11086

ಕನ್ನಡ-ಭಾಷಾಭಿಮಾನ-ಸ್ಥಿತಿ-ಗತಿ-ದೂರನೋಟ

ಕುವೆಂಪುರವರ ವಿಶ್ವಮಾನವ ಸಂದೇಶದಲ್ಲಿ ಹೀಗೆ ವ್ಯಾಖ್ಯಾನಿಸುತ್ತಾರೆ.

“ಪ್ರತಿಯೊಂದು ಮಗುವು ಹುಟ್ಟುತ್ತಲೇ ವಿಶ್ವಮಾನವ,ಆದರೆ ಹುಟ್ಟುತ್ತಲೇ ಅದಕ್ಕೆ ಹೆಸರು,ಜಾತಿ,ಧರ್ಮ,ಭಾಷೆ,ಜನಾಂಗವೆಂಬ ಮುದ್ರೆ ಒತ್ತುತ್ತಾರೆ.” ಕೆಲವೊಂದು ಮುದ್ರೆ ಪರಿಣಾಮಕಾರಿಯಾಗಿ ಅಚ್ಛ್ಹೊತ್ತಿತ್ತಿದ್ದರೆ ಇನ್ನು ಕೆಲವು ಕ್ರಮೇಣ ತನ್ನ ಛಾಪು ಕಳೆದುಕೊಳ್ಳುತ್ತವೆ.ವಿಶ್ವಮಾನವರಾಗಿ ಬದಲಾಗೋದು ಎಲ್ಲರಿಗೂ ಅಸಾಧ್ಯ.ಸ್ವತಃ ಕುವೆಂಪುರವರಿಗೂ ಸಾಧ್ಯ ಆಗಿಲ್ಲ. ವಿವೇಕಾನಂದ,ಗೌತಮ ಬುದ್ಧ ರಂಥ ಯೋಗಿಗಳು ಮಾತ್ರ ವಿಶ್ವಮಾನವರಾಗಿ ಪ್ರಜ್ವಲಿಸಿದ್ದಾರೆ.

ಈ ಲೇಖನದಲ್ಲಿ ತಾಯಿ ಭಾಷೆ ಎನ್ನುವ ಮುದ್ರೆ ಬಗೆಗೆ ಸ್ವಲ್ಪ ಬೆಳಕು ಸೂಸುವತ್ತ ಪ್ರಯತ್ನ ಪಟ್ಟಿದ್ದೀನಿ.ಮುಖ್ಯವಾಗಿ ಕರ್ನಾಟಕದಲ್ಲಿ ಕನ್ನಡ ಭಾಷೆಯ ಸ್ಥಿತಿಗತಿ ಹಾಗೂ ಮುಂದಿನ ಪೀಳಿಗೆಗೆ ಭಾಷಾಪ್ರೇಮ ಜೀವನದಲ್ಲಿ ಅಳವಡಿಸೋಕೆ ಕೆಲವೊಂದು ಅಂಶಗಳನ್ನು ಉಲ್ಲೇಖಿಸೋ ಪ್ರಯತ್ನ ಪಟ್ಟಿದ್ದೀನಿ.

ನನ್ನ ಆತ್ಮೀಯ ಕನ್ನಡ ಅಧ್ಯಾಪಕರು ನುಡಿದಿರುವಂಥಹ ಕೆಲವು ಮಾತುಗಳು ರಿಂಗಣಿಸುತ್ತ ಇರುತ್ತದೆ.ಕನ್ನಡ ನಾಡಿನಲ್ಲಿ ಕನ್ನಡದ ಪರಿಸ್ಥಿತಿಯ ಬಗೆಗೆ ಹೀಗೆ ಹೇಳ್ತಾರೆ.

“ಕನ್ನಡ ನಾಡಿನಲ್ಲಿ ಕನ್ನಡ ರಕ್ಷಣಾ ಸಮಿತಿಗಳು,ಕನ್ನಡ ರಕ್ಷಣೆಗೆ ಸಂಸ್ಥೆಗಳನ್ನು ನೋಡಸಿಗೋದು ವಿಪರ್ಯಾಸ.ಇದು ಕರ್ನಾಟಕದಲ್ಲಿ ಕನ್ನಡದ ಸ್ಥಿತಿಗತಿಗೆ ಹಿಡಿದ ಕನ್ನಡಿ.ಹೆಜ್ಜೆ ಹೆಜ್ಜೆಗೂ ಕನ್ನಡವನ್ನ ಉಳಿಸಿ ಪ್ರೋತ್ಸಾಹಿಸಿ ಅನ್ನೋ ಮಾತು ಕೇಳುತ್ತಿದ್ದರೆ ಮನಸ್ಸಿಗೆ ಏನೋ ಒಂದು ಹಿಂಸೆ,ನೋವು ಕಾಡೋದು ಸಹಜ”.

