- By Guest Writer
- Sunday, September 17th, 2017
ಸಾಮಾಜಿಕ ಜಾಲತಾಣಗಳು ಆರಂಭವಾದ ಮೇಲೆ ಪ್ರೀತಿ ಮಾಡುವವರ ದಾರಿ ಸುಗಮವಾದಂತಾಗಿದೆ.ಮಾತಿಲ್ಲದೆ,ಕತೆ ಇಲ್ಲದೆ,ಕಣ್ಣಿನಲ್ಲಿ ನೋಡದೇ,ಕೈ ಬೆರಳ ತುದಿಯಲ್ಲಿ ಪ್ರೇಮಾಂಕುರವಾಗುತ್ತೆ.ಕೇವಲ ಪೋಟೋ ನೋಡಿ ಅದೆಷ್ಟೋ ಜನ ತಮ್ಮ ಪ್ರೀತಿಯನ್ನು ಇನ್ನೊಬ್ಬರಿಗೆ ಧಾರೆ ಎರೆಯುತ್ತಾರೆ.ಕೆಲವರು ಟೈಮ್‍ಪಾಸ್‍ಗಾಗಿ ಮಾಡಿದರೇ,ಇನ್ನೂ ಕೆಲವರು ಅದನ್ನು ಸೀರಿಯಸ್ ಆಗಿ ತೆಗೆದುಕೊಂಡು ಅವಾಂತರಗಳು ಆಗಿದ್ದೂ ಇದೆ.
ನಾನು ಹೇಳಲಿಕ್ಕೆ ಹೊರಟ ಕತೆಯಲ್ಲೂ ಹೀಗೆ ತಾನು ಮದುವೆ ಆಗೋ ಹುಡುಗಿ ಹೀಗೇ ಇರಬೇಕು ಅಂತಾ ಕನಸು ಕಾಣ್ತಾ ಇರೋ ಹುಡುಗ ಆಕಾಶ್, ಹುಡುಗ ಹೇಗಿದ್ರೂ ಪರವಾಗಿಲ್ಲ ಹೊಂದಿಕೊಂಡು ಹೋಗ್ತಿನಿ ಅಂತಾ ಹೇಳೋ ಹುಡುಗಿ ಭೂಮಿಕಾ.ಈ ಆಕಾಶ ಭೂಮಿ ಪರಿಚಯ ಆಗಲಿಕ್ಕೆ ಸಹಾಯ ಮಾಡಿದ್ದು ಫೇಸ್ಬುಕ್ ಅನ್ನೋ ಗಾಳಿ ಮಾಧ್ಯಮ. ತನ್ನ ಕನಸಿನ ಕನ್ಯೆಯ ಬೇಟೆಯಲ್ಲಿದ್ದ ನಮ್ಮ ಹುಡುಗ ಫೇಸ್ಬುಕ್‍ನಲ್ಲಿ ಅವಳಿಗಾಗಿ ಬಾಣ ಬೀಸಿದ್ದ.ಹೀಗೆ ಒಂದು ದಿನಾ ಭೂಮಿಕಾಳಿಗೂ ಫ್ರೇಂಡ್ ರಿಕ್ವೆಸ್ಟ್ ಕಳಿಸಿಯೇ ಬಿಟ್ಟ.ಭೂಮಿಕ ಸಹ ಯಾರು ಲವರ್ ಇಲ್ಲದೇ ಪ್ರೀತಿಯಲ್ಲಿ ಬೀಳಲಿಕ್ಕೆ ತುದಿಗಾಲಿನಲ್ಲಿ ನಿಂತಿದ್ಲು.