2749

ಸಿರಿಗನ್ನಡಂ ಗೆಲ್ಗೆ ..ಸಿರಿಗನ್ನಡಂ ಬಾಳ್ಗೆ

ಬಸ್ ಪ್ರಯಾಣಕ್ಕೆ earphones ಮರೆತುಹೋದರೆ, ಮದುವೆಗೆ ತಾಳಿ ಮರೆತಂತೆಯೇ ಸರಿ ಎನ್ನುವಷ್ಟರ ಮಟ್ಟಿಗೆ ತಂತ್ರಜ್ಞಾನದ ಮೇಲೆ ನಾವಿಂದು ಅವಲಂಬಿತವಾಗಿದ್ದೇವೆ. ನನ್ನನ್ನು ಕೇಳಿದರೆ ರಾತ್ರಿ‌ ಪ್ರಯಾಣವೇ ಚಂದ, ಮಲಗಿ ಎದ್ದೇಳೋದರಲ್ಲಿ ಊರು ಬಂದಿರುತ್ತೆ. ಮನೆ ತಲುಪಿ, ಸ್ನಾನ ಮಾಡಿ, ತಿಂಡಿ ತಿಂದು, ಇನ್ನೊಂದು ರೌಂಡು ಮಲಗಿದರೆ ಇನ್ನೇನು ಬೇಕಿಲ್ಲ ಅನ್ನುವಷ್ಟು ಖುಷಿ. ಹೀಗಿದ್ದಾಗ ಮೊನ್ನೆ ನಮ್ಮೂರಿಗೆ ಹೋಗೋಣ ಅಂತ ಬಸ್ ಹತ್ತಿ ಕುಳಿತಾಗ, ಅವಸರದಲ್ಲಿ earphones ಮರೆತು ಬಂದಿರುವುದು ಥಟ್ ಅಂತ ನೆನಪಾಯಿತು. ಅಯ್ಯೋ, ಎಂಥಾ ಕೆಲಸ ಆಯ್ತಪ್ಪ, ಮಲಗೋಣ ಅಂದರೆ ರಾತ್ರಿ ಅಲ್ಲ, facebook ನೋಡೋಣ ಅಂದರೆ ಫೋನಿನಲ್ಲಿ ಚಾರ್ಜ್ ಕಡಿಮೆ ಇದೆ. ಒಳ್ಳೆ ಇಕ್ಕಟ್ಟಗೆ ಬಂದು ನಿಂತಂಗಾಯಿತು ಅಂತ ಬೇಜಾರು ಮಾಡಿಕೊಳ್ಳುವ ಹೊತ್ತಿಗೆ ಬಸ್ಸಿನಲ್ಲಿ ಹಾಡು ಶುರುವಾಯಿತು. ಅಂದು ಯಾಕೋ ಅವತ್ತು ನನ್ನ ಪುಣ್ಯಕ್ಕೆ ಒಂದಕ್ಕಿಂತ ಒಂದು ಚೆನ್ನಾಗಿರುವ ಹಾಡುಗಳು ಬರತೊಡಗಿದವು. ಜೊತೆಯಲಿ ಜೊತೆ‌ ಜೊತೆಯಲಿ (ಗೀತಾ), ಒಂದೇ ಒಂದು ಕಣ್ಣ ಬಿಂದು (ಬೆಳ್ಳಿ ಕಾಲುಂಗುರ), ಈ ಭೂಮಿ ಬಣ್ಣದ ಬುಗುರಿ (ಮಹಾ ಕ್ಷತ್ರಿಯ), ಆನೆಯ ಮೇಲೆ ಅಂಬಾರಿ ಕಂಡೆ (ಹಾಲು ಜೇನು), ಘಾಟಿಯ ಇಳಿದು (ಉಳಿದವರು ಕಂಡಂತೆ), ಹೀಗೆ ತುಂಬಾ ಒಳ್ಳೊಳ್ಳೆ ಹಾಡುಗಳು ಬರುತ್ತಿದ್ದವು. ಈ ಹಾಡುಗಳು ನನ್ನ ಕಂಪ್ಯೂಟರ್ ನಲ್ಲಿ ಇಲ್ಲವೆಂದೇನಿಲ್ಲ. ಆದರೆ, ಈ ರೀತಿ ಆಕಸ್ಮಿಕವಾಗಿ ಮೆಚ್ಚಿನ ಹಾಡುಗಳನ್ನು ಟಿವಿ, ಎಫ್.ಎಂ., ಬಸ್ಸಿನಲ್ಲಿ ಕೇಳುವ ಮಜವೇ ಬೇರೆ. Earphones ಮರೆತು ಬಂದಿದ್ದಕ್ಕೆ ಅಂಥ ಏನೂ ನಷ್ಟವಾಗಲಿಲ್ಲ ಎಂದು ಯೋಚಿಸುತ್ತಿರುವ ಹೊತ್ತಿಗೆ ದಾದಾ ಹಾಡಿರುವ ಮೋಜುಗಾರ ಸೊಗಸುಗಾರ ಚಿತ್ರದ ‘ಕನ್ನಡವೇ ನಮ್ಮಮ್ಮ’ ಹಾಡು ಬಂದಿತು. ಅಲ್ಲಿಂದ ಮುಂದೆ ಆಗಿದ್ದೆಲ್ಲಾ ಮನಸ್ಸಿನ ಬೀದಿಯಲ್ಲಿ ನೆನಪುಗಳ ಮೆರವಣಿಗೆ.

ಅ – ಅರಸ, ಆ – ಆನೆ ಎಂದು ಶಾಲೆಯಲ್ಲಿ ಅಕ್ಷರ ಓದಲು, ಬರೆಯಲು ಶುರು ಮಾಡುವುದು ಸಾಮಾನ್ಯ. ಆದರೆ ಶಾಲೆ ಅಥವಾ ಅಂಗನವಾಡಿ ಅಥವಾ ಶಿಶು ವಿಹಾರ ಸೇರುವ ಮೊದಲು ಮನೆಯಲ್ಲಿ ತೊದಲು ಮಾತನಾಡುವುದನ್ನು ಕಲಿತಿರುತ್ತೇವಲ್ಲ, ಆ ಭಾಗ ತುಂಬಾ ಚೆಂದ. ಆಗ ಚಂದನ ವಾಹಿನಿ DD 9 ಹೆಸರಿನಲ್ಲಿ ಪ್ರಸಾರವಾಗುತ್ತಿತ್ತು. ಯಾವುದೇ ಪಕ್ಷದ ಪರ ವಹಿಸದೆ, ಸುದ್ದಿಯನ್ನು ವೈಭವೀಕರಿಸದೆ ದಿನಪತ್ರಿಕೆಯ ಶೈಲಿಯಲ್ಲಿ ಸರಳವಾಗಿ ಪ್ರಸ್ತುತ ಪಡಿಸುವ ರೀತಿಯಿಂದಾಗಿ ಚಂದನ ವಾರ್ತೆಗಳು ಇಂದಿಗೂ ನನಗೆ ತುಂಬಾ ಇಷ್ಟ. ಆಗ ವಾರ್ತೆಗಳು ಬಂದರೆ ಸಾಕು ಮನೆಯ ಎಲ್ಲರ ಬಳಿ ಹೋಗಿ, “ವಾತುವ, ಬಾ, ವಾತುವಾ, ಬಾ” ಅಂತ ಟಿವಿ‌ ಕಡೆ ಕೈ ತೋರಿಸುತ್ತಿದ್ದೆ ಅಂತ ಅಮ್ಮ ಆಗಾಗ ಹೇಳುತ್ತಾರೆ. ಇವೆಲ್ಲಾ ನಮಗೇ ನೆನಪಿಲ್ಲದ ನಮ್ಮಯ ಸವಿನೆನಪುಗಳು. ಆ ರೀತಿ‌ ವಾತುವ ವಾತುವ ಎಂದು ತೊದಲಿಸಿ ಮಾತನಾಡುವುದನ್ನು ಕಲಿತು ಈಗ ಬ್ಲಾಗ್ ಅಂಕಣಗಳನ್ನು ಬರೆದು ನಮ್ ಹುಡುಗರ ಸಮಯ ವ್ಯರ್ಥ ಮಾಡುವವರೆಗೆ ಬಂದು‌ ನಿಂತಿದ್ದೇನೆ. ಏಸೊಂದು