ಅವರ ಮಾತು ಅಕ್ಷರಶಃ ನಿಜ ಅಲ್ಲವೇ?ಯಾಕೀ ಪರಿಸ್ಥಿತಿ ಕನ್ನಡಕ್ಕೆ ಅನ್ನೋವಂಥದ್ದು ನಂಗೆ ಯಾವಾಗ್ಲೂ ಕಾಡೋ ಪ್ರಶ್ನೆ,
ಅದರ ಬಗೆಗೆ ಆವಾಗವಾಗ ಯೋಚಿಸಿದ್ದೂ,ಚರ್ಚಿಸಿದ್ದೂ ಉಂಟು.ಹೀಗೆ ಯೋಚಿಸುವಾಗ,ಚರ್ಚಿಸೋವಾಗ ಬಂದಂತಹ ಕೆಲವು ಅಂಶಗಳನ್ನು ಈ ಲೇಖನದಲ್ಲಿ ಸೆರೆ ಹಿಡಿದಿದ್ದೀನಿ.

೧.ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕನ್ನಡದ ಪ್ರಾಭಲ್ಯ ಉಳಿಯಬೇಕು ಅಂದರೆ ಆಂಗ್ಲ ಭಾಷೆಯ ಜ್ಞಾನ ಅಷ್ಟೇ ಮುಖ್ಯ ಆಗುತ್ತದೆ.ಇದಕ್ಕೆ ಪ್ರಮುಖ ಕಾರಣ ಇದೆ.ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪ್ರಪಂಚದಲ್ಲಿ ನೆಲೆ ಊರಲು ಕಷ್ಟ ಪಟ್ಟರೆ ಅದು ಹೊರಗಡೆ ಜಗತ್ತಿಗೆ ನಕಾರಾತ್ಮಕ ಸಂದೇಶ ನೀಡೋ ಸಾಧ್ಯತೆ ತುಂಬಾ ಇರುತ್ತದೆ.ಯಾವುದೇ ತಂದೆ ತಾಯಂದಿರಿಗೆ ತಮ್ಮ ಕುಡಿ ಜೀವನ ನಿರ್ವಹಣೆಗೆ ಕಷ್ಟ ಪಡೋದು ನೋಡೋಕೆ ಇಷ್ಟಪಡುವುದಿಲ್ಲ. ಎಲ್ಲದಕ್ಕಿಂತ ಮೊದಲು ಹಸಿವು ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.ನಂತರದ ಸ್ಥಾನದಲ್ಲಿ ದೇಶಪ್ರೇಮ,ಭಾಷಾಪ್ರೇಮ ನಿಲ್ಲುತ್ತದೆ.ಹೀಗಿರುವಾಗ  ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗಳಿಗೆ ಸೇರಿಸೋದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ ಅನ್ನೋದು ನನ್ನ ಭಾವನೆ. ಹೀಗಿರುವಾಗ ಕನ್ನಡ ಮಾಧ್ಯಮ ಶಾಲೆಗಳ ಬಲವರ್ಧನೆ ನಮ್ಮ ಪ್ರಮುಖ ಕೆಲಸವಾಗಬೇಕು.ಅದಕ್ಕಾಗಿ ಎಲ್ಲಾ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಇಂಗ್ಲಿಷ್ ಕಲಿಕೆ ಅಥವಾ ಮಾತುಗಾರಿಕೆಗೆ ಪ್ರಾಮುಖ್ಯತೆ ಕೊಡಬೇಕಾಗುತ್ತದೆ.ಎಲ್ಲಾ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಸವಾಲೊಡ್ಡುವಂತಹ ಪ್ರಾಧ್ಯಾಪಕರ ನೇಮಕಾತಿ ಪ್ರಮುಖವಾಗಿ ಆಗಬೇಕಿದೆ. ಸರ್ಕಾರ ಈ ನಿಟ್ಟಿನಲ್ಲಿ ಸಕಾರಾತ್ಮಕ ಹೆಜ್ಜೆ ಇಡಬೇಕಾಗಿದೆ.ಇದರ ತಕ್ಷಣದ ಪರಿಣಾಮವಾಗಿ ಈ ಕೆಳಗಿನವುಗಳನ್ನು ನೋಡ ಸಿಗುತ್ತದೆ.

