2296

ಆಯ್ಕೆ ನಮ್ಮದು, ಆದರೆ ಯಾವ ದಾರಿ?

ಸಾಮಾನ್ಯವಾಗಿ ತಿಳಿದವರು ಆಡುವ ಮಾತಿದು, ಒಳ್ಳೆಯ ಕೆಲಸ ಮಾಡಿದರೆ ಸ್ವರ್ಗಕ್ಕೆ ಹೋಗುವೆ, ಕೆಟ್ಟ ಕೆಲಸ ಮಾಡಿದರೆ ನರಕಕ್ಕೆ. ಆದರೆ ಇದುವರೆಗೂ ಸ್ವರ್ಗ ಮತ್ತು ನರಕವನ್ನು ನೋಡಿದವರಿಲ್ಲ. ಇವೆಲ್ಲವೂ ನಮ್ಮ ಕಲ್ಪನೆ. ಆದರೂ ನಮ್ಮ ಹಿರಿಯವರು ಈ ರೀತಿ ಹೇಳಲು ಕಾರಣವಿದೆ. ನಾವು ಮತ್ತು ನಮ್ಮ ಕಿರಿಯಯವರು ಸರಿಯಾದ ಮಾರ್ಗದಲ್ಲಿ ನಡೆಯಬೇಕು, ಶಾಂತಿ ಸಹಬಾಳ್ವೆಯಿಂದ ಬದುಕಬೇಕು ಎಂದು. ಆದರೆ ಒಮ್ಮೆ ಯೋಚಿಸಿ, ಈ ರೀತಿಯ ಬುದ್ದಿವಾದ ಹೇಳುವ ಹಿರಿಯರು ಇಲ್ಲದಿದ್ದರೆ? ಅದಕ್ಕೂ ಮುನ್ನ ಈ ಕಥೆ ಓದಿ.

ಒಂದೂರಲ್ಲಿ ಒಬ್ಬ ಕಳ್ಳನಿದ್ದ. ದಿನಂಪ್ರತಿ ಕಳ್ಳತನ ಮಾಡುವುದು ಆತನ ಕಾಯಕ. ಬಹಳ ಜಾಣತನದಿಂದ ಕಳ್ಳತನ ಮಾಡುವ ಆತ ಎಂದೂ ಸಿಕ್ಕಿ ಬಿದ್ದವನಲ್ಲ. ಆದರೆ ಊರಿನ ಜನರಿಗೆ ಇದು ಗೊತ್ತಿರುವ ವಿಷಯವಾಗಿತ್ತು. ಈತನನ್ನು ನೇರವಾಗಿ ಕಳ್ಳ ಎಂದೇ ಕರೆಯುತ್ತಿದ್ದರು. ಆದರೆ ಈತ ಅದರ ಬಗ್ಗೆ ಯೋಚನೆಯೇ ಮಾಡುವವನಲ್ಲ. ದಿನಂಪ್ರತಿ ಕಳ್ಳತನ ಮಾಡುವ ಆತ, ಮನೆಗೆ ಬಂದ ತಕ್ಷಣ ತನ್ನ ಮನೆಯ ಕೋಣೆಯ ಗೋಡೆಗೆ, ಒಂದು ಮೊಳೆ ಹೊಡೆಯುವುದನ್ನು ಹವ್ಯಾಸವಾಗಿ ಇಟ್ಟುಕೊಂಡಿದ್ದ. ಹೀಗೆ ಸುಮಾರು ಹತ್ತು ವರ್ಷಗಳ ಕಾಲ ಕಳ್ಳತನ ಮಾಡಿದ ಆತನಿಗೆ ಒಂದು ದಿನ ಆಶ್ಚರ್ಯ ಕಾದಿತ್ತು. ಮೊಳೆ ಹೊಡೆಯಲು ಖಾಲಿ ಜಾಗ ಸಿಗಲಿಲ್ಲ.

