3341

ಕಾಲೇಜು ಜೀವನ ..ಖಾಲಿಯಾಗದ ಮನ

ರಾತ್ರಿ ಮಲಗುವಾಗ ವಾಟ್ಸಾಪ್,ಫೇಸ್ಬುಕ್ ಮಾತಾಡಿಸಿ,ಮೊಬೈಲ್ ಚಾರ್ಜಿಗೆ ಇಟ್ಟು ಮಲಗುವಾಗ ಹನ್ನೊಂದು ಗಂಟೆ,

ಬೆಳಿಗ್ಗೆ ೫.೩೦ ಕ್ಕೆ ಓದಲು ಎಂದಿಟ್ಟ ಮೊಬೈಲಿನ ಅಲರಾಂ ಬಡಿತ ಕೇಳಿ,ಹತ್ತು ಹತ್ತು ನಿಮಿಷಗಳು ಮುಂದೂಡುತ್ತಾ ಎಳುವಾಗ ೬.೨೦.ದೈನಂದಿನ ಕೆಲಸ ಮುಗಿಸಿ ಬಂದು ತಿಂಡಿ ತಿನ್ನುವಾಗ ಮೊಬೈಲಿನ ಕರೆಗೆ ಓಗೊಟ್ಟು ಕೈಯಲಿ ಆಡಿಸುತ್ತಾ ವಾಟ್ಸಾಪ್ ನಲ್ಲಿ ಹರಟೆ,ಅಂತೂ ರೆಡಿಯಾಗಿ ಬಸ್ ಸ್ಟ್ಯಾಂಡ್ ಗೆ ಬಂದರೂ ತಪ್ಪಿ ಹೋದ ಬಸ್ಸಿಗೆ ಚಿಂತಿಸದೇ,ಕೆಲವೊಂದು ಬೈಕನ್ನು ಅಡ್ಡ ಹಾಕಿ ಅಂತೂ ಕಾಲೇಜಿನ ಕ್ಯಾಂಪಸ್ ಗೆ ಎಂಟ್ರಿ,ಗೆಳೆಯರು ಕಾಯುತ್ತಿದ್ದಾರೆ,ಕುಶಲೋಪರಿ,ಕೆಲವು ಹುಡುಗಿಯರಿಗೆ ಗುರಿ ಗೋಪುರ ಕಟ್ಟುತ್ತಾ,ಕ್ಲಾಸಿಗೆ ಭರ್ಜರಿ ಎಂಟ್ರಿ.ಆವತ್ತು ಲೋಕಲ್ ಹಬ್ಬದ ದಿನ ಬಣ್ಣದ ಬಟ್ಟೆ ಧರಿಸಲು ತಿಳಿಸಿದ್ದರು.ಪೂರ್ತಿ ತೋಳಿನ ಅರ್ಧ ಮಡಚಿದ ಕೈ,ಎರುತಿರುವ ಹಾರುತಿರುವ ಕಾಲರ್ ಪಟ್ಟಿ,ಷರ್ಟಿನ ಬಿಚ್ಚಿದ ಮೊದಲ ಗುಂಡಿ,ಸೊಂಟದಿಂದ ೩ ಕಿಲೋಮೀಟರ್ ಕೆಳಗಿರುವ ಜೀನ್ಸ್ ಪ್ಯಾಂಟ್,ಕಾಲಿಗೆ ಶೂ ಧರಿಸಿ ಆಗಮನ,ಇವರನ್ನು ನೋಡಿದ ಹುಡುಗಿಯರ ಮುಖದಲ್ಲಿ ಕಾಡುಪ್ರಾಣಿಗಳೆಂಬ ಭಾವನೆ.ಇವನನ್ನು ಹುಡುಗಿಯರು ನೋಡಿದರೆಂಬ ಯೋಚನೆಯಲ್ಲಿ ಮನದ ಮಂದಹಾಸ,ಯೋಚಿಸಿದ ಕವನ,

ಕಾಲೇಜಿನ ದಾರಿಯಲಿ
ಫೆರಾರಿ ಕಾರಿನ ಹುಡುಗಿ
ಸಿಕ್ಕಳು ನನಗೊಮ್ಮೆ,ಹೃದಯ
ಪರಾರಿಯಾದ ಯೋಚನೆ

ಆ ಹೆಣ್ಗಳ್ ಮನ್ಸಲ್ “ಇದ್ ಯಾವ್ ಒಣ್ಕಟಿ ಪ್ರೇತವೋ ಅಂತ ಗೊತಾಯ್ಲ”
ಅಲ್ಲಿಂದ ಅಂದಿನ ತರಗತಿ ಶುರು,ಅಧ್ಯಾಪಕರು ಬಂದರೂ ತಮ್ಮದೆ ಗುಂಗಿನಲ್ಲಿ ಹುಡುಗರು.ಅವರ ಪಾಠದ ಬೋರ್ ವೆಲ್ ಶುರುವಾಗಿದ್ದೆ ತಡ,ತಮ್ಮ ತಮ್ಮ ಕಪಿಚೇಶ್ಟೆಗಳನ್ನು ಪ್ರದರ್ಶಿಸುತ್ತಾ ತರಗತಿ ಮುಗಿದದ್ದೆ ಗೊತ್ತಾಗದೇ, ಮತ್ತೇ ಅದೇ ಹಾಡು. ೧೧ ಗಂಟೆಯ ತರುವಾಯ ಕಾಲೇಜಿನ ಕ್ಯಾಂಪಸ್ ನಲ್ಲಿರಿವ ಕ್ಯಾಂಟೀನ್ ಗೆ ಎಂಟ್ರಿ,ಅಲ್ಲಿ ಯಾರದೋ ಹೆಸರಿನಲ್ಲಿ ಹುಟ್ಟುಹಬ್ಬದ ಪಾರ್ಟಿ.
(ಕವನ)
ಕಾಲೇಜಿನ ಕಾರಿಡಾರಲಿ
ಕಾಂಚಾಣವಿಲ್ಲದ ನಾನು
ಐಸ್ ಕ್ರೀಮು ತಿಂದೆ
ಗೆಳೆಯರ ಬಂಡವಾಳದಿ.

ಅಲ್ಲಿರುವ ಎಲ್ಲಾ ಖಾದ್ಯಗಳ ಆಸ್ವಾದಿಸಿ ಹೊರಟಾಗ,ತಮಗಾಗದ ಕಾಲೇಜಿನ ಇನ್ನೊಂದು ಗ್ಯಾಂಗ್ ಅನ್ನು ಕಂಡು ಕಿಚಾಯಿಸುತ್ತಾ,ಹಲ್ಲು ಕಡಿಯುತ್ತಾ,ವಾರೆ ನೋಟದಲ್ಲೇ ವಾರನ್ನು ಆರಂಭಿಸಿದಂತೆ!ಆದರೂ ಸಮಾಧಾನಚಿತ್ತವಾಗಿ ಮತ್ತೆ ಕ್ಲಾಸ್ ರೂಮಿಗೆ ಲೇಟ್ ಎಂಟ್ರಿ, ಅಲ್ಲಿ ಅಧ್ಯಾಪಕರಲ್ಲಿ ಬೈಗುಳವ ಆನಂದಿಸಿ,ಬೇಂಚನ್ನು ಅತಿಕ್ರಮಣ!ಮತ್ತೊಂದು ಗಂಟೆಗಳ ಕಾಲ ಯೋಗಾಭ್ಯಾಸದ ಶವಾಸನದ ನೋಟ.ಕೀಟಲೆ ಮಾಡುತ್ತಾ,ತರಗತಿ ಮುಗಿದದ್ದೆ ಗೊತ್ತಾಗಿರುವುದಿಲ್ಲ.ಹೊಟ್ಟೆಯಿಂದ ಬರುತ್ತಿರುವ ಯಾವುದೋ ಒಂದು ಸಂದೇಶ ದೇಹದ ಬ್ಯಾಟರಿ ಚಾರ್ಜ್ ಮಾಡಲು ಹೇಳುತ್ತದೆ.ಮತ್ತದೇ ಕ್ಯಾಂಟೀನ್ ದಾರಿ,ಅದಾಗಲೇ ಎದುರಾಳಿ ಗುಂಪಿನವರು (ಸೀನಿಯರ್ಸ್,ತಮಗಾಗದ ಗ್ಯಾಂಗ್) ಸಾಲಿನಲ್ಲಿದ್ದಾರೆ,ಮಧ್ಯ ನುಸುಳಿದರೆ ಸಾಯಂಕಾಲ ವಿಶ್ವದ ಮೂರನೇ ಮಹಾಯುದ್ಧ ಗ್ಯಾರಂಟಿ, ಆದರೂ ಸ್ವಲ್ಪ ಹೊಂದಾಣಿಕೆಯಿಂದ ಸಾಲಲ್ಲಿ‌ ನಿಂತು ತಟ್ಟೆಯಲ್ಲಿ ಊಟಮಾಡುತ್ತಿರುವಾಗ ಸುತ್ತ ಮುತ್ತಲಿನ ಲೋಕಲ್ ಸುದ್ದಿಗಳ ಮಹಾಚರ್ಚೆ,ಒಬ್ಬರಿಂದ ಇನ್ನೊಬ್ಬರಿಗೆ ತಮ್ಮ ತರಗತಿಯಲ್ಲಿರುವ ಹುಡುಗಿಯರ ಹೆಸರನ್ನು ಹೇಳಿ ಹೀಯಾಳಿಸುವುದು,
(ಕವನ)
ಊಟವ ಮಾಡುತಾ
ಹರಟೆಯ ಹೊಡೆಯುತ
ಕಾಲೇಜು ಜೀವನ
ಮತ್ತೆ ಬರದು ಪರಿಮಿತ

