1903

ಬಿಸಿ ಬಿಸಿ ಕಜ್ಜಾಯ, ರುಚಿ ರುಚಿ ಕಜ್ಜಾಯ ಮಾಡಿ ಕೊಡಲೆ ನಾನು? ಇಗೋ ತಿನ್ನು

ಆಫೀಸ್ ಪಕ್ಕ ಇರೋ ಪುಲ್ಲಾ ರೆಡ್ಡಿ ಸಿಹಿ ತಿಂಡಿ ಅಂಗ್ಡೀಲಿ ಕಜ್ಜಾಯ ನೋಡ್ದಾಗ ಮನ್ಸಲ್ಲಿ ಈ ಹಾಡು ಪ್ಲೇ ಆಗೋಕ್ ಶುರು ಆಯ್ತು! ಈ ಹಾಡು ಕ್ಯಾಚಿ ಆಗಿ ಇದ್ದಿದ್ದಕ್ಕೋ ಇಲ್ಲ ಅದ್ರಲ್ಲಿ ಕಜ್ಜಾಯ ಮಾಡ್ ಕೊಡ್ತೀನಿ ಅಂತ ಇದ್ದಿದ್ದಕ್ಕೋ, ಚಿಕ್ಕಂದ್ನಲ್ಲಿ ಸಕ್ಕತ್ ಇಷ್ಟ ಆಗಿತ್ತು. ಸಿಹಿ ತಿಂಡಿಗಳ ವಿಚಾರದಲ್ಲಿ ಬೇಧ ಭಾವ ಮಾಡ್ದೆ, ವಿವಿಧತೆಯಲ್ಲಿ ಏಕತೆ ಕಾಣುವ ನನಗೆ ಜಿಲೇಬಿ, ಜಹಾಂಗೀರ್, ಹಲ್ವಾ, ಪಾಯಸ, ಜಾಮೂನು,ಮೈಸೂರ್ ಪಾಕ್.. ಈ ಎಲ್ಲಾ ಸಿಹಿ ತಿಂಡಿಗಳೂ ಮೆಚ್ಚಿನವೇ. ಆದರೆ ಕಜ್ಜಾಯದ ಬಗ್ಗೆ ವಿಶೇಷವಾದ ಮೆಚ್ಚುಗೆ ಮತ್ತೆ ಆಸೆ! ಚಿಕ್ಕವ್ನಿರ್ತಾ ನಮ್ಮೂರಲ್ಲಿ ಸುರೇಶ್ ಭಟ್ರು, ಬಾಯಲ್ ನೀರೂರೋ ಹಾಗಿನ್ ತುಪ್ಪದ ಕಜ್ಜಾಯ ಮಾಡ್ತಾ ಇದ್ರು. ಅವ್ರು ಕಜ್ಜಾಯ ಮಾಡೋದ್ ನಿಲ್ಸಿದ್ ಮೇಲೆ ಅಷ್ಟ್ ರುಚಿಯಾದ್ ಕಜ್ಜಾಯ ಬೇರೆಲ್ಲೂ ಸಿಗ್ಲೇ ಇಲ್ಲ. ಅಂತ ಕಜ್ಜಾಯಾನಾ ಮತ್ತೆ ತಿನ್ನೋಕೆ ನಾಲ್ಗೆ ಕಾಯ್ತಾನೇ ಇತ್ತು.

೨೦೧೪ರಲ್ಲಿ ನಾನು ಟ್ರೈನಿಂಗ್ ಮುಗ್ಸಿ ಬೆಂಗಳೂರು ಶಾಖೆಲಿ ಕೆಲಸ ಮಾಡೋಕ್ ಶುರು ಮಾಡ್ದೆ. ಕಂಪ್ಯೂಟರ್‌ ಜೊತೆ ಗೆಳೆತನ ಮಾಡ್ಕೊಂಡು, ಅದ್ರ್ ಜೊತೆನೇ ವೇಳೆ ಕಳೀತಾ, ನಕ್ರೆ ಎಲ್ಲಿ ಮುತ್ತು ಉದ್ರತ್ತೋ ಅಂತ ಮುಖ ಗಂಟ್ ಹಾಕ್ಕೊಂಡ್ ಇರೋ ಜನ್ರೇ ಪ್ರಾಜೆಕ್ಟ್ ಅಲ್ಲಿ ತುಂಬ್ಕೊಂಡ್ ಇದ್ರು. ಸ್ವಲ್ಪ ತಿಂಗ್ಳ್ ಆದ್ಮೇಲೆ ನಾನು ಅದೇ ಪ್ರಾಜೆಕ್ಟಿನ್ ಇನ್ನೊಂದ್ ತಂಡ ಸೇರ್ಕೊಂಡೆ. ಅಲ್ಲಿ ಇನ್ನೊಂದ್ ತರಹದ ಗೋಳು! ನಾವು ಒಂದ್ ವಾರ ಬೆಳಿಗ್ಗೆ, ಒಂದ್ ವಾರ ಮಧ್ಯಾಹ್ನ, ಒಂದ್ ವಾರ ರಾತ್ರಿ ಅಂದ್ಕೊಂಡು ಒಂದೊಂದ್ ವಾರ ಒಂದೊಂದ್ ಪಾಳಿಯಲ್ಲಿ ಕೆಲ್ಸ ಮಾಡ್ಬೇಕಿತ್ತು. ಪ್ರತೀ ಪಾಳಿಯಲ್ಲಿ ಇಬ್ರು; ಹೆಚ್ಚೆಂದ್ರೆ ಮೂರ್ ಜನ ಇರ್ತಿದ್ರಿಂದ; ಒಬ್ರು ಯಾವಾಗ್ಲೂ ಕಂಪ್ಯೂಟರ್ ಮುಂದೇ ಝಾಂಡಾ ಊರ್ಬೇಕಾಗಿದ್ರಿಂದ, ಊಟಕ್ಕೆ ತಿಂಡಿಗೆ ಒಬ್ನೇ ಹೋಗ್ಬೇಕಾದ್ ಅನಿವಾರ್ಯತೆ ಇತ್ತು. ದೊಡ್ಡ ಗುಂಪಲ್ಲೇ ಹೋಗಿ ಅಭ್ಯಾಸ ಇದ್ದ ನಂಗೆ ಊಟಕ್ಕೆ ಚಹಾಕ್ಕೆ ಅಬ್ಬೇಪಾರಿ ತರ ಒಬ್ಬೊಬ್ನೇ ಹೋಗೋದು ಸಂಕಟದ್ ವಿಷ್ಯ ಆಗಿತ್ತು. ಯಾರ್ ಜೊತೆನೂ ಅಷ್ಟಾಗಿ ಗೆಳೆತನ, ಸಲಿಗೆ ಇರ್ಲಿಲ್ಲ.

ಹೀಗಿದ್ದಾಗ ಒಮ್ಮೆ ರಾತ್ರಿ ಪಾಳಿ ಮಾಡೋವಾಗ ಅನೂಪನ್ ಪರಿಚಯ ಆಯ್ತು. ‘ಎಲ್ಲರೊಳಗೊಂದಾಗು ಮಂಕುತಿಮ್ಮ’ ಅನ್ನೋ ಕಗ್ಗದ್ ಸಾಲಿಗೆ ಎತ್ತುಗೆ (example) ಅನ್ನೋ ತರಹ ಎಲ್ಲರ್ ಜೊತೆ ನಗ್ ನಗ್ತಾ ಮಾತಾಡ್ತಾ, ಯಾರ್ ಜೊತೆನೂ ಕಿರಿಕ್ ಮಾಡ್ಕೊಳ್ದೆ, ಯಾವ್ದಕ್ಕೂ ಜಾಸ್ತಿ ತಲೆ ಕೆಡ್ಸ್ಕೊಳ್ದೆ, ಯಾವಾಗ್ಲೂ ಮುಗುಳ್ನಗೆ ಬೀರ್ತಿದ್ದ ಅವ್ನನ್ನ ನೋಡಿ ಕೊನೆಗೂ ಒಬ್ಬ ಗೆಳೆಯ ಸಿಕ್ಕ ಅನ್ನಿಸ್ತು. ಜೊತೆಲಿ ಊಟ ಮಾಡ್ತಾ, ಚಹಾ ಹೀರ್ತಾ, ಕಷ್ಟ ಸುಖ ಮಾತಾಡ್ತಾ, ಓತ್ಲಾ ಹೊಡಿತಾ, ಸಿನೆಮಾ ನೋಡ್ತಾ ಅತೀ ಕಡಿಮೆ ಸಮಯದಲ್ಲೇ ತುಂಬಾ ಆಪ್ತ ಆಗ್ಬಿಟ್ಟ ಅನೂಪ!

