2404

ಯಾಜಿ : ಯಕ್ಷಗಾನದ ನಿಜ ಸವ್ಯಸಾಚಿ

ಬಳ್ಕೂರು ಕೃಷ್ಣ ಯಾಜಿ ಎನ್ನುವ ಈ ಹೆಸರೇ ಒಂದು ಸಂಚಲನವನ್ನು ಉಂಟುಮಾಡುವ ಹೆಸರು. ಅಭಿಮಾನಿಗಳ ಪಾಲಿಗೆ ಇವರು ರಂಗಸ್ಥಳದ ರಾಜ , ಸವ್ಯಸಾಚಿ. ರಂಗಸ್ಥಳಕ್ಕೆ ಬಂದರೆ ಅದೇನೋ ಒಂದು ರೀತಿಯ ರೋಮಾಂಚನ. ಸಭೆಯ ಕಡೆಯಿಂದ ಆಯಾಚಿತ ಅನಿಯಂತ್ರಿತ ಕರತಾಡನ. ನಂತರ ಯಕ್ಷ ಸರಸ್ವತಿಗೆ ನರ್ತನದ ಅಭಿಷೇಚನ. ವಾಗ್ದೇವಿಗೆ ಇವರ ಪ್ರಖರ ಮಾತಿನ ಮಿತ ಭಾಷೆಯ ಆಲಿಂಗನ..
ಮಹಾಭಾರತ ಕಾಲದಲ್ಲಿ ಅರ್ಜುನನಿಗೆ ಇದ್ದ ಹೆಸರು ಸವ್ಯಸಾಚಿ. ಆತ ಎರಡೂ ಕೈಗಳಲ್ಲಿ ಬಾಣ ಬಿಡುತ್ತಿದ್ದ ಚಾಕಚಕ್ಯತೆ ಹೊಂದಿದ್ದೆ ಇದಕ್ಕೆ ಕಾರಣ. ಈ ಹೆಸರು ಯಕ್ಷರಂಗದಲ್ಲಿ ಯಾರಿಗಾದರೂ ಪೂರ್ತಿಯಾಗಿ ಸಲ್ಲುವುದಾದರೆ ನಿಸ್ಸಂಶಯವಾಗಿ ಯಾಜಿಯವರಿಗೆ.

ಯಾಜಿಯವರು ಸುಧನ್ವನ ಪಾತ್ರ ವಹಿಸಿ ವೇಗದಿಂದ ರಣಕ್ಕನುವಾಗಬಲ್ಲರು, ಮರುದಿನವೇ, ಅದೇ ಪ್ರಸಂಗದ ಅರ್ಜುನನ ಪತ್ರ ವಹಿಸಿ ‘ಮತ್ತೆ ಬಂದುದು ವಿಘ್ನ’ ಎನ್ನುತ್ತಾ ಪ್ರದ್ಯುಮ್ನ ವೃಷಕೇತರ ಬಳಿ ಉಪಾಯ ಕೇಳಬಲ್ಲರು. ಹಿಂದೆ, ಶಕ್ರ ನಂದನನೆಡೆಗತಿ ಬೇಗ ಬರುವ ಸುಭದ್ರಾ ಕಲ್ಯಾಣದ ಕೃಷ್ಣನಾಗಿ ಮೆರೆದರೆ, ಈಗ ದ್ವಾರಾವತಿಯ ಅಧೀಶ್ವರ ಬಲರಾಮನಾಗಿ ರಾರಾಜಿಸುತ್ತಿದ್ದಾರೆ. ಮೊದಲು ಅಭಿಮನ್ಯುವಾಗಿ ಹೆಸರಿಗೆ ತಕ್ಕಂತೆ ಬೆಂಕಿಯ ಚೆಂಡಿನಂತೆ ರಂಗಸ್ಥಳವನ್ನು ಚಂದಗಾಣಿಸಿದ್ದರೆ, ಈಗ ಚಕ್ರವ್ಯೂಹವನ್ನು ಬಲಿದ ಕುಂಭಸಂಭವನಾಗಿ ಗಾಂಭೀರ್ಯದಿಂದ ರಂಜಿಸುತ್ತಿದ್ದಾರೆ. ಮೊದಲು ದ್ರೌಪದಿಯನ್ನು ಸಂತೈಸಿದ ದನುಜಾರಿ, ಈಗ ಮಾತನಾಡಿಸೆ ಎನುತ ಘನ ಖೈರಾವವನು ಕುಳಿಸುತ್ತ ಕುಳಿತ ಭೂತಳೇಶ. ಮೊದಲು ಹೆಜ್ಜೆಯ ಗುರುತಿನ ಜಾಡು ಹಿಡಿದು ಜಾ0ಬವನ ಗುಹೆಗೆ ಬಂದು ಜಾಂಬವತಿಯನ್ನು ಶರದ ಋತುವಿನ ಪೌರ್ಣಿಮೆಯ ಚಂದ್ರನಿಗೆ ಹೋಲಿಸುವ ಕೃಷ್ಣ ಈಗ ‘ಆರೆಲೋ ಗುಹೆಯನ್ನು ಪೊಗಲು….” ಎಂದಬ್ಬರಿಸುವ ಜಾಂಬವ.
