- By Guest Writer
- Thursday, December 15th, 2016
ಬಡ ರೈತನೊಬ್ಬ ಹಣ್ಣಿನ ತೋಟವನ್ನು ಮಾಡಿದ್ದ. ಒಂದು ದಿನ ಅವನ ರಾಜ್ಯದ ಮಹಾರಾಜನು ಅವನ ತೋಟಕ್ಕೆ ಬಂದ. ಬಡವರ ಮನೆಗೆ ಭಾಗ್ಯಲಕ್ಷ್ಮಿಯೇ ಬಂದಂತಾಯಿತೆಂದು ಸಂತಸದಿಂದ ರೈತನು ರಾಜನನ್ನು ಸ್ವಾಗತಿಸಿದ. ಇಂದು ಮಹಾರಾಜರೇ ನನ್ನ ಅಥಿತಿಯಾಗಿರುವುದರಿಂದ ನನ್ನಷ್ಟು ಭಾಗ್ಯವಂತರು ಸಿರಿವಂತರು ಯಾರೂ ಇಲ್ಲವೆಂದು ರೈತನು ಭಾವಿಸಿದ. ಹಣ್ಣು ಹಂಪಲವಿತ್ತು ಮಹಾರಾಜನಿಗೆ ಸತ್ಕರಿಸಿದ. ಸಂತುಷ್ಟನಾದ ಮಹಾರಾಜನು ತನ್ನ ಕೊರಳಿನಲ್ಲಿದ್ದ ಬೆಲೆಬಾಳುವ ಮುತ್ತಿನಹಾರವನ್ನು ರೈತನಿಗೆ ಕೊಡಲುಹೋದ. ರೈತ ಹೇಳಿದ- “ಮಹಾರಾಜರೇ ಇದೇನು ಹೂವಲ್ಲ ಹಣ್ಣಲ್ಲ. ಒಂದು ವೇಳೆ ಹೂವು ಹಣ್ಣಿನ ತೋಟ ಮಾಡದೇ ಬರೀ ಮುತ್ತು maxresdefaultರತ್ನಗಳನ್ನು ಸಂಗ್ರಹಿಸಿ ಇಟ್ಟಿದ್ದರೆ ನೀವೇಕೆ ಇಲ್ಲಿಗೆ ಬರುತ್ತಿದ್ದಿರಿ? ನನಗೆ ಈ ಮುತ್ತಿನ ಹಾರ ಬೇಡ, ನಿಮ್ಮ ಮುತ್ತಿನಂತ ಎರೆಡು ಸಂತೋಷದ ನುಡಿಗಳೇ ಸಾಕು!.” ಮಹಾರಾಜ ಹೇಳಿದ-“ನೀನು ಗುಡಿಸಿಲಿನಲ್ಲಿದ್ದರೂ ಅರಮನೆಯ ಅರಸನಂತಿರುವೆ ನಾನು ಅರಮನೆಯಲ್ಲಿದ್ದರೂ ಗುಡಿಸಿಲಿನಲ್ಲಿದ್ದಂತೆಯೇ ಇರುವೆನು. ರಾಜ್ಯಗಳನ್ನು ಜಯಿಸುವ ಆಸೆ ನನ್ನಲ್ಲಿ ಇನ್ನೂ ತುಂಬಿ ತುಳುಕುತ್ತಿದೆ. ಆಸೆಯನ್ನಳಿದಿರುವ ನೀನೆ ನಿಜವಾದ ಅರಸ.”
ಹೌದು ಗೆಳೆಯರೇ! ಹತ್ತಿಪ್ಪತ್ತು ರೂಪಾಯಿ ಟೊಪ್ಪಿ ಧರಿಸಿದವನು ಟೋಪಿ ಹಾಕಲು ಟೋಪಿ ಧರಿಸುವ ಮಂತ್ರಿಗಿಂತಲೂ ಹೆಚ್ಚಿನ ಖುಷಿಯನ್ನು ಅನುಭವಿಸುತ್ತಾನೆ. ಅವರು ಅನುಭವಿಸುವ ಸಂತಸವನ್ನೂ ಕಿರೀಟ ಧರಿಸಿದ ರಾಜನೂ ಸಹ ಅನುಭವಿಸಿರುವುದಿಲ್ಲ. ಚಿನ್ನದ ಕಿರೀಟ ಧರಿಸಿದ ರಾಜನಿಗೆ ರಸ್ತೆಗಿಳಿಯುವ ಧೈರ್ಯವಿಲ್ಲ. ಹತ್ತಿಪ್ಪತ್ತು ರೂಪಾಯಿ ಟೊಪ್ಪಿ ಧರಿಸಿದವನು ದೇಶ-ದೇಶವನ್ನೇ ಸುತ್ತಬಲ್ಲ. ಬದುಕುವ ಪರಿ ಅರಿತವರು ಇದ್ದುದರಲ್ಲಿಯೇ ಮಹಾರಾಜನಂತೆ ಸಂತೃಪ್ತಿಯಿಂದ ಬದುಕುವುದನ್ನು ಕಲಿಯುತ್ತಾರೆ. ತುಂಬಿದ ಕೊಡವು ಹಳ್ಳದಲ್ಲಿದ್ದರೇನು, ನದಿಯಲ್ಲಿದ್ದರೇನು, ಸಮುದ್ರದಲ್ಲಿದ್ದರೇನು? ಏನೂ ವ್ಯತ್ಯಾಸವಾಗುದಿಲ್ಲ. ಮಹಾತ್ಮರು ಅಡವಿಯಲ್ಲಿದ್ದರೇನು, ಅರಮನೆಯಲ್ಲಿದ್ದರೇನು? ಅವರು ಸದಾ ಸಂತೃಪ್ತರು. ಪರಿತೃಪ್ತನಾದವನಿಗೆ ಯಾವುದರ ಹಂಗೂ ಇರುವುದಿಲ್ಲ. ಸುತ್ತಮುತ್ತ ಸಿರಿ-ಸಂಪತ್ತು ಸುರಿಯುತ್ತಿದ್ದರೂ ಅವನು ಅದನ್ನು ಕಣ್ಣೆತ್ತಿಯೂ ನೋಡುವುದಿಲ್ಲ.
ಇದರರ್ಥ ನಾವು ಸಿರಿ-ಸಂಪದ ಗಳಿಸಬಾರದೆಂದಲ್ಲ, ಆದರೆ ಸಂತೃಪ್ತಿಯಿಂದಿರುವುದನ್ನು ಮರೆಯಬಾರದಷ್ಟೇ! ನಮ್ಮ ತಟ್ಟೆಯಲ್ಲಿ ರೊಟ್ಟಿ ಇರುವಾಗ ಅನ್ಯರ ತಟ್ಟೆಯಲ್ಲಿರುವ ಹೋಳಿಗೆಯನ್ನು ನೋಡಿ ರೊಟ್ಟಿಯನ್ನು ತಿನ್ನದೇ ಉಪವಾಸ ಮರುಗಬಾರದಷ್ಟೇ!