- By Guest Writer
- Sunday, January 8th, 2017
ಕರಾವಳಿ ಕರುನಾಡಿನ ಹೆಮ್ಮೆಯ ಯುವ ಪೇಪರ್ ಆರ್ಟ್ ಕಲಾವಿದ ರವಿ ಪ್ರಸಾದರ ಕಲಾಕುಂಚದಲ್ಲಿ ಮೂಡಿಬಂದ ಪೇಪರ್ ಆರ್ಟ್ ಗಳ ಸಂಖ್ಯೆ ಐನೂರರ ಗಡಿ ದಾಟುತ್ತಿರುವುದು ಒಂದು ಹೆಮ್ಮೆಯ ಸಾಧನೆಯೇ ಸರಿ!!
ಕಲೆ ಎಲ್ಲರಿಗೆ ಇಷ್ಟವಾಗುತ್ತದೆ ನಿಜ. ಆದರದು ಒಲಿದು ಬರುವುದು ಕೆಲವರಿಗೆ ಮಾತ್ರ. ಅದರಲ್ಲೂ ತೀರಾ ಏಕಾಗ್ರತೆ ಮತ್ತು ಕ್ರೀಯಾಶೀಲತೆಯೇ ಬಂಡವಾಳವಾಗಿರುವ ಪೇಪರ್ ಕಟ್ಟಿಂಗ್ ಎಂಬ ಈ ಕಲೆ ನಿಜವಾಗಲೂ ರವಿ ಪ್ರಸಾದರಿಗೆ ಪ್ರಕೃತಿದತ್ತವಾಗಿ ಒಲಿದು ಬಂದಿದೆ ಎಂದರೆ ಅದು ಅತಿಶಯದ ಮಾತಾಗದು.
ಹಲವು ಸೊಜಿಗದ ವಿದ್ಯಮಾನಗಳು ರವಿ ಪ್ರಸಾದರ ಈ ಕಲಾನೈಪುಣ್ಯಕ್ಕೆ ಉಂಟು. ತಿಳಿಯುತ್ತಾ ಹೋದರೆ ಕ್ಷಣ ನಮಗೆ ಬೆರಗಾದಿತು.
ಯಾವುದೇ ಕಲೆಗಾರ ಅರಳಬೇಕಾದರೆ ಅವನಿಗೊಬ್ಬ ಗುರು ಬೇಕು. ಗುರುವಾದವನು ತಪ್ಪುಗಳನ್ನು ತಿದ್ದಿ ತೀಡಿದರೆ ಮಾತ್ರ ಒಬ್ಬ ಒಳ್ಳೆಯ ಕಲೆಗಾರ ಹುಟ್ಟುತ್ತಾನೆ ಅನ್ನುವ ಮಾತಿದೆ. ಆದರೆ ಈ ಮಾತು ರವಿ ಪ್ರಸಾದರ ವಿಚಾರಕ್ಕೆ ಬಂದರೆ ಮಾತ್ರ ಇದು ತದ್ವಿರುದ್ಧವಾಗಿ. ಅರಿವಿನ ಮಾರ್ಗ ತೋರಿಸುವ ಗುರುವೇ ಇಲ್ಲದೆ ಸ್ವ ಪ್ರಯತ್ನದಿಂದ ಈ ಕಲೆಯನ್ನು ದಕ್ಕಿಸಿಕೊಂಡ ರವಿ ಅವರಿಗೆ ಅವರೇ ಗುರು. ತಮ್ಮ ತಪ್ಪುಗಳನ್ನ ತಾವೇ ತಿದ್ದಿಕೊಳ್ಳುತ್ತಾ ದಿನ ದಿನವೂ ಬೆಳೆದು ನಿಂತ ಆದುನಿಕ ಏಕಲವ್ಯನ ಹಾಗೇ. ಈ ಕಾರಣಕ್ಕಾಗಿ ರವಿ ಪ್ರಸಾದ್ ಅಭಿನಂದನೆಗೆ ಅರ್ಹರು.!!
ಹಲವು ಜನರಿಗೆ ಅವರು ಮಾಡುವ ವೃತ್ತಿ ಅವರೊಳಗಿನ ಪ್ರವೃತ್ತಿಯನ್ನು ಬೆಳೆಸುತ್ತದೆ. ಒಬ್ಬ ಕನ್ನಡ ಶಿಕ್ಷಕ ಕಥೆ ಕವನ ಬರೆದರೆ ಅದು ವಿಶೇಷ ಅಲ್ಲ. ಅವನ ವೃತ್ತಿಗೆ ಅದು ಅನುರೂಪ, ಸಹಜ. ಆದರೆ ರವಿ ಪ್ರಸಾದ್ ಬದುಕಿಗೆ ಅರಸಿಕೊಂಡದ್ದು ಅತ್ಯಂತ ಕಠಿಣ ಪರಿಶ್ರಮದ ಕಟ್ಟಡ ನಿರ್ಮಾಣದ ಮೇಲ್ವಿಚಾರಕ ವೃತ್ತಿಯನ್ನು. ಆದರೆ ಅವರ ಪ್ರವೃತ್ತಿ ಅತ್ಯಂತ ಸೂಕ್ಷ್ಮ ಮನಸ್ಸಿನವರಷ್ಟೆ ರೂಪಿಸಬುಹುದಾದ ಗೆರೆಗಳ ಚಿತ್ತಾರದ ಪೇಪರ್ ಕಟ್ಟಿಂಗ್ ಕ್ರಾಫ್ಟ್..ಈ ಕಾರಣಕ್ಕಾಗಿಯೂ ಆಚಾರ್ ಅಭಿನಂದನಾರ್ಹರು.!!
ಸುಮಾರಾಗಿ ಇಂತಹ ಪೇಪರ್ ಕಟ್ಟಿಂಗ್ ಕಲೆಗಳು ಕಲೆಗಾರರ ಬಿಡುವಿನ ಸಮಯದಲ್ಲಿ ಪ್ರಶಾಂತ ಮನಸ್ಥಿತಿಯಲ್ಲಿ ಅರಳುತ್ತವೆ. ಇಲ್ಲಿಯೂ ರವಿ ಪ್ರಸಾದರ ಕಲೆ ಭಿನ್ನವಾಗಿ ನಿಲ್ಲುತ್ತದೆ. ಕಾರಣ ಹಗಲಿಡಿ ಕಷ್ಟಪಟ್ಟು ಬಿಸಿಲಲ್ಲಿ ದುಡಿಯುವ ರವಿ ಅವರಿಗೆ ಸಮಯ ಸಿಗುವುದೇ ರಾತ್ರಿ ಮಾತ್ರ. ಅದು ಎಲ್ಲರು ಊಟ ಮಾಡಿ ಮಲಗಿದ ಮೇಲೆ ರವಿ ಕಾಗದ ಕತ್ತರಿ ಹಿಡಿದು ಕಟ್ಟಿಂಗ್ಸ್ ನಲ್ಲಿ ತೊಡಗಿಸಿಕೊಳ್ಳುತ್ತಾರೆ.. ಅತ್ಯಂತ ಏಕಾಗ್ರಚಿತ್ತದಿಂದ ಗೆರೆಗಳ ಚಿತ್ತಾರ ಬರೆಯುತ್ತಾರೆ. ಮುಗಿಯುವಾಗ ಬೆಳಾಗದರೂ ಆದೀತು. ಈ ಕಾರಣಕ್ಕಾಗಿಯೂ ರವಿ ಅಭಿನಂದನಾರ್ಹರು!
ಗ್ರಾಮೀಣ ಪ್ರತಿಭೆಗಳು ಎಂಬ ದೊಡ್ಡ ಪಟ್ಟಿಯನ್ನು ಹಾಕಿ ಪೇಟೆ ಪಟ್ಟಣದಲ್ಲಿ ಐಶರಾಮಿ ಬದುಕು ನೆಡೆಸುವ ಹಲವು ಕಲಾವಿದರು ನಮ್ಮಲ್ಲಿದ್ದಾರೆ. ಆದರೆ ನಿಜವಾದ ಗ್ರಾಮೀಣ ಪರಿಸರದಲ್ಲಿ ಅರಳಿದ ಪ್ರತಿಭೆ ಅಂದರೆ ಅದು ರವಿ. ಅವರು ಶಾಲೆಯಲ್ಲಿ ಕಲಿತದ್ದು ಕಡಿಮೆ.. ಆದರೆ ಸ್ವಂತ ಪ್ರಯತ್ನದಿಂದ ಅವರು ತುಂಬಾ ಕಲಿತಿದ್ದಾರೆ. ಪೇಟೆ ಪಟ್ಟಣದ ಪ್ರತಿಭೆಗಳಿಗೆ ಮಾತ್ರ ಒಲಿದು ಬರುತ್ತಿದ್ದ ಪೇಪರ್ ಕಟ್ಟಿಂಗ್ ಕಲೆಯನ್ನು ಗ್ರಾಮೀಣ ಪರಿಸರದ ತಾವು ಕಲಿತು ಇನ್ನೊಬ್ಬರಿಗೆ ಕಲಿಸುವ ಹಂತಕ್ಕೆ ಬೆಳೆದಿದ್ದಾರೆ. ಈ ಕಾರಣಕ್ಕಾಗಿಯೂ ಅಭಿನಂದನಾರ್ಹರು!
ಸೋ.. ಇಂತಹ ನಿಜವಾದ ಪ್ರತಿಭೆಯನ್ನು ನಮ್ಮ ಸಮಾಜದ ಸಂಘ ಸಂಸ್ಥೆಗಳು ಗುರಿತಿಸಬೇಕಿದೆ. ಅವರ ಪೇಪರ್ ಅರ್ಟ್ ಕಲೆಗಳ ಬೃಹತ್ ಪ್ರದರ್ಶನ ಎರ್ಪಡಿಸಿ ಸಮಾಜದ ಮಂದಿಗೆ ಅವರ ಪ್ರತಿಭೆಯ ಆಳ ಅಗಲವನ್ನು ತಿಳಿಸುವ ಕೆಲಸ ಇನ್ನೂ ಪರಿಣಾಮಕಾರಿಯಾಗಿ ಆಗಬೇಕಿದೆ.
ಒಟ್ಟಿನಲಿ ಹೇಳುವುದಾದರೆ ಸಾಧನೆಯ ಹಾದಿಯಲಿ ಸಾವಿರ ಮುಳ್ಳುಗಳು ಸಹಜ. ಸಾಧಿಸುವ ದೃಡ ಮನಸ್ಸು ನಮಗಿರೆ ಅವೆಲ್ಲವೂ ಹೂಗಳೇ ಅನ್ನುವುದಕ್ಕೆ ರವಿ ಪ್ರಸಾದ್ ಒಂದು ದೊಡ್ಡ ಉದಾಹರಣೆ.
ಇವರ ಪೇಪರ್ ಆರ್ಟ್ ಕಲೆ ನಿತ್ಯವೂ ನೂತನವಾಗಿ ಮೂಡಿಬರಲಿ ಎಂಬ ಮನದಾಳಾದ ಹಾರೈಕೆ ನಮ್ಮೆಲ್ಲರದಾಗಲಿ. ಏನಂತೀರಿ
ಅವರ ಪ್ರೊಫೈಲ್ ಗೆ ಭೇಟಿ ಕೊಟ್ಟು ಅವರ ಕಲೆಯನ್ನು ನೋಡಿ https://www.facebook.com/ravi.prasadachar