5622

ಫಸ್ಟ್ ನೈಟ್ ಗೂ ಹಿಂದಿನ ನೈಟು

ಇವತ್ತೆ ಲಾಸ್ಟು .ನಾಳೆ ಅವನಿರೋದಿಲ್ಲ ಅವನ ತುಂಟಾಟ,ಹಾರಾಟ,ಉಸಿರಾಟ ಎಲ್ಲವೂ ನಾಳೆಗೆ ಖಾಲಿ.ನನ್ನೊಳಗಿದ್ದ ಬ್ಯಾಚುಲರ್ ಒಬ್ಬ ನಾಳೆ ಸತ್ತು ಸುಡುಗಾಡು ಸೇರುತ್ತಾನೆ.ನಾಳೆ ಮುಂಜಾನೆ 9.16 ಕ್ಕೆ ಒದಗುವ ತುಲಾ ಲಗ್ನ ಸುಮುಹೂರ್ತದಲ್ಲಿ ನನ್ನೊಳಗಿನ ಆ ಬ್ಯಾಚುಲರ್, ಬಂಧುಗಳೆಲ್ಲರ ಸಮ್ಮುಖದಲ್ಲಿ ವೀರ ಮರಣವನ್ನಪ್ಪಲಿದ್ದಾನೆ.ಚೆ ಕಲ್ಪಿಸಿಕೊಂಡರೆ ಭಯವಾಗುತ್ತಿದೆ.ಮೈಯೆಲ್ಲಾ ಬೆವರುತ್ತಿದೆ.ಇಷ್ಟು ದಿನ ನನ್ನೊಂದಿಗಿದ್ದ ವ್ಯಕ್ತಿಯೊಬ್ಬ ನಾಳೆ ಇಷ್ಟೊತ್ತಿಗೆ ಇರುವುದಿಲ್ಲ ಎಂಬುದನ್ನು ಕಲ್ಪಿಸಿಕೊಂಡರೆ,ಮೈಯೆಲ್ಲಾ ತರಗುಟ್ಟುತ್ತಿದೆ.ಹೌದು ನಾಳೆ ನನ್ನ ಮದುವೆ…..ಇದೆ ಮೊದಲ ಬಾರಿಯಲ್ಲವೆ?ಏನೊ ಒಂತರ ,ಯಾವ್ ತರ ಅಂತ ಯಾರ್ ಹತ್ರಾನೂ ಹೇಳಿಕೊಳ್ಳಲಾಗದ ತರಹದ ಚಡಪಡಿಕೆ.ಹೌದು ನಾಳೆ ನನ್ನ ಮದುವೆ…..ನನ್ನ ಭಾವಿ ಪತ್ನಿಯ ಜೊತೆ.ಅವಳ್ ಹೆಸ್ರು…ಉಂ….ಏನೊ ಇದೆ….ಹೇಳೋಕ್ ನಾಚಿಕೆ.

ಮನೆ ತುಂಬಾ ನೆಂಟ್ರು….ಅವರ ಮುಖದ ತುಂಬಾ ಸಂತಸ.ಚಪ್ಪರದಡಿಯಲ್ಲಿ ಪುರುಷವರ್ಗ ಮಾತನಾಡಲು ಬೇಕಾಗುವಷ್ಟು ಮಾತ್ರ ಗ್ಯಾಪನ್ನು ಬಾಯಿಯಲ್ಲಿ ಉಳಿಸಿಕೊಂಡು ಬಾಯಿಯ ಉಳಿದ ಭಾಗಗಳಿಗೆ ಎಲೆಯಡಿಕೆ ತುಂಬಿಕೊಂಡು,ಮುಂದಿನ ಚುನಾವಣೆಯಲ್ಲಿ ಹೂವ್ ಬರತ್ತೊ? ಕೈ ಬರತ್ತೊ? ನಾಲ್ಕೆ ನಾಲ್ಕು ತೆನೆ ಹೊತ್ತಿರೊ ಆ ಯಮ್ಮಾ ಏನಾಗ್ತಾಳೆ ?ಎನ್ನುವ ಧೀರ್ಘವಾದ ಚರ್ಚೆಯಲ್ಲಿ ತೊಡಗಿಸಿಕೊಂಡಿದ್ದಾರೆ.ಬೆಂಗಳೂರಿನಿಂದ ಬಂದ ಮಕ್ಕಳು ಅಂಗಳವನ್ನು ಬಳಿದ ಸಗಣಿಯ ಸ್ಮೆಲ್ಲಿಗೆ ಹೇಸಿ ಮನೆಯ ಒಳಗೆ ತಮ್ಮ ತಮ್ಮ ತಾಯಂದಿರ ಮೊಬೈಲ್ ಹಿಡಿದು ಕೂತಿವೆ.