2511

ನೀನಿಟ್ಟ ಮುತ್ತುಂಟು, ಇನ್ನೆಲ್ಲಿ ಬಡತನ

Quora ಜಾಲತಾಣದ ಬಗ್ಗೆ ನಿಮಗೆ ಗೊತ್ತಿರಬಹುದು. askjeeves, yahoo! Answers ನ‌ಂತೆಯೇ ತುಂಬಾ advanced ಅವೃತ್ತಿ ಇದು ಎಂದು ಹೇಳಬಹುದು. ನಿಮಗೆ ಬೇಕಾದ ವಿಷಯದ ಮೇಲೆ ಮಾಹಿತಿ ಬೇಕಿದ್ದಲ್ಲಿ ವಿಕಿಪೀಡಿಯಾ ಹೇಳಿ ಮಾಡಿಸಿದ ಜಾಗ. ಆದರೆ ಕೋರಾದಲ್ಲಿ ಅದರ ಬಳಕೆದಾರರು ಅವರಿಗೆ ಬೇಕಾದ ಮಾಹಿತಿಯನ್ನು ಪ್ರಶ್ನೆಯ ರೂಪದಲ್ಲಿ ಕೇಳಿರುತ್ತಾರೆ. ಇತಿಹಾಸ, ಸಾಹಿತ್ಯ, ಸಿನಿಮಾ, ವಿಜ್ಞಾನ, ಹೀಗೆ ಹಲವಾರು ವಿಷಯಗಳ ಪ್ರಶ್ನೆಗಳಿಗೆ ಆ ರಂಗದ ಸೂಕ್ತ ವ್ಯಕ್ತಿಗಳು ಉತ್ತರಿಸಿರುತ್ತಾರೆ. Romance ಮತ್ತು Literature ವಿಭಾಗಕ್ಕೆ ಬಂದರಂತೂ ಮುಗೀತು, ಅದನ್ನು ಓದುತ್ತಾ ಓದುತ್ತಾ LKG ಕ್ಲಾಸಲ್ಲಿ ಜೊತೆಯಲ್ಲಿ ಬಟಾಣಿ ತಿನ್ನುತ್ತಿದ್ದ ಮೊದಲ ಕ್ರಷ್ ಇಂದ ಹಿಡಿದು, ಎಂದೋ ಹಿಡಿಸಿದ ಆಂಡಾಳಮ್ಮ ಟೀಚರ್, ಸೀನಿಯರ್ ಸಾನ್ವಿ, ಪಕ್ಕದ್ಮನೆ ಪದ್ಮಾ, ಹೀರೋಯಿನ್ ಕಾಜಲ್ ವರೆಗೂ ಯಾರ್ ಯಾರೆಲ್ಲಾ ನೆನಪಾಗ್ತಾರೋ ಹೇಳೋಕಾಗಲ್ಲ. ಅಷ್ಟು ಚೆನ್ನಾಗಿ ಕೆಲವು ಕಥೆ, ಸ್ವ ಅನುಭವ ಇತ್ಯಾದಿಗಳನ್ನು ಹಂಚಿಕೊಂಡಿರುತ್ತಾರೆ. ಆ ಐಡಿಯಾ ಇಂದ inspiration ತಗೊಂಡು ಲೋಕಲ್ ಕೇಬಲ್ ಗಾಗಿ‌ ಒಂದು ಚಿಕ್ಕ original ಪ್ರೇಮ ಕಥೆ ಬರೆಯೋಣ ಅನಿಸಿತು, ಅದರ ಫಲವೇ ಈ ಅಂಕಣ, ಓದಿ ನಿಮ್ಮ ಅಭಿಪ್ರಾಯ ತಿಳಿಸಿ:

2016: ಹರ್ಷ ಮತ್ತು ರಾಧ ಇಬ್ಬರದ್ದೂ ಇಂಜಿನಿಯರಿಂಗ್ ಮುಗಿದಿತ್ತು. ಇಬ್ಬರ‌ ಪ್ರೇಮದ ಬಗ್ಗೆ ಇಡೀ ಕಾಲೇಜ್ ಗೆ ಗೊತ್ತಾಗಿ ಹೋಗಿತ್ತು‌. ಅವನು ಉದ್ಯೋಗ ಅರಸುತ್ತಾ ಬೆಂಗಳೂರಲ್ಲಿ ತನ್ನ ಸೀನಿಯರ್ ಗಳ ರೂಮು ಸೇರಿಕೊಂಡ. ರಾಧ ಮನೆಯವರು ತುಂಬಾ ಅನುಕೂಲವಂತರಾಗಿದ್ದರಿಂದ ಅವಳನ್ನು ಮುಂದೆ M.Tech / MBA ಓದಿಸುವ, ಕೆಲಸಕ್ಕೆ ಕಳುಹಿಸಿವ ಯೋಚನೆ ಮನೆಯ ಯಾರ ತಲೆಯಲ್ಲೂ ಬರಲಿಲ್ಲ. ಅವಳಿಗೂ ತನ್ನ ಹವ್ಯಾಸದ ಚಿತ್ರಕಲೆಯ ಕಡೆ ಗಮನ ಕೊಡಬೇಕೆನ್ನಿಸಿ ದಾವಣಗೆರೆಯ ತನ್ನ ಮನೆಯಲ್ಲೇ ಉಳಿದಳು. ಜಿಯೋ ಪಾರಿವಾಳ ಇಬ್ಬರ ನಡುವೆ non stop ಪ್ರೇಮ ಸಂದೇಶಗಳನ್ನು ರವಾನಿಸುತ್ತಲೇ ಇತ್ತು.

ರಾಧಾ ಚಿಕ್ಕಪ್ಪ ಕೃಷ್ಣಪ್ಪ ಒಮ್ಮೆ ರಾಧಾ ತಂದೆ ಹಿರಿಯಪ್ಪನವರ ಮನೆಗೆ ತಮ್ಮ ಮಗನ ಮದುವೆ ಆಹ್ವಾನ ಪತ್ರಿಕೆ ನೀಡಲು ಬಂದಿದ್ದರು. ಮಾತಿನ ಮಧ್ಯ ರಾಧಾಗೆ KPSC / UPSC / ಇತರೆ ಸರ್ಕಾರಿ ಎಗ್ಸಾಮ್ ಗಳಲ್ಲಿ ಪಾಸ್ ಆಗಿದ್ದರೆ ರಾಧಳಿಗೆ ಒಳ್ಳೆಯ ವರ ಸಿಗಬಹುದು, ಒಂದು ಟ್ರೈ ಮಾಡಿ ಇರಲಿ ಅಂತ ಸಲಹೆ ನೀಡಿದರು. ಹಿರಿಯಪ್ಪನವರ ಆರ್ಥಿಕ ಸಂಪತ್ತಿನ ಅರಿವಿದ್ದರೂ ಒಂದು ಕೆಲಸ ಅಂತ ಇದ್ದರೆ ಅವಳಿಗೂ ಮನೆಯಲ್ಲಿ ಬೋರ್ ಆಗಲ್ಲ ಎಂದು ಕೃಷ್ಣಪ್ಪ ಹೇಳಿದಾಗ ಹಿರಿಯಪ್ಪನವರಿಗೂ ಸರಿ ಅನಿಸಿತು. ಈ ಮಾತನ್ನು ರಾಧಾಳ ಮುಂದಿಟ್ಟಾಗ ಅವಳಿಗೂ ಸರಿ ಅನ್ನಿಸಿ ರೇಣುಕಾ ಅಕ್ಕನಿಗೆ ಫೋನ್ ಮಾಡಿ ಬೇಕಾದ ಪುಸ್ತಕಗಳನ್ನು ತರಿಸಿಕೊಂಡಳು. ಇದೆಲ್ಲದರ ನಡುವೆ ದೂರವಿದ್ದರೂ ರಾಧಾ ಹರ್ಷ ಪ್ರೇಮ ಸದ್ದಿಲ್ಲದೆ ಸಾಗಿತ್ತು. ಅವನು ದಾವಣಗೆರೆ ಬಂದಾಗ ಅವಳ ಜೊತೆ ಮಾತನಾಡಬೇಕು ಅಂತ ಅಂದುಕೊಳ್ಳುತ್ತಿದ್ದ, ಆದರೆ ಆಗಿರಲಿಲ್ಲ. ಅವಳು ಕೆಲಚು ಎಗ್ಸಾಮ್ ಬರೆಯಲೆಂದು ಬೆಂಗಳೂರಿಗೆ ಬಂದಾಗ ಕೂಡ ಅವನನ್ನು ಭೇಟಿ ಮಾಡಬೇಕು ಅಂದುಕೊಂಡರೂ ಅಕ್ಕ – ಬಾವನ ಕಣ್ಣು ತಪ್ಪಿಸಿ manage ಮಾಡಲಾಗಲಿಲ್ಲ.

ಒಂದು ಸಲ‌ ಎಂದಿನಂತೆ ಯಾವುದೋ ಎಗ್ಸಾಮ್ ಗಾಗಿ ರಾಧ ಅದೊಂದು ಶುಕ್ರವಾರ ರಾತ್ರಿ ಬಸ್ ಹತ್ತಿದ್ದಳು. ಇಡೀ ದಿನ ಓದಿದ್ದರಿಂದ ತುಂಬಾ ನಿದ್ದೆ ಹತ್ತಿತ್ತು. ನಿದ್ದೆಯ ಮಂಪರಿನಲ್ಲಿ 8ನೇ ಮೈಲಿ ತಲುಪಿದ್ದೇ ಗೊತ್ತಾಗಲಿಲ್ಲ. ಕೂಡಲೇ ರಾಧ ತನ್ನ ಅಕ್ಕನಿಗೆ ಫೋನ್ ಮಾಡಿ ಫ್ರೆಂಡ್ ಮನೆಯಲ್ಲಿ ಉಳಿದುಕೊಳ್ಳುವುದಾಗಿ ಹೇಳಿದಳು. ಆ ದಿನ ರೇಣುಕಾ ದೀಪಕ್ ಇಬ್ಬರೂ ಹೈದರಾಬಾದ್ ನಲ್ಲಿ ಇದ್ದುದರಿಂದ ‘ಹುಷಾರು ಕಣೇ, ನೇರವಾಗಿ ಪೂರ್ವಿ ಮನೆಗೇ ಹೋಗು’ ಎಂದು ಎಚ್ಚರಿಸಿ ಫೋನ್ ಇಟ್ಟಳು. ರಾಧ ಫುಲ್ ಖುಷಿಯಾಗಿ ಥಟ್ ಅಂತ ಹರ್ಷನಿಗೆ ಫೋನ್ ಮಾಡಿದಳು. ಈಗ ಬಸ್ ಎಂಟನೇ ಮೈಲಿ ಹತ್ತಿರ ಇದೆ, ಜಯನಗರ ಬಸ್ ಸ್ಟಾಂಡ್ ಗೆ ಬಂದು ಕರೆದುಕೊಂಡು ಹೋಗಬೇಕು ಎಂಬ ಧಿಡೀರ್ ಜವಾಬ್ದಾರಿ ಹೊರಿಸಿದಳು. ಬಹಳ ದಿನಗಳ ನಂತರ ರಾಧಳನ್ನು ನೋಡುತ್ತಿದ್ದೇನೆ ಅಂತ ಹರ್ಷನಿಗೆ ಖುಷಿಯಲ್ಲಿ ನಿದ್ರೆಯೇ ಹಾರಿ ಹೋಗಿತ್ತು. ಎದ್ನೋ ಬಿದ್ನೋ ಅಂತ ಬೇಗ ಬೇಗ ರೆಡಿಯಾಗಿ ಸ್ವೆಟರ್ ಮತ್ತು ಹೆಲ್ಮೆಟ್ ಧರಿಸಿ ಅವಳಿಗೆ ತನ್ನದೊಂದು pullover ಮತ್ತು ಇನ್ನೊಂದು ಹೆಲ್ಮೆಟ್ ತೆಗೆದುಕೊಂಡು 2nd ಬ್ಲಾಕ್ ನ ತನ್ನ ಮನೆಯಿಂದ 4th ಬ್ಲಾಕ್ ನ ಬಸ್ ನಿಲ್ದಾಣದ ಕಡೆ ಬೈಕ್ ತಿರುಗಿಸಿದನು. ಅವನು ಹೋಗುವ ಸಮಯಕ್ಕೆ ಸರಿಯಾಗಿ ಅವಳಿದ್ದ ಬಸ್ ಬಂದು‌ ನಿಂತಿತು. ಬಸ್‌ ನಿಂದ ಇತರ ಪ್ರಯಾಣಿಕರು ಇಳಿಯುತ್ತಿದ್ದಂತೆ ರಾಧ ಮುಖ ನೋಡಲು ಹರ್ಷನ ಹೃದಯ ಕಾತುರತೆಯಿಂದ ಮತ್ತೂ ಜೋರಾಗಿ ಬಡಿದುಕೊಳ್ಳಲು ಶುರು ಮಾಡಿತು. ನಿದ್ದೆಗಣ್ಣಲ್ಲಿ ಆಕಳಿಸುತ್ತಾ, ಹರ್ಷನನ್ನು ನೋಡಿ ಕಿರುನಗೆ ಬೀರಿದಳು. ಹರ್ಷನ ಖುಷಿಗೆ ಪಾರವೇ ಇರಲಿಲ್ಲ. ಅವಳು ಸಮೀಪ ಬರುತ್ತಿದ್ದಂತೆ ಬಿಗಿದಪ್ಪಿಕೊಂಡನು, ರಾಧ ಕಣ್ಣಿಂದ ಹನಿಯೊಂದು ಜಾರಿತು.

