3478

ಹಗಲಿಗೆ ಹೆಗಲು ಇರುಳಿಗೆ ಮಡಿಲು …..

rahul
ಅಂಕಣ : ರಾಹುಲ್ ಹಜಾರೆ

ನಮ್ಮ ಮೂಲ ಒಂದೇ ಕರುಳು ಬಳ್ಳಿಯಲ್ಲದೇ ಇರಬಹುದು. ರಕ್ತ ಸಂಬಂಧಿಗಳು ನಾವಲ್ಲದೇ ಇರಬಹುದು. ಒಂದೇ ತಾಯಿಯ ಮಡಿಲಲ್ಲಿ ಮಲಗಿ ಲಾಲಿ ಕೇಳದಿರಬಹುದು. ಒಂದೇ ಗರ್ಭದಲ್ಲಿ ಜನಿಸಿದವರಲ್ಲದೇಯೂ ಇರಬಹುದು. ಆದರೂ ನಾವು ಅದ್ಹೇಗೆ ಒಂದೇ ಆಗಿಬಿಟ್ಟೆವೋ ದೇವರೇ ಬಲ್ಲ. ಜೀವಕ್ಕೆ ಜೀವ ಕೊಡುವಷ್ಟು ಬಲಿಷ್ಟ ಬಂಧ ನಮ್ಮನ್ನು ಬಂಧಿಸಿಬಿಟ್ಟಿತು. ಎಲ್ಲ ಸಂಬಂಧಗಳು ನಮ್ಮಿಂದ ಏನಾದರೊಂದು ಬಯಸುತ್ತವೆ. ಆದರೆ ನೀವಿರುವಂತೆಯೇ ನಿಮ್ಮನ್ನು ಒಪ್ಪಿಕೊಂಡು ಅಪ್ಪಿಕೊಳ್ಳುವ ಸಂಬಂಧವೇ ಸ್ನೇಹ. ಅಲ್ಲಿ ನಿಮ್ಮ ಯಾವುದೇ ದೌರ್ಬಲ್ಯ ಅಡ್ಡಬರುವುದಿಲ್ಲ. ನಿಮ್ಮ ಕುರೂಪ,ಬಡತನ,ದಡ್ಡತನ, ದೈಹಿಕ ದೌರ್ಬಲ್ಯಗಳ್ಯಾವವೂ ಇಲ್ಲ. ಅಲ್ಲಿರುವುದು ಸ್ನೇಹ ಮಾತ್ರ. ಪೌರಾಣಿಕ ಕಥೆಗಳಿಂದ ಇಲ್ಲಿಯವರೆಗೆ ಅಂಥ ಹಲವು ಸ್ನೇಹಸಂಬಂಧಗಳನ್ನು ಉದಾಹರಿಸಬಹುದು.

ರಾಜ್ಯಕ್ಕೆ ರಾಜ್ಯವೇ ಕರ್ಣನನ್ನು ಸೂತಪುತ್ರ ಎಂದು ತೆಗಳಿತು. ದ್ರೌಪದಿಯೂ ಕೂಡಾ ಅವನನ್ನು ಸ್ವಯಂವರದಲ್ಲಿ ತಿರಸ್ಕರಿಸಿದ್ದಳು.