ಹೆಂಗಸರು ಅಲಂಕಾರ ಆರಂಭಿಸಲು ಬೆಳಗಾಗುವುದನ್ನೆ ಕಾಯುತ್ತಿದ್ದಾರೆ.ಇನ್ನು ನಾನು? ಹೌದು ನಾನೇನು ಮಾಡುತ್ತಿದ್ದೇನೆ?ಹೌದು ಯೋಚಿಸುತ್ತಿದ್ದೇನೆ.ಏನನ್ನು ಯೋಚಿಸುತ್ತಿದ್ದೇನೆ? ಗೊತ್ತಿಲ್ಲ ಬಹುಶಃ ಅದೇ ನಾನೇನು ಯೋಚಿಸುತ್ತಿದ್ದೇನೆ ಎನ್ನುವುದನ್ನೆ ಯೋಚಿಸುತ್ತಿದ್ದೇನೆ.ದೇಹ ನಿರಳವಾಗಿ ಬೆಡ್ ಮೇಲೆ ಹರಡಿಕೊಂಡಿದೆ.ಮನಸ್ಸು ಉಹುಂ ಮನಸ್ಸಿನಲ್ಲಿ ಆ ನಿರಾಳತೆ ಕಾಣುತ್ತಿಲ್ಲ.ಯಾಕೆ? ಯಾಕೆಂದರೆ ನಾಳೆ ನನ್ನ ಮದುವೆ ನನ್ನ ಭಾವಿ ಪತ್ನಿಯ ಜೊತೆ.

ಎಲ್ಲಾ ಶಾಸ್ತ್ರಗಳೂ ಮುಗಿದಿವೆ.ಈಗ ಎಲ್ಲರೂ ಮಲಗಿದ್ದಾರೆ.ನಾನು? ನಾನು ಮಲಗಿದ್ದೇನೆ ಆದರೆ ನಿದ್ರೆ?ಮಲಗುವುದೇ ಬೇರೆ ನಿದ್ರಿಸುವುದೇ ಬೇರೆ.ಅದ್ಯಾಕೊ ಗೊತ್ತಿಲ್ಲ ಮದುವೆ ಎಂದ ಕೂಡಲೆ ಕುಣಿದು ಕುಪ್ಪಳಿಸಿದ ಜೀವವಿಂದು ಮೌನವಾಗಿದೆ.ಇಷ್ಟು ದಿನ ನನ್ನ ಜೀವಸತ್ವಗಳಲ್ಲಿ ಇದ್ದ ಉತ್ಸುಕತೆ ಇಂದಿಲ್ಲ.ನಾಳೆಯ ಭಯ ಇಂದು ಅತಿಯಾಗಿ ಕಾಡುತ್ತಿದೆ.ಬ್ಯಾಚುಲರ್ ಲೈಫಿಗೆ ವಿದಾಯ ಹೇಳುವುದು ಇಷ್ಟೊಂದು ಘೋರವಾಗಿರುತ್ತದೆ ಎಂದು ನಾನು ಯಾವತ್ತೂ ಅಂದುಕೊಂಡವನಲ್ಲ.ನಾಳೆಯಿಂದ ನಾನು ಬ್ಯಾಚುಲರ್ ಅಲ್ಲ.ಇನ್ನು ಮುಂದೆ ರಾತ್ರಿ ಲೇಟಾಗಿ ಬರುವ ಹಾಗಿಲ್ಲ ಹತ್ತು ನಿಮಿಷ ಲೇಟಾದರೂ ಹತ್ತು ಬಾರಿ ಕಾಲ್ ಗಳು ಬಂದಿರುತ್ತದೆ.ಗಡ್ಡ ಬಿಟ್ಟಾಗ ಬೈಯ್ಯಲು ಅಮ್ಮನ ಜೊತೆ ಇನ್ನೊಬ್ಬರಿರುತ್ತಾರೆ.ಯಾವುದು ಬೇಕೊ ಆ ಡ್ರೆಸ್ ಹಾಕೊಂಡು ಪೆಂಗನ ಹಾಗೆ ಎಲ್ಲೂ ಹೋಗೊ ಹಾಗಿಲ್ಲ.ನಾನ್ ಹಾಕೊ ಡ್ರೆಸ್ ನ ಅವಳು ಓಕೆ ಮಾಡ್ಲೇಬೇಕು.