15068

ಜಿ.ಎಸ್.ಶಿವರುದ್ರಪ್ಪನವರು ಬರೆದ ಕಾಣದಾ ಕಡಲಿಗೆ ಹಂಬಲಿಸಿದೆ ಮನ ಎಂಬ ಹಾಡಿನ ಪೂರ್ಣ ಅರ್ಥ

ಜಿ.ಎಸ್.ಶಿವರುದ್ರಪ್ಪನವರು ಬರೆದ ಕಾಣದಾ ಕಡಲಿಗೆ ಹಂಬಲಿಸಿದೆ ಮನ ಎಂಬ ಹಾಡಿನ ಪೂರ್ಣ ಅರ್ಥ ತಿಳಿಯುವ ಕಾತರವಿತ್ತು. ಹಿರಿಯರೊಬ್ಬರಿಗೆ ಕೇಳಿದೆ. ಅವರ ಅಭಿಪ್ರಾಯ ಮತ್ತು ನನ್ನ ಬೌದ್ಧಿಕ ಮಟ್ಟಕ್ಕೆ ನಿಲುಕಿದಷ್ಟು ಅದರ ವಿಮರ್ಶೆ ಅನ್ನುವುದಕ್ಕಿಂತ ಸಾರಾಂಶ ಬರೆಯಬಹುದು.
ಹಾಡು ಇಂತಿದೆ

ಕಾಣದ ಕಡಲಿಗೆ ಹಂಬಲಿಸಿದೆ ಮನ….
ಕಾಣಬಲ್ಲೆನೆ ಒಂದು ದಿನ?
ಕಡಲನು ಕೂಡಬಲ್ಲೆನೆ ಒಂದು ದಿನ?

ಕಾಣದ ಕಡಲಿನ ಮೊರೆತದ ಜೋಗುಳ
ಒಳಗಿವಿಗಿಂದು ಕೇಳುತಿದೆ.
ನನ್ನ ಕಲ್ಪನೆಯು ತನ್ನ ಕಡಲನೆ
ಚಿತ್ರಿಸಿ ಚಿಂತಿಸಿ ಸುಯ್ಯುತಿದೆ.
ಎಲ್ಲಿರುವುದೋ ಅದು, ಎಂತಿರುವುದೋ ಅದು
ನೋಡಬಲ್ಲೆನೇ ಒಂದು ದಿನ,
ಕಡಲನು ಕೂಡಬಲ್ಲೆನೆ ಒಂದು ದಿನ?

ಸಾವಿರ ನದಿಗಳು ತುಂಬಿ ಹರಿದರೂ,
ಒಂದೇ ಸಮನಾಗಿಹುದಂತೆ.
ಸುನೀಲ, ವಿಸ್ತರ, ತರಂಗಶೋಭಿತ,
ಗಂಭೀರಾಂಬುಧಿ ತಾನಂತೆ.
ಮುನ್ನೀರಂತೆ, ಅಪಾರವಂತೆ.
ಕಾಣಬಲ್ಲೆನೆ ಒಂದು ದಿನ?
ಅದರೊಳು ಕರಗಲಾರೆನೆ ಒಂದು ದಿನ?

ಜಟಿಲ ಕಾನನದ ಕುಟಿಲ ಪಥಗಳಲಿ
ಹರಿವ ತೊರೆಯು ನಾನು.
ಎಂದಿಗಾದರು ಕಾಣದ ಕಡಲನು
ಸೇರಬಲ್ಲೆನೇನು?
ಸೇರಬಹುದೇ ನಾನು?
ಕಡಲ ನೀಲಿಯೊಳು ಕರಗಬಹುದೇ ನಾನು?