ಆ ರಾಜ್ಯದ ರಾಜ ಅವನೆಡೆಗೆ ಸ್ನೇಹಹಸ್ತ ಚಾಚಿದ. ಅವನಿಗಾಗಿ ಒಂದು ಭಾಗವನ್ನು ಆಳ್ವಿಕೆಗೆ ಎತ್ತಿಟ್ಟು ತನ್ನ ಸರಿಸಮ ಎಂಬಂತೆ ನೋಡಿಕೊಂಡ. ಕರ್ಣ ದುರ್ಯೋಧನರ ಗೆಳೆತನ ಎಷ್ಟು ಗಟ್ಟಿಯಿತ್ತೆಂದರೆ ಅದಕ್ಕೊಂದು ಸಂದರ್ಭವನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಒಮ್ಮೆ ಕರ್ಣ ದುರ್ಯೋಧನನ ಪತ್ನಿ ಭಾನುಮತಿ ಇಬ್ಬರೂ ಅಂತಃಪುರದಲ್ಲಿ ಪಗಡೆ ಆಡುತ್ತಿರುತ್ತಾರೆ. ಆಟದಲ್ಲಿ ಸೋಲುವ ಹಂತದಲ್ಲಿ ಭಾನುಮತಿ ಇರುತ್ತಾಳೆ. ಅಷ್ಟರಲ್ಲಿ ದುರ್ಯೋಧನ ಬಂದಿದ್ದನ್ನು ಕಂಡು ಭಾನುಮತಿ ಎದ್ದು ನಿಲ್ಲುತ್ತಾಳೆ. ಬಾಗಿಲೆಡೆಗೆ ಬೆನ್ನು ಮಾಡಿ ಕೂತ ಕರ್ಣನಿಗೆ ಇದು ತಿಳಿಯದೇ ಸೋಲುವ ಕಾರಣಕ್ಕೆ ಹೊರಟಿದ್ದಾಳೆ ಎಂದು ತಿಳಿದು ಅವಳನ್ನು ಹಿಡಿಯಲು ಹೋಗುತ್ತಾನೆ. ಅವನ ಕೈ ಅವಳ ಕೊರಳಿನ ಮುತ್ತಿನ ಸರವನ್ನು ಹರಿಯುತ್ತದೆ. ಬಿದ್ದ ಮುತ್ತನ್ನು ಎತ್ತಲು ತಿರಗುವ ಕರ್ಣನಿಗೆ ದುರ್ಯೋಧನ ಕಂಡಾಗ ಸುಮ್ಮನಾಗುತ್ತಾನೆ. ದುರ್ಯೋಧನ “ಮುತ್ತು ಆರಿಸಿಕೊಡಲು ಸಹಾಯ ಮಾಡಲಾ” ಎಂದು ಕೇಳಿ ಬಿಳಿಹಾಳೆಯಂತ ನಿಷ್ಕಳಂಕ ಸ್ನೇಹಕ್ಕೆ ಸಂಶಯದ ಕಲೆಯು ತಾಕದಂತೆ ನೋಡಿಕೊಳ್ಳುತ್ತಾನೆ. ಕಾಮಾಂಧತೆಯಲ್ಲಿ ಸ್ನೇಹವನ್ನು ಬಲಿಕೊಟ್ಟ ಕಂಬಾರರ “ಸಂಗ್ಯಾಬಾಳ್ಯಾ” ಕಥೆಯನ್ನು ಇಲ್ಲಿ ಸಾಂದರ್ಭಿಕವಾಗಿ ಉದಾಹರಣೆಯಾಗಿ ತೆಗೆದುಕೊಳ್ಳಲೂಬಹುದು.
ಕರ್ಣನಿಗೆ ತನ್ನ ಜನ್ಮರಹಸ್ಯ ತಿಳಿದ ನಂತರ ತಾನು ತನ್ನ ಒಡಹುಟ್ಟಿದವರ ವಿರುದ್ಧ ಸೆಣಸುತ್ತಿದ್ದೇನೆ ಎಂದು ಅರಿವಿಗೆ ಬಂದರೂ ತನ್ನ ಹೃಣ್ಮನಗಳ ತುಂಬಾ ಸ್ನೇಹ ಒಂದೇ ತುಂಬಿಕೊಂಡಿದ್ದ.ಎಷ್ಟೋ ವಿಮರ್ಶಕರು ಹೇಳುವಂತೆ ಕರ್ಣನು ದುರ್ಯೋಧನನ ಪರವಾಗಿದ್ದದ್ದು ಸ್ವಾಮಿನಿಷ್ಠೆಗಾಗಿ ಅಂತ ಆದರೆ ಅವನು ಪಕ್ಷ ಬದಲಿಸಿ ಪಾಂಡವರ ಪರವಾಗಿ ಹೋಗಿದ್ದಿದ್ದರೆ ಅವರು ಅವನಿಗೆ ಹೆಚ್ಚಿನ ಅಧಿಕಾರ ಐಶ್ವರ್ಯ ಒದಗಿಸುತ್ತಿದ್ದರು. ಅವನ ಮನಸ್ಸಲ್ಲಿದ್ದದ್ದೂ ನಿಸ್ವಾರ್ಥ ಸ್ನೇಹ ಮಾತ್ರ. ಸಾಯುವ ತನಕ ಗೆಳೆಯನ ಜೊತೆಗೆ ಇದ್ದು ಅಮರ ಸ್ನೇಹಕಥೆಗೆ ಮಾದರಿಯಾದ.