ನನಗೇನ್ ಬೇಕು ಅನ್ನೋದನ್ನ ಮರ್ತು ಅವ್ಳಿಗೇನ್ ಬೇಕು,ಏನ್ ಬೇಡ ಅನ್ನೋದ್ರ್ ಬಗ್ಗೆ ಹೆಚ್ಚು ಯೋಚ್ನೆ ಮಾಡ್ಬೇಕು.ಅಮ್ಮನ್ನ ಮತ್ತೆ ಅವಳನ್ನ ಈಕ್ವಲ್ ಆಗಿ ಬ್ಯಾಲೆನ್ಸ್ ಮಾಡ್ಬೇಕು.ಅವ್ರಿಬ್ರು ಕಿತ್ತಾಡ್ದೆ ಇರೊ ತರ ನೋಡ್ಕೊಬೇಕು.ನನ್ನ ಕೊಳಕು ಬಟ್ಟೆಗಳಿಂದ ಕಂಗೊಳಿಸುತ್ತಿರುವ ನನ್ನ ರೂಮಿನಲ್ಲಿ ಅವಳ ಬಟ್ಟೆಗಳು ಬಂದು ಬೀಳಲಿವೆ.ಚಿಕ್ಕ ಕನ್ನಡಿ ಹೋಗಿ ಉದ್ದನೆಯ ಕನ್ನಡಿಯ ಪ್ರತಿಷ್ಠಾಪನೆಯಾಗಲಿದೆ.ಹೀಗೆ ಅದೆಷ್ಟು ಬದಲಾವಣೆಯಾಗಲಿವೆ ನನ್ನ ಬದುಕಿನಲ್ಲಿ,ಕೇವಲ ಮದುವೆ ಎಂಬ ಮೂರಕ್ಷರದಿಂದ.ನನ್ನೊಳಗಿನ ಬ್ಯಾಚುಲರ್ ಉಸಿರಾಡುವುದು ಇನ್ನು ಕೆಲವೇ ಕೆಲವು ಘಂಟೆಗಳು ಮಾತ್ರ.ಚಡಪಡಿಕೆ ಜಾಸ್ತಿಯಾಗುತ್ತಿದೆ.ಏನು ಮಾಡುವುದು ಎಂದು ತಿಳಿಯದೇ ಚಡಪಡಿಸುತ್ತಿದ್ದೇನೆ ಆಗಲೇ ನನ್ನ ಫೋನ್ ಒದರಲು ಆರಂಭಿಸಿತು.ತಕ್ಷಣ ಎದ್ದು ಫೋನ್ ಬಳಿಗೆ ನಡೆದೆ.ಯಾರ ಫೋನ್ ಇರಬಹುದು? ಅವಳದಾ?ಹೌದು ಇಷ್ಟೊತ್ತಿಗೆ ಬೇರೆ ಯಾರು ಮಾಡಲು ಸಾಧ್ಯ ಅವಳೆ.ಫೋನ್ ಕೈಯಲೆತ್ತಿ ಕೊಂಡು ನೋಡಿದರೆ.ಅವಳಲ್ಲ.ಅಬ್ಬಾ…ಅವಳಲ್ಲದಿದ್ದದ್ದೆ ಒಳ್ಳೆಯದಾಯ್ತು.ಅವಳಾಗಿದ್ದರೆ ಏನು ಮಾತನಾಡುವುದು.ಅವಳೊ ” ಮತ್ತೆ…? ಮತ್ತೆ ? ” ಎಂದು ಕೇಳುತ್ತಾ ಹೋಗುತ್ತಾಳೆ ಬಿಟ್ಟರೆ,ಏನನ್ನೂ ಮಾತನಾಡುವುದೇ ಇಲ್ಲ.ಆ ” ಮತ್ತೆ …ಮತ್ತೆ ” ಗಳಲ್ಲೆ ಬೆಳಗಾಗಿ ಹೋದರೆ.ಅಬ್ಬಾ ಅವಳಲ್ಲದಿದ್ದದ್ದೆ ಒಳ್ಳೆಯದಾಯ್ತು.ಅದು ರಾಜೇಶನ ಫೋನ್ ಎನ್ನುವ ಖುಷಿ.ಎತ್ತಿ ” ಹಲೊ..