1719

ಅಣ್ಣಾವ್ರ ಕಾಲದ ಚಿತ್ರರಂಗ

rahul
ಅಂಕಣ : ರಾಹುಲ್ ಹಜಾರೆ

ಹಳ್ಳಿಗರೆಲ್ಲ ಎತ್ತಿನ ಬಂಡಿ ಕಟ್ಟಿಕೊಂಡರು ಬಂಡಿಗೆ ಎಂಟೋ ಒಂಬತ್ತೊ ಜನ ಒಬ್ಬರಿಗೊಬ್ಬರು ಒತ್ತೊತ್ತಾಗಿ ಕುಳಿತುಕೊಂಡು ಹೊರಟರು. ಅಂಥ ಸರಿಸುಮಾರು ಎಂಟ್ಹತ್ತು ಬಂಡಿಗಳು ಅರ್ಧದಷ್ಟು ಹಳ್ಳಿಯೇ ಖಾಲಿಯಾಯಿತು. ಅದೇನು ಜಾತ್ರೆಯಲ್ಲ. ಹಬ್ಬವಲ್ಲ. ಅದು ಡಾ||ರಾಜ್ ಅವರ ಸಿನಿಮಾ ಪಕ್ಕದೂರಿನ ಟೆಂಟ್.ಗೆ ಬಂದಿದೆ. ಚಾವಟಿಯನ್ನು ಬೀಸಿ ಎತ್ತಿಗೆ ವೇಗವನ್ನು ಕೊಟ್ಟರು. ಊರು ಬಂದಾಯಿತು. ಟಿಕೆಟ್ ಪಡೆಯುವ ಹರಸಾಹಸ ಶುರು .ಈಗಿನ ಹಾಗೆ ಆನ್.ಲೈನ್ ಬುಕ್ಕಿಂಗ್ ಇರಲಿಲ್ಲ. ಲೈನ್.ನಲ್ಲಿ ತೂರಿಕೊಂಡು ಟಿಕೆಟ್ ಪಡೆಯಬೇಕಿತ್ತು. ಒಬ್ಬರ ಮೇಲೊಬ್ಬರು ಎದ್ದುಬಿದ್ದು ಕೊನೆಗೂ ಟಿಕೆಟ್ ಸಿಕ್ಕು ಬಿಡುತ್ತಿತ್ತು. ಆದರೆ ಮಧ್ಯಾಹ್ನ ಅಥವಾ ಸಂಜೆಯ ಶೋಗೆ ಹಾಗೂ ಹೀಗೂ ಪರದೆಯ ಮೇಲೆ ಅಣ್ಣಾವ್ರ ದರ್ಶನಕ್ಕಾಗಿ ಪರಿತಪಿಸುತ್ತಿದ್ದ ಜೀವಗಳಿಗೆ ಆ ಭಾಗ್ಯ ದೊರೆಯಿತು. ಒಳಗೆ ಹೋದ ಕೂಡಲೇ ಪರದೆಯ ಮೇಲೆ ನಟಸಾರ್ವಭೌಮ ಡಾ||ರಾಜ್.ಕುಮಾರ್ ಎಂಬ ಹೆಸರು ಬರುತ್ತಿದ್ದಂತೆ ಹರ್ಷೋದ್ಘಾರ ಹೊರಗಡೆ ಪಟಾಕಿ ಸಿಡಿತ. ಕಥೆ ತಮ್ಮದೇ ಏನೋ ಎಂಬಂಥ ತಲ್ಲೀನತೆ ಎಷ್ಟೇ ಆಗಲಿ ಅಣ್ಣಾವ್ರ ಅಭಿನಯವಲ್ಲವೇ ಪಾತ್ರ ನಕ್ಕರೇ ಅಭಿಮಾನಿವರ್ಗವೂ ನಗುತ್ತಿತ್ತು. ಅತ್ತರೆ ಅಭಿಮಾನಿಗಳ ಕಣ್ಣಲ್ಲಿ ನೀರು ಸರಿದಾಡುತ್ತಿತ್ತು. ಚಿತ್ರ ನೋಡಿಬಂದವನಿಗೆ ಊರಲ್ಲಿ ಎಲ್ಲಿಲ್ಲದ ಮಾನ್ಯತೆ ಅಣ್ಣಾವ್ರ ಹಾಗೆ ನಡೆದು,ಕುಣಿದು, ಗಂಟಲು ಸರಿಮಾಡಿ ಸಂಭಾಷಣೆ ಹೇಳಿ ಮೂರು ಗಂಟೆಯ ಪ್ರತಿ ಕ್ಷಣವನ್ನು ವಿವರಿಸುವ ಅವನು ಊರಲ್ಲಿನ ತಾತ್ಕಾಲಿಕ ಸೆಲಿಬ್ರಿಟಿ. ಇದರಲ್ಲಿ ಕೊಂಚವೂ ಉತ್ಪ್ರೇಕ್ಷೆ ಇಲ್ಲ. ಕೆಲವು ದಶಕಗಳ ಹಿಂದೆ ನಡೆಯುತ್ತಿದ್ದದ್ದನ್ನು ಹಿರಿಯರೊಬ್ಬರ ಬಾಯಿಂದ ಕೇಳದ್ದೆ. ಓದುಗರ ಮತ್ತು ಅವರ ಮಧ್ಯ ನಾನು ಮಾಧ್ಯಮ ಅಷ್ಟೆ.
