1802

ನಾ ಸಾಯುವ ಮುನ್ನ…

“ನಕ್ಕ ನಗೆಗಳಿಗೆ
ಲೆಕ್ಕ ಕೇಳುತೀಯಾ
ನಕ್ಕದ್ದು ಹುಸಿನಗೆಯಲ್ಲ
ನಿನ್ನೆಡೆಗಿನ ಮೆಚ್ಚುಗೆ ಹೊರತು
ಅದು ಒಲುಮೆಯ ಕಡೆಗಿನ ನಡಿಗೆಯಲ್ಲ.”
ಎಂದು ಅದೆಷ್ಟು ಭಾರಿ ಹುಸಿನುಡಿಯಲಿ
ತುಸು ಮನವ ಗಟ್ಟಿಗೊಳಿಸಿಕೊಂಡು
ಕಕ್ಕುವೆನು ಕಹಿಸತ್ಯವನು
ಕೇಳುವೆಯಾ ನೀ ಹೇಳು
ನಾ ಸಾಯುವಾ ಮುನ್ನ

ನಿನ್ನ ಬಿಕ್ಕಳಿಕೆಗೆ
ತಕ್ಕವಳು ನಾನಲ್ಲ
ಒಲ್ಲದ ಮನಸಿನಿಂದ
ಒಪ್ಪಿಸಿಕೊಂಡಿಹೆ ಬೇರೊಬ್ಬನಿಗೆ
ನಿನ ಆಧ್ಯಾತ್ಮಕಲ್ಲ
ಪ್ರೇಮಕ್ಕೂ ಯೋಗ್ಯಳಲ್ಲ
ನಿನ್ನೆದೆಯ ಕೊಡಪಾನವ
ಮೋಹದಮೃತದಿ
ತುಂಬಲು ನನ್ನಲಿ
ಚೈತನ್ಯವೇ ಇಲ್ಲ
ನೀ ಕಟ್ಟಿದ ಗುಡಿಗೆ ಅರ್ಹಳಲ್ಲ
ದುಷ್ಟನೊಬ್ಬ ನಿನ
ಪ್ರೇಮಪುಷ್ಪವ ಸ್ಪರ್ಶಿಸಿದ
ನಾನೊಬ್ಬಳು ಮೈಲಿಗೆಯಾದ ಮಲ್ಲಿಗೆ

ಸುಳಿಗಾಳಿಯಂತೆ ಬಂದೆ
ತಂಗಾಳಿಯಂತೆ ತಂಗಿದೆ
ಆದರೆ ಬಿರುಗಾಳಿ ಬಂದದ್ದು
ಮೊದಲು ನನ್ನ ಬಾಳಿಗೆ
ಬದುಕಿನ ಗಂಧವನೇ ಕಸಿದು
ಕಾಮದಾ ವಾಸನೆಯ ತುಂಬಿ
ನಿನ್ನ ಕೂಡುವಾ ಕನಸು ಕನಸಾಯಿತು
ಬಾಡುವುದೊಂದೇ ನನಗುಳಿದ ದಾರಿ
ನಾನು ಮೈಲಿಗೆಯಾದ ಮಲ್ಲಿಗೆ

ನಿನ ಕನಸಿನ ಕನವರಿಕೆ ನಾನಲ್ಲವೇ
ನಿನ ಕನಸಲ್ಲಿ ಮಾತ್ರ ನಿನ್ನವಳಾಗಿ
ನಿನ ಬದುಕಲಿ ಶಾಶ್ವತ ಕನಸಾಗಿ
ಹೊರಟಿಹೆನು ಮನ್ನಿಸಿಬಿಡೊಮ್ಮೆ
ನಾ ಸಾಯುವ ಮುನ್ನ
ಜಾರಿ ಹೋಗುವಾ ನಿನ್ನ
ಕಣ್ಣಹನಿಯು ನಾನು
ಜೀವನದಿಯಾಗಲಾರೆನು
ನಿನ ಬಾಳಿಗೆ
ನೀರಿನ ಮೇಲಿನ ಗುಳ್ಳೆಯಂತೆ
ಒಡೆದು ಹೋಗುವೆ ಕ್ಷಮಿಸಿಬಿಡೊಮ್ಮೆ
ನಾ ಸಾಯುವ ಮುನ್ನ

ನೀ ತಾಳಿ ಕಟ್ಟಬೇಕಾದ ಕತ್ತಿಗೆ
ಉರುಳೊಂದು ಕಾದಿಹುದು
ನಿನ ದೇವಿಗೆ ನಿನ ಆಕ್ರಂದನವೇ
ಮಂತ್ರಪಠನೆ ಕಣ್ಣಹನಿಗಳೆ ಜಪಮಾಲೆ
ಪ್ರೇಮದ ಮೊಲವಿಂದು
ಕಾಮದಾ ಬಲಿಪೀಠಕೆ
ಸಿಕ್ಕಿದೆ ನನ ನೆತ್ತರಿನಲಿ
ನಿನ ಪಾದ ತೊಳೆಯುವೆ
ಬಿಟ್ಟುಬಿಡು ನನ್ನ ನಾನೊಬ್ಬಳು
ಮೈಲಿಗೆಯಾದ ಮಲ್ಲಿಗೆ

ಒಲುಮೆಯ ಕುಲುಮೆಯಲಿ
ನೀ ಬೇಯುತ್ತಾ ಶುದ್ದಿಯಾದೆ
ಕಾಮದಾ ಚಿತೆಯನ್ನು ಏರಿ
ನಾ ಬೂದಿಯಾದೇ
ಸಹಿಸು ನೀ ವಿರಹವಾ
ಬರುವಳು ನನಗಿಂತ
ತಕ್ಕವಳು ಮುಡಿಯಲು
ನೀ ಮುಡಿಸುವಾ ಮಲ್ಲಿಗೆ

ನಾನೀಗ ಹೋಗುವೆನು ಗೆಳೆಯ
ಬಹುದೂರವೆನಲ್ಲ ಜನ್ಮತಾಳುವೆನು
ಮೊಗ್ಗಾಗಿ ನಿನ ಮಡಿಲಲ್ಲಿ
ಮತ್ತೊಮ್ಮೆ ಎತ್ತಿ ಆಡಿಸುವಂತೆ
ನನ್ನನು ಬಾಡದಂತೆ
ನಿನ ಕಾವಲಲಿ ಅರುಳುವೆನು
ನಾನಾಗ ಮೆಲ್ಲಗೆ….

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..