕಾಣೋ ಕೆಂಪು ಚೆಂದುಟಿಯ ಬಣ್ಣವೋ
ಆಗಸದ ನೀಲಿಯೆಲ್ಲಾ ನೀ ನಡೆಯೊ ಹಾದಿಯೋ ”
ಇದು ಸೂರ್ಯನ ಕುರಿತು ಬರೆದ ಸಾಲುಗಳು.
ಆದರೆ
“ಮಿನುಗುತಿಹ ತಾರೆಯೆಲ್ಲಾ ನಿನ ಕಂಗಳೋ
ನಗುತಿರಲು ಭೂಮಿಯೆಲ್ಲಾ ಬೆಳದಿಂಗಳೋ
ಆ ಬೆಳ್ಳಿ ಮೋಡವೆಲ್ಲ ನೀ ಬರೆದ ಬೊಂಬೆಗಳೋ”
ಈ ಸಾಲು ಸೂರ್ಯನ ಕುರಿತು ಆಗಿರಲು ಸಾಧ್ಯವೇ ಇಲ್ಲ. ಯಾಕೆಂದರೆ ಪ್ರಖರ ಸೂರ್ಯ ಎಂದಿಗೂ ನಗಲಾರಾ ಅದಕ್ಕೆ ಅದನ್ನು ಬೆಳದಿಂಗಳು ಎನ್ನಲು ಸಾಧ್ಯವೂ ಇಲ್ಲ. ಇದು ಯಾವುದೋ ಸದಾಸ್ಮಿತ ಹುಡುಗನ ಕುರಿತು ಬರೆದ ಸಾಲು ಅನಿಸುತ್ತೆ.
ಆದರೆ ಮೊದಲ ಚರಣದ ಆರೂ ಸಾಲುಗಳನ್ನೊಮ್ಮೆ ಕೇಳಿ ನೋಡಿ ಸಂಪೂರ್ಣ ಹುಡುಗನ ಕುರಿತಾದದ್ದೇ ಅನಿಸುತ್ತೆ.
ಎಂಬತ್ತರ ದಶಕದ ಸಂಪ್ರದಾಯಸ್ಥ ಸಮಾಜದಲ್ಲಿ ಸತ್ಸಂಸ್ಕಾರಯುತ ಹುಡುಗಿ ಯಾವುದೇ ಹುಡುಗನ ಬಗ್ಗೆ ನೇರಾನೇರ ಹೇಳಲಿಕ್ಕೆ ನಾಚಿಕೆ ಇದ್ದೇ ಇರುತ್ತೆ. ಅದನ್ನು ಬಿಂಬಿಸೋಕೆ ಪ್ರೇಕ್ಷಕರ ಮುಂದೊಂದು ಯಕ್ಷಪ್ರಶ್ನೆ ಇಟ್ಟುಬಿಟ್ಟರು. ಅದೇ ಈ ಹಾಡು.

೨.ಈ ಮೇಲಿನ ಹಾಡಿನಂತೆ ಮತ್ತೊಂದು ಹಾಡು ಇದು ಸೂರ್ಯನ ಕುರಿತಾದದ್ದಾ ನಾಯಕನ ಕುರಿತಾದದ್ದಾ ಎಂಬ ಗೊಂದಲವಿದೆ. ಅದು ಹೊಸಬೆಳಕು ಚಿತ್ರದ “ರವಿ ನೀನು ಆಗಸದಿಂದ.

ರವಿ ಎಂಬ ಪದದಿಂದಲೇ ಹಾಡು ಶುರುವಾದ ಮೇಲೆ ಮತ್ಯಾಕೆ ಗೊಂದಲ ಎನಬಹುದು. ಆದರೆ ಚಿತ್ರದ ಹಾಡು ಮಾತ್ರ ಕೇಳದೆ ಚಿತ್ರ ನೋಡಿದರೆ ಕಥಾನಾಯಕನ ಹೆಸರು ಕೂಡಾ ರವಿ. ಮಲತಾಯಿಯ ತಮ್ಮನ ಮೇಲೆ ನಾಯಕಿಗೆ ಮೋಹ. ಮಲತಾಯಿಗೆ ತನ್ನ ಸ್ವಂತ ಮಗಳನ್ನು ನಾಯಕನಿಗೆ ಗಂಟು ಹಾಕುವ ಆಸೆ. ಅದಕ್ಕೆ ಮಲಮಗಳನ್ನು ಸಾಗಿ ಹಾಕಲು ಮತ್ತೊಬ್ಬನ ಜೊತೆ ನಿಶ್ಚಿತಾರ್ಥ ಮಾಡಿಬಿಡುತ್ತಾಳೆ. ಆ ವರ ಅವಳನ್ನು ಹಾಡಲು ಒತ್ತಾಯಿಸಿದಾಗ
“ರವಿ ನೀನು ಆಗಸದಿಂದ ಮರೆಯಾಗಿ ಹೋಗದೆ ನಿಲ್ಲು
ಬಾಳೆಲ್ಲ ಕತ್ತಲೆ ತುಂಬಿ ನೀ ಓಡದೆ” ಎಂಬ ಹಾಡಿನ ಮೊದಲ ಸಾಲೇ ತನ್ನ ಮದುವೆಯಾಗುವ ಗಂಡಿನ ಪರದೆಯ ಆಚೆಗಿನ ಹುಡುಗನ ಬಗ್ಗೆ ಪರೋಕ್ಷವಾಗಿ ಹಾಡುತ್ತಿದ್ದಾಳೆ ಎಂದು ಗೊತ್ತಾಗಿಬಿಡುತ್ತದೆ. ಸೂರ್ಯ ಇಲ್ಲಿ ಸೇತುವಾಗುತ್ತಾನೆ. ಹಾಡಿನ ಯಾವುದೇ ಸಾಲಿನಲ್ಲೂ ಇದು ನಾಯಕನನ್ನೇ ಕುರಿತದ್ದು ಎಂಬ ನಿಲುವಿಗೆ ಬರಲು ಸಾಧ್ಯವೇ ಇಲ್ಲ.
“ಕಡಲಿಂದ ನೀರನು ತರುವೆ,
ಮಳೆಯಂತೆ ಭೂಮಿಗೆ ಸುರಿವೆ
ನೆಲದಲ್ಲಿ ಹಸಿರನು ಚೆಲ್ಲಿ,
ಸಂತೋಷ ಸಂಭ್ರಮ ತರುವೆ ”
ಇಷ್ಟೂ ಸಾಲುಗಳು ಸೂರ್ಯನ ಕುರಿತಾದದ್ದೇ ಆದರೆ ನಾಯಕ ನಟ ನಾಯಕಿಯ ಬದುಕಿಗೆ ಬಂದರೆ ಪ್ರಕೃತಿಯಲ್ಲಿ ಸೂರ್ಯನಾಗಮನದಿಂದಾಗುವ ಬದಲಾವಣೆಗಳೇ ಆಗುತ್ತವೆ ಎಂದೂ ನಾವು ಅರ್ಥೈಸಿಕೊಳ್ಳಬಹುದು. ಆದರೆ ಈ ನಾಲ್ಕು ಸಾಲಿನ ನಂತರ “ನಿನಗಾಗಿ ಲತೆಯಲಿ ಹೂವಾ ನಾ ನಗಿಸುವೆ” ಎಂಬ ಸಾಲಿನಲ್ಲಿ ‘ನಾ’ ಎಂಬ ಉತ್ತಮ ಪುರುಷರ ಬಳಕೆಯಿದ್ದು ಹಾಡಿದ್ದು ನಾಯಕನೇ ಆಗಿದ್ದರಿಂದ ಇದು ನಾಯಕನ ಕುರಿತದ್ದೆ ಎಂಬ ನಿರ್ಧಾರಕ್ಕೆ ಬರಬಹುದು. ಚಿತ್ರ ನೋಡಿ ಕಥೆಯರಿತ ಜನರಿಗೆ ಸುಲಭವಾಗಿ ಮತ್ತು ಚಿತ್ರ ನೋಡದವರಿಗೆ ಚೂರು ಗೊಂದಲವುಳಿಸೋ ಹಾಡು.
