5144

ಜನಕನ ನೆನೆಯೋಣ ಕೊನೆತನಕ

ಅಂಕಣ : ರಾಹುಲ್ ಹಜಾರೆ

ಅಪ್ಪ ಅಂದರೆ ಅಕ್ಕರೆಗೆ ಇನ್ನೊಂದು ಹೆಸರು. ಹೊಕ್ಕಳ ಬಳ್ಳಿ ಕತ್ತರಿಸಿ ಜನ್ಮ ನೀಡುವ ತಾಯಿ ನಮಗೆ ದೇವರ ಹಾಗೆ ಕಾಣುತ್ತಾಳೆ.ಆದರೆ ಆಕೆಯ ಗರ್ಭದಲ್ಲಿದ್ದಾಗಿನಿಂದ ನಮ್ಮ ಬಗ್ಗೆ ಕಾಳಜಿ ತೋರಿಸುವ ಅಪ್ಪ ನಮಗೆ ಕಾಣೊಲ್ಲ. ನಾವು ಹುಟ್ಟಿದ ದಿನದಿಂದ ಅಪ್ಪನ ಕಷ್ಟಗಳು ಶುರುವಾಗುತ್ತವೆ. ಅಷ್ಟು ದಿನ ಹಾಯಾಗಿದ್ದ ಅಪ್ಪ ಈಗ ಮಾಡುವ ಖರ್ಚಲ್ಲಿ ಉಳಿತಾಯ ಮಾಡುತ್ತಾ ಸಾಗುತ್ತಾನೆ. ಅದು ಎಂಥ ಉಳಿತಾಯಗಳು ! ಹರಿದ ಚಪ್ಪಲಿಯನ್ನು ಬಿಸಾಡದೆ ಹೋಲಿಸಿ ಹಾಕಿಕೊಳ್ಳುತ್ತಾನೆ. ದಿನದ ಮೂರು ಹೊತ್ತು ಹೊರಗಡೆ ಕುಡಿಯುತ್ತಿದ್ದ ಚಹಾವನ್ನು ಎರಡು ಹೊತ್ತಿಗೆ ಇಳಿಸುತ್ತಾನೆ. ನಮ್ಮ ಶಾಲೆಗೆ ಮೊದಲ ಕಂತಿನ ಶುಲ್ಕ ಕಟ್ಟಲು ರಾತ್ರಿ ಕೆಲಸಕ್ಕೆ ಹೋಗ್ತಾನೆ. ಅಮ್ಮನ ಕೈತುತ್ತು ತಿನ್ನುವಾಗ ಅಪ್ಪ ಆ ತುತ್ತನ್ನು ದುಡಿಯೋಕೆ ತನ್ನ ಕೈ ಗ್ರೀಸ್ ಮಾಡಿಕೊಂಡಿರುವುದು ನಮ್ಮ ಗಮನಕ್ಕೆ ಬರುವುದಿಲ್ಲ. ಮಳೆಯಲ್ಲಿ ಬಂದಾಗ ಅಮ್ಮನ ಸೆರಗಲ್ಲಿ ತಲೆ ಒರೆಸಿಕೊಳ್ಳುವ ನಮಗೆ ಅದೇ ಮಳೆಯಲ್ಲಿ ದುಡಿದು ಯಾರಿಗೂ ಹೇಳದೆ ಶೀತದ ಮಾತ್ರೆ ತಗೊಳ್ಳುವ ಅಪ್ಪ ಕಾಣುವುದಿಲ್ಲ. ರಾತ್ರಿ ಜೊಂಪು ಹತ್ತುವವರೆಗೆ ಯಾವುದು ಊರ ರಾಜನ ಕಥೆ ಹೇಳಿ ಮಲಗಿಸುವ ಅಮ್ಮನ ಮುಂದೆ ಅದೇ ರಾತ್ರಿ ನಿದ್ದೆಗೆಟ್ಟು ನಮಗಾಗಿ ದುಡಿಯುವ ಅಪ್ಪ ನಿಜವಾದ ರಾಜನ ಹಾಗೆ ಕಾಣೋದೆ ಇಲ್ಲ. ಮನೆಯ ಅಂಗಳದಲ್ಲಿ ಆಡೋವಾಗ ಬಿದ್ದು ಮೊಣಕಾಲು ತೆರಚಿಕೊಂಡಾಗ ಡೆಟಾಲ್ ಹಚ್ಚುವ ಅಮ್ಮನ ಕಾಳಜಿಯ ಮುಂದೆ ಅದೇ ಮನೆಗೆ ಮಾಡಿದ ಲೋನ್ ತೀರಿಸಲಾಗದೆ ಹೆಣಗಾಡುವ ಅಪ್ಪನ ಕಾಳಜಿ ಗೌಣವಾಗಿ ಬಿಡುತ್ತೆ.