ಮೃಷ್ಟಾನ್ನವನ್ನು ಮೂರು ಹೊತ್ತು ತಿನ್ನುತ್ತಿದ್ದ ಕೃಷ್ಣನಿಗೆ ಸುದಾಮನು ತಂದ ಅವಲಕ್ಕಿಯಲ್ಲಿ ಮೆಲ್ಲುತ್ತಿದ್ದಾಗ ಅವನ ರುಚಿಗೃಂಥಿಗಳು ಗ್ರಹಿಸಿದ್ದು ಅದರಲ್ಲಿನ ಸ್ನೇಹದ ಸವಿಯನ್ನು ಮಾತ್ರ.
ಎಂದೋ ಕೂಡಿ ಆಡಿದ ಗೆಳೆಯನನ್ನು ನಾವು ಕಾಲ ಬಂದಂತೆಲ್ಲ ಮರೆತು ಬಿಡುತ್ತೇವೆ.ನಮ್ಮ ಅಂತಸ್ತಿನ ಅಹಂಕಾರದಲ್ಲಿ ಸಮಾಧಿ ಮಾಡುತ್ತೇವೆ. ಗುರುಕುಲದಲ್ಲಿ ಒಂದಾಗಿ ಓದಿದ ಸ್ನೇಹಿತನನ್ನು ರಾಜನಾದರೂ ಮರೆಯದೇ ಇದ್ದವನು ಕೃಷ್ಣ. ತನ್ನ ಗೆಳೆಯನು ಆಳುವ ರಾಜ್ಯದಲ್ಲೇ ಕಡುಬಡತನದ ಬದುಕು ಸಾಗಿಸುತ್ತಿದ್ದವನು ಸುದಾಮ. ಹೆಂಡತಿಯ ಒತ್ತಾಯದ ಮೇಲೆ ಸಹಾಯವನ್ನು ಕೇಳಲು ಗೆಳೆಯನ ಅರಮನೆಗೆ ತೆರಳುತ್ತಾನೆ. ಬಹುದಿನದ ನಂತರ ಕಂಡ ಸುದಾಮನನ್ನು ಬಿಗಿಯಪ್ಪುಗೆಯಿಂದ ಸ್ವಾಗತಿಸಿ ತನ್ನ ವೈಭೋಗದ ಬದುಕಿನ ಪರಿಚಯಿಸುತ್ತಿರುವಾಗ, ಕೃಷ್ಣನ ವೈಭವದ ಮುಂದೆ ತಾನು ಅವನಿಗೆ ತಂದ ಅವಲಕ್ಕಿ ಎಷ್ಟರದ್ದು ಎಂದು ಮುಜುಗರದಿಂದ ತೋರದೆ ಗಂಟಿನಲ್ಲೇ ಇಟ್ಟುಕೊಂಡಿರುತ್ತಾನೆ. ಕೃಷ್ಣನ ದೃಷ್ಟಿ ಗಂಟಿನೆಡೆಗೆ ಹೋದಾಗ ಅದನ್ನು