2675

ನೈತಿಕ ಚೌಕಟ್ಟಿನ ಮಧ್ಯೆ ಸತ್ತು ಹೋಗುವ ಮನದಾಸೆ

ಕ್ಷಮೆ ಎಂಬ ಕಾದಂಬರಿಯ ಕುರಿತು ಹಲವು ಪತ್ರಿಕೆಗಳಲ್ಲಿ ಅಭಿಪ್ರಾಯ ನೋಡಿದ್ದೆ. ಅದೆಲ್ಲವೂ ಕೃತಿಯ ಮೊದಲ ಪುಟಗಳಲ್ಲಿ ಬರೆದ ಮೊದಲ ಮಾತು ಎಂಬ ಕೃತಿಯ ಬಗೆಗಿನ ಪರಚಯ ಬರಹದಿಂದ ಎತ್ತಿಕೊಂಡಂತಿದ್ದವು. ವಿಶ್ವವಾಣಿಯ ಬರಹಗಾರರಾದ ಶ್ರೀವತ್ಸ ಜೋಶಿಯವರು ತಮ್ಮ ಒಂದು ಲೇಖನದಲ್ಲಿ ಮತ್ತು ಫೇಸ್ಬುಕ್ಕಿನ ಒಂದು ಪೊಸ್ಟಿನಲ್ಲಿ ಕೃತಿಯಲ್ಲಿನ ಭಾಷಾಪ್ರೌಢಿಮೆಯ ಬಗ್ಗೆ ಹೇಳಿದ್ದರು. ಇವೆಲ್ಲವೂ ಆ ಕೃತಿಯನ್ನು ಓದಬೇಕೆಂಬ ಹಂಬಲ ಹುಟ್ಟಿಸಿದರೆ ವಿಶ್ವವಾಣಿಯಲ್ಲಿ ಪ್ರಕಟವಾದ ಕಾದಂಬರಿಯ ಆಯ್ದ ಭಾಗ ಆ ಹಂಬಲವನ್ನು ಇಮ್ಮಡಿಗೊಳಿಸಿತು. ಇಲ್ಲಿ ನಾನು ಹೇಳಹೊರಟಿರುವುದು ಓದುಗನಾಗಿ ನನ್ನ ಅನಿಸಿಕೆಯೇ ಹೊರತು ವಿಮರ್ಶೆಯಲ್ಲ.
ಕಥಾನಾಯಕಿಯ ಬದುಕಿನಲ್ಲಿ ಬಾಲ್ಯದಲ್ಲೇ ಒಂದು ಆಘಾತಕಾರಿ ಘಟನೆಯಾಗುತ್ತದೆ. ತಂದೆಯ ವಿವಾಹೇತರ ಸಂಬಂಧದಿಂದ ತಾಯಿ ದುಃಖಿತಳಾಗಿ ಮಡಿಯುತ್ತಾಳೆ. ತಾಯಿ ಸಾವಿನ ಹಿಂದಿನ ಕಾರಣ ಮುಗ್ಧ ಮನಸ್ಸಿನ ಅರಿವಿನ ಪರಿಧಿಗೆ ಬರದೆ ಕಥಾನಾಯಕಿ
ಗೊಂದಲದಲ್ಲೇ ಬಾಲ್ಯವನ್ನು ಕಳೆದುಬಿಡುತ್ತಾಳೆ. ಇವಳಿಗಿಂತ ಸ್ವಲ್ಪ ದೊಡ್ಡವನಾದ ಅಣ್ಣ ತಿಳುವಳಿಕೆ ಇದ್ದರೂ ಅಪ್ರಬುದ್ಧ ಮತ್ತು ವಯೋಸಹಜವಾದ ಹಠದಿಂದ ಅಪ್ಪನನ್ನು ದೂರವಿಡುತ್ತಾನೆ. ತಂಗಿಗೂ ಅವನಿಂದ ದೂರವಿರಲು ಹೇಳುತ್ತಾನೆ. ತಂದೆಯ ಪಾಪಪ್ರಜ್ಞೆ, ಅಣ್ಣನ ಹಠದ ಮಧ್ಯೆ ಬಾಲಕಿಗೆ ಯಾವುದು ಸರಿ? ಯಾವುದು ತಪ್ಪು? ಎಂಬ ಯಕ್ಷಪ್ರಶ್ನೆ ಹುಟ್ಟುತ್ತದೆ. ಇಂಥ ಒಂದು ನಿರ್ವಾತದಲ್ಲಿ ನಗುವನ್ನು ಸಂಪ್ರೋಕ್ಷಿಸುತ್ತಾ ಚೇತನ್ ಬರುತ್ತಾನೆ. ಮುಂದೆ ಭಾವಶುಷ್ಕ ಜೀವಿಯಾದ ಅವಳ ಗಂಡನಿಂದಾದ ಅಂಥ ಒಂದು ಪ್ರೇಮ ನಿರ್ವಾತವನ್ನು ತುಂಬಲು ಅದೇ ಹುಡುಗ ಜೊತೆಯಾಗುತ್ತಾನೆ. ಸ್ವಾತಂತ್ರ್ಯ ಸ್ವೇಚ್ಛೆಯ ನಡುವಿನ ಕಾದಾಟವಾಗಿ ಮೇಲ್ನೋಟಕ್ಕೆ ಕಂಡರು. ಅಲ್ಲಿ ಕಥಾನಾಯಕಿಯ ನಿರ್ಧಾರಗಳ ಚಂಚಲತೆ ಎದ್ದು ಕಾಣುತ್ತದೆ. ಬಾಲ್ಯದಲ್ಲಿ ತಂದೆಯ ಪ್ರೀತಿ ಬೇಕೋಬೇಡವೋ ಎಂಬ ಗೊಂದಲ ಕಥೆಯ ಕೊನೆಯವರೆಗೂ ಯಾವುದೋ ಸಂಬಂಧದ ಸ್ವೀಕಾರ ತಿರಸ್ಕಾರಗಳ ಮಧ್ಯೆ ಒಂದು ದೃಢ ನಿರ್ಧಾರ ತೆಗೆದುಕೊಳ್ಳಲು ಕಥಾನಾಯಕಿಗೆ ಕಷ್ಟಸಾಧ್ಯವಾಗುತ್ತದೆ. ಅಂಥ ಗೊಂದಲಗಳ ಮಧ್ಯೆ ಮನಸಿನಲ್ಲಾಗುವ ಪ್ರತಿಕ್ಷಣದ ಭಾವಪಲ್ಲಟವನ್ನು ಕಟ್ಟಿಕೊಡುವಲ್ಲಿ ಲೇಖಕಿ ಶ್ರೀಮತಿ ಸಹನಾ ವಿಜಯಕುಮಾರ್ ಅವರು ಗೆದ್ದಿದ್ದಾರೆ. ಚಿಕ್ಕ ವಯಸ್ಸಿನ ಅಪ್ರಬುದ್ಧ ಮತ್ತು ಪ್ರೌಢ ವಯಸ್ಸಿನ ಪ್ರಬುದ್ಧ ಭಾವಗಳೆರಡನ್ನು ಸಾಂದರ್ಭಿಕ ಭಾಷೆಯನ್ನು ಬಳಸಿ ಹೇಳಿರುವ ರೀತಿ ಗಮನಾರ್ಹ. ಕಿಶೋರ ವಲಯದಲ್ಲಿ ಒಂದು ಹುಡುಗ ಹುಡುಗಿಯ ಮಧ್ಯದ ವಯೋಸಹಜವಾದ ಆಕರ್ಷಣೆಯಲ್ಲೂ ಎಲ್ಲೋ ಒಂದು ಪಕ್ವ ಪ್ರೇಮದ ಎಳೆ ಇರುತ್ತದೆ. ಆದರೆ ಅದಕ್ಕೆ ಪರಿಸ್ಥಿತಿ ಪರಿಸರ ಸಹಕರಿಸಬೇಕಷ್ಟೆ. ಎಷ್ಟೋ ಸಲ ನಮಗಿರುವ ಆಸೆಗಳು ಕೌಟುಂಬಿಕ ಸಂದಿಗ್ಧಗಳು ಸಮಾಜದ ಸ್ಥಾಪಿತ ನೈತಿಕತೆಯ ಮಧ್ಯೆ ಸತ್ತು ಹೋಗುತ್ತವೆ. ಬದುಕು ಮುಂದೊಮ್ಮೆ ನಮ್ಮ ಮುಂದೆ ಅಂಥ ಆಸೆಗಳ ಈಡೇರಿಕೆಗೆ ಅವಕಾಶಗಳನ್ನು ಎಸೆಯುತ್ತದೆ ಆದರೆ ಕಾಲ ಮಿಂಚಿ ಹೋಗಿರುತ್ತದೆ. ಆಸೆಪಟ್ಟದ್ದನ್ನೆಲ್ಲಾ ಕಳೆದುಕೊಳ್ಳುತ್ತಾ ಮನಸ್ಸು ಅಲ್ಪತೃಪ್ತಿಗೆ ಒಗ್ಗಿಹೋಗಿರುತ್ತದೆ. ಅದೇ “ಕ್ಷಮೆ”ಯ ಕಥಾಹಂದರ. ಕಥಾನಾಯಕಿಗೂ ಮತ್ತೊಮ್ಮೆ ಕಥಾನಾಯಕನನ್ನೂ ಪಡೆಯುವ ಅವಕಾಶ ಲಭಿಸಿದಾಗ ನಾಯಕಿ ಆಯ್ಕೆ ಏನು? ಎಂಬುದರಲ್ಲೇ ಕಥೆಯ ಸಾರಾಂಶ ಅಡಗಿದೆ. ಪಲ್ಲವಿ ಎಂಬ ಕಥೆಯ ಮುಖ್ಯಭೂಮಿಕೆಯಲ್ಲಿರುವ ಪಾತ್ರ ತನ್ನ ಪ್ರತಿಯೊಂದು ನಡೆಯಲ್ಲೂ ಆತ್ಮವಿಮರ್ಶೆಗೆ ತೊಡಗುವುದನ್ನು ಮತ್ತು ತಾನು ಮಾಡಿದ ಮತ್ತು ಮಾಡಲು ಹೊರಟಿರುವ ಎಲ್ಲಾ ತಪ್ಪುಗಳಿಗೆ ಮನಸ್ಸು ಕೊಡುವ ಸಮರ್ಥನೆಗಳನ್ನು ಸರಳ ಆಡುಗನ್ನಡದಲ್ಲಿ ಲೇಖಕಿ ಕಟ್ಟಿಕೊಟ್ಟಿದ್ದಾರೆ.
ಕಥೆಯನ್ನು ಏಕಮುಖವಾಗಿ ನೋಡಿದಾಗ ಪಲ್ಲವಿ ನಿಸ್ವಾರ್ಥಿ ಎನಿಸುವುದು ಸಹಜ ಏಕೆಂದರೆ ಕಥೆಯನ್ನು ಹೇಳುವುದು ಅದೇ ಪಾತ್ರವಾಗಿದ್ದರಿಂದ ತಾನು ನಿಸ್ವಾರ್ಥಿ, ತ್ಯಾಗಿ ಎಂಬುದರ ಸಮರ್ಥನೆಯನ್ನು ಕಥೆಯ ಉದ್ದಕ್ಕೂ ಕೊಡುತ್ತಲೇ ಹೋಗುತ್ತದೆ. ಆದರೆ ಅದರಿಂದ ಹೊರಗೆ ಬಂದು ನೋಡಿದಾಗ ನಿಜಕ್ಕೂ ಚೇತು ಎಂಬ ಪಾತ್ರ ನಿಸ್ವಾರ್ಥ ಪಾತ್ರವಾಗಿ ಕಾಣುತ್ತದೆ. ನಾಯಕಿಯನ್ನು ನೆಮ್ಮದಿಯಿಂದ ಇಡಬೇಕು ಎಂಬ ಒಂದೇ ಕಾರಣಕ್ಕೆ ಅವಳು ಹೇಳಿದ ಎಲ್ಲಾ ಹೊಂದಾಣಿಕೆಗಳಿಗೂ ಒಪ್ಪಿಕೊಳ್ಳುವ ಪಾತ್ರವದು.