ಆದರೆ ಎರಡನೇ ಚರಣದಲ್ಲಿ ಹಾಗಿಲ್ಲ.
“ರವಿ ನಿನ್ನ ಕಾಂತಿಯೆ ಜೀವ,
ನೀ ನನ್ನ ಬಾಳಿನ ದೈವ
ನೀ ದೂರವಾದರೆ ಹೀಗೆ,
ನಾ ತಾಳಲಾರೆನು ನೋವ ”
ಮೊದಲೆರಡು ಸಾಲು ಸೂರ್ಯ ನಾಯಕರಿಬ್ಬರ ಕುರಿತಾದದ್ದು ಮುಂದಿನೆರಡು ಸಾಲುಗಳು ನಾಯಕನ ಕುರಿತಾದದ್ದು.
“ಈ ನನ್ನ ಪ್ರೇಮದ ಹೂವ ನಾ ಮರೆವೆನೇ ” ಈ ಸಾಲಿನಲ್ಲಿ ‘ನಾ’ ಎಂಬ ಉತ್ತಮ ಪುರುಷ ನಾಯಕನ ಧ್ವನಿಯಲ್ಲಿ. ಇಲ್ಲಿ ಮತ್ತೊಮ್ಮೆ ಇಂಥ ಹಾಡು ಬರೆಯೋಕೆ ನಾಯಕಿಗೆ ಮದುವೆ ಗಂಡಿನ ಮುಂದೆ ಏನನ್ನೂ ಹೇಳಲಾಗದ ಸಂದಿಗ್ಧವೇ ಕಾರಣ.

೩. ಗಂಡನ ವಿವಾಹೇತರ ಸಂಬಂಧದ ಬಗ್ಗೆ ಹೆಂಡತಿಗೆ ಅನುಮಾನ. ಆ ಮೂರನೇಯವಳಿಗೆ ನೇರಾನೇರ ಕೇಳಿ ಹೇಳಲಾಗದ ಸಂದಿಗ್ಧವೂ ಇದೆ. ಆಗ ಸಹಾಯಕ್ಕೆ ಬರುವುದೇ ಹಾಡು. ‘ಎರಡು ರೇಖೆಗಳು’ ಚಿತ್ರದ “ನೀಲ ಮೇಘ ಶಾಮ ನಿತ್ಯಾನಂದ ಧಾಮ

” ಹಾಡು ಇಂಥ ಒಂದು ಚಿತ್ರದ ನಾಯಕಿಯ ಪರಿಸ್ಥಿತಿಯನ್ನು ಸಮರ್ಥವಾಗಿ ಬಗೆಹರಿಸುತ್ತದೆ.