ಹೇಳು ಮಗ ” ಅನ್ನುವುದೇ ತಡ.” ಅಯ್ಯೊ ಮಗ ನಿನಗ್ ಬಂತಾ? ಆ ಸತ್ಯಂಗ್ ಮಾಡಣ ಅಂತ ಹೋಗಿ ಮಿಸ್ ಆಗಿ ನಿನ್ ನಂಬರಿಗ್ ಬಂದ್ ಬಿಡ್ತು…ಸರಿ ಮಗ ” ಇನ್ನೇನು ಆ ನನ್ ಮಗ ಕಾಲ್ ಕಟ್ ಮಾಡ್ಬೇಕು ಎನ್ನುವಷ್ಟರಲ್ಲಿ “ಏನೊ ಸಮಾಚಾರ?” ಎಂದೆ.”ಏನಿಲ್ಲ ಮಗ ಸತ್ಯನ್ ರೂಮಲ್ಲಿ ಇವತ್ತು ಪಾರ್ಟಿ…ನಮ್ ಪುಂಡಿದು ಬರ್ತಡೆ ಅಲ್ವಾ? ಸರಿ ಮಗ ನೀನ್ ಬಿಜಿ ಇದಿಯೆನೊ…ನಾಳೆ ಸಿಗ್ತೀವಿ ಬಾಯ್” ಕಾಲ್ ಕಟ್ ಆಯ್ತು. ಬಿಜಿ ಇದ್ದಿದ್ ಯಾರು ಅಂತ ಯೋಚಿಸುತ್ತಾ ಬಂದು ಮತ್ತೆ ಹಾಸಿಗೆಯ ಮೇಲೆ ಬಿದ್ದುಬಿಟ್ಟೆ.ಆಗಲೆ ನನ್ನ ಫ್ರೆಂಡ್ ಗಳು ನನ್ನನ್ನು ಕಡೆಗಣಿಸಲು ಶುರುಮಾಡಿದ್ದಾರೆ.ಮೊನ್ನೆ ಎಲ್ಲರೂ ಮಡಿಕೇರಿ ಟ್ರಿಪ್ ಹೋಗಿ ಬಂದ್ರೂ ನನಗೆ ಒಂದು ಮಾತನ್ನೂ ಹೇಳಿಲ್ಲ.ಕೇಳಿದರೆ ” ಮಗ ಮದ್ವೆ ಓಡಾಟದಲ್ಲಿ ಬಿಜಿ ಇರ್ತೀಯ ಅಂತ ಕೇಳಿಲ್ಲ” ಅಂದ ಒಬ್ಬ.ಕಳೆದ ಒಂದು ತಿಂಗ್ಳಿಂದ ವೀಕೆಂಡ್ ಸಿಟ್ಟಿಂಗ್ ಗೆ ನನಗೆ ಆಮಂತ್ರಣವಿಲ್ಲ.ಹೌದು ಫ್ರೆಂಡ್ಸ್ ಈಗಾಗಲೆ ನನ್ನನ್ನ ಸಂಸಾರ ಬಂಧನದಲ್ಲಿ ಸೆರೆಯಾದ ಖೈದಿಯ ಹಾಗೆ ನೋಡಲಾರಂಭಿಸಿದ್ದಾರೆ.ಇನ್ನು ನಾಳೆಯಿಂದ ಅವರು ನನ್ನನ್ನು ಮರೆತೆ ಬಿಡಲಿದ್ದಾರೆ. ನಮ್ಮ” ಬಂಡ ಬ್ಯಾಚುಲರ್ಸ್ ” ವಾಟ್ಸ್ ಯಾಪ್ ಗ್ರೂಪ್ ನಿಂದ ಅವರಾಗೆ ಹೊರ ಹಾಕುವ ಮುನ್ನ ನಾನೆ ಗ್ರೂಪನ್ನು ಬಿಟ್ಟು ಹೋಗುವುದು ಒಳ್ಳೆದು ಅನ್ಸತ್ತೆ.ಇನ್ನು ಮುಂದೆ ಫ್ರೆಂಡ್ಸು ನನ್ನ ಸಿನಿಮಾಗೆ ಕರಿಯಲ್ಲ,ಪಾರ್ಟಿಗೆ ಕರಿಯಲ್ಲ,ಲಾಂಗ್ ಡ್ರೈವು ,ನೈಟು ಅವಟು ಎಲದ್ರಿಂದ ನಾನು ಅವಟ್ಟು.ಈ ಎಲ್ಲದಕ್ಕೂ ಒಂದೆ ಕಾರಣ ನನ್ನ ಮದುವೆ.