ಆಕಾಶ್ ಪೋಟೋ ನೋಡಿ ಇವಳಿಗೆ ಪ್ರಥಮ ನೋಟದಲ್ಲೆ ಪ್ರೇಮಾಂಕುರವಾಯಿತು. ತಡಮಾಡದೇ ಪ್ರೀತಿಯ ಮೊದಲ ಮೆಟ್ಟಿಲಾದ ಸ್ನೇಹವನ್ನು ಆಕಾಶನಿಗೆ ಧಾರೆ ಎರೆದುಬಿಟ್ಟಳು. ನಮ್ಮ ಹುಡುಗನಿಗೆ ಎಲ್ಲಿಲದ ಸಂತೋಷ,ಆದ್ರೆ ಹುಡುಗಿ ಪೋಟೋ ಹಾಕಲಿಲ್ವಲ್ಲಾ ಹೇಗಿದಾಳೋ ಏನೋ ಅನ್ನೋ ಸಂಶಯ ಒಂದು ಕಡೆ.ಆದರೂ ಪರವಾಗಿಲ್ಲ ಅಂದುಕೊಂಡು ಅವನ ಕಲ್ಪನಾ ಲೋಕದಲ್ಲಿ ಅವಳನ್ನು ಚಿತ್ರಿಸಿಕೊಂಡು ದಿನಾ ಅವಳ ಜೊತೆ ಚಾಟ್ ಮಾಡ್ತಾ ಇದ್ದ. ಗುಡ್ ಮಾರ್ನಿಂಗ್ ನಿಂದ ಆರಂಭವಾಗುವ ಇವರ ಸಂಭಾಷಣೆ,ಗುಡ್ ನೈಟ್ ಹೇಳಿ ಆದ ಮೇಲೂ ಮುಂದುವರಿಯುತ್ತಿತ್ತು.ಅವಳ ಜೊತೆ ಮಾತನಾಡಲಿಕ್ಕೆ ನಿಂತರೆ ಊಟ,ತಿಂಡಿ ಕೂಡ ಮರೆಯುತ್ತಿದ್ದ.ಅವಳೂ ಹಾಗೆ ಇವನನ್ನು ತುಂಬಾ ಹಚ್ಚಿಕೊಂಡು ಬಿಟ್ಟಿದ್ಲು.ಮೊಬೈಲನ್ನು ಚಾರ್ಜ ಹಾಕಲಿಕ್ಕೆ ಸಹ ಇವರಿಗೆ ಪುರುಸೋತು ಇರಲಿಲ್ಲ.ಬೆಳಿಗ್ಗೆಯಿಂದ ರಾತ್ರಿ ತನಕ ಚಾಟ್ ಮಾಡಿದ್ರೂ ಅಯ್ಯೋ ಇಷ್ಟು ಬೇಗ ದಿನ ಮುಗಿತಾ ಅನ್ನೋ ವೇದನೆ.ಆದ್ರೆ ಮಾತನಾಡಿದ್ದು ಮಾತ್ರ ಏನೂ ಇಲ್ಲ.ಹೀಗೆ ನಡಿತಾ ಇರಬೇಕಾದ್ರೆ ಒಂದು ದಿನಾ ನಮ್ಮ ಹುಡುಗ ಭೂಮಿಕಾಳ ಪೋಟೋ ಕೇಳಿ ಬಿಟ್ಟ.ಅವಳು ತಡಮಾಡದೇ ತನ್ನ ಪೋಟೋ ಕಳಿಸಿಯೇ ಬಿಟ್ಲು.ಆಕಾಶ್‍ಗೆ ಬೇಸಿಗೆ ಕಾಲದಲ್ಲಿ ಮಳೆ ಬಂದ ಹಾಗಾಯ್ತು.ಅವನ ಕನಸಿನ ಕನ್ಯೆಯಷ್ಟು ಸುಂದರವಿಲ್ಲದಿದ್ದರೂ,ಬೇಸಿಗೆ ಕಾಲದಲ್ಲಿ ಸ್ವಲ್ಪ ತಣ್ಣಗಾದ ಅನುಭವ.ಕನಸು ಕಾಣ್ತಾ ಮೂರು ತಿಂಗಳು ಕಳೆದು ಹೋಯ್ತು.