ಕಾರ್ತವೀರ್ಯಾರ್ಜುನನಾಗಿ ಜಲಜಮುಖಿಯರನ್ನು ಜಲಕೇಳಿಗೆ ಕರೆವ ಶೃಂಗಾರ ಧೀರನಾಗಿ, ನೀಲ ಗಗನದಲ್ಲಿ ಮೇಘಗಳನ್ನು ನೋಡಿ ನಲಿವ ನವಿಲಿನ ಪರಿಯನ್ನು ಅಭಿನಯಿಸುವ ಈ ಕಲಾವಿದ, ಅದೇ ಪ್ರಸಂಗದ ರಾವಣನ ಸಭೆಯಲ್ಲಿ ಕನಕಲಂಕೇಶ್ವರನ ವೈಭವವನ್ನು ಪುನಃ ಸೃಜಿಸುತ್ತಾರೆ.
ಮೊದಲು ತಾವು ಮಾಡಿದ ಪಾತ್ರಗಳ ಎದುರು ಪಾತ್ರಗಳನ್ನು ಮಾಡುವಾಗ, ಎರಡೂ ಪಾತ್ರಗಳ ಔಚಿತ್ಯವನ್ನು ಕಾಪಾಡುವ ಮತ್ತು ಮರೆಸುವ ಕಲೆ ಯಾಜಿಗೆ ಕರಗತ. ದಕ್ಷನಾಗಿ ಗರ್ವ ಪ್ರದರ್ಶನದ ರೀತಿ ಒಂದಾದರೆ ಅದೇ ಪ್ರಸಂಗದ ಈಶ್ವರನಾಗಿ ಗಾಂಭೀರ್ಯದ ದರ್ಶನ ಇನ್ನೊಂದು ರೀತಿ. ಬ್ರಹ್ಮನಾಗಿ,”ಪದುಮ ನಯನೆ ಸುಗುಣ ಸದನೆ…” ಎಂದು ಶಾರದೆಯೊಡನೆ ಶೃಂಗಾರದ ತೆರ ಒಂದಾದರೆ, ಅದೇ ಪ್ರಸಂಗದ ಈಶ್ವರನಾಗಿ ಸಾನುರಾಗದ ತಾಂಡವ ಇನ್ನೊಂದು ಎತ್ತರ. ಕಾಮಿ ಕೀಚಕನಾಗಿ ಸೈರಂದ್ರಿಯನ್ನು ಸತಾಯಿಸಬಲ್ಲರು, ಅದೇ ಪ್ರಸಂಗದ ವಲಲನಾಗಿ ಸೈರಂದ್ರಿ ಅವಮಾನಕ್ಕೊಳಗಾದಾಗ “ತರಿವೆ ಕೀಚಕ ಕುಲವ…..” ಎನ್ನುತ್ತಾ ಅಬ್ಬರಿಸಬಲ್ಲರು ಕೂಡ. ವಾಲಿಯಾಗಿ,”ಭಾನು ತನುಜ ಭಳಿರೆ….” ಎಂದು ಸುಗ್ರೀವನನ್ನು ಮಾತಾಡಿಸುವ ಇದೇ ಯಾಜಿ ಸುಗ್ರೀವನಾಗಿ, “ಮಾನಿನಿಯನ್ನು ಬಿಡುವುದಕ್ಕೆ ಮನಸು ಬಾರದೆ…” ಎಂದು ಅದೇ ಪ್ರಶ್ನೆಗೆ ಉತ್ತರವೀಯಬಲ್ಲರು; ರಾಮನಾಗಿ ವಾಲಿಯಲ್ಲಿ,”ನ್ಯಾಯವೇ ತಮ್ಮನ ಸತಿಯ ಕೂಡುವುದು…” ಎನ್ನಬಲ್ಲರು. ಸಾಲ್ವನಾಗಿ ಗತ್ತು ತೋರಿಸಿ, ಮತ್ತೆ ಭೀಷ್ಮನಾಗಿ, “ಏರಿರಿ ಯನ್ನಯ ರಥವ…” ಎನ್ನುತ್ತಾ ಅಂಬೆ ಅಂಬಿಕೆ ಅಂಬಾಲಿಕೆಯರನ್ನು ಹಸ್ತಿನಿಗೆ ಕರೆದೊಯ್ಯುತ್ತಾರೆ.ದುಷ್ಟಬುದ್ಧಿಯಾಗಿ ವಂಚನೆ ತಂತ್ರಗಾರಿಕೆಗಳ ಉತ್ತುಂಗದ ದರ್ಶನ ಮಾಡಿಸುವ ಯಾಜಿ ಅದೇ ದುಷ್ಟಬುದ್ಧಿಯ ಮಗ ಹುಂಬ ಮದನನಾಗಿ ಮೆರೆದಾಡಬಲ್ಲರು.
ಕೃಷ್ಣನಾಗಿ ತಂಗಿ ಸುಭದ್ರೆಯಲ್ಲಿ ಉಟ್ಟ ಸೆರಗೊಡ್ಡಿ ಗಯನನ್ನು ಕರೆಸಿಕೊಡುವಂತೆಯೂ ಹೇಳಬಲ್ಲರು, ಅದೇ ಸುಭದ್ರೆಯಲ್ಲಿ ಅರ್ಜುನನಾಗಿ,”ಬಿಟ್ಟು ಕಳುಹಲ್ಯಾಕೆ ಗಯನ ಕಟ್ಟಿ ತಂದೇವೇನೆ” ಎಂದು ಪ್ರಶ್ನಿಸಬಲ್ಲರು ಕೂಡ. ಭೀಷ್ಮೋತ್ಪತ್ತಿಯ ದೇವವ್ರತನಾಗಿ “ಪರಶುಧರನಿತ್ತ ಚೌಷಷ್ಟಿ ವಿದ್ಯೆಗಳ…”ಎನ್ನುತ್ತಾ ರಂಗಸ್ಥಳದ ಮೇಲೆ ರಾರಾಜಿಸುವ ಈ ಕಲಾವಿದ, ಅದೇ ಪ್ರಸಂಗದ ಶಂತನುವಾಗಿ “ಕಲಕೀರವಾಣಿ ಕೇಳೇ…” ಎನ್ನುತ್ತಾ ಸತ್ಯವತಿಯನ್ನು ಮಾತಾಡಿಸುತ್ತಾರೆ. ಮುಂದೆ ಅದೇ ದೇವವ್ರತ ಭೀಷ್ಮನಾಗಿ ಎಂಟುನೂರು ಸಂವತ್ಸರಗಳನ್ನು ಕಳೆದು ಶರಶಯ್ಯೆಗೇರುವಲ್ಲಿ ಭಾವನೆಗಳ ಮಹಾಪೂರವನ್ನೇ ಹರಿಸುತ್ತಾರೆ. ಕೃಷ್ಣನಿಗೆ ಬಾಣ ಹೊಡೆಯುವ ಹುಡುಗಾಟಿಕೆಯನ್ನು ಹೊಂದಿದ ವೃದ್ಧ ಭೀಷ್ಮ,”ದುರಿತವನ ದಾವಾಗ್ನಿ..” ಎನ್ನುತ್ತಾ ಕ್ಷಮೆ ಕೇಳುವಾಗಿನಷ್ಟೇ ಆಪ್ತ ಎನ್ನಿಸುತ್ತಾನೆ.
ನಿರ್ಯಾಣದ ಗಂಭೀರ ಮತ್ತು ಲಕ್ಷ್ಮಣನ ಕುರಿತು ಪ್ರೀತಿ ತುಂಬಿದ ರಾಮನಾಗಿ, ಕುಶಲವದ “ತಾಮಸ ಗೊಳದೀಗ….” ಎನ್ನುವ ರಾಮ ಎರಡೂ ಭಿನ್ನತೆಯಿಂದ ಕೂಡಿದ್ದರೂ ಸಮರ್ಥವಾಗಿ ನಿರವಹಿಸುತ್ತಾರೆ ಯಾಜಿ.