ಆದರೆ ಹಾಡಿನ ಆರಂಭದಲ್ಲಿನ ಎರಡು ಸಾಲುಗಳು
“ಪ್ರಶ್ನೆಯೊಂದು ಮೂಡಿಹುದು ನೋಡಮ್ಮ
ಉತ್ತರವೂ ಅಡಗಿಹುದೂ ಕೇಳಮ್ಮ ”
ಎಂದಿರುವುದರಿಂದ ಅಲ್ಲಿ ಒಂದು ಪ್ರಶ್ನೋತ್ತರ ಜುಗಲ್’ಬಂದಿ ಇದೆ ಅಂತಲೂ ಗೊತ್ತಾಗಿ ಬಿಡುತ್ತದೆ. ಆದರೆ ಹಾಡನ್ನು ಎಷ್ಟು ಸಮರ್ಥವಾಗಿ ಕಟ್ಟಿದ್ದಾರೆ ಅಂದರೆ ಎಲ್ಲರಿಗೂ ಮೇಲ್ನೋಟಕ್ಕೆ ಒಂದು ನವರಾತ್ರಿಯ ಹಾಡಾಗಿಯೇ ಕಾಣುತ್ತದೆ. ಅಲ್ಲಿ ಇಬ್ಬರೂ ಪಟ್ಟದರಸಿಯರಾಗುವ ತಮ್ಮ ಹಕ್ಕುಗಳನ್ನು ಪ್ರತಿಪಾದಿಸುತ್ತಾ ಹೋಗುತ್ತಾರೆ. ಒಬ್ಬಳು ದ್ವಿಪತ್ನಿತ್ವ ಮತ್ತೊಬ್ಬಳು ಏಕ ಪತ್ನಿತ್ವವನ್ನು ದೇವರುಗಳನ್ನು ಸೋದಾಹರಣವಾಗಿ ಬಳಸುತ್ತಾ ಸಮರ್ಥಿಸಿಕೊಳ್ಳುತ್ತಾರೆ.ಕೃಷ್ಣ, ರುಕ್ಮಿಣಿ, ಸತ್ಯಭಾಮೆ ಹಾಗೂ ಶಿವ ಪಾರ್ವತಿ ಗಂಗೆಯರು ಹಾಡಿಗೆ ಪೂರಕವಾಗುತ್ತಾರೆ. ಆ ಮೂಲಕ ತ್ರಿಕೋನ ಪ್ರೇಮ ಕಥೆಯ ಮೂರು ಮೂಲೆಗಳಲ್ಲಿ ಸ್ಥಾಪಿತರಾಗಿ ಚಿತ್ರಕತೆಯ ಮೂರು ಪಾತ್ರಗಳನ್ನು ಪ್ರತಿನಿಧಿಸುತ್ತಾರೆ. ದೇವರ ಉದಾಹರಣೆ ನೀಡಿದ್ದಕ್ಕೆ ಸಿನಿಮಾ ನೋಡದೆ ಹಾಡು ಕೇಳುವವರಿಗೆ ಇದೊಂದು ವೈಯುಕ್ತಿಕ ಜಟಾಪಟಿ ಅನಿಸುವುದಿಲ್ಲ ಇದನ್ನು ನೋಡಿ ಕಥೆಯ ಸ್ವಾರಸ್ಯ ಅರಿಯಲು ಚಿತ್ರಮಂದಿರಕ್ಕೆ ಜನರು ಮುಗಿಬೀಳುತ್ತಿದ್ದರು. ಚಿತ್ರದ ನಿರ್ದೇಶಕ ಕೆ.ಬಾಲಚಂದರ್ ಸೃಜನಶೀಲ ವ್ಯಕ್ತಿ ಈ ಹಾಡೊಂದೇ ಅಲ್ಲ ಇಡೀ ಚಿತ್ರವನ್ನೊಮ್ಮೆ ನೋಡಿ. ಒಂದೊಂದು ಪ್ರಾಪರ್ಟಿಯನ್ನು ಸಂದರ್ಭಾನುಸಾರ ಕಥೆಯ ಪುಷ್ಟೀಕರಣಕ್ಕೆ ಬಳಸಿರುವುದು ನಿಜಕ್ಕೂ ಸೋಜಿಗ. ಒಂದು ನಿರ್ಜೀವ ವಸ್ತುವಿಗೂ ಭಾವ ತುಂಬುವ ಕೆಲಸವೆಂದರೂ ಸರಿಯೇ.

