3662

ಗುರುವಿನ ‘ಗುರುತ್ವ’ದ ಕಕ್ಷೆಯಲಿ ಚಲಿಸೋಣ

rahul
ರಾಹುಲ್ ಹಜಾರೆ
ಕಗ್ಗತ್ತಲ ಬಾನಂಗಳದಲ್ಲಿ ಹಾಲು ಬೆಳದಿಂಗಳು ಚೆಲ್ಲಿ ಚಂದಿರ ಬರುವ ಹುಣ್ಣಿಮೆಯ ದಿನವೇ ಬದುಕಿನ ಗಾಢಂಧಕಾರವನ್ನು ತೊಡೆಯುವ ಗುರುವನ್ನು ನೆನೆಯುವ ದಿನ ಬಂದದ್ದು ಸೃಷ್ಟಿಯ ಸ್ವಯಂಕೃತ ಕಾಕತಾಳೀಯವೇ ಸರಿ. ಚತುರ್ವೇದಗಳನ್ನು ರಚಿಸಿ ಮನುಕುಲದ ಅಜ್ಞಾನಕ್ಕೆ ಶಾಶ್ವತ ಜ್ಞಾನದೀಪ್ತಿಯನ್ನು ಹೊತ್ತಿಸಿಹೋದ ವ್ಯಾಸಮಹರ್ಷಿಗಳು ಹುಟ್ಟಿದ ದಿನ ಈ ಗುರುಪೂರ್ಣಿಮೆ.ಜಗ್ಗಿ ವಾಸುದೇವ್ ಗುರುಗಳು ಹೇಳುವಂತೆ ವ್ಯಾಸ ಮಹರ್ಷಿಗಳು ಜಗತ್ತಿನ ಮೂಲಗುರು ಮತ್ತು ಪ್ರಥಮ ಗುರು. ಅಂಥವರ ಜನ್ಮದಿನವನ್ನು ನಮ್ಮ ಬದುಕಿನಲ್ಲಿ ಬಂದುಹೋದ ಎಲ್ಲ ಶಿಕ್ಷಕರನ್ನು ನೆನೆಯುವುದು ಅರ್ಥಪೂರ್ಣ.
ಗುರು ಎಂಬುದು ಸಂಸ್ಕೃತ ಮೂಲದಿಂದ ಬಂದ ಪದ. ‘ಗು’ ಎಂದರೆ ಅಜ್ಞಾನ, ಮೌಢ್ಯ. ‘ರು’ ಎಂದರೆ ತೊಡೆದುಹಾಕುವುದು. ಒಟ್ಟರ್ಥದಲ್ಲಿ ಗುರು ಎಂದರೆ ಮೌಢ್ಯವನ್ನು ತೊಡೆದುಹಾಕಿ ಬದುಕಿಗೆ ಅರ್ಥ ನೀಡುವವನು. ಒಮ್ಮೆ ಸುಂದರವಾದ ಮೂರ್ತಿ ಕೆತ್ತಿದ ಶಿಲ್ಪಿಗೆ ಆ ಶಿಲ್ಪ ಹೇಗೆ ಸಾಧ್ಯವಾಯಿತು ಎಂದು ಕೇಳಿದಾಗ “ಪ್ರತಿಮೆ ಶಿಲೆಯಲ್ಲಿಯೇ ಇತ್ತು ಬೇಡದಿರುವ ಭಾಗಗಳನ್ನು ನಾನು ತೊಡೆದುಹಾಕಿದೆ” ಎಂದನಂತೆ. ಒಬ್ಬ ಸಾಮಾನ್ಯನ ಅಂತರಂಗದಲ್ಲಿ ಅವಿತಿರುವ ಮತ್ತು ಹಲವು ನೇತ್ಯಾತ್ಮಕ ವಿಚಾರಗಳ ಭಿತ್ತಿಗಳಿಂದ ಹಿಡಿದಿಡಲ್ಪಟ್ಟು ಚಲನಶೂನ್ಯವಾದ ಪ್ರತಿಭೆ ಎಂಬ ಪ್ರಚ್ಛನ್ನ ಶಕ್ತಿಗೆ ಚಾಲನೆಕೊಟ್ಟು ಅವರ ಬರಡು ಬದುಕಿಗೆ ಭೋರ್ಗರೆತ ಕೊಟ್ಟ ಗುರುಶ್ರೇಷ್ಟರ ಬಗ್ಗೆ ತಿಳಿಯೋಣ. ಅಂತೆಯೇ ಅವರ ಬೌದ್ಧಿಕ ಉಳಿಪೆಟ್ಟಿನಿಂದ ತಮ್ಮಲ್ಲಿ ಅಡಗಿಹೋದ ಅಮೂರ್ತಶಕ್ತಿಯನ್ನು ಹೊರಚೆಲ್ಲುತ್ತಾ ತಮಸ್ಸಿನ ಶಿಲೆಗಳನ್ನು ಸೀಳಿ ಹೊರಬಂದ ‘ನರ’ಮೂರ್ತಿಗಳು ಇತಿಹಾಸದುದ್ದಕ್ಕೂ ಪ್ರಭೆಯನ್ನು ಚೆಲ್ಲಿ ಮನುಕುಲಕ್ಕೆ ಮಾಡಿದ ಮಹದುಪಕಾರವನ್ನು ನೆನೆಯೋಣ.