ಯಾಜಿಯವರಿಗೆ ಹೊಸ ಪ್ರಸಂಗಗಳು ಅಷ್ಟೇನೂ ಇಷ್ಟವಲ್ಲದಿದ್ದರೂ, ವೃತ್ತಿಮೇಳಗಳ ಉಳಿಯುವಿಕೆಗೆ ಅನಿವಾರ್ಯ ಎನ್ನುವ ಪರಿಸ್ಥಿತಿ ಉಂಟಾದಾಗ ಅಲ್ಲಿನ ಪಾತ್ರಗಳಿಗೂ ನ್ಯಾಯ ಒದಗಿಸಿಕೊಟ್ಟರು.


ಯಾಜಿಯವರ ಶರೀರ ಶಾರೀರಗಳನ್ನು ಗಮನಿಸಿದರೆ ಅವರು ಯಕ್ಷಗಾನಕ್ಕಾಗಿಯೇ ಜನಿಸಿದ್ದೇನೋ ಎನ್ನಿಸುವಂತಿದೆ. ಎಂಥಾ ಪ್ರಸಂಗವೇ ಇರಲಿ ಪದ್ಯದ ಎತ್ತುಗಡೆ ಮಾಡಿ ಅದನ್ನು ಮೇಲೆ ತರುವಲ್ಲಿ ಯಾಜಿ ನಿಷ್ಣಾತ. ಹಿತ ಮಿತವಾದ ಮಾತು ಮತ್ತು ಕುಣಿತ ಎರಡರ ವಿಶಿಷ್ಟ ಸಂಯೋಜನೆಯನ್ನು ಯಾಜಿಯವರಲ್ಲಿ ಕಾಣಬಹುದು. ಮಾತಿನಲ್ಲಿ ಅವರನ್ನು ಕೆಳ ಹಾಕುವುದು ಎದುರಿನ ಕಲಾವಿದನ ಪಾಲಿಗೆ ಸವಾಲೇ ಸರಿ. ಪೌರಾಣಿಕ ಪಾತ್ರಗಳನ್ನು ವಹಿಸಿ ಇಂದಿನ ರಾಜಕೀಯ ಪರಿಸ್ಥಿತಿಯ ಬಗ್ಗೆ ಯಾಜಿ ಆಡುವ ಮಾತುಗಳನ್ನು ಕೇಳಿದರೆ ಪಾತ್ರ ಜ್ಞಾನ ಮತ್ತು ವರ್ತಮಾನ ಜ್ಞಾನ ಹಾಗೂ ಇವೆರಡನ್ನೂ ಮಿಳಿತಗೊಳಿಸಿ ಪ್ರಸಂಗದ ಚೌಕಟ್ಟಿನಲ್ಲೇ ಪಾತ್ರದ ಗಾ0ಭೀರ್ಯಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಮಾತಾಡುವುದು ಬಹುಷಃ ಯಾಜಿಯೊಬ್ಬರೇ. ಅವರು ಆಡಿದ ಕೆಲ ಮಾತುಗಳು ಬಹುಷಃ ರಾಜಕಾರಣಿಗಳ8ಗೆ ಅರ್ಥವಾಗಲಿಲ್ಲ. ಆಗಿದ್ದರೆ ಈ ಅಹಂಕಾರಿಗಳು ಪ್ರಶಸ್ತಿ ಕೊಟ್ಟಾರಾ?
ಯಾಜಿಯವರ ಇನ್ನೊಂದು ವಿಶೇಷತೆ ಎಂದರೆ, ಯಾರೇ ಭಾಗವತರಿರಲಿ, ಅನುಭವಿ ವೇಷಧಾರಿಯೇ ಇರಲಿ ಅಥವಾ, ಹವ್ಯಾಸಿಯೇ ಇರಲಿ ಅವರೊಡನೆ ಮೇಳೈಸಿ ಪ್ರಸಂಗ ಮುಂದೆ ಕೊಂಡೊಯ್ಯುವ ಸಾಮರ್ಥ್ಯ.
