3907

A Working day-Daily ಆಫೀಸಿಗೆ ಹೋಗೋರಿಗೆ

ಸರಿದ ಕತ್ತಲು,ನೈಟ್ ಡ್ಯೂಟಿ ಮುಗಿಸಿ ,ಮನೆಯ ಕಡೆ ಹೊರಟ ಚಂದ್ರ,ಹಲ್ಲುಜ್ಜದೇ ಡ್ಯೂಟಿಗೆ ಹಾಜರಾದ ಸೂರ್ಯ,ನೆಚ್ಚಿನ ಹಾಡೊಂದನ್ನು ಅತಿ ಕರ್ಕಶವಾಗಿ ಹಾಡುವ ಮೊಬೈಲ್ ಅಲ್ರಾಂ,ಅದನ್ನು ಹುಡುಕುತ್ತಿರುವ ಬಲಗೈ ಬೆರಳುಗಳು,ಕಾಲಿಗೆ ಸಿಕ್ಕಿಕೊಂಡಿರುವ ಬೆಡ್ ಶೀಟ್,ಚಳಿಯಲ್ಲೂ ತಿರುಗುತ್ತಿರುವ ಟೇಬಲ್ ಫ್ಯಾನ್,ಒಂದಕ್ಕೊಂದು ಅಂಟಿಕೊಂಡಿರುವ ಕಣ್ಣ ರೆಪ್ಪೆಗಳು,ಆಗಲೇ ಎದ್ದು ಜಾಗಿಂಗ್ ಹೊಗಲೆದ್ದವರ ಸಾಕ್ಸ್ ನ ವಾಸನೆ,ಬಚ್ಚಲ ಮನೆಯಿಂದ ನೀರು ಹೋಗುವ ಶಬ್ದ,ಪಕ್ಕದ ಮನೆಯಲ್ಲಿ ದೋಸೆ ಹೊಯ್ಯುತ್ತಿರುವ ಶಬ್ಧ,ಅಳುವ ಮಗು,ಮತ್ತೆ ಸೈಲೆಂಟ್ ಆಗೇ ಸಮಯ ನೆನೆಪಿಸುವ ಗಡಿಯಾರ,ಆಫೀಸ್ ಕ್ಯಾಬ್ ಡ್ರೈವರ್ ನ ಮಿಸಡ್ ಕಾಲ್ ಗಳು,ವಾಪಸ್ಸು ಫೋನ್ ಮಾಡಿದಾಗ ಕೇಳಿದ “ಅನಾಥ ಮಗುವಾದೆ ನಾನು”ಕಾಲರ್ ಟ್ಯೂನ್.ಶರ್ಟಿಗೆ ಮ್ಯಾಚ್ ಆಗದ ಪ್ಯಾಂಟು,ಹೀಟ್ ಆಗದ ಇಸ್ತ್ರಿ ಪೆಟ್ಟಿಗೆ,ಕೈಯಿಂದ ಜಾರಿ ಮಲಗಿದ್ದ ರೂಮ್ ಮೇಟ್ ಮೇಲೆ ಬಿದ್ದ ಫರ್ಪ್ಯೂಮ್ ಬಾಟಲಿ,ಸಾರ್ರಿ ಈಗ ಕೇಳಲೋ ರಾತ್ರಿ ಬಂದ ಮೇಲೆ ಕೇಳಲೋ ಎನ್ನುವ ಕನ್ ಫೂಷನ್,ಒಂದು ಸಿಕ್ಕಿದೆ ಇನ್ನೊಂದು ಸಿಗದ ಸಾಕ್ಸ್ ಜೋಡಿ,ರೂಮಿನಿಂದ ಕೆಳಗಿಳಿಯುವಾಗ ಅಡ್ಡ ಬರುವ ಕೆಳಗಿನ ಮನೆಯ ದಪ್ಪ ಆಂಟಿ,ಮನೆಯ ಬಾಗಿಲ ಕೆಳಗೆ ಬಿದ್ದಿರುವ ವಿಜಯ ಕರ್ನಾಟಕ ಪೇಪರ್,ನಾಲ್ಕನೇಯ ಮಹಡಿಗೂ ಸ್ಕೂಟರ್ ನಿಂದಲೇ ನಿಖರವಾಗಿ ಪೇಪರ್ ಎಸೆಯುವ ಪೇಪರ್ ಹುಡುಗ,ಕ್ಯಾಬ್ ನಲ್ಲಿ ಫುಷ್ ಬ್ಯಾಕ್ ಮಾಡಲಾಗದ ಸೀಟು,ಡ್ರೈವರ್ ಹಾಕಿದ ಫಸ್ಟ್ ಸೆಕೆಂಡ್ ಗೇರು,ಕೀಕ್ ಕೀಕ್ ಹಾರನ್,ಪಕ್ಕದಲ್ಲಿ ಬಂದು ನಿಂತ ಶಾಲಾವಾಹನ,ಹೊರ ಪ್ರಪಂಚವನ್ನೆ ದಿಟ್ಟಿಸುತ್ತಿರುವ ಪುಟ್ಟ ಪುಟ್ಟ ಕಣ್ಣುಗಳು,ಪಾರ್ಕಿನ ಎದುರು ಮಾರುತ್ತಿರುವ ಟೊಮ್ಯಾಟೊ,ಅಲೂಗಡ್ಡೇ ಕ್ಯಾರೇಟ್,ಜಾಗಿಂಗ್ ಮುಗಿಸಿ ಮನೆಗೆ ಹೋಗುತ್ತಿರುವ ಆಂಟಿಯ ಟೈಟ್ ಬಟ್ಟೆ, ಅವಳನ್ನೇ ನೋಡುತ್ತಾ ನಿಂತಿರುವ ಎಳೆನೀರು ಮಾರುವ ಹುಡುಗ.ಕಂಕುಳಲ್ಲಿ ಮಗುವ ಹಿಡಿದು ಭಿಕ್ಷೆ ಬೇಡುತ್ತಿರುವ ಹೆಂಗಸು,ಕಲರಿಂಗ್ ಮಾಡಿಸದೇ ಕೆಂಪಗಿರುವ ಅವಳ ಕೂದಲು,ಬೇಕಾದ ಹಾಗೆ ಬಂದವರಿಗೆ ಅಮ್ಮ,ಅಕ್ಕನ ನೆನಪಿಸುವ ಟ್ರಾಫಿಕ್ ಪೋಲಿಸ್,ಕೆಂಪಿನಿಂದ ಹಸಿರಿಗೆ ತಿರುಗಿದ ಸಿಗ್ನಲ್ ಲೈಟ್,ಬುರ್ರನೆ ಹೊರಟ ಟೂ ವೀಲರ್ಸ್,ನೋಡಿದಷ್ಟೂ ಕಾಣುವ ಜಾಮ್,ಗಾಡಿ ಆಫ್ ಮಾಡಿ ಆಕಳಿಸುವ ಡ್ರೈವರ್,ಪಕ್ಕದ ವೋಲ್ವೋದಲ್ಲಿ ಹೆಡ್ ಫೋನ್ ಹಾಕಿಕೊಂಡು ಮಲಗಿರುವ ಸುಂದರ ಯುವತಿ,ಅವಳ ಮೂಗುತಿ ಹೇಳುವ ಕವನಗಳು,ಹೊಂಡ ತಪ್ಪಿಸಲು ಹೋಗಿ ಆಟೋಗೆ ಗುದ್ದಿದ ಯುವಕ,ಅವನ ಮೀಸೆ ಮೇಲಿರುವ ಕೊಬ್ಬು,ಗೋಡೆಯ ಮೇಲೆ ನಾಲ್ಕನೇಯ ವಾರ ಒಡುತ್ತಿರುವ ಹೆಸರೇ ಕೇಳದ ಸಿನಿಮಾದ ಪೋಸ್ಟರ್,ಎದೆ ಕಾಣುವಂತೆ ಬಟ್ಟೆ ಹಾಕಿರುವ ಹೀರೋಯಿನ್,ಒಂದರ ಮೇಲೊಂದು ಅಡ್ಡಾದಿಡ್ಡಿಯಾಗಿ ಮಲಗಿರುವ ಫ್ಲೈಓವರ್ಸ್,ಬೆಳ್ಳಗೆ ಕಾಣುತ್ತಿರುವ ಕಪ್ಪು ರಾಜಕಾರಿಣಿಯ ಪೋಸ್ಟರ್,ಬಸ್ಸು ಬರುತ್ತಲೇ ಮುಗಿ ಬಿದ್ದ ಜನ,ಇಪ್ಪತ್ತು ಕಿ ಮೀ ಗೆ ಎರಡು ತಾಸಿನ ದಾರಿ,ಅಂತೂ ಇಂತು ಬಂದ ನಾವು ಇಳಿಯಬೇಕಾದ ಸ್ಟಾಪು,ಕಂಪನಿಯ ಎದುರಿನ ಅಂಗಡಿಯವನ ಕೈಯಲ್ಲಿರುವ ತುಂಡು ಬೀಡಿ,ಗೇಟಿನ ಹೊರಗೆ ನಿಂತು ಗೇಟು ತೆರೆಯಲೆಂದೇ ಸೆಕ್ಯೂರಿಟಿ ಗಾರ್ಡಿಗೆ ಕಾಯುತ್ತಿರುವ ಬಿ ಎಂ ಡಬ್ಲ್ಯೂ,ಕೈಗೆ ಸಿಗದ ಐ ಡಿ ಕಾರ್ಡ್,ಹುಡುಕುವಾಗ ಬ್ಯಾಗಿನಲ್ಲಿ ಸಿಕ್ಕ ಕಚ್ಚಾ ಮ್ಯಾಂಗೊ ಚಾಕಲೇಟ್,ಕಂಪನಿಯ ಮೇಲೆ ಹಾರಾಡುತ್ತಿರುವ ಭಾರತದ ಬಾವುಟ,ಪಕ್ಕದಲ್ಲಿ ಪಾರಿವಾಳ,ರಿಸೆಪ್ಷನ್ ನಲ್ಲಿ ಸತ್ತ ಹೂವಿನ ಸುಂದರವಾದ ರಂಗೋಲಿ,ಫೈಲು ಹಿಡಿದು ಇಂಟರ್ವೀವ್ ಗಾಗಿ ಕಾದು ಕುಳಿತಿರುವ ಹುಡುಗ ಮುಖದ ಮೇಲಿನ ಆತಂಕ,ನಿನ್ನೆಕಿಂತ ಐದು ಗ್ರಾಮ್ ಹೆಚ್ಚು ಲಿಪ್ ಸ್ಟಿಕ್ ಹಾಕಿರುವ ಹೆಚ್ ಆರ್ ಸಡನ್ ಆಗಿ ಸಿಕ್ಕಾಗ ಆಗುವ ಭಯ,ವಾಷ್ ರೂಮಿನಿಂದ ಬೆಲ್ಟ್ ಸರಿಪಡಿಸಿಕೊಳ್ಳುತ್ತಾ ಹೊರ ಬರುತ್ತಿರುವ ಸಹದ್ಯೋಗಿ,ಕೃತಕ ಸ್ಮೈಲು, ಗುಡ್ ಮಾರ್ನಿಂಗ್ ,ಹವ್ ಆರ್ ಯು?,ಐ ಯಾಮ್ ಗ್ರೇಟ್,ಸೀಟಿನಲ್ಲಿ ನಿನ್ನೆಯ ದೂಳು,ಮೆಲ್ಲಗೆ ಕಣ್ಣ ರೆಪ್ಪೆಯ ಹಾಗೆ ತೆರೆದುಕೊಳ್ಳುವ ಲ್ಯಾಪ್ ಟಾಪ್,ಐವತ್ತು ಅರವತ್ತು ಮೇಲ್ ಗಳು,ಮೌಸ್ ಸರಿಸಿದರೂ ಸರಿದಾಡದ ಕರ್ಸರ್,ಓಪನ್ ಮಾಡಿ ಇತ್ತ ಫೇಸ್ಬುಕ್ ಪೇಜ್,ಎರಡು ರಿಂಗ್ ಆಗಿ ಕಟ್ ಆಗುವ ಅಮ್ಮನ ಫೋನ್ ,ದೂರದಲ್ಲೆಲ್ಲೋ ಇರುವ ಗಂಡನಿಗೆ ಫೋನ್ ಮಾಡಿ ಬೈಯುತ್ತಿರುವ ಸಹದ್ಯೋಗಿ,ಹೆಚ್ಚಾದ ಏಸಿ,ಅರ್ಧ ಗಂಟೆಯಲ್ಲಿ ಆರಂಭವಾಗುವ ಮೀಟಿಂಗ್, ಕಾಲ್ ,ಇಂಗ್ಲಿಷ್ ನಲ್ಲಿ ಮಾತನಾಡಲು ಒದ್ದಾಡುವ ಚೀನಿ ಮತ್ತು ಜಪಾನಿಗರ ಆ…ಆ…ಆ..,ಹೂ ಜಾಯಂಡ್ ,ಕ್ಯಾನ್ ಯು ಹಿಯರ್ ಮೀ?