2064

ನೆಟ್ ವರ್ಕ್ ಇಲ್ಲದ ಊರಿನಲ್ಲೊಂದು ಯಕ್ಷಗಾನ…!?

ಯಕ್ಷಗಾನ ಕಲಾವಿದರು ತಮ್ಮ ತಮ್ಮ ಮೇಳಗಳನ್ನು ಸೇರಿಕೊಂಡು ವರ್ಷದ ತಿರುಗಾಟದ ಆರಂಭದ ಹೊಸ್ತಿ ನಲ್ಲಿದ್ದಾರೆ. ಹೋದ ವರ್ಷ ಒಂದು ಮೇಳದಲ್ಲಿದ್ದವರು, ಈ ವರ್ಷ ಇನ್ನೊಂದು ಮೇಳ ಸೇರಿಕೊಂಡಿರುವುದು ಒಂದು ಕಡೆ ಆದರೆ, ಒಂದೇ ಸಂಸ್ಥೆಯಿಂದ ನಡೆಸಲ್ಪಡುವ ಮೇಳಗಳಲ್ಲಿ ಕಲಾವಿದರ ಬದಲಾವಣೆ ಇನ್ನೊಂದು ಕಡೆಯಿಂದ ಸುದ್ದಿ ಮಾಡುತ್ತಾ ಇದೆ. “ಸಾಕಪ್ಪ, ಇನ್ನು ಸ್ವಲ್ಪ ವಿಶ್ರಾಂತಿ ಪಡೆಯೋಣ ” ಅಂತ ಕೆಲವರು ಮೇಳಗಳನ್ನು ಬಿಟ್ಟು ಅತಿಥಿ ಕಲಾವಿದರ ಸ್ಥಾನವನ್ನು ಅಲಂಕರಿಸಿದ್ದಾರೆ. ಡೇರೆ ಮೇಳಗಳು ಈ ವರ್ಷ ಜನರನ್ನು ರಂಜಿಸಲು ಯಾವ ನೂತನ ಪ್ರಸಂಗಗಳೊಂದಿಗೆ ದಾಂಗುಡಿ ಇಡುತ್ತಿವೆ ಎಂದು ಜನ ಕಾತರರಾಗಿದ್ದಾರೆ.

“ಏನಪ್ಪಾ ಇದು, ನೆಟ್ ವರ್ಕಿಗೂ ಯಕ್ಷಗಾನಕ್ಕೂ ಏನು ಸಂಬಂಧ ?” ಅಂತ ಶೀರ್ಷಿಕೆ ಓದಿದವರಿಗೆ ಒಂದು ಸಂದೇಹ ಬಂದಿರಬಹುದು. ಆಧುನಿಕ ತಂತ್ರಜ್ಞಾನದ ಮಾಯಾಲೋಕದಲ್ಲಿ ಮುಳುಗಿರುವಂತಹ ಪ್ರಸಕ್ತ ಸಮಾಜದಲ್ಲಿ ಅನೇಕ ಪಾರಂಪರಿಕ ಕಲಾ ಪ್ರಕಾರಗಳ ಪರಿಚಯ ಇಲ್ಲದಾಗಿದೆ. ಹಾಗಾಗಿ ನೆಟ್ ವರ್ಕಿಗೂ ಯಕ್ಷಗಾನಕ್ಕೂ ಇರುವ ಸಂಬಂಧ ಸ್ವಲ್ಪ ಹೊತ್ತಲ್ಲೇ ನಿಮಗೆ ಗೊತ್ತಾಗುತ್ತೆ.

