1487

ಮೊಬೈಲ್ ಭೂತ !!

ಇದು ಇತ್ತೀಚಿಗಷ್ಟೇ ನಡೆದ ಘಟನೆ. ನೀವೂ ದಿನಪತ್ರಿಕೆಗಳಲ್ಲಿ ಓದಿರಬಹುದು. ಉಡುಪಿ ಜಿಲ್ಲೆಯ, ಕುಂದಾಪುರ ತಾಲೂಕಿನ, ವಂಡ್ಸೆ ಎಂಬ ಗ್ರಾಮದಲ್ಲಿ ನಡೆದಿದ್ದು. ಕೃಷಿಕನ ಮನೆಗೆ ತೆಂಗಿನಕಾಯಿ ಕೀಳಲು ಹೋದ ಕೆಲಸದವ, ತಾನು ಮರ ಏರುವಾಗ ತನ್ನ ಮೊಬೈಲ್ ನ್ನು ಜೊತೆಗೆ ಹಿಡಿದಿದ್ದ. ತೆಂಗಿನಕಾಯಿ ಕಿತ್ತ ನಂತರ ಮರೆತು ತನ್ನ ಮೊಬೈಲ್ ನ್ನು ಮರದಲ್ಲೇ ಇಟ್ಟು ಇಳಿದ. ಅವನ ಗ್ರಹಚಾರಕ್ಕೆ ಅದು ಆ ದಿನದ ಕೊನೇಯ ಮರವಾಗಿತ್ತು. ಕೆಲಸದ ಸಂಭಾವನೆ ಪಡೆದ ಆತ ನೇರವಾಗಿ ಮನೆಯ ಕಡೆ ಹೆಜ್ಜೆ ಹಾಕಿದ.

ಮೊಬೈಲ್ ಕಾಣೆಯಾಗಿರುವ ವಿಷಯ ತಿಳಿಯುವ ಹೊತ್ತಿಗಾಗಲೇ, ಸೂರ್ಯ ತನ್ನ ದೈನಂದಿನ ಕೆಲಸ ಮುಗಿಸಿದ್ದ, ಚಂದ್ರ ತನ್ನ ಕೆಲಸಕ್ಕೆ ಹಾಜರಾಗಿದ್ದ. ಕೂಡಲೇ ಬೇರೊಂದು ಮೊಬೈಲ್ ನಿಂದ ತನ್ನ ಮೊಬೈಲ್ ಗೆ ಕರೆ ಮಾಡಲು ಪ್ರಾರಂಭಿಸಿದ. ಇತ್ತ ತೆಂಗಿನ ಮರದ ಮೇಲಿಂದ ಮಗು ನಗುವ ಶಬ್ದ ಕೇಳಿದ ಕೃಷಿಕನ ಮನೆಯವರು ಮರದಲ್ಲಿ ಭೂತ ಅಡಗಿದೆ ಎಂದು ಗಾಭರಿಯಾದರು. ನಾಲ್ಕೈದು ಭಾರಿ ಪ್ರಯತ್ನಿಸಿದ ಕೆಲಸದವ ಸುಮ್ಮನಾಗಿ ಬಿಟ್ಟ. ಕೃಷಿಕನ ಮನೆಯವರಿಗೆ ಹೋದ ಜೀವ ಪುನಃ ಬಂದ ಅನುಭವ.

ಮಾರನೆ ದಿನ ಬೆಳ್ಳಂಬೆಳಗೆ ಎದ್ದ ಕೃಷಿಕ, ತಿಂಡಿಯೂ ತಿನ್ನದೇ, ನೇರವಾಗಿ ಜ್ಯೋತಿಷಿಯ ಮನೆ ಕಡೆ ಓಡಿದ. ನಡೆದ ಘಟನೆಯ ವಿವರ ಮಂಡಿಸಿದ. ವಿಷಯ ತಿಳಿದ ಜ್ಯೋತಿಷಿ, ಬಾಯಲ್ಲಿ ಏನೇನೊ ಮಣ ಮಣ ಮಂತ್ರ ಜಪಿಸಿ, ಅಲ್ಲಿ ಭೂತ ಇರುವುದಾಗಿ ತಿಳಿಸಿದ. ಜೊತೆಗೆ ಅದಕ್ಕೆ ಪೂಜೆಯೊಂದನ್ನು ಮಾಡಬೇಕಾಗಿ ತಿಳಿಸಿದ. ಇತ್ತ ಕೆಲಸದವ ಹಗಲಿನಲ್ಲಿ ಕೆಲಸ ಮುಗಿಸಿ, ರಾತ್ರಿಯ ವೇಳೆ, ನೆನಪಾದಾಗಲೆಲ್ಲ ಕರೆ ಮಾಡಲು ಪ್ರಾರಂಭಿಸಿದ. ಕೃಷಿಕನ ಮನೆಯವರಿಗೆ ಮತ್ತದೇ ಭಯ. ಪುನಃ ಜ್ಯೋತಿಷಿಯ ಹತ್ತಿರ ದೂರು. ಮತ್ತೆ ಪೂಜೆ…

