2096

ಗಾಂಧಿನಗರದಿಂದ ಗಂಧದಗುಡಿಯವರೆಗೆ

ಕನ್ನಡದ ಮೊದಲ ಚಿತ್ರ ಸತಿಸುಲೋಚನ

ಕಲೆಗೆ ಒಂದು ಪರಿಧಿ ಎಂಬುದು ಇದೆಯೇ. ಪ್ರತಿ ವ್ಯಕ್ತಿಯೂ ತನ್ನದೇ ಆದ ಪ್ರತಿಭೆಯ ಕ್ಷೇತ್ರವನ್ನು ಆಯ್ದುಕೊಳ್ಳುತ್ತಾನೆ. ಅದರಲ್ಲಿ ಅವನ ಭಾವನೆಗಳನ್ನು, ಅವನು ಜಗತ್ತಿಗೆ ಕೊಡಬೇಕಾದ ಸಂದೇಶವನ್ನು ತುಂಬಿ ಹಂಚುತ್ತಾನೆ. ಅದರ ಬಗ್ಗೆ ಮತ್ತೊಮ್ಮೆ ಬರೆದರಾಯ್ತು. ಸಿನಿಮಾ ಜನರನ್ನು ಬಹಳ ಬೇಗ ತಲುಪಬಲ್ಲ ಕ್ಷೇತ್ರ. ಇಂಥ ಕ್ಷೇತ್ರದಲ್ಲಿ ಮೊದಲು ಮೂಕಿ ಚಿತ್ರಗಳಿಂದ ಶುರುವಾಗಿ ಬಣ್ಣದ ಚಿತ್ರಗಳವರೆಗೆ ಹಲವು ಬೆಳವಣಿಗೆಗಳಾಗಿವೆ. ಆದರೆ ಕನ್ನಡದ ಮೊದಲ ವಾಕ್ ಚಿತ್ರದ ಬಗ್ಗೆ ಅರಿಯಬೇಕಾದ ಕುತೂಹಲ ಎಲ್ಲರಲ್ಲೂ ಇದೆ ಅನಿಸುತ್ತದೆ.೧೯೩೧ರಲ್ಲಿ ಹಿಂದಿಯಲ್ಲಿ ಅಲಮ್ ಅರಾ ಎಂಬ ಮೊದಲ ಟಾಕೀ ಚಿತ್ರ ಬಿಡುಗಡೆಯಾಗಿತ್ತು. ಕನ್ನಡದ ಜನ ಕನ್ನಡವನ್ನು ತೆರೆಯ ಪಾತ್ರಗಳ ಮೂಲಕ ನೋಡಲು ಉತ್ಸುಕರಾಗಿದ್ದರು. ಭಕ್ತ ಧ್ರುವ ಕನ್ನಡದಲ್ಲಿ ಮೊದಲು ಚಿತ್ರೀಕರಣ ಶುರು ಮಾಡಿದ್ದರೂ ಮೊದಲು ತೆರೆಗೆ ಬಂದಿದ್ದು “ಸತಿ ಸುಲೋಚನಾ.”