ಅಪಡೇಟ್ಸ್,ಇಷುಸ್,ನೋಡು ನೋಡುತ್ತಲೇ, ಊಟಕ್ಕೆ ಕರೆಯಲು ಬರುವ ಗೆಳೆಯ,ಫೇಸ್ ಬುಕ್ ಪೇಜ್ ತೆರೆದರೆ ಪ್ರೊಫೈಲ್ ಪಿಕ್ ಗೆ ಬಂದಿರುವ ಅರವತ್ತ ಒಂಬತ್ತು ಲೈಕ್ ,ಎರಡು ಕಾಮೆಂಟ್ಗಳು,ಎಲ್ಲ ಪಧಾರ್ಥದ ಮಿಶ್ರಿತ ಕ್ಯಾಂಟಿನಿನ ವಾಸನೆ/ಪರಿಮಳ,ಚಪಾತಿಯನ್ನು ಕೈಯಲ್ಲಿ ತಿಂದು ಅನ್ನವನ್ನು ಚಮಚದಲ್ಲಿ ತಿನ್ನುತ್ತಿರುವ ಜನ,ಊಟಕ್ಕೆ ಕಾದಿರುವವರ ಸಾಲು,ತಟ್ಟೆಯ ಮೇಲೆ ಮಲಗಿರುವ ಟೀಷು ಪೇಪರ್.ಬಡಿಸುತ್ತಿರುವ ಹುಡುಗನ ಕೈಯಲ್ಲಿರುವ ಚಪಾತಿ.ಊಟ ಕಡಿಮೆ ಮಾತು ಹೆಚ್ಚು,ನಿದಿರೆಯ ಮಬ್ಬು,ಚಾರ್ಜ್ ಖಾಲಿ ಆದ ಲ್ಯಾಪ್ ಟಾಪ್, A4 ಶೀಟ್ ಹುಡುಕುತ್ತಿರುವ ಮ್ಯಾನೇಜರ್,ರೇಸುಮೆ ಕಳಿಸಿದ್ದೇನೆ ಕೆಲಸ ಕೊಡಿಸಿ ಎಂದು ಪಿಂಗ್ ಮಾಡುವ ಕಾಲೇಜ್ ಜೂನಿಯರ್,ಚಹಾ ಮಾಡುವ ಹುಡುಗನ ಜೋರಾದ ರಿಂಗ್ ಟೋನ್,ಮುಗಿಯದ ಕೆಲಸ ಮುಗಿದ ಕೆಲಸ,ಮುಗಿಸದ ಕೆಲಸ,ಮೆಲ್ಲಗೆ ಮನೆಗೆ ಹೊರಟ ಡಸ್ಟರ್ ,ಇನ್ನೋವ್ವಾ,ಸ್ವಿಫ್ಟ್, XUV ಕಾರುಗಳು,ಡ್ಯೂಕ್,ಪಲ್ಸರ್,ಬುಲೆಟ್,ಹೀರೋಹೊಂಡ,ಹೊಂಡ ಯಾಕ್ಟಿವಾ ಬೈಕುಗಳು,ಹೊರಡಲು ತಯಾರಾದ ಸಂಜೆ,ಮುಚ್ಚುತ್ತಿರುವ ಲ್ಯಾಪ್ ಟಾಪ್ ಬ್ಯಾಗ್ ನ ಜಿಪ್ಪು,ಬಾಯ್,ಸಿಯು,ಟೆಕ್ ಕೇರ್,ಮನದ ನಿರಾಳತೆ,ದಿನವಿಡೀ ಪ್ರಾಮಾಣಿಕವಾಗಿ ದುಡಿದ ಮುಗ್ದತೆ,ರಸ್ತೆಯಲ್ಲಿ ಸಾಲು ಗಟ್ಟಿ ನಿಂತಲ್ಲೇ ನಿಂತಿರುವ ವಾಹನ,ಓಲಾ ಕ್ಯಾಬ್ ಗೆ ಕಾಯುತ್ತಿರುವ ಸುಂದರ ಹುಡುಗಿ,ಗಾಳಿಗೆ ಹಾರಾಡುತ್ತಿರುವ ಅವಳ ಮುಂಗುರುಳು,ರಸ್ತೆ ದಾಟಲು ಕಾಯುತ್ತಿರುವ ಮೂರು ಹುಡುಗಿಯರು ಮತ್ತು ಒಬ್ಬ ಹುಡುಗ,ವೋಲ್ವೋ ಬಿಟ್ಟು ಬಿ ಎಂ ಟಿಸಿ ಹತ್ತಿದವ,ನಾವು ಹತ್ತುವ ಕ್ಯಾಬು,ರಸ್ತೆಯ ತುಂಬಾ ಬಣ್ಣ ಬಣ್ಣದ ಬಿಂದು ಹುಳುಗಳ ಹಾಗೆ ನಿಂತಿರುವ ವಾಹನಗಳು,ತಮ್ಮ ತಮ್ಮ ಸ್ಟಾಪಿನಲ್ಲಿ ಇಳಿಯುವ ಸಹದ್ಯೋಗಿಗಳಿಗೆ ಬಾಯ್ ಹೇಳುತ್ತಿರುವ ಡ್ರೈವರ್,ಕಿಟಕಿ ತೆಗೆದರೆ ಬರುವ ತಂಗಾಳಿ,ಅರ್ಧ ಲೀಟರ್ ಮೊಸರು ತಾ ಎಂದು ಮನೆಯಿಂದ ಬರುವ ಫೋನ್ ಕಾಲ್,ಜೇಬಲ್ಲಿರುವ ನಡೆಯದ ಐನೂರು ರೂಪಾಯಿ ನೋಟು,ಅರ್ಧ ಮುಚ್ಚಿರುವ ಎಟಿಎಂ ಬಾಗಿಲು,ಫುಟ್ ಬಾತ್ ಮೇಲಿನ ರೈಸ್ ಬಾತ್ ,ಇಡ್ಲಿ ಅಂಗಡಿಯ ಪರಿಮಳ,ಮನೆಯಲ್ಲಿ ಊಟಕ್ಕೇನು ಎನ್ನುವ ಚಿಂತೆ,ಚಾರ್ಜ್ ಖಾಲಿಯಾಗಿ ಸ್ವಿಚ್ ಆಫ್ ಆದ ಮೊಬೈಲ್ ಫೋನ್,TV9,ಸುವರ್ಣ,ಪಬ್ಲಿಕ್,ಪ್ರಜಾ,ಜನಶ್ರಿ,ಟೀವಿಗಳ ಮತ್ತೆ ಮತ್ತೆ ಪ್ರಸಾರವಾಗುವ ಒಂದೇ ನಿವ್ಸ್,ರಿಮೋಟ್ ಹುಡುಕುತ್ತಿರುವ ರೂಮ್ ಮೇಟ್,ಅನ್ನಕ್ಕೆ ಇಟ್ಟ ಕುಕ್ಕರ್ ಸೀಟಿ,ಮಲಗಲು ಸಿದ್ದವಾಗುವ ಗಡಿಯಾರ,ನೈಟ್ ಡ್ಯೂಟಿಗೆ ಹೊರಡುವ ಇನ್ನೊಬ್ಬ ರೂಮ್ ಮೇಟ್,ಮುಚ್ಚಿಕೊಳ್ಳುವ ಬಾಗಿಲ ಲ್ಯಾಚ್,ಆನ್ ಆಗುವ ಫ್ಯಾನ್,ಆಫ್ ಆಗುವ ಜೀವ,ರಾತ್ರಿಯಲಿ ಬೀಳುವ ಕನಸುಗಳ ಜೊತೆ ನಾವು ಕಂಡ ಕನಸುಗಳ ಕಲಹ,ಇಂದಿಗೆ ವಿದಾಯ,ನಾಳಿನ ಭಯ,ಕುತೂಹಲ ಮತ್ತೊಂದು,ಮತ್ತೆ ನೆಚ್ಚಿನ ಹಾಡನ್ನು ಕರ್ಕಶವಾಗಿ ಹಾಡುವ ಅಲ್ರಾಂ.

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..