ಬಿಚ್ಚಿ ಅವಲಕ್ಕಿಯನ್ನು ಕಾಣುತ್ತಾನೆ. ಸೂಕ್ಷ್ಮಗ್ರಾಹಿಯಾದ ಕೃಷ್ಣನಿಗೆ ಅವಲಕ್ಕಿಯೊಂದೇ ಕಾಣುವುದಿಲ್ಲ ಅದರಲ್ಲಿ ಅವನ ಬಾಲ್ಯ ಕಾಣುತ್ತೆ.ಸದ್ಯದ ಸುಧಾಮನ ಪರಿಸ್ಥಿತಿ ಕಾಣುತ್ತೆ. ಇಂಥ ಪರಿಸ್ಥಿತಿಯಲ್ಲೂ ಗೆಳೆಯನಲ್ಲಿ ಹೋಗುವಾಗ ಖಾಲಿ ಕೈಲಿ ಹೋಗಬಾರದೆಂಬ ತನ್ನ ಬಡಗೆಳೆಯನ ಹೃದಯ ಶ್ರೀಮಂತಿಕೆ ಕಾಣುತ್ತೆ. ಇಷ್ಟನ್ನೆಲ್ಲಾ ಗುರುತಿಸಿ ಅವಲಕ್ಕಿಯನ್ನು ಸಂತೋಷದಿಂದ ಮೆಲ್ಲುತ್ತಿರುವಾಗ ಸುದಾಮನಿಗೆ ಈ ಭೇಟಿಯ ಹಿಂದಿನ ಸ್ವಾರ್ಥದ ಬಗ್ಗೆ ಅಸಹ್ಯವೆನಿಸಿ ಬಂದ ಕಾರಣವನ್ನು ಹೇಳದೇ ತೆರಳುತ್ತಾನೆ. ಮನೆ ಮುಟ್ಟುವಷ್ಟರಲ್ಲಿ ಆಶ್ಚರ್ಯ ಕಾದಿರುತ್ತೆ. ಅವನು ಬೇಡದಿದ್ದರೂ ಕೃಷ್ಣ ಅವನೆಡೆಗೆ ಸಹಾಯಹಸ್ತವನ್ನು ಚಾಚಿರುತ್ತಾನೆ. ಸುಧಾಮನ ಬಡತನದ ಬಾಳಿಗೆ ಕೃಷ್ಣ ಒಂದು ‘ಅರ್ಥ’ವನ್ನು ಕಲ್ಪಿಸಿಕೊಟ್ಟಿರುತ್ತಾನೆ.ಸ್ನೇಹ ಎಂದರೆ ಎಲ್ಲವನ್ನೂ ಹಂಚಿಕೊಳ್ಳುವುದು ಎಂದೇ ಅರ್ಥ. ಕಷ್ಟಸುಖಗಳನ್ನು ಸರಿಸಮಾನವಾಗಿ ಎದುರಿಸುತ್ತಾ ಹೋಗೊದು ಅದಕ್ಕೆ ಕೃಷ್ಣ ಸುದಾಮರ ಕಥೆಗಿಂತ ದೊಡ್ಡ ಉದಾಹರಣೆ ಬೇಕಿಲ್ಲ.