ಸೌತ್ ಇಂಡಿಯಾ ಮೂವಿ ಟೋನ್ ಎಂಬ ಫಿಲ್ಮ್ ಪ್ರೊಡಕ್ಷನ್ ಕಂಪನಿಯನ್ನು  ಬೆಂಗಳೂರಿನಲ್ಲಿ ಸ್ಥಾಪಿಸಲು 1932 ರಲ್ಲಿ ಒಬ್ಬರು  ನಿರ್ಧರಿಸಿದರು. ಅವರು ರಾಜಸ್ಥಾನದ ಮಾರವಾಡಿ ಕುಟುಂಬದ ವ್ಯಾಪಾರಸ್ಥ ಶಹಾ ಚಮನ್’ಲಾಲ್ ಅಂದು ಅವರಿಗೆ ಕನ್ನಡದಲ್ಲಿ ಒಂದು ಪೌರಾಣಿಕ ಕಥೆ ಆಧಾರಿತ ಚಿತ್ರ ತೆಗೆಯಬೇಕು ಎಂಬ ಹಂಬಲವಿತ್ತು.  ಅಷ್ಟರಲ್ಲಾಗಲೇ ಕನ್ನಡದಲ್ಲಿ ಹಲವು ಮೂಕಿ ಚಿತ್ರಗಳು ಬಂದಾಗಿತ್ತು. ನಾಟಕ ಕ್ಷೇತ್ರದಲ್ಲಂತೂ ಗುಬ್ಬಿ ಕಂಪನಿಯಂಥ ಕಂಪನಿಗಳು ಮಾಡದ ನಾಟಕಗಳಿರಲಿಲ್ಲ. ತೋರಿಸದ ಪೌರಾಣಿಕ ಪಾತ್ರಗಳಿರಲಿಲ್ಲ. ಮಹಾಪತಿವ್ರತೆ ಸುಲೋಚನಾಳ ಬಗ್ಗೆ ರಾಮಾಯಣದಲ್ಲಿ ಬರುವ ಕಥೆ ಎಲ್ಲರಿಗೂ ಗೊತ್ತೇ ಇದೆ. ಅದನ್ನು ತೆರೆಗೆ ತರುವ ಸಾಹಸ ಮಾಡಿದವರು ಚಮನ್ ಲಾಲ್. ಸಾಹಸ ಎನ್ನಲಿಕ್ಕೂ ಕಾರಣವಿದೆ. ಯಾರೋ ಮಾಡಿದ ಕೆಲಸವನ್ನು ಮುಂದುವರೆಸಿಕೊಂಡು ಹೋಗುವುದಕ್ಕೂ ನಾವೇ ಹೊಸ ಕೆಲಸಕ್ಕೆ ಕೈ ಹಾಕುವುದಕ್ಕೂ ವ್ಯತ್ಯಾಸವಿದೆ. ಅಷ್ಟರವರೆಗೂ ಬರೀ ಮೂಕಿ ಚಿತ್ರವನ್ನು ಮೆಚ್ಚಿಕೊಂಡಿದ್ದ ಜನರಿಗೆ ತೆರೆಯ ಮೇಲಿನ ಪಾತ್ರಗಳು ಕನ್ನಡ ಮಾತಾಡುತ್ತವೆ ಎಂಬುದು ಒಂದು ಆಶ್ಚರ್ಯವಾಗಿತ್ತು. ಬೆಳ್ಳಾವೆ ನರಹರಿ ಶಾಸ್ತ್ರಿಗಳು ಚಿತ್ರಕತೆ, ಸಂಭಾಷಣೆ, ಸಾಹಿತ್ಯವನ್ನು ಬರೆದರು. ಒಟ್ಟು ೧೫ ಹಾಡುಗಳು ಚಿತ್ರದಲ್ಲಿದ್ದು ಸ್ವತಃ ಚಿತ್ರೀಕರಣ ಸಂದರ್ಭದಲ್ಲಿ ಕಲಾವಿದರೇ ಹಾಡಿ ಕುಣಿಯುತ್ತಿದ್ದರು.Y.V.ರಾವ್ ಅವರು ನಿರ್ದೇಶನದ ಜವಾಬ್ದಾರಿ ಹೊತ್ತರು. Y.V.ರಾವ್ ಯಾರೆಂದರೆ ಕನ್ನಡದ ಪ್ರಖ್ಯಾತ ನಟಿ ಜ್ಯೂಲಿ ಲಕ್ಷ್ಮಿಯವರ ತಂದೆ. ವ್ಹಿ.ಸುಬ್ಬಯ್ಯ ನಾಯ್ಡು ಅವರು ಮುಖ್ಯಭೂಮಿಕೆಯ ಪಾತ್ರದಲ್ಲಿ “ಇಂದ್ರಜಿತ್” ಆಗಿ ಕಾಣಿಸಿಕೊಂಡರು. ಸುಬ್ಬಯ್ಯ ನಾಯ್ಡು ಲೋಕೇಶ್ ಅವರ ತಂದೆ. ಸೃಜನ್ ಲೋಕೇಶ್ ಅವರ ತಾತ. ತ್ರಿಪುರಾಂಬಾ ಸುಲೋಚನಾಳಾಗಿ, ಲಕ್ಷ್ಮೀಬಾಯಿ ಮಂಡೋದರಿಯಾಗಿ ಪಾತ್ರ ನಿರ್ವಹಿಸಿದರು. ಆಗಿನ ಸಿನಿಮಾ ಜಗತ್ತಿಗೆ ಚಿರಪರಿಚಿತರಾದ ಆರ್ ನಾಗೇಂದ್ರರಾವ್ ರಾವಣನ ಪಾತ್ರಧಾರಿಯಾದರು.ಅಲ್ಲದೇ ಅವರು ಚಿತ್ರಕ್ಕೆ ಸಂಗೀತವನ್ನೂ ನೀಡಿದರು. ಅವರ ಜೊತೆಗೆ H R ಪದ್ಮನಾಭ ಶಾಸ್ತ್ರಿಯವರು ಕೂಡಾ ಸಂಗೀತ ಸಂಯೋಜನೆ ಮಾಡಿದರು. ಸ್ವತಃ ನಿರ್ದೇಶಕರಾದ Y.V.ರಾವ್ ಲಕ್ಷ್ಮಣನ ಪಾತ್ರಾಧಾರಿಯಾದರೆ D.A.ಮೂರ್ತಿರಾವ್ ರಾಮನ ಪಾತ್ರ ನಿರ್ವಹಿಸಿದರು. ಸಿ.ವ್ಹಿ.ಶೇಷಾಚಲಂ ಅವರು ನಾರದ ಪಾತ್ರ ನಿರ್ವಹಿಸಿದರು. ಮಹಾರಾಷ್ಟ್ರದ ಕೊಲ್ಹಾಪುರದಲ್ಲಿನ ಛತ್ರಪತಿ ಸ್ಟುಡಿಯೋದಲ್ಲಿ ಶೂಟಿಂಗ್ ಶುರುವಾಯಿತು. ಕೆಲವು ಕಡೆ ಇದು ಪ್ರಭಾತ್ ಸ್ಟುಡಿಯೋ ಎಂಬ ಉಲ್ಲೇಖವೂ ಇದೆ. ಇಂದಿಗೆ ಸರಿಯಾಗಿ ೮೩ ವರ್ಷಗಳ ಹಿಂದೆ ಅಂದರೆ ಡಿಸೆಂಬರ್ ೧೯೩೩ ರಲ್ಲಿ ಕನ್ನಡದ ಮೊದಲ ವಾಕ್ಚಿತ್ರದ ಶೂಟಿಂಗ್ ನಡೆದಿತ್ತು. ಚಿತ್ರೀಕರಣ ಸುಮಾರು ಎರಡು ತಿಂಗಳವರೆಗೆ ನಡೆಯಿತು. ಎರಡು ಕ್ಯಾಮಾರಾಗಳನ್ನು ಒಟ್ಟಿಗೆ ಇಟ್ಟು ಒಂದು ಯುದ್ಧದ ಸನ್ನಿವೇಶವನ್ನೂ ಶೂಟ್ ಮಾಡಲಾಗಿತ್ತು. ಚಿತ್ರಕ್ಕೆ ತಗುಲಿದ ಅಂದಾಜು ವೆಚ್ಚ 40000 ಮಾತ್ರ. ಒಟ್ಟು 173 ನಿಮಿಷದ ಸಿನಿಮಾ ಫೆಬ್ರುವರಿ ೨೮,೧೯೩೪ ರಂದು ಬ್ರಿಟಿಷ್ ಸೆನ್ಸಾರ್ ಬೋರ್ಡ್’ನಿಂದ ಸರ್ಟಿಪೈ ಆಯ್ತು.