ಊರು ತಿರುಗಿದ ಮೇಲೂ, ನಮ್ಮೂರೇ ನಮಗೆ ಮೇಲು ಅನ್ನುವಂತೆ ಕನ್ನಡ ಭಾಷೆಯ ಜೊತೆ English, Hindi ಕಲಿತು, ಸ್ವಲ್ಪ ಮಟ್ಟಿಗೆ ತೆಲುಗು, ಸಿನಿಮಾ ಅರ್ಥ ಮಾಡಿಕೊಳ್ಳುವಷ್ಟು ತಮಿಳ್ ಮತ್ತು ಮಲಯಾಳಂ ಬರುತ್ತದಾದರೂ ಕನ್ನಡದಲ್ಲಿಯೇ ಮಾತನಾಡುವುದರ ತೃಪ್ತಿಯೇ ಬೇರೆ. “Hey man, where are you?” ಅಂತ ನಮ್ ಹುಡುಗರಿಗೆ ಮೆಸೇಜ್ ಮಾಡಿದಾಗ ಬರುವ ಉತ್ತರಿಕ್ಕಿಂತ “ಎಲ್ಲಿ ದನ ಕಾಯೋಕ್ ಹೋಗಿದ್ದೀಯೋ ಹಾಳದವನೆ?” ಎಂದು ಮೆಸೇಜ್ ಮಾಡಿದಾಗ ಬರುವ ಉತ್ತರದ ಗಮ್ಮತ್ತೇ ಬೇರೆ. ಮಾತೃಭಾಷೆಯೊಂದಿನ ಮಾನಸಿಕ ಬಂಧ ಅಂಥದ್ದು.

ಕಾಲ ಬದಲಾಗಿದೆ, ಪ್ರೀತಂ ಕೂಡ ಬದಲಾಗಿದ್ದಾನೆ. ಓ ಛೇ, ತಪ್ಪಾಯ್ತು, ಮುಂಗಾರು ಮಳೆ 2 ಟ್ರೈಲರ್ ನ ಪರಿಣಾಮ ನಮ್ಮ ಮೇಲೆ ಸ್ವಲ್ಪ ಜೋರಾಗೇ ಇದೆ. ಹಾಗಾಗಿ ಸ್ವಲ್ಪ ತಪ್ಪಾಗೋಯಿತು. ಕಾಲ ಬದಲಾಗಿದೆ, ಅಂತೆಯೇ, ಪ್ರಸ್ತುತ ಸಮಯದಲ್ಲಿ ಕನ್ನಡ ಭಾಷೆಯ ಬಳಕೆ, ಪ್ರಯೋಗ ಕೂಡ ಬದಲಾಗಿದೆ. ನಾವು ಚಿಕ್ಕವರಿದ್ದಾಗ ಅದೊಂದು ಟ್ರೆಂಡ್ ಸೃಷ್ಟಿ ಆಗಿತ್ತು. ಕನ್ನಡ ಮಾಧ್ಯಮದಲ್ಲಿ ಓದಿದರೆ ಕೆಲಸ ಸಿಗಲ್ಲ, ನಿಮ್ ಮಕ್ಳು‌‌ ಓದಿ ಉದ್ಧಾರ ಆಗಬೇಕು ಅಂದರೆ ಇಂಗ್ಲೀಷ್ ಮೀಡಿಯಂ ಸೇರಿಸಿ ಅಂತ. ಆ ಕಾಲಕ್ಕೆ ಒಂದೊಂದೇ ಕಣ್ಮರೆಯಾಗುತ್ತಿದ್ದ ಸರ್ಕಾರಿ ಶಾಲೆಗಳು, ನಿಧಾನಕ್ಕೆ ಬೆಂಗಳೂರಿನಲ್ಲಿ ತೆರೆದುಕೊಳ್ಳುತ್ತಿದ್ದ ಐಟಿ / ಬಿಟಿ ಕಂಪನಿಗಳು, ಇವೆಲ್ಲದರ ಫಲವಾಗಿ, ಮನೆಯವರು ಅಚಾನಕ್ ಆಗಿ ಇಂಗ್ಲೀಷ್ ಮಾಧ್ಯಮ ಸೇರಿಸಿದರು. ಆದರೂ ಪಿಯುಸಿವರೆಗೂ ಕನ್ನಡ ಪಾಠ ಜೊತೆಯಲ್ಲಿತ್ತು, ಅದೊಂದೇ ಖುಷಿ. ಪಿಯುಸಿಯಲ್ಲಿದ್ದಾಗ ನವೆಂಬರ್ 1 ರಂದು ಬೆಳಿಗ್ಗೆಯೇ ಎದ್ದು ಕವನ ಬರೆಯಲು ಶುರು ಮಾಡಿದೆ. ಆ ಕವನ ಯಾವುದೋ ಹಾಳೆಯಲ್ಲಿ ಬರೆದಿಟ್ಟುಕೊಂಡಿದ್ದೆ. ಆಮೇಲೆ ‌ಎಲ್ಲೋ ತಪ್ಪಿ ಹೋಯಿತು. ಆಗೋದೆಲ್ಲಾ ಒಳ್ಳೆಯದಕ್ಕೆ ಅಂತ ಅದಿಕ್ಕೆ ಹೇಳಿರೋದು‌ ಅನಿಸುತ್ತೆ. ಯಾಕೆಂದರೆ ಅವತ್ತು ಆ ಕವನ ಕಳೆದು ಹೋಗಿರಲಿಲ್ಲ ಅಂದರೆ ಅದನ್ನು ನೀವು ಇವತ್ತು ಓದಬೇಕಾಗಿ ಬರುವ ಸಂಭವ ಇತ್ತು. ದೇವರು ದೊಡ್ಡವನು 

ಬೀದಿ‌ ನಾಟಕ, ಡೊಳ್ಳು ಕುಣಿತ, ಜಾತ್ರೆ, ಯಕ್ಷಗಾನ ಹೀಗೆ ಕನ್ನಡ ಭಾಷೆಗೆ ತನ್ನ ಸಂಸ್ಕೃತಿಯನ್ನು ಎತ್ತಿ‌ ಹಿಡಿಯುವ ಹಲವಾರು ಕಲಾ ಪ್ರಕಾರಗಳಿವೆ. ನಂತರ ನಾಟಕ, ಭಾವಗೀತೆ, ಸಿನಿಮಾಗಳ ಆಗಮನದಿಂದ ಈ ಕೆಲಸ ಹಾಗೆಯೇ ಮುಂದುವರಿಯಿತು. ಬದಲಾದ ಕಾಲದಲ್ಲಿ ಕನ್ನಡ ಭಾಷೆ ಎದುರಿಸುತ್ತಿರುವ ಸಮಸ್ಯೆಗಳೇನು, ಅದಕ್ಕೆ ಪರಿಹಾರಗಳೇನಿವೆ ಎಂದು ಯೋಚಿಸಬೇಕಿದೆ. ಮದುವೆ ಒಂದು ವಾರದವರೆಗೂ ನೆಡೆಯುತ್ತಿದ್ದ ಕಾಲ ಇತ್ತು. ಟೆಲಿಗ್ರಾಂನಲ್ಲಿ ತ್ವರಿತವಾಗಿ ಸಂದೇಶ ತಲುಪಿಸಲು ಪರದಾಡುವಂತಾಗಿತ್ತು‌. ಆದರೆ ಈಗ ತಂತ್ರಜ್ಞಾನ ಕ್ಷೇತ್ರದಲ್ಲಾಗಿರುವ ನೂತನ ಅವಿಷ್ಕಾರಗಳೊಂದಿಗೆ ಎಲ್ಲವೂ ಸರಳ ಹಾಗೂ ಸುಲಲಿತ. 2000 ಇಸವಿಯ ಸುಮಾರಿನಲ್ಲಿ ಮೊಬೈಲ್ ಫೋನ್ ಗಳಲ್ಲಿ ಕನ್ನಡ ಇರಲಿಲ್ಲ. ಬ್ಯಾಂಕ್ ಅರ್ಜಿಗಳು, ಸರ್ಕಾರಿ ಜಾಲತಾಣಗಳು, ಟಿವಿ ಜಾಹೀರಾತುಗಳು ಎಲ್ಲಾ ಕಡೆ ಇಂಗ್ಲೀಷ್ ರಾರಾಜಿಸುತ್ತಿತ್ತು. ಈ ವಿಷಯವಾಗಿ ಈಗ ಹಲವು ಕಡೆ ಉತ್ತಮ ಬೆಳವಣಿಗೆಗಳಾಗಿವೆ ಎಂದು ಹೇಳಲು ಖುಷಿಯಾಗುತ್ತದೆ. Regional Language Marketing ಅಂದರೆ ಪ್ರಾದೇಶಿಕ ಭಾಷೆಯಲ್ಲಿ ಮಾರಾಟ ಎಂಬ ಪ್ರಕ್ರಿಯೆಯಿಂದ ಹಲವಾರು ಬಹುರಾಷ್ಟ್ರೀಯ ಕಂಪನಿಗಳು ಕೂಡ ನಮ್ಮದೇ ಭಾಷೆಯಲ್ಲಿ ಸೇವೆಗಳನ್ನು ನೀಡುತ್ತಿವೆ. British Airways ವಿಮಾನದಲ್ಲಿ ಉಪ್ಪಿ 2 ಚಿತ್ರ ನೋಡಲು ಅವಕಾಶ ಇರುವುದೇ ಇದಕ್ಕೆ ಸಾಕ್ಷಿ. Facebook ಜಾಲತಾಣದಲ್ಲಿ ‘ಅಂಗಡಿಯಲ್ಲಿ ಕನ್ನಡ ನುಡಿ’ ಎಂಬುದೊಂದು ಪುಟ ಇದೆ. ಯಾವುದೇ ಸಂಸ್ಥೆ ತನ್ನ ಜಾಹೀರಾತು ಕನ್ನಡದಲ್ಲಿ ನೀಡಿಲ್ಲವಾದರೆ ಅದನ್ನು ಕನ್ನಡದಲ್ಲಿ ನೀಡಲು ಹೇಳಿ ಅವರ ಸಂಸ್ಥೆಗೆ ಮಿಂಚಂಚೆ ಬರೆದು ಒತ್ತಾಯಿಸುತ್ತಾರೆ. ಪದಾರ್ಥ ಚಿಂತಾಮಣಿ‌ ಎಂಬ ಗುಂಪಿನಲ್ಲಿ ಕಠಿಣ ಕನ್ನಡ ಪದಗಳ ಸರಿಯಾದ ಅಕ್ಷರ ಬಳಕೆ, ಅವುಗಳು ಉತ್ಪತ್ತಿ, ಬಳಕೆ ವಿಧಾನ, ಹಾಗೂ ಹೊಸ ಆಂಗ್ಲ ಪದಗಳಿಗೆ ಸೂಕ್ತ ಕನ್ನಡ ಪದಗಳನ್ನು ಸೂಚಿಸುವ ಕೆಲಸ ನೆಡೆಯುತ್ತದೆ. ಪ್ರತಿದಿನದ ಅತ್ಯಂತ ಸಾಮಾನ್ಯ ಪ್ರಶ್ನೆಗಳಿಂದ ಹಿಡಿದು ವಿಜ್ಞಾನ, ಸಮಾಜ ಸುಧಾರಣೆ, ವೇದಾಂತ ಹೀಗೆ ಹಲವಾರು ವಿಭಿನ್ನ ವಿಷಯಗಳ ಕುರಿತು ಹೆಚ್ಚು ಕಮ್ಮಿ ಎಲ್ಲಾ ಉತ್ತರಗಳು ದೊರೆಯುವ Quora ಜಾಲತಾಣದಲ್ಲಿ ‘ಕೋರಾ ಕನ್ನಡಿಗರ ಬಳಗ’ ಎಂಬ forum ಆಗಿ‌ ಅಲ್ಲಿ ಆಗಾಗ ಕಾವೇರಿ ಸಮಸ್ಯೆ, ಕನ್ನಡ ಚಿತ್ರಗಳಿಗೆ ಥಿಯೇಟರ್ ಸಮಸ್ಯೆ, ಥರದ ಗಂಭೀರ ಸಮಸ್ಯೆಗಳ ಚರ್ಚೆಗಳನ್ನೂ ಸೇರಿ, ಪೂರ್ಣಚಂದ್ರ ತೇಜಸ್ವಿ, ಭೈರಪ್ಪನವರ ಹಲವಾರು ಹಳೆ ಪುಸ್ತಕಗಳ ಕುರಿತು ಚರ್ಚೆಯಾಗುತ್ತದೆ. Google, Wikipedia, WhatsApp