ಸ್ವಲ್ಪ ಸಮಯದಲ್ಲೇ ಅವರು ಹರ್ಷನ ರೂಮಿಗೆ ಬಂದಿದ್ದರು. ರಾಧ ಹರ್ಷನ ಬೆನ್ನಿಗೊರಗಿ ಆಗಲೇ ನಿದ್ರಿಸಲಾರಂಭಿಸಿದ್ದಳು. ಹರ್ಷ ಅವಳನ್ನು ಎಬ್ಬಿಸಿ, ಬೈಕಿಂದ ಇಳಿಸಿ, ಗೇಟ್ ಒಳಗೆ ಬೈಕ್ ನಿಲ್ಲಿಸಿ, ಎರಡನೇ ಮಹಡಿಯಲ್ಲಿದ್ದ ತನ್ನ ರೂಮಿಗೆ ಕರೆದುಕೊಂಡು ಬಂದ. “ನೀರು, ಕಾಫಿಗಾಗಿ ಕಿಚನ್ ಈ ಕಡೆ, ಫ್ರೆಷ್ ಆಗೋದಾದರೆ bathroom ಆ‌ ಕಡೆ…” ಎಂದು ಹರ್ಷ ಮಾತು ಮುಗಿಸುವುದರಲ್ಲಿ ರಾಧ ಹರ್ಷನ ಕೋಣೆ ಸೇರಿ bedsheet ಹೊದ್ದು ಸರಿಯಾಗಿ ನಿದ್ದೆ ಬ್ಯಾಟಿಂಗ್ ಮಾಡುತ್ತಿದ್ದಳು. ನೈಟ್ ಜರ್ನಿ ಪಾಪ ಅಂದುಕೊಂಡು ಹರ್ಷ ತನಗಾಗಿ ಒಂದು ಲೋಟ ಕಾಫಿ ಮಾಡಿಕೊಂಡ. ಮ್ಯಾನೇಜರ್ ಗೆ WhatsApp ಅಲ್ಲೇ request ಮಾಡಿಕೊಂಡು ಆ ದಿನದ Work from Home ಕ್ಯಾನ್ಸಲ್ ಮಾಡಿಸಕೊಂಡ. ಬಹಳ ದಿನಗಳಿಂದ ಯಾವುದೂ ಫಿಲಂ ಯೇ ನೋಡಿಲ್ವಲ್ಲಾ ಅಂತ ಕಂಪ್ಯೂಟರ್ ಆನ್ Leonardo DiCaprio ಅಭಿನಯದ The Revenant ಚಿತ್ರ ಡೌನ್ಲೋಡ್ ಗೆ ಇಟ್ಟ. ರಾಧಳ ಬ್ಯಾಗ್ ಇಂದ ಹಾಲ್ ಟಿಕೆಟ್ ತೆಗೆದು ಎಗ್ಸಾಮ್ ನ ಸಮಯ ಮತ್ತು ಸ್ಥಳ ನೋಡಿಕೊಂಡ. ಪರೀಕ್ಷೆ ನೆಡೆಯುತ್ತಿದ್ದ ಕಾಲೇಜು ಹರ್ಷನ ರೂಮಿಗೆ ತುಂಬಾನೇ ಹತ್ತಿರವಿದ್ದ ಕಾರಣ ಅವಳನ್ನು ಎದ್ದೇಳಿಸಲು ಹೋಗಲಿಲ್ಲ. ಎಗ್ಸಾಮ್ ಇನ್ನೂ 11 ಗಂಟೆಗೆ ಇರೋದು, 9.30 ಗೆ ಎದ್ದೇಳಿಸಿದರಾಯಿತು ಎಂದು ಸುಮ್ಮನಾದ. ಈ ಕಡೆ ರಾಧ ತನ್ನ ಗೆಳತಿಯ ರೂಮ್ ಸೇರಿದ್ದಾಳ ಅಂತ ಮನೆ ಮತ್ತು ಅಕ್ಕನಿಂದ ಆಗಲೇ ಫೋನ್ ಬಂದಿತ್ತು. ಇಬ್ಬರಿಗೂ ಉತ್ತರಿಸಿ ಮತ್ತೆ ನಿದ್ರಿಸಲು ಶುರು ಮಾಡಿದಳು. ಈ ಕಡೆ ತಿಂಡಿಗೆ ಎಲ್ಲಿ ಹೋಗೋಣ ಎಂದು ಯೋಚಿಸುತ್ತಿದ್ದ ಹರ್ಷನಿಗೆ ಹಿಂದಿನ ರಾತ್ರಿ ಪಕ್ಕದ ರೂಮಿನ ಪ್ರದೀಪ – ರಕ್ಷಾ ಕೊಟ್ಟಿದ್ದ ಜವಳಿಕಾಯಿ ಪಲ್ಯ ಇದ್ದದ್ದು ನೆನಪಾಯಿತು. ಅರೆರೇ, ತಾನೂ ಅಡುಗೆ ಮಾಡಿ ಬಹಳ ದಿನ ಆಯಿತು, ಹಂಗೂ ಒಂದು ವೇಳೆ ರುಚಿ‌ ಕೆಟ್ಟು ಹೋದರೆ ಹೋಟೆಲ್ ಇದ್ದೇ ಇದೆಯಲ್ಲಾ ಅಂತ ಗೋಧಿ ಹಿಟ್ಟು ಪಾತ್ರೆಗೆ ಸುರಿದುಕೊಂಡು ಚಪಾತಿ ಮಾಡಲು ಅಣಿಯಾದ. ಬೋರ್ ಆಗದಿರಲೆಂದು ಮೊಬೈಲಲ್ಲೇ‌ ಚಿಕ್ಕದಾಗಿ ಹಾಡು ಹಾಕಿ shelf ಮೇಲಿಟ್ಟು ಚಪಾತಿ ಮಾಡತೊಡಗಿದ.