ಮಾರ್ಚ ೩,೧೯೩೪ ರಂದು ಈಗಿನ ಬೆಂಗಳೂರಿನ ಕಲಾಸಿಪಾಳ್ಯದಲ್ಲಿ ಆಗ ಪ್ಯಾರಾಮೌಂಟ್ ಥೀಯೇಟರ್ ಇತ್ತು.ಈಗ ಅಲ್ಲಿ ಪರಿಮಳ ಚಿತ್ರಮಂದಿರವಿದೆ. ಆ ಚಿತ್ರಮಂದಿರದಲ್ಲಿ 6 ವಾರಗಳ ಕಾಲ ಪ್ರದರ್ಶನ ಕಂಡಿತು. ಇಲ್ಲಿಂದ ಶುರುವಾದ ಕನ್ನಡ ಚಿತ್ರರಂಗ ಹಲವಾರು ಮಜಲುಗಳನ್ನು ಕಂಡಿದೆ. ಡಾ.ರಾಜ್ ಅವರಿದ್ದಾಗಲಂತೂ ಬೇರೆ ಭಾಷೆಗಳಿಗಿಂತ ಒಂದು ಕೈ ಮೇಲು ಎಂಬಂತಿತ್ತು. ಅದೊಂದು ಮಹಾಮನ್ವಂತರ. ಇತ್ತೀಚಿನ ಹತ್ತು ವರ್ಷಗಳಲ್ಲಿ ಜನರ ಅಭಿರುಚಿಗೆ ತಕ್ಕ ಚಿತ್ರಗಳನ್ನು ಕೊಡುವಲ್ಲಿ ವಿಫಲವಾಗಿದೆಯಾದರೂ ಇಡಿಯ ಭಾರತ ಚಿತ್ರರಂಗದ ಜಗತ್ತಿನಲ್ಲಿ ಕನ್ನಡ ಚಿತ್ರರಂಗ ತನ್ನದೇ ಆದ ಅಸ್ತಿತ್ವವನ್ನಂತೂ ಹೊಂದಿದೆ. ಅದು ನಡೆದುಬಂದ ಪಯಣದ ಬಗ್ಗೆ ಒಂದೊಂದೇ ಲೇಖನಗಳಲ್ಲಿ ನೋಡೋಣ.

———————- ಮುಂದುವರೆಯುವುದು.—————————————

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..