ಮದುವೆ ನನ್ನಿಂದ ಒಂದಷ್ಟು ಖುಷಿಯನ್ನು ಕಸಿದುಕೊಂಡು ಮತ್ತೊಂದಿಷ್ಟನ್ನು ಕೊಡುವ ಸುಂದರ ಪ್ರಕ್ರಿಯೆ.ಅದರಲ್ಲಿ ಎರಡು ಮಾತಿಲ್ಲ.ಮದುವೆ ಆದ ಎಲ್ಲರೂ ಮದುವೆಯ ನಂತರದ ಗೋಳನ್ನು ಹಂಚಿಕೊಳ್ಳುತ್ತಾರೆ ಬಿಟ್ಟರೆ ಮದುವೆಯ ನಂತರದ ಸುಖವನ್ನು ಹಂಚಿಕೊಳ್ಳುವುದೇ ಇಲ್ಲ.ಹಾಗಂತ ಮದುವೆಯ ತರುವಾಯದ ಜೀವನ ಸುಂದರವಾಗಿಲ್ಲವೆ?ಇದಿಯಪ್ಪಾ.ತುಂಬಾ ಸುಂದರವಾಗಿ.

ನಾಳೆಯಿಂದ ನನ್ನಲಾಗೊ ಬದಲಾವಣೆಗಳೇನು?ನಾಳೆ ನನ್ನ ತಲೆಯ ಮೇಲೆ ಬಂದು ಬೀಳುವುದು ಅಕ್ಕಿಕಾಳುಗಳಲ್ಲ, ಜವಬ್ದಾರಿಗಳು.ಎಲ್ಲಾದ್ರು ಹೊರ್ಟಾಗ ಹೆಲ್ಮೆಟ್ ತಗೊಂಡ್ ಹೋಗೋದಕ್ಕೂ ಅಮ್ಮಾನೆ ನೆನಪ್ ಮಾಡ್ಬೇಕು ನನಗೆ.ಇಂತಹ ನನಗೆ ಎಷ್ಟೆಲ್ಲಾ ಜವಬ್ದಾರಿಗಳನ್ನು ವಹಿಸಲು ಹೊರಟಿದೆಯಲ್ಲ ವಿಧಿ?ಒಳಗೊಳಗೆ ನಗೋದಕ್ಕ್ ಶುರು ಮಾಡ್ದೆ.ಆದ್ರೆ ನಗೋಕ್ ಆಗ್ಲಿಲ್ಲ.ಮೊದಲಿಂದಾನೂ ಹಾಗೆ ,ಮೋಸ್ಟಲಿ ಹೆಚ್ಚು ಹೆಚ್ಚು ಫಿಚ್ಚರ್ ನೋಡಿರೊ ಪರಿಣಾಮಾನೋ ಏನೊ.ಮದುವೆ ಅಂದ ಕೂಡ್ಲೆ ನನ್ ತಲೆಗೆ ಬರೋದು ಫಸ್ಟ್ ನೈಟು.ಹೌದು ಫಸ್ಟ್ ನೈಟು..ಅದೆಷ್ಟೊ ವರುಷಗಳಿಂದ ಕಾದ ದಿನ ಅದು.ಮನುಷ್ಯ ತನ್ನ ಜೀವನದಲ್ಲಿ ಎಂದಿಗೂ ಮರೆಯಲಾಗದ ಮತ್ತು ಮರೆಯಬಾರದ ದಿನ.ನಾಳೆ ನನ್ನ ಫಸ್ಟ್ ನೈಟು.”ಮದುವೆ” ಎನ್ನುವ ಪದದಲ್ಲಿ ಎಷ್ಟು ಘೋರತೆ ಇದೆಯೊ ಅಷ್ಟೆ ಖುಷಿ “ಫಸ್ಟ್ ನೈಟ್ “ಎನ್ನುವ ಇಂಗ್ಲೀಷ್ ಪದದಲ್ಲಿದೆ.ಕೈಗಳನ್ನು ನೋಡಿಕೊಂಡೆ ರೋಮಗಳು ಎದ್ದು ನಿಂತು ಡ್ಯಾನ್ಸ್ ಮಾಡುತ್ತಿದ್ದವು.ನನ್ನೊಳಗೆ ಏನೊ ಒಂದು ರೀತಿಯ ಕಂಪನ ಆರಂಭವಾಗಿದ್ದನ್ನು ಗಮನಿಸಿದೆ.ಮೆಲ್ಲಗೆ ನನ್ನ ಮನಸು ಫಸ್ಟ್ ನೈಟ್ ಬಗ್ಗೆ ಯೋಚಿಸಲಾರಂಭಿಸಿತು.

