1922

ಇಂದಿರದ ಬಾಂಧವ್ಯ..

ಅಂದು ನವರಾತ್ರಿ. ಬದುಕಿನ ಜಂಜಾಟಗಳಲ್ಲಿ ಸಿಕ್ಕಿ ಸುಕ್ಕಾಗಿದ್ದ ದೇಹ, ಹಬ್ಬಕ್ಕೆ ತನ್ನ ಗಂಡನ ಮನಗೆ ಬಂದಿದೆ. ಸರಿ ಸುಮಾರು ಎಪ್ಪತ್ತು ವರ್ಷಗಳ ದೀರ್ಘ ಸಂಸಾರದ ಭಾರ ಹೊತ್ತ ದೇಹ, “ದೇವರೇ ಎಲ್ಲವೂ” ಎಂದುಕೊಂಡು ಬದುಕಿದ್ದಕ್ಕೋ ಏನೊ, ಇನ್ನೂ ಹತಾಷೆ ಇಲ್ಲದೆ, ಪಶ್ಚಾತಾಪದ ಪರಿವಿಲ್ಲದೆ, ಬದುಕನ್ನು ಪರರ ಒಳಿತಿಗೆ ಸವೆಯುತ್ತಿದೆ. ಜಲಜ ಅವಳ ಹೆಸರು. ಪತಿಯ ಮರಣ ನಂತರ ಮೌನಕ್ಕೆ ಸಮಯ ಸಿಗದಷ್ಟು ಬಾಧ್ಯತೆಯ ನೊಗ ಹೊತ್ತವಳವಳು. ಈಗ ವಯಸ್ಸು, ವಯಸ್ಸಿಗಂಟಿಕೊಳ್ಳುವ ಜಾಡ್ಯ ಅವಳನ್ನು ತುಸು ಮಂಕು ಮಾಡಿದೆ. ಇಚ್ಛಾ ಶಕ್ತಿ ಇದ್ದರೂ, ದೇಹ ಪ್ರತಿರೋದಿಸುತ್ತಿದೆ. ಕೈಯಲ್ಲಿರುವ ಕೋಲು ದೇಹದ ಬಾಗವಾಗಿಯೇ ವಿಜ್ರಂಬಿಸುತ್ತಿದೆ. ಅದಿಲ್ಲದೇ ಅಡಿಯಿಲ್ಲ.ಪ್ರತಿ ವರ್ಷ, ಅದೇನೇ ಸ್ಥಿತಿ ಇರಲಿ, ಕಷ್ಟವಿರಲಿ ನವರಾತ್ರಿ ಪೂಜೆಗೆ ದೂರದ ತನ್ನ ಮನೆಯಿಂದ, ಗಂಡನ ಮನೆಯಲ್ಲಿ ಉಪಸ್ಥಿತಿ ಇರುವುದು ವಾಡಿಕೆ. ಬರಿ ವಾಡಿಕೆಗಷ್ಟೇ ಬರುವುದಲ್ಲ. ಹಬ್ಬದ ಜೊತೆ ಹಬ್ಬಿ ಹೋಗಿರುವ ಅಗಾಧ ನಿನ್ನೆಗಳ ಜೊತೆ ನಲಿವ, ನಗುವ ಆಳುವ ಹಂಬಲ. ಗಂಡನನ್ನು ಕಳೆದುಕೊಂಡರೂ, ಮಕ್ಕಳು-ಮೊಮ್ಮಕ್ಕಳ ನಗುವಿನ ನಾಳೆಗಳನ್ನು ನೋಡುತ್ತಾ, ಜೀವ ಸವೆಯುತ್ತಿದ್ದಾಳೆ.
