2524

ನಂದಿನಿ ಅವರ ಕವನಗಳು

ಕವಯತ್ರಿ :ನಂದಿನಿ ನಂಜಪ್ಪ

ಬದುಕಿನ ಹಾದಿಯಲ್ಲಿ ಹೂವಾಗಿ ಬರಬೇಡ
ನಗುತ ಮಲಗಿರುವ ನಿನ್ನೆದೆಯ ಮೇಲೆ ಸುಮ್ಮನೆ ಕಾಲಿಟ್ಟು
ಖುಷಿಯಲಿ ನಡೆದು ನಿನ್ನ ಹೊಸಕಿ ಅರೆಜೀವಮಾಡಿ
ಅರೆಘಳಿಗೆಯ ಅನುಭವವ ಮನಸಿಗಚ್ಚಿಕೊಂಡು
ಒಂದೆರಡು ಸಾಲು ಗೀಚಿ ಮರುಘಳಿಗೆ ಮರೆತು
ತಿರುಗಿ ನೋಡದೆ ಹೊರಟೇ ಬಿಡುತ್ತೇನೆ

ಬರುವುದಾದರೆ ಅಂಗಾಲ ಹೊಕ್ಕು
ರಕ್ತ ಕಕ್ಕಿಸಿ ಕಂಬನಿಯ ಉಕ್ಕಿಸಿ
ಬದುಕ ದಾರಿಯಲ್ಲಿ ಸದಾ ನಾನು
ಎಚ್ಚರವಿರುವಂತೆ ಬುದ್ದಿ ಹೇಳಿದ ಮುಳ್ಳಾಗಿ ಬಾ

ಚುಚ್ಚಿದ್ದ ಮುಳ್ಳನು ಕೈಯಿಂದ ಮುಟ್ಟಿ
ಜೋಪಾನವಾಗಿ ತೆಗೆದು
ಬಿದ್ದ ಪೆಟ್ಟಿಗೂ ತಿಂದ ನೋವಿಗೂ
ಇಟ್ಟ ಕಣ್ಣೀರು ಸಾಂತ್ವನ ಹೇಳಲು ಸೋತಾಗ
ಮತ್ತೆ ನಿನ್ನ ನೆನೆದು ಪುನಃ ಎಚ್ಚರಗೊಳ್ಳುವೆ.

❋❋❋❋❋❋❋❋❋❋❋❋❋❋❋❋❋❋❋❋❋❋❋❋❋❋❋❋❋❋❋❋❋❋❋❋❋❋❋❋❋❋❋

ಕೀಲಿ ಮಣೆ (Key board)

ಹೂಸ್ಪರ್ಶವೆಂದು ನನ್ನನೊಬ್ಬ ಹೊಗಳುತ್ತಿದ್ದ
ಬರೀ ನಾಚುವ ನನ್ನನು ನೋಡಿರುವ ಅವನಿಗೇನು ಗೊತ್ತು?
ನಾನೆಷ್ಟು ಕ್ರೂರಿ ಎಂದು!
ಕೇಳಿದರೆ ಕೇಳಬೇಕು ಮಾನಿಟರ್ ಮುಂದೆ
-ಮೈಯ್ಯೊಡ್ಡಿ ಕೂತ ಕೀಲಿಮಣೆಯನ್ನು.

ಕೆತ್ತಿದ ಶಿಲೆಯನು ಬಿತ್ತಿದ ಬೆಳೆಯನು
ನೋಡಿ ಕಣ್ತುಂಬಿಕೊಂಡು ಹೊಗಳುವವರುಂಟು
ಕುಟ್ಟಿಸಿಕೊಂಡ ಕೀಬೋರ್ಡ್ ಅನ್ನು ಹೊಗಳುವವರಾರು?
ಹೊಗಳಿದರೆ ಹೊಗಳವರೇನೋ ತೆರೆಯ ಮೇಲೆ ಅರಳಿದಾ
-ಸುಂದರ ಕವಿತೆಯನ್ನು, ಬರೆದ ಕವಿಯನ್ನು

ಬಾಸ್ ಬೈದ ಬೇಜಾರಿಗೊಂದು ಪೆಟ್ಟು
ಕೆಲಸ ಮುಗಿಯದ ಸಿಟ್ಟಿಲ್ಲೊಂದು ಪೆಟ್ಟು
ಸಂಜೆಯಾದ ಖುಷಿಯಲ್ಲೊಂದು ಪೆಟ್ಟು
ಹೀಗೆ ದಿನವಿಡಿ ನಿನ ಕುಟ್ಟುತ್ತಲಿರುವೆ

ನೀನೂ ಬರ್ತಾ ಬರ್ತಾ ಸವೆಯುತ್ತಲಿವೆ…
-ನಿನ್ನ ಹಣೆಯ ಮೇಲಿನ ಬರಹಗಳು ಮಾಸಿಹೋಗುತ್ತಿವೆ
ಇಷ್ಟಾದರೂ ಒಂದು ದಿನವೂ ನಿನ್ನ ಮುಖ ನೋಡಿ
ನಿನಗಾಗಿ ಅತ್ತಿಲ್ಲ, ಅಬ್ಬಾ ! ನಾನದೆಂಥ ಕ್ರೂರಿ !
ಈಗಲೂ ಸುಮ್ಮನೆ ಕಣ್ಣುಮುಚ್ಚಿಕೊಂಡು
ಮರಕುಟಿಕದಂತೆ ಕುಟ್ಟುತ್ತಲಿರುವೆ…
ಕೊಕ್ಕಿನೇಟು ತಿಂದ ಮರದ ಎದೆಯ ನೋವು
ಅರಿಯುವವರಾರು? ಕೇಳಿದರೇ….
“ಅಯ್ಯೋ ಅದು ಮರವಲ್ಲವೇ? ” ಎಂದಾರು.
ಕ್ಷಮಿಸು ಬಿಡು ನಾನೇನು ಇದಕ್ಕೆ ಹೊರತಲ್ಲ….

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..