1574

Happy independence day folks!!

bhasjarಭಾಸ್ಕರ್ ಬಂಗೇರ
ಒಕ್ಕೂಟ ವ್ಯವಸ್ಥೆಯನ್ನು ಹೊಂದಿರುವ ಈ ದೇಶವು ಬಹುತ್ವ ಹಾಗು ಐಕ್ಯತೆಯ ಕಾರಣಗಳಿಂದಾಗಿ ಇಂದಿಗೂ ತನ್ನ ಅಖಂಡತೆಯನ್ನು ಉಳಿಸಿಕೊಂಡಿದೆ. ಸಾವಿರಾರು ರಾಜರು, ಸುಲ್ತಾನರು ಹಾಗು ಸಾಮಂತರ ಆಳ್ವಿಕೆಯಲ್ಲಿ ಸ್ವಾತಂತ್ರ್ಯವೇ ಇಲ್ಲದೆ ಶತಶತಮಾನಗಳ ಕಾಲ ಬದುಕು ಸವೆಸಿದ ಮಂದಿ ಪರಕೀಯರ ಆಳ್ವಿಕೆಯ ವಿರುದ್ಧ ಸಿಡಿದೆದ್ದ ರೀತಿ, ಅಷ್ಟು ದೊಡ್ಡ ಜನಾಂದೋಲನ ರೂಪುಗೊಳ್ಳಲು ಕಾರಣೀಭೂತವಾದ ಅಂಶಗಳು ನಿಜಕ್ಕೂ ಅಚ್ಚರಿ ಹುಟ್ಟಿಸುತ್ತವೆ. ಇತಿಹಾಸದಲ್ಲಿ ದಾಖಲಾಗದೆ ಉಳಿದ ಅದೆಷ್ಟು ನಿಸ್ವಾರ್ಥ ದೇಶಪ್ರೇಮಿಗಳ ತ್ಯಾಗ, ಬಲಿದಾನಗಳು ಈ ಮಣ್ಣಿನ ಒಳಗಡೆ ಎದೆ ಮೇಲೆ ಕೈ ಇಟ್ಟುಕೊಂಡು ಹೆಮ್ಮೆಯಿಂದ ಬೆಚ್ಚಗೆ ಮಲಗಿವೆಯೋ ಯಾರು ಬಲ್ಲರು. ಶಾಂತಿ ಮಂತ್ರ ಜಪಿಸಿದ ಗಾಂಧೀ, ಕ್ರಾಂತಿಯ ಕಿಡಿ ಹೊತ್ತಿಸಿದ ಭಗತ್ ಸಿಂಗ್, ಸಂಘಟನೆಯ ಚತುರತೆ ಭೋಧಿಸಿದ ಸುಭಾಷ್ ಚಂದ್ರ ಬೋಸ್, ರಾಜತಾಂತ್ರಿಕ ನಡೆಗಳನ್ನು ಬ್ರಿಟಿಷರಿಗೇ ತಿರುಗಿ ಕಲಿಸಿದ ನೆಹರು ಹಾಗು ಪಟೇಲರು ಹೀಗೆ ಎಲ್ಲರೂ ಸಹ ಈ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವ ನಿಟ್ಟಿನಲ್ಲಿ ಗುಲಾಮಗಿರಿಗೆ ಒಗ್ಗಿ ಹೋಗಿದ್ದವರಿಗೆ ದೇಶಪ್ರೇಮದ ಹುಗ್ಗಿ ಉಣಬಡಿಸಿದವರು.
ಸಹಸ್ರ ಸಮಾಧಿಗಳ ಮೇಲೆ ಕೊನೆಗೂ ಸ್ವಾತಂತ್ರ್ಯದ ಮಹಡಿ ಮನೆ ಕಟ್ಟುವಲ್ಲಿ ನಮ್ಮವರು ಯಶ ಕಂಡರು. ಆದರೆ ಈ ಮಹಡಿ ಮನೆಯಲ್ಲಿ ಮೇಲು ಕೀಳು ಎಂಬ ಭಾವ ಇಂದಿಗೂ ಉಳಿದುಬಿಟ್ಟಿದೆ. ಖುದಿ ರಾಮ್ ಬೋಸ್, ಬಲ್ಲುರಾಮ್ ಮೆಹ್ತರ್, ಅಶ್ಫಾಖುಲ್ಲ ಖಾನ್, ಜೋಚಿಮ್ ಆಳ್ವ ಇವರೆಲ್ಲರೂ ಯಾವ ಪಂಗಡಗಳಿಗು ಸೇರದವರು ಹಾಗು ಇವತ್ತಿಗೂ ಸ್ವಾತಂತ್ರ್ಯ ಹೋರಾಟಗಾರರೆಂದಷ್ಟೇ ಗುರುತಿಸಲ್ಪಡುವವರು. ಆದರೆ ಅವರು ಗಳಿಸಿ ಕೊಟ್ಟ ಸ್ವಾತಂತ್ರ್ಯವನ್ನು ಅನುಭವಿಸುತ್ತಿರುವ ನಾವು ಮತ್ತಷ್ಟು ಆಂತರಿಕ ದಂಗೆ, ದಬ್ಬಾಳಿಕೆಗಳನ್ನು ಸೃಷ್ಟಿಸಿದ್ದೇವೆ ಹೊರತು ಅದರ ವ್ಯಾಪ್ತಿಯನ್ನು ವಿಸ್ತರಿಸುವ ಬಗ್ಗೆ ಚಿಂತಿಸಲಿಲ್ಲ. ರಾಷ್ಟ್ರೀಯ ಬಾವುಟದ ಹಾರಾಟದ ಬಗ್ಗೆ, ಯಾರೋ ಅದರ ಬಗ್ಗೆ ತೋರುವ ನಿರ್ಲಕ್ಷ್ಯದ ಬಗ್ಗೆ ಕೋಪಗೊಳ್ಳುವ ನಾವು ಬೀದಿ ಬದಿಯಲಿ ಬಾವುಟ ಮಾರುವ ಪುಟಾಣಿಗಳ ಬಗ್ಗೆಯಾಗಲಿ, ಸ್ವಾತಂತ್ರ್ಯದಿನಾಚರಣೆಯ ಮಧ್ಯಾಹ್ನವೇ ಕಂಡ ಕಂಡಲ್ಲಿ ಪ್ಲಾಸ್ಟಿಕ್ ಬಾವುಟ ಎಸೆದು ಹೋಗುವ ಅರ್ಧ ದಿನದ ದೇಶಪ್ರೇಮಿಗಳ ಬಗ್ಗೆಯಾಗಲಿ ಯೋಚಿಸುವುದೇ ಇಲ್ಲ.
ಒಟ್ಟಾರೆ ಸ್ವಾತಂತ್ರ್ಯದ ಆಶಯಗಳಾದ ಸ್ವತಂತ್ರ ಆಲೋಚನೆ, ಸಾಮಾಜಿಕ ನ್ಯಾಯ, ಒಕ್ಕೂಟ ವ್ಯವಸ್ಥೆಯ ಹಿತ ಪಾಲನೆ, ಬಹುತ್ವದಲ್ಲಿ ನಂಬಿಕೆ ಮುಂತಾದವುಗಳು ಮುಂದೆಯೂ ಈ ದೇಶದ ಉಸಿರಾಗಿರಲಿ. ಸರ್ವರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭ ಹಾರೈಕೆಗಳು. ಜಯ ಕರ್ನಾಟಕ, ಜಯ ಭಾರತ. ವಂದೇ ಮಾತರಂ.

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..