‘ಗುಲಾಬಿ’, ಅವಳದೇ ವಯೋಮಾನದ ಇನ್ನೊಬ್ಬ ದಿಟ್ಟ ಹೆಣ್ಣು. ಇಬ್ಬರೂ ಗೆಳತಿಯರು. ಗೆಳತಿಯರನ್ನುವುದಕ್ಕಿಂತ ಒಡಹುಟ್ಟಿದವರಂತೆ ಬದುಕಿದವರು. ಸ್ಥಿತಿ-ಗತಿಗಳ ಹೊಂದಾಣಿಕೆಯಲ್ಲಿ ಇಬ್ಬರೂ ಕಾಲಚಕ್ರದ ಎರಡು ತುದಿಗಳಲ್ಲಿ ಬಂದಿಯಾದವರು. ಗುಲಾಬಿಯದ್ದು ಅದೇ ಸ್ಥಿತಿ. ಗಂಡನನ್ನ ಕಳೆದುಕೊಂಡು, ಬದುಕಿನ ಜಂಜಾಟಕ್ಕೆ ಸಿಕ್ಕಿ ನೋವ ನಲಿಯುವ ಜೀವ. ಇಬ್ಬರೂ ಸಂದಿಸುವುದು ಹಬ್ಬದ ಸಮಯಗಳಲ್ಲೇ. ಜಲಜ ಹಬ್ಬಕ್ಕೆಂದು ಬಂದ ಗಂಡನ ಮನೆ, ಗುಲಾಬಿಯ ಮನೆಯಿಂದ ಬಹಳ ದೂರ ಇಲ್ಲದಿದ್ದರೂ, ಹೋಗುವ ದಾರಿ ಸುಗಮವಿಲ್ಲ. ವಯಸ್ಸು ಇನ್ನಷ್ಟು ಕ್ಲಿಷ್ಟ ಗೊಳಿಸುತ್ತದೆ. ಆದರೂ ತನ್ನ ಗೆಳತಿಯನ್ನು ಬೇಟಿ ಮಾಡದೇ ಹೋಗುವುದು ಜಲಜಳಿಗೆ ಅಸಾದ್ಯದ ಮಾತು. ಪ್ರತಿ ಬಾರಿಯೂ ಊರಿಗೆ ಬಂದಾಗ, ಗುಲಾಬಿಯ ಮನೆಗೆ ಹೋಗದಿದ್ದರೆ ಅದೇನೋ ಕಳೆದುಕೊಂಡ ಪರಿ. ಈ ಬಾರಿ ಜಲಜಾಳ ದೇಹಸ್ಥಿತಿ ಇನ್ನೂ ಹದಗೆಟ್ಟಿದೆ. ಕೈಯಲ್ಲಿನ ಕೋಲು ಕೂಡ ಅಷ್ಟು ದೂರ ಸಾಗಲು ‘ವಲ್ಲೆ..’ ಎನ್ನುವಂತಿದೆ. ಆದರೂ ಬಿಡದ ಪ್ರೀತಿ, ಸೆಳೆತ. ಚಪಲವೂ ಅನ್ನಬಹುದು. ನಶ್ಯಕ್ಕೆ ಉದ್ದವಾಗುವ ಮೂಗಿನ ಹಾಗೆ. ತನ್ನ ಮೊಮ್ಮಗಳನ್ನ ಪುಸಲಾಯಿಸಿ, ಒಂದು ಕೈಯಲ್ಲಿ ಕೋಲು, ಇನ್ನೊಂದು ಕೈಯನ್ನು ಮೊಮ್ಮಗಳ ಭುಜದ ಮೇಲಿರಿಸಿ, ಬಾರವಾದ ಹೆಜ್ಜೆ ಹಾಕುತ್ತಾ, ಪುಟಿವ ಮನಸ್ಸನ್ನು ತಣಿಸಲು, ಗೆಳತಿಯ ಮನೆಯ ಕಡೆ ಹೊರಟಿದ್ದಾಳೆ. ಮುಳ್ಳು-ಕಲ್ಲು, ತಗ್ಗು-ಗುಂಡಿಗಳ ಜಾಗ. ಸಾಮಾನ್ಯರಿಗೇ ನಡೆದಾಡುವುದು ಕಷ್ಟ, ಮಳೆ ಬಂದು, ಎಲ್ಲವೂ ಜಾರು ಬಂಡಿಯಂತಾಗಿವೆ. ಹೇಗೋ, ಗದ್ದೆಯ ಅಂಚುಗಳನ್ನು ದಾಟಿ, ನಾಲೆ-ದಿಬ್ಬಗಳನ್ನು ಹಿಂದಿಕ್ಕಿ ಗುಲಾಬಿಯ ಮನೆ ತಲುಪಿದ್ದಾಳೆ. ಅಂತಃಶಕ್ತಿಯಿಂದಷ್ಟೆ ಇದು ಸುಲಭ ಸಾದ್ಯ.