೧.ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಿ ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಸಮಾಜದಲ್ಲಿ ತಲೆ ಎತ್ತಿ ನಿಲ್ಲುವ ಶಕ್ತಿ ಬರುತ್ತದೆ.
೨.ಹೆಚ್ಚು ಹೆಚ್ಚು ಕನ್ನಡ ಮಾಧ್ಯಮಗಳ ವಿದ್ಯಾರ್ಥಿಗಳು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿ ನಿಂತಾಗ ಹೆಚ್ಚು ಹೆಚ್ಚು ಮಕ್ಕಳು ಕನ್ನಡ ಮಾಧ್ಯಮಗಳ ಶಾಲೆಗಳಲ್ಲಿ ನೋಂದಣಿಯಾಗಬಹುದು.
೩.ಇಂಗ್ಲಿಷ್ ಭಾಷೆಯನ್ನು ಜ್ಞಾನವೆಂದು ಬಿಂಬಿಸಿ ದುಡ್ಡು ಪೀಕುವ ಖಾಸಗಿ ಶಾಲೆಗಳ ಪ್ರಭಾವ ಕಡಿಮೆಯಾಗಿ ಶಿಕ್ಷಣ ಕೈಗೆಟಕುವ ಶುಲ್ಕದಲ್ಲಿ ಎಲ್ಲರಿಗೂ ಲಭ್ಯವಾಗುದು.
೪.ಕನ್ನಡ ಮಾಧ್ಯಮ ಎಂದರೆ ಮೂಗು ಮುರಿಯುವ ಬದಲು ಹೆಮ್ಮೆ ಇಂದ ನೋಡುವ ಸಮಯ ಬರಬಹುದು.

೨.ಕಲಿಕೆಯ ಕ್ರಮ.
ಎಲ್ಲಾ ಸಮಯದಲ್ಲೂ ಪರೀಕ್ಷಾ ಫಲಿತಾಶವನ್ನು ಜ್ಞಾನ ಅಥವಾ ವಿದ್ಯಾರ್ಥಿಯ ಯೋಚನಾ ಸಾಮರ್ಥ್ಯ ಅಳೆಯಲು ಉಪಯೋಗಿಸಿದರೆ ತಪ್ಪಾದೀತು. ಮುಖ್ಯವಾಗಿ ಭಾಷಾ ವಿಷಯದಲ್ಲಿ ಪರೀಕ್ಷಾ ಫಲಿತಾಶ ತುಂಬಾ ಕಡಿಮೆ ಪರಿಣಾಮ ಬೀರಿರುತ್ತದೆ.ಪೋಷಕರು ಹಾಗೂ ಶಿಕ್ಷಕರಿಗೆ ಈ ವಿಚಾರದಲ್ಲಿ ಸ್ವಲ್ಪ ತಿಳುವಳಿಕೆ ಅಗತ್ಯ.

ವಿದ್ಯಾರ್ಥಿಗಳು ಯಾವ ವಿಷಯ ಬಾಯಿಪಾಠ ಮಾಡಬೇಕು ಯಾವುದನ್ನೂ ಯೋಚಿಸಬೇಕು,ಯಾವುದನ್ನು ನೆನಪಿನಲ್ಲಿಟ್ಕೋಬೇಕು ಅನ್ನೋ ಸಾಮಾನ್ಯ ತಿಳುವಳಿಕೆ ಅತ್ಯಗತ್ಯ .ಇದು ಭಾಷಾ ವಿಷಯದಲ್ಲಿ ತುಂಬಾ ಪ್ರಮುಖವಾದ ಅಂಶ.

ಕನ್ನಡದ ಕಾವ್ಯ,ಗದ್ಯವನ್ನು ಅರ್ಥ ಮಾಡಿಕೊಳ್ಳೋ ಅಥವಾ ಕವಿಯ ಯೋಚನಾ ಲಹರಿಯ ಬಗೆಗೆ ಯಾವಾಗ ವಿದ್ಯಾರ್ಥಿ ಆಲೋಚಿಸೋಕೆ ಪ್ರಾರಂಭಿಸುತ್ತಾನೋ ಆವಾಗಲೇ ಭಾಷಾ ಪ್ರೇಮದ ಮೊದಲ ಮೆಟ್ಟಿಲು ಹತ್ತಿದಂತೆ.ಆವಾಗಲೇ ವಿದ್ಯಾರ್ಥಿಗಳು ಶ್ರೀಮಂತ ಕನ್ನಡ ಶಬ್ದ ಸಂಪತ್ತಿನ ಬಗೆಗೆ,ಕಲೆ,ಭಾಷೆ  ಬಗೆಗೆ ಹೃದಯದಲ್ಲಿ  ಸ್ಥಾನ ಕೊಡಲು ಪ್ರಾರಂಭಿಸುತ್ತಾನೆ.