ಒಂದ್ಸಲ ಅವ್ನು ಮೈಸೂರಿಗ್ ಹೋದಾಗ ಅಲ್ಲಿನ್ ಒಂದ್ ಅಂಗ್ಡಿ ಇಂದ ಕಜ್ಜಾಯ ತಂದಿದ್ದ. ತಿಂತಾ ಇದ್ ಹಾಗೆ ಸುರೇಶ್ ಭಟ್ರ ಕಜ್ಜಾಯ ನೆನ್ಪಿಗ್ ಬಂತು! ಕೊನೆಗೂ ಆ ರುಚಿಗ್ ಸಮನಾದ ಕಜ್ಜಾಯ ಸಿಕ್ಕಿತ್ತು. ನಂಗಂತೂ ಭಯಂಕರ ಖುಷಿ, ಇನ್ಮುಂದೆ ಕಜ್ಜಾಯ ತಿನ್ನೋ ಆಸೆ ಆದ್ರೆ ಅವ್ನಿಗ್ ಊರಿಗ್ ಹೋದಾಗ ತರೋಕ್ ಹೇಳ್ಬಹುದು ಅಂತ! ರಾತ್ರಿ ಪಾಳಿಲಿ ಕೂತು ಇಬ್ರೂ ಕಜ್ಜಾಯ ತಿಂದಿದ್ದೇ ತಿಂದಿದ್ದು. ಏನೋ ಒಂತರಾ ತೃಪ್ತಿಯಾಗಿತ್ತು.

ಒಂದೆರ್ಡ್ ತಿಂಗ್ಳ್ ಆದ್ಮೇಲೆ ಒಂದ್ ಶನಿವಾರ ಅನೂಪ ಮೈಸೂರಿಗ್ ಹೋದಾಗ ನಂಗೆ ಕಜ್ಜಾಯದ್ ಆಸೆ ಆಗಿ ಥಟ್ ಅಂತ ಅವ್ನಿಗೆ “ಮಗಾ.. ಬರ್ತಾ ಕಜ್ಜಾಯ ತಾರೋ.. ತಿನ್ನೋಕ್ ಆಸೆ ಆಗ್ತಾ ಇದೆ..” ಅಂತ ಒಸಗೆ (message) ಕಳ್ಸ್ದೆ. ಅವ್ನು “ಕೆಲ್ಸ ಇದೆ ಮಗಾ.. ತರೋಕ್ ಆಗೋದ್ ಡೌಟು.. ಆದ್ರೆ ತರ್ತೀನಿ” ಅಂತ ಉತ್ರ ಕೊಟ್ಟ. ಅದ್ರ ಮುಂದಿನ್ ವಾರ ನಾನು ಬೆಳಿಗ್ಗೆ ಪಾಳಿಲ್ ಇದ್ದೆ, ಅನೂಪ ರಾತ್ರಿ ಪಾಳಿಲ್ ಇದ್ದ. ಸೋಮ್ವಾರ ನಾನ್ ಅಳವೆಡೆಲ್ (office) ಇದ್ದಾಗ ಅನೂಪನ್ ಒಸಗೆ ಬಂತು “ಸಾರಿ ಮಗಾ.. ಕಜ್ಜಾಯ ತರೋಕ್ ಆಗಿಲ್ಲ” ಅಂತ. ಕಜ್ಜಾಯ ಸಿಗತ್ತೆ ಅಂತ ಆಸೆಲ್ ಇದ್ ನಂಗೆ ಆಶಾಭಂಗ ಆಯ್ತು. ಆದ್ರೂ “ಪರ್ವಾಗಿಲ್ಲ ಮಗಾ.. ಮುಂದಿನ್ ಸಲ ಹೋದಾಗ ತಾ” ಅಂದೆ. ಇದಾದ್ ಎರ್ಡ್ ದಿನಕ್ಕೆ ನನ್ ಹುಟ್ಟುಹಬ್ಬ ಇತ್ತು.

ನನ್ ಹುಟ್ಟುಹಬ್ಬ ಅಂತ ಗೆಳೆಯರೆಲ್ಲ ಕೇಕ್ ತಂದಿದ್ರು. ೧೨ ಗಂಟೆಗೆ ಕೇಕ್ ಕತ್ತರಿಸಿ, ಹುಟ್ದಬ್ಬ ಆಚರ್ಸಿ ತಡವಾಗ್ ಮಲ್ಗಿ, ಬೆಳಿಗ್ಗೆ-ಪಾಳಿ ಇದ್ದದ್ರಿಂದ ಬೇಗ ಎದ್ದು ೬ ಗಂಟೆ ಸುಮಾರಿಗೆ ಅಳವೆಡೆಗೆ ಬಂದೆ. ನಾನ್ ಬರೋ ಮೊದ್ಲೆ ಅನೂಪ ಹೊರಟ್ ಹೋಗಿದ್ದ. ನಾನು ನನ್ ಕಂಪ್ಯೂಟರ್ ಮುಂದೆ ಹೋಗಿ ಕೂತೆ. ಅದ್ರ್ ಪಕ್ಕ ಒಂದ್ ಕವರ್ ಇತ್ತು. ಏನಪ್ಪ ಅಂತ ತೆಗ್ದ್ ನೋಡಿದ್ರೆ ಅದ್ರ್ ಒಳಗೆ ಪುಟ್ಟ ಡಬ್ಬಿ ಇತ್ತು. ಇದೇನಿದು ಅಂತ ಕುತೂಹಲ್ದಿಂದ ತೆಗ್ದ್ ನೋಡಿದ್ರೆ ಅದ್ರಲ್ಲಿ ನನ್ನ ನೆಚ್ಚಿನ ಕಜ್ಜಾಯ ಇತ್ತು! ಉತ್ಸಾಹದಿಂದ ಮತ್ತೆ ಕವರ್ ಕಡೆ ಕಣ್ ಹಾಯಿಸ್ದೆ. ಅದ್ರಲ್ಲಿ ಕನ್ನಡದ್ ಟಿ ಶರ್ಟು ಮತ್ತೆ ‘Happy Birthday’ ಅನ್ನೋ ಹಾರೈಕೆ ಇತ್ತು! ನಂಗೆ ಕನ್ನಡ ಟಿ ಶರ್ಟ್ ಅಂದ್ರೆ ಇಷ್ಟ ಅಂತ ಅದನ್ನೂ ಮತ್ತೆ ಕಜ್ಜಾಯಾನೂ ಉಡುಗೊರೆ ಆಗಿ ಕೊಟ್ಟಿದ್ದ! ‘ಕೆಲ್ಸ ಇತ್ತು ಅದಕ್ಕೆ ಕಜ್ಜಾಯ ತರೋಕ್ ಆಗಿಲ್ಲ’ ಅಂತ ಯಾಕ್ ಹೇಳಿದ್ದ ಅಂತ ಆಗ ತಿಳೀತು.

ನಾವು ಬಯಸ್ದೇ, ಎದುರು ನೋಡ್ದೇ ಇದ್ ಘಳಿಗೇಲಿ ನಮಗಿಷ್ಟ ಆದದ್ದು ಏನೋ ಕಣ್ಮುಂದೆ ಬಂದ್ ಬಿಟ್ರೆ ಎಂತಾ ಆನಂದ ಅನ್ನೋದು ಅರ್ಥ ಆಯ್ತು. ಅತೀ ಪ್ರೀತಿಯ ಸಿಹಿ ತಿಂಡಿ ಹುಟ್ಟು ಹಬ್ಬದ್ ಉಡುಗೊರೆಯಾಗ್ ದೊರ್ಕಿತ್ತು. ಅವ್ನ್ ಎಲ್ಲಿನವ್ನೋ, ನಾನ್ ಎಲ್ಲಿನವ್ನೋ.. ಜೊತೆಗಿದ್ ಸ್ವಲ್ಪ ಸಮಯದಲ್ಲೇ ನನ್ ಇಷ್ಟಗಳನ್ನ ಅರಿತ್ಕೊಂಡು ನಂಗ್ ಸರ್ಪ್ರೈಸ್ ಕೊಟ್ಟು ಅವ್ನು ಕಣ್ ತುಂಬೋ ಹಾಗ್ ಮಾಡಿದ್ದ. ಸ್ನೇಹ ಅಂದ್ರೆ ಇದೇ ಅಲ್ವಾ? ಅದೇ ಖುಷಿಲಿ ಅಲೆಯುಲಿ (mobile) ಎತ್ಕೊಂಡೆ. ಕಣ್ ತುಂಬ್ಕೊಂಡಿದ್ರಿಂದ ಅಲೆಯುಲಿ ಪರದೆ ಮಂಜ್ ಮಂಜಾಗ್ ಕಾಣಿಸ್ತಾ ಇತ್ತು. ಒಂದ್ ಕೈಯಲ್ಲಿ ಕಣ್ ಒರೆಸ್ತಾ ಇನ್ನೊಂದ್ ಕೈಯಲ್ಲಿ ಅಲೆಯುಲಿ ಹಿಡ್ಕೊಂಡು “ಥ್ಯಾಂಕ್ಸ್ ಮಗಾ” ಅಂತ ಅವ್ನಿಗೆ ಒಸಗೆ ಕಳುಹಿಸ್ದೆ. ಮುಖದಲ್ಲಿ ಎಲ್ಲಿಲ್ಲದ್ ಮುಗುಳ್ನಗು ಮಿಂಚ್ತಾ ಇತ್ತು. ಕಣ್ಣಲ್ಲಿ ಆನಂದ ಬಾಷ್ಪ ಜಿನುಗ್ತಾ ಇತ್ತು!

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..