ನೆಟ್ಟಗಿನ ಮೂಗು, ‘ಬೆಳ್ಳಗಿನ’ ಬಣ್ಣ, ಎತ್ತರದ ನಿಲುವು ನಟನೆಂದರೆ ಹೇಗಿರಬೇಕೋ ಆ ಸ್ಪುರದ್ರೂಪ. ನಟನೆಯೂ ಅಷ್ಟೆ ನಡೆಯುವಾಗಿನ ಗಾಂಭೀರ್ಯ, ಸಂಭಾಷಣೆಯಲ್ಲಿನ ಸ್ಪಷ್ಟತೆ ಸನ್ನಿವೇಶಕ್ಕೆ ತಕ್ಕಂತೆ ಹಾವಭಾವಗಳಲ್ಲಿನ ಬದಲಾವಣೆ ಎಲ್ಲವೂ ಅಚ್ಚುಕಟ್ಟು. ಇಂದು ಬಂದ ನಟ ನಾಳೆಗೆ ಮರೆಯಾಗಬೇಕಾದರೆ ಕನ್ನಡ ಸಿನಿಮಾ ಜಗತ್ತನ್ನು ದಶಕಗಳ ಕಾಲ ಆಳಿ ಹೋಗುವುದೆಂದರೆ ಸಾಮಾನ್ಯ ಮಾತೆ? ಅವರ ಅಭಿನಯದಲ್ಲಿನ ಗಟ್ಟಿತನ ಅವರನ್ನು ಮೇರು ನಟನನ್ನಾಗಿಸಿದ್ದಲ್ಲದೇ ಆ ಸ್ಥಾನದಲ್ಲಿ ಅವರನ್ನು ತುಂಬಾ ದಿನಗಳ ಕಾಲ ಉಳಿಯುವಂತೆ ಮಾಡಿತು. ಕಾಲಕ್ಕೆ ತಕ್ಕಂತೆ ಅಪ್ಡೇಟ್
ಆಗಿ ಹೊಸ ಪೀಳಿಗೆಗೆ ಬೇಕಾದಂತಹ ಚಿತ್ರಗಳನ್ನು ಕೊಡುತ್ತಾ ಹೋದರು. ಅವರ ಬಗ್ಗೆ ವಿಶೇಷವಾಗಿ ಹೇಳಲೇಬೇಕಾದ ಅಂಶವೆಂದರೆ ಅವರ “ಸ್ವಯಂನಿವೃತ್ತಿ”. ಚಿತ್ರರಂಗದಲ್ಲಿ ಜನಪ್ರಿಯ ಸ್ಥಾನದಲ್ಲಿದ್ದಾಗಲೇ ಅವರು ಹಂತ ಹಂತವಾಗಿ ನೇಪಥ್ಯಕ್ಕೆ ಸರಿದುಹೋದರು. ಅವರ ಜನಪ್ರಿಯತೆ, ಸಾಮಾಜಿಕ ಕಳಕಳಿ, ಭಾಷಾಭಿಮಾನ ,ವ್ಯಕ್ತಿತ್ವ, ಸಮರ್ಪಣಾ ಮನೋಭಾವ ಇತ್ಯಾದಿಗಳನ್ನು ಪದಗಳ ಮಿತಿಯಲ್ಲಿ ಬಂಧಿಸುವುದು ಕಷ್ಟಸಾಧ್ಯ. ಆದರೂ ಅನ್ನವನ್ನು ಕುದ್ದಿದೆಯೋ ಇಲ್ಲವೋ ಎಂದು ಪರೀಕ್ಷಿಸಲು ಒಂದಗಳು ಸಾಕೆಂಬಂತೆ ಕೆಲವೇ ಕೆಲವು ಉದಾಹರಣೆಗಳೊಂದಿಗೆ ಅವರನ್ನು ಕಟ್ಟಿಕೊಡಲು ವ್ಯರ್ಥ ಪ್ರಯತ್ನ ಮಾಡುವೆ.
