1612

ಹರಟೆ ಕಟ್ಟೆಯ ಹೃದಯವಂತ

ನಿಜ ಹೇಳಬೇಕೆಂದರೆ ನನ್ನಪ್ಪ ಪರಿಪೂರ್ಣ ಸುಖ ಸಂತೋಷಗಳಲ್ಲಿ, ನಮ್ಮನ್ನು ಬೆಳೆಸಲಿಲ್ಲ, ಬಾಲ್ಯದಲ್ಲಿ ಮುದ್ದಾಡಿ ರಮಿಸಿದವನಲ್ಲ, ಜಾತ್ರೆಗೆ ತೋಳ ಮೇಲೆ ಹೊತ್ತಯ್ದವನಲ್ಲ, ಕಡೆಪಕ್ಷ ಸ್ಕೂಲಿನ ರಸ್ತೆಯಲ್ಲೆಲ್ಲೋ ಗೆಳೆಯರೊಡನಿದ್ದಾಗ ಒಂದು ರೂಪಾಯಿ ಮಿಠಾಯಿ ತಿನ್ನಲಿಕ್ಕೂ ಕೊಟ್ಟವನಲ್ಲ ಆದರೆ ಅವರಿಗಿದ್ದ ಆದರ್ಶಗಳು ಅವನ್ನು ಈಡೇರಿಸಲು ತೂಟ್ಟ ಹಠ, ಕಂಡ ಕನಸು ಸಾಪಲ್ಯ ಗೊಂಡಾಗ ಸಂಭ್ರಮಿಸಿದ ಪರಿ ನನ್ನ ಹೃದಯದಲ್ಲೊಂದು ವಿಶೇಷ ಸ್ಥಾನವನ್ನು ಅವರಿಗೆ ನೀಡಿದೆ.

ನನ್ನದು ಪುಟ್ಟ ಹಳ್ಳಿ ನನ್ನಪ್ಪ ಕೃಷಿಕ. ಕೃಷಿಯೆಂದರೆ ಮಳೆ ಆಶ್ರಿತ ಅದನ್ನೆ ಅವುಡುಗಚ್ಚಿ ಮಾಡಿ ತೋರಿಸಬೇಕೆಂಬ ಹಠವಂತೂ ನನ್ನಪ್ಪನಿಗಿಲ್ಲ ಬಿಡಿ. ನೈಸು ಮಾತಿನ ಮೋಡಿಗಾರನಿಗೆ ಹರಟೆಕಟ್ಟೆ ಸಿಕ್ಕಿದರೆ ತೂಂದರೆ ಮುಗಿಯಿತು. ನನ್ನಪ್ಪನ ಸೋಮಾರಿತನಕ್ಕೂ ಅಮ್ಮನ ದುಡಿಮೆಗೂ ಆಗಿಬರದು. ಸದಾ ಹಾವು ಮುಂಗುಸಿಯ ಕಚ್ಚಾಟ, ಇಂತಹ ನನ್ನಪ್ಪನಿಗೂ ಒಂದು ಕನಸಿತ್ತು ಎಂದರೆ ನೀವು ನಂಬಬೇಕು. ಮಕ್ಕಳಿಗೆ ಪ್ರತಿಷ್ಟಿತ ವಿದ್ಯಾಲಯಗಳಲ್ಲಿ ವಿದ್ಯಾಭ್ಯಾಸ ಕೊಡಿಸಿ ಉದ್ಯೋಗ ಕೊಡಿಸಬೇಕೆಂಬುದು ಅವರ ಹಠ. ನಮ್ಮ ಕುಟುಂಬದವರಾಗಲೀ, ನೆರೆಹೊರೆಯವರಾಗಲೀ ಓದಿದವರಲ್ಲದ ಕಾರಣ ನಮಗೆ ಇವೆಲ್ಲ ಮುಗಿಲ ಮಲ್ಲಿಗೆಯೇ. ಆದರೆ ಹಠ ಬಿಡದೆ ತಾವಂದುಕೊಂಡ್ಡಿದ್ದನ್ನು ಸಾಧಿಸಿಯೇ ಬಿಟ್ಟರು. ಅಣ್ಣ ಪದವಿ ಮುಗಿಸಿ ತಾನು ಪಿ.ಜಿ. ಮಾಡುತ್ತೇನೆಂದಾಗ ‘ನೀನಾದರೆ ಗಂಡು ಮಗ ಕಣೋ’ ಆಸ್ತಿ ಇದೆ ನೋಡಿಕೊಂಡಿರು, ಬೇಕೆನಿಸಿದರೆ ಸದ್ಯಕ್ಕೆ ಬಿ.ಎಡ್. ಮಾಡು . ಆದರೆ ಹೆಣ್ಣು ಮಕ್ಕಳು ಹಾಗಲ್ಲ, ಸಿಗುವ ಮನೆ ಒಳ್ಳೆಯದಿಲ್ಲದಿದ್ದರೆ ಅವರ ಗತಿ ಎನು ಎಂದು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿದರು.