ಹರ್ಷ: ರಾಧ, ಎದ್ದೇಳು ಪುಟ್ಟಾ, ಎದ್ದೇಳು.

ರಾಧ: ಏ ಹೋಗಮ್ಮ, ಇವತ್ತೊಂದು ದಿನ‌ ಪೂಜೆ ಮಾಡಲಿಲ್ಲ ಅಂದರೆ ಏನೂ ಆಗಲ್ಲ.

ಹರ್ಷ: ಹ್ಹ ಹ್ಹ ಹ್ಹ, ಮೇಡಮ್, ಇದು ನಿಮ್ಮ ಅಮ್ಮ ಅಲ್ಲ, ನಿಮ್ಮ ಹುಡುಗ ಹರ್ಷ, ಬೆಂಗಳೂರಲ್ಲಿ ಇದ್ದೀಯಾ, ಅದಾದರೂ ಗೊತ್ತೋ ಇಲ್ವೋ.

ರಾಧ: ಅಯ್ಯೋ ಹೌದಲ್ವಾ, ಇನ್ನೂ just 10 ನಿಮಿಷ ಮಲಗ್ತೀನಿ, ಪ್ಲೀಸ್ ಕಣೋ, ಎದ್ದೇಳಿಸಬೇಡ, ಓಕೆ ನಾ, ನನ್ನ ಮುದ್ದು ನೀನು.

ಹರ್ಷ: ಇರಲಿ ಇರಲಿ, ಎಗ್ಸಾಮ್ ಗೆ ಟೈಮ್ ಆಯ್ತು, ಬೇಗ ಎದ್ದು ರೆಡಿಯಾಗು, ಎಗ್ಸಾಮ್ ಸೆಂಟರ್ ತುಂಬಾ ದೂರ ಇದೆ.

ರಾಧ: ನಿನಗೆ ಹೇಗೆ ಗೊತ್ತಾಯ್ತು. ನನ್ನ ಬ್ಯಾಗ್ ತೆಗೆದು‌ ನೋಡಿದಾ?

ಹರ್ಷ‌ almost red handed ಆಗಿ‌ ಸಿಕ್ಕಿ ಬಿದ್ದಿದ್ದ, ಆದರೂ ಸಾವರಿಸಿಕೊಂಡು ಹೇಳಿದ: ಏ‌ ಇಲ್ಲಪ್ಪಾ, ರಾಮದಾಸಪ್ಪ ಕಾಲೇಜ್, ಲಾಲ್ ಬಾಗ್ ಹತ್ತಿರ ಅಂತ ನಿನ್ನೆ ನೀನೇ ಫೋನಲ್ಲಿ ಹೇಳಿದ್ದಲ್ಲ?!?

ರಾಧ: ಇರಬಹುದೇನೋ, ಚಿನ್ನು, ಪ್ಲೀಸ್, ಎರಡು ನಿಮಿಷ ಮಲಗ್ತೀನೋ, ಪ್ಲೀಸ್ ಕಣೋ.

ಹರ್ಷ: ಅದೆಲ್ಲಾ ಏನೂ ಬೇಡ, ಬೇಗ ರೆಡಿ ಆಗು, ಎಗ್ಸಾಮ್ ಮುಗಿಸಿಕೊಂಡು ಬಂದು ಮಧ್ಯಾಹ್ನ ಟು ರಾತ್ರಿ ಫುಲ್ ನಿದ್ದೆ ಮಾಡು, ಓಕೆ ನಾ? ಈಗ ರೆಡಿ ಆಗುವಂತೆ ಬಾ.

ರಾಧ ಮನಸ್ಸಿಲ್ಲದ ಮನಸ್ಸಿನಿಂದ ಸ್ನಾನಕ್ಕೆ ಹೊರಟಳು. ಈ ಕಡೆ 5-6 ಹಾಡುಗಳು ಮುಗಿಯುವುದರಲ್ಲಿ ಹರ್ಷ ಆರು ಚಪಾತಿ ತಟ್ಟಿ ರೆಡಿ ಮಾಡಿಟ್ಟಿದ್ದ. ರಾಧ ಬರುವಷ್ಟರಲ್ಲಿ The Revenant ಡೌನ್ಲೋಡ್ ಮುಗಿದಿತ್ತು. ಕಂಪ್ಯೂಟರ್ ಆಫ್ ಮಾಡಿ, ಟೀಪಾಯ್ ತಂದಿಟ್ಟು ತಿಂಡಿ ಮಾಡಲು ಸಜ್ಜು ಮಾಡಿದ. ಹೊರಗೆ ಬಂದ ರಾಧಳಿಗೆ ಖುಷಿ, ಆಶ್ಚರ್ಯ ಎಲ್ಲವೂ ಬೆರೆತ ಭಾವನೆ ಮೂಡಿತ್ತು. ಬೇಗ ತಿಂದು ಹೊರಡೋಣ ಎಂದು ಹರ್ಷ ಹೇಳಿದ, ರಾಧ ಇಬ್ಬರಿಗೂ ನೀರು ತಂದಿಟ್ಟಳು.