ಕಾಲೇಜಿನ ವಾಸ್ತವ ಚರ್ಚೆಯಲ್ಲಿ ಪಾಲ್ಗೊಳ್ಳುತ್ತಾ,ಊಟ ಆದದ್ದೇ ತಿಳಿಯದೇ,ಅದಾದ ನಂತರ ಸೀದ ಕಾಲೇಜಿನ ಗ್ರೌಂಡಿಗೆ ಸುತ್ತು ಹಾಕಿ,ಶೌಚಾಲಯದಲ್ಲಿ ಸಮಯ ವ್ಯರ್ಥ ಮಾಡುತ್ತಾ ಕಾಲೇಜಿನ ಮೂರು ಅಂತಸ್ತನ್ನು ಹತ್ತಿ ಇಳಿದು,ಕೊನೆಯದಾಗಿ ತರಗತಿಯಲ್ಲಿ ಎಲ್ಲಬಂದು ಕುಳಿತಿದ್ದರೂ, ಬಾಗಿಲಿನ ಆಚೆ ಗೋಡೆಯ ಬಳಿ ಸಾಲಾಗಿ ನಿಂತುಕೊಂಡು ವೀಕ್ಷಣೆ!!
ತರಗತಿಗೆ ಅಧ್ಯಾಪಕರು ಬರುತಿರಲು,ದೂರದಿಂದ ತಿಳಿದು ಮತ್ತದೇ ಬೇಂಚಿನ ಆಕ್ರಮಣ!!ಇನ್ನುಳಿದಿರುವ ೨ ತರಗತಿಯಲ್ಲಿ ,ಮೊದಲನೆಯದು ಕಣ್ಣಿದ್ದು ಕುರುಡ(ಅಂದ್ರೆ ಸುಖನಿದ್ದೆ),ಇನ್ನೊಂದು ಮನೆಗೆ ಹೋಗುವ ತುರಾತುರಿ,ಕೊನೆಯಲ್ಲಿ ಕಾಲೇಜ್ ಬಿಟ್ಟಾಗ ಮತ್ತದೇ ಬೆಳಿಗ್ಗೆಯ ರಾಜವೈಭವ,ಹೋಗುವಾಗ ಕಾಲೇಜಿನ ಗೇಟ್ ಬಳಿಯಲ್ಲಿ ತಮ್ಮ ತಮ್ಮ ಬೈಕಿನ ಬಳಿಯಲ್ಲಿ ಅದ್ಭುತವಾದ ಕಲಾಕೃತಿಯಂತೆ ನಿಂತು,ಎಲ್ಲಾ ಹೋಗುವವರೆಗೆ ಕಾದು,ಬೈಕೇರಿ ಕನ್ನಡಕಧಾರಿಯಾಗಿ,ಜೊತೆಯಾಗಿ ತನ್ನ ಗೆಳೆಯನನ್ನು ಕೂರಿಸಿಕೊಂಡು,ಒಂದೆರೆಡು ಜಾಲಿ ರೈಡ್ ಹೊಡೆದು ಮನೆಗೆ ಬರುವಲ್ಲಿ ೫.೩೦ .ಲೇಟಾದದ್ದು ಏಕೆಂದು ಕೇಳಿದರೆ ಸ್ಪೇಶಲ್ ಕ್ಲಾಸ್,ಬೇಗಾದರೆ ಮಾಸ್ಟರ್ ಬರ್ಲಾ!! ಎರಡೇ ಉತ್ತರ.ಮನೆಗೆ ಬಂದು ಸ್ವಲ್ಪ ಚಾ ಕುಡಿದು ಹಾಗೆ ಹೀಗೆ ಎನ್ನುವಷ್ಟರಲ್ಲಿ ಗಂಟೆ ೮,
(ಕವನ)
ಮನೆಯಲ್ಲಿ ಎಲ್ಲರೂ ಒಳಗಿರಲು,
ಇವರೊಬ್ಬ ಹೊರಗಲ್ಲಿ ಮೊಬೈಲು ಚಾಟು
ಒಳಗಲ್ಲಿ ಬೈಗುಳ ಕೇಳುತಿರಲು
ಚಿಂತೆಯಿಲ್ಲದೆ,ಮುಳುಗಿದ್ದ ಶತಕಾಟು

ಅಂತೂ ಮನೆಯವರು ಮದುವೆಯ ಮನೆಗೆ ಹೇಳಿಕೆಗೆ ಬಂದಂತೆ,ಊಟಕ್ಕೆ ಕರೆದರೂ ಒಲ್ಲದ ಮನಸಿನಿಂದ ಬಂದು,ಉಂಡು,ತಿಂದು ,ತೇಗಿ,,ಮತ್ತೆ ಸ್ವಲ್ಪ ಟಿ.ವಿ ನೋಡಿ,ಮಲಗಲು ಹೋದಾಗ ವಾಟ್ಸಾಪಿನ ಕರೆಗೆ ಒಗೊಟ್ಟೂ,ಕಾಲೇಜ್ ಗುಂಪಿನಲ್ಲಿ ಶುಭರಾತ್ರಿ ಮೆಸೇಜ್ ಸುರಿಸಿ,ಮೊಬೈಲ್ ಚಾರ್ಜಿಗಿರಿಸಿ,ನಿದ್ರೆಗೆ ಜಾರುವಾಗ ವಾಟ್ಸಾಪಿನ ಲಾಸ್ಟ್ ಸೀನ್ ೧೧.೨೩ ತೋರಿಸುತ್ತಿತ್ತು.

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..