2413

ಬುತ್ತಿ ಡಬ್ಬಿಯಲ್ಲಿ ಭಾವಮೃಷ್ಟಾನ್ನ,ಪತ್ರ ಸಾಂತ್ವನ

ಬದುಕು ಒಂದೆಡೆ ಯಾಂತ್ರಿಕವಾಗುತ್ತಾ ಮನುಷ್ಯನ ಮಧ್ಯದ ಸಂಬಂಧಗಳು ಸತ್ತು ಹೋಗುತ್ತಿವೆ. ತಂತ್ರಜ್ಞಾನವನ್ನು ನಾವೇ ಕಂಡುಹಿಡಿದು ನಾವೇ ಅದರ ಆಳಾಗಿದ್ದೇವೆ. ಹಗಲು ರಾತ್ರಿಗಳೆನ್ನದೇ ಹೆಸರು,ಕೀರ್ತಿ, ದುಡ್ಡಿನ ಹಿಂದೆ ಬೆನ್ನುಹತ್ತಿದ್ದೇವೆ. ಅಂತರಿಕ್ಷದಾಚೆಗಿನ ಗ್ರಹಗಳ ,ಆಕಾಶಕಾಯಗಳ ಜೊತೆ ಸಂಪರ್ಕ ಸಾಧಿಸುತ್ತಿದ್ದೇವೆ. ಆದರೆ ಮನೆಮಂದಿಯ ಜೊತೆ ಸಣ್ಣದೊಂದು ಪರಿಚಯದ ನಗೆ ಬೀರುವುದನ್ನು ಮರೆತಿದ್ದೇವೆ. ದೂರದಲ್ಲೆಲ್ಲೋ ಪ್ರಕೃತಿ ವಿಕೋಪಗಳಲ್ಲಿ ಮಡಿದವರಿಗೆ ಸಾಮಾಜಿಕ ತಾಣಗಳಲ್ಲಿ ಡಾಂಭಿಕ ಸಾಂತ್ವಾನ ಹೇಳುತ್ತೇವೆ. ಆದರೆ ನೆರೆಮನೆಯವನು ಹೊರೆಯಾಗುತ್ತಿದ್ದಾನೆ. ಪೈಪೋಟಿಗೆ ಬಿದ್ದು ನಾಲ್ಕು ಜನರನ್ನು ಹಿಂದಕ್ಕಿಕ್ಕಿ ಓಡಿ ಹೋಗಿ ಗುರಿ ತಲುಪಿ ಬೀಗುತ್ತೇವೆ. ಆದರೆ ಅದೇ ಓಟದಲ್ಲಿ ಕಾಲ್ತುಳಿತಕ್ಕೊಳಗಾದವನಿಗೆ ಸಹಾಯ ಹಸ್ತ ಚಾಚದಷ್ಟು ಕಟುಕರಾಗಿಬಿಟ್ಟಿದ್ದೇವೆ.
ಇಂಥ ಭಾವಶೂನ್ಯ ಬದುಕಲ್ಲಿ ಈಗಲೂ ಎಲ್ಲಾ ಇದ್ದು ಏನು ಇಲ್ಲದಂತೆ ಬದುಕುವ ಜನವಿದ್ದಾರೆ. ಅವರಿಗೆ ಬೇಕಾದದ್ದು ಬರೀ ನೆಮ್ಮದಿ, ಸಾಂತ್ವನ ಅಷ್ಟೇ. ಇತ್ತೀಚೆಗೆ ನೋಡಿದ “ಲಂಚ್ ಭಾಕ್ಸ್ ” ಚಿತ್ರ ಇಂಥ ಸೂಕ್ಷ್ಮ ಎಳೆಯನ್ನು ಆಧರಿಸಿ ಮಾಡಿದ ಚಿತ್ರಕಥೆಯನ್ನು ಹೊಂದಿದೆ. ಎಲ್ಲ ಒಳ್ಳೆಯ ಚಿತ್ರಗಳಂತೆ ಅದಕ್ಕೂ ಸೋಲೆ ಆಯಿತು ಎಂಬುದನ್ನು ಬೇರೆ ಹೇಳಬೇಕಿಲ್ಲ. ಒಬ್ಬಳು ಗೃಹಿಣಿ ಮತ್ತೊಬ್ಬ ವಿಧುರ ಇವರಿಬ್ಬರ ನಡುವೆ ಆಕಸ್ಮಿಕವಾಗಿ ಒಂದು ಗೆಳೆತನ ಏರ್ಪಟ್ಟು ಉದ್ದೇಶಪೂರ್ವಕವಾಗಿ ಅಂತ್ಯವಾಗುತ್ತದೆ. ಗೃಹಿಣಿಯ ಗಂಡ ತನ್ನ ಆಫೀಸ್‌ ಸಂಬಂಧಿ ಕೆಲಸಗಳ ಮಧ್ಯೆ ಯಾವಾಗಲೂ ಕಾರ್ಯನಿರತ ಮನೆಗೆ ಕುಟುಂಬಕ್ಕೆ ಸಮಯ ಒದಗಿಸದಷ್ಟು ದುಡಿಯುತ್ತಿರುತ್ತಾನೆ. ಆದರೆ ಗೃಹಿಣಿ ಎಲ್ಲ ಇದ್ದು ಮನಸ್ಸಿಗೆ ಬೇಕಾದ ಮೂಲ ಸೌಕರ್ಯಗಳಾದ ಪ್ರೀತಿ ಕಾಳಜಿಯಿಂದ ವಂಚಿತಳಾಗಿರುತ್ತಾಳೆ. ಅವಳಿಗೆ ಅದನ್ನು ದಕ್ಕಿಸಿಕೊಳ್ಳಲು ಒಂದು ಮಾರ್ಗದ ಅವಶ್ಯಕತೆ ಇರುತ್ತದೆ. ಇನ್ನೊಂದೆಡೆ ಹೆಂಡತಿಯನ್ನು ಕಳೆದುಕೊಂಡವ ಒಬ್ಬಂಟಿಯಾಗಿ ಚಿರವಿರಹಿಯಾಗಿ ಬದುಕುತ್ತಿರುತ್ತಾನೆ. ಗೃಹಿಣಿ ಗಂಡನಿಗೆ ಕಳಿಸುವ ಬುತ್ತಿ ವಿಳಾಸ ತಪ್ಪಿ ಆ ವಿದುರನ ಕೈಗೆ ತಲುಪುತ್ತಿರುತ್ತದೆ. ಅದೊಮ್ಮೆ ತಿಳಿದಾಗ ಗೃಹಿಣಿ ಅದರಲ್ಲಿ ಪತ್ರವಿಟ್ಟು ಕಳಿಸಲು ಶುರು ಮಾಡುತ್ತಾಳೆ. ಆ ಪತ್ರಗಳು ಮೊದಮೊದಲು ಬರೀ ಅಡುಗೆಯ ವಿವರಗಳನ್ನು ಅವಳು ಬರೆದು ಕಳಿಸಿದರೆ. ಅದನ್ನು ಸವಿದು ಅದರ ರುಚಿಪರೀಕ್ಷೆಯ ಫಲಿತಾಂಶವನ್ನು ಅವನು ಹೇಳುತ್ತಿರುತ್ತಾನೆ. ಮುಂದೆ ಇದೇ ಪತ್ರಗಳು ಎಷ್ಟು ಆಪ್ಯಾಯಮಾನವಾಗಿತ್ತವೆಂದರೆ ಅವರಿಬ್ಬರ ಮಧ್ಯ ಸ್ನೇಹಕ್ಕೆ ಮೀರಿದ ಸಲುಗೆಯೊಂದು ಸ್ಥಾಪಿತವಾಗುತ್ತದೆ. ಇಬ್ಬರೂ ಒಬ್ಬರ ದುಃಖಕ್ಕೆ ಮತ್ತೊಬ್ಬರು ಸಾಂತ್ವನ ಹೇಳುತ್ತಾ ಒಬ್ಬರನ್ನು ಇನ್ನೊಬ್ಬರು ಬುದ್ಧಿ ಹೇಳುವ ಮಟ್ಟಿಗೆ ಸಲುಗೆ ಬೆಳೆದು ನಿಲ್ಲುತ್ತದೆ. ಬುತ್ತಿಯಲ್ಲಿನ ಊಟಕ್ಕಿಂತ ಪತ್ರದೆಡೆಗಿನ ಹಸಿವು ಉಭಯಮನಸ್ಸುಗಳಲ್ಲಿ ಜಾಸ್ತಿಯಾಗುತ್ತದೆ. ಗೃಹಿಣಿ ತನ್ನ ಮಾತ್ರವಲ್ಲದೇ ತನ್ನ ನೆರೆಹೊರೆಯವರ ಪರಿಚಯಗಳನ್ನು ಮಾಡಿ ತಾನಿರುವ ಪರಿಸರ ಎಂಥದ್ದು ಎಂದು ಹೇಳುತ್ತಾಳೆ. ಹಾಗೇ ಅವನೂ ಕೂಡಾ ತನ್ನ ಆಫಿಸು ದಿನಚರಿ ಸಹೋದ್ಯೋಗಿಗಳ ಬಗೆಗೆ ಅವಳಿಗೆ ತಿಳಿಸಿ ತನ್ನ ಸಂಪೂರ್ಣ ವ್ಯಕ್ತಿತ್ವದ ಕಟ್ಟನ್ನು ಅವಳಿಗೆ ತಲುಪಿಸುತ್ತಾನೆ.