‘ಬಂಗಾರದ ಮನುಷ್ಯ’ ಕನ್ನಡ ಮಾತ್ರವಲ್ಲದೇ ಇಡೀ ಭಾರತ ಚಿತ್ರರಂಗದ ದಾಖಲೆಯ ಚಿತ್ರ. ಅತ್ಯುತ್ತಮ ಕಥಾವಸ್ತು, ಅಣ್ಣಾವ್ರ ಎಂದಿನ ಸಹಜ ಅಭಿನಯ, ಬಾಲಕೃಷ್ಣ,ಭಾರತಿ, ದ್ವಾರಕೀಶ್, ಶ್ರೀನಾಥ್, ವಜ್ರಮುನಿ ಅಂಥ ಪ್ರಬುದ್ಧ ನಟಮಣಿಗಳ ದಂಡು , ಅತ್ಯುತ್ತಮ ಸಾಹಿತ್ಯ, ಸಂಭಾಷಣೆ, ಸಂಗೀತ ಒಂದು ಸಂಪೂರ್ಣ ಸದಭಿರುಚಿಯ ಚಿತ್ರವದು. ಸುಮಾರು ಎರಡು ವರ್ಷಗಳ ಕಾಲ ದಾಖಲೆಯ ಪ್ರದರ್ಶನ ಕಂಡ ಚಿತ್ರ. ದುಡ್ಡು ಮಾಡಿದರೆ ಮಾತ್ರ ಹಿಟ್ ಅನ್ನುವ ಕಾಲದಲ್ಲಿ ನಾವೀಗ ಇರುವುದು ವಿಪರ್ಯಾಸ. ಚಿತ್ರದ ಕಲೆಕ್ಷನ್ ಅಷ್ಟು ಕೋಟಿ ಇಷ್ಟು ಕೋಟಿ, ಒಂದು ವಾರ ಟಿಕೆಟ್ ಸೋಲ್ಡ್-ಔಟ್ ಎಂದು ಬಿಟ್ಟಿ ಪ್ರಚಾರ ಗಿಟ್ಟಿಸಿಕೊಂಡ ಚಿತ್ರಗಳು ಎರಡನೆಯ ವಾರಕ್ಕೆ ಮಕಾಡೆ ಮಲಗಿದ್ದು ನೋಡುತ್ತೇವೆ. ಅಂತದ್ದರಲ್ಲಿ ಭರ್ತಿ ಎರಡು ವರ್ಷ ಓಡುವುದೆಂದರೆ ಸಾಮಾನ್ಯ ಸಂಗತಿಯೆ? ನೀವು ಕೇಳಬಹುದು ಆಗಿನ ಕಾಲದಲ್ಲಿ ಪೈಪೋಟಿ ಸ್ಪರ್ಧೆ ಇರಲಿಲ್ಲ ಅಂತ. ಆದರೆ ಆಗ ಈಗಿನಷ್ಟು ಪ್ರಚಾರವೂ ಇರಲಿಲ್ಲ. ಸಾಮಾಜಿಕ ಜಾಲತಾಣಗಳಷ್ಟೇ ಅಲ್ಲ ಕನ್ನಡದಲ್ಲಿ ಹೇಳಿಕೊಳ್ಳಲಿಕ್ಕೆ ಎರಡನೆಯ ಚಾನಲ್ ಕೂಡಾ ಇರಲಿಲ್ಲ. ಪ್ರಚಾರವೇ ಇಲ್ಲದೇ ಬಿಡುಗಡೆಯಾಗಿ ಬಿಡುಗಡೆಯ ನಂತರ ಸದ್ದು ಮಾಡುವುದು ಅದ್ದೂರಿ ಪ್ರಚಾರ ಗಿಟ್ಟಿಸಿಕೊಂಡು ನೀರಸ ಪ್ರದರ್ಶನ ಕಾಣುವ ಆರಂಭ ಶೂರರಿಗಿಂತಲೂ ಶ್ರೇಷ್ಟ. ಬಂಗಾರದ ಮನುಷ್ಯ ಬರೀ ಎರಡು ವರ್ಷಗಳ ಕಾಲ ಚಿತ್ರಮಂದಿರದಲ್ಲಿ ಕುಳಿತುಕೊಂಡಿದ್ದೇ ಸಾಧನೆಯಲ್ಲ. ಅದರಿಂದ ಒಂದು ಸಾಮಾಜಿಕ ಬದಲಾವಣೆಯನ್ನು ಆಗಿನ ಕಾಲಘಟ್ಟದಲ್ಲಿ ತಂದಿತು. ಚಿತ್ರವನ್ನು ನೋಡಿ ನಗರಕ್ಕೆ ವಲಸೆ ಹೋದ ಹಲವು ಜನ ಹಳ್ಳಿಗೆ ಮರಳಿ ಬರಡು ಬಿದ್ದ ಭೂಮಿಯಲ್ಲಿ ಹಸಿರನ್ನು ತಂದರು. ಚಿತ್ರ ದುಡ್ಡು ಹೆಸರು ಮಾಡುವುದರ ಜೊತೆಗೆ ಅದರ ಸಾಮಾಜಿಕ ಹೊಣೆಗಾರಿಕೆಯನ್ನು ನಿಭಾಯಿಸಿತು.ಈ ಚಿತ್ರ ಮತ್ತೊಮ್ಮೆ ಹದಿನಾರು ವರ್ಷಗಳ ನಂತರ ಬಿಡುಗಡೆಯಾಯಿತು ಆಗಲೂ ನೂರು ದಿನಗಳ ಕಾಲ ಓಡಿತ್ತು ಇದು ಅಣ್ಣಾವ್ರ ಪ್ರಖ್ಯಾತಿಗೆ ಕನ್ನಡಿ.
ಬಾಂಡ್ ಶೈಲಿಯ ಚಿತ್ರಗಳು ಪ್ರಖ್ಯಾತ ಆಗಿದ್ದ ಕಾಲದಲ್ಲಿ ಅಣ್ಣಾವ್ರೂ ಕೂಡಾ ಅಂಥ ಚಿತ್ರಗಳಲ್ಲಿ ಕಾಣಿಸಿಕೊಂಡರು. ಆದರೆ ಅದರಲ್ಲಿನ ಕೆಲವು ದೃಶ್ಯಗಳು, ಉಡುಪು ಇತ್ಯಾದಿ ಕುಟುಂಬದವರೆಲ್ಲ ಒಂದೆಡೆಗೆ ಕುಳಿತು ನೋಡಲು ಮುಜುಗರವಾಗುತ್ತೆ ಎಂದಾಕ್ಷಣ ಅಂಥ ಚಿತ್ರಗಳನ್ನು ಕೈಬಿಟ್ಟರು. ಇಂಥ ಸಾಮಾಜಿಕ ಕಳಕಳಿ ಈಗಿನ ನಟರಲ್ಲಿ ಕಾಣಲು ಸಾಧ್ಯವೇ? ಕನ್ನಡ ನಾಡು-ನುಡಿಗೆ ಗಂಡಾಂತರ ಬಂದಾಗಲೆಲ್ಲ ಏಳುವ ಪ್ರತಿಭಟನೆಗಳಲ್ಲಿ ಪಾಲ್ಗೊಂಡು ಅದಕ್ಕೊಂದು ತಾರಾಮೆರಗನ್ನು ಪ್ರತಿಭಟನೆಗೆ ಒಂದು ತೀವ್ರತೆಯನ್ನೂ ತಂದುಕೊಟ್ಟರು. ಇಂಥ ಸನ್ನಿವೇಶಗಳಲ್ಲಿ ತಟಸ್ಥರಾಗಿ ಕುಳಿತು ಕೃತಘ್ನರಾಗಿ ಉಳಿಯಲಿಲ್ಲ.