ಇಷ್ಟು ಆದ ಮೇಲೆ ನಮ್ಮ ಹುಡುಗ ತಡಮಾಡಲಿಲ್ಲ ಪ್ರೇಮ ನಿವೇದನೆಯನ್ನು ಸಲ್ಲಿಸಿಯೇ ಬಿಟ್ಟ.ಅವಳಿಂದ ಸಮ್ಮತಿ ಕೂಡ ಸಿಕ್ತು.ಅವಳನ್ನು ಹೇಗಾದ್ರೂ ಮಾಡಿ ಬೇಟಿಯಾಗಬೇಕಲ್ಲಾ ಅಂತಾ ಅವಳನ್ನು ಅರಸಿ ಅವಳೂರಿಗೆ ಹೊರಟ. ಆದರೆ ಅಲ್ಲೊಂದು ಆಗಾತ ಕಾದಿತ್ತು ಅವಳು ಪೋಟೋದಲ್ಲಿ ಇದ್ದ ತರಹ ಇರಲಿಲ್ಲಾ.ಅವಳ ರೂಪವೇ ಬೇರೆಯಾಗಿತ್ತು.ತನ್ನ ಕನಸಿನ ಕನ್ಯೆಯ ಹುಡುಕಾಟದಲ್ಲಿದ್ದವನಿಗೆ ಇದು ಜೀರ್ಣವಾಗಲಿಲ್ಲ.ಅವನಿಗೆ ತನ್ನ ಕನಸೇ ಮುಖ್ಯವಾಗಿತ್ತು,ಅದಕ್ಕೋಸ್ಕರ ಅವಳನ್ನು ದೂರದಿಂದ ನೋಡಿ ಮಾತನಾಡಿಸದೇ ಹಿಂತಿರುಗಿ ಮನೆಗೆ ಬಂದ.ಆಮೇಲೆ ಅವಳನ್ನು ಯಾವುದೇ ರೀತಿಯಲ್ಲೂ ಅವನು ಸಂಪರ್ಕಿಸಲಿಲ್ಲ.
ಇದರಲ್ಲಿ ಇಬ್ಬರದೂ ತಪ್ಪಿದೆ, ಹಾಗೆಯೇ ಇಬ್ಬರದೂ ಸರಿಯಿದೆ.ಮುಖ ನೋಡಿ ಪ್ರೀತಿ ಮಾಡಬಾರದು ಮನಸ್ಸು ನೋಡಿ ಮಾಡಬೇಕು ಅಂತಾರೆ ಹಾಗೆಯೇ ಕನಸು ಕೂಡ ಮುಖ್ಯ.ಪ್ರೀತಿಗೆ ಮೋಸ ಮಾಡಬಾರದು ಅಂತಾರೆ ಹಾಗೆಯೇ ಪ್ರೀತಿಯನ್ನು ಉಳಿಸಿಕೊಳ್ಳುವುದು ಮುಖ್ಯ ಆಗುತ್ತೆ.ಅದಕ್ಕೋಸ್ಕರ ಅವಳು ಬೇರೆ ಪೋಟೋ ಕಳಿಸಿರಬಹುದಾ..?ನನಗೆನೋ ಗೊತ್ತಾಗ್ತಾ ಇಲ್ಲಾ.ಇದರಲ್ಲಿ ಯಾರದು ಸರಿ ಯಾರದು ತಪ್ಪು ಅಂತಾ ನೀವೇ ನಿರ್ಧಾರ ಮಾಡಿ…..!!! ಏನೇ ಆದರೂ ಸಾಮಾಜಿಕ ಜಾಲತಾಣಗಳಲ್ಲಿ ಇಂತಹಾ ಕಥೆಗಳು ಮಾಮೂಲಿಯಾಗಿ ಬಿಟ್ಟಿವೆ,ಏನಂತೀರಿ…?