ನನ್ನ ಆತ್ಮೀಯ ಗೆಳೆಯನೊಬ್ಬನ ಮನೆಯಲ್ಲಿ ಯಕ್ಷಗಾನ ಹರಕೆ ಬಯಲಾಟವನ್ನು ಆಯೋಜಿಸಿದ್ದರು. ಗೆಳೆಯ ತುಂಬಾ ಆತ್ಮೀಯ ನಾದ್ದರಿಂದ ಹೋಗಲೇಬೇಕಾದ ಪರಿಸ್ಥಿತಿ ಎದುರಾಯಿತು. ಮಧ್ಯಾಹ್ನದ ಭೋಜನಕ್ಕೆ ಹೋಗಲು ಸಾಧ್ಯವಾಗದೆ ಇದ್ದಿದ್ದರಿಂದ ಸಂಜೆ ಹೋಗಿ ಮುಖ ತೋರಿಸಿ ಬರೋಣ ಅಂತ ಸುಮಾರು ೪ ಗಂಟೆ ಹೊತ್ತಿಗೆ ನಾನು ಮತ್ತು ನನ್ನ ಇನ್ನೊಬ್ಬ ಗೆಳೆಯ ಕುಂದಾಪುರದ ಹಾಲಾಡಿ ಹತ್ತಿರದ ಸಣ್ಣ ಊರಿಗೆ ಹೊರಟು ನಿಂತ್ವಿ.

ಊರಿನ ಹೆಸರು ತಿಳಿದಿತ್ತು ಆದರೆ ಎಷ್ಟು ದೂರ ಇದೆ ಅಂತ ನಿಜವಾಗ್ಲೂ ಗೊತ್ತಿರಲಿಲ್ಲ. ಸಂಜೆ ಮರಳಿ ಬರುವ ಯೋಚನೆ ಇದ್ದಿದ್ದರಿಂದ ಮನೆಯಲ್ಲಿ ಕೂಡ ರಾತ್ರಿ ಊಟಕ್ಕೆ ಬರುತ್ತಿವಿ ಅಂತ ಹೇಳಿದ್ವಿ. ಕುಂದಾಪುರದಿಂದ ಹಾಲಾಡಿಗೆ ತೆರಳಿ, ಹಾಲಾಡಿಯಿಂದ ಆ ಊರಿನ ಬಸ್ಸು ಹಿಡಿದಾಗ ಸಂಜೆ ಗಂಟೆ ೫.೩೦. ಆವಾಗಲೇ ತಿಳಿದದ್ದು ಅದು ಆ ಊರಿಗೆ ಕೊನೆಯ ಬಸ್ಸು ಅಂತ. ಆದದ್ದು ಆಗ್ಲಿ ಹೇಗಾದ್ರೂ ಮಾಡಿ ಬರೋಣ ಅಂತ ನಿರ್ಧರಿಸಿ ಇಬ್ಬರು ಆ ಊರಿನ ಬಸ್ ನಿಲ್ದಾಣದಲ್ಲಿ ಇಳಿದು, ಮಣ್ಣಿನ ದಾರಿ, ಹಳ್ಳ, ಹೊಳೆ, ಗದ್ದೆಗಳನ್ನು ದಾಟಿ ನಮ್ಮ ಮಿತ್ರನಾದ ಶೆಟ್ರ ಮನೆಗೆ ಬಂದು ಸೇರಿದ್ವಿ. ಸಾಮಾನ್ಯವಾಗಿ ಒಂದು ಊರಿನಲ್ಲಿ ಆಟದ ಮನೆ ಯಾವುದು ಎಂದು ಕೇಳಿದರೆ ಯಾರು ಬೇಕಾದ್ರೂ ತೋರಿಸುತ್ತಿದ್ದಿದರಿಂದ ಮನೆ ಹುಡುಕುವುದು ಅಷ್ಟೇನೂ ಕಷ್ಟ ಆಗಲಿಲ್ಲ. ಗೆಳೆಯನಿಗೊಂದು ಫೋನ್ ಮಾಡಿ ಕರೆಯ ಬಹುದಿತ್ತಲ್ಲ ಅಂತ ಕೇಳಿದ್ರೆ ಹಾಲಾಡಿ ಬಸ್ ನಿಲ್ದಾಣ ಬಿಟ್ಟ ಕೂಡಲೇ ನಮ್ಮ ಮೊಬೈಲ್, ನೆಟ್ವರ್ಕ್ ಕಳೆದುಕೊಂಡಿತ್ತು. ಅವರ ಮನೆಗೆ ಹೋದ ಮೇಲೆ ತಿಳಿಯಿತು ಅಲ್ಲಿ ಸ್ಥಿರ ದೂರವಾಣಿ ಬಿಟ್ಟು ಬೇರೆ ಯಾವ ಫೋನ್ ಗಳು ಕೆಲಸ ಮಾಡುವುದಿಲ್ಲ ಅಂತ. ಹಾಗೇ ನಮ್ಮ ಕಾಲೇಜಿನಿಂದ ಬಂದ ಇತರ ಗೆಳೆಯರಿಗೆ ಊರನ್ನು ತೋರಿಸಲು ನಮ್ಮ ಶೆಟ್ರು ಅವರ ಜೊತೆ ತೆರಳಿದ ವಿಷಯ ಕೂಡ ತಿಳಿದು ಬಂತು. “ಇಲ್ಲೇ ಹತ್ತಿರ ಹೋಗಿದ್ದಾನೆ ಸ್ವಲ್ಪ ಹೊತ್ತಲ್ಲೇ ಬರುತ್ತಾನೆ” ಅಂತ ಅವರ ಮನೆಯವರು ಹೇಳಿದ್ರು. ಆದದ್ದು ಆಗ್ಲಿ ಬಂದ ಮೇಲೆ ಮುಖ ತೋರಿಸದೇ ಹೋಗಲಿಕ್ಕೆ ಆಗಲ್ಲ ಅಂತ ನಾನು ಮತ್ತೇ ನನ್ನ ಸ್ನೇಹಿತ ಕಾದು ಕೂತ್ವಿ. ರಾತ್ರಿ ೮ ಆಯ್ತು, ೮.೩೦ ಆಯ್ತು ನಮ್ಮ ಗೆಳೆಯರ ಸುಳಿವೇ ಇರಲಿಲ್ಲ.

