11640

ಹುಡುಗರ ಹಿತಾಸಕ್ತಿಗಾಗಿ

ಹುಡುಗರೇ,ಕ್ಷಮಿಸಿ,ಪಾಪದ ಹುಡುಗರೇ…ಪಾಪದವರು ಎನ್ನುವ ಪದ ಮೊದಲು ಹುಟ್ಟಿಕೊಂಡಿದ್ದೇ ಹುಡುಗರಿಗಾಗಿ.ಆದರೆ ಈಗ ಆ ಪದವನ್ನು ಹುಡುಗೀಯರು ಕಸಿದುಕೊಂಡು ಬಿಟ್ಟಿದ್ದಾರೆ.”ಪಾಪದ ಹುಡುಗರು” ಬರೀ ಹುಡುಗರಾದರು.ಹುಡುಗೀಯರು ಪಾಪದ ಹುಡುಗೀಯರಾದರು.ನಾವು ಮತ್ತೆ ಆ ಪದವನ್ನು ಹಿಂಪಡೆಯಲು ಸಾಕಷ್ಟು ಹೋರಾಟ ಮಾಡಿದೆವು.ನಾವು ಅದನ್ನು ಮತ್ತೆ ಪಡೆಯಲು ಹೋದಾಗ ಒಂದಿಷ್ಟು ಹುಡುಗರೇ ಬಂದು ಹುಡುಗೀಯರ ಪರ ನಿಂತು ಆ ಪದವನ್ನು ಶಾಶ್ವತವಾಗಿ ನಮಗಿಲ್ಲದಂತೆ ಮಾಡಿ “ಪಾಪ ಹುಡುಗೀರು” ಎನ್ನುತ್ತಾ ಅವರ ಹಿಂದೆ ಹೋಗಿ ಬಿಟ್ಟರು.ನಮ್ಮ ಹಕ್ಕನ್ನು ಪಡೆಯಲು ಹೋದ ನಾವುಗಳು ಪಾಪಿಗಳಾದೆವು.ಕೊನೆಗೂ ಪಾಪದವರು ಎನ್ನುವ ಪಟ್ಟ ನಮಗೆ ಸಿಗಲೇ ಇಲ್ಲ.ಹೋಗಲಿ ಬಿಡಿ ಕಳೆದುಕೊಳ್ಳುವುದು ನಮಗೇನು ಹೊಸತೇ?ಶಾಲೆಯಲ್ಲಿ ಪೆನ್ಸಿಲ್ ರಬ್ಬರ್ ಕಳೆದುಕೊಳ್ಳುವಾಗ ಶುರುವಾದ ನಮ್ಮ ಕಳೆದುಕೊಳ್ಳುವ ಪಯಣ ಇವತ್ತಿನ ದಿನ ಅತಿಯಾಗಿ ಪ್ರೀತಿಸಿದ ಹುಡುಗಿಯನ್ನು ಕಳೆದುಕೊಳ್ಳುವವರೆಗೂ ಬಂದು ನಿಂತಿದೆ.ಯಾಚ್ಚುಲಿ ನಿಂತಿಲ್ಲ ಸಾಗುತ್ತಲೇ ಇದೆ.ಇನ್ನು ಏನೆನೆಲ್ಲಾ ಕಳೆದುಕೊಳ್ಳುವುದಿದೆಯೋ?
