2049

ಮೈಯೆಲ್ಲಾ ಚಂದ್ರನ ಗುರುತು ಹೆಸರೆಲ್ಲೋ ಹೋಗಿದೆ ಮರೆತು.

ಹೆಣ್ಣೆಂದರೆ ಹಾಗೆಯೇ ಸುಲಭಕ್ಕೆ ಯಾವುದನ್ನೂ ಒಪ್ಪಿಕೊಳ್ಳುವುದಿಲ್ಲ. ಒಮ್ಮೆ ಒಪ್ಪಿಕೊಂಡರೆ ಸರ್ವಸ್ವವನ್ನೂ ಧಾರೆ ಎರೆಯುತ್ತಾಳೆ. ಚಿತ್ರದ ಕಥಾನಾಯಕಿ ಎಲ್ಲ ಪ್ರೇಮ ಕಾಳಜಿಗಳಿಂದ ವಂಚಿತಳು ಹಾಗೊಮ್ಮೆ ಬೊಗಸೆ ಪ್ರೀತಿ ಕೊಡುವವನಿಗೆ ಕಾದಿರುತ್ತಾಳೆ. ಅಂತದ್ದೊಂದು ದಿನ ಸುಮುಹೂರ್ತ ಒದಗಿ ಬಂದರೆ ತನ್ನನ್ನು ತಾನೇ ಅರ್ಪಿಸಿಕೊಳ್ಳುತ್ತಾಳೆ. ಆದರೆ ಚಿತ್ರದ ನಾಯಕ ಪರಮ ಕುಡುಕ ಮತ್ತು ಬದುಕಲ್ಲಿ ಸಂಸಾರದಲ್ಲಿ ಆಸಕ್ತಿ ಇಲ್ಲದವ.
ಅಂಥದ್ದೊಂದು ಹಾಡು ಈ ಕೆಳಗಿನದು.

ಮಧುವನ ಕರೆದರೆ
ತನು ಮನ ಸೆಳೆದರೆ
ಶರಣಾಗು ನೀನು ಆದರೆ …

ಬಿರುಗಾಳಿಯಲ್ಲಿ ತೇಲಿ
ಹೊಸ ಘಳಿಗೆ ಬಂದಿದೆ
ಕನಸೊಂದು ಮೈಯ ಮುರಿದು
ಬಾ ಬಳಿಗೆ ಎಂದಿದೇ
ಶರಣಾಗು ಆದರೆ
ಸೆರೆ ಆಗು ಆದರೆ

ಮಧುವನ …

ಕಂಗಳಲಿ ಕನಸಿನ ಕುಲುಮೆ
ಹೊಳೆಯುತಿದೆ ಜೀವದ ಒಲುಮೆ
ಬೆಳಕಲ್ಲಿ ನೋಡು ಆದರೆ…….
ಮೈಯೆಲ್ಲಾ ಚಂದ್ರನ ಗುರುತು
ಹೆಸರೆಲ್ಲೊ ಹೋಗಿದೆ ಮರೆತು
ನಾನ್ಯಾರು ಹೇಳು ಆದರೆ

ಮಧುವನ …

ಮನಸಿನ ಹಸಿ ಬಣ್ಣಗಳಲ್ಲಿ
ನೀನೆಳೆವಾ ರೇಖೆಗಳಲ್ಲಿ
ನಾ ಮೂಡಬೇಕು ಆದರೇ…..
ಎದುರಿದ್ದು ಕರೆಯುವೆ ಏಕೆ
ಜೊತೆಯಿದ್ದು ಮರೆಯುವೆ ಏಕೆ
ನಿನ್ನೊಲವು ನಿಜವೆ ಆದರೆ…

ತನು ಮನಗಳು ಪಕ್ವಗೊಂಡಿರುತ್ತವೆ. ತನ್ನನ್ನು ತಾನು ಅರ್ಪಿಸಿಕೊಳ್ಳಲು ಸಿದ್ಧವಾಗಿರುತ್ತವೆ. ಮತ್ತೊಂದು ಬದಿಯ ಸೆಳೆತಕ್ಕೆ ಮಾತ್ರ ಕಾದಿರುತ್ತವೆ. ಅಂಥದ್ದೊಂದು ಸುಮುಹೂರ್ತ ಒದಗಿ ಬಂದರೆ ಶರಣಾಗಿ ಬಿಡು ಎಂಬುದು ಹುಡುಗಿಯ ಆಂತರ್ಯದ ಕೂಗಿನಿಂದ ಹಾಡು ಪಲ್ಲವಿಸುತ್ತದೆ.

ಸಿದ್ಧಗೊಂಡ ಮನಸ್ಥಿತಿಗೆ ಬಿರುಗಾಳಿಯಲ್ಲಿ ತೇಲಿ ಆವ್ಹಾಹನೆ ಮಾಡಿಕೊಳ್ಳುವ ಘಳಿಗೆ ಬರುತ್ತದೆ. ಇಷ್ಟು ದಿನ ವಿರಹದ ಉರಿಯನ್ನು ತಣಿಸುವ ಘಳಿಗೆಯಲ್ಲಿ ಸುಪ್ತವಾಗಿದ್ದ ಕನಸುಗಳೆಲ್ಲ ಮೈಮುರಿದು ಜಾಗೃತವಾಗಿವೆ. ಶರಣಾಗಿ ಬಿಡುವುದು ಇಂಥ ಒಂದು ವ್ಯಾಮೋಹದ ಬಂಧನಕ್ಕೆ ಸೆರೆಯಾಗಿ ಬಿಡುವುದೂ ಅವಳ ಸೌಭಾಗ್ಯ.

ಇಷ್ಟು ದಿನ ಕಣ್ಣಿನ ಕುಲುಮೆಯಲ್ಲಿ ಬೆಂದು ಪಕ್ವಗೊಂಡ ಕನಸುಗಳೆಲ್ಲಾ ಸಾಕಾರಗೊಳ್ಳುವ ಘಳಿಗೆ. ಕೈಚಾಚಿದರೂ ದಕ್ಕದಿದ್ದ ಆಸರೆಗೆ ಬೇಸತ್ತು ಹೋದಾಗ ಆಚೆ ಬದಿಯಿಂದ ಆಸರೆ ಸಿಕ್ಕು ಇಡೀ ಬದುಕಿನೆಡೆಗೆ ಒಲುಮೆ ದಕ್ಕಿದೆ. ನಲ್ಲನಿಗೆ ಇದೆಲ್ಲವೂ ಕಾಣದಿದ್ದರೆ ಅವಳ ಬದುಕಿನ ಹಪಹಪಿ ತಾರುಣ್ಯದಿಂದ ಕಾಪಿಟ್ಟುಕೊಂಡ ಕನಸುಗಳ ಆಳ ಕಾಣದಿದ್ದರೆ ಬೆಳಕಿನಲ್ಲಿ ಒಳಗಣ್ಣು ತೆರೆದು ನೋಡು ಎಂಬ ಆಮಂತ್ರಿಸುತ್ತಾಳೆ. ಇಂಥ ಕ್ಷಣಕ್ಕೆ ಕಾದ ಹುಡುಗಿ ತನ್ನ ಹೆಸರನ್ನೇ ಮರೆತು ಅಂದರೆ ತನ್ನತನವನ್ನು ಬಿಟ್ಟು ಸಮರ್ಪಿಸಿಕೊಳ್ಳುತ್ತಾಳೆ. ಅಲ್ಲಿ ನಾನ್ಯಾರು ಎಂಬುದು ನನಗೆ ಗೊತ್ತಿಲ್ಲ ನಿನ್ನ ಹೊರತು
ಮತ್ತೇನು ನನ್ನಲಿಲ್ಲ. ಮೈ ತುಂಬ ನಿನ್ನ(ಚಂದ್ರ) ಗುರುತುಗಳೇ ಬಿದ್ದು. ನನ್ನ ಗುರುತುಗಳೆ ನನಗೆ ಮರೆತುಹೋಗಿದೆ. ಈ ಮಾತುಗಳು ಆಕೆಯ ಸಮರ್ಪಣೆಯ ವಿಸ್ತಾರವನ್ನು ಕಟ್ಟಿಕೊಡುತ್ತವೆ.

ಇಷ್ಟೆಲ್ಲಾ ಅರ್ಪಿಸಿಕೊಳ್ಳುವ ಹೆಣ್ಣಿಗೆ ಇನ್ನೊಂದೆ ಕೋರಿಕೆ ಅವರೀರ್ವರ ಮನಸ್ಸಿನ ಬಣ್ಣಗಳಿಂದ ತೆಗೆದ ಚಿತ್ರದಲ್ಲಿ ತಾನೇ ಮೂಡಬೇಕು. ಅಮೂರ್ತ ಪ್ರೀತಿ ನಿಜವಾಗಿಲ್ಲದೇ ಬರೀ ಕೃತ್ರಿಮವಾಗಿದ್ದರೆ ದೇಹದ ಹಸಿವಾಗಿದ್ದರೆ. ಜೊತೆಗಿದ್ದರೂ ಮರೆತು ಬಿಡುವ ಸಾಧ್ಯವಿದೆ. ಒಲವು ನಿಜವಾಗಿದ್ದರೆ ಮನಸ್ಸಿನ ಬಣ್ಣಗಳಿಂದ ಎಳೆದ ರೇಖೆಯಲ್ಲಿ ಅವಳಿಗೆ ಅವನು ಅವನಿಗೆ ಅವಳು ಪರಸ್ಪರರು ಮೂಡುತ್ತಾರೆ. ಅದಕ್ಯಾವ ಮೌಖಿಕ ಕರೆಗಳ ಅಗತ್ಯವಿಲ್ಲ.

ಪ್ರೀತಿಯ ಹಪಹಪಿಯಲ್ಲಿರುವ ಕಥಾನಾಯಕಿಗೆ ಗಂಡನ ಬೊಗಸೆ ಪ್ರೀತಿ ಸಿಕ್ಕ ತಕ್ಷಣ ತನ್ನ ಕನ್ಯೆತನದ ಆದಿಯಾಗಿ ತನ್ನತನದ ಒರೆಗೆ ಎಲ್ಲವನ್ನೂ ಸಮರ್ಪಿಸಿಕೊಳ್ಳುವ ಹುಡುಗಿಯ ಹಾಡು. ಕೊನೆಗೆ
ಅವಳು ಬಯಸುವುದು ಪ್ರೀತಿ ಪ್ರೀತಿ ಪ್ರೀತಿ ಮಾತ್ರ. ಅದು ಅವಳ ಆಕಾಂಕ್ಷೆ ಎಡೆಗಿನ ಅಲ್ಪತೃಪ್ತಿ.

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..