ನಿಜವಾಗಿ, ಯಾಜಿಯವರಿಗೆ ಅರ್ಜುನನಿಗೆ ಸಲ್ಲುವ ಇತರ ನಾಮಗಳೂ ಸಲ್ಲುತ್ತವೆ.ಅರ್ಜುನ-ಶುಭ್ರ ಮನಸ್ಸಿನವ; ಪಾರ್ಥ-ಯಕ್ಷ ಪೃಥೆಗೆ ನಿಜಕ್ಕೂ ಯಾಜಿ ಆನಂದವನ್ನುಂಟು ಮಾಡುವವರು. ಫಲಗುಣ- ಯಕ್ಷಗಾನದ ಫಲ ಅಂದರೆ ಸಂತೋಷ ಯಾಜಿಯವರಿದ್ದರೆ ಗುಣಿಸುತ್ತಲೇ ಇರುತ್ತದೆ. ಕಿರೀಟಿ-ಕಿರೀಟಕ್ಕೆ ಯಾಜಿ ಭೂಷಣವೇ ಅಲ್ಲವೇ? ಧನಂಜಯ-ಯಾಜಿ ಇದ್ದರೆ ಗಳಿಕೆಗೆ ಮೋಸವಿಲ್ಲ. ಶ್ವೇತವಾಹನ-ಯಾಜಿಯವರ ಕೆಲವು ಕುಣಿತ ಹಂಸವನ್ನು ಏರಿ ಸಾಗುತ್ತಿರುವ ವ್ಯಕ್ತಿಯನ್ನು ನೆನಪಿಸುತ್ತದೆ.ಕೃಷ್ಣ-ಆಕರ್ಷಣೆ ಉಂಟು ಮಾಡುವ ವ್ಯಕ್ತಿ. ಸವ್ಯಸಾಚಿ ಎನ್ನುವುದನ್ನು ಈಗಾಗಲೇ ಕೊಟ್ಟಾಗಿದೆ.
ಮಹಾಬಲ ಹೆಗಡೆಯವರಿಂದ ಹೆಜ್ಜೆ ಕಲಿತ ಯಾಜಿ, ಮಹಾಬಲರ ಪಾತ್ರ ಚಿತ್ರಣದ ಆದರ್ಶಗಳನ್ನು ಪಾಲಿಸಿಕೊಂಡು ಬಂದಿದ್ದಾರೆ. ಗುರುದಕ್ಷಿಣೆ ಎಂಬಂತೆ ಕಲೆಯಲ್ಲಿ ಮಹಾಬಲಾರಂತೆಯೇ ಚೌಕಟ್ಟನ್ನು ಮೀರದೆ ನಾವೀನ್ಯವನ್ನು ಅಪ್ಪಿಕೊಂಡರು. ಅವರಿಂದ ಹೆಚ್ಚು ನಿರೀಕ್ಷಿಸದ ಹಿರಿಯ ಕಲಾವಿದರೊಬ್ಬರು ಅವರನ್ನು ಹೋಗಲಿ ತಬ್ಬಿಕೊಂಡಿದ್ದನ್ನು ತಮ್ಮ ಜೀವನದ ಸಾಧನೆ ಎಂದು ನೆನಪಿಸಿಕೊಳ್ಳುತ್ತಾರೆ. ಹಿರಿಯ ಕಲಾವಿದರ ಬಗೆಗೆ ಯಾಜಿ ಎಲ್ಲೂ ಕೀಳಾಗಿ ಮಾತಾಡಿದ್ದಿಲ್ಲ.
ಬೆಂಗಳೂರಿನಲ್ಲಿ ಚಿಟ್ಟಾಣಿಯವರ ಸುಧನ್ವನಿಗೆ ಯಾಜಿ ಅರ್ಜುನನನ್ನು ಮಾಡಿದ್ದಾಗ, ಚಿಟ್ಟಾಣಿಯವರು ಹೇಳಿದ ಮಾತು “ಕೃಷ್ಣಯಾಜಿ ಮೇಲೆ ಒಂದು ಭರವಸೆ ಉಂಟು ನನಗೆ. ಸಮರ್ಥ ಕಲಾವಿದ” ಎಂದಿದ್ದರು. ಇದಕ್ಕೆ ಯಾಜಿ ಕೊನೆಗೆ ವಂದನೆಗಳು ಸಲ್ಲಿಸುತ್ತಾ, ಚಿಟ್ಟಾಣಿಯವರು ಇಷ್ಟು ಹೇಳಿದ್ದು ತಮ್ಮ ಜೀವನದ ಸಾರ್ಥಕ ಕ್ಷಣ ಎಂದು ಸಂಭ್ರಮಿಸಿದ್ದರು. ಇದು ಯಾಜಿಯವರ ಸಾಧನೆ ಮತ್ತು ಅವರ ವಿನಯಾಶೀಲತೆ ಎರಡಕ್ಕೂ ಸಾಕ್ಷಿ.