ವಾಲಿಯಿಂದ ತನ್ನ ಸಾಮ್ರಾಜ್ಯವನ್ನೆಲ್ಲ ಕಳೆದುಕೊಂಡಿದ್ದ ಸುಗ್ರೀವನಿಗೆ ರಾಮ ಲಕ್ಷ್ಮಣರು ಆಕಸ್ಮಿಕವಾಗಿ ಜೊತೆಯಾಗುತ್ತಾರೆ. ವಾಲಿಯನ್ನು ಸದೆಬಡಿದು ರಾಜ್ಯದ ಕಿರೀಟವನ್ನು ಸುಗ್ರೀವನಿಗಿಟ್ಟು ಸೀತೆಯನ್ನು ಹುಡುಕುವ ಭಾರವನ್ನು ತಲೆಯ ಮೇಲೆ ಇಡುತ್ತಾನೆ. ತನಗೆ ಪರಿಚಿತ ಕಾಡಿನಲ್ಲಿ ಸೀತಾಶೋಧನೆ ಸುಗ್ರೀವನಿಗೆ ಅಷ್ಟೊಂದು ಕಷ್ಟವೆನಿಸುವುದಿಲ್ಲ. ರಾಮನೊಂದಿಗೆ ಜಾನಕಿಯನ್ನು ಒಂದು ಮಾಡುವ ತನಕ ಅವರೊಂದಿಗೆ ಸುಗ್ರೀವನಿರುತ್ತಾನೆ.

ದುರ್ಯೋಧನ, ಕರ್ಣರ ಮಧ್ಯ ಜಾತಿ ಅಡ್ಡ ಬರಲಿಲ್ಲ. ಶ್ರೀಕೃಷ್ಣ ಸುಧಾಮರ ಮಧ್ಯೆ ಅಂತಸ್ತು ಅಡ್ಡಬರಲಿಲ್ಲ. ರಾಜನಾದ ರಾಮ ರಾಜ್ಯವನ್ನು ಕಳೆದುಕೊಂಡ ಸುಗ್ರೀವನೊಂದಿಗೆ ಸ್ನೇಹ ಬೆಳೆಸಿಕೊಂಡ. ಹೌದು ಸ್ನೇಹ ಬಿಟ್ಟುಹೋಗುವುದಿಲ್ಲ. ಪರಿಸ್ಥಿತಿ ಒತ್ತಡದಿಂದ ಬಿಟ್ಟು ಹೋದರು ನಿಮ್ಮಲ್ಲಿ ಏನಾದರೂ ಉಳಿಸಿಹೋಗುತ್ತದೆ. ಕೆಟ್ಟವರ ಸ್ನೇಹವೆಂದರೆ ಇದ್ದಿಲನ್ನು ಕೈಯಲ್ಲಿ ಹಿಡಿದ ಹಾಗೆ ನೀವು ಬಿಸ್ಹಾಕಿದ ಮೇಲು ನಿಮ್ಮ ಕೈಯಲ್ಲಿ ಕಲೆಯನ್ನು ಉಳಿಸಿಹೋಗಿರುತ್ತದೆ. ಯಾರೋ ಇಂಗ್ಲಿಷ್ ಸಾಹಿತಿ ಹೇಳುವ ಹಾಗೆ “ನಿನ್ನ ಸ್ನೇಹಿತರು ಯಾರು ಎಂದು ಹೇಳು ನೀನು ಏನು ಎಂದು ಹೇಳುತ್ತೇನೆ. ” ಸಜ್ಜನರ ಸಂಘವನ್ನು ಮಾಡೋಣ ಹೆಜ್ಜೇನನ್ನು ಸವಿಯೋಣ. ಗೆಳೆಯರ ಕಷ್ಟಕಾರ್ಪಣ್ಯಗಳಿಗೆ ಹೆಗಲಿಗೆ ಹೆಗಲು ಕೊಡೋಣ. ಒಬ್ಬ ನಿರುಪದ್ರವಿ ಸ್ನೇಹಿತರಾಗಿ ನಿರ್ಮಲ ಸ್ನೇಹವನ್ನು ಉಸಿರಿರುವವರೆಗೆ ಸಲುಹೋಣ. ಕಲ್ಯಾಣರ ಹಾಡಿನಂತೆ ಹಗಲಿಗೆ ಹೆಗಲನ್ನು ಇರುಳಿಗೆ ಮಡಿಲನ್ನು ಸ್ನೇಹಿತನಿಗೆ ಕೊಡೋಣ.
ಸ್ನೇಹಿತರ ದಿನಾಚರಣೆಯ ಶುಭಾಷಯಗಳು……

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..