ಅಮ್ಮನ ಪ್ರೀತಿ ಕಾರಂಜಿಯ ಪುಟಿತ,ಹರೆಯುವ ತೊರೆ,ಕಡಲ ಭೊರ್ಗರೆತ ಆದರೆ ಅಪ್ಪನ ಪ್ರೀತಿ ಯಾರ ಕಣ್ಣಿಗೂ ಬೀಳದ ಗುಪ್ತಗಾಮಿನಿ, ನೆಲವನ್ನು ತಂಪಾಗಿಡುವ ಅಂತರ್ಜಲ,ನೆಲದಲ್ಲಿಯೇ ಇದ್ದು ಆಲದಂತ ನಮ್ಮ ಬದುಕಿನ ಮರಕ್ಕೆ ನೀರೊದಗಿಸುವ ಜೀವಿ ಅಪ್ಪ. ಒಡಲಿಂದ ಮಡಿಲಿಗೆ ಹಾಕಿಕೊಂಡು ಮಲಗಿಸುವ ಅಮ್ಮನ ಪ್ರೀತಿ ಒಂದೆಡೆಯಾದರೆ ,ಸಾಂತ್ವನದ ಹೆಗಲು ಕೊಟ್ಟು ನಮ್ಮ ಬದುಕಿನ ದೌರ್ಬಲ್ಯಗಳಿಗೆ ಬಲವಾಗಿ ನಿಂತು ಸಂತೈಸುವನು ಅಪ್ಪ.ಮೊದಲು ಅಪ್ಪನ ಎದೆಯ ಮೇಲೆ ಕಾಲ್ಚಾಚಿ ಮಲಗುವ ಮಗಳು ಪ್ರಾಯಕ್ಕೆ ಬಂದ ಹಾಗೆ ಅಪ್ಪನಿಂದ ದೂರವಾಗ್ತಾ ಹೋಗ್ತಾಳೆ. ಆಗ ಅಪ್ಪನಿಗೊಂದು ಅಮೂರ್ತ ಅನಾಥ ಭಾವ ಕಾಡಲು ಶುರುವಾಗುತ್ತೆ. ಆದರೆ ಅಪ್ಪ ತನ್ನ ನೋವನ್ನೆಲ್ಲ ನುಂಗಿ ನಮಗಾಗಿ ನಗುವ ಸಹನಾಮೂರ್ತಿ. ಅಮ್ಮನ ಕಾಳಜಿಯ ಮುಂದೆ ಅಪ್ಪನ ಅಕ್ಕರೆ ಮಂಕಾಗಿ ಕಂಡರೂ ಅಪ್ಪ ಕಠೋರಿ ಅಲ್ಲ.ಬೆಳೆಯುತ್ತಾ ಮಕ್ಕಳು ತಾಯಿ ಮೇಲಿನ ಪ್ರೀತಿ ಹಾಗೆ ಉಳಿದರೂ ತಂದೆಯ ಮೇಲಿನ ಪ್ರೀತಿ ಕಡಿಮೆಯಾಗುತ್ತಾ ಹೋಗುತ್ತೆ.ಇದಕ್ಕೆ ಅಪ್ಪ ಆಗಾಗ ರೇಗುವುದು ಕಾರಣವಿರಬಹುದು. ತಾಯಿಗೆ ಪ್ರೀತಿ ಎಂದರೇನು? ಅಂತ ಗೊತ್ತು ಎನ್ನುವ ನೀವು ತಂದೆಗೆ ಬದುಕೆಂದರೇನು? ಅಂತ ಗೊತ್ತು ಎಂಬುದನ್ನು ಗುರುತಿಸೊದೇ ಇಲ್ಲ. ಅಪ್ಪನ ಹೆಗಲೇರಿ ನೋಡಿದ ಜಾತ್ರೆಗಳನ್ನು ನಾವು, ಆ ಜಾತ್ರೆಯನ್ನು ಆ ಊರಿನ ಸೊಗಡನ್ನು ಅಪ್ಪನ ಪ್ರೀತಿಯನ್ನು ನಗರದ ಯಾಂತ್ರಿಕ ಬದುಕಲ್ಲಿ ನೆನಪಿಸಿಕೊಳ್ಳುವುದಿಲ್ಲ. ದೊಡ್ಡ ಇಂಪೊರ್ಟೆಡ್ ಕಾರ್ ಡ್ರೈವಿಂಗ ಮಾಡುತ್ತಾ ತಿರುಗುವಾಗ ಫೋಲಿಸ್ ಪರೇಡ್ ಗ್ರೌಂಡಲ್ಲಿ ಸೈಕಲ್ ಕ್ಯಾರಿಯರ್ ಹಿಡಿದು ಸೈಕಲ್ ತುಳಿಯುವುದನ್ನು ಕಲಿಸುವ ಅಪ್ಪನ ನೆನಪಿಗೂ ಕೂಡಾ ಸೈಕಲ್.ದಷ್ಟೆ ತುಕ್ಕು ಹಿಡಿದು ಹೋಗಿರುವುದು ನಮ್ಮ ಬ್ಯೂಸಿ ಬದುಕಿನಲ್ಲಿ ಕಾಣದೇ ಹೋಗೋದು ವಿಪರ್ಯಾಸ.
ಕೊನೆಗೆ ಬದುಕಿನಲ್ಲಿ ಆರ್ಥಿಕ ಮುಗ್ಗಟ್ಟು ಎದುರಿಸಿಯೋ, ಕಂಪನಿಯಿಂದ ಉಚ್ಛಾಟಿತರಾಗಿಯೋ, ಬಿಸನೆಸ್ ಲಾಸ್ ಆಗಿಯೋ, ವಾಪಸ್ ಮರಳಿ ಮನೆಗೆ ಬಂದಾಗ ಅಪ್ಪನ ರೇಗಾಟದ ಹಿಂದೆ ನಿಮಗೊಂದು ಜವಾಬ್ದಾರಿ ಬರಲಿ ಎಂಬ ಸುಪ್ತ ಕಾಳಜಿ ಇರುತ್ತೆ. ಆದರೆ ನೀವು ರಾತ್ರಿ ಲೇಟಾಗಿ ಬಂದರೂ ಊಟ ಇಕ್ಕುವ ಅಮ್ಮನ ಶ್ರೇಷ್ಠತೆಯ ಮುಂದೆ ಅಪ್ಪನ ಪ್ರೀತಿ ಸುಪ್ತವಾಗೀಯೇ ಉಳಿದುಬಿಡುತ್ತೆ.ಮತ್ತೊಂದು ಬಿಸನೆಸ್,ಕೋರ್ಸ್ ಮಾಡಿ ಬದುಕಿನ ಹೊಸ ದಾರಿ ಕಂಡುಕೊಳ್ಳಬೇಕೆನ್ನುವಾಗ ಅಮ್ಮ ಕೊಡುವ ಒಡವೆಯ ಮುಂದೆ ಅಪ್ಪನ ಪಿ.ಎಫ್. ಹಣ ಕಿಲುಬು ಸಂಪತ್ತಾಗಿ ಕಾಣುತ್ತೆ. ಕೊನೆಗೂ ನಾವಿಡುವ ಅಂಗಡಿಗೆ, ಓಡಿಸುವ ಆಟೋಗೆ ಅಮ್ಮನ ಕೃಪೆ,
ತಾಯಿಯ ಆಶಿರ್ವಾದ ಎಂಬ ಹೆಸರೇ ರಾರಾಜಿಸುತ್ತೆ. ಎಷ್ಟೋ ಜನ ಜವಾಬ್ದಾರಿ ಹೀನ ಅಪ್ಪಂದಿರಿದ್ದಾರೆ. ಕುಡಿದು ಬಂದು ಹೊಡೆಯುವ ಅಪ್ಪಂದಿರಿದ್ದಾರೆ. ಮಗಳ ಕೂದಲು ನೆರೆತರು ಅವಳ ಮದುವೆಯ ಯೋಚನೆಯನ್ನು ಮಾಡದವರೂ ಇದ್ದಾರೆ. ತನ್ನ ಕುಡಿತದ ಚಟಕ್ಕೆ ಓದುವ ಮಗನನ್ನು, ಹರೆಯದ ಮಗಳನ್ನು, ವಯಸ್ಸಾದ ಹೆಂಡತಿಯನ್ನು ಕೆಲಸಕ್ಕೆ ಕಳಿಸಿ ಅವರ ದುಡಿಮೆಯನ್ನೆಲ್ಲ ಕುಡಿದು ಅವರ ಮೇಲೆ ತುರಾಡುವವರೂ ಇದ್ದಾರೆ. ಎಷ್ಟೋ ಮಕ್ಕಳಿಗೆ ಸಾವು ಎಂಬುದರ ಅರ್ಥ ತಿಳಿಯುವ ಮುನ್ನ ತಂದೆ ಸತ್ತು ಹೋಗಿರುತ್ತಾರೆ. ಆದರೆ ಇದೆಲ್ಲದರ ಮಧ್ಯ ತಾನು ಕುಡಿಯುವ ಒಂದು ಚಹಾದಿಂದ ಹಿಡಿದು ತಾನು ಕಷ್ಟಪಟ್ಟು ದುಡಿದ ಪಿ.ಎಫ್ ಹಣದವರೆಗೆ ನಮಗೆ ಧಾರೆಯೆರೆದು
ನಮ್ಮಿಂದ ಹಿಡಿ ಪ್ರೀತಿಯನ್ನು ನಿರೀಕ್ಷಿಸದೆ ಬದುಕಿನ ತುಂಬಾ ಹೆಣಗಾಡುತ್ತಾ ಎಲ್ಲರನ್ನು ದಡ ಸೇರಿಸುವ ಕಠೋರ ಕಾಳಜಿಯುತ ಅಪ್ಪಂದಿರು ಸಾಕಷ್ಟು ಜನರಿದ್ದಾರೆ.ಕೊನೆಗೊಮ್ಮೆ ನೀವು ತಂದೆಯಾಗುತ್ತೀರಿ ಪಿತ್ರಾರ್ಜಿತ ಮನೆಯಲ್ಲೇ ಗೋಡೆಗೆ ಕಾಲು ತಾಗಿಸಿ ಮಲಗಿಕೊಂಡು “ನಮ್ಮಪ್ಪಾ ಒಬ್ಬ ಚೆನ್ನಾಗಿದ್ದಿದ್ದರೆ ಬದುಕು ಇನ್ನಷ್ಟು ಸುಂದರವಾಗಿ ಇರುತ್ತಿತ್ತು.” ಎನ್ನುವಾಗ ನೀವೆಷ್ಟು ಕೃತಘ್ನರು ಎಂಬುದನ್ನೊಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕು.
ಮತ್ತೊಂದು ದೇಶದಲ್ಲಿ ಸ್ವಲ್ಪ ವಯಸ್ಸಾದರೆ ಮಕ್ಕಳನ್ನು ಹೊರಹಾಕುವ ಕಾನೂನಿರುವಾಗ ಮಗನಿಗೊಂದು ಮಗುವಾಗವವರೆಗೆ ಅವನನ್ನು ಸಲಹುವ ತಂದೆಯರಿರುವ ಭಾರತದಲ್ಲೆ ಫಾದರ್ಸ್ ಡೇ ಅರ್ಥಪೂರ್ಣ. ಪಾಶ್ಚಾತ್ಯ ಸಂಸ್ಕೃತಿ ಎಂಬ ಪೂರ್ವಾಗ್ರಹ ಬಿಟ್ಟು ತಂದೆಗೊಂದು ಗೌರವ ಸಲ್ಲಿಸೋಣ. ಒಳ್ಳೆಯದು ಜಗತ್ತಿನ ಯಾವ ಮೂಲೆಯಲ್ಲಿದ್ದರೂ ಅದನ್ನು ಸ್ವೀಕರಿಸೋದು ಪ್ರಬುದ್ಧತೆಯ ಪ್ರತೀಕ. ನಮ್ಮ ಜನ್ಮಕ್ಕೆ ಕಾರಣನಾಗಿ ಆಜನ್ಮ ನಮಗೆ ಆಧಾರವಾಗಿರುವ ಜನಕನನ್ನು ಕೊನೆತನಕ ನೆನೆಯೋಣ. “ಹ್ಯಾಪಿ ಫಾದರ್ಸ್ ಡೇ”…..

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..