ರಾಧ: thanks ಚಿನ್ನು, ಇಷ್ಟೆಲ್ಲಾ ಮಾಡಿದ್ದೀಯಾ, ಪಲ್ಯ ತುಂಬಾ ಚೆನ್ನಾಗಿದೆ.

ಹರ್ಷ: ಹಾ, ಇರಲಿ ಇರಲಿ, ಪಲ್ಯ ನಾನು ಮಾಡಿದ್ದಲ್ಲ, ರಕ್ಷಾ ಕೊಟ್ಟಿದ್ದು!

ರಾಧ: ಹೇ, ಯಾರೋ‌ ಅದು ರಕ್ಷಾ, ಏನು‌ ಸಮಾಚಾರ?!?

ಹರ್ಷ: ಅಯ್ಯೋ ದೇವಾ, ಪಕ್ಕದ ಮನೆಯಲ್ಲಿ ನಮ್ ಸೀನಿಯರ್ ಪ್ರದೀಪ್ ಇದ್ದಾನೆ ಅಂತ ಹೇಳಿರಲಿಲ್ವಾ, ಮೊನ್ನೆ ಮದುವೆ ಕೂಡ ಆಯ್ತು, ಅವರೇ ನಮ್ ಅತ್ತಿಗೆ, ರಕ್ಷಾ ಅತ್ತಿಗೆ. ನಿನಗೆ ಗೊತ್ತಿದೆ ಅಂತ ಅತ್ತಿಗೆ word ಕಟ್ ಮಾಡಿ ಹೇಳಿದರೆ ನನ್ನ ಮೇಲೇ ಡೌಟ್ ಪಡ್ತೀಯಲ್ಲಾ, ಏ ಹೋಗಪ್ಪ.

ರಾಧ: ನನಗೆ ಗೊತ್ತು ಚಿನ್ನು, ಸುಮ್ಮನೆ ನಿನ್ನನ್ನು ಟೀಸ್ ಮಾಡೋಣ ಅಂತ. ಬೆಳಿಗ್ಗೆ ಬೆಳಿಗ್ಗೆ ‘ಈ ಸಂಜೆ ಯಾಕಾಗಿದೆ’ ಹಾಡು ಹಾಕ್ಕೊಂಡು ಚಪಾತಿ ತಟ್ಟುತ್ತಾ ಇದ್ದ ಸೌಂಡು ಕೇಳಿಸಿತು, ನಿನ್ನ ಕೈ ರುಚಿ ನೋಡಬೇಕು ಅಂತ ನಿದ್ದೆ ಬರೋ ಥರ ಮಾಡಿದೆ, ನಿಜವಾಗ್ಲೂ ನಿದ್ದೆ ಬಂದು ಬಿಡ್ತು.

ಹರ್ಷ: ಹಿಂಗೂ ಇದೆಯಾ? ಸರಿ ಹೋಯ್ತು. ಹೋಗೋಣ.

(ಎಗ್ಸಾಮ್ ನ ನಂತರ)

ಹರ್ಷ: ಮುಂದ?

ರಾಧ: ನೀನು ಎಲ್ಲಿಗೆ ಅಂತೀಯೋ ಅಲ್ಲಿಗೆ.

ಹರ್ಷ: ಫಸ್ಟು ಊಟ ಮಾಡೋಣ, ಆಮೇಲೆ ಎಲ್ಲಿ ಹೋಗೋದು‌ ನೋಡೋಣ.

ರಾಧ: ಸರಿ‌ ಓಕೆ.

ಮೈಯ್ಯಾಸ್ ಅಲ್ಲಿ ಊಟ ಮಾಡಿದ ಬಳಿಕ ಇಬ್ಬರೂ ಸಿನಿಮಾಗೆ ಹೋಗುತ್ತಾರೆ. ಅಲ್ಲಿ‌ ಸಿನಿಮಾ ನೋಡಿದ್ದಕ್ಕಿಂತ ಮಾತಾಡಿದ್ದೇ ಹೆಚ್ಚು ಅನ್ನಬಹುದು. ಸಿನಿಮಾದ ಎರಡು ಗಂಟೆ ಪೂರ್ತಿ ಅವಳು ಸತತವಾಗಿ ಮಾತನಾಡಿದಳು, ಅವಳ ಮಾತನ್ನು ಕೇಳೋದೇ ಹರ್ಷನಿಗೆ ಒಂಥರಾ ಖುಷಿ ನೀಡುತ್ತಿತ್ತು, ಹಾಗಾಗಿ ಅವನು ಕೇಳುತ್ತಲೇ‌ ಇದ್ದನು. ಹೊರಗೆ ಬಂದ ಮೇಲೆ ಮತ್ತೆ ಎಲ್ಲಿ‌ ಹೋಗುವುದಾಗಿ‌ ಹರ್ಷ ಕೇಳಿದ.