೩.ಭಾಷಾ ವಿಷಯ ಕಲಿಕೆಯಲ್ಲಿ ಕಲೆಯ ಮಿಶ್ರಣ.

ಕಲೆಗೂ ಭಾಷೆಗೂ ಇರುವ ಅವಿನಾನುಭವ ಸಂಬಂಧ ಜೀವಂತವಾಗಿರಿಸೋ ಕೆಲಸ ಹೆಜ್ಜೆ ಹೆಜ್ಜೆಗೂ ನಡಿಯಬೇಕಾಗಿದೆ. ಭಾಷಾ ಕಲಿಕೆಯ ಸಮಯದಲ್ಲಿ ಸಂಗೀತ,ಸಾಹಿತ್ಯ,ನಾಟಕ ಇವೆಲ್ಲವುದರ ಮಿಶ್ರಣ ಅಗತ್ಯ.ಶಿಕ್ಷಣ ಹಾಗೂ ಕಲೆ ಕೈ-ಕೈ ಹಿಡಿದು ನಡೆದಾಗ ಭಾಷಾಭಿಮಾನ ತಂತಾನೆ ಹೃದಯದಲ್ಲಿ ಬೇರು ಬಿಡೋಕೆ ಸಾಧ್ಯ.

ಉದಾಹರೆಣೆಗೆ ಒಂದು ಪದ್ಯಕ್ಕೆ ಸುಂದರವಾದ ರಾಗ ಸಂಯೋಜನೆ ಮಾಡಿ ಹಾಡಿಸಿದಾಗ ವಿದ್ಯಾರ್ಥಿಗಳಿಗೆ ಭಾಷೆಯ ಜೊತೆಗೆ ಸಂಗೀತದ ಬಗೆಗೂ ಪ್ರೀತಿ ಬೆಳೆಯೋಕೆ ಸಾಧ್ಯ .ಹಾಗೆಯೇ ಗದ್ಯ ಭಾಗವನ್ನು ನಾಟಕದ ರೂಪ ಕೊಟ್ಟಾಗ ನಟನಾ ಕೌಶಲ್ಯದ ಜೊತೆಗೆ ಲೇಖಕನ ಯೋಚನಾ ಲಹರಿಯ ಬಗೆಗೆ ಆಳವಾದ ವಿಶ್ಲೇಷಣೆ ಸಾಧ್ಯವಾಗುತ್ತದೆ.

ನನ್ನ ಕನ್ನಡ ಪ್ರಾಧ್ಯಾಪಕರು ಕನ್ನಡ ಪದ್ಯಗಳಿಗೆ ಯಕ್ಷಗಾನ ಶೈಲಿಯ ರಾಗ ಸಂಯೋಜನೆಗೆ ಇಡೀ ತರಗತಿ ಮೂಕವಿಸ್ಮಿತರಾಗಿದ್ದು ಭಾಷೆಯ ಜೊತೆಗೆ ಕಲೆಯ ಮಹತ್ವ ತಿಳಿಯುತ್ತದೆ.

೪.ಹಳೆಯ ವಿದ್ಯಾರ್ಥಿಗಳ ಸಂಘ ಒಂದು ಕನ್ನಡ ಮಾಧ್ಯಮ ಶಾಲೆಗಳ ಉಳಿವಿಗೆ ತುಂಬಾ ಮಹತ್ವದ ಕೊಡುಗೆ ನೀಡುತ್ತದೆ.
ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಧನಾತ್ಮಕ ಸಂದೇಶ ಕಳಿಸೋದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.ಇದರ ಪರಿಣಾಮವಾಗಿ ವಿದ್ಯಾರ್ಥಿಗಳಿಗೆ ಹೆಚ್ಚಿನ ವಿಶ್ವಾಸ ಮೂಡಿಸೋದರಲ್ಲಿ ಸಾಧ್ಯವಾಗುತ್ತದೆ.ಆ ನಿಟ್ಟಿನಲ್ಲಿ ಹಳೆ ವಿದ್ಯಾರ್ಥಿಗಳ
ಸಭೆ,ಚರ್ಚೆ,ಸಮಾರಂಭ ತುಂಬಾ ಮುಖ್ಯ.ಹಳೆ ವಿದ್ಯಾರ್ಥಿ ಸಂಘ ಕಟ್ಟುವಲ್ಲಿ ಶಾಲೆಗಳು ಹಾಗೂ ವಿದ್ಯಾರ್ಥಿಗಳು ಕಾರ್ಯ ನಿರ್ವಹಿಸಬೇಕಿದೆ.

