- By Guest Writer
- Sunday, August 14th, 2016
ಮಂಜುನಾಥ ಹಿಲಿಯಾಣ
ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯೊಂದರ ಪಿಯುಸಿ ಕಲಾ(ಆರ್ಟ್ಸ್) ವಿಭಾಗದ ತರಗತಿಯ ಕೋಣೆಯೊಳಗೆ ಹೊಕ್ಕ ನಾನು ನಿಜಕ್ಕೂ ಕ್ಷಣ ಗರ ಬಡಿದವನಂತೆ ನಿಂತೆ. ಕಾರಣ ಆ ತರಗತಿಯಲ್ಲಿದದ್ದು ನಾಲ್ಕೇ ನಾಲ್ಕು ವಿದ್ಯಾರ್ಥಿಗಳು. ಮೂವರು ಹುಡುಗಿಯರು..ಒಬ್ಬ ತರುಣ.
‘ಅರೇ..ಏನಿದು?’ ಎಂದು ವಿಚಾರಿಸುತ್ತಾ ಹೋದಾಗ ತಿಳಿದ ಕಟು ಕಹಿ ಸತ್ಯ ಯಾವ ಕಾಲೇಜಿನಲ್ಲೂ ಆರ್ಟ್ ವಿಭಾಗಕ್ಕೆ ಈವಾಗ ಮಕ್ಕಳೇ ಇಲ್ಲ; ಇತಿಹಾಸ, ಸಮಾಜ ವಿಜ್ಞಾನ, ರಾಜ್ಯಶಾಸ್ತ್ರ ವಿಷಯಗಳನ್ನು ತೆಗೆದುಕೊಂಡು ಓದುವ ವಿದ್ಯಾರ್ಥಿಗಳೇ ಇಲ್ಲವಾಗಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಮುಂದಿನ ವರ್ಷಗಳಲ್ಲಿ ಕಲಾ ವಿಭಾಗವನ್ನೆ ನಿಲ್ಲಿಸಬೇಕಾದಿತು ಎಂದು ಶಿಕ್ಷಕರು ನೋವಿನಿಂದ ನುಡಿಯುತ್ತಿದ್ದಾರೆ.. ಈ ಪರಿಸ್ಥಿತಿ ಎಕೆ ಬಂತು?ಯಾರನ್ನು ದೂರಲಿ? ಯಾರನ್ನು ತೆಗಳಲಿ?
ರಸ್ತೆಯಲ್ಲಿ ಸಿಗುವ ಯಾವ ಹಿರಿಯರ ಹತ್ತಿರವಾದರೂ ‘ನಾನು ಆರ್ಟ್ಸ್ ತೆಗೆದುಕೊಂಡು ಓದುತಿದ್ದೇನೆ’ ಅಂತ ಒಮ್ಮೆ ಹೇಳಿ ನೋಡಿ..ಅಲ್ಲಿಗೆ ಮುಗಿಯಿತು. ಈ ಆರ್ಟ್ ನಿಂದ ನಿಂಗೆ ಬದುಕು ಸಾಗಿಸ್ಲಿಕ್ಕೆ ಯಾವತ್ತು ಆಗಲ್ಲ. ಕೂಲಿ ಕೆಲಸವೇ ಗ್ಯಾರಂಟಿ ಎಂದು ಷರಾ ಬರೆದಂತೆ ನಮ್ಮನ್ನು ಹೀಯಾಳಿಸುವವರು ನಿಮಗೆಷ್ಟು ಜನ ಬೇಕು?
ಅವರ ಮಾತು ಸತ್ಯವೂ ಹೌದು. ವಾಣಿಜ್ಯ ವಿಭಾಗ ವಿದ್ಯಾರ್ಥಿಗಳಿಗಾಗಲಿ, ಸೈನ್ಸ್ ಓದಿರುವ ವಿದ್ಯಾರ್ಥಿಗಳಿಗಾಗಲಿ ಇರುವ ಕೆಲಸಗಳ ಅವಕಾಶ ಆರ್ಟ್ ಓದಿರುವ ವಿದ್ಯಾರ್ಥಿಗಳಿಗಿಲ್ಲ. ಇದ್ದರೂ ಆ ಕೆಲಸಗಳನ್ನು ಹೇಗೆ ಬಾಚಿಕೊಳ್ಳಬೇಕು ಎಂಬ ಕನಿಷ್ಟ ಜ್ಞಾನವನ್ನೂ ಸಂಪಾದಿಸಿಕೊಳ್ಳಲಾಗದೇ ಕಲಾ ವಿಭಾಗದಲ್ಲಿ ಓದಿರುವ ಎಷ್ಟೂ ಜನ ಉದ್ಯೋಗ ಅರಸಿ ಅರಸಿ ಸುಸ್ತಾಗಿ ಕೂಲಿ ಕೆಲಸದತ್ತ ಮುಖ ಮಾಡಿದ್ದಾರೆ…
ಮತ್ತೆ ಕೆಲವು ಹಿರಿಯರಿದ್ದಾರೆ..’ಈಗಿನ ಮಕ್ಕಳಿಗೆ ಹಣ ಮಾಡುವುದು ಮಾತ್ರ ಯೋಚನೆ..ಅವರಿಗೆ ಬದುಕಿನ ಅರಿವು ಮೂಡಿಸುವ ಕಲಾ ವಿಭಾಗ ಬೇಡ’ ಎಂದು ಉಪದೇಶ ಕೊಡುತ್ತಾರೆ. ಅವರ ಮಾತನ್ನು ಒಪ್ಪಿಕೊಳ್ಳಬಹುದಾದರೂ ಬದುಕಿಗೆ ಅನ್ನ ಕೊಡದ, ಬದುಕಿಗೆ ಆರ್ಥಿಕ ಬೆಂಬಲ ಒದಗಿಸದ ಕಲಾ ವಿಭಾಗವನ್ನು ಓದಿರುವ ವಿದ್ಯಾರ್ಥಿಗಳು ಬರೀ ವಿಷಯ ಜ್ಞಾನವನ್ನು ತುಂಬಿಕೊಂಡರೆ ಬದುಕಿಗೆ ಏನು ಮಾಡಲಿ?? ಅನ್ನಕ್ಕೆ ಯಾವ ಉದ್ಯೋಗ ಹಿಡಿಯಲಿ?
ಅಷ್ಟಕ್ಕೂ ಉನ್ನತ ಶಿಕ್ಷಣ ಎಂದರೆ ಅದು ಕಾಲ ಕಾಲಕ್ಕೆ ಅಪ್ ಡೇಟ್ ಆಗಬೇಕು. ಹಳೆಯ ವಿಷಯಗಳ ಜೊತೆ ಜೊತೆಗೆ ಈ ಕಾಲದ ಜಮಾನಕ್ಕೆ ಹೊಂದುವ ವಿಷಯಗಳ ಅರಿವನ್ನೂ ವಿದ್ಯಾರ್ಥಿಗಳಿಗೆ ತುಂಬಬೇಕು. ಆ ಹೊಸ ವಿಷಯಗಳು ಅರಿವಿನ ಜೊತೆ ಜೊತೆಗೆ ಉದ್ಯೋಗದ ಭರವಸೆಯನ್ನು ನೀಡಬೇಕು. ಆಗ ಮಾತ್ರ ಅದು ಉಳಿದೀತು. ಬೆಳೆದಿತು. ಅದು ಬಿಟ್ಟು ಏಳನೆಯ ತರಗತಿಯಲ್ಲಿ ಓದಿದ ಅದೇ ಪಾಣಿಪತ್ ಕದನವನ್ನು ಪೈನಲ್ ಈಯರ್ ಡಿಗ್ರಿಯಲ್ಲು ಒಂದಿಷ್ಟು ವಿವರಗಳೊಂದಿಗೆ ಅದೇ ಪಾಣಿಪತ್ ಕದನವನ್ನು ಅಭ್ಯಸಿಸಬೇಕಾಗಿ ಬಂದರೆ ವಿದ್ಯಾರ್ಥಿಗಳು ಏನು ಮಾಡಲಿ? ಯಾರನ್ನೂ ದೂರಲಿ? ಪತ್ರಿಕೋದ್ಯಮ, ಪ್ರವಾಸೋದ್ಯಮದಂತಹ ಹೊಸ ಹೊಸ ವಿಷಯಗಳನ್ನು ಕಲಾ ವಿಭಾಗದಲ್ಲಿ ವಿದ್ಯಾರ್ಥಿಗಳಿಗೆ ಕಲಿಸುವ ಪ್ರಯತ್ನ ಸ್ವಾಗತಾರ್ಹವಾದರೂ ಅದು ಜಾಸ್ತಿ ಯಶಸ್ಸನ್ನು ಕಂಡಿಲ್ಲ ಎನ್ನುವುದು ಸತ್ಯ.. ನಿಜವಾದ ಆಸಕ್ತಿಯ ವಿದ್ಯಾರ್ಥಿಗಳು ಇದರತ್ತ ಬರುತ್ತಿಲ್ಲ ಅನ್ನುವೂದು ಸತ್ಯವೇ!?
