- By Guest Writer
- Sunday, October 23rd, 2016
ನೀ ಹೋಗುವಾ ಮುನ್ನ
ನಕ್ಕ ನಗೆಗಳಿಗೊಮ್ಮೆ
ಲೆಕ್ಕ ಕೊಟ್ಟು ಹೋಗು
ಬಿಡುಗಡೆಯಾಗದೇ ಸಿಕ್ಕಿಬಿದ್ದ
ಬಿಕ್ಕಳಿಕೆಯನ್ನೊಮ್ಮೆ
ಹತ್ತಿಕ್ಕಿ ಹೋಗು
ಠಕ್ಕ ಮನವು
ಹಕ್ಕು ಪ್ರತಿಪಾದಿಸಿ
ನನ್ನನೇ ಧಿಕ್ಕರಿಸುತಿದೆ
ಮನಸಿನಾಳಕ್ಕೆ ಹೊಕ್ಕು
ಸೊಕ್ಕಿನಿಂದ ಹೋದರೆ ಹೇಗೆ ?
ತುಕ್ಕು ಹಿಡಿದಾ ಮನಕೊಮ್ಮೆ
ಸಾಂತ್ವನ ತೈಲ ಲೇಪಿಸಿ ಹೋಗು
ನೀ ಹೋಗುವಾ ಮುನ್ನ..
ಸಿಕ್ಕಸಿಕ್ಕವರ ಹಿಂದೆ ಬಿದ್ದವನಲ್ಲ
ತಕ್ಕುದಾದ ಹುಡುಗಿ ನೀನೆಂದು
ಅಕ್ಕ ಪಕ್ಕದವರನೂ ಲೆಕ್ಕಿಸದೇ
ನಿನ್ನ ಕರಪಿಡಿದು ನೀ ನಡೆಸಿದ ದಿಕ್ಕಲಿ
ನಡೆದು ಬಂದಿಹೆನು
ನೀ ದಕ್ಕದಿದ್ದರೂ ಸರಿಯೇ
ದುಃಖವನೊಮ್ಮೆ ದಕ್ಕಿಸಿಕೊಳ್ಳುವುದ
ಕಲಿಸಿ ಹೋಗು.
ನೀ ಹೋಗುವಾ ಮುನ್ನ..
ದಿಕ್ಕೆಟ್ಟು ನಿಂತಿಹೆ ಕಗ್ಗತ್ತಲ ಕಾನನದಿ
ಧ್ರುವತಾರೆಯಂತೊಮ್ಮೆ ಮಿನುಗಿ
ದಾರಿ ತೋರಿಸಿ ಹೋಗು
ಆಶಾಗೋಪುರವನ್ನು
ಮರಳಗೂಡಂತೆ ಕದಡಿ
ಆಟದ ಮಧ್ಯದಲ್ಲೇ
ಎದ್ದು ಹೋದರೆ ಹೇಗೆ?
ನನ್ನ ಮುರಿದ ಹೃದಯವನ್ನಾದರೂ
ಹಿಂತಿರುಗಿಸಿ ಹೋಗು
ನೀ ಹೋಗುವಾ ಮುನ್ನ
ಪ್ರೇಮವನ್ನು ಆಧ್ಯಾತ್ಮದಂತೆ
ಕಂಡ ಪರಮಭಕ್ತ ನಾನು
ಮನದೇವಿಗಾಗಿ ‘ಮುತ್ತಿ’ನ
ಜಪಮಾಲೆ ಪಿಡಿದು
ಪ್ರತಿ ಎದೆಬಡಿತದಲಿ
ನಿನ್ನೆ ಪಠಿಸುತಾ
ಚಡಪಡಿಸುತಿಹೆನು
ಸುಡುವಿರಹವ ಸರಿಸಿ
ಕಡುಮೋಹದಮೃತದಿ
ಎದೆಯ ಕೊಡಪಾನ
ತುಂಬಿ ಹೋಗು..
ನೀ ಹೋಗುವಾ ಮುನ್ನ….
ಉಪ್ಪರಿಗೆಯ ಮನೆಯಿಲ್ಲ
ಸುಖದ ಸುಪ್ಪತ್ತಿಗೆಯೂ ಇಲ್ಲ
ಒಪ್ಪತ್ತಿನ ಊಟಕ್ಕೆ ಮೋಸವಿಲ್ಲ ಗೆಳತಿ
ಅಪ್ಪಿತಪ್ಪಿಯೂ ಮನನೋಯಿಸೊಲ್ಲ
ತಪ್ಪು-ಒಪ್ಪುಗಳನ್ನು ಮರೆತು
ಅಪ್ಪಿಕೊಂಡುಬಿಡುವ ಕೊನೆಗೊಮ್ಮೆ
ತಪ್ಪದೇ ಬಂದು ಹೋಗು
ನೀ ಹೋಗುವಾ ಮುನ್ನ..
ಒಲುಮೆ ಎಂಬುದು ಕುಲುಮೆಯಾಗಿ
ಆಸೆಯ ಚಿಲುಮೆಯೇ ಬತ್ತಿ ಹೋಗಿ
ಬಲವಿಲ್ಲದೇ ಗೆಲುವಿಲ್ಲದೇ
ಬದುಕಿಗೆ ಕನಿಷ್ಠ ನಿಲುವೂ ಇಲ್ಲದೇ
ಬಸವಳಿದಿಹೆನು ನನ್ನ ಮನದ ಇಳೆಗೆ
ಅಕಾಲಿಕ ಮಳೆಯಂತೊಮ್ಮೆ ಇಳಿದುಹೋಗು
ನೀ ಹೋಗುವಾ ಮುನ್ನ..
ನಿರ್ವಾತದಾ ಬದುಕಿಗೆ
ಸುಳಿಗಾಳಿಯಂತೆ ಸುಳಿದು
ತಂಗಾಳಿಯಂತೆ ತಂಗಿ
ಬೆಚ್ಚನೆಯ ಮನೆಯಿಂದ ನನ್ನ
ಬಿರುಗಾಳಿಯ ಬಯಲಲ್ಲಿ ಒಂಟಿಯಾಗಿ
ಬಿಟ್ಟುಹೋದರೆ ಹೇಗೆ?
ಮತ್ತೊಮ್ಮೆ ನನ್ನ ಹಳೆಯ
ಬದುಕಿಗೆ ಪರಿಚಯಿಸಿ ಹೋಗು
ನೀ ಹೋಗುವಾ ಮುನ್ನ..
ಕರಾಳ ಇರುಳಿನಲಿ
ಕನಸಿನ ಕನವರಿಕೆಯೆಲ್ಲಾ ನಿನದೆ
ಕಣ್ಣು ಮುಚ್ಚಿದರೆ
ನೆನಪಿನ ತುಂಡಾದ ಸರಪಣಿ
ಕಣ್ಣು ಬಿಟ್ಟರೆ ಬರೀ ಕಂಬನಿ
ನಿನ್ನ ಬೆರಳಂಚಲ್ಲಿ
ನನ್ನ ಕಣ್ಣಂಚನು ಒರೆಸಿ
ಹುಸಿನಗೆಯ ಮತ್ತೊಮ್ಮೆ ಮೊಗದಲಿ ಧರಿಸಿ
ಅಳಲೊಂದು ಕಾರಣವಾ
ನಗಲೊಂದು ನೆಪವಾ ಕೊಟ್ಟು
ನಿನ್ನ ಬದುಕಿನಾ ಬೇಡಿಯಿಂದೊಮ್ಮೆ
ನನ್ನ ಮುಕ್ತಗೊಳಿಸಿ ನನ್ನನೇ
ನನಗೆ ಮರುಕಳಿಸಿ ಹೋಗು
ನೀ ಹೋಗುವ ಮುನ್ನ..