ರಾಜವಂಶದಲ್ಲಿ ಹುಟ್ಟಿದರೂ ಕಾಲಚಕ್ರಕ್ಕೆ ಸಿಕ್ಕು ಬೇಡನ ಮನೆಯಲ್ಲಿ ಬೆಳೆಯುತ್ತಿದ್ದ ಹುಡುಗನ ರಕ್ತದಲ್ಲಿನ ಕ್ಷಾತ್ರಧರ್ಮವನ್ನು ಗುರುತಿಸಿ ಅವನನ್ನು ಚಕ್ರವರ್ತಿಯಾಗಿ ಮಾಡಿ ಇತಿಹಾಸವನ್ನು ಸೃಷ್ಟಿಸಿದ ಚಾಣಕ್ಯ ತನ್ನ ಸೇಡನ್ನು ಸಾಧನೆಯನ್ನಾಗಿ ಪರಿವರ್ತಿಸಿದ ಪರಿ ಶ್ರೇಷ್ಟ. ಒಮ್ಮೆ ಓರಗೆಯ ಹುಡುಗರೊಡನೆ ಆಟವಾಡುತ್ತಿದ್ದ ಚಂದ್ರಗುಪ್ತ ತಾನು ರಾಜನ ಪಾತ್ರಧಾರಿಯಾಗಿದ್ದ ಅವನು ಪಾತ್ರವನ್ನು ನಿರ್ವಹಿಸುವ ರೀತಿಯಿಂದಲೇ ಇವನು ರಾಜವಂಶದ ಹುಡುಗ ಗದ್ದುಗೆಯ ಮೇಲೆ ವಿಜೃಂಭಿಸಿ ಇತಿಹಾಸ ಬರೆಯಬೇಕಾದವನು ಎಂದು ತನ್ನ ಸಂವೇದನಾಶೀಲತೆಯಿಂದ ಗುರುತಿಸಿದವನು ಚಾಣಕ್ಯ. ನಂದ ಸಾಮ್ರಾಜ್ಯವನ್ನು ಮಟ್ಟಹಾಕಿದ್ದಲ್ಲದೇ ಭಾರತದ ಉತ್ತರಭಾಗವನ್ನು ಸಂಪೂರ್ಣವಾಗಿ ತನ್ನ ತೆಕ್ಕೆಗೆ ತೆಗೆದುಕೊಂಡ ಚಂದ್ರಗುಪ್ತನ ಹಿಂದೆ ಇದ್ದದ್ದು ಆಚಾರ್ಯಶ್ರೇಷ್ಟ ಚಾಣಕ್ಯ.
