- By Guest Writer
- Tuesday, May 2nd, 2017
ಈ ಪಟ್ಟಣಕ್ಕೆ ಏನಾಗಿದೆ? ಒಂದೆಡೆ ಇದ್ದಿಲಾದರೆ…
Oops, sorry sorry!
ಅದು ಏನಾಯ್ತು ಅಂದರೆ ಆಕರ್ಷ ಕಮಲ ಅವರ ನಿರ್ದೇಶನದ ಮರೀಚಿ ಅನ್ನೋ ಒಂದು ಹೊಸ ಕಿರುಚಿತ್ರ ನೋಡಿದೆ. ಅದರ ಪರಿಚಯ ಅಂಕಣ ಇದು. ಯಾಕೆ ಈ ಅಂಕಣ ಈ ರೀತಿ ಶುರುವಾಯಿತು ಎಂದು ಸದ್ಯದಲ್ಲೇ ಗೊತ್ತಾಗುತ್ತೆ, ಮುಂದೆ ಓದಿ.
ಎಲ್ಲದಕ್ಕೂ ಮುಂಚೆ ನನ್ನ ಗೆಳೆಯನ ಕಥೆ ಒಂದು ಕುತೂಹಲಕಾರಿಯಾಗಿದೆ. ಅದನ್ನು ಸ್ವಲ್ಪ ಕೇಳಿ ಬಿಡಿ. ಒಂದೂರಲ್ಲಿ ಒಬ್ಬ mysterious ಮಾನವನಿದ್ದ. ಅವನ ಹೆಸರು ನಾಳೆ ಅಂತ. ಅವನಿಗೆ ಅಪ್ಪ ಅಮ್ಮ ಯಾರೂ ಇಲ್ಲ. ನಿನ್ನೆ ಮತ್ತು ಇಂದು ಅನ್ನೋ ಇಬ್ಬರು ಗೆಳೆಯರು ಇದ್ದಾರೆ, ಆದರೂ ಇವನು ಒಂಟಿ. ಹಲವರು ಇವನ ಬಗ್ಗೆ ಕನಸು ಕಾಣುತ್ತಾ ಓದು ಮುಗಿಸಿ, ಕೆಲಸ ಸೇರಿ, ಹೊಸ ಪಟ್ಟಣಕ್ಕೆ ದಿನವೂ ಬಸ್ ಹತ್ತಿ ಬರುತ್ತಾರೆ. ಇವನು ಮಾತ್ರ ಯಾರ ಕೈಗೂ ಸಿಗದೇ ತನ್ನ ಪಾಡಿಗೆ ತಾನು ಓಡುತ್ತಿರುತ್ತಾನೆ, ಎಲ್ಲಿಗೆ, ಯಾಕೆ, ಪಾಪ ಅವನಿಗೂ ಗೊತ್ತಿಲ್ಲ. ಹೀಗಿದ್ದಾಗ ಒಂದು ದಿನ ನನ್ನ ಗೆಳೆಯ, ಊರು ಸಾಕೆಂದು ನಾಳೆಯ ಕನಸು ಕಾಣುತ್ತಾ ಬೆಂಗಳೂರು ಬಸ್ ಹತ್ತಿ ಬಂದೇ ಬಿಟ್ಟ. ಹಿಂದು ಮುಂದು ಗೊತ್ತಿಲ್ಲದ ಅವನಿಗೆ ನಿನ್ನೆಯ ಪರಿಚಯ ಇತ್ತು, ಆದರೆ ಅವನನ್ನು ಊರಲ್ಲೇ ಬಿಟ್ಟು ಒಬ್ಬನೇ ಬಂದ. ಇಂದಿನ ಸಾಂಗತ್ಯ ಜೊತೆ ಇತ್ತಾದರೂ ಅವನು ನಾಳೆಯ ಕನಸು ಸದಾ ಕಾಣುತ್ತಿದ್ದ. ಹೀಗಿದ್ದಾಗ ಅವನಿಗೆ ಒಂದು ಹುಡುಗಿಯ ಪರಿಚಯವಾಗುತ್ತೆ, ಅವಳೇ ನಗರ. ಆಕೆ ಅತ್ಯಂತ ಸುಂದರವಾಗಿದ್ದಳು. ಕೆಲವೇ ಮಾತುಕತೆಗಳಲ್ಲಿ ಅವಳಿಗೆ ಅವನು ತುಂಬಾ ಆಳವಾಗಿ connect ಆಗಿ ಬಿಡುತ್ತಾನೆ. ಬೆಳಿಗ್ಗೆ ಕೆಲಸ, ನಾಳೆಯ ಕನಸು. ಸಾಯಂಕಾಲ ನಗರಳ ಜೊತೆ ಭೇಟಿ, ಒಂದಿಷ್ಟು ಇಂದಿನ ಮಧುರ ಕಾಲಹರಣ. ಎಲ್ಲವೂ ಸರಿಯಾಗಿದ್ದಾಗ ಚಿಕ್ಕದೊಂದು ಸಮಸ್ಯೆ ಉಂಟಾಗುತ್ತದೆ. ಇಷ್ಟಕ್ಕೂ ಆ ನನ್ನ ಗೆಳೆಯ ಯಾರು? ಆನಂತರ ನಗರ ಏನಾದಳು? ಎಂಬಿತ್ಯಾದಿ ಪ್ರಶ್ನೆಗಳನ್ನು ಈ ಕಿರುಚಿತ್ರ ನೋಡಿಯೇ ತಿಳಿಯಬೇಕು.
‘ಅಪರಿಚಿತ ನಗರಕ್ಕೆ ಬರುವುದೆಂದರೆ, ಹೊಸ ಹಾಡೊಂದನ್ನು ಗುನುಗಿದಂತೆ…’ ಎಂದು ಶುರುವಾಗುವ ಈ ಕಿರುಚಿತ್ರ ಶಾಪ ಚಿತ್ರದ ಹಾಡೊಂದನ್ನು ನೆನಪಿಸುತ್ತದೆ. Happiness is a pop song, sadness is a poem ಎಂಬ Sherlock ಸಂಭಾಷಣೆಯಂತೆ ಹಲವು ಕವಿತೆಗಳ ಭಾವಾರ್ಥಗಳನ್ನು ತುಂಬಿಕೊಂಡು ಒಂದು ವಿಶೇಷ ಭಾವವಾಗಿ ಕಾಡುವ ಈ ಕಿರುಚಿತ್ರದಲ್ಲಿ ಏನೋ ಇದೆ!! ಕಿಟ್ಟಿ ಕೌಶಿಕ್ ಅವರ ಅತ್ಯುತ್ತಮ ದೃಶ್ಯ ಸಂಯೋಜನೆಯ ಛಾಯಾಗ್ರಹಣ, ಸ್ಪರ್ಶ ಆರ್ ಕೆ ಅವರ ಎಡಿಟಿಂಗ್ ಕೌಶಲ್ಯ ಚಿತ್ರಕ್ಕೆ ಒಂದು ಮನಮೋಹಕ ಓಘ ನೀಡುತ್ತದೆ. ತಾಂತ್ರಿಕವಾಗಿ ಒಂದು ಹೆಜ್ಜೆ ಮುಂದೆ ಇರುವ ಈ ಕಿರುಚಿತ್ರದ ಕವಿತೆಗಳ ಭಾವಾರ್ಥ ಕೇಳಲಾದರೂ ನೀವು ಇದನ್ನು ಇನ್ನೊಮ್ಮೆ ನೋಡೇ ನೋಡುತ್ತೀರಾ, ಅಷ್ಟು ಗ್ಯಾರಂಟಿ ನಾನು ಕೊಡಬಲ್ಲೆ!
ಯಾಕೆ ಹೇಳಿದೆ ಅಂದರೆ, ನಾನು ಕೂಡ ಆಗಲೇ ಎರಡನೇ ಸಲ ನೋಡಾಯ್ತು, ನೀವೂ ಒಮ್ಮೆ ನೋಡಿಬಿಡಿ.