4297

ಗಣರಾಜ್ಯೋತ್ಸವ ಸಂಭ್ರಮದಲ್ಲಿ ..

  • By Vinay MT
  • Wednesday, January 25th, 2017
  • Ankanagalu

ಐತಿಹ್ಯ: ಸರಿ ಸುಮಾರು ೩೦೦ ವರ್ಷಗಳ ದಾಸ್ಯದಿಂದ ಮುಕ್ತಿಯೇನೋ ದೊರಕಿತ್ತು ಆದರೆ ದೇಶದ “ಆಡಳಿತ” ಎನ್ನುವ ಬಹುದೊಡ್ಡ ಸವಾಲು ಭಾರತೀಯರ ಮುಂದಿತ್ತು. ಸ್ವಾತಂತ್ರ್ಯ ಪಡೆದರೆ ಸಾಕಿರಲಿಲ್ಲ ಪಡೆದ ಸ್ವಾತಂತ್ರ್ಯದ ಗೌರವ ರಕ್ಷಣೆ ನಮ್ಮ ಹೊಣೆಯಾಗಿತ್ತು. ಜಗತ್ತಿನೆದುರಿಗೆ ತಲೆ ಎತ್ತಿ ನಿಲ್ಲಬೇಕಾದ ಅನಿವಾರ್ಯತೆ ನಮಗಿತ್ತು. ಅಸಂಖ್ಯಾತ ಭಾಷೆ, ಹಲವು ಧರ್ಮ, ಸಾವಿರಾರು ಜಾತಿ-ಉಪಜಾತಿ, ವರ್ಣ ವ್ಯವಸ್ಥೆ, ಅನೇಕ ಸಂಸ್ಕೃತಿ, ಹಲವು ಸಂಪ್ರದಾಯ ಆಚರಣೆಗಳು – ಇಂತಹ ಹತ್ತುಹಲವು ಭಿನ್ನತೆಗಳು . . . ಬಡತನ, ಅನಕ್ಷರತೆಯಂತಹ ಶಾಪಗಳು . . . ಇಂತಹ ಸ್ಥಿತಿಯಲ್ಲಿದ್ದ ದೇಶದ ಮಂದಿಯನ್ನು ಒಂದೇ ಆಡಳಿತಕ್ಕೆ, ಒಂದೇ ವ್ಯವಸ್ಥೆಗೆ, ಒಂದೇ ಶಿಸ್ತಿಗೆ ಒಗ್ಗೂಡಿಸುವುದು ಸಾಮಾನ್ಯದ ಕೆಲಸವಾಗಿರಲ್ಲಿಲ್ಲ . ಆಗ ಹುಟ್ಟಿದ್ದೇ ಭಾರತದ ಸಂವಿಧಾನ.
ಎಷ್ಟೇ ಭಿನ್ನತೆ ಇದ್ದರೂ ನಾವು ನಡೆದುಕೊಳ್ಳಬೇಕಾದಂತಹ ಪರಿ, ನಮ್ಮ ತತ್ವ,ನಮ್ಮಆದರ್ಶ,ನಮ್ಮ ಸರಿ-ತಪ್ಪುಗಳನ್ನು ನಿರ್ಣಯಿಸುವುದರ ಮೂಲವಾಯ್ತು ಈ ಸಂವಿಧಾನ. ನಮ್ಮ ಕಾನೂನು, ನಮ್ಮ ವ್ಯವಸ್ಥೆ, ನಮ್ಮ ಸರ್ಕಾರ, ನಮ್ಮ ಆಡಳಿತಕ್ಕೆ ಬುನಾದಿಯಾಯ್ತು ಈ ಸಂವಿಧಾನ.
india

ಸಂವಿಧಾನ ಯಾರೋ ಜಾರಿಗೆ ತಂದದ್ದಲ್ಲ, ಅದು ನಮಗೆ ನಾವೇ ಹಾಕಿಕೊಂಡ ಶಿಸ್ತಿನ ಕೋಟೆ. ನಮ್ಮ ಮುನ್ನೆಡೆಗೆ,ಶಾಂತಿ ಸುವ್ಯವಸ್ಥೆಗೆ ಅಂತಹ ಅಗತ್ಯತೆ ನಮಗೆ ಅನಿವಾರ್ಯವಾಗಿತ್ತು. ನಮ್ಮ ಸಂವಿಧಾನ ಜಾರಿಗೆ ಬಂದಂತಹ ದಿನವೇ ಈ ಗಣರಾಜ್ಯೋತ್ಸವ.
ಸಂವಿಧಾನವನ್ನು ಜಾರಿಗೆ ತಂದದ್ದಷ್ಟೆ ನಮ್ಮ ಹೆಮ್ಮೆಯಲ್ಲ. ಇಂದಿಗೂ ಅದನ್ನು ಕೋಟಿ ಕೋಟಿ ಭಾರತೀಯರು ಶಿರಸಾವಹಿಸಿ ಪಾಲಿಸುತ್ತಿದ್ದೇವೆ. ನಮಗೆ ನಾವೇ ಬೆನ್ನು ತಟ್ಟಿಕೊಳ್ಳಬೇಕಾದ ಸಂಗತಿ ಇದು. ಅಂತಹ ಭೌದ್ದಿಕ ಪ್ರೌಡಿಮೆ ನಮಲ್ಲಿರದಿದ್ದರೆ ನೆರೆ ರಾಷ್ಟ್ರಗಳಲ್ಲಿ ನೋಡಸಿಗಬಹುದಾದಂತಹ ಅರಾಜಕತೆ ನಮ್ಮಲಿಯೂ ಇರುತ್ತಿತ್ತು. ಯಾರೋ ಸೈನ್ಯದ ಮುಖ್ಯಸ್ಥ, ಯಾರೋ ರಾಜಕೀಯ ಮುಖಂಡ ನಾನೇ ಈ ರಾಷ್ಟ್ರದ ಅಧಿಪತಿ ಎನ್ನಲು ಭಾರತದಂತಹ ಧೀಮಂತ, ಪ್ರಜಾಸತಾತ್ಮಕ ದೇಶದಲ್ಲಿ ಸಾಧ್ಯವೇ !!! ಜನವರಿ ೨೬ ಕೇವಲ ಸಂವಿಧಾನ ಜಾರಿಗೆ ಬಂದಿದ್ದರ ಸಂಭ್ರಮಾಚರಣೆಯಲ್ಲ, ನನ್ನ ಅಭಿಪ್ರಾಯದಲ್ಲಿ ನಾವು ನಮ್ಮ ವ್ಯವಸ್ಥೆಯನ್ನು, ನಮ್ಮ ಸಂವಿಧಾನವನ್ನು ಗೌರವಿಸುತ್ತೇವೆ ಎನ್ನುವ ಸಂಕೇತವೂ, ಹೆಮ್ಮೆಯ ಆಚರಣೆಯೂ ಹೌದು.

ಆಚರಣೆ: ಕೇಬಲ್ ಕ್ರಾಂತಿ(ಭ್ರಾಂತಿ)ಯ ನಂತರ ವರ್ಷದ ಯಾವ ದಿನ ಡಿಡಿ ನ್ಯಾಶನಲ್ ನೋಡುತ್ತೇನೆಯೋ ಗೊತ್ತಿಲ್ಲ ಆದರೆ ಆಗಸ್ಟ್ ೧೫,ಜನವರಿ ೨೬ ಹಾಗೂ ನಮ್ಮ ಜಂಬೂ ಸವಾರಿಯ ನೇರಪ್ರಸಾರವನ್ನು ಡಿಡಿ-೧ರಲ್ಲೇ ನೋಡುವುದು. ಪ್ರತಿವರ್ಷ ಜನವರಿ ೨೬ರಂದು ರಾಜಪಥದಲ್ಲಿ ನಡೆಯುವ ಭಾರತದ ಗಣರಾಜ್ಯೋತ್ಸವ ಆಚರಣೆ ನೋಡುವುದೇ ಒಂದು ಹೆಮ್ಮೆ !!! ಪ್ರತಿವರ್ಷವೂ ದಟ್ಟ ಮಂಜಿನ ಕಾರಣ ಕಾರ್ಯಕ್ರಮ ಆರಂಭವಾಗುವುದೇ ಬೆಳಿಗ್ಗೆ ೯-೯:೩೦ರ ಆಸುಪಾಸಿಗೆ . . . ಗಣರಾಜ್ಯೋತ್ಸವ ಕೇವಲ ಸಾಂಕೇತಿಕ ಆಚರಣೆಯಲ್ಲ. ಆ ದಿನ ಹಗಲು ರಾತ್ರಿಯೆನ್ನದೆ ನಮ್ಮ ರಕ್ಷಣೆಯೇ ತಮ್ಮ ಪರಮ ಧ್ಯೇಯವೆಂದು ನಮನ್ನು ಕಾಪಾಡುತ್ತಿರುವ ಸೈನಿಕರಿಗೆ ನಾವುಗಳು ಗೌರವ ಅರ್ಪಿಸುವ ದಿನ. ಹೌದು ವಿಧ್ಯುಕ್ತವಾಗಿ ಕಾರ್ಯಕ್ರಮ ಆರಂಭವಾಗುವ ಮೊದಲು, ಸೈನ್ಯದ ಮೂರು ವಿಭಾಗಗಳ ಮುಖ್ಯಸ್ಥರು, ರಕ್ಷಣಾ ಸಚಿವಾಲಯದ ರಾಜ್ಯ ಮಂತ್ರಿ, ರಕ್ಷಣಾ ಮಂತ್ರಿ ಹಾಗೂ ದೇಶದ ಪ್ರಧಾನ ಮಂತ್ರಿ ಇಂಡಿಯಾ ಗೇಟ್ ಬಳಿಯ ಅಮರ್ ಜವಾನ್ ನಲ್ಲಿ ನಮ್ಮೆಲ್ಲರ ಪರವಾಗಿ ಗೌರವ ಸಲ್ಲಿಸುತ್ತಾರೆ.

modi-amar-jawan

ಇದಾದ ನಂತರ ಉಪರಾಷ್ಟಪತಿ ಒಳಗೊಂಡತೆ ಎಲ್ಲ ಪ್ರಮುಖರು ದ್ವಜಾರೋಹಣ ನಡೆಯುವ ಸ್ಥಳಕ್ಕೆ ಆಗಮಿಸುತ್ತಾರೆ. ನಂತರ ನಮ್ಮ ದೇಶದ ಪ್ರಥಮ ಪ್ರಜೆ,ನಮ್ಮ ಸೈನ್ಯದ ದಂಡ ನಾಯಕ, ನಮ್ಮ ರಾಷ್ಟಪತಿ ದಿನದ ಮುಖ್ಯ ಅತಿಥಿಯೊಂದಿಗೆ ತಮ್ಮ ಅಶ್ವಾರೋಹಿ ಬೆಂಗಾವಲು ಪಡೆಯ ರಕ್ಷಣೆಯಲ್ಲಿ ಆಗಮಿಸುತ್ತಾರೆ. ನಂತರ ದ್ವಜಾರೋಹಣ. ರಾಷ್ಟ್ರಗೀತೆ ಮೊಳಗುತ್ತಿದ್ದರೆ ಅದರ ಹಿಮ್ಮೇಳದಲ್ಲಿ ಕುಶಾಲ ತೋಪುಗಳು ಝೇಂಕರಿಸುತ್ತಿರುತ್ತವೆ. ಪ್ರತಿಯೊಬ್ಬ ಭಾರತೀಯ ಎದೆಯುಬ್ಬಿಸಿ ನಿಲ್ಲುವಂತಹ ಕ್ಷಣವದು.

Republic-Day-Parade-HD-Wallpaper-Images-2015

ಇದಾದ ನಂತರ ಪ್ರತಿಯೊಬ್ಬರಿಗೂ ನಾನೇಕೆ ಸೈನ್ಯ ಸೇರಲಿಲ್ಲ ಎನ್ನಿಸುವಂತಹ ಗಳಿಗೆಗಳು. ನಮ್ಮ ಸೈನ್ಯದ ವಿವಿಧ ತುಕಡಿಗಳ ಆಕರ್ಷಕ, ಮನಮೋಹಕ, ಶಿಸ್ತಿನ,ಪಥಸಂಚಲನ. ಸೈನ್ಯದ ಹಲವು ವಿಶೇಷತೆಗಳನ್ನು ಸಾರುವ ಮಾದರಿಗಳು, ರಾಜ್ಯಗಳ ವಿವಿಧತೆಯನ್ನು ಸಾರುವ ಪ್ರಾತ್ಯಕ್ಷತೆಗಳ ಪ್ರದರ್ಶನ. ಇವುಗಳ ಜೊತೆಯಲ್ಲೇ ಹಲವಾರು ಕಲಾ ತಂಡಗಳು . . . ಕಲೆಯಲ್ಲಿ- ಸಾಂಸ್ಕೃತಿಕ ವೈಭವದಲ್ಲಿ ನಮಗೆ ಸರಿ ಸಾಟಿಯಿಲ್ಲ ಎಂದು ಜಗತ್ತಿಗೆ ಸಾರಿಹೇಳುವ ವೇದಿಕೆಯಾಗುತ್ತದೆ ರಾಜಪಥ. . . ವಿವಿಧತೆಯಲ್ಲಿ ಏಕತೆ ನಿಜವಾಗಿಯೂ ಸತ್ಯವೆನ್ನಿಸುವ ದಿನ . . . ಇದೆ ವೇದಿಕೆಯಲ್ಲಿ ಸೈನ್ಯದ ಸಾಧಕರಿಗೆ ಅಶೋಕ ಚಕ್ರ, ಪರಮವೀರ ಚಕ್ರ ಮೊದಲಾದ ಶೌರ್ಯ ಪ್ರಶಸ್ತಿಗಳನ್ನು ಪ್ರಧಾನ ಮಾಡಲಾಗುತ್ತದೆ. ಕೊನೆಯಲ್ಲಿ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಸಮಾಪ್ತಿಗೊಳ್ಳುತ್ತದೆ.
ಗಣರಾಜೋತ್ಸವದ ಅಂಗವಾಗಿ ದೇಶದ ಉನ್ನತ ನಾಗರೀಕ ಪ್ರಶಸ್ತಿಗಳಾದ ಪದ್ಮವಿಭೂಷಣ, ಪದ್ಮಭೂಷಣ ಹಾಗೂ ಪದ್ಮಶ್ರೀ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಪ್ರಕಟಿಸುತ್ತದೆ.
ಗಣರಾಜ್ಯೋತ್ಸವ ಆಚರಣೆ ವಿಧ್ಯುಕ್ತವಾಗಿ ಕೊನೆಯಾಗುದು ಜನವರಿ ೨೯ರಂದು. ಅಂದು ಸಂಜೆ ರಜಪಥದ ವಿಜಯ್ ಚೌಕದಲ್ಲಿ ರಿಟ್ರೀಟ್ ಸೆರೆಮನೀ ಇರುತ್ತದೆ. ಅಂದು ಸೈನ್ಯದ ಎಲ್ಲ ವಿಭಾಗಗಳ ವಾದ್ಯ ವೃಂದಗಳು ಆಕರ್ಷಕ ಪ್ರದರ್ಶನ ನೀಡುತ್ತವೆ. ಪಶ್ಚಿಮದಲ್ಲಿ ನೇಸರನು ಲೀನನಾಗುವ ಹೊತ್ತಿಗೆ ಸರಿಯಾಗಿ ರಾಷ್ತ್ರಗೀತೆಯೊಂದಿಗೆ ರಾಷ್ಟ್ರಧ್ವಜದ ಅವರೋಹಣವಾಗುತ್ತದೆ. ರಾಷ್ಟ್ರಪತಿ ಭವನ, ನಾರ್ತ್ ಬ್ಲಾಕ್,ಸೌತ್ ಬ್ಲಾಕ್, ಸಂಸತ್ತು ವಿದ್ಯುತ್ ದೀಪಾಲಂಕಾರಗಳಿಂದ ಕಣ್ಣುಕೋರೈಸುತ್ತವೆ.

Republic-day-Beating-retreat-ceremony

ನನ್ನ ಈ ಲೇಖನದಿಂದಾಗಿಯಾದರೂ ನೀವುಗಳೆಲ್ಲ ತಪ್ಪದೇ ಈ ಬಾರಿ ನೇರಪ್ರಸಾರ ನೋಡಿದರೆ ಲೇಖನದ ಸಾರ್ಥಕ್ಯ. ಹೋಗು ಮಾರಾಯ ಪ್ರತಿವರ್ಷವೂ ಅದೇ ಇರುತ್ತದೆ. ಪಕ್ಕದ ಚಾನಲ್ನಲ್ಲಿ ಸಿನಿಮಾ-ಹಾಡು-ಹರಟೆ-ಅಡಿಗೆ ಕಾರ್ಯಕ್ರಮ ಬರುತ್ತಿರುತ್ತದೆ ಅಂದುಕೊಂಡರೆ ನೋ – ಕಾಮೆಂಟ್ಸ್ !!!
ನೀವು ನೋಡುತ್ತೀರೋ ಬಿಡುತ್ತೀರೋ ಈ ಬಾರಿ ಇಡೀ ವಿಶ್ವವೇ ಈ ಸಮಾರಂಭಕ್ಕೆ ಎದಿರು ನೋಡುತ್ತಿದೆ. ಏಕೆಂದರೆ ಅಮೇರಿಕ ರಾಷ್ಟ್ರಾಧ್ಯಕ್ಷರು ಈ ಸಾಲಿನ ಗಣರಾಜ್ಯೋತ್ಸವದ ಮುಖ್ಯ ಅಥಿತಿ.
ಸಾರೆ ಜಹಾ ಸೆ ಅಚ್ಚಾ ಹಿಂದೂಸ್ಥಾನ್ ಹಮಾರಾ !!!
ಪ್ರತಿಯೊಬ್ಬ ಭಾರತೀಯನಿಗೂ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು . . .

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..