ಗುಲಾಬಿಯ ಮನೆಯಲ್ಲೂ ಹಬ್ಬದ ಗೌಜು. ನೆಂಟರು, ಮಕ್ಕಳು ಮೊಮ್ಮಕ್ಕಳ ಡೌಲು. ಆಗೆಲ್ಲ ಮಕ್ಕಳು, ಮೊಮ್ಮಕ್ಕಳು ಊರಲ್ಲೇ ಇರುತ್ತಿದ್ದರು. ಮನೆ ತುಂಬಿ ತುಳುಕುತ್ತಿತ್ತು. ಒಪ್ಪತ್ತಿನ ಊಟಕ್ಕೆ ಕಷ್ಟವಿದ್ದರೂ. ಈಗ ಎಲ್ಲರೂ ಒಟ್ಟಿಗೆ ಸೇರುವುದು ರೂಡಿಯಲ್ಲಿಲ್ಲದ ಕಾರ್ಯ. ಎಲ್ಲರನ್ನೂ ನೋಡಲು ಹಬ್ಬಕ್ಕೆ ಕಾಯಬೇಕು. ಜಲಜಕ್ಕನಿಗೆ ಗುಲಾಬಿಯ ಮನೆಗೆ ಬಂದು ತಲುಪಿದ್ದೆ ದೊಡ್ಡ ಸಾಹಸ. ಇನ್ನೂ ಗುಲಾಬಿಯ ದರ್ಶನವಾದರೆ ಸಾರ್ಥಕತೆ.ಜನ ಜಂಗುಳಿಯಲ್ಲಿ ಗುಲಾಬಿಯ ಮೊಗ ಹುಡುಕುತ್ತಿದ್ದಾಳೆ. ಮಬ್ಬು ಕಣ್ಣಿನ ದೃಷ್ಟಿ ಎಲ್ಲಿಯವರೆಗೆ ಮೀಟೀತು. ಗುಲಾಬಿಯ ಮನೆಯವರು ಜಲಜಳನ್ನು ಕುರ್ಚಿಯ ಮೇಲೆ ಕುಳ್ಳಿರಿಸಿ, ಜಲಜಳನ್ನು ಮಾತನಾಡಿಸುತ್ತಿದ್ದಾರೆ. ಜಲಜ ಮಾತ್ರ ಗುಲಾಬಿಗಾಗಿಯೇ ಕಾಯುತ್ತಿದ್ದಾಳೆ. “ಜಲಜ..” ಎನ್ನುವ ಶಬ್ದವೊಂದು ಹಾಗೆ ಜಲಜಾಳ ಕಿವಿಯ ಪರದೆಯ ಮೇಲೆ ಬೀಳುತ್ತಲೆ, ಕಣ್ಣು ತೇವವಾಯ್ತು. ಗಂಟಲು ಬಾರವಾಯ್ತು. ಕುರ್ಚಿಯಿಂದೆದ್ದ ಜಲಜ, ಗುಲಾಬಿಯನ್ನೊಮ್ಮೆ ಬಾಚಿ ತಬ್ಬಿಕೊಂಡಳು. ಮಾತಿಲ್ಲ. ಕಣ್ಣೀರ ಭಾಷೆಯಷ್ಟೆ. ಆ ತಬ್ಬುಗೆ ಪ್ರೀತಿಯ ನಿಜ ರೂಪದ ದ್ಯೋತಕ. ಅದು ಹೇಗೆ ಯಾವುದೇ ಸಹಾಯವಿಲ್ಲದೇ, ಕುರ್ಚಿಯಿಂದೆದ್ದು ತಬ್ಬಿಕೊಂಡಳೋ ಏನೊ, ಈಗ ನಿಲ್ಲಲಾಗುತ್ತಿಲ್ಲ. ಇಬ್ಬರಿಗೂ. ಮತ್ತೆ ಕೂತು ಸಂಬಾಳಿಸಿಕೊಂಡರು. ಒಂದರೇ ಕ್ಷಣ ಎಲ್ಲರೂ ಮೌನವಾಗಿ ಇವರನ್ನೇ ಎವೆಯಿಕ್ಕದೆ ನೋಡುತ್ತಿದ್ದರು. ಆ ನಿಷ್ಕಲ್ಮಷ ಪ್ರೀತಿ, ಆಸರೆ, ಬಾಂಧವ್ಯ ಈಗಿನವರ ತುತ್ತಲ್ಲವೇನೋ ಅನ್ನುವ ಹಾಗಿತ್ತು.
ಬಹುಶ ಬಡತನದ ಘಮ ಗೊತ್ತಿರುವವರಿಗಷ್ಟೇ ಪ್ರೀತಿಯ ಗಾಢತೆಯ ಅರಿವಾಗುವುದು. ಇಬ್ಬರು ಒಟ್ಟಿಗೆ, ತುತ್ತಿಗೂ ಪರದಾಡಿದವರು, ಗಂಡನನ್ನು ಕಳೆದುಕೊಂಡು ಮಕ್ಕಳ ಏಳ್ಗೆಗೆ ಶ್ರಮಿಸಿದವರು. ಪ್ರತಿ ದಿನದ ಮಾತು ಕತೆ ಇಲ್ಲ. ವರ್ಷಕ್ಕೊಮ್ಮೆಯೋ, ಮದುವೆಗೋ-ಸಮಾರಾಧನೆಗೊ ಸಿಗುವವರು. ದೂರ, ಪ್ರೀತಿಯನ್ನ ಇನ್ನಷ್ಟು ಗಟ್ಟಿ ಗೊಳಿಸಿದೆ. ಇದು ಕೇವಲ ಗುಲಾಬಿ-ಜಲಜಳ ಕಥೆ ಅಲ್ಲ. ನಮ್ಮ-ನಿಮ್ಮ ದೊಡ್ಡವರ ಕಥೆ. ನೋಡುವ, ಅರಿಯುವ ಸಮಯ, ಮನಸ್ಸು ಎರಡು ನಮಗಿಲ್ಲವಷ್ಟೆ. ಅವರೂ ನಮ್ಮವರೇ, ನಾವೂ ಅವರ ಬಿಳಲುಗಳಿಂದ ಬೆಳೆದವರು. ಆದರೆ ಅದೆಷ್ಟೂ ಭಿನ್ನತೆ. ಇಂದು ಪ್ರೀತಿಯ ವ್ಯಾಖ್ಯಾನವನ್ನೇ ತಿದ್ದಿ ತೀಡಿದ್ದೇವೆ. ನಮ್ಮವರಿಂದ ನಾವು ಗಳಿಸುವುದೇನು, ಉಳಿಸುವುದೇನು ನಮ್ಮನ್ನೆ ಕೇಳಬೇಕಿದೆ. ಹಬ್ಬವೆಂದರೆ ಬರಿ ರಜೆಯ ನಿದ್ರೆಯಾಗದೇ, ಮನಸ್ಸುಗಳ ಜೋಡಣೆಯಾದರೆ ಮುಂದಿನ ಪೀಳಿಗೆಗೂ ಪ್ರೀತಿ-ವಿಶ್ವಾಸದ ಘಮಲು ಉಳಿಯಬಹುದೇನೋ…

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..