ಬದುಕಿದ್ದ ಮೂವತ್ತೊಂಬತ್ತೇ ವರ್ಷಗಳಲ್ಲಿ ಸಾಧನಾಪರ್ವತವನ್ನೇ ಕುಬ್ಜ ಮಾಡಿ ಅದರ ತುತ್ತತುದಿಯಲ್ಲಿ ಕೊಲ್ಮಂಚಿನಂತೆ ಮಿಂಚಿ ಮರೆಯಾದ ವಿವೇಕಾನಂದರ ಹಿಂದೆ ಅವರಿಗಿಂತ ಶ್ರೇಷ್ಟರಾದ ಗುರುವಿನ ಪ್ರಭಾವವಿತ್ತು. ಕೇಳಿದ್ದು ಕೆಲವೇ ಪ್ರಶ್ನೆಗಳು “ನೀವು ದೇವರನ್ನು ನೋಡಿದ್ದಿರೇ?” “ನೋಡಿದ್ದೇನೆ.” “ನನಗೂ ತೋರಿಸುತ್ತೀರಾ?” “ನೀನೂ ಕೂಡಾ ದೇವರನ್ನು ನೋಡಬಹುದು. ” ಗುರು-ಶಿಷ್ಯರ ಮಧ್ಯೆ ನಡೆದ ಇಷ್ಟೇ ಸಂಭಾಷಣೆಯ ತರುವಾಯ ಅವನಲ್ಲಿನ ವಯಸ್ಸಿಗೆ ಮೀರಿದ ಪ್ರಬುದ್ಧತೆಯನ್ನು ಗುರುತಿಸಿ ಅವನನ್ನು ಶಿಷ್ಯನನ್ನಾಗಿ ಸ್ವೀಕರಿಸಿದ್ದರು. ಮುಂದೆ ಆ ಮಹಾನ್ ಚೇತನ ಇಟ್ಟ ಹೆಜ್ಜೆಯಲ್ಲ ಶಾಶ್ವತ ಗುರುತುಳಿಸಿ ಹೋಯಿತು. ಹೇಳಿಹೋದ ಪ್ರತಿ ನುಡಿಗಳು ಯುಗಗಳೇ ಕಳೆದರೂ ಇಂದಿಗೂ ಪ್ರತಿಧ್ವನಿಸುತ್ತಿವೆ. ಅಮೇರಿಕಾದಂತಹ ರಾಷ್ಟ್ರವನ್ನು “ಅಮೇರಿಕಾದ ನನ್ನ ಸಹೋದರ ಸಹೋದರಿಯರೇ” ಎಂಬ ಕೆಲವೇ ಪದಪುಂಜಗಳಿಂದ ನತಮಸ್ತಕರಾಗಿಸಿದ್ದ ವಿವೇಕಾನಂದರ ಹಿಂದಿದ್ದದ್ದು ಶ್ರೀ ರಾಮಕೃಷ್ಣ ಪರಮಹಂಸರಂತ ಶ್ರೇಷ್ಟ ಗುರು.ಸಾಮಾನ್ಯ ನರೇಂದ್ರನನ್ನು ತಮ್ಮ ಬೌದ್ಧಿಕ ದ್ರವ್ಯದ ಧಾರೆಯೆರೆದು ವಿವೇಕಾನಂದರಾಗಿಸಿದ ಪರಮಹಂಸರ ಸಾಧನೆ ಇಡೀ ಭಾರತಕ್ಕೇ ಕೊಟ್ಟ ಒಂದು ಅಪ್ರತಿಮ ಕೊಡುಗೆಯೇ ಸರಿ.
