1401

ಸೂರಿಗಂಟಿಕೊಂಡವರು

ಬದುಕನ್ನು ಎತೇಚ್ಛವಾಗಿ ಪ್ರೀತಿಸುವವರೆಲ್ಲರ ಪಾಡೇ ಇದು. ಬಹುಮುಖಗಳ ನಡುವೆ ಅಂತರ್ಮುಖಿಗಳಾಗಿ ಬದುಕನ್ನು ಕಟ್ಟಿಕೊಂಡು, ಬಾಡಿಗೆ ಜಿಂದಗಿಯ ಗುಲಾಮರಾಗಿರಬೇಕು. ಬಿಟ್ಟ ಸೂರು, ಬೆಲೆ ತೆತ್ತು ಕುಡಿಯುವ ನೀರು, ಎರಡೂ ದುಬಾರಿಯಾದರೂ, ಅವಶ್ಯಕವಾಗಿಬಿಡುತ್ತವೆ. ಬಹುಶಃ ಬರೀ ತುತ್ತನ್ನು ಮಾತ್ರ ಅರಸಿಬಂದಿದ್ದರೆ, ಅದು ಸಿಕ್ಕ ಕೂಡಲೇ, ತೃಪ್ತಿ ಪಟ್ಟು ಮತ್ತೆ ಊರ ದಾರಿಗೆ ಮರಳ ಬಹುದಿತ್ತೇನೋ. ತುತ್ತಿನ ಜೊತೆ, ನೆತ್ತಿಗೇರುವ ಅಸೂಯೆ, ಆಸೆಗಳ ಪರಸಂಗ ಅಷ್ಟಕ್ಕೇ ನಿಲ್ಲಿಸುವುದಿಲ್ಲ. ಓಡಿಸಿಕೊಂಡು ಮನೆಯ ದಿಶೆಯನ್ನೇ ಬದಲಿಸಿಬಿಡುತ್ತದೆ. ಹಿಂದಿರುಗುವ, ಹಾತೊರೆಯುವ ಗುಂಗನ್ನೆ ಮರೆಸಿಬಿಡುತ್ತವೆ. ಕಾಲ, ಕ್ರಮೇಣ ಕೃತಕವಾಗುತ್ತದೆ. ವ್ಯಕ್ತಿ ವ್ಯತಿರಿಕ್ತವಾಗುತ್ತಾನೆ. ಆಗಲೇ ಅರಿವಾಗುವುದು ತುತ್ತು ತಿನ್ನಲಾಗದಷ್ಟೂ ದುಬಾರಿ ಎಂದು.
ಆಗೆಲ್ಲ ಹೀಗಿರಲಿಲ್ಲ. ವರ್ಷಕ್ಕೊ- ಆರು ತಿಂಗಳಿಗೊಮ್ಮೆಯೋ ಮನೆ ಬಿಟ್ಟು ದೂರದ ಸಂಬಂದಿಕರ ಮನೆಗೆ ರಜೆಗೊಮ್ಮೆ, ಮದುವೆ-ಸಮಾರಂಬಕ್ಕೊ ಹೋಗುತ್ತಿದೆವು. ಹೋಗುವ ಖುಷಿ, ಹೊಸ ಜಾಗ, ಪರೀದಿ ಮೀರಿದ ಸಂಭ್ರಮ. ಹೊಸದೆನೋ ಕಾಣುವ ಕಾತುರ-ಕೌತುಕ. ಸೂರಿನಾಚೆಗಿನ ಸೂರ್ಯನ ನೋಡುವ ಹಂಬಲ. ಬಣ್ಣ ಮಾಸಿದ ಆಕಾಶದ ತುದಿ ಹುಡುಕುವ ಉತ್ಸಾಹ. ಆದರೆ ಇವೆಲ್ಲವುಗಳ ಖಜಾನೆ ಮನೆಯ ನೆನಪಾದೊಡನೆ ಬತ್ತಿ ಹೋಗುತ್ತಿತ್ತು. ಅಮ್ಮನ ತುತ್ತಿನ ನೆನಪಾದಗಲಂತೂ ಕಣ್ಣು ತುಂಬಿ ಬರುತ್ತಿತ್ತು. ಮನೆಯಲ್ಲಿ ದೊಣ್ಣೆ ಹಿಡಿದು ಚೇಷ್ಟೆ ಮಾಡಿದ್ದಕ್ಕೆ ಹೊಡೆಯುತ್ತಿದ್ದ ಅಜ್ಜನೂ ಆಪ್ಯವಾಗುತ್ತಿದ್ದ. ಸೂರು ಸೇರಿದರೆ ಸಾಕು ಅನ್ನಿಸಿಬಿಡುತ್ತಿತ್ತು. ಮನೆಯಲ್ಲಿದ್ದಾಗಲೆಲ್ಲ ಎಂದು ಹಾರಿ ಹೋಗಲಿ ಎನ್ನುವ ಕನಸು, ಹಾರಿ ಹೋದ ಮೇಲೆ ಹಿಂತಿರುಗುವ ಮನಸ್ಸು.
ಬದುಕು ಬದಲಾಗುತ್ತಿಲ್ಲ. ಬಯಕೆಗಳು ಬದಲಾಗುತ್ತಿವೆ. ನಮ್ಮ ಹಿರಿಯರೂ ಬದುಕಿದ್ದರು, ಸೂರಿಗಂಟಿಕೊಂಡು. ಅವರ ಪರೀದಿ ಇತಿ-ಮಿತಿಯಲ್ಲಿತ್ತು. ಕಷ್ಟಗಳೂ ಅಷ್ಟೇ. ಆದರೆ ಬದುಕು-ಬದುಕಿನೊಳಗಿನ ಪ್ರೀತಿ ಅನಂತವಾಗಿತ್ತು. ನಿಷ್ಕಲ್ಮಷವಾಗಿತ್ತು. ಹಂಚಿಕೊಳ್ಳುವ ಗುಣ, ನಮ್ಮವರೆನ್ನುವ ಪ್ರೀತಿ, ದೇವರ ಮೇಲಿನ ಭಕ್ತಿಗಳಷ್ಟೇ ಅವರುಗಳ ಶಕ್ತಿಯಾಗಿತ್ತು. ಕಾಯಿಲೆಗಳೂ ಇತ್ತು. ಆದರೆ ಈಗಿನಷ್ಟು ದುಬಾರಿಯಲ್ಲ. ಓದು-ಬರಹ ಗೊತ್ತಿರಲಿಲ್ಲ ಆದರೂ ಜ್ನಾನಿಗಳಾಗಿದ್ದರು. ನಾವೋ ಪದವಿಗಳ ಮೇಲೆ ಪದವಿ ಪಡೆದ ಅನಕ್ಷರಸ್ಥರು. ಓದು, ಮನುಷ್ಯರನ್ನು ಮನುಷ್ಯತ್ವದೆಡೆಗೆ ಕೊಂಡೊಯ್ಯಬೇಕಿತ್ತು. ಮತ್ಸರದ ಮದ್ಯೆ ನಿಲ್ಲಿಸಿ ನಗುತ್ತಿದೆ. ಬಂದಿಳಿದ ಊರು ಬೆಂದು ಹೋಗಿದೆ. ಬಿಟ್ಟು ಬಂದ ಊರು ಬೆರೆಯಲಾಗದೆ ಬೇರೆಯಾಗಿದೆ. ಬಾಂದವ್ಯದ ಅರ್ಥ ಹೋಟೆಲು ಅಂಗಡಿಗಳ ಪದಾರ್ಥದಂತೆ ಮಾರಾಟಕಿಟ್ಟಂತಿವೆ. ಇಷ್ಟಾದರೂ ನಾವು ಮಣ್ಣಿನ ಮಕ್ಕಳು. ಸೂರಿಗಂಟಿಕೊಂಡವರು.

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..