2505

ಚಂದ್ರಮ

ಶಶಾಂಕ ಎಂದರೆ ಚಂದ್ರ ಎಂದು ಅರ್ಥವಂತೆ. ಅದು ಹೇಗೆ ಎಂದು ನಾನು ಅಮ್ಮನನ್ನು ಕೇಳಿದಾಗ ಅಮ್ಮ ಹೇಳುತ್ತಿದ್ದಳು. ಶಶ ಎಂದರೆ ಮೊಲ, ಅದನ್ನು ಧರಿಸಿದವ ಅಂದರೆ ಅಂಕ ಚಂದ್ರ ಅಂತ. ನನ್ನ ದೊಡ್ಡಮ್ಮ ಹೇಳಿದ್ದೇ ಬೇರೆ. ಶಶಿ ಎಂದರೆ ಚಂದ್ರ ಅವನನ್ನು ಧರಿಸಿದವ ಈಶ್ವರ ಹಾಗಾಗಿ ಶಶಾಂಕ ಎಂದರೆ ಈಶ್ವರ ಅಂತ. ನನಗೆ ಆಗ ಹರಿ ಹರರಲ್ಲಿ ಭೇಧ ಇತ್ತು. ರಕ್ಕಸರಿಗೆಲ್ಲಾ ವರ ಕೊಡುವ ಹರ ಎಂದರೆ ಏಕೊ ಸ್ವಲ್ಪ ಬೇಸರ ಇತ್ತು. ಬಿಡಿ ಇನ್ನೂ ಶಾಲೆಗೆ ಹೋಗದ ಪ್ರಾಯ ಅದು. ಹಾಗಾಗಿ ನಾನು ಶಶಾಂಕ ಎಂದರೆ ಚಂದ್ರ ಎಂದೇ ಭಾವಿಸಿದೆ. ಇದು ಚಂದ್ರನ ಕಡೆಗೆ ಒಂದು ರೀತಿಯ ವಿಶಿಷ್ಠ ಆಕರ್ಷಣೆಗೆ ಒಳ ಮಾಡಿತ್ತು.

ಇಷ್ಟಾಗುವಾಗ ಒಮ್ಮೆ ಚಂದ್ರಗ್ರಹಣ ಆಯಿತು. ಆಗ ನನ್ನಪ್ಪ ನನ್ನನ್ನು ತೆಂಕೋಡು ಬಯಲಿಗೆ ಕರೆದುಕೊಂಡು ಹೋಗಿದ್ದ ಗ್ರಹಣ ತೋರಿಸಲು. ಹುಣ್ಣಿಮೆಯ ಪೂರ್ಣಚಂದ್ರನಲ್ಲಿ ಮೊಲವನ್ನೂ ತೋರಿಸಿದ್ದ ಅಪ್ಪ ನನಗೆ. ಅಂದರೆ ಅಪ್ಪ ನನಗೆ ಅಂತಸ್ಥವಾಗಿರುವುದನ್ನೂ ತೋರಿಸಿದ್ದ ಎಂದು ಅನ್ನಿಸುತ್ತದೆ ಈಗ. ಆಮೇಲೆ ಎಲ್ಲರ ಹಾಗೆ ನಾನು ಶಾಲೆಗೆ ಸೇರಿದೆ. ಅಲ್ಲಿ ಪಾಠ ಮಾಡುವಾಗ ಮೇಷ್ಟರು ಹೇಳಿದ್ದು, ಚಂದ್ರನಿಗೆ ಸ್ಚಯಂ ಪ್ರಕಾಶ ಇಲ್ಲ. ಆತ ಸೂರ್ಯನ ಬೆಳಕನ್ನು ಪ್ರತಿಫಲಿಸುತ್ತಾನೆ ಅಷ್ಟೆ ಎಂದು. ನನಗೆ ಆಗ ಬಂದ ಒಂದು ಡೌಟು, ರಾತ್ರಿ ಮುಳುಗಿದ ಸೂರ್ಯ ರಾತ್ರಿ ಹೇಗೆ ಚಂದ್ರ ಬೆಳಗುವಂತೆ ಮಾಡುತ್ತಾನೆ ಎಂದು. ಮುಂದೆ ಹೋದಂತೆಲ್ಲಾ ಚಂದ್ರನ ಮೇಲೆ ಮಾನವ ಇಳಿದದ್ದು, ಸೂರ್ಯ ಗಾತ್ರದಲ್ಲಿ ಬಹಳ ದೊಡ್ಡವ, ಚಂದ್ರ ನಮ್ಮಿಂದ ದೂರದಲ್ಲಿದ್ದಾನೆ ಹಾಗಾಗಿ ಇದೆಲ್ಲ ಸಾಧ್ಯ ಎಂದು ತಿಳಿಯಿತು. ಇದಾಗಿ ಸ್ವಲ್ಪ ದಿನದಲ್ಲೇ ಚಂದ್ರನ ಮೇಲೆ ಗಾಳಿ ಇಲ್ಲದಿರುವುದು ತಿಳಿಯಿತು. ನಂತರ ತಿಳಿದಿದ್ದು, ಅಮೆರಿಕನ್ನರು ಅಲ್ಲಿ ಹಾರಿಸಿದ ಧ್ವಜ ಹಾರಾಡಲು ಸಾಧ್ಯವೇ ಇಲ್ಲ ಯಾಕೆಂದರೆ ಅಲ್ಲಿ ಗಾಳಿಯೇ ಇಲ್ಲ. ಹಾಗಾಗಿ ಅದೊಂದು ಕಟ್ಟು ಕಥೆ ಎನ್ನುವುದು. ಮುಂದೆ ವಿಜ್ನಾನದ ವಿದ್ಯಾರ್ಥಿಯಾಗದ ನಾನು ಇದನ್ನು ಇನ್ನೂ ಹೆಚ್ಚು ತಿಳಿಯಲು ಹೋಗಲಿಲ್ಲ.

ಮನೆಯಲ್ಲಿ ಇದ್ದ ಅಮ್ಮೊಮ್ಮ ಹೇಳುತ್ತಿದ್ದ ಕತೆಗಳು ನನ್ನನ್ನು ಪುರಾಣದ ಕಡೆ ಬಹಳ ಆಕರ್ಷಿಸಿ ಬಿಟ್ಟಿದ್ದವು. ಇದಕ್ಕೆ ಊರಲ್ಲಿ ನಡೆಯುತ್ತಿದ್ದ ಯಕ್ಷಗಾನ ಕೂಡಾ ನೀರೆರೆಯಿತು. ಅಪ್ಪ ನನಗೆ ಓದುವ ಚಟ ಹತ್ತಿಸಿಬಿಟ್ಟ, ಪುಸ್ತಕ ಕೊಟ್ಟು. ಈ ಚಟ ತೀರಿಸುವ ಸಲುವಾಗಿ ಮೊನ್ನೆ ವಿಷ್ಣುಪುರಾಣ ಹಿಡಿದು ಕುಳಿತೆ. ಅದರಲ್ಲಿನ ಎರಡು ಶ್ಲೋಕಗಳು ಹೀಗಿವೆ.

“ಸೂರ್ಯರಶ್ಮಿಃ ಸುಷುಮ್ನೋ ಯಸ್ತರ್ಪಿತಸ್ತೇನ ಚನ್ದ್ರಮಾಃ|
ಕೃಷ್ಣಪಕ್ಷೇಽಮರೈಃ ಶಶ್ವತ್ ಪೀಯತೇ ವೈ ಸುಧಾಮಯಃ||
(೨-೧೧-೨೨)

“ಪೀತಮ್ ತಂ ದ್ವಿಕಲಂ ಸೋಮಂ ಕೃಷ್ಣಪಕ್ಷಕ್ಷಯೇ ದ್ವಿಜ|
ಪಿಬನ್ತಿ ಪಿತರಸ್ತೇಷಾಂ ಭಾಸ್ಕರಾತ್ತರ್ಪಣಂ ತಥಾ||
(೨-೧೧-೨೩)

ಇವೆರಡರ ಅರ್ಥ ಸಂಕ್ಷಿಪ್ತವಾಗಿ ಹೇಳಿದರೆ ಇಂತಿದೆ.

ಸೂರ್ಯನ ರಶ್ಮಿಗಳಲ್ಲಿ ಒಂದಾದ ಸುಷುಮ್ನಾ ಎಂಬ ಕಿರಣವು ಚಂದ್ರನನ್ನು ತೃಪ್ತಿ ಪಡಿಸಿ ವರ್ಧಿಸುತ್ತದೆ. ಕೃಷ್ಣ ಪಕ್ಷದಲ್ಲಿ ದೇವತೆಗಳು ಚಂದ್ರನನ್ನು ಕುಡಿಯುತ್ತಾರೆ. ಕೊನೆಯ ಎರಡು ಕಲೆಗಳಿರುವಾಗ ಪಿತೃಗಳು ಚಂದ್ರನನ್ನು ಕುಡಿಯುತ್ತಾರೆ.

ಚಂದ್ರನಿಗೆ ಸ್ವಯಂ ಪ್ರಕಾಶವಿಲ್ಲ; ಆತ ಸೂರ್ಯನ ಬೆಳಕಿನಿಂದ ಬೆಳಗುವುದು ಎನ್ನುವುದನ್ನು ಕಡಿಮೆ ಎಂದರೂ ಐದು ಸಾವಿರ ವರ್ಷಗಳ ಮೊದಲು ಭಾರತೀಯ ಋಷಿಮುನಿಗಳು ತಿಳಿದಿದ್ದರು. ಆದರೆ ಅವರ ಬಳಿ ಯಾವುದೇ ಟೆಲೆಸ್ಕೋಪ್ ಇರಲಿಲ್ಲ ಅಥವಾ ಮತ್ಯಾವುದೇ ಉಪಕರಣಗಳೂ ಇರಲಿಲ್ಲ. ಸೂರ್ಯನ ಕಿರಣಗಳ ಏಳು ಬಣ್ಣಗಳನ್ನೂ ತಿಳಿಸಿದ್ದರು. ಕಿರಣಗಳ ಪ್ರಕಾರವನ್ನೂ ತಿಳಿಸಿದ್ದರು. ಇಲ್ಲವಾದರೆ ‘ಸುಷುಮ್ನಾ’ ಎಂಬ ಒಂದು ಕಿರಣ ಎನ್ನುತ್ತಿರಲಿಲ್ಲ. ಸೂರ್ಯನ ಎಲ್ಲಾ ಕಿರಣಗಳೂ ಈಗ ಚಂದ್ರನ ಮೇಲೆ ಬೀಳಲು ಸಾಧ್ಯವೇ ಇಲ್ಲ. ಮತ್ತು ಈ ಕಿರಣ ಸೂರ್ಯ ಅಸ್ತಮಿಸಿದಾಗ ಮಾತ್ರ ಹೊರಡುತ್ತದೆ ಎಂದಾಯಿತು. ಈ ಕಿರಣಕ್ಕೆ ಆಧುನಿಕ ವಿಜ್ಞಾನ ಏನಾದರೂ ಹೆಸರಿಟ್ಟಿದ್ದರೆ ಅದನ್ನು ನನಗೆ ತಿಳಿಸಿಕೊಡಿ. ನನಗೆ ಗೊತ್ತಿಲ್ಲದೇ ಕೇಳುತ್ತಿದ್ದೇನೆ.

ಕುಡಿಯುತ್ತಾರೆ ಎಂದರೆ ಅಲ್ಲಿ ಏನೋ ದ್ರವ ಪದಾರ್ಥ ಇರಲೇ ಬೇಕಲ್ಲ, ಚಂದ್ರನನ್ನು ಸೋಮ ಎಂದೂ ಕರೆಯುತ್ತಾರೆ. ಹಾಗಾಗಿ ಅಲ್ಲಿ ಸೋಮರಸವಿದೆಯೇ ಎಂದು ಪ್ರಶ್ನಿಸಿದರೆ ಅದು ಶುದ್ಧ ತಲೆಹರಟೆ ಅಷ್ಟೆ. ಪಿತೃಗಳು ಬಾಯಾರಿದಾಗ ನೀರು ಮಾತ್ರ ಕುಡಿಯುವುದು ಎನ್ನುತ್ತಾರೆ. ತರ್ಪಣದಲ್ಲಿ ನೀರನ್ನೇ ಅರ್ಪಿಸುವುದು. ಯಾವ ಹಣ್ಣಿನ ರಸವನ್ನೋ ಅಥವಾ ಮತ್ಯಾವುದೋ ಪಾಕವನ್ನು ಅರ್ಪಿಸುವುದಿಲ್ಲ. ಪಿಶಾಚಿಗಳು ಸದಾ ಬಾಯಾರಿ ಇರುತ್ತಾರೆ ಎಂದೂ ಹೇಳುತ್ತಾರೆ.
ಸ್ವಲ್ಪ ಹಿಂದಕ್ಕೆ ಹೋಗೋಣ. ಕೆಲವೇ ವರ್ಷಗಳಿಗೆ ಮೊದಲು ಭಾರತೀಯ ಬಾಹ್ಯಾಕಾಶ ಸಂಸ್ಥಾನ ಉಪಗ್ರಹವನ್ನು ಕಳಿಸಿ ಚಂದ್ರನ ಅಧ್ಯಯನ ಮಾಡಿದಾಗ ಚಂದ್ರನಲ್ಲಿ ನೀರಿರುವುದು ಕಂಡುಬಂದಿತ್ತು, ವರಾಹ ಮಿಹಿರನೂ ಕೂಡಾ ಇದನ್ನು ಹೇಳಿರುವುದು ವರದಿಯಾಗಿತ್ತು. ಆದರೆ ಇವರಿಬ್ಬರಿಗೂ ಮೊದಲೇ ೨೮ನೇ ದ್ವಾಪರದಲ್ಲಿ ವ್ಯಾಸರಾಗಿದ್ದ ಕೃಷ್ಣ ದ್ವೈಪಾಯನರು ಈ ವಿಷಯವನ್ನು ಹೇಳಿದ್ದರು. ನಮ್ಮ ಪುರಾಣಗಳು ಬರೇ ಕಟ್ಟು ಕಥೆ ಅನ್ನುವವರಿಗೆ ಚಂದ್ರನಲ್ಲಿನ ನೀರು ಮೊದಲೇ ಕಂಡು ಹಿಡಿದದ್ದು ಯಾಕೆ ತಿಳಿದಿಲ್ಲವೋ ಏನೋ.ಬಿಡಿ ಅವರ ಕರ್ಮ ಅದು.

ಚಂದ್ರನನ್ನು ಸುಧಾಕರ ಎಂದೂ ಕರೆಯುತ್ತಾರೆ ಅಲ್ಲವೆ. ಇದಕ್ಕೆ ಕಾರಣವೂ ಈ ಶ್ಲೋಕಗಳಲ್ಲಿದೆ. ದೇವತೆಗಳು ಅರ್ಥಾತ್ ಅಮರರು ಕುಡಿಯುತ್ತಾರೆ ಎಂದರೆ ಅದು ಸುಧೆ ಅರ್ಥಾತ್ ಅಮೃತ ಸಮಾನವಾಯಿತು. ಇದು ರೂಪಕಾಲಂಕಾರ. ಉಪಮಾನ ಉಪಮೇಯಗಳಲ್ಲಿ ಭೇಧ ಇರುವುದಿಲ್ಲ ಇಲ್ಲಿ. ಇದು ಕಾವ್ಯ ಚಂದಗಾಣಲು ಬೇಕೇ ಬೇಕು.

ಮೇಲೆ ನಾನೇ ಮಾಡಿದ ತಲೆಹರಟೆಗೂ ಉತ್ತರವಿದೆ. ಚಂದ್ರಮಾಮನಸೋ ಜಾತಃ (ಪುರುಷಸೂಕ್ತ) ವಿರಾಟ ಪುರುಷನ ಮನಸ್ಸಿನಲ್ಲಿ ಹುಟ್ಟಿದ್ದಂತೆ ಚಂದ್ರ. ಮನಸ್ಸು ಸದಾ ಸಂತೋಷವನ್ನೆ ಬಯಸುತ್ತದೆ. ಹಾಗಾಗಿ ಆನಂದವನ್ನು ಕೊಡುವುದನ್ನು ಚಂದ್ರ ಎಂದರು. ಲಕ್ಷ್ಮೀ ಕೂಡಾ ಶ್ರೀಸೂಕ್ತದಲ್ಲಿ ಚಂದ್ರಮಾ ಎನ್ನಿಸಿಕೊಂಡಿದ್ದು ಇದೇ ಕಾರಣಕ್ಕೆ. ದೇವತೆಗಳು ಕೂಡಾ ಸೋಮರಸವನ್ನು ಸಂತೋಷ ಆನಂದಕ್ಕೆ ಸೇವಿಸುವುದು. ಯಾವ ರಸವು ಆನಂದವನ್ನುಂಟು ಮಾಡುತ್ತದೋ ಅದು ಸೋಮರಸ. ಅದನ್ನು ಕೊಡುವ ಮೂಲಿಕೆ ಸೋಮಲತೆ. ಇಲ್ಲಿಯೂ ಕೂಡಾ ರೂಪಕಾಲಂಕಾರ ಇದೆ.
ಯಾಕೋ ತಾಳಮದ್ದಳೆಯ ಪ್ರಸಿದ್ಧ ಅರ್ಥಧಾರಿ ಜಬ್ಬಾರ್ ಸುಮೋ ಅವರು ಇತ್ತೀಚೆಗೆ ಅವರ ಮುಖ ಪುಸ್ತಕದ ಗೋಡೆಯ ಮೇಲೆ ಬರೆದಿದ್ದು ನೆನಪಾಗುತ್ತಿದೆ. “ಪುರಾಣಗಳಿಗಿಂತ ಅದ್ಭುತ-ರೋಚಕ ಲೋಕ ಮತ್ತೊಂದುಂಟೆ?”

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..