ಭಾರತಕ್ಕೆ ಒಂದು ಐಸಿರಿಯ ಐತಿಹ್ಯ ಕೊಟ್ಟುಹೋದ ರಾಜಮನೆತನ ವಿಜಯನಗರ ಸಾಮ್ರಾಜ್ಯ . ವಿದ್ಯಾರಣ್ಯರ ಅನುಗ್ರಹ ಎಂತದ್ದಿತ್ತೆಂದರೆ ಮುತ್ತು ರತ್ನಗಳಿಗೂ ಸಾಮಾನ್ಯ ದ್ರವ್ಯಗಳಿಗೂ ವ್ಯತ್ಯಾಸವೇ ಇಲ್ಲದಂತೆ ಮಾರುಕಟ್ಟೆಯಲ್ಲಿ ಮಾರಿದ ಮಾಹಾಮನ್ವಂತರದ ದಿನಗಳು ವಿಜಯನಗರ ಸಾಮ್ರಾಜ್ಯ ಕಾಲದಲ್ಲಿ ಗತಿಸಿಹೋದವು. ಹಕ್ಕ-ಬುಕ್ಕರ ಮುಖೇನ ಇಂಥ ವೈಭವೋಪೇತ ಸಾಮ್ರಾಜ್ಯ ಇತಿಹಾಸದ ಪುಟಗಳಲ್ಲಿ ಗೌರವದಿಂದ ವಿಜೃಂಭಿಸುವಂತೆ ಮಾಡಿದ್ದು ವಿದ್ಯಾರಣ್ಯರು.ಗುರು ಎಂದರೆ ವ್ಯಕ್ತಿಯೇ ಆಗಬೇಕಿಲ್ಲ ಅದಕ್ಕೆ ಏಕಲವ್ಯ ದ್ರೋಣರ ಮೂರ್ತಿಯಲ್ಲಿಯೇ ಗುರುವನ್ನು ಕಂಡು ಅದರಿಂದಲೇ ಅವರ ಅಂತಃಶಕ್ತಿಯನ್ನು ಹೀರಿ ಶಿಷ್ಯೋತ್ತಮನಾದ.ಗುರು ಎಂದರೆ ಪಠ್ಯಕ್ಕೆ ಸೀಮಿತವಾದರೇ ಅವನ ಪ್ರಭಾವವೂ ಗುರುಕುಲಕ್ಕೇ ಸೀಮಿತವಾಗುತ್ತೆ. ಯಾವಾಗ ಗುರು ಸಮಾಜದ ಓರೆಕೋರೆಗಳನ್ನು ತಿದ್ದಲು ಶಿಷ್ಯರನ್ನು ತಯಾರು ಮಾಡುತ್ತಾನೋ ಆಗಲೇ ಅವನು ಗೌರವಕ್ಕೆ ಯೋಗ್ಯನಾಗುತ್ತಾನೆ.
ಲಿಂಗ ಮತ್ತು ಜಾತಿ ತಾರತಮ್ಯವಿದ್ದ ಕಾಲದಲ್ಲಿ ಅಸ್ಪೃಶ್ಯ ಮಹಿಳೆಯರಿಗಾಗಿ ಶಾಲೆಯನ್ನು ತೆರೆದು ತತ್ಕಾಲದ ಸಮಾಜಕ್ಕೆ ಸವಾಲೆಸೆದವಳು ಸಾವಿತ್ರಿಭಾಯಿ ಫುಲೆ. ಸದ್ಯದ ಉಲ್ಲೇಖಗಳ ಪ್ರಕಾರ ಆ ಶಾಲೆ ಮಹಿಳೆಯರಿಗಾಗಿ ತೆರೆಯಲ್ಪಟ್ಟ ಮೊದಲ ಶಾಲೆ. ಸಾವಿತ್ರಿಭಾಯಿ ಭಾರತದ ಪ್ರಥಮ ಶಿಕ್ಷಕಿ.
ಗುರುವಿನ ಪ್ರಭಾವ ಅದೇ ಕಾಲಕ್ಕೆ ಸೀಮಿತವಾಗದೇ ಚಿರಸ್ಥಾಯಿಯಾಗಿ ಉಳಿಯಬೇಕಾದರೆ ಅವನ ಸೇವೆ ಸಮಾಜಮುಖಿಯಾಗಬೇಕು. ಅದಕ್ಕೆಂದೆ ಚಾಣಕ್ಯ ಬರೀ ಚಂದ್ರಗುಪ್ತನಿಗೆ ಮಾತ್ರ ಗುರುವಾಗಲಿಲ್ಲ. ಅವನು ಬರೆದ ಅರ್ಥಶಾಸ್ತ್ರ, ಚಾಣಕ್ಯ ನೀತಿ ಎಂಬ ಗ್ರಂಥಗಳು ಇವತ್ತಿನ ರಾಜತಾಂತ್ರಿಕ ವ್ಯವಸ್ಥೆಗೂ ಅಪ್ರಸ್ತುತ ಅಂತ ಅನಿಸುವುದಿಲ್ಲ. ಅವನು ಹೇಳಿದ ಪ್ರತೀ ಮಾತುಗಳು ಇವತ್ತಿಗೂ ಅನುಸರಣೀಯ. ರಾಮಕೃಷ್ಣ ಪರಮಹಂಸ, ವಿವೇಕಾನಂದರು ಕಳೆದುಹೋದರು ರಾಮಕೃಷ್ಣ ಮಿಶನ್ ಇವತ್ತಿಗೂ ತನ್ನ ಸಾಮಾಜಿಕ ಕೈಂಕರ್ಯವನ್ನು ಬಿಟ್ಟಿಲ್ಲ. ಪುಟಪೋರ್ತಿ ಸಾಯಿಬಾಬಾರ ದೇಹತ್ಯಾಗದ ನಂತರವೂ ಜಗತ್ತಿನ ಏಕೈಕ ಕ್ಯಾಶ್ ಕೌಂಟರ್ ಇಲ್ಲದ ಆಸ್ಪತ್ರೆಯನ್ನು ನಡೆಸಿ ಅವರ ಸಾಮಾಜಿಕ ಕಾಳಜಿ ಮೂಲಕ ಅವರ ಉಪಸ್ಥಿತಿಯಲ್ಲೂ ಅವರಿಗೊಂದು ಅಸ್ತಿತ್ವವನ್ನು ಕಲ್ಪಿಸಿಕೊಟ್ಟಿದೆ. ಪುಲೆಯವರು ಅಂದು ತೆರೆದ ಶಾಲೆ ಈಗಿನ ಧನವಂತರಿಗೆ ಮಾತ್ರ ಪ್ರವೇಶ ಕಲ್ಪಿಸಿಕೊಡುವ ಸಂಸ್ಥೆಗಳಿಗೆ ಇವತ್ತಿಗೂ ಮಾದರಿ. “ಇತಿಹಾಸವನ್ನು ಓದದವ ಇತಿಹಾಸವನ್ನು ಸೃಷ್ಟಿಸಲಾರ” ಎಂಬ ಮಾತಿನಂತೆ ವಿದ್ಯಾರಣ್ಯರ ಮಾರ್ಗದರ್ಶನದಲ್ಲಿ ಕಟ್ಟಲ್ಪಟ್ಟ ಭವ್ಯ ಸಾಮ್ರಾಜ್ಯ ಕಾಲಾಂತರದಲ್ಲಿ ಸ್ವಯಂಕೃತ ಅಪರಾಧಗಳಿಂದ ಮಣ್ಣಾಗಿದ್ದರಿಂದ ನಾವು ಪಾಠ ಕಲಿತಿದ್ದೆ ಆದರೆ ನಮ್ಮ ಬದುಕು ವಿಜೃಂಭಿಸುವುದರಲ್ಲಿ ಸಂಶಯವಿಲ್ಲ. ಬದುಕಿಗೆ ಬದುಕೇ ಗುರು .ಅನುಭವಗಳೇ ಪಾಠಗಳು. ಸೋಲೇ ಬೆತ್ತದೇಟುಗಳು. ಬನ್ನಿ ತೃಣದಿಂದ ಪರ್ವತದವರೆಗೆ, ಅಕ್ಷರದಿಂದ ಮಹಾಕಾವ್ಯಗಳವರೆಗೆ, ಅಂಕಿಗಳಿಂದ ಸಂಖ್ಯಾಶಾಸ್ತ್ರದವರೆಗೆ, ಭೂಮಿಯಿಂದ ವ್ಯೋಮದವರೆಗೆ, ಅಜ್ಞಾನದಿಂದ ಆಧ್ಯಾತ್ಮದವರೆಗೆ ಒಂದೇ ಮಾತಿನಲ್ಲಿ ಹೇಳುವುದಾದರೆ ಶೂನ್ಯದಿಂದ ಶಿಖರದವರೆಗೆ ಪರಿಚಯಿಸಿ ‘ಬಡ’ತನದ ಬದುಕನ್ನು ‘ಅರ್ಥ’ಪೂರ್ಣ ಮಾಡಿದ ಎಲ್ಲ ಗುರುಗಳನ್ನೊಮ್ಮೆ ನಮಿಸೋಣ. ಅವರ ಗುರುತ್ವ ಕಕ್ಷೆಯಲ್ಲಿ ಸುತ್ತುತ್ತಾ ಬದುಕಿನ ಚಲನಶೀಲತೆಯನ್ನು ವೃದ್ಧಿಸಿಕೊಳ್ಳೋಣ.

ಗುರುಪೂರ್ಣಿಮೆಯ ಶುಭಾಷಯಗಳು.

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..