ಮುಂತಾದ ಹಲವಾರು ಸಂಸ್ಥೆಗಳ ಸೇವೆಗಳನ್ನು ಕನ್ನಡದಲ್ಲಿ ದೊರಕುವಂತೆ ಮಾಡಲು ಹಲವಾರು ಸಾಫ್ಟ್ವೇರ್ ಇಂಜಿನಿಯರ್ ಗಳು ಜಾಲತಾಣಗಳನ್ನು‌ ಕನ್ನಡಕ್ಕೆ ತರ್ಜಮೆಗೊಳಿಸುವ ಕೆಲಸದಲ್ಲಿ ಸದ್ದಿಲ್ಲದೆ ಭಾಗಿಯಾಗಿದ್ದಾರೆ. ಟ್ರೋಲ್ ಹೈಕ್ಳು, ನಮ್ಮ ಕರ್ನಾಟಕ ಮೀಮ್ಸ್ ನಂತಹ ಕನ್ನಡ ಟ್ರೋಲ್ ಪುಟಗಳು, All Ok, Chandan Shetty, MC Bijju ಅವರ ಕನ್ನಡ Rap ಹಾಡುಗಳು, ಕನ್ನಡ ಬಾಕ್ಸ್-ಆಫೀಸ್, ಟ್ರೋಲ್ ಸ್ಯಾಂಡಲ್ವುಡ್ ಹೆಸರಿನ ಸಿನಿಮಾ ಮಾಹಿತಿ‌ ಪುಟಗಳು, kannadagottilla.com ನಂತಹ ಕನ್ನಡ ಕಲಿಸುವ ಉತ್ಸಾಹಿ ಮನಸ್ಸುಗಳ ತಂಡಗಳು, ಲೋಕಲ್ ಕೇಬಲ್ ನಂತಹ ಮನೋರಂಜನಾ ಜಾಲತಾಣಗಳು ಕನ್ನಡ ಕಂಪನ್ನು‌ ಪಸರಿಸುವ ಕೆಲಸವನ್ನು ತಮ್ಮದೇ ಶೈಲಿಯಲ್ಲಿ ಮಾಡುತ್ತಿವೆ. ರಾಜ್ಯೋತ್ಸವದ ಸಂಭ್ರಮದ ಈ ದಿನದಂದು ನೀವು ಕನ್ನಡಪರ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಗಳಲ್ಲಿ ಭಾಗಿಯಾಗದೇ ಇದ್ದರೂ ಪರವಾಗಿಲ್ಲ; ಬೇರೆ ರಾಜ್ಯ, ದೇಶಗಳಲ್ಲಿ ಇದ್ದು ರಾಜ್ಯೋತ್ಸವಕ್ಕೆ ನಮ್ಮೂರಲ್ಲಿ ಇಲ್ಲವಲ್ಲಾ ಅಂತ ಕೊರಗುವುದು ಬೇಡ, ಈ ರೀತಿಯ ಹಲವು ನೂತನ ಕನ್ನಡ ಪರ ಕೆಲಸಗಳಲ್ಲಿ ಸದ್ದಿಲ್ಲದೆ ನಿಮ್ಮನ್ನು ನೀವು ತೊಡಗಿಸಿಕೊಳ್ಳುವುದರ ಮೂಲಕ ‘ರಾಜ್ಯೋತ್ಸವ’ವನ್ನು ‘ನಿತ್ಯೋತ್ಸವ’ವಾಗಿ‌ ಆಚರಿಸಬಹುದು. ಎಷ್ಟೇ ಆಗಲಿ, ಬದಲಾವಣೆ ನಮ್ಮಿಂದಲೇ ಶುರುವಾಗಬೇಕು, ಅಲ್ಲವೇ?

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..