ಅನ್ಯಾಯ ಆಗ್ತಾ ಇದೆ ಸ್ವಾಮಿ ಅನ್ಯಾಯ.ಹೆಜ್ಜೆ ಹೆಜ್ಜೆಯಲ್ಲೂ ಅನ್ಯಾಯ ಆಗುತ್ತಿದೆ ಹುಡುಗರಿಗೆ.ಇದನೆಲ್ಲಾ ಕೇಳಲು ನಮ್ಮ ಹುಡುಗರಿಗೆ ಸಮಯವೇ ಇಲ್ಲದಂತಾಗಿದೆ ಅಷ್ಟು ಅನ್ಯಾಯವಾಗುತ್ತಿದೆ.ಇದಕ್ಕೆಲ್ಲಾ ಪರಿಹಾರ ಸಿಗಬೇಕು ಎಂದರೆ ಎಲ್ಲಾ ಹುಡುಗರು ತಮ್ಮ ತಮ್ಮ ಲವರ್ ಗಳಿಗೆ ವ್ಯಯಿಸುವ ಸ್ವಲ್ಪ ಸಮಯವನ್ನು ಬಿಟ್ಟು ಎಲ್ಲರು ಒಂದೆಡೆ ಸೇರಿ ಹೋರಾಡಬೇಕಿದೆ.ಪಾಪ ನನ್ನ ಗೆಳೆಯ ಶಂಕ್ರ ಎಸ್ ಎಸ್ ಎಲ್ ಸಿ ಯಲ್ಲಿ ಫೇಲಾದ.ಬರೀ ಫೇಲಲ್ಲ.ಕನ್ನಡ ಒಂದನ್ನು ಬಿಟ್ಟರೆ ಎಲ್ಲದರಲ್ಲೂ ಫೇಲಾದ.ಇವನು ನೋಡ್ರಿ ನಿಜವಾದ ಕನ್ನಡಿಗ.ಅವನ ಕನ್ನಡ ಅಭಿಮಾನ ಕಂಡು ಅವನಿಗೆ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಿಗಬೇಕಿತ್ತು.ಸಿಕ್ಕಿಲ್ಲ ಪಾಪ.ಅವನಿಗೆ ಸಿಕ್ಕದ್ದೇನು?ಒಂದನ್ನು ಬಿಟ್ಟರೆ ಎಲ್ಲಾ ವಿಷಯಗಳಲ್ಲೂ ಫೇಲಾದ ಶಂಕ್ರನಿಗೆ ಮತ್ತೆ ಪರೀಕ್ಷೆ ಕಟ್ಟಿಸಿದರು.ಶಂಕ್ರ ತನ್ನ ಸತತ ಪರಿಶ್ರಮ,ತ್ಯಾಗ,ಬಲಿದಾನದಿಂದ ಮತ್ತೆ ಅವಟ್ ಆಫ್ ಅವಟ್ ತೆಗೆದ,ಅಂದರೆ ಮತ್ತೆ ಐದೂ ವಿಷಯಗಳಲ್ಲಿ ಫೇಲಾದ.ಕಡೆಗೇನು ಮಾಡಿದರು?ಶಂಕ್ರನನ್ನು ಕೆಲಸಕ್ಕೆಂದು ಬೆಂಗಳೂರಿಗೆ ಕಳುಹಿಸಲಾಯಿತು.ಅದೇ ಕೇವಲ ಗಣಿತದಲ್ಲಿ ಫೇಲಾದ ಆ ಗೀತಳನ್ನು ಮತ್ತೆ ಪರೀಕ್ಷೆಗೆ ಕೂರಿಸದೇ ನೇರವಾಗಿ ಮದುವೆ ಮಾಡಲಾಯಿತು.ನೋಡಿ ಸ್ವಾಮಿ ಇದ್ಯಾವ ನ್ಯಾಯ.ಹುಡುಗನೊಬ್ಬ ಫೇಲಾದರೆ ಅವನು ಕೆಲಸಕ್ಕಾಗಿ ಬೆಂಗಳೂರಿಗೊ,ಬೊಂಬಾಯಿಗೊ ಬಸ್ಸು ಹಿಡಿಯಬೇಕು.ಅದೇ ಹುಡುಗಿಯೊಬ್ಬಳು ಫೇಲಾದರೆ ಅವಳಿಗೆ ಮದುವೆಯ ಭಾಗ್ಯ.ಮೋಸ ಅಲ್ಲವೇ ಇದು? ಮತ್ತೆ,ಹುಡುಗೀಯರಿಗೆ ಹದಿನೆಂಟು ವರ್ಷಕ್ಕೆ ಮದುವೆ,ನಮಗೆ ಇಪ್ಪತ್ತೊಂದು ದಾಟಲೇ ಬೇಕು.ಮೋಸ ಅಲ್ಲವೆ ಇದು?ಹೀಗೆ ಹುಡುಗರಿಗೆ ಅನ್ಯಾಯವಾಗುತ್ತಿದೆ.ಮೋಸವಾಗುತ್ತಿದೆ.ವಂಚನೆಯಾಗುತ್ತಿದೆ.ಮೂರೂ ಒಂದೆ ಅಲ್ಲವೆ ಅಂತ ಕೇಳಬೇಡಿ.ಈ ಮೂರೂ ಒಂದೆ ನಿಜ .ಹಾಗೆ ಈ ಮೂರೂ ಆಗುತ್ತಿರುವುದು ಹುಡುಗರಿಗೆ.
ನಾವು ಮೊದ್ಲು ಅವರನ್ನು ನೋಡಬೇಕು.ನಾವೇ ಹೋಗಿ ಮಾತನಾಡಿಸಬೇಕು.ಸರಿಯಾಗಿ ಸ್ಪಂದಿಸಿದರೆ ನಾವೇ ಫೋನ್ ನಂಬರ್ ಕೇಳಬೇಕು.ಅಪ್ಪಿ ತಪ್ಪಿ ಕೊಟ್ಟರೆ,ನಾವೇ ಮೊದಲು Hi… ಅಂತ ಕಳುಹಿಸಬೇಕು.ಅವಳು ಆನ್ ಲೈನ್ ಬರುವವರೆಗೂ ಕಾಯಬೇಕು.ಇದ್ದದ್ದರಲ್ಲಿ ಚಂದದ ಫೋಟೊವೊಂದನ್ನು ತೆಗೆದು ಡಿಪಿ ಮಾಡಬೇಕು.ಜೊತೆಗೆ ಅವಳನ್ನು ಹೊಗಳುವಂತ ಸ್ಟಾಟಸ್ ಹಾಕಬೇಕು.ಆ ಸ್ಟಾಟಸ್ ಹಾಕಲು ಮಾಡುವ ಅಧ್ಯಯನವನ್ನು ಶಾಲೆಯಲ್ಲಿ ಓದಿನ ಮೇಲೆ ಮಾಡಿದ್ದರೆ ನಾಸಾದಲ್ಲಿ ವಿಜ್ನಾನಿಯಾಗಬಹುದಿತ್ತು.ಅಷ್ಟು ಸಂಶೊಧನೆ ಮಾಡಬೇಕು.ಅವಳ ಡೀಪಿ ಚೆನ್ನಾಗಿಲ್ಲದಿದ್ದರೂ Nice Dp..(ಜೊತೆಗೊಂದು ನಗುವ ಮುಖ…ಸ್ಮೈಲಿ)ಕಳುಹಿಸಬೇಕು.ಅವಳು ಮೆಸೇಜ್ ಮಾಡದಿದ್ದರೂ ಬೆಳಗ್ಗೆ ಒಂದು,ಮಧ್ಯಾಹ್ನ ಒಂದು,ರಾತ್ರಿ ಒಂದು Gd mrng,Gd noon,Gd nyt ಕಳುಹಿಸಲೇಬೇಕು.ಹೊಸ ವರ್ಷಕ್ಕೆ,ದೀಪಾವಳಿಗೆ,ಯುಗಾದಿಗೆ,ಗಣೇಶನ ಹಬ್ಬಕ್ಕೆ,ಕ್ರಿಸ್ ಮಸ್ ಗೆ,ರಂಜಾನ್ ಗೆ,ಮೋಹರಂ ಗೆ ,ಎಲ್ಲಾದಕ್ಕೂ ನಾವೇ ಮೊದಲು ವಿಷಸ್ ಕಳುಹಿಸಬೇಕು.ಅವರೇನಿದ್ದರೂ “same to u” ಅಂತ ಕಳುಹಿಸುವವರು.ನೋಡಿ ನಾವು ಹುಡುಗರು ಎಷ್ಟು ಮೋಸ ಹೋಗುತ್ತಿದ್ದೇವೆ.ಹುಡುಗಿಯೊಬ್ಬಳು ಫ್ಯಾಮಿಲಿಯ ಜೊತೆ ಜೋಗ್ ಫಾಲ್ಸ್ ಗೆ ಹೋಗಿ ಬಂದು ಅದನ್ನು ಒಬ್ಬ ಹುಡುಗನ ಜೊತೆ ಹೇಳಿಕೊಳ್ಳುವ ಸಂಧರ್ಭ ಹೀಗಿರುತ್ತದೆ ನೋಡಿ.
ಅವನು:Hey enu ello trip hodangittu.
ಅವಳು:yes actually nam family ella seri jog falls nodak hogidvi.
ಅವನು:hegaaytu trip?
ಅವಳು:super aagittu.tumba enjoy maadidvi.nan phone neeral bid bidtu gottaa?
ಅವನು:Ayyo houdaa? Amele ?
ಅವಳು:chikkappa tak anta etkond bitru enu aaglilla.
ಅವನು:houdaa take care of ur phone.
ಅವನು:matte esht jana hogidri?
ಅವನು:car nal hogiddaa?
ಅವನು:falls nalli neerittaa?
ಅವನು:vaapas bandid yavaga?
ಅವಳು:(online but no reply)

ಇದೇ ರೀತಿ ವಿದೇಶ ಸುತ್ತಿ ಬಂದ ಹುಡುಗ ಹುಡುಗಿಯ ಬಳಿ ತನ್ನ ಪ್ರವಾಸದ ಬಗ್ಗೆ ಹೇಳಿಕೊಳ್ಳುವಾಗ ಆ ಸಂಧರ್ಭವನ್ನು ಗಮನಿಸಿ.
ಅವನು:Hi…Gd morning (ತನ್ನ ಡಿಪಿಯನ್ನು ನೋಡಿ ಅವಳಾಗಿಯೇ ತನ್ನ ಟ್ರಿಪ್ ಬಗ್ಗೆ ಕೇಳಬಹುದೆಂಬ ಆಸೆಯಿಂದ) .
ಅವಳು:Gd mrnng.
ಅವನು:matte?
ಅವಳು:namdenu illa.ella nimde.
ಅವನು:Actually nam family yavru paris hogidvi.
ಅವಳು:nice.
ಅವನು:(ಎಕ್ಸೈಟ್ ಮೆಂಟ್ ನಲ್ಲಿ) Full paris suttidde suttiddu.Super aagittu.Tumba kushi aaaytu.Familyavrellaa tumba enjoy maadidivi.allinda baroke mansirililla gotta.Matte hogona anastide.Two weeks kaldidde gottaagilla.Life nal ondsala allig hoglebeku tumba olle place.Really enjoyed alot.

ಅವಳು:Hmm

ನೋಡಿ ಸ್ವಾಮಿ.ಅವರು ಏನೆ ಹೇಳಿದ್ರು ನಾವು ಅವರಲ್ಲಿರುವ ಎಕ್ಸೈಟ್ ಮೆಂಟ್ ಗೆ ಸ್ಪಂದಿಸಬೇಕು.ನಾವು ಏನಾದರೂ ಖುಷಿಯಿಂದ ಹೇಳಲು ಹೋದರೆ ಅವರಿಂದ ಬರುವ ಉತ್ತರ “Hmm” .ನನಗಂತೂ ಇಲ್ಲಿಯವರೆ”Hmm” ಎನ್ನುವ ಪದದ ಅರ್ಥ ಗೊತ್ತಾಗಿಲ್ಲ.ಜಾಸ್ತಿ ಮೊಬೈಲ್ ಯೂಸ್ ಮಾಡೋರ್ ಯಾರಿಗಾದ್ರು ಗೊತ್ತಿದ್ರೆ ದಯವಿಟ್ಟು ತಿಳಿಸಿ.ಹುಡುಗರೇ ನಿಮ್ಮ ಹಿತಾಸಕ್ತಿಗಾಗಿ ಹೇಳುತ್ತಿದ್ದೇನೆ.ಸ್ನೇಹವಾಗಲಿ,ಪ್ರೇಮವಾಗಲಿ ನಿಮ್ಮ ಭಾವನೆಗಳಿಗೆ ಸ್ಪಂದಿಸದ ಹುಡುಗೀಯರಿಗಾಗಿ ಹೆಚ್ಚು ಸಮಯ ಹಾಳು ಮಾಡಬೇಡಿ.ನಮ್ಮ ಬದುಕಿನಲ್ಲಿ ಸಮಯವೇ ನಮಗೆ ದೇವರು.

ಮೊನ್ನೆ ಹುಡುಗಿಯೊಬ್ಬಳು ಹೀಗೆ ಹೇಳುತ್ತಿದ್ದಳು.”ನೋಡಿ ನಮಗೆ ಅನ್ಯಾಯವಾಗಿದೆ.ನಮಗೆ ಭೇಧ ಭಾವ ಮಾಡಲಾಗಿದೆ.ಪುಣ್ಯಾತ್ಮನೊಬ್ಬ ಅವಳ ಹತ್ತಿರ ಕೇಳಿದ “ಹೇಳಮ್ಮ ಅಂತಹದೇನಾಗಿದೆ?ನಿಮಗೇನು ಅನ್ಯಾಯವಾಗಿದೆ?ಅದಕ್ಕೆ ಅವಳಿಂದ ಬಂದ ಪ್ರತಿಕ್ರಿಯೆ ಏನು ಗೊತ್ತೆ? “ಕನ್ನಡದಲ್ಲಿ “ಹುಡುಗರು”ಅಂತ ಸಿನಿಮಾ ಬಂದಿದೆ.”ಹುಡುಗೀರು” ಅಂತ ಸಿನಿಮಾ ಬಂದೇ ಇಲ್ಲ” ಎಂದು.ಆಗ ನಾನು “ಕನ್ನಡದಲ್ಲಿ “ಹುಚ್ಚುಡುಗ್ರು” ಅಂತಾನು ಸಿನಿಮಾ ಬಂದಿತ್ತು”ಎಂದು ಮೆಲ್ಲಗೆ ಅಲ್ಲಿಂದ ಕಾಲು ಕಿತ್ತೆ.ನೋಡಿ ಇದೂ ಎಲ್ಲಾ ಅವರಿಗೆ ಅನ್ಯಾಯ.ನಗಬೇಕೋ ಬೇಡವೋ?ಅಲ್ಲ ಸ್ವಾಮಿ ಹುಡುಗೀರ ಬಗ್ಗೆ ಸಿನಿಮಾ ಮಾಡಲು ಸಾಧ್ಯವೇ?ಅವರ ಬಗ್ಗೆ ಕಥೆ ಬರೆಯಲು ಸಾಧ್ಯವೇ?ಚಿತ್ರಕಥೆ,ಸಂಭಾಷಣೆ ಬರೆಯಲು ಸಾಧ್ಯವೇ?ಉಹುಂ…ಅವರ ಬಗ್ಗೆ ಸಿನಿಮಾ ಮಾಡಲು ಸಾಧ್ಯವೇ ಇಲ್ಲ.ಬೇಕಾದರೆ ಸೀರಿಯಲ್ ಮಾಡಬಹುದು ನೋಡಿ.
ನೋಡಿ ಗೆಳೆಯರೆ…ಹುಡುಗರ ಹಿತಾಸಕ್ತಿಯ ದೃಷ್ಟಿಯಿಂದ ಈ ಲೇಖನವನ್ನು ಬರೆಯುತ್ತಿದ್ದೇನೆ.ಹೆಚ್ಚು ಬರೆದರೆ ಓದುವುದಿಲ್ಲ ಎನ್ನುವ ದೃಷ್ಟಿಯಿಂದ ಸಂಕ್ಷಿಪ್ತವಾಗಿ ಎಲ್ಲವನ್ನೂ ಹೇಳುವ ಪ್ರಯತ್ನವನ್ನು ಮಾಡುತ್ತಿದ್ದೇನೆ.ಓದಿ ತಲೆಗೆ ಹಾಕಿಕೊಳ್ಳಿ.ಯಾವುದೇ ಕಾರಣಕ್ಕೂ ಈ ಲೇಖನ ನಿಮ್ಮ ಗರ್ಲ್ ಫ್ರೆಂಡ್ ಗಳಿಗೆ ಸಿಗದಂತೆ ನೋಡಿಕೊಳ್ಳಿ ಪ್ಲೀಸ್…ಇದು ನನ್ನ ಜೀವನ್ಮರಣದ ಪ್ರಶ್ನೆ.

14-16 ವಯೋಮಿತಿಯವರಿಗೆ
ನಾನು ಏನೇ ಹೇಳಿದರೂ ನೀವು ಕೇಳುವುದಿಲ್ಲ.ನೀವಾಗಿಯೇ ಕಲಿಯುವುದೂ ಇಲ್ಲ.ಆದರೆ ಒಂದು ಮಾತು.ಸೈಕಲ್ ಅಥವಾ ಬೈಕ್ ವೀಲಿಂಗ್ ಮಾಡಲು ಕಲಿಯುವುದಾಕ್ಕಾಗಿ ಹಾಕುವ ಪರಿಶ್ರಮವನ್ನು ನಿಮ್ಮ ಇಷ್ಟದ ಕ್ಷೇತ್ರದಲ್ಲಿ ಹಾಕಿ,ಎತ್ತರಕ್ಕೆ ಬೆಳೆಯುತ್ತಿರಿ.ಸಿನಿಮಾ ನೋಡಿ ಬೇಜಾರಿಲ್ಲ.ಆದರೆ ಅದರ ಅನುಕರಣೆ ಬೇಡ.
16-18 ವಯೋಮಿತಿಯವರಿಗೆ
ನೊಡಿ ಸಾರ್ ಇದು ಓದೋ ವಯಸ್ಸು.ಯಾವಳ್ ಹಿಂದೆನೊ ಅಥವ ಯಾವಳ್ ಜೊತೆನೋ ಓಡೊ ವಯಸಲ್ಲ.ಓದೋ ಟೈಮ್ ನಲ್ಲಿ ಓದಿ.ಓದೋ ಟೈಮ್ ನಲ್ಲಿ ಲವ್ ಮಾಡಿದ್ರೆ,ಲವ್ ಮಾಡ್ಬೇಕಾಗಿರೊ ವಯಸ್ಸಲ್ಲಿ ಮದುವೆ ಆಗುತ್ತೆ.ಮದುವೆ ಆಗ್ಬೇಕಾಗಿರೊ ವಯಸ್ಸಲ್ಲಿ ಮಕ್ಕಳಾಗತ್ತೆ.ಮಕ್ಕಳಾಗ್ಬೇಕಾಗಿರೊ ವಯಸ್ಸಲ್ಲಿ ತಲೆಗೂದಲು ಬೆಳ್ಳಗಾಗತ್ತೆ.ನಂತರ “ಜೀವನ” ಎನ್ನುವ ಪದದ ಮುಂದೆ ಮೂರು ಡಾಟುಗಳು ಅಷ್ಟೆ.ತುಂಬಾ ಮುಖ್ಯವಾದ ವಿಚಾರವೆಂದರೆ ಕೇವಲ ಓದಷ್ಟೆ ಅಲ್ಲ ನಿಮ್ಮಲ್ಲಿ ಬೇರೆ ಯಾವುದೇ ರೀತಿಯ ಪ್ರತಿಭೆಗಳಿದ್ದರೆ ಅವುಗಳನು ಗುರುತಿಸಿ ಅದರಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ.ಈಗ ನಿಮಗೆ ಸಿಕ್ಕಷ್ಟು ಸಮಯ ಮುಂದೆ ಸಿಗುವುದಿಲ್ಲ.ಅಕಸ್ಮಾತ್ ಸಿಕ್ಕರೂ ಅದು ವ್ಯರ್ಥ.ಮತ್ತೊಂದು ಮುಖ್ಯವಾದ ವಿಚಾರವೊಂದನ್ನು ನಿಮ್ಮಲ್ಲಿ ಹೇಳಲೇಬೇಕು.ನಿಮ್ಮೆಲ್ಲರ ಪ್ರೀತಿಯ “ಪ್ರೀತಿ”ಯ ವಿಚಾರ.
ನಿಮಗೆ ಲವ್ ಮಾಡ್ಲೇಬೇಕು ಅಂತ ಇದ್ರೆ,ಮಾಡಿ ಬೇಜಾರಿಲ್ಲ.ಆದರೆ ಯಾವುದೇ ಕಾರಣಕ್ಕೂ ನಿಮ್ಮ ಕ್ಲಾಸ್ ಮೇಟ್ ಹುಡುಗಿಯನ್ನು ಲವ್ ಮಾಡ್ಬೇಡಿ.ಹೀಗೆ ಹೇಳಲು ಎರಡು ಕಾರಣಗಳಿವೆ.ಒಂದು ನಿಮ್ಮದೇ ತರಗತಿಯ ಹುಡುಗಿಯನ್ನು ಲವ್ ಮಾಡಿವುದರಿಂದ ತರಗತಿಯಲ್ಲಿ ನಿಮ್ಮ ಗಮನವೆಲ್ಲವೂ ಅವಳ ಮೇಲೆ ಹೊಗಿ ನಿಮ್ಮ ಓದು ಹಾಳಾಗಬಹುದು.ಇನ್ನೊಂದು,ಮೊದಲೇ ಹೇಳಿದಂತೆ ಹುಡುಗೀಯರಿಗೆ ಹದಿನೆಂಟು ವರ್ಷಕ್ಕೆಲ್ಲಾ ಕಲ್ಯಾಣ ಮಂಟಪ ಹುಡುಕಲು ಆರಂಭಿಸುತ್ತಾರೆ.ಅಕಸ್ಮಾತ್ ನಿಮ್ಮ ಕ್ಲಾಸ್ ಮೇಟನ್ನು ಲವ್ ಮಾಡಿ ಅವಳನ್ನೇ ಮದುವೆ ಆಗುವುದಾದರೆ ಅವಳಿಗೆ ಇಪ್ಪತ್ತೊ ಇಪ್ಪತೊಂದಕ್ಕೊ ಮದುವೆ ಆಗಬೇಕು.ಆಗ ನಿಮಗೂ ಇಪ್ಪತೊ,ಇಪ್ಪತೊಂದು ವರುಷ.ಸಾಮಾನ್ಯವಾಗಿ ಹುಡುಗೀಯರು ಈ ಹಂತದಲ್ಲಿ ಮದುವೆಗೆ ಮಾನಸಿಕವಾಗಿ ತಯಾರಾಗಿರುತ್ತಾರೆ.ಅದರೆ ನಾವುಗಳು?ಉಹುಂ.ನಿಮ್ಮ ಗೆಳೆಯರು ಗೋವಾ ಟ್ರಿಪ್ ಹೋಗಿರುವ ಫೋಟೊಸ್ ಹಾಕಿರುವ ಪೋಸ್ಟಿನ ಕೆಳಗೆ ನಿಮ್ಮ ಮದುವೆಯ ಫೋಟೊಸ್ ಅದರ ಕೆಳಗೆ RIP ಎನ್ನುವ ಕಮೆಂಟ್ಸ್ ಗಳು.ಇದೆಲ್ಲಾ ಬೇಕಾ?
18-28 ವಯೋಮಿತಿಯ ಬ್ಯಾಚುಲರ್ ಗಳಿಗೆ
ನಿಮ್ಮ ಕಷ್ಟ ನನಗೆ ಗೊತ್ತು.ವಿಶೇಷವಾಗಿ ಮನೆ ಬಿಟ್ಟು ಬೆಂಗಳೂರಿನಂತ ಸಿಟಿಯಲ್ಲಿ ರೂಮು ಮಾಡಿಕೊಂಡು ಇರುವ ನಿಮ್ಮಂತವರ ಕಷ್ಟ ನನಗೆ ಚೆನ್ನಾಗಿ ಗೊತ್ತು.ಕೆಲಸಕ್ಕೆ ಹೋಗಬೇಕು ಮನೆಯಲ್ಲಿ ಅಡುಗೆ ಮಾಡಿಕೊಳ್ಳಬೇಕು.ಬಟ್ಟೆ ತೊಳೆಯಬೇಕು.ಎಲ್ಲದಕಿಂತ ಹೆಚ್ಚಾಗಿ ಪಾತ್ರೆ ತೊಳೆಯಬೇಕು.ಕಷ್ಟ ಕಷ್ಟ.ಇಷ್ಟು ಸಾಲದಕ್ಕೆ ಹಳೇಯ ಗರ್ಲ್ ಫ್ರೆಂಡ್ಸ್ ಗಳನ್ನು ಮರೆಯಬೇಕು.ಇರುವ ಗರ್ಲ್ ಫ್ರೆಂಡ್ ಗಳನ್ನು ಸಂಭಾಳಿಸಬೇಕು.ಅವಳಿಗೆ ಮೆಸೇಜ್ ಮಾಡಬೇಕು.ಫೋನ್ ಮಾಡಬೇಕು.ಅವಳು ಹಾಕಿರುವ ಡೀಪಿ ಚೆನಾಗಿಲ್ಲ ಅಂದ್ರೂ ಹೊಗಳಬೇಕು.ಫೇಸ್ ಬುಕ್ ಫೋಟೊಗೆ ಲೈಕ್ ಒತ್ತಬೇಕು ಕಮೆಂಟ್ ಮಾಡಬೇಕು.ಅಬ್ಬಬ್ಬಾ ಎಷ್ಟೆಲ್ಲಾ ಮಾಡಬೇಕು.ಈ ವಯಸಿನಲ್ಲಿ ಹುಡುಗರು ಹೆದರುವುದು ಇಬ್ಬರಿಗೆ ಮಾತ್ರ.ಒಂದು ಗರ್ಲ್ ಫ್ರೆಂಡ್ ಗೆ ಇನ್ನೊಂದು ಆಫೀಸ್ ನಲ್ಲಿ ಬಾಸ್ ಗೆ.ನೋಡಿ ಸ್ನೇಹಿತರೆ ನೀವು ದೊಡ್ಡವರಾಗಿದ್ದೀರಿ.ಪ್ರಪಂಚ ಎನ್ನುವ ಪೇಟೆಯಲ್ಲಿ ಸಾಕಷ್ಟು ಸುತ್ತಿದ್ದೀರಿ.ಎಡವಿದ್ದೀರಿ.ಎದ್ದಿದ್ದೀರಿ.ನಿಮ್ಮ ಹಿತಾಸಕ್ತಿಯಿಂದ ಜಾಸ್ತಿ ಏನು ಹೇಳುವ ಅವಶ್ಯಕತೆ ಇಲ್ಲ.ಆದರೂ ಒಂದು ವಿಚಾರ ಹೇಳಲೇಬೇಕು.ಹಳೆಯ ಹುಡುಗಿಯ ನೆನಪಲ್ಲಿ ಕುಡಿಯಬೇಡಿ.ಹಳೇಯ ಪ್ರೇಯಸಿಯ ನೆನಪನ್ನು ಹೋಗಲಾಡಿಸಲು ನಾನು ಸುಲಭವಾದ ಉಪಾಯವನ್ನು ಹೇಳುತ್ತೇನೆ ಕೇಳಿ.ನಿಮ್ಮ ಹಳೇ ಹುಡುಗಿ ಈಗ ನೊಡಲು ಸುಂದರವಾಗಿಯೇ ಇಲ್ಲ ಅಂದುಕೊಳ್ಳಿ.ಅವಳನ್ನು ಟೀವಿಯಲ್ಲಿ ಬರುವ ಸುಂದರವಾದ ಹೀರೋಯಿನ್ ಗೆ ಹೋಲಿಸಿ ನೋಡಿ.ನಿಮಗೇ ಆ ಹೀರೋಯಿನ್ ನಂತಹ ಹುಡುಗಿ ಸಿಗುತ್ತಾಳೇ ಅಂದುಕೊಳ್ಳಿ.ಅವಳ ಬಗ್ಗೆ ಯಾರ ಬಳಿಯೂ ಹೆಚ್ಚು ಮಾತನಾಡಬೇಡಿ.ನಿಮ್ಮ ಮೊಬೈಲ್ ನಲ್ಲಿರುವ ಅವಳ ಪೋಟೋಸ್ ಗಳನ್ನು ಡಿಲೀಟ್ ಮಾಡಿ.ನಾನೂ ಏನಾದರೊಂದು ಸಾಧನೆ ಮಾಡಿ ಅವಳು ನನ್ನ ನೋಡಿ ಹೊಟ್ಟೆ ಉರಿದುಕೊಳ್ಳುವ ಹಾಗೆ ಮಾಡುತ್ತೇನೆ ಅಂದುಕೊಳ್ಳಿ.ಇಷ್ಟು ಮಾಡಿ ಅತಿ ಸುಲಭವಾಗಿ ಹಳೇ ಹುಡುಗಿಯನ್ನು ಮರೆತು ಬಿಡಬಹುದು.ನಾನಿಷ್ಟು ಹೇಳಿದ ಮೇಲೂ ” ಅವಳು ನನ್ನ ಫಸ್ಟ್ ಲವ್ .ಅವಳನ್ನು ಮರಿಯೋದ್ ಹೇಗೆ?ತುಂಬಾ ನೋವಾಗುತ್ತೆ ಸಾರ್” ಅಂತೆಲ್ಲಾ ಕೇಳುವುದಾದರೆ,ನಿಮಗೆ ಸಾರಾಯಿಯೇ ಸರಿ.ಕುಡಿದು ಕುಡಿದು ಸಾಯಿರಿ ನನಗೇನು?ಮಿತ್ರರೇ ಸಾರಾಯಿ ಕುಡಿಯುವುದರಿಂದ ಖಾಲಿಯಾಗೋದು ಅವಳ ನೆನಪಲ್ಲ ನಿಮ್ಮ ಜೇಬು.ಸಾರಾಯಿ ಕುಡಿಯುವುದರಿಂದ ಹೋಗೋದು ನೋವಲ್ಲ ನಿಮ್ಮ ಲಿವರ್ರು.ಲವ್ವರು ಹೋದರೆ ಬದುಕಿದೆ,ಲಿವರ್ರು ಹೋದರೆ ಇಲ್ಲ.ನೆನಪಿರಲಿ.
28-40 ಸಂಸಾರಸ್ಥರಿಗೆ
ನಿಮಗೆ ಹೇಳೋದೆನೂ ಇಲ್ಲ.ಏನಾದ್ರೂ ಹೇಳೋಕೆ ಬಂದ್ರೆ ನಿಮ್ ಹೆಂಡತಿಯರು ನಮಗೆ ಬೈಯುತ್ತಾರೆ.ನಿಮ್ಗುಳ್ ಸಾವಾಸ ಅಲ್ಲ.ಆದ್ರೂ ಒಂದು ಮಾತು.ಎಷ್ಟೇ ದೊಡ್ದವರಾದ್ರೂ ಹುಡುಗಾಟಿಕೆ ಬಿಡಬೇಡಿ.
40-60-70-80 ಹಳೇ ಹುಲಿಗಳಿಗೆ
ನಮ್ ಕಾಲದಲ್ಲಿ ಹಿಂಗಿರ್ಲಿಲ್ಲ ಅಂತ ಕೊರ್ಗೋದ್ ಬಿಡಿ.ಇರೋದನ್ನ ಅನುಭವಿಸಿ.ಆರೋಗ್ಯವೇ ಭಾಗ್ಯ.ಆರೋಗ್ಯ ಚೆನ್ನಾಗ್ ನೋಡ್ಕೊಳ್ಳಿ.ಹುಣಸೇ ಮರ ಮುಪ್ಪಾದ್ರೂ ಹುಳಿ ಮುಪ್ಪಲ್ಲ ಅಂತಾರೆ.ಆ ಗಾದೆನ ಘನತೆಯನ್ನು ಮುಂದೇನೂ ಮೆಂಟೇನ್ ಮಾಡಿ.ನಿಮಗೆ ನಾನೇನೂ ಹೆಚ್ಚು ಹೇಳೊದಿಲ್ಲ ಯಾಕೆಂದರೆ ನೀವು ಎಲ್ಲವನ್ನೂ ಕಂಡವರು ನಾವು ಕಾಣಲು ಹಾತೊರೆಯುತ್ತಿರುವವರು.

ಜೈ ಹುಡುಗರಂ ಗೇಲ್ಗೆ ಹುಡುಗರಂ ಬಾಳ್ಗೆ
ದಯವಿಟ್ಟು ಈ ಲೇಖನವನ್ನು ಹುಡುಗೀಯರ ಕೈಗೆ ಸಿಗದಂತೆ ನೋಡಿಕೊಂಡು ನನ್ನನ್ನು ಪ್ರಾಣಪಾಯದಿಂದ ಕಾಪಾಡಬೇಕಾಗಿ ಕಳಕಳೆಯ ವಿನಂತಿ.

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..