ಗುರು ಮಹಾಬಲರ ಹೆಸರಿನ ಪ್ರಶಸ್ಟಿ ಸ್ವೀಕರಿಸಿ, ರಾಜ್ಯೋತ್ಸವ ಪ್ರಶಸ್ತಿಯ ಬಗ್ಗೆ ಭಾವುಕರಾಗಿ ಮಾತಾಡಿದ್ದರಂತೆ. ಇದು ನನ್ನ ಗುರು ಅನುಗ್ರಹ ಎಂಬಂತೆ. ಇದು ಸಾಧಕನ ಸರಳತೆಯಲ್ಲವೇ?
ಭಗವದ್ಗೀತೆಯಲ್ಲಿ ಭಗವಂತ ಹೇಳುತ್ತಾನೆ, “ನಿಮಿತ್ತ ಮಾತ್ರಂ ಭವ ಸವ್ಯಸಾಚಿ….” ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿದ ಸವ್ಯಸಾಚಿ, ಈ ಮಾತನ್ನು ನಡೆಸಿಯೂ ಸವ್ಯಸಾಚಿಯಾದರು. ರಾಮಚಂದ್ರ ಗುಹಾ ಅವರಂಥ ಬಕೆಟ್ ಗಳಿಗೆ, ಪೂಸಿ ಗಿರಾಕಿಗಳಿಗೆ, ಗಂಜಿಗಳಿಗೆ ಮಾತ್ರವಲ್ಲ, ಸಾಧಕರಿಗೂ ರಾಜ್ಯ ಪ್ರಶಸ್ತಿ ಸಿಗುತ್ತದೆ ಎಂದು ತೋರಿಸಲು ಕೂಡಾ ನಿಮಿತ್ತವಾದರು ಈ ಸವ್ಯಸಾಚಿ. ಇವರಿಗೆ ಅಭಿನಂದನೆಗಳು ಅಂತ ಅಷ್ಟೇ ಬರೆಯುವುದಕ್ಕೆ ಮನಸಾಗಲಿಲ್ಲ. ಅದಕ್ಕೇ ಇಷ್ಟು ಬರೆದೆ.
ಬರಹ ತಡವಾಯಿತು. ಉದ್ದವೂ ಆಯಿತು. ಏನು ಮಾಡಲಿ. ಕೆರೆಯಲಿದ್ದ ನೀರನ್ನು ಲೋಟದಲ್ಲಿ ಹಿಡಿವಂತೆ ಬಟ್ಟಿಸಲು ಹೋದರೆ ತದವೂ ಆಗುತ್ತದೆ. ಲೋಟದ ಬದಲು ಕೊಪ್ಪರಿಗೆಯೇ ಬೇಕಾಗುತ್ತದೆ. ಲೇಖನ ಉದ್ಧವಾದರೂ ಯಾಜಿಯವರ ಸಾಧನೆ ಮತ್ತು ವ್ಯಕ್ತಿತ್ವದ ಮುಂದೆ ಕುಬ್ಜವಾಗಿದೆ.ಮುಂದೆ ಇನ್ನಷ್ಟು ಬರೆಯುತ್ತೇನೆ. ಇನ್ನೂ ಅನೇಕ ಪ್ರಶಸ್ತಿಗಳು ಯಾಜಿಯವರನ್ನು ಸೇರಿ ಸಾರ್ಥಕವಾಗಲಿ.

“ನಮ್ಮ ಫೇಸ್ಬುಕ್ ಪೇಜ್ ಲೋಕಲ್ ಕೇಬಲ್ ಅನ್ನು ಲೈಕ್ ಮಾಡುವುದರ ಮೂಲಕ ನಮ್ಮನ್ನು ಪ್ರೋತ್ಸಾಹಿಸಿ “

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..