ರಾಧ: ಸುಸ್ತು ಆಗೋ ಥರ ಆಗಿದೆ ಚಿನ್ನು, ಬೈಟು ಕಾಫಿ ಕುಡಿದು ಮನೆಗೆ ‌ಹೋಗೋಣ, ಮತ್ತೇ‌ನೂ ಬೇಡ.

ಹರ್ಷ: ಮನೆಯಲ್ಲೇ ಎಲ್ಲಾ ಇದೆ, ಹೋಗೋಣ.

ಮನೆಗೆ ಬಂದ ಹರ್ಷ ಕಾಫಿಗೆ ಎಲ್ಲಾ ರೆಡಿ ಮಾಡಿದ. ರಾಧ ಮುಖ ತೊಳೆದುಕೊಂಡು ಬಂದು ಮನೆಗೆ ಫೋನ್ ಮಾಡಿದಳು. ಅಷ್ಟರಲ್ಲಿ ಕಾಫಿ ಆಗಿತ್ತು. ಹರ್ಷ ಎರಡು ಚಿಕ್ಕ ಲೋಟದಲ್ಲಿ ಕಾಫಿ ತಂದು, ಒಂದನ್ನು ಅವಳಿಗೆ ಕೊಟ್ಟು ಇನ್ನೊಂದನ್ನು ತನ್ನ ಕೈಯಲ್ಲಿ ಇರಿಸಿಕೊಂಡನು.

ರಾಧ ಒಂದೇ‌ ನಿಮಿಷದಲ್ಲಿ ಬರುತ್ತೇನೆ ಎಂದು ಸನ್ನೆ ಮಾಡಿ ಅಡುಗೆ ಮನೆಗೆ ಹೋಗಿ ಒಂದು ದೊಡ್ಡ ಲೋಟ ತೆಗೆದುಕೊಂಡು ಬಂದಳು. ತನ್ನ ಲೋಟದಲ್ಲಿದ್ದ ಕಾಫಿಯನ್ನು ದೊಡ್ಡ ಲೋಟಕ್ಕೆ ಬಗ್ಗಿಸಿ, ಹರ್ಷನ ಕೈಯಿಂದ ಕಾಫಿ ತೆಗೆದುಕೊಂಡು ಅದನ್ನೂ ದೊಡ್ಡ ಲೋಟಕ್ಕೆ ಹಾಕಿ ಹರ್ಷನಿಗೆ ನೀಡಿದಳು. ಹರ್ಷ ಅವಳಿಗೆ ಕಾಫಿ ಬೇಡವೇನೋ‌ ಅಂದುಕೊಂಡು ಒಬ್ಬನೇ ಕುಡಿಯತೊಡಗಿದ. ಎರಡು ಮೂರು ಗುಟುಕಿನ ನಂತರ ರಾಧ ಅವನ ಕೈಯಿಂದ ಕಾಫಿ ತೆಗೆದುಕೊಂಡು, ಸ್ವಲ್ಪ ಕುಡಿದು ಮತ್ತೆ ಕೊಟ್ಟಳು. ಹರ್ಷನಿಗೆ ಏನೂ ಅರ್ಥವಾಗಲಿಲ್ಲ, ರಾಧಳಿಗೆ ಕಾಫಿ ಹಿಡಿಸಿಲ್ಲವೇನೋ ಅಂದುಕೊಂಡು ಉಳಿದ ಅಷ್ಟನ್ನೂ ತಾನೇ ಕುಡಿದು ಮುಗಿಸಿದ. ಅವನನ್ನೇ ನೋಡುತ್ತಿದ್ದ ರಾಧ ಹರ್ಷನನ್ನು ಅಪ್ಪಿಕೊಂಡು ಕೆನ್ನೆಗೆರಡು ಮುತ್ತನ್ನಿಟ್ಟಳು. ಅಚಾನಕ್ ಆಗಿ ಆದ ಈ ಆಕಸ್ಮಿಕ ಸ್ಪರ್ಶದಿಂದ ಹರ್ಷ ತುಂಬಾನೇ ಸಂತೋಷ ಪಟ್ಟನು. ಮಾತು ಮತ್ತೆ ಮುಂದುವರೆಯಿತು, ಹರ್ಷನಿಗೆ ರಾಧಳನ್ನೇ ನೋಡುತ್ತಿರಬೇಕು ಕೊನೆವರೆಗೆ ಎನಿಸತೊಡಗಿತು. ಮಾತಿನ ನಡುವೆ ಇಬ್ಬರಿಗೂ ಊಟದ ನೆನಪೇ ಆಗಲಿಲ್ಲ. ಸ್ವಲ್ಪ ಸಮಯದ ನಂತರ ಹರ್ಷ ಅವಳ ಮಡಿಲಲ್ಲಿ ಮಲಗಿದನು. ಅವನ ತಲೆ ನೇವರಿಸುತ್ತಿದ್ದ ಅವಳಿಗೂ ಸ್ವಲ್ಪ ಸಮಯದ ನಂತರ ನಿದ್ರೆ ಆವರಿಸಿತು. ಹರ್ಷನನ್ನು ಕೊಂಚ ಸರಿಸಿ ಅವನ ಎದೆಗೊರಗಿ ಅವಳು ಅಲ್ಲೇ ಮಲಗಿದಳು.