ನಾನೊಬ್ಬ ಯಕ್ಷಗಾನ ಕಲಾವಿದನಾದ್ದರಿಂದ ಸಹಜವಾಗಿಯೇ ಯಕ್ಷಗಾನದಲ್ಲಿ ಆಸಕ್ತಿ ಇತ್ತು. ಹಾಗಾಗಿ ಇವತ್ತು ಯಕ್ಷಗಾನ ಮುಗಿಸಿಕೊಂಡೇ ಮನೆಗೆ ಹೋಗೋಣ ಅಂತ ನಿರ್ಧಾರ ಮಾಡಿದ್ವಿ. ನಮ್ಮ ನಮ್ಮ ಮನೆಗಳಿಗೆ ಗೆಳೆಯನ ಮನೆಯ ಲ್ಯಾಂಡ್ ಲೈನ್ ನಿಂದ ಕಾಲ್ ಮಾಡಿ ತಿಳಿಸಿದ್ವಿ. ಒಂಬತ್ತು ಗಂಟೆಯ ಸುಮಾರಿಗೆ ಚೌಕಿಯಲ್ಲಿ ಗಣಪತಿ ಪೂಜೆ ಆರಂಭವಾಗುವ ಹೊತ್ತಿಗೆ ನಮ್ಮ ಗೆಳೆಯರ ಬಳಗ ಯಕ್ಷಗಾನದ ಮನೆಗೆ ಪಾದಾರ್ಪಣೆ ಮಾಡಿತು. ಊಟ ಮುಗಿಸಿ ಯಕ್ಷಗಾನ ನೋಡಲು ಕುಳಿತ ಎಲ್ಲರದ್ದೂ ಒಂದೇ ಆರೋಪ ಅದು ನೆಟ್ವರ್ಕ್ ಇಲ್ಲ ಅನ್ನೋದಾಗಿತ್ತು.