ಗೃಹಿಣಿಗೆ ತನ್ನ ಗಂಡ ವಿವಾಹೇತರ ಸಂಬಂಧವನ್ನು ಹೊಂದಿದ ಬಗ್ಗೆ ಸಂಶಯವಿರುತ್ತೆ ಅದರ ಬಗ್ಗೆಯೂ ಹೇಳುತ್ತಾಳೆ. ಅದೇ ರೀತಿ ಅವನೂ ಕೂಡಾ ತೀರಿಹೋದ ಹೆಂಡತಿಯ ವಿಚಾರ ಅವನಿಗಿದ್ದ ಸಿಗರೇಟ್ ವ್ಯಸನ ಹೀಗೆ ಎಲ್ಲದರ ಬಗ್ಗೆ ಹೇಳುತ್ತಾನೆ. ಅವರಿಬ್ಬರ ಮಧ್ಯೆ ಗುಟ್ಟಾಗಿ ಏನೂ ಉಳಿದಿರೊಲ್ಲ.ಹೀಗೆ ಒಬ್ಬರಿಗೊಬ್ಬರು ಅರಿತು ಬೆರೆತು ಹೋಗುತ್ತಾರೆ. ಆದರೆ ಎಲ್ಲಕ್ಕೂ ಪತ್ರಗಳೇ ಸಂಪರ್ಕ ಸೇತು. ಕೊನೆಗೊಂದು ದಿನ ಭೇಟಿಯಾಗಲೇಬೇಕೆಂದು ಇಚ್ಛಿಸುತ್ತಾರೆ. ಆದರೆ ಅದು ಸಾಧ್ಯವಾಗೊಲ್ಲ. ಅವನು ಅವಳನ್ನು ನೋಡುತ್ತಾನೆ. ಆದರೆ ಅವಳ ಪಾಲಿಗೆ ಅವನ ಕಾಲ್ಪನಿಕ ಚಿತ್ರವೇ ಅಂತಿಮವಾಗಿರುತ್ತದೆ. ಕೊನೆಗೆ ಬುತ್ತಿ ತೆಗೆದುಕೊಂಡು ಹೋಗುವವನು ಬೆನ್ನು ಹತ್ತಿ ವಿಳಾಸ ತಿಳಿದು ಹೊರಟಾಗ ಅವನು ಕೆಲಸಕ್ಕೆ ರಾಜೀನಾಮೆ ಇತ್ತು ಹೊರಟಿರುತ್ತಾನೆ. ಅವಳಿಗೆ ಮತ್ತೆ ಅವನ ಹೊಸ ವಿಳಾಸ ಪಡೆಯುವುದು ಕಷ್ಟದ ಕೆಲಸವಾಗಿರೊಲ್ಲವಾದರೂ ಅವನು ಉದ್ದೇಶಪೂರ್ವಕವಾಗಿಯೇ ಹೋಗಿದ್ದಾನೆಂದು ಅರಿತು ವಿಳಾಸದ ಪ್ರಯತ್ನಕ್ಕೆ ಅವಳು ಹೋಗುವುದಿಲ್ಲ. ಒಂದು ಸಂಬಂಧವು ನೈತಿಕ ಚೌಕಟ್ಟಿನಾಚೆಗೆ ಹೋಗುವ ಮುನ್ನ ಆತ್ಮಹತ್ಯೆಗೆ ಒಳಗಾಗುತ್ತದೆ.