೪.ಒಲ್ಲದ ಮನಸ್ಸಿನಲ್ಲಿ ತಾಯಿಯ ಮಾತಿಗಾಗಿ ಮದುವೆಯಾದ ಕಥಾನಾಯಕ. ಹೆಂಡತಿಯ ಜೊತೆಗಿದ್ದರೆ ಎಲ್ಲಿ ತನ್ನ ಪ್ರಥಮ ಪ್ರೇಮಕ್ಕೆ ಮೋಸ ಮಾಡಿಬಿಟ್ಟಹಾಗಾಗುತ್ತೋ ಎನ್ನುವ ಸಣ್ಣ ಪಾಪಪ್ರಜ್ಞೆ. ಪವಿತ್ರ ಪ್ರೇಮವೆಂಬುದು ಮದುವೆ ಎಂಬ ಒಂದು ಸೀಮಿತತೆಗೆ ಮುಗಿದು ಹೋಗುವುದಿಲ್ಲ ಎಂಬುದನ್ನು ತೋರಿಸಿದ ಒಂದು ಅಪರೂಪದ ಚಿತ್ರ “ಎರಡು ಕನಸು.” ನಾಯಕನ ಒಂದೇ ಒಂದು ಸಲ ಮಾತಾಡಿದರೆ ಸಾಕು ಅವನ ಪ್ರೇಮ ಅನುಕಂಪವೆಲ್ಲ ಬೇಡ ಎಂದು ದೀನನೇತ್ರಳಾಗಿ ಕಾಯುವ ಹೆಂಡತಿ. ಮದುವೆಯಾಗಿ ಎಷ್ಟೋ ದಿನವಾದರೂ ಒಂದು ಕಾಗದವೂ ಬರೆಯದೇ ಹೋದಾಗ ಅವಳನ್ನು ಅವನಿಗೆ ತಿಳಿಸದೆ ಮನೆಗೆ ಕರೆತರುತ್ತಾರೆ. ನಸುಕಿನ ವೇಳೆಗೆ ಮೂಡಿಬರುವ ಹಾಡೇ
“ಪೂಜಿಸಲೆಂದೆ ಹೂಗಳ ತಂದೆ
ದರುಶನ ಕೋರಿ ನಾ ನಿಂದೆ
ತೆರೆಯೋ ಬಾಗಿಲನು ರಾಮಾ

ಮೇಲ್ನೋಟಕ್ಕೆ ಇದು ಒಂದು ಭಕ್ತಿ ಗೀತೆ. ಆದರೆ “ರಾಮಾ” ಎಂಬುದು ಕಥಾನಾಯಕನ ಹೆಸರೂ ಹೌದು. ಇಲ್ಲಿ ಪರೋಕ್ಷವಾಗಿ ಗಂಡನ ಮನದ ಬಾಗಿಲು ತೆರೆಯೋದರ ಕುರಿತು ನಾಯಕಿ ವಿನಂತಿಸುತ್ತಿದ್ದಾಳೆ ಅಲ್ಲವೇ?
“ಒಲಿದರು ಚೆನ್ನ ಮುನಿದರು ಚೆನ್ನ
ನಿನ್ನಾಸರೆಯೇ ಬಾಳಿಗೆ ಚೆನ್ನ
ನಾ ನಿನ್ನ ಪಾದದ ಧೂಳಾದರೂ ಚೆನ್ನ
ಸ್ವೀಕರಿಸು ನನ್ನ ಸ್ವಾಮಿ”
ಎಂಬ ಸಾಲುಗಳಿವೆಯಲ್ಲ. ಬರೀ ಹಾಡಿನ ಸಾಲುಗಳು ಮಾತ್ರವಲ್ಲ. ಕಥೆಯ ಉದ್ದಕ್ಕೂ ನಾಯಕಿಯ ಪಾಡೂ ಹೌದು. ಬೊಗಸೆ ಪ್ರೀತಿಗಾಗಿ ಸೆರಗೊಡ್ಡಿ ನಿಲ್ಲುವ ನಾಯಕಿ. ಎಲ್ಲಿ ಒಪ್ಪಿ ಬಿಟ್ಟರೆ ಮನಸೋತು ಬಿಟ್ಟರೆ ಆತ್ಮವಂಚನೆಯಾದೀತು ಎಂದುಕೊಳ್ಳುವ ನಾಯಕ. ಹೀಗಾಗಿ ಈ ಹಾಡು ನಾಯಕನ ಕುರಿತಾದದ್ದು ರಾಮ ಎಂಬ ಪದ ಇಬ್ಬರ ಸೂಚಕ.

೫. ಬ್ರಹ್ಮಾಸ್ತ್ರ ಎಂಬ ಅಂಬರೀಷ್ ದ್ವಿಪಾತ್ರದಲ್ಲಿ ನಟಿಸಿದ ಚಿತ್ರವೊಂದಿದೆ. ಕಥಾನಾಯಕ ಕವಿಯೂ ಹೌದು. ಒಬ್ಬ ಅನುರೂಪಳಾದ ಹುಡುಗಿ ಕನ್ನಡಾಂಬೆಯ ಬಗ್ಗೆ
ಒಂದು ಹಾಡನ್ನು ಬರೆದು ಕೊಡಲು ಕೇಳುತ್ತಾಳೆ. ಹುಡುಗನಿಗೆ ಕನ್ನಡ ತಾಯಿಯ ಬಗ್ಗೆ ಬರೆಯಬೇಕೋ ಈ ಹುಡುಗಿಯ ಬಗ್ಗೆ ಬರೆಯಬೇಕೋ ಗೊಂದಲ. ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆದು ಬಿಡುತ್ತಾನೆ.
“ಕನ್ನಡಮ್ಮನ ದೇವಾಲಯ ಕಂಡೆ ಹೆಣ್ಣಿನ ಕಂಗಳಲಿ
ಕನ್ನಡ ನಾಡಿನ ಚರಿತೆಯನೆ ಕಂಡೆ ಆಕೆಯ ಹೃದಯದಲಿ
ವಂದನೆ ಆ ಹೆಣ್ಣಿಗೆ ಅಭಿನಂದನೆ ಆ ಕಣ್ಣಿಗೆ

ಕನ್ನಡಾರಾಧನೆಯೋ ಸೌಂದರ್ಯರಾಧನೆಯೋ ಅಥವಾ ಎರಡರದ್ದು ಸಮ್ಮಿಶ್ರಣವೋ? ನಾಯಕಿಗೆ ತನ್ನ ಮೆಚ್ಚುಗೆಯನ್ನು ಪರೋಕ್ಷವಾಗಿ ತಲುಪಿಸುವ ಕವಿತಂತ್ರ ಎನ್ನಬಹುದೇ? ಸತ್ಸಂಪ್ರದಾಯದ ಹುಡುಗಿಯ ಅಷ್ಟೂ ಗುಣಗಳನ್ನು ಕನ್ನಡಾಂಬೆಯ ಹಿರಿಮೆಗೆ ಹೋಲಿಸುತ್ತಾ ಬರೆದ ಕವಿತೆ.

ಇಂಥ ಪ್ರಯೋಗಗಳಿಗೆ ಸೃಜನಶೀಲತೆಯ ಅವಶ್ಯಕತೆ ಇದೆ. ಯಾಕೆಂದರೆ ಎರಡು ಉದ್ದೇಶಗಳನ್ನು ಒಂದಕ್ಕೊಂದು ತಾಕದಂತೆ ರೈಲಿನ ಹಳಿಯ ಹಾಗೆ ತೆಗೆದುಕೊಂಡು ಹೋಗಬೇಕು. ಹಾಡಿನ ವ್ಯಾಪ್ತಿಯ ಬಗ್ಗೆ ನೋಡಿದರೂ ಅದೂ ಚಿಕ್ಕದು. ಮೇಲಿನ ಹಾಡುಗಳಾವೂ ಸಾಮಾನ್ಯವೂ ಅಲ್ಲ. ದಶಕಗಳ ಹಿಂದೆ ಹುಟ್ಟಿದರೂ ಇನ್ನೂ ದಶಕಗಳ ಕಾಲ ಉಳಿಯುವಂತವು. ನಿಜಕ್ಕೂ ಇಂಥ ಪ್ರಯೋಗಗಳು ಇವತ್ತಿಗೂ ಅವಶ್ಯಕ.

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..