ಇನ್ನೊಂದು ಅಂಶವನ್ನು ಮುಖ್ಯವಾಗಿ ಗಮನಿಸಬೇಕು. ಇತ್ತೀಚೆಗೆ ಕಲಾ ವಿದ್ಯಾರ್ಥಿ ಎಂದರೆ ಆತನೊಬ್ಬ ಪೊಕರಿಯೋ, ಪೆದ್ದುವೂ, ದದ್ದುವೋ ಆಗಿರಬೇಕು ಎಂಬ ಹೀನ ಮನಸ್ಥಿತಿ ಕೆಲವರಲ್ಲಿದೆ. ಕೆಲವು ವಿದ್ಯಾರ್ಥಿಗಳು ಹಾಗೆಯೇ..ಉಳಿದ ಕಾಂಬಿನೇಷನ್ ವಿದ್ಯಾರ್ಥಿಗಳಿಗೆ ಓದಿನ ಬಗ್ಗೆ ಇರುವ ಗಂಭಿರತೆಯಾಗಲಿ, ವಿಷಯ ಜ್ಞಾನವಾಗಲಿ ಇವರ ಬಳಿ ಇನಿತೂ ಇಲ್ಲ. ಎಷ್ಟೂ ಆರ್ಟ್ಸ್ ವಿದ್ಯಾರ್ಥಿಗಳು ಭಾರತದ ಹೋಂ ಮಿನಿಷ್ಟರ್ ಯಾರು ಎಂದು ಕೇಳಿದೆ ‘ಬ್ಬೆಬ್ಬೆ’ ಎಂದು ಹೇಳುವ ಸ್ಥಿತಿಯಲ್ಲಿದ್ದಾರೆ. ಯಾರನ್ನು ದೂರಬೇಕೊ ತಿಳಿಯುತ್ತಿಲ್ಲ.
ನಿಜವಾಗಲೂ ಕಲಾ ವಿಭಾಗ ಎನ್ನುವುದು ಸಾವಿರ ಸಾವಿರ ಅವಕಾಶಗಳ ಹೆಬ್ಬಾಗಿಲು. ಅದರ ನಿಜದ ಅಂತರಾರ್ಥವನ್ನು ಅರಿತು ಓದಿದರೆ ನಿಜವಾಗಲೂ ಒಳ್ಳೆಯ ಉದ್ಯೋಗಗಳು, ಅನುಭವಗಳು ದೊರಕಿತು.ನಮ್ಮ ಜ್ಞಾನ ದಿಗಂತವೂ ವಿಸ್ತಾರವಾದಿತು.
ಆರ್ಟ್ಸ್ ವಿಭಾಗ ಯಾವತ್ತೂ ಮುಚ್ಚಬಾರದು. ಅದು ಅವಕಾಶಗಳ ಹೆದ್ದಾರಿಯಾಗಬೇಕು..ಅದೇ ನಮ್ಮೆಲ್ಲರ ಕಳಕಳಿ ಆಶಯ. ಏನಂತೀರಿ??