ಚಿತ್ರದ ಕೊನೆಗೆ ಒಂದು ಮಾತು ಬರುತ್ತೆ. “ಕೆಲವೊಮ್ಮೆ ದಾರಿ ತಪ್ಪಿದ ಪಯಣ ಕೂಡಾ ಸರಿಯಾದ ನಿಲ್ದಾಣಕ್ಕೆ ಸೇರಿಸುತ್ತದೆ.” ಪತ್ರ ಎಂಬುದು ಸತ್ತು ಯಾವುದೋ ಕಾಲವಾಯ್ತು. ಈಗಿನ ಪ್ರೇಮಗಳಲ್ಲಿ ಸದೃಢತೆ ಕಡಿಮೆಯಾಗಿರುವುದಕ್ಕೂ ನಮ್ಮಲ್ಲಿನ ಹಪಹಪಿಯೇ ಕಾರಣ. ಹೀಗೆ ಬಂದು ಹಾಗೆ ಹೋಗುವ ನೂರು ಸಂಬಂಧಗಳ ಮಧ್ಯೆ ಬದುಕಿನುದ್ದಕ್ಕೂ ಮನಸ್ಸಿನಾಳಕ್ಕೆ ಇಳಿದು ಹೋಗುವ ಸಂಬಂಧಗಳು ಬೆರಳಣಿಕೆಯಷ್ಟು ಮಾತ್ರ. ಕೆಲವು ಸಂಬಂಧಗಳಿಗೆ ಹೆಸರಿಟ್ಟರೆ ಅವು ಹಳಿಸಿ ಹೋಗುತ್ತವೆ. “ಇವನು ಗೆಳೆಯನಲ್ಲ. ಗೆಳತಿ ನಾನು ಮೊದಲೇ ಅಲ್ಲ. ತುಂಬಾ ಸನಿಹ ಬಂದಿಹನಲ್ಲ. ” ಎಂಬ ಸಾಲಿನ ಹಾಡಿನಂತೆ ಆ ಸಂಬಂಧಗಳಿರುತ್ತವೆ. ಇಲ್ಲಿ ಇನ್ನೊಂದು ಸಾಲನ್ನು ನೆನಪಿಸಿಕೊಳ್ಳಲೇ ಬೇಕು “ಬೇಡ ಗೆಳೆಯ ನಂಟಿಗೆ ಹೆಸರು ಯಾಕೆ ಸುಮ್ಮನೆ ” ಈ ಸಾಲಿನಂತೆಯೇ ಕಥಾನಾಯಕಿ ಹೋದವನ ವಿಳಾಸ ತಿಳಿಯಲು ಪ್ರಯತ್ನಿಸದೆ ಅದಕ್ಕೊಂದು ಪೂರ್ಣವಿರಾಮವಿಡುತ್ತಾಳೆ. ನಾನು ಬರೆದ ನೀರ್ದೋಸೆ ಚಿತ್ರ ಸಂಬಂಧಿ ಲೇಖನದಲ್ಲಿ ಒಂದು ಸಾಲು ತಿಳಿಸಿದ್ದೆ .ಸಂಶಯದ ಮನೆಯ ಗೃಹಿಣಿ ಹೊಸ ಸಂಬಂಧಗಳಿಗೆ ಬೇಗನೆ ಕೈಚಾಚುತಾತ್ತಾಳೆ ಅಂತ. ಹಾಗೆಯೇ ಅಸಂತೃಪ್ತ ಮನಸ್ಸು ತನ್ನಂತ ಇನ್ನೊಂದು ಅಸಂತೃಪ್ತ ಮನಸ್ಸಿನ ಜೊತೆಗೆ ಬಹಳ ಬೇಗನೆ ಬೆರೆತು ಹೋಗುತ್ತದೆ. ಅವರಿಬ್ಬರ ಸಂಬಂಧಕ್ಕೆ ನೋವು ಸಾಂತ್ವನಗಳು ಎಷ್ಟೊಂದು ಪುಷ್ಟಿ ಕೊಡುತ್ತಾ ಹೋಗುತ್ತೊ ಅಷ್ಟು ಆ ಸಂಬಂಧಗಳು ಬಲಿಷ್ಟಗೊಳ್ಳುತ್ತಾ ಹೋಗುತ್ತವೆ. ಆದರೆ ಮನುಷ್ಯ ಸಮಾಜಜೀವಿ ಸಮಾಜಕ್ಕೆ ಹೆದರಿ ಅವನ ಮನಸ್ಸಿನಲ್ಲೇ ಉಳಿದುಹೋದ ಇಂಥ ಸಂಬಂಧಗಳು ನೂರಾರು. ಆ ಅನಾಮಧೇಯ ಸಂಬಂಧಕ್ಕೆ ಸಲುಗೆ, ಸ್ನೇಹ, ಪ್ರೀತಿ, ಇನ್’ಪ್ಯಾಕ್ಚುವೇಶನ್, ಸೆಳೆತ, ಆಕರ್ಷಣೆ ಹೀಗೆ ಯಾವ ಹೆಸರು ಕೊಟ್ಟರೂ ಕಡಿಮೆಯೇ ಅದು ಸ್ಥಾಪಿತ ಸಮಾಜದಲ್ಲಿ ಅನೈತಿಕವೇ. ಅದರ ಗೋಜಿಗೆ ಯಾರೂ ಹೋಗೋದಿಲ್ಲ. ಬುತ್ತಿ ಡಬ್ಬಿಯಲ್ಲಿ ಇಂಥ ಭಾವಾಮೃತವನ್ನು ಕಟ್ಟಕೊಟ್ಟ ಚಿತ್ರತಂಡಕ್ಕೆ ಅಭಿನಂದನೆ. ಸಾಧ್ಯವಾದರೆ ಚಿತ್ರವನ್ನೊಮ್ಮೆ ನೋಡಿ.ಇರ್ಫಾನ್ ಖಾನ್ , ನಿಮೃತ್ ಕೌರ್ ಅವರ ಅಭಿನಯವನ್ನೊಮ್ಮೆ ಕಣ್ತುಂಬಿಸಿಕೊಳ್ಳಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..