ಹೀಗೆ ಮೂರ್ನಾಲ್ಕು ದಿನದ ನಂತರ ಮೊಬೈಲ್ ಸ್ವಿಚ್ ಆಫ್ ಆಯಿತು. ಆ ಕೆಲಸದವ ಕೃಷಿಕನ ಮನೆಗೆ ಬಂದಿದ್ದ. ಕೃಷಿಕ ಆತನಲ್ಲಿ ನಡೆದ ಘಟನೆಯ ಬಗ್ಗೆ ತಿಳಿಸಿದ. ಕೂಡಲೇ ಎಚ್ಚೆತ್ತ ಕೆಲಸದವ, “ಸ್ವಾಮೀ ಅದು ಭೂತ ಅಲ್ಲ. ನನ್ನ ಮೊಬೈಲ್. ಕಳೆದ ಬಾರಿ ಬಂದವ ಮರದಲ್ಲಿ ಮರೆತಿದ್ದೆ” ಎಂದ. ಕೂಡಲೇ ಮರ ಏರಿದ. ಮೊಬೈಲ್ ಕೆಳ ತಂದ. ಅವನ ಮುಖದಲ್ಲಿ ಮೊಬೈಲ್ ಸಿಕ್ಕ ಸಂತಸ. ಕೃಷಿಕನ ಮುಖದಲ್ಲಿ ಪುನರ್ಜನ್ಮದ ಭಾವ.

ಬನ್ನಿ… ಈ ಘಟನೆಯನ್ನು “ಉಳಿದವರು ಕಂಡಂತೆ” ಚಿತ್ರದ ಶೈಲಿಯಲ್ಲಿ ವಿಮರ್ಶೆ ಮಾಡೋಣ. ಕೃಷಿಕನ ನೆಲೆಯಲ್ಲಿ ನಿಂತು ನೋಡಿದರೆ, ಬರೇ ಭಯ. ತನ್ನ ಮಂಕು ಬುದ್ದಿಯಿಂದ ದಡ್ಡ ಆದ ಪರಿಯ ನೆನೆದು ಮುಜುಗರ. ಇನ್ನು ಕೆಲಸದವನ ಪ್ರಕಾರ ಏನೂ ನಡೆದಿಲ್ಲ. ಕಳೆದುಕೊಂಡ ಮೊಬೈಲ್ ಸಿಕ್ಕಿತು. ಇನ್ನೇನು ಬೇಕು? ಆದರೆ ಮುಖ್ಯವಾದ ವ್ಯಕ್ತಿಯಂದರೆ ಜ್ಯೋತಿಷಿ. ಒಂದೇ ದಿನದಲ್ಲಿ ಮೊಬೈಲ್ ಬಂದಾಗಿದ್ದರೆ, ಈತ ಎಲ್ಲರ ಪಾಲಿನ ದೇವರಾಗುತ್ತಿದ್ದ. ಆದರೆ ಆತನ ಗ್ರಹಚಾರಕ್ಕೆ ಹಾಗೆ ಆಗಲಿಲ್ಲ. ಬದಲಿಗೆ ಪೂಜೆಯ ನೆಪದಲ್ಲಿ ಹಣ ಸುಲಿಗೆ ಮಾಡಿ ಕೃಷಿಕನ ಕೆಂಗಣ್ಣಿಗೆ ಗುರಿಯಾದ.

ಹಾಗಾದರೆ ಮೊಬೈಲ್ ಭೂತ ಇರುವುದು ಸುಳ್ಳಾ? ಅದರ ಬಗ್ಗೆ ಯೋಚಿಸುವ ಅಗತ್ಯ ಇದೆಯಾ? ಅದರಿಂದ ನಮಗೇನಾದರೂ ತೊಂದರೆ ಇದೆಯಾ?…. ಖಂಡಿತವಾಗಿಯೂ ಮೊಬೈಲ್ ಭೂತ ಇದೆ. ಆದರೆ ಆ ತೆಂಗಿನಮರದಲ್ಲಾಗಲಿ ಅಥವಾ ಇನ್ವ್ಯಾವುದೋ ಮರದಲ್ಲಾಗಲಿ ಅಲ್ಲ. ಬದಲಾಗಿ, ನಮ್ಮ ನಿಮ್ಮೆಲ್ಲರ ಕೈಯಲ್ಲಿ. ಒಂದು ಸಾರ್ವಕಾಲಿಕ ಸತ್ಯದ ಮಾತಿದೆ,”ಪರಿವರ್ತನೆ ಜಗದ ನಿಯಮ” ಎಂಬುದಾಗಿ. ಹಾಗೆಯೇ ನಮ್ಮ ಜೀವನ ಕೂಡ. ಏನೂ ಇಲ್ಲದ ನಮ್ಮ ಜೀವನದಲ್ಲಿ, ಇಂದು ಮೊಬೈಲ್ ಎಲ್ಲವೂ ಆಗಿ ಬಿಟ್ಟಿದೆ. ಅದನ್ನು ಬಿಟ್ಟರೆ ಬದುಕೇ ಇಲ್ಲದಂತಾಗಿದೆ. ಪ್ರತಿ ವಿಷಯಕ್ಕೂ ಅದರ ಅವಶ್ಯಕತೆಯಿದೆ. ನಮ್ಮ ಜೀವನದ ದಿಕ್ಕನ್ನೇ ಬದಲಾಯಿಸಿದೆ ಈ ಮೊಬೈಲ್. ಒಟ್ಟಿನಲ್ಲಿ ಇದು ಭಯಾನಕ ಭೂತ. ಯಾವ ಪೂಜೆಗೂ ಜಗ್ಗದ ಅಪಾಯಕಾರಿ ಮತ್ತು ಉಪಕಾರಿ ಭೂತ. ಇನ್ನೂ ಹೇಳಬೇಕೆಂದರೆ, ನಾನು ಈ ಲೇಖನ ಬರೆದಿದ್ದು ಈ ಭೂತದಿಂದಲೇ !!!

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..