“ಬಿಡುಗಡೆ” ಎಂಬ ಹೆಸರಿನ ಚಿತ್ರದ ಸಮಯದಲ್ಲಿ ಜೈಲಿನಲ್ಲಿದ್ದ ಖೈದಿಗಳಿಗೆಂದು ಮನೋರಂಜನಾ ಕಾರ್ಯಕ್ರಮ ಹಮ್ಮಿಕೊಂಡು ಹಾಡಿ ಕುಣಿದಿದ್ದಲ್ಲದೇ ಅವರ ಜೊತೆಗೆ ಕುಳಿತು ಊಟವನ್ನು ಸವಿದರು. ಅವರು ಎಂತ ಸರಳಜೀವಿ ಎಂಬುದಕ್ಕೆ ಇದೊಂದು ಸಾಮಾನ್ಯ ಉದಾಹರಣೆ. ಇನ್ನು ಅಭಿನಯದ ವಿಷಯಕ್ಕೆ ಬಂದರೆ ಅವರ ಸಮರ್ಪಣಾ ಭಾವ ಎದ್ದು ಕಾಣುವಂತಹದು. ಕಲಿತವರೆ ಇಂಗ್ಲಿಷ್ ಉಚ್ಛಾರಣೆಗೆ ತೊದಲುವ ಕಾಲದಲ್ಲಿ “ಎರಡು ಕನಸು” ಚಿತ್ರದ ಉಪನ್ಯಾಸಕನ ಪಾತ್ರದಲ್ಲಿ ಧ್ವನಿಯ ಏರಿಳಿತದೊಂದಿಗೆ ಮಾತಾಡಿದ ಶೈಲಿಯನ್ನೊಮ್ಮೆ ನೋಡಿ ಬೆರಗಾಗದವರಿಲ್ಲ. “ಕವಿರತ್ನ ಕಾಳಿದಾಸ’ ಚಿತ್ರದ “ಮಾಣಿಕ್ಯವೀಣಾ” ಹಾಡಿನಲ್ಲಿನ ಕ್ಲಿಷ್ಟ ಪದಗಳ ಉಚ್ಛಾರವನ್ನೂ ಇಲ್ಲಿ ಸ್ಮರಿಸಬಹುದು . ಇನ್ನು ಅವರ ಈ ಅಭಿನಯ ಶ್ರೀಮಂತಿಕೆಯನ್ನು ಸಮರ್ಥವಾಗಿ ದುಡಿಸಿಕೊಂಡವರಲ್ಲಿ ಶಂಕರ್ ನಾಗ್ ಕೂಡಾ ಒಬ್ಬರು. ಅವರ “ಒಂದು ಮುತ್ತಿನ ಕಥೆ” ಚಿತ್ರದ ದೃಶ್ಯಗಳಲ್ಲಿ ಸಮುದ್ರಕ್ಕೆ ಜಿಗಿದು ಆಮ್ಲಜನಕದ ಸಹಾಯವಿಲ್ಲದೆ ಯೋಗತಂತ್ರದ ಮೂಲಕ ನಿಮಿಷಗಳ ಕಾಲ ಉಸಿರುಗಟ್ಟಿ ನೀರಿನಲ್ಲಿ ಚಿತ್ರೀಕರಣ ಮಾಡಲಾಯಿತು. ಇದು ತುಂಬಾ ಆಶ್ಚರ್ಯಕರ ಸಂಗತಿಯೂ ಹೌದು. ಅಣ್ಣಾವ್ರೂ ಅಷ್ಟು ದಿನಗಳ ಕಾಲ ಚಿತ್ರರಂಗದಲ್ಲಿ ಉಳಿದಿದ್ದಕ್ಕೆ ಅವರ ಈ ಸಮರ್ಪಣಾ ಭಾವವೂ ಕಾರಣ. ಅವರ ದೇಹಕ್ಕೆ ಮುದಿತನ ಅಷ್ಟು ಬೇಗನೆ ಆವರಿಸದಿರುವುದಕ್ಕೆ ಕಾರಣ ಅವರು ಮಾಡುತ್ತಿದ್ದ ಯೋಗ. ಪತ್ರಕರ್ತರಾದ “ದೇವಶೆಟ್ಟಿ ಮಹೇಶ್” ಒಮ್ಮೆ ಅಣ್ಣಾವ್ರ ಖಾಸಗಿ ಟೇಲರ್ ಅವರ ಸಂದರ್ಶನ ಮಾಡಿದಾಗ ಟೇಲರ್ ಹೇಳುವುದೇನೆಂದರೆ ಅಣ್ಣಾವ್ರ ಎದೆಯಳತೆ ಸುಮಾರು ಮೂರುವರೆ ದಶಕಗಳ ಕಾಲ ಸ್ಥಿರವಾಗಿತ್ತಂತೆ. ಈ ತರಹ ಯಾರಿಗಾದರೂ ತಮ್ಮ ದೇಹವನ್ನು ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವೇ. ಒಬ್ಬ ನಟ ಅಥವಾ ನಟಿ ಚಿತ್ರರಂಗಕ್ಕೆ ಬಂದ ನಾಲ್ಕೈದು ವರ್ಷದಲ್ಲಿ ಬಲೂನಿನ ತರಹ ಉಬ್ಬಿಹೋಗುವ ಉದಾಹರಣೆಗಳು ನಮ್ಮ ಸುತ್ತಲಿವೆ. ಮುಖದ ಮೇಲಿನ ಮಡಿಕೆಗಳನ್ನು ಮೈಕಪ್ಪಿನ ಸಹಾಯದಿಂದ ಮುಚ್ಚಿಹಾಕಿ ಇಳಿವಯಸ್ಸಿನಲ್ಲಿಯೂ ನಾಯಕನಾಗಿ ನಟಿಸುವ ನಟರೂ ನಮ್ಮ ಸುತ್ತಲಿದ್ದಾರೆ. ಅವರಿಗೆ ಇವರು ಮಾದರಿಯಾಗಬೇಕು.
ಅಣ್ಣಾವ್ರ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ ಕನ್ನಡ ಚಿತ್ರರಂಗದ ಆ ವೈಭವೋಪೇತ ದಿನಗಳಲ್ಲಿ ನಮ್ಮ ಪೀಳಿಗೆ ಇರಲಿಲ್ಲ. ನಾವೆಲ್ಲ ಅಣ್ಣಾವ್ರ ಎರಡೋ ಮೂರೋ ಚಿತ್ರಗಳನ್ನು ಮಾತ್ರ ಚಿತ್ರಮಂದಿರದಲ್ಲಿ ನೋಡಿದ ದುರಾದೃಷ್ಟ ಪೀಳಿಗೆಯವರು. ಈಗಿನ ಕನ್ನಡ ಚಿತ್ರರಂಗದ ಅಧೋಗತಿಗೆ ಯಾರನ್ನೂ ಶಪಿಸದ ಸಂದಿಗ್ಧತೆಯಲ್ಲಿ ಮರಗುತ್ತಾ ಕೂಡುವುದೇ ನಮಗುಳಿದ ಪಾಲು.ಅಣ್ಣಾವ್ರೂ ಇನ್ನೊಮ್ಮೆ ಹುಟ್ಟಿಬರಲಿ ಕನ್ನಡದ ಹಿರಿತೆರೆಗೆ ಶ್ರೀಮಂತಿಕೆಯನ್ನು ತಂದುಕೊಡಲಿ. ಕನ್ನಡಿಗರ ಅಭಿಮಾನ ಶೂನ್ಯತೆ ಮತ್ತು ಪರಭಾಷಿಗರ ಅಭಿಮಾನ ಪರಮಾವಧಿಯನ್ನು ಒಮ್ಮೆ ಬದಲಿಸುವಂತಾಗಲಿ.. ಈ ಲೇಖನ ಬರೆಯುವುದು ತುಂಬಾ ಅವಶ್ಯಕ ಮತ್ತು ಸೂಕ್ತ ಕಾಲದಲ್ಲಿ ನಾವಿರುವುದರಿಂದ ಬರೆದೆ ಅಷ್ಟೆ.

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..