ಬಿಳಿಯ ನನ್ನಪ್ಪನಿಗೆ ಮೂರು ಜನ ಹೆಣ್ಣು ಮಕ್ಕಳು ಜನಿಸಿದ್ದು ಚಿಂತೆಗೀಡು ಮಾಡಿತ್ತಂತೆ, ಆಗ ಅಪ್ಪಾಜಿ ‘ನನ್ನ ಮಕ್ಕಳು ಕಪ್ಪಗಿದ್ದರೇನು? ನಾಲ್ಕು ಜನ ಗುರುತಿಸುವಂತೆ ಬೆಳೆಯುತಾರೆ ನೋಡು’ ಎಂದು ಎದೆಯುಬ್ಬಿಸಿ ಹೇಳಿದ್ದರಂತೆ. ಈಗಲೂ ಅಷ್ಟೇ ‘ನಾನು ಸತ್ತ ಮೇಲೆ ನನ್ನ ದೊಡ್ಡ ಮಗಳೇ (ಅಣ್ಣ ಎರಡನೆಯವನು) ಮರಣೋತ್ತರ ಕಾರ್ಯದಲ್ಲಿ ಗಂಡು ಮಕ್ಕಳು ಮಾತ್ರ ಹಕ್ಕು ಭಾಧ್ಯಸ್ತರೇ?’ ಎಂದು ವಾದಿಸುತ್ತಾರೆ. ಅವರ ಸ್ತ್ರೀ ಪರ ನಿಲುವುಗಳನ್ನು ಕಂಡಾಗ ನಿಜಕ್ಕೂ ಹೆಮ್ಮೆ ಅನಿಸುತ್ತೆ.

ನನ್ನಕ್ಕನಿಗೆ ವಧು ಪರೀಕ್ಷೆಗಳು ಆರಂಭವಾಗಿ ಬಂದ ಗಂಡುಗಳು ಸರಿಹೊಂದದೆ ಹೋದಾಗ ಅವರು ಬೇಸರಗೊಳ್ಳಲಿಲ್ಲ. ಕಡೆಗೆ ಬಂದ ಬಂಧ ಇನ್ನೇನು ಗಟ್ಟಿಯಾಯಿತೆನ್ನುವಾಗಲೇ ನಾಲ್ಕು ಮಕ್ಕಳಿಗೆ ಪಾಠ ಹೇಳುವ ನಾನು ವರದಕ್ಷಿಣೆ ನೀಡಿ ಮದುವೆಯಾಗುವುದೇ? ಎಂದು ನನ್ನಕ್ಕ ಸೆಟೆದು ನಿಂತಾಗ ಮತ್ತೆ ಬೆನ್ನಿಗಿದ್ದವನು ನನ್ನಪ್ಪನೇ ಇಂದಿನವರೆಗೂ ನಮ್ಮ ಆಯ್ಕೆಯನ್ನು ಅವರು ಒಪ್ಪಿಕೊಂಡಿದ್ದಾರೆಯೇ ಹೊರತು ‘ಹಾಗೆ ಮಾಡಿ…. ಹೀಗೆ ಮಾಡಿ…. ಹೀಗೇ ಇರಿ’ ಎಂದು ನಿರ್ದೇಶಿಸಿದವರಲ್ಲ, ಒಂದು ದಿನವೂ ಗದರಿದವರಲ್ಲ, ಉದ್ಯೋಗಸ್ಥರೂ ವಿದ್ಯಾವಂತರೂ ಆದ ನನ್ನ ಗೆಳೆಯರ ಅಪ್ಪಂದಿರ ಕಟ್ಟುನಿಟ್ಟು, ಸಣ್ಣತನಗಳನ್ನು ನೋಡಿದಾಗ, ಕೇಳಿದಾಗ, ಪ್ರೈಮರಿ ಶಿಕ್ಷಣವನ್ನು ಮುಗಿಸದ ನನ್ನಪ್ಪನ ಹೃದಯವಂತಿಕೆ, ಅವರು ನಮಗೆ ನೀಡಿರುವ ಸ್ವಾತಂತ್ರ್ಯ ನೆನೆದು ಹೆಮ್ಮೆಯೆನಿಸುತ್ತದೆ.

ಶ್! ಅಕ್ಕ ಕೊಡಿಸಿದ ಬಣ್ಣದ ಶರ್ಟ್ ತೂಟ್ಟು, ಅಣ್ಣ ಕೊಡಿಸಿದ ಮೊಬೈಲು ಕೈಲಿ ಹಿಡಿದು ನನ್ನಪ್ಪ ಹರಟೆ ಕಟ್ಟೆಯಲ್ಲಿ ಮತ್ತೆ ಬಡಾಯಿ ಕೊಚ್ಚುತ್ತಿದ್ದಾನೆ ಮೆಲ್ಲಗೆ ಓದಿ! ಅವರಿಗೆ ತೊಂದರೆಯಾಗಬಹುದು.

By: S Acharya

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..