ಮೇಲಿನ ವಿಷಯ ಭಾಷಾಪ್ರೇಮಕ್ಕೆ ಪ್ರಾಥಮಿಕ ಅಡಿಪಾಯ ಇಟ್ಟರೆ ಕೆಳಗಿನ ಕೆಲವು ಅಂಶ ಆ ಪ್ರೇಮ ಹೆಮ್ಮರವಾಗಿ ಬೆಳೆದು ಜನರ ಹೃದಯದಲ್ಲಿ ಅಜರಾಮರ ಸ್ಥಾನ ಪಡೆದು ವಿಶ್ವದಾದ್ಯಂತ ಕನ್ನಡ ಕಂಪನ್ನು ಸೂಸಲು ಸಾಧ್ಯವಾಗುತದೆ.

೧.ಕನ್ನಡ ಕಾದಂಬರಿ ಸಾಹಿತ್ಯಕ್ಕೆ ಅದರದೇ ಆದ ಓದುಗರಿದ್ದರೂ ಕೂಡ ಇಂದಿನ ಕಂಪ್ಯೂಟರ್ ಯುಗದಲ್ಲಿ ಅದಕ್ಕೆ ಅನುಗುಣವಾದ ಪ್ರಚಾರ ಕೊಟ್ಟರೆ ಶ್ರೀಮಂತ ಸಾಹಿತ್ಯ ಲೋಕಕ್ಕೆ ಹೊಸ ಕವಿ,ಲೇಖಕರ ಪಾದಾರ್ಪಣೆಗೆ ಹಾಗೂ ಹೊಸ ಓದುಗರ ಸೃಷ್ಟಿ ಸಾಧ್ಯವಾಗುತ್ತದೆ.

೨.ಶ್ರೀಮಂತ ಸಾಹಿತ್ಯ ಲೋಕಕ್ಕೂ ಚಲನಚಿತ್ರ ರಂಗಕ್ಕೂ ಇರುವ ಕೊಂಡಿಯನ್ನು ಬಲಗೊಳಿಸೋ ಪ್ರಯತ್ನ ಚಲನಚಿತ್ರ ರಂಗದಿಂದ ಆಗಬೇಕು.

೩.ಭಾಷೆ,ನೆಲ,ಜಲದ ವಿಷಯದಲ್ಲಿ ದೃಶ್ಯ ಮಾಧ್ಯಮ ಹಾಗೂ ಸಾಮಾಜಿಕ ಜಾಲ ತಾಣ,ಕಲೆಯ ಕೊಡುಗೆ ತುಂಬಾ ಇದೆ. ಚಲನಚಿತ್ರ ಹಾಗೂ ಸಂಗೀತದಲ್ಲಿ ಹೊಸ ಪ್ರಯೋಗ ಹಾಗೂ ಗುಣಮಟ್ಟದ ಕೊಡುಗೆ ಬಂದಾಗ ನಿರಾಯಾಸವಾಗಿ ಕನ್ನಡ ಕಂಪು ವಿಶ್ವದಲ್ಲಿ ಹಬ್ಬಲು ಸಾಧ್ಯ.ಇದಕ್ಕೆ ಉತ್ತಮ ಉದಾಹರಣೆ ಖ್ಯಾತ ಗಾಯಕ ರಘು ದೀಕ್ಷಿತ್.

೪.ಕೊನೆಯದಾಗಿ ನಮ್ಮ ಸಂಸ್ಕ್ರತಿ,ನಮ್ಮತನ ಅನ್ನೋ ಭಾವನೆ ಎದೆಯಾಳದಲ್ಲಿ ಬೇರೂರಿದಾಗ ತಾಯಿಭಾಷೆ ಎಂದೆಂದಿಗೂ ಹೃದಯ ಸಾಮ್ರಾಜ್ಯದಲ್ಲಿ ಅಜರಾಮರ.

ಜೈ ಕನ್ನಡಾಂಬೆ.
ಸ್ಪೂರ್ತಿ : ಶ್ರೀ ರಂಗಪ್ಪಯ್ಯ ಹೊಳ್ಳ ಸರ್.

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..