ಕಿರುತೆರೆ ನಟರೊಬ್ಬರು ನನಗೆ ಒಂದು ಮಾತು ಹೇಳಿದ್ದರು. “ನೂರು ಸಾಲು ಓದಿದಾಗ ಒಂದು ಸಾಲು ಬರೆಯಬಹುದು” ಅಂತ. ಯಾವುದೋ ಒಂದು ಪ್ರಚಲಿತ ವಿದ್ಯಮಾನಗಳ ಬಗ್ಗೆ ಬರೆಯಬೇಕಾದರೆ ಅದರ ಬಗೆಗಿನ ಮಾಹಿತಿ ಸಂಗ್ರಹ ನಾವು ಹೇಳುವ ಭಾಷೆಗಿಂತ ಹೆಚ್ಚು ಮಹತ್ವದ್ದಾಗಿರುತ್ತದೆ. ಆದರೆ ಕಾದಂಬರಿ ಹಾಗಲ್ಲ ಭಾವನೆಗಳನ್ನು ಅಕ್ಷರರೂಪಕ್ಕಿಳಿಸುವಾಗ ಪಕ್ವ ಭಾಷೆಯ ಬಳಕೆಯಾಗಬೇಕಾಗುತ್ತದೆ. ಆಗಲೇ ಕಥೆಯಲ್ಲಿ ನಾವು ಕಟ್ಟಿಕೊಡುವ ಸೂಕ್ಷ್ಮಗಳು ಓದುಗನ ಸಂವೇದನೆಯನ್ನು ತಟ್ಟಲು ಸಾಧ್ಯ. ಆದರೆ ಲೇಖಕಿ ಸಹನಾ ಅವರು ಈಗ ವಿಶ್ವವಾಣಿಯಲ್ಲಿ “ಕನ್ನಡಿ” ಎಂಬ ಪ್ರಚಲಿತ ವಿದ್ಯಮಾನಗಳ ಕುರಿತು ಬರೆಯುವಾಗ ವಿಷಯ ಸಂಗ್ರಹವೂ ಅಷ್ಟೇ ಖಚಿತ ಮತ್ತು ನಿಖರವಾಗಿರುತ್ತದೆ. ಅದೇ ರೀತಿ ಕಾದಂಬರಿಯಲ್ಲಿ ಬಳಸಿದ ಭಾಷೆಯೂ ಪಕ್ವವಾಗಿದೆ. ಇನ್ನೂ ಹೆಚ್ಚು ಪುಸ್ತಕಗಳು ಅವರಿಂದ ಬರಲಿ ಎಂದು ಹಾರೈಸುವೆ.ಪ್ರಥಮ ಮುದ್ರಣದ ನಂತರ ಕೆಲವೇ ತಿಂಗಳುಗಳಲ್ಲಿ “ಕ್ಷಮೆ” ದ್ವಿತೀಯ ಮುದ್ರಣ ಕಾಣುತ್ತಿರುವುದು ಅದರಲ್ಲಿರುವ ಸತ್ವಕ್ಕೆ ಸಾಕ್ಷಿಯಂತಿದೆ.

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..