ಇಂದು ನನ್ನ ಒಂಟಿತನವ ಅನುಭವಿಸುತ್ತಿರುವ ಈ ನನ್ನ ರೂಮು ನಾಳೆ ನನ್ನ ಮಧುಚಂದ್ರದ ಉದ್ಘಾಟನೆಯ ವೇದಿಕೆ.ನಾನೆ ಉದ್ಘಾಟಕ ಅವಳೆ ಮುಖ್ಯ ಅತಿಥಿ.ತನ್ನ ಮೇಲೆ ಜೀವವಿಲ್ಲದ ಹೂವ ಬಿಡಿಸಿಕೊಂಡು ಹರಡಿಕೊಂಡಿರುವ ಬೆಡ್ ಶೀಟ್ ಮೇಲೆ ಜೀವಂತ ಹೂವುಗಳ ಪರಿಮಳ ಫರ್ ಪ್ಯೂಮ್ ಆಗಲಿದೆ.ನನ್ನ ಹ್ಯಾಶ್ ಟ್ರೆ ಜಾಗದಲ್ಲಿ ಹೂವು,ಹಣ್ಣು,ಸ್ವೀಟು,ಮತ್ತು ಪರಿಮಳಯುಕ್ತ ವಾಸು ಅಗರಬತ್ತಿಗಳು.ಹೌದು ವಾಸು ಇರ್ಲೇಬೇಕು.ಆಲದ ಮರದ ಬಳ್ಳಿಗಳಂತೆ ನೇತು ಹಾಕಲಾದ ಮಲ್ಲಿಗೆ ಮಾಲೆಗಳು.ಬಿಚ್ಚಿ ಬಿಚ್ಚಿ ಹೋಗುತ್ತಿರುವ ಬಿಳಿಯ ಪಂಚೆಯನ್ನು ಮತ್ತೆ ಮತ್ತೆ ಕಟ್ಟಿಕೊಂಡು ಚಡಪಡಿಸುತ್ತಿರುವ ನಾನು.ಆಹಾ…….ಆ ರೊಮ್ಯಾಂಟಿಕ್ ಮೂಡ್ ನಲ್ಲಿರುವಾಗ ರೂಮಿನ ಕ್ಷೀಣ ಬೆಳಕಿನ ನಡುವೆ ರೇಷಿಮೆ ಸೀರೆಯುಟ್ಟು ಕೈಯಲ್ಲಿ ಹಾಲಿನ ಗ್ಲಾಸು ಹಿಡಿದು ಬರುವ ಅವಳು.ಅಯ್ಯೊ ….ಅಯ್ಯೊ…..ಆಮೇಲೆ? ಆಮೇಲೆನು? ಅವಳು ಬಂದು ನನ್ನ ಪಕ್ಕ ಕೂರುತ್ತಾಳೆ.ನೆಲವನ್ನೇ ನೊಡುತ್ತಾ.ನನ್ನ ಮತ್ತು ಅವಳ ನಡುವೆ ಸ್ವಲ್ಪ ಗ್ಯಾಪು ಬಿಟ್ಟೆ ಕೂರುತ್ತಾಳೆ.ಆ ಗ್ಯಾಪನ್ನು ಭೇದಿಸಿ ನಾನು ಅವಳ ಬಳಿ ಬರಲಿ ಎನ್ನುವ ತುಂಟ ಉದ್ದೇಶ.ನಾಚಿಕೆಯಲ್ಲಿ ಒಮ್ಮೆ ನನ್ನ ಕಡೆ ನೋಡಿ ಸ್ಮೈಲ್ ಒಂದನ್ನು ಬೀರಿ ಮತ್ತೆ ಕೆಳಗೆ ನೋಡಲಾರಂಭಿಸುತ್ತಾಳೆ.ಹಾಂ…ಆಮೇಲೆ? ಹೌದು ಆಮೇಲೇನು?ಹೌದಲ್ವಾ ