- By Guest Writer
- Saturday, July 2nd, 2016
ಅಂಕಣ : ರಾಹುಲ್ ಹಜಾರೆ
ಪ್ರಕಾಶ್ ರೈ ಅವರು ಟ್ಬೀಟರ್ ಅಕೌಂಟ್.ನಲ್ಲಿ ಒಂದು ಟ್ವೀಟ್ ಹಾಕಿದ್ದಾರೆ ನೋಡಿದಿರಾ. ಗೋಧಿ ಬಣ್ಣ ಸಾಧಾರಣ ಮೈಕಟ್ಟು ತಮಿಳು,ತೆಲುಗಿನಲ್ಲೂ ತಮ್ಮ ಹೋಮ್ ಪ್ರೊಡಕ್ಷನ್.ದಲ್ಲಿ ಬರುವುದಾಗಿ ಹೇಳಿದ್ದಾರೆ. ಅದಾಗಲೇ ಕನ್ನಡಿಗರಿಗೆ ಇಷ್ಟವಾದ ಈ ಚಿತ್ರ ನಿಧಾನಕ್ಕೆ ಹೊರರಾಜ್ಯಕ್ಕೆ ಕಾಲಿಟ್ಟಿದ್ದಲ್ಲದೇ ಹೊರದೇಶಕ್ಕೂ ಹೋಗುವ ಗಳಿಗೆ ಬಂದಾಗಿದೆ.ನೀವೇ ಯೋಚಿಸಿ ಹಿಂದಿನ ಕೆಲವು ವರ್ಷಗಳ ಚಿತ್ರಗಳಿಗೂ ಇತ್ತೀಚೆಗೆ ಬಂದ ಚಿತ್ರಗಳಿಗೂ ತೌಲನಿಕವಾಗಿ ನೋಡಿದರೆ ಈ ಚಿತ್ರಗಳು ಯಾಕೆ ಜನಪ್ರಿಯವಾದವು ಅಂತ ವಿವರ ಸಿಗುತ್ತೆ.
ಹಲವಾರು ನಟರು, ನಿರ್ದೇಶಕರು, ನಿರ್ಮಾಪಕರು ಕನ್ನಡದ ಜನ ಎಷ್ಟರ ಮಟ್ಟಿಗೆ ಥಿಯೇಟರ್.ಗೆ ಬರುತ್ತಾರೆ.ಅದರಲ್ಲಿ ಎಷ್ಟು ಜನ ಕನ್ನಡ ಸಿನಿಮಾಗಳನ್ನೇ ನೋಡುತ್ತಾರೆ. ಎನ್ನುವ ಬಗ್ಗೆ ಸಮೀಕ್ಷೆ ನಡೆಸಿದರು.ಕಡಿಮೆ ಜನ ಕನ್ನಡದ ಸಿನಿಮಾಕ್ಕೆ ಬರುತ್ತಾರೆ ಎಂದು ತಿಳಿದ ತಕ್ಷಣ ಸಭೆ ಸಮಾರಂಭಗಳಲ್ಲಿ ಅವಲತ್ತುಕೊಂಡರು. ಆದರೆ ಜನರ ನಾಡಿಮಿಡಿತ ನೋಡಿ ಅದಕ್ಕೆ ಸ್ಪಂದಿಸುವ ಚಿತ್ರಕತೆ ಹೆಣೆಯುವ ಸೂಕ್ಷ್ಮ ಸಂವೇದನೆ ಅವರಿಗಿರಲಿಲ್ಲ. ಅದರ ಬದಲು ಅವರು ಬೇರೆ ಭಾಷೆಯಲ್ಲಿ ನೋಡಿದ ಚಿತ್ರಗಳನ್ನೇ ಇಂಚಿಂಚು ಬಿಡದೆ ಭಟ್ಟಿ ಇಳಿಸುವ ಕೆಲಸಕ್ಕೆ ನಿಂತರು. ವಿದೇಶದಲ್ಲಿ ಚಿತ್ರಿಸಿ ಹೆಚ್ಚಿಗೆ ದುಡ್ಡು ಸುರಿದಿದ್ದೇವೆ ಎಂದು ತೋರಿಸಿಕೊಳ್ಳಲು ಮುಂದಾದರು. ಅರ್ಧಂಬರ್ಧ ಬಟ್ಟೆ ಹಾಕಿಸಿ ಐಟಮ್ ಸಾಂಗ್ ಚಿತ್ರಿಸಿ ಪಡ್ಡೆ ಹುಡುಗರನ್ನಾದರೂ ಚಿತ್ರಮಂದಿರದತ್ತ ಎಳೆಯಲು ಚಡಪಡಿಸಿದರು. ಸ್ಟಾರ್ ನಟರನ್ನು ಹೀರೊ ಮಾಡಿ ಚಿತ್ರ ತೆಗೆಯಬೇಕೆಂಬ ತವಕಕ್ಕೆ ಬಿದ್ದು ಆ ನಟರ ಇಮೇಜ್.ಗೆ ತಾಳೆ ಹೊಂದದ ಚಿತ್ರಗಳನ್ನು ತಂದು ಸಾಲು ಸಾಲು ಪ್ಲಾಪ್ ಚಿತ್ರಗಳು ಹೊರಬಂದವು. ಪ್ರತಿ ನಟನನ್ನು ಒಂದೊಂದು ರೀತಿಯ ಪಾತ್ರದಲ್ಲಿ ನೋಡಲು ಜನರು ಇಚ್ಛಿಸುತ್ತಾರೆ. ಅದೇ ರೀತಿಯ ಪಾತ್ರ ಕೊಟ್ಟು ಬೇರೆ ಬೇರೆ ಕಥೆ ಹೆಣೆದು ಸೃಜನಶೀಲತೆ ತೋರುವುದರಲ್ಲಿ ವಿಫಲರಾದರು. ಹಾಡುಗಳನ್ನು ಬರೆಯುವುದರ ಬದಲು ಬರೆದದ್ದನ್ನೆ ಹಾಡು ಮಾಡಿ ಎಂದು ಸಂಗೀತ ನಿರ್ದೇಶಕರ ಮುಂದೆ ಇಟ್ಟರು. ಹಾಡಿನ ಸಾಲುಗಳಿಗಿಂತ ಅಬ್ಬರಿಸುವ ಸಂಗೀತ ಸಂಯೋಜಿಸಿ ಅರ್ಥಹೀನ ಸಾಲುಗಳನ್ನು ಮುಚ್ಚಿಹಾಕಲು ಪ್ರಯತ್ನಿಸಿದರು. ಕಿವಿ ಹರಿದು ಬರುವ ಅಂಥ ಮ್ಯುಸಿಕ್ ಕೆಲವು ಸಾಹಿತ್ಯದ ಗಂಧಗಾಳಿ ಇಲ್ಲದವರಿಗೆ ಇಷ್ಡವಾದರೂ ಆ ಹಾಡುಗಳು ಜಾಸ್ತಿ ದಿನ ಮನಸ್ಸಿನಲ್ಲಿ ಉಳಿಯುವ ಮಧುರ ಹಾಡುಗಳಾಗಲಿಲ್ಲ.ಸಮಾಜಕ್ಕೆ ನೀತಿ ಹೇಳುವುದನ್ನು ಬಿಡಿ ದಣಿದ ಮನಸ್ಸನ್ನು ರಂಜಿಸುವ ಕೆಲಸವನ್ನೂ ಚಿತ್ರಗಳು ಮಾಡಲಿಲ್ಲ. ನೀವೇ ಹೇಳಿ ಸಿಕ್ಕಾಪಟ್ಟೆ ಕೆಲಸದಿಂದ ಬೇಸತ್ತು ಹೋಗಿರುತ್ತೀರಿ ಅಂಥ ಹೊತ್ತಲ್ಲಿ ನೀವು ಸಿನಿಮಾಗೆ ಹೋದಾಗ ಆ ಸಿನಿಮಾದಲ್ಲಿ ಮಚ್ಚು ಲಾಂಗುಗಳನ್ನು ಹಿಡಿದು ಕಂಡಕಂಡವರನ್ನು ಕತ್ತರಿಸುತ್ತಾ ಹೋದರೆ ನೀವು ಥಿಯೇಟರ್.ನಲ್ಲಿ ಎಷ್ಟು ಹೊತ್ತು ಅಂಥ ಕೂಡಲು ಸಾಧ್ಯ.
ಇದರ ಮಧ್ಯ ಒಂದು ಹದವಾದ ಪ್ರೇಮಕಥೆಯೋ, ನೀತಿಪಾಠ ಕಲಿಸುವ ಕಥೆಯೋ, ಸುಮಧುರ ಹಾಡುಗಳನ್ನು ಕೇಳಿಸಿ ಮನಸ್ಸಿಗೆ ಹಿತ ನೀಡುವ ಹಾಡಿನ ಗುಚ್ಚ ಹೊಂದಿರುವ ಕಥೆಯೋ,ನಮ್ಮ ಪ್ರಾದೇಶಿಕತೆಗೆ ಹೊಂದಿಕೊಂಡು ನಮ್ಮ ಸಂಸ್ಕೃತಿಯನ್ನು ಜಗತ್ತಿಗೆ ತೋರಿಸುವ ಕತೆಯೋ ಇಂಥ ಕಥೆಗಳಿಗೆ ಒಂದು ಸಂಸ್ಕೃತಸ್ಥ ಪ್ರೆಕ್ಷಕವರ್ಗ ಕಾಯುತ್ತಿತ್ತು. ಕನ್ನಡದಲ್ಲಿ ಅಂಥ ಸಿನಿಮಾಗಳು ಬರತೊಡಗಿದವು.
ರಂಗಿತರಂಗ ತುಳುನಾಡಿನ ಸಂಸ್ಕೃತಿಯನ್ನು ಪರಿಚಯಿಸಿ ಶ್ರೇಷ್ಠತೆ ಮೆರೆಯಿತು. ಕೆಂಡಸಂಪಿಗೆ ಯಶಸ್ಸುಪಡೆದಿದ್ದೂ ಅಲ್ಲದೆ ಕೆಲವು ಮಧುರ ಹಾಡುಗಳನ್ನು ಒಂದು ಕಾಡುವ ಕತೆಯನ್ನು ನಮ್ಮಲ್ಲಿ ಬಿಟ್ಟು ಹೋಯಿತು. ಇಷ್ಟಕಾಮ್ಯ ಸಾಹಿತ್ಯಾಸಕ್ತ ಪ್ರೇಕ್ಷಕವರ್ಗಕ್ಕೆ ಇಷ್ಟವಾಯಿತು. ಅದಕ್ಕೆ ಮೊದಲನೇ ಕಾರಣ ಅದೊಂದು ಕಾದಂಬರಿ ಆಧಾರಿತ ಚಿತ್ರ. ಕನ್ನಡದಲ್ಲಿ ಕತೆಗಳಿಲ್ಲ ಎನ್ನುವವರಿಗೆ ಉತ್ತರ ಕೊಟ್ಟಿತು. ಬೇರೆ ಭಾಷೆಯ ಸ್ಟಾರ್ ನಟರನ್ನು ತರದೆ ನಮ್ಮ ಕಿರುತೆರೆಯ ಕಲಾವಿದರನ್ನೇ ಹಾಕಿಕೊಂಡದ್ದು ಚಿತ್ರದಲ್ಲಿನ ವಿಶೇಷ. ಇನ್ನು ಈ ಚಿತ್ರದ ಹಾಡುಗಳು ಕೆಂಡ ಸಂಪಿಗೆಯ ಹಾಡುಗಳಂತೆ ಇಷ್ಟವಾದವು ಕಾರಣ ಅವುಗಳಲ್ಲಿ ಅಬ್ಬರದ ಬದಲು ಮಾಧುರ್ಯವಿತ್ತು. ಕವಿ ಕುವೆಂಪು ಅವರ ಹಾಡುಗಳನ್ನು ಬಳಸಿದ್ದಲ್ಲದೆ ಚಿತ್ರದ ಕ್ಲೈಮ್ಯಾಕ್ಸ್ ಕುವೆಂಪು ಅವರ ಮನೆ ಕವಿಶೈಲದಲ್ಲಿ ಚಿತ್ರಿಸಿ ನಾಗತಿಹಳ್ಳಿ ಚಂದ್ರಶೇಖರ್ ಅವರು ತಮ್ಮ ಕನ್ನಡ ಪ್ರೇಮವನ್ನೂ ತಾವೊಬ್ಬ ಸಂಸ್ಕೃತಸ್ಥ, ಸಾಹಿತ್ಯಾಸಕ್ತ ಪ್ರೇಕ್ಷಕವರ್ಗದ ನಾಡಿಮಿಡಿತವನ್ನು ಸರಿಯಾಗಿ ಗ್ರಹಿಸಿದ ನಿರ್ದೇಶಕ ಎಂಬುದನ್ನೂ ನಿರೂಪಿಸಿದರು.ಅದಲ್ಲದೆ ಪ್ರೇಮಕಥೆ ಎಂದರೆ ಹೇಗಿರಬೇಕು ಎಂದು ತೋರಿಸಿಕೊಟ್ಟರು.
ಅಷ್ಟರಲ್ಲಿ ತಿಥಿ ಚಿತ್ರ ಪ್ರಪಂಚದಾದ್ಯಂತ ದಾಖಲೆಮಾಡಿ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿತು. ಸಂಭಾಷಣೆಗೆ ಗ್ರಾಂಥಿಕತೆಯನ್ನು ಲೇಪಿಸದೆ ಸಹಜವಾಗಿರಲು ಬಿಟ್ಟು ಕರ್ನಾಟಕದ ಕೆಲವು ಪ್ರದೇಶಗಳ ಪ್ರಾದೇಶಿಕತೆಯನ್ನು ಜಗತ್ತಿಗೆ ಪರಿಚಯಿಸಿತು. ಚಿತ್ರದಲ್ಲಿ ಒಂದು ಹಾಡು ಇಲ್ಲದೆ, ಹೀರೊಗಳ ಅಬ್ಬರಗಳಿಲ್ಲದೆ, ಫೈಟಿಂಗ್ ಇಲ್ಲದೆ ಚಿತ್ರಕ್ಕೆ ಅಸಲಿಗೆ ಒಂದು ನಿರ್ದಿಷ್ಟ ಲಿಖಿತ ಸ್ಕ್ರಿಪ್ಟ್ ಇಲ್ಲದೆ ಚಿತ್ರವನ್ನು ಹೊರತಂದು ನಿರ್ದೇಶಕರು ಚಿತ್ರದಲ್ಲಿ ಒಂದು ಸಹಜತೆಯನ್ನು ಕಾಪಾಡಿಕೊಂಡರು.ನಂತರ ಬಂದದ್ದು U-turn, ಚಿತ್ರದ ಯಶಸ್ಸಿನ ಹೊರತಾಗಿಯೂ ಅದರಲ್ಲಿ ಯಾವುದೋ ಸತ್ತುಹೋದ ವ್ಯಕ್ತಿಯ ಆತ್ಮವನ್ನು ತೋರಿಸಿದ್ದಕ್ಕೆ ಚಿತ್ರ ಗೌಣವಾಗಿ ಕಾಣುತ್ತೆ ಎಂದು ಹೇಳುವವರ ಮಧ್ಯೆ ಆತ್ಮ ಎಂದರೆ ಚಿತ್ರದಲ್ಲಿ ಭಯಾನಕ ರೂಪ ಕೊಟ್ಟು ಚಿತ್ರಿಸಿಲ್ಲ. ಅದು ಮನಃಸಾಕ್ಷಿಯ ಇನ್ನೊಂದು ಮುಖ ಮಾತ್ರ. ಟ್ರಾಫಿಕ್ ರೂಲ್ಸನ್ನು ಪಾಲಿಸದ ಸರ್ವರೂ ಶಿಕ್ಷೆಗೆ ಅರ್ಹರು ಎಂಬುದೆ ಕಥೆಯ ತಾತ್ಪರ್ಯ ಎಂದು ಸೂಕ್ಷ್ಮಸಂವೇದನೆ ಇರುವವರು ಗುರುತಿಸಿ ಚಿತ್ರಕ್ಕೆ ಒಂದು ತಾರ್ಕಿಕ ಸಮರ್ಥನೆಯನ್ನು ಕೊಟ್ಟರು. ಕ್ಷಣಕ್ಷಣಕ್ಕೂ ಮುಂದೇನಾಗುವುದೋ ಎಂದು ಕಾಯುವ ಹಾಗೆ ಮಾಡಿ ಅನಿರೀಕ್ಷಿತವಾದ ತಿರುವುಗಳನ್ನು ಕೊಟ್ಟು ಒಂದು ತ್ರಿಲ್ಲಿಂಗ್ ಚಿತ್ರ ಹೇಗಿರಬೇಕು ಎಂದು ತೋರಿಸಿಕೊಟ್ಟದ್ದು ಕರ್ವ.
ಅದಾದ ನಂತರ ಮತ್ತೊಂದು ಭಾವುಕ ಮತ್ತು ಕನ್ನಡದ ಕೈಗಳಿಂದಲೆ ರಚಿಸಲ್ಪಟ್ಟು ಕಾಡುವ ಕಥೆಯನ್ನು ನಮ್ಮಲ್ಲಿ ಉಳಿಸಿಹೋದ ಚಿತ್ರ ಸುಳಿ. ಚಿತ್ರದಲ್ಲಿನ ಶ್ರೀನಾಥ್ ಅವರ ಅಭಿನಯ ಒಂದು ಅದ್ಭುತ ಅನುಭೂತಿ ಎಂದರೆ ಉತ್ಪ್ರೇಕ್ಷೆಯಾಗುವುದಿಲ್ಲ. ಶ್ರೀನಾಥರಂತೆ ಅನಂತ್ ನಾಗ್ ಅವರಿಗೂ ಒಂದು ವೇದಿಕೆ ಸಜ್ಜಾಗಿತ್ತು. ಆ ವೇದಿಕೆಯೇ ಗೋಧಿ ಬಣ್ಣ ಸಾಧಾರಣ ಮೈಕಟ್ಟು ತಂದೆ ಮಗನ ಮಧ್ಯದ ಭಾವಸೂಕ್ಷ್ಮಗಳನ್ನು ಎಳೆಎಳೆಯಾಗಿ ಹಿಡಿದಿಟ್ಟು ಪ್ರತಿಯೊಬ್ಬರೂ ತಮ್ಮ ತಂದೆ ತಾಯಿಯನ್ನು ನೆನೆಯುವ ಹಾಗೆ ಮಾಡಿತು. ಇನ್ನು ಕೂದಲು ನೆರೆತು ಮುಖದ ಮೇಲೆ ಮಡಿಕೆಗಳು ಬಂದರೂ ನಟಿಮಣಿಯರ ಜೊತೆ ಡ್ಯುಯೆಟ್ ಹಾಡಿ ತಾವು ಹೀರೊ ಆಗಿಯೇ ಮಿಂಚಬೇಕು ಎನ್ನುವ ಪರಭಾಷಾ ನಟರಿಗೆ ವಯಸ್ಸಿಗೆ ತಕ್ಕ ಪೋಷಕ ಪಾತ್ರಕ್ಕೆ ನ್ಯಾಯ ಒದಗಿಸಿದರೂ ಹೀರೊ ಆಗಬಹುದು ಎಂಬುದನ್ನು ಶ್ರೀನಾಥ್,ಅನಂತ್ ನಾಗ್ ತೋರಿಸಿಕೊಟ್ಟರು. ಪರಕಾಯ ಪ್ರವೇಶ ಎಂಬ ವಿಶೇಷಣ ಈ ನಟದ್ವಯರ ಅಭಿನಯದ ಮುಂದೆ ಗೌಣವಾಗಿ ಕಾಣುತ್ತೆ.
ಈಗ ನೀವೇ ಹೇಳಿ ಒಳ್ಳೆಯ ಚಿತ್ರ ಕೊಟ್ಟರೆ ಪ್ರೇಕ್ಷಕರು ನೋಡದೆ ಇರುತ್ತಾರಾ.ಹಿಂದೊಮ್ಮೆ ಪರಭಾಷಾ ಚಿತ್ರಗಳು ಕರ್ನಾಟಕದ ಚಿತ್ರಮಂದಿರಗಳಲ್ಲಿ ಠಿಕಾಣಿ ಹೂಡಿ ಕನ್ನಡದವರಿಗೆ ಜಾಗ ಸಿಗದಂತಿತ್ತು.ಈಗ ಕನ್ನಡದ ಚಿತ್ರಗಳು ಹೊರರಾಜ್ಯಕ್ಕೆ ಹೋಗಿದ್ದಲ್ಲದೆ ವಿಶ್ವಮಟ್ಟದ ಖ್ಯಾತಿಯನ್ನು ಪಡೆದಿವೆ. ಕನ್ನಡದ ಚಿತ್ರಗಳು ಬೇರೆ ಭಾಷೆಗಳಲ್ಲಿ ರೀಮೆಕ್ ಆಗುತ್ತಿವೆ. ಇಷ್ಟಾಗಿಯೂ ಈ ಚಿತ್ರಗಳಲ್ಲಿ ಸ್ಟಾರ್ ನಟರಿಲ್ಲ ಹೊರಗಿನ ನಟರೂ ಇಲ್ಲ.ಅನುಭವಿಗಳೂ ಇಲ್ಲ.ಕೋಟಿ ಸುರಿಯುವ ನಿರ್ಮಾಪಕರಿಲ್ಲ. ಆದರೆ ಕರ್ನಾಟಕದ ಸೃಜನ ಶೀಲ ನಿರ್ದೇಶಕರಿದ್ದಾರೆ. ಕ್ರಿಯಾಶೀಲ ನಟನಟಿಯರಿದ್ದಾರೆ.ಕನ್ನಡದ ಸ್ಟಾರ್ ನಟರಿಗಷ್ಟೆ ದುಡ್ಡು ಸುರಿಯುವ ನಿರ್ಮಾಪಕರು, ಕನ್ನಡದ ಅನುಭವಿ ನಿರ್ದೇಶಕರು ಈ ಹೊಸಬರಿಗೆ ಜೊತೆಯಾದರೆ ಇನ್ನೂ ಒಳ್ಳೆಯ ಪ್ರಯೋಗಾತ್ಮಕ ಸದಭಿರುಚಿಯ ಚಿತ್ರಗಳನ್ನು ಕನ್ನಡದ ಪ್ರೇಕ್ಷಕರು ಕಾಣಬಹುದು. ಅಂಥ ಭಾಗ್ಯ ಕನ್ನಡಿಗರಾದ ನಮಗೆ ಲಭಿಸಲಿ. “ಸಿರಿಗನ್ನಡಂ ಗೆಲ್ಗೆ.”