ಆಗ ಆತನಿಗೆ ತನ್ನ ತಪ್ಪಿನ ಅರಿವಾಗಿತ್ತು. ಎಷ್ಟೋ ಜನರ ಹಣ, ಒಡವೆಯನ್ನು ಕದ್ದು ತಪ್ಪು ಮಾಡಿದೆ. ಅವರ ಕಷ್ಟಗಳಿಗೆ ನಾನು ಕಾರಣನಾದೆ. ಜೀವನದುದ್ದಕ್ಕೂ ತಪ್ಪು ಮಾಡಿದೆ ಎಂದು ಪಶ್ಚಾತ್ತಾಪ ಪಡಲಾರಂಭಿಸಿದ. ಕೊನೆಗೆ ತನಗೆ ತಾನೇ ಸಮಾಧಾನಪಡಿಸಿಕೊಂಡು, ಇನ್ನಾದರು ಜನರ ಕಷ್ಟಗಳಿಗೆ ತಾನು ನೆರವಾಗಬೇಕು, ತನ್ಮೂಲಕ ಮಾಡಿದ ಪಾಪವನ್ನು ಸರಿಪಡಿಸಿಕೊಳ್ಳಬೇಕು ಎಂದು ಭಾವಿಸಿದ. ಅದರಂತೆ ಜನರ ಕಷ್ಟಗಳಿಗೆ ನೆರವಾಗತೊಡಗಿದ. ಎಲ್ಲರ ಕೆಲಸ ಮಾಡುವ ಮೂಲಕ ಸಮಾಜ ಸೇವೆ ಪ್ರಾರಂಭಸಿದ. ದಿನದಂತ್ಯಕ್ಕೆ ಮನೆಗೆ ಬರುತ್ತಿದ್ದ ಆತ, ಗೋಡೆಯ ಮೇಲಿಂದ ಒಂದೊಂದೇ ಮೊಳೆಯನ್ನು ತಗೆಯಲಾರಂಭಿಸಿದ. ಹೀಗೆ ಮುಂದಿನ ಹತ್ತು ವರ್ಷಗಳಲ್ಲಿ ಎಲ್ಲ ಮೊಳೆಗಳನ್ನುತೆಗೆಯಲು ಸಾಧ್ಯವಾಯಿತು. ತನ್ನ ಒಳ್ಳೆಯ ಕೆಲಸದಲ್ಲಿ ಸಿಕ್ಕ ನೆಮ್ಮದಿಯನ್ನು ಅನುಭವಿಸಿದ ಆತ, ಅದನ್ನೇ ಮುಂದುವರೆಸಬೇಕು, ಎಂದು ನಿರ್ಧರಿಸಿದ.

ಆದರೆ ಎಷ್ಟೇ ಸಹಾಯ ಮಾಡಿದರೂ, ಆ ಊರಿನ ಜನರು ಮಾತ್ರ ಆತನನ್ನು ಕಳ್ಳ ಎಂದೇ ಕರೆಯುತ್ತಿದ್ದರು. ಬೇಸರಗೊಂಡ ಆತ ನೇರವಾಗಿ ಮನೆಯ ಕಡೆ ಬಂದ. ತನ್ನ ಕೋಣೆಯ ಕಡೆ ಧಾವಿಸಿದ ಆತ, ಗೋಡೆಯ ಮೇಲೆ ಯಾವುದಾದರು ಮೊಳೆ ಉಳಿದಿದೆಯೇ ಎಂದು ಪರೀಕ್ಷಿಸಿದ. ಯಾವ ಮೊಳೆಯೂ ಕಾಣ ಸಿಕ್ಕಾಗ, ಆತನಿಗೆ ಗೋಚರಿಸಿದ್ದು ಗೋಡೆಯ ಮೇಲೆ ಆ ಮೊಳೆಗಳು ಮಾಡಿದ ರಂಧ್ರಗಳು. ಆತ ಮೊಳೆಗಳನ್ನ ತೆಗೆದಿರಬಹುದು, ಆದರೆ ಅವು ಸೃಷ್ಟಿ ಮಾಡಿದ ರಂಧ್ರಗಳನ್ನಲ್ಲ. ಆಗ ಆತನಿಗೆ, “ತಪ್ಪು ಮಾಡಿದಾಗ ಬರುವ ಹೆಸರು, ಒಳ್ಳೆಯ ಕೆಲಸ ಮಾಡಿದರೆ ಮಾಸುವುದಿಲ್ಲ” ಎಂಬ ಸತ್ಯದ ಅರಿವಾಯಿತು.

ಆತನಿಗೆ ಹೋಲಿಸಿದರೆ ನಾವು ಅದೃಷ್ಟಶಾಲಿಗಳು. ಹಿರಿಯವರ ಮಾರ್ಗದಶನದ ನುಡಿ ನಮ್ಮ ದಾರಿಯನ್ನು ಸುಗಮಗೊಳಿಸಿದೆ. ಒಳ್ಳೆಯ ಮಾರ್ಗದಲ್ಲೂ ಕೊಂಡೊಯ್ಯುತ್ತಿದೆ ಅನ್ನುವುದರಲ್ಲಿ ಸಂದೇಹವಿಲ್ಲ.

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..