ಮುಂಜಾನೆ ಹರ್ಷನಿಗೆ ಎಚ್ಚರವಾದಾಗ ರಾತ್ರಿ ಆಗಿದ್ದೆಲ್ಲವೂ ತುಸು ಅಸ್ಪಷ್ಟವಾಗಿ ಕನಸೋ ಭ್ರಮೆಯೋ ಎಂಬಂತೆ confusion ಭಾವ ಉಂಟಾಗಿತ್ತು. ಎಂದಿನಂತೆ ಮೆಲುಧ್ಚನಿಯಲ್ಲಿ ಹಾಡು ಕೇಳಲು ಶುರು ಮಾಡಿದ. ಅಣ್ಣಾಬಾಂಡ್ ಚಿತ್ರದ ‘ಏನೆಂದು ಹೆಸರಿಡಲಿ, ಈ ಚೆಂದ ಅನುಭವಕೆ’ ಹಾಡು ಪ್ಲೇ ಆಯಿತು. ಹಾಡನ್ನು ಕೇಳುತ್ತಾ ಕೇಳುತ್ತಾ ಹರ್ಷನಿಗೆ ಕಾಲೇಜ್ ನಲ್ಲಿ ರಾಧಳನ್ನು ಮೊದಲ ಬಾರಿ ನೋಡಿದ್ದರಿಂದ ಹಿಡಿದು, ಪ್ರಪೋಸ್ ಮಾಡಿದ್ದು, ಜೊತೆಯಲ್ಲಿ ದೇವಸ್ಥಾನಕ್ಕೆ ಹೋಗಿದ್ದು, ಖಾಲಿ ಕ್ಲಾಸ್ ರೂಮಲ್ಲಿ ಸೆಮಿನಾರ್ ಗೆ ಪ್ರಿಪೇರ್ ಆಗಿದ್ದು, ಎಲ್ಲವೂ ನೆನಪಾಗತೊಡಗಿತು. “ಇವಳು ನನ್ನವಳು, ಇವಳಿಲ್ಲದ ಜೀವನ ಎಷ್ಟು ಚೆನ್ನಾಗಿದ್ದರೂ ನನಗದು ಬೇಡ” ಎಂದು ಮನಸ್ಸಿನ ಪಕ್ಷಿ ಹೇಳಲು ಶುರು ಮಾಡಿತ್ತು. ಇನ್ನು ಯೋಚನೆ ಸಾಕೆಂದು ಹರ್ಷ ವಾಸ್ತವಕ್ಕೆ ಮರಳಿದ. ಅಷ್ಟೊತ್ತಿಗಾಗಲೇ, ಜಯಂತ್ ಕಾಯ್ಕಿಣಿ‌ ರಚನೆಯ ಹಾಡು ಸೋನು ನಿಗಮ್ ಗಾಯನದಲ್ಲಿ,

“ಹೊತ್ತಿಲ್ಲ, ಗೊತ್ತಿಲ್ಲ, ಬೆನ್ನಲ್ಲೇ ಬರುವೆ ನಾ …
ನೀನಿಟ್ಟ ಮುತ್ತುಂಟು, ಇನ್ನೆಲ್ಲಿ ಬಡತನ …

ಭಾಗ ಬಂದು, ಅದು ತನಗೇ ಹೇಳಿರುವಂತಿದೆ ಎನಿಸಿತು. ರಾಧ ಜೊತೆಗಿದ್ದರೆ ಸಾಕು, ತಾನೆಂದಿಗೂ ಸಿರಿವಂತನೇ ಎಂದು realize ಆದ ಹರ್ಷ ಅವಳನ್ನು ಬಸ್ ಗೆ ಕಳುಹಿಸಬೇಕು ಎಂದು ಏಳಿಸಲು ಕೋಣೆಗೆ ಹೋದನು. ಅವನು ಬರುತ್ತಿದ್ದಂತೆ ಕೈ ಹಿಡಿದು ಮಂಚಕ್ಕೆ ಎಳೆದುಕೊಂಡ ರಾಧ, ಹರ್ಷನ ಕಿವಿಯಲ್ಲಿ ಪಿಸುಗುಟ್ಟಿದಳು, “ಇನ್ನೂ ಬರೀ ಹತ್ತು ನಿಮಿಷ ಮಲಗ್ತೀನಿ ಚಿನ್ನು, ಸುಮ್ಮನೆ ಬಿದ್ಕೊ, ಆಯ್ತಾ”

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..