447

ಗಾಂಧಿನಗರದಿಂದ ಗಂಧದಗುಡಿಯವರೆಗೆ-part2

ಸಿನಿಮಾ ಮಾಡುವುದು ಇಂಥ ತಂತ್ರಜ್ಞಾನ ಇರುವ ಕಾಲದಲ್ಲಿ ಸುಲಭದ ಕೆಲಸ. ಅದಕ್ಕೆ ಒಂದು ಸುಸಜ್ಜಿತ ಕಥಾಹಂದರ ಬೇಕಿಲ್ಲ. ಹಾಡುಗಳನ್ನು ಬರೆಯಬೇಕಿಲ್ಲ. ಬರೆದಿದ್ದನ್ನೆ ಹಾಡು ಮಾಡಿದರಾಯಿತು. ಭಾಷೆ ಬಂದರೆ ಸರಿ ಬರದಿದ್ದರೆ ಡಬ್ಬಿಂಗ್ ಮಾಡೋರಿಗೆ ಕೊರತೆ ಇಲ್ಲ. ಒಂದೆರಡು ವಾರ ಚಿತ್ರಮಂದಿರಗಳಲ್ಲಿ ಓಡಿ ನಂತರ ಸೆಟ್’ಲೈಟ್ ಹಕ್ಕುಗಳ ಮಾರಾಟ ಮಾಡಿ ಕೊನೆ ಪಕ್ಷ ಹಾಕಿದಷ್ಟು ದುಡ್ಡು ತೆಗೆದರೆ ಒಂದು ಸಿನಿಮಾದ ಕಥೆ ಅಲ್ಲಿಗೆ ಶುಭಂ.
ವಿಚಿತ್ರವೆಂದರೆ ಶುದ್ಧ ಕಥಾಹಂದರಗಳನ್ನಿಟ್ಟುಕೊಂಡು ಒಂದು ಕಾಲಕ್ಕೆ ಮಾತೇ ಆಡದೇ ಮೂಕಿಚಿತ್ರಗಳು ಮೂಡಿಬರುತ್ತಿದ್ದವು. ಬಂದದ್ದು ಕೆಲವೇ ಚಿತ್ರಗಳಾದರೂ ಅದರದೇ ಒಂದು ಪರಂಪರೆಯನ್ನು ಛಾಪನ್ನು ಮೂಡಿಸಿ ಹೋದವು. ಅದರಲ್ಲಿ ಹೆಚ್ಚಾನುಹೆಚ್ಚು ಕರ್ನಾಟಕದಲ್ಲಿಯೇ ಮಾಡಲ್ಪಟ್ಟಿದ್ದವು.
ಅದರ ಕಾಲ ಶುರುವಾಗೋದು 1929ರಲ್ಲಿ. ಮುಂಬೈ ಮೂಲದ ಮೋಹನ್ ದಯಾರಾಮ್ ಭವಾನಾನಿ ಕರ್ನಾಟಕದಲ್ಲಿ ಮೃಚ್ಛಕಟಿಕ ಎಂಬ ಮೊದಲ ಮೂಖಿಚಿತ್ರ ಮಾಡಲು ನಿರ್ಧರಿಸಿದರು. ನಟಿಸಿದ್ದು ಟಿ.ಪಿ ಕೈಲಾಸಂ ಮತ್ತು ಕಮಲಾದೇವಿ ಚಟ್ಟೋಪಾಧ್ಯಾಯ. ಮೃಚ್ಛಕಟಿಕ ಸುದ್ರಕಾ ಎಂಬುವವರು ಬರೆದ ಸಂಸ್ಕೃತ ನಾಟಕ. ಅದು ಭಾರತದ ಪಶ್ಚಿಮ ರಾಜ್ಯಗಳಲ್ಲಿ ಹೆಚ್ಚು ಭಾರಿ ಪ್ರದರ್ಶನ ಕಂಡಿತ್ತು. ಅದನ್ನು ರೈಡರ್ ಎಂಬ ಸಾಹಿತಿ 1905ರಲ್ಲಿ Little clay cart ಎಂಬ ಹೆಸರಿನಲ್ಲಿ ತರ್ಜುಮೆ ಮಾಡಿದ. ಇದೇ ನಾಟಕ ಬಹುಭಾಷೆಗಳಲ್ಲಿ ತರ್ಜುಮೆಗೊಂಡಿತ್ತು. ಅದಕ್ಕೂ ಮೊದಲೇ ಕರ್ನಾಟಕದ ನಾಟಕರಂಗದ ದಿಗ್ಗಜ ಗುಬ್ಬಿ ವೀರಣ್ಣ ಹರಿಮಾಯೇ ಎಂಬ ಚಿತ್ರವನ್ನು ಕರ್ನಾಟಕ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದರು. ೧೯೩೦ರಲ್ಲಿ ಮತ್ತೊಂದು ಚಿತ್ರ His love affair ಎಂಬುದು ಕೂಡಾ ಅದೇ ಬ್ಯಾನರ್ ಅಡಿಯಲ್ಲಿ ಮೂಡಿಬಂದಿತ್ತು. ಹೀಗೆ ಸಣ್ಣದಾಗಿ ಬೆಳೆದ ಮೂಖಿಚಿತ್ರ ೧೯೧೬ರಿಂದ ೧೯೩೩ರ ಮಧ್ಯೆ ಒಟ್ಟು ೧೦೮ ಚಿತ್ರಗಳು ದಕ್ಷಿಣ ಭಾರತದಲ್ಲಿ ತೆರೆಗೆ ಬಂದವು. ಇದರ ಮೇಲೆ ಆಗಿನ ಕಾಲದಲ್ಲಿ ಅವುಗಳು ಅದೆಷ್ಟು ಜನರನ್ನು ತಲುಪಿದ್ದವು ಎಂಬುದನ್ನು ಅರಿಯಬಹುದು. ಕೇವಲ ೧೪ ರಿಂದ ೧೫ ವರ್ಷದಲ್ಲಿ ೧೦೮ ಚಿತ್ರವೆಂದರೆ ಸರಾಸರಿ ವರ್ಷಕ್ಕೆ ೭ ಚಿತ್ರಗಳು ಮತ್ತು ನೆಲಕಚ್ಚಿದ ಚಿತ್ರಗಳು ವಿರಳ. ಹಾಗೆಂದರೆ ಆಗಿನ ಕಾಲದ ಮನೋರಂಜನೆಯ ಹಸಿವನ್ನು ಸಂಪೂರ್ಣವಾಗಿ ನೀಗಿಸಲು ಮೂಕಿಚಿತ್ರಗಳು ಶಕ್ತವಾಗಿದ್ದವು. ದಕ್ಷಿಣ ಭಾರತ ಎಂದರೆ ಬರೀ ಕನ್ನಡ ಮಾತ್ರ ಅಲ್ಲ. ಅಲ್ಲಿ ಐದಾರು ಭಾಷೆಗಳ ಸಮಾನ ಕೊಡುಗೆ ಇತ್ತು. ಮಾತೇ ಆಡದೇ ಬರೀ ಭಾವಾಭಿವ್ಯಕ್ತಿಗೆ ಪ್ರಾಧಾನ್ಯತೆ ಕೊಟ್ಟು ಅದರಲ್ಲಿಯೇ ಜನರನ್ನು ಹಿಡಿದಿಡುವುದು ಸರಳ ಕೆಲಸವಲ್ಲ. ಕೋಟಿ ಕೋಟಿ ದುಡ್ಡು ಸುರಿದು ಇಲ್ಲಸಲ್ಲದ ಕಿರಿಕಿರಿ ಮಾಡಿಕೊಂಡು ಒಂದೇ ಒಂದು ವಾರವೂ ಚಿತ್ರಮಂದಿರಗಳಲ್ಲಿ ನಿಲ್ಲದ ಚಿತ್ರಗಳ ಮಧ್ಯೆ ಅವತ್ತಿನ ಜನರ ಅಭಿರುಚಿಯ ಗ್ರಂಥಿಗಳನ್ನು ಸರಿಯಾಗಿ ಚಿತ್ರ ನಿರ್ದೇಶಕರು ಬಲ್ಲವರಾಗಿದ್ದರು.
ಕನ್ನಡದ ಮೊದಲ ಚಿತ್ರವನ್ನು ನಿರ್ದೇಶಿಸಿದ Y.V.Rao ಸಾಲು ಸಾಲು ಮೂಕಿಚಿತ್ರಗಳನ್ನು ಮಾಡಿದರು.ಪಾಂಡವ ಅಜ್ಞಾತವಾಸ, ಪಾಂಡವ ನಿರ್ವಾಣ, ಹರಿಮಾಯೆ ಇತ್ಯಾದಿ ಚಿತ್ರಗಳು ಬಂದವು. ವಾಕ್ಚಿತ್ರಗಳು ಬಂದ ನಂತರದ ಕಾಲಘಟ್ಟದಲ್ಲೂ ಮೂಖಿಚಿತ್ರಗಳು ಮೂಡಿಬಂದವು. Universal star ಎಂದೇ ಖ್ಯಾತಿ ಪಡೆದಿರುವ ಕಮಲ್ ಹಾಸನ್ ಅಭಿನಯಿಸಿದ ಪುಷ್ಪಕ ವಿಮಾನ ತೀರಾ ಇತ್ತೀಚಿನ ಚಿತ್ರಗಳಲ್ಲೊಂದು. ಅದು ೧೯೮೭ರಲ್ಲಿ ನಿರ್ಮಾಣಗೊಂಡ ಚಿತ್ರ. ಸಿಂಗೀತಂ ಶ್ರೀನಿವಾಸನ್ ಈ ಚಿತ್ರವನ್ನು ನಿರ್ದೇಶಿಸಿದ್ದರು. ಕನ್ನಡದಲ್ಲಿ ೨೦೦೮ ರಲ್ಲಿ ಅಂದರೆ ತೀರಾ ಇತ್ತೀಚೆಗೆ Mirror ಎಂಬ ಹೊಸ ಮೂಕಿಚಿತ್ರ ಬಂದರು ಹೆಸರು ಮಾಡಲಿಲ್ಲ.
ಸದ್ದುಗದ್ದಲದಲ್ಲಿ ಅಬ್ಬರಗಳ ಕಾಲದಲ್ಲಿ ಮೂಕಿಚಿತ್ರ ತೆಗೆದರೆ ಅದು ಅರಣ್ಯರೋದನವೇ ಸರಿ. ನಟನೆ ಬರದಿದ್ದರೂ ಸರಿ ಗ್ಲಾಮರ್ ಇದ್ದರೆ ಸಾಕು ಎಂಬಂತಿರುವ ಕಾಲದಲ್ಲಿ ನವರಸಗಳನ್ನು ತುಂಬಿಕೊಂಡು ಪಾತ್ರವೇ ತಾವಾಗುವವರ ಕಲೆ ಯಾರು ತಾನೇ ನೋಡಿಯಾರು. ಕಾಲೇಜುಗಳಲ್ಲಿ ಮೈಮ್ ಶೋಗಳು ಮಾತ್ರ ಆಗಿನ ಕಾಲದ ಮೂಕಿಚಿತ್ರದ ಪ್ರತಿನಿಧಿಗಳಾಗಿ ನಮ್ಮ ಮುಂದೆ ನಿಂತಿರುವುದು ಕಲೆಯೊಂದು ಅವಸಾನಗೊಳ್ಳುತ್ತಿರುವ ಗುರುತುಗಳೆಂದರೂ ಸರಿಯೇ. ತೀರಾ ಹಳೆಯ ಚಿತ್ರಗಳು ಬೇಡ ಪುಷ್ಪಕ ವಿಮಾನವನ್ನೇ ಒಮ್ಮೆ ನೋಡಿ ಬರೀ ಸಣ್ಣದೊಂದು ವಾದ್ಯವನ್ನು ನುಡಿಸುವುದರ ಮೂಲಕವೂ ತಾವು ಏನನ್ನು ಹೇಳಲು ಹೊರಟಿದ್ದೇವೆ ಎಂಬುದನ್ನು ತೋರಿಸುತ್ತಾರೆ. ಕಮಲ್ ಹಾಸನ್’ರ ಅಭಿನಯಕ್ಕೆ ಎರಡು ಮಾತೇ ಇಲ್ಲ. ಚಿತ್ರದಲ್ಲಿ ಮಾತೇ ಇಲ್ಲದೇ ಮೂರು ಗಂಟೆಗಳ ಕಾಲ ಜನರನ್ನು ಹಿಡಿದಿಡುವುದು ಸಾಮಾನ್ಯ ಕೆಲಸವೇ?. ಹಿಂದೊಮ್ಮೆ ಚಾರ್ಲಿ ಚಾಪ್ಲಿನ್ ಎಂಬ ಹಾಸ್ಯ ಚಕ್ರವರ್ತಿ ತನ್ನ ಅಂಗ ಭಾಷೆಯಿಂದಲೇ ಜನರನ್ನು ನಗೆಗಡಲಲ್ಲಿ ತೇಲಿಸುತ್ತಿದ್ದ. ಅದೇ ರೀತಿ ಪುಷ್ಪಕ ವಿಮಾನವೂ ನಟನ ಜೀವನದಲ್ಲಾಗುವ ಅನಿರೀಕ್ಷಿತ ತಿರುವುಗಳನ್ನು ತೋರಿಸುತ್ತಾ ಹೋಗುತ್ತದೆ. ಮಧ್ಯೆ ಮಧ್ಯೆ ಪ್ರೇಕ್ಷಕನನ್ನು ಯಾವುದೇ ಪ್ರಹಸನಗಳಿಲ್ಲದೇ ನಗಿಸುತ್ತದೆ. ಇಂಥ ಪ್ರಯೋಗಾತ್ಮಕ ಚಿತ್ರಗಳು ಹೆಚ್ಚು ಹೆಚ್ಚು ಮೂಡಿ ಬರಲಿ…..

Part one is here : ಗಾಂಧಿನಗರದಿಂದ ಗಂಧದಗುಡಿಯವರೆಗೆ Part1

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..