2243

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಬಗ್ಗೆ ನಿಮಗೆಷ್ಟು ಗೊತ್ತು ?

  • By Guest Writer
  • Sunday, November 26th, 2017
  • Things You Should Know

ಯಾವುದೇ ಭಾಷೆಯನ್ನು ಅಭಿವೃದ್ಧಿಗೊಳಿಸುವುದು, ಆ ಮೂಲಕ ಅದರ ಸಾಹಿತ್ಯ, ಲಿಪಿ ಇತ್ಯಾದಿಗಳ ಅಭಿವೃದ್ಧಿಗೊಳಿಸುವ ಉತ್ಕಟ ಬಯಕೆ ಅದನ್ನು ಮಾತಾಡುವ ಭಾಷಿಕರಿಗೆ ಇದ್ದೇ ಇರುತ್ತದೆ. ಜೊತೆಗೆ ತಮ್ಮ ಬಯಕೆಯ ಸಾಧನೆಗೆ ವಿವಿಧ ಮಾರ್ಗೋಪಾಯಗಳನ್ನು ಅವರು ಅನುಸರಿಸುತ್ತಾರೆ. ಕನ್ನಡ ಭಾಷೆ ಹಾಗೂ ಅದರ ಇತರ ಅಂಶಗಳಾದ ಸಾಹಿತ್ಯ, ಕಲೆ, ಸಂಸ್ಕೃತಿ, ಮತ್ತು ಸಂಗೀತ ಇತ್ಯಾದಿಗಳ ರಕ್ಷಣೆ ಹಾಗೂ ಅಭಿವೃದ್ಧಿಯ ಉದ್ದೇಶದಿಂದ ೧೯೧೫ರಲ್ಲಿ ಸ್ಥಾಪಿತವಾದ “ಕನ್ನಡ ಸಾಹಿತ್ಯ ಪರಿಷತ್” ತನ್ನ ಉದ್ದೇಶವನ್ನು ಕಾರ್ಯರೂಪಕ್ಕೆ ತರಲು ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಲಾರಂಭಿಸಿತು. ಆರಂಭದಿಂದ ಇಲ್ಲಿಯವರೆಗೆ ೮೨ ಸಮ್ಮೆಳನಗಳನ್ನು ಯಶಸ್ವಿಯಾಗಿ ನಡೆಯಿಸಿ ಈಗ ೮೩ರ ಸಂಭ್ರಮದಲ್ಲಿದೆ‌.

  • ಈ ಸಮ್ಮೇಳನಗಳಿಗೆ ಮೊದಲು ನಾಂದಿ ಹಾಡಿದ ಹೆಗ್ಗಳಿಕೆ ಬೆಂದಕಾಳೂರಿಗೆ ಸಲ್ಲುತ್ತದೆ. ೧೯೧೫ ರಲ್ಲಿ ಕರ್ನಾಟಕದ ಇಂದಿನ ರಾಜ್ಯಧಾನಿ ಬೆಂಗಳೂರಿನಲ್ಲಿ ಅಂದಿನ ಮೈಸೂರು ರಾಜ್ಯದ ದಿವಾನರಾಗಿದ್ದ ‘ಹೆಬ್ಬಾಳು ವೇಲಂಪುರು ( ಹೆಚ್. ವಿ) ನಂಜುಂಡಯ್ಯ’ ನವರ ಸರ್ವಾಧ್ಯಕ್ಷತೆಯಲ್ಲಿ ಮೊಟ್ಟ ಮೊದಲ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತು. ಅದೇ ದಿನ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆಗೊಂಡಿತು. ಬೇರೆ ಬೇರೆ ಪ್ರದೇಶಗಳಲ್ಲಿ ವಾಸಿಸುವ ಕನ್ನಡ ಭಾಷೆ ಮಾತನಾಡುವ ಜನರ ನಡುವೆ ಏಕತೆ ಮತ್ತು ಸಹಕಾರ ಏರ್ಪಡಿಸುವುದು, ಹಾಗೂ ಶಾಲಾ – ಕಾಲೇಜುಗಳಲ್ಲಿ ಕನ್ನಡ ಭಾಷೆ ಅಳವಡಿಸುವುದು – ಇವು ಕನ್ನಡ ಸಾಹಿತ್ಯ ಪರಿಷತ್ ಮತ್ತು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಮೂಲ ಆಶಯವಾಗಿತ್ತು.
  •  ೧೯೧೬ ರಲ್ಲಿ ಬೆಂಗಳೂರು ಮತ್ತು ೧೯೧೭ ರಲ್ಲಿ ಮೈಸೂರಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನಗಳು ದಿವಾನ್ ನಂಜುಂಡಯ್ಯ ನವರ ಸರ್ವಾಧ್ಯಕ್ಷತೆಯಲ್ಲಿಯೇ ನಡೆದದ್ದು ವಿಶೇಷ.
  •  ೧೯೨೫ರವರೆಗಿನ ಸಮ್ಮೇಳನಗಳ ಉದ್ದೇಶ, ೧೯೧೫ ರ ಆಶಯವನ್ನು ಕಾರ್ಯಗತಗೊಳಿಸುವುದಾಗಿತ್ತು. ೧೯೨೮ರಲ್ಲಿ ಸಾಹಿತಿ ‘ರಂಗನಾಥ್ ದಿವಾಕರ್’ ಅವರ ಸರ್ವಾಧ್ಯಕ್ಷತೆಯಲ್ಲಿ ಜರುಗಿದ ೧೩ನೇ ವರ್ಷದ ಸಮ್ಮೇಳನವು ಕನ್ನಡ ಭಾಷೆಯನ್ನು ಎಲ್ಲರಿಗೂ ಅನ್ವಯವಾಗುವಂತ ಸರಳ ಸಾಮಾನ್ಯ ಭಾಷೆಯನ್ನಾಗಿ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿತು.
  •  ಆರಂಭದಲ್ಲಿ ಕನ್ನಡ ಭಾಷೆ, ಸಾಹಿತ್ಯ- ಇತ್ಯಾದಿಗಳ ಅಭಿವೃದ್ಧಿಯ ದ್ಯೋತಕದಂತಿದ್ದ ಸಮ್ಮೇಳನಗಳು ತದನಂತರದಲ್ಲಿ ಏಕಿಕರಣ ಹೋರಾಟದ ಅಂಗಸಂಸ್ಥೆ ಎಂಬಂತೆ ಕಾರ್ಯೋನ್ಮುಖವಾಯಿತು. ಸಮ್ಮೇಳನವು, ಕನ್ನಡ ಭಾಷಾ ಸಾಹಿತ್ಯ ಅಭಿವೃದ್ಧಿಯಿಂದ ಕನ್ನಡ ಭಾಷಾ ಪ್ರಾದೇಶಿಕ ಅಭಿವೃದ್ಧಿಯತ್ತ ತನ್ನ ಒಲವನ್ನು ಹರಿಸಿತು. ಭಾಷಾ ಅಭಿವೃದ್ಧಿಗೆ ಏಕಿಕರಣ ಅಗತ್ಯ ಎಂಬಂತೆ ಬಿಂಬಿಸಿತು.
  •  ೧೯೪೮ ರಲ್ಲಿ ಕರ್ನಾಟಕ ಮತ್ತು ಕೇರಳದ ಗಡಿನಾಡು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕಾಸರಗೋಡಿನಲ್ಲಿ ಕರ್ನಾಟಕದ ಪ್ರಮುಖ ಸಾಹಿತಿ ‘ತಿ. ತಾ. ಶರ್ಮಾ ಎಂದು ಪ್ರಖ್ಯಾತರಾದ ತಿರುಮಲ ತಾತಯ್ಯ ಶರ್ಮಾ’ ಅವರ ಸರ್ವಾಧ್ಯಕ್ಷತೆಯಲ್ಲಿ ಜರುಗಿದ ೩೫ನೇ ಸಾಹಿತ್ಯ ಸಮ್ಮೇಳನವನ್ನು ಅಂದಿನ ಮುಖ್ಯಮಂತ್ರಿಗಳಾದ ‘ಕೆ‌‌. ಚಂಗಲ್ ರಾಯ ರೆಡ್ಡಿ’ ಯವರು ಉದ್ಘಾಟಿಸಿದರು. ಆ ಮೂಲಕ ಸಮ್ಮೇಳನದ ವ್ಯವಸ್ಥೆಯಲ್ಲಿ ಹೊಸ ಬದಲಾವಣೆಗೆ ನಾಂದಿ ಹಾಡಿದರು. ಇಲ್ಲಿವರೆಗೆ ಸಮ್ಮೇಳನದ ಅಧ್ಯಕ್ಷರೆ ಅದರ ಉದ್ಘಾಟಕರಾಗಿರುತ್ತಿದ್ದರು ಆದರೆ ಈ ಸಮ್ಮೇಳನದ ನಂತರ ಅ ಜವಾಬ್ದಾರಿ ರಾಜ್ಯದ ಮುಖ್ಯಮಂತ್ರಿಗಳಿಗೆ ವರ್ಗಾಯಿಸಲ್ಪಟ್ಟಿತು. ೧೯೪೮ ರ ಸಮ್ಮೇಳನದ ವಿಶೇಷತೆ ಗಳಲ್ಲಿ ಇದು ಒಂದು.
  •  ಕನ್ನಡ ಸಾಹಿತ್ಯ ಪರಿಷತ್ತಿನ ೪೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಶ್ರವಣಬೆಳಗೊಳದಲ್ಲಿ ೧೯೫೭ರಲ್ಲಿ ಪ್ರಸಿದ್ಧ ಜೈನ ವಿದ್ವಾನ್ ‘ಡಾ| ಆದಿನಾಥ್ ನೇಮಿನಾಥ್ ( ಎ. ಎನ್.) ಉಪಾಧ್ಯೆ’ ಅವರ ಘನ-ಅಧ್ಯಕ್ಷತೆಯಲ್ಲಿ ಜರುಗಿತು.ಈ ಸಮ್ಮೇಳನ ವಿಶೇಷ ಎನಿಸಲು ಕಾರಣ ಕನ್ನಡಿಗರ ಬಹುಕಾಲದ ಕನಸು “ಕರ್ನಾಟಕದ ಏಕೀಕರಣ’ ನನಸಾದ ಪರ್ವಕಾಲ(೧೯೫೬). ಈ ಏಕೀಕರಣದ ಜಯವನ್ನು ಸಮ್ಮೇಳನವು, ಕನ್ನಡ ಭಾಷೆ ಮತ್ತು ಕನ್ನಡಿಗರಿಗೆ ಸಿಕ್ಕ ಜಯ ಎಂದು ಬಣ್ಣಿಸಿತು.
  •  ೧೯೭೮ರಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ‘ಜಿ.ಪಿ. ರಾಜರತ್ನಂ’ ಅವರ ಘನ-ಅಧ್ಯಕ್ಷತೆಯಲ್ಲಿ ಸಾಹಿತ್ಯ ಪರಿಷತ್ತು ೫೦ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಆಯೋಜಿಸುವ ಮೂಲಕ ತನ್ನ ಬೆಳ್ಳಿ ಹಬ್ಬವನ್ನು ಆಚರಿಸಿತು.
  •  ಪರಿಷತ್, ಈ ಸಮ್ಮೇಳನಗಳನ್ನು ಕೇವಲ ಕರುನಾಡಿಗೆ ಮಾತ್ರ ಸೀಮಿತಗೊಳಿಸಲಿಲ್ಲ, ಬದಲಾಗಿ ಕನ್ನಡದ ಇಂಪು-ಕಂಪನ್ನು ತನ್ನ ಸಮ್ಮೇಳನದ ಮೂಲಕ ದೇಶ ವ್ಯಾಪಿ ಪ್ರಚಾರ ಮಾಡಲು ಪ್ರಯತ್ನಿಸಿತು. ಎ. ಆರ್. ಕೃಷ್ಣಮೂರ್ತಿ ಅವರ ಅಧ್ಯಕ್ಷತೆಯಲ್ಲಿ ೧೯೪೧ ರಲ್ಲಿ ಹೈದರಾಬಾದಿನಲ್ಲಿ ಜರುಗಿದ ೨೬ ನೆಯ ಸಮ್ಮೇಳನವು ಕರ್ನಾಟಕೇತರ ಪ್ರದೇಶದಲ್ಲಿ ಜರುಗಿದ ಮೊದಲ ಸಮ್ಮೇಳನ. ತದನಂತರದಲ್ಲಿ ೧೯೬೫ರಲ್ಲಿ ಚೆನ್ನೈನಲ್ಲಿ ‘ಟಿ. ಪಿ. ಕೈಲಾಸಂ’ ಅಧ್ಯಕ್ಷತೆಯಲ್ಲಿ ೨೯ನೇ ಸಮ್ಮೇಳನ ಜರುಗಿದರೆ, ೧೯೫೦ರಲ್ಲಿ ಮಹಾರಾಷ್ಟ್ರದ ಸೊಲಾಪುರದಲ್ಲಿ ‘ಎಂ. ಆರ್ ಶ್ರೀನಿವಾಸ್ ಮೂರ್ತಿ’ ಅವರ ಘನ-ಅಧ್ಯಕ್ಷತೆಯಲ್ಲಿ ೩೦ನೆಯ ವರ್ಷದ ಸಮ್ಮೇಳನ ಜರುಗಿತು. ೩೧ನೇ ಸಾಹಿತ್ಯ ಸಮ್ಮೇಳನವು ೧೯೫೧ ರಲ್ಲಿ ‘ಎಂ. ಗೋವಿಂದ ಪೈ’ ಅವರ ಅಧ್ಯಕ್ಷತೆಯಲ್ಲಿ ಮುಂಬೈನಲ್ಲಿ ಜರಗಿತು.
  •  ೧೯೪೮ರಲ್ಲಿ ಸಕ್ಕರೆಯ ಊರು ಮಂಡ್ಯ ಜಿಲ್ಲೆಯಲ್ಲಿ ೪೮ನೆ ಸಮ್ಮೇಳನ ಆಯೋಜಿಸಲಾಗಿತ್ತು, ಮೊಟ್ಟ ಮೊದಲ ಬಾರಿಗೆ ಸಮ್ಮೇಳನದ ಸರ್ವಾಧ್ಯಕ್ಷ ಪೀಠದಲ್ಲಿ ಮಹಿಳಾ ಸಾಹಿತಿಯೊಬ್ಬರು ಆಸೀನರಾಗಿದ್ದರು, ಅವರೆ ” ಜಯದೇವಿ ತಾಯಿ ಲಿಗಾಡೆ” ಯವರು. , ಪುರುಷ ಸಾಹಿತ್ಯ ಸಾಧಕರ ಅಧ್ಯಕ್ಷತೆಯಲ್ಲಿಯೇ ಜರುಗುತ್ತಿದ ಕಾರ್ಯಕ್ರಮ ಅಂದು ಮಹಿಳಾಮಣಿಯೊಬ್ಬರ ನೇತೃತ್ವದಲ್ಲಿ ನೆರವೇರಿತ್ತು. ಇದು ಸಾಹಿತ್ಯ ಸಮ್ಮೇಳನದ ಇತಿಹಾಸದಲ್ಲಿಯೇ ಅಪರೂಪದ ಕ್ಷಣ.
  •  ಇನ್ನುಳಿದಂತೆ, ೧೯೫೭ರಲ್ಲಿ ಧಾರವಾಡದಲ್ಲಿ ನಡೆದ ೩೯ ನೆಯ ಸಮ್ಮೇಳನದ ಅಧ್ಯಕ್ಷತೆಯನ್ನು ರಾಷ್ಟ್ರಕವಿ ಕುವೆಂಪು ವಹಿಸಿದ್ದರು. ಚಿತ್ರದುರ್ಗದಲ್ಲಿ ೨೦೦೯ರಲ್ಲಿ ‘ಎಲ್. ಬಸವರಾಜ’ ಅವರ ಘನ-ಅಧ್ಯಕ್ಷತೆಯಲ್ಲಿ ನಡೆದ ಸಮ್ಮೇಳನವು ೭೫ ನೆಯ ವರ್ಷದ ಸಮ್ಮೇಳನ ವಾಗಿತ್ತು. ೧೯೯೭ ರಲ್ಲಿ ಸಾಹಿತಿ ‘ ಕಯ್ಯಾರ ಕಿಞ್ಞಣ್ಣ ರೈ’ ಅವರ ಅಧ್ಯಕ್ಷತೆಯಲ್ಲಿ ೬೬ನೇ ಸಮ್ಮೇಳನ ಕಡಲ ನಗರಿ ಮಂಗಳೂರಿನಲ್ಲಿ ನಡೆದರೆ. ೨೦೦೮ ರಲ್ಲಿ ಉಡುಪಿಯಲ್ಲಿ ೭೪ನೇಯ ಸಮ್ಮೇಳನ ” ಎಲ್. ಎಸ್. ಶೇಷಗಿರಿರಾವ್’ ನೇತೃತ್ವದಲ್ಲಿ ನೆರವೇರಿತ್ತು.
  •  ಸದ್ಯಕ್ಕೆ ಅರಮನೆ ನಗರಿ ಮೈಸೂರಿನ ಮಹಾರಾಜ ಕಾಲೇಜಿನ ಮೈದಾನದಲ್ಲಿ ರಾಷ್ಟ ಕವಿ ಕುವೆಂಪು ವೇದಿಕೆಯಲಿ ಹಿರಿಯ ಸಾಹಿತಿ ಹಾಗೂ ಚಿಂತಕರಾದ “ಪ್ರೊ. ಚಂದ್ರಶೇಖರ ಪಾಟೀಲ” ( ಚಂಪಾ) ಅವರ ಘನ-ಅಧ್ಯಕ್ಷತೆಯಲ್ಲಿ ೮೩ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ವಿಜೃಂಭಣೆಯಿಂದ ನಡೆಯುತ್ತಿದೆ. ರಾಜ್ಯದ ಗೌರವಾನ್ವಿತ ಮುಖ್ಯ ಮಂತ್ರಿಗಳಾದ ಶ್ರೀ‌. ‘ಸಿದ್ದರಾಮಯ್ಯನ’ವರಿಂದ ಉದ್ಘಾಟನೆಗೊಂಡ ಈ ಸಾಹಿತ್ಯ ಹಬ್ಬ ಸತತ ಮೂರು ದಿನಗಳ ಕಾಲ ಜರುಗಿದೆ. ೨೦೦ಕ್ಕೂ ಅಧಿಕ ಜ್ಞಾನ ಭಂಡಾರ ( ಪುಸ್ತಕ ) ಮಳಿಗೆಗಳು, ೧೦ಕ್ಕೂ ಅದಿಕ ಸಾಹಿತಿಗಳು, ೩೦೦೦ಕ್ಕೂ ಅದಿಕ ಲೇಖಕರು, ೯ಸಾವಿರ ಯವವೃಂದ -ಇವೆಲ್ಲಾ ಈ ಬಾರಿಯ ಸಮ್ಮೇಳನದ ಆಕರ್ಷಣೆಗಳು. ಮೈಸೂರಿನಲ್ಲಿ ೨೭ ವರ್ಷಗಳ ನಂತರ ನಡೆಯುತ್ತಿರುವ ೫ನೇ ಸಮ್ಮೇಳನ ಇದು ಎಂಬುವುದು ಇದರ ಮತ್ತೊಂದು ವಿಶೇಷ. ೧೯೧೭ ರಲ್ಲಿ ದಿವಾನರ ಅಧ್ಯಕ್ಷತೆಯಲ್ಲಿ ನಡೆದ ೩ನೇ ಸಮ್ಮೇಳನ, ೧೯೩೦ರಲ್ಲಿ ‘ಆಲೂರು ವೆಂಕಟ ರಾವ್’ ನೇತೃತ್ವದಲ್ಲಿ ನಡೆದ ೧೬ನೇ ಸಮ್ಮೇಳನ, ೧೯೫೫ರಲ್ಲಿ ‘ಡಾ. ಶಿವರಾಮ ಕಾರಂತ’ ಅವರ ಅಧ್ಯಕ್ಷತೆಯಲ್ಲಿ ನಡೆದ ೩೭ ನೇ ಸಮ್ಮೇಳನ, ೧೯೯೦ರಲ್ಲಿ ‘ಕೆ. ಎಸ್. ನರಸಿಂಹ ಸ್ವಾಮಿ’ ಸರ್ವಾಧ್ಯಕ್ಷತೆಯಲ್ಲಿ ನಡೆದ ೬೦ನೇ ಸಮ್ಮೇಳನ- ಇವೆಲ್ಲವೂ ಮೇಳೈಸಿದ್ದು ಈ ಸಾಂಸ್ಕೃತಿಕ ನಗರಿಯಲ್ಲಿಯೆ.
  • ಕನ್ನಡ ಭಾಷೆ, ಸಾಹಿತ್ಯ, ಮುಂತಾದವುಗಳ ಅಭಿವೃದ್ಧಿಯ ಆಶಯವನ್ನಿರಿಸಿಕೊಂಡು ಆರಂಭಗೊಂಡ ಈ ಸಮ್ಮೇಳನಗಳು ನಂತರದಲ್ಲಿ ಸ್ವ-ಭಾಷಾ ಪ್ರದೇಶಗಳ ಏಕೀಕರಣ, ಅಭಿವೃದ್ಧಿ ಮೊದಲಾದ ಕೈಂಕರ್ಯದಲ್ಲಿ ತೊಡಗಿಸಿಕೊಂಡಿತು. ಇನ್ನು ಮುಂದೆಯೂ ಉದ್ದೇಶಪಲ್ಲಟವಾಗದೇ ಇದೇ ಸತ್ಕಾರ್ಯಗಳಿಗೆ ಸಮ್ಮೇಳನಗಳು ಬಳಕೆಯಾಗಲಿ ಎಂಬುದೇ ನಮ್ಮ ಆಶಯ.

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..