ಒಂದರ್ಥದಲ್ಲಿ ಭಾವಗೀತೆಗಳು ಅವರವರ ಭಾವಕೆ ಬಿಟ್ಟಿದ್ದು. ಈ ಕವಿತೆ ವಿರಹ ವೈರಾಗ್ಯ ಎರಡನ್ನು ಒಂದೆ ಚೌಕಟ್ಟಿನಲ್ಲಿ ಹಾಕುವ ಸಾಹಸವೇ ಸರಿ. ಕಾಣದ ಕಡಲು ಎಂಬ ಅಲೌಕಿಕ ಜಗತ್ತಿನ ಬದುಕಿನ ಭವ ಬಂಧನಗಳಿಂದ ಮುಕ್ತಗೊಳ್ಳುವ ಅಭಿಲಾಷೆ ಕವಿಯದು. ಸಾಲು ಸಾಲಿನಲ್ಲೂ ಅದರ ಹುಡುಕಾಟ. ಇಂತಹದ್ದೇ ಎಂಬ ರೂಪವಿಲ್ಲದ ಅಮೂರ್ತ ಗುರಿಯೇ ಮೋಕ್ಷ. ಬದುಕಿನಲ್ಲಿ ನಶ್ವರತೆ ಅನುಭವಿಸಿದಾಗೆಲ್ಲ ಅಲೌಕಿಕ ಜಗತ್ತಿನ ಮೊರೆತ ಅದರೆಡೆಗಿನ ಹಂಬಲ ಜಾಗೃತವಾಗುತ್ತದೆ. ಅದಕ್ಕೆ ನಾವೇ ಒಂದು ರೂಪ ಕೊಟ್ಟು ಚಿತ್ರಿಸಲು ಪ್ರಯತ್ನಿಸುತ್ತೇವೆ. ಮುಕ್ತಿ ಕಂಡುಕೊಳ್ಳಲು ಅವರವರದೇ ಹಾದಿ.
ಹಲವರು ಮಂದಿರ, ಮಸೀದಿ ಚರ್ಚು ಎಂದು ಅಲೆದರೆ ಇನ್ನೂ ಕೆಲವರು ಹಿಮಾಲಯದವರೆಗೆ ಅಲೆದಾಡಿ ಬರುತ್ತಾರೆ. ಮತ್ತೆ ಕೆಲವರು ಕುಳಿತಲ್ಲೇ ಭಗವಂತನ ಸಾಕ್ಷಾತ್ಕಾರ ಪಡೆದುಕೊಳ್ಳುತ್ತಾರೆ. ಕೆಲಸದಲ್ಲಿ ಸೇವೆಯಲ್ಲಿ ದೇವರನ್ನು ಹುಡುಕಿಕೊಂಡವರೂ ಇದ್ದಾರೆ.
ಆದರೆ ಅಂಥ ಒಂದು ಅಲೌಕಿಕ ಗಮ್ಯ ಇರುವುದೆಲ್ಲಿ ಎಂಬ ಅದರ ಅಸ್ತಿತ್ವದ ತಥ್ಯವನ್ನು ಹೇಳುವುದು ಕಷ್ಟಸಾಧ್ಯ. ಅಂಥ ಅಲೌಕಿಕ ಕಡಲನ್ನು ಕೂಡಬಲ್ಲೆವೆ ಎಂಬ ದ್ವಂದ್ವ ಕವಿಯ ಮನಸ್ಸಿನಲ್ಲಿ ಮೂಡಿದೆ.

ಸಾವಿರ ನದಿಗಳು ತುಂಬಿ ಹರಿದರೂ ಒಂದೇ ಸಮನಾಗಿಹುದಂತೆ
ಎಂಬ ಸಾಲು ನೋಡಿ. ಚಕ್ರವರ್ತಿಯಾಗಿ ಇಡಿಯ ಸಾಮ್ರಾಜ್ಯವನ್ನು ಆಳಬೇಕಾದ ಬುದ್ಧ ಮಹಾವೀರರಂತವರೆ ಸತ್ಯದ ಹುಡುಕಾಟಕ್ಕಾಗಿ ಗದ್ದುಗೆಯನ್ನು ಬಿಟ್ಟು ನಶ್ವರ ಜಗತ್ತಿಗೆ ಬೆನ್ನು ಮಾಡಿ ಹೊರಟು ಹೋದವರಿದ್ದಾರೆ. ಕಟ್ಟಕಡೆಯ ದಿನದವರೆಗೂ ಕಾಳಿಯನ್ನು ಕಾಣುವ ಆಶಯದಲ್ಲಿ ಬದುಕಿದ ಪರಮಹಂಸರು ಇದಕ್ಕೆ ಹೊರತಲ್ಲ. ತಮ್ಮ ಕೆಲಸಗಳೆಲ್ಲ ಮುಗಿದ ಮೇಲೆ ಕುಮಾರಿಲ ಭಟ್ಟರು ಧಾವಾಗ್ನಿಯಲ್ಲಿ ಸ್ವ ಇಚ್ಛೆಯಿಂದ ಕರಗಿ ಹೋಗಿದ್ದೂ ಕೂಡಾ ಬದುಕಿನ ಸಾರ್ಥಕತೆ ಮತ್ತು ನಿರರ್ಥಕತೆಯನ್ನು ಬಿಡಿಸಿ ಹೇಳುತ್ತದೆ. ಜೀವ ಕಳೆದುಕೊಂಡ ದೇಹ ಅಲೆಕ್ಸಾಂಡರ್’ನದೇ ಆಗಿರಲಿ ಅಲೆಮಾರಿಯದೇ ಆಗಿರಲಿ ಅದು ಶವ. ಅದನ್ನೆ ತುಂಬಿ ಹರಿದ ನದಿಗಳೂ ಕೂಡಾ ಒಂದೇ ಸಮನಾಗಿಹುದಂತೆ ಎಂದು ಹೇಳಿದ್ದು. ವಿಸ್ತಾರವಾದ ತರಂಗಗಳಿಂದ ಶೋಭಿತ ಗಂಭೀರ ಮುಕುತಿ ಸಮುದ್ರ ತನ್ನಲ್ಲಿ ಎಲ್ಲ ಉಬ್ಬರವಿಳಿತದ ಅಲೆಗಳನ್ನು ಅಹಂ ಅದ್ದೂರಿಯಿಂದ ಮೆರೆದ ಬದುಕನ್ನು ಏಕರಸ ಮಾಡಿಕೊಂಡು ಬಿಡುತ್ತದೆ. ನಾವೆಷ್ಟೇ ವಿಭಿನ್ನವಾಗಿದ್ದರೂ ಅದರಲ್ಲಿ ಕರಗಿಹೋಗುವುದೇ ನಮಗುಳಿದ ದಾರಿ.

ಜಟಿಲ ಕಾನನದ ಕುಟಿಲ ಪಥಗಳಲಿ ಹರಿವ ತೊರೆಯು ನಾನು ಎಂಬ ಸಾಲು ನಾವು ಭವ ಬಂಧನದಲ್ಲಿ ಎಷ್ಟು ಬಂಧಿರಾಗಿದ್ದೇವೆ ಎಂಬುದನ್ನು ತೋರಿಸುತ್ತದೆ. ಪ್ರಪಂಚದ ಯಾವುದೇ ಜೀವಕ್ಕೇ ಆಗಲಿ ಈ ಮಟ್ಟಿಗಿನ ಬಂಧನಗಳಿಲ್ಲ. “ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ ನೀಡಿ ನೀಡಿ ಮುಕ್ತ. ” ಎಂಬ ಎಚ್ಚೆಸ್ವಿಯವರ ಹಾಡಿನಲ್ಲೂ ಭವ ಬಂಧನದಿಂದ ಮುಕ್ತಗೊಳ್ಳುವ ಬಗ್ಗೆಯೇ ಹೇಳಿದ್ದಾರೆ. “ತನ್ನಾವರಣವೇ ಸೆರೆಮನೆಯಾದರೆ ಜೀವಕೆಲ್ಲಿಯ ಮುಕ್ತಿ. ಬೆಳಕಿನ ಬಟ್ಟೆಯ ಬಿಚ್ಚುವ ಜ್ಯೋತಿಗೆ ಬಯಲೇ ಜೀವನ್ಮುಕ್ತಿ. ” ಮನೆ,ಹೆಂಡತಿ, ಮಕ್ಕಳು ಎಂಬ ನಾವೇ ನಾಲ್ಕು ಗೀಟನ್ನು ಕೊರೆದುಕೊಂಡು ಜೇಡರ ಬಲೆಯನ್ನು ಹೆಣೆದುಕೊಂಡು ಪರದಾಡುತ್ತೇವೆ. ಇಂಥ ಜಟಿಲ ಕಾನನದ ಮಧ್ಯೆ ಸತ್ಯದ ಅರಿವು ಮೂಡುವುದಾದರೂ ಹೇಗೆ? ಇಂಥದ್ದರಿಂದ ಹೊರಗೆ ಬಂದು ಬಣ್ಣದ ಬದುಕಿನಿಂದ ಹೊರಗುಳಿದು ಕಡಲ ನೀಲಿಯೊಳಗೆ ಸೇರಬಹುದೇನು ಎಂಬುದು ಇದರ ತಾತ್ಪರ್ಯ. ಹಲವು ಮೋಹನ ಮುರುಳಿಗೆ ಮರುಳಾದ ನಮ್ಮ ಮಣ್ಣಿನ ಕಣ್ಣಿಗೆ ಕೊನೆಗೊಂದು ದಿನ ಇರುವುದೆಲ್ಲವ ಬಿಟ್ಟು ಇರುದುದರೆಡೆಗೆ ತುಡಿಯುವ ಕ್ಷಣ ಬರುವುದು ನಿಶ್ಚಿತ.

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..