ಪ್ರಸಕ್ತ ಕಾಲಘಟ್ಟದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೂ ಹಾಗೂ ಮೊಬೈಲ್ ಫೋನ್ಗೂ ಎಲ್ಲೂ ಇಲ್ಲದ ಅವಿನಾಭಾವ ಸಂಬಂಧ ಅನ್ನಬಹುದು. ನಮಗೆ ಬಿಡುವಿದ್ರೆ ನಮ್ಮ ಕೈಗಳಿಗೆ ಬಿಡುವಿರುವುದಿಲ್ಲ. ಸದಾ ಮೊಬೈಲ್ನಲ್ಲಿ ಮುಳುಗಿ ಮಾತುಕತೆ ಇಲ್ಲದಂತಹ ಅದೆಷ್ಟೋ ಮನಸ್ಸುಗಳು ಅವತ್ತು ಒಂದಾಯಿತು. ನೆಟ್ವರ್ಕ್ ಇಲ್ಲದೆ, ಏನೂ ಪ್ರಯೋಜನಕ್ಕಿಲ್ಲದ ಮೊಬೈಲ್ ಅನ್ನು ಬದಿಗೊತ್ತಿ , ಆಸಕ್ತಿ ಇಲ್ಲದೆ ಇದ್ದಂತಹ ಹಾಗೂ ಈ ಕಲೆಯ ಪರಿಚಯ ಇಲ್ಲದೇ ಇರುವಂತಹ ಅನೇಕ ಗೆಳೆಯರು ಯಕ್ಷಗಾನದ ಸವಿರುಚಿ ತಿಳಿದರು ಅನ್ನಬಹುದು. ಯಕ್ಷಗಾನದಲ್ಲಿ ಬರುವಂತಹ ಹಾಸ್ಯ, ರೌದ್ರ ಹಾಗೂ ಇನ್ನೂ ಅನೇಕ ರಸಗಳು, ರಾಕ್ಷಸರು, ದೇವತೆಗಳು ಇನ್ನು ಅನೇಕ ವೇಷಗಳ ರಾತ್ರಿ ಇಡೀ ನಡೆಯುವ ರಂಗದೋಕುಳಿಯಲಿ ಮಗ್ನರಾದರು. ರಾತ್ರಿಯಿಡೀ ಯಕ್ಷಗಾನ ನೋಡಿ ಅಭ್ಯಾಸ ಇಲ್ಲದ ನಾನು ಮಧ್ಯರಾತ್ರಿಯಲ್ಲಿ ನಿದ್ರೆಗೆ ಜಾರಿದೆ. ಬೆಳಿಗ್ಗೆ ಎದ್ದು ನಮ್ಮ ಗೆಳೆಯನ ಮನೆಯ ಆತಿಥ್ಯ ಸ್ವೀಕರಿಸಿ ನಮ್ಮ ನಮ್ಮ ಮನೆ ಸೇರಿಕೊಂಡ್ವಿ.

ಮೇಲೆ ಹೇಳಿರುವುದು ಒಂದು ಕಾಕತಾಳಿಯ ಕಥೆ ಅಷ್ಟೇ ಆದರೆ ಪ್ರಸಕ್ತ ಕಾಲಘಟ್ಟದಲ್ಲಿ ನಮ್ಮ ಸುತ್ತಮುತ್ತ ನಡೆಯುವ ಅದೆಷ್ಟೋ ಘಟನೆಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸುವ ಬದಲು ನಮ್ಮ ಮೊಬೈಲನ್ನು ಕೆಳಗಿಟ್ಟು ಸಮಾಜದೆದುರು ಪ್ರತಿಕ್ರಿಯಿಸಲು ನೆಟ್ವರ್ಕ್ ಹೋಗುವುದೊಂದೇ ಪರಿಹಾರವೇ ಅನ್ನುವುದು ಪ್ರಶ್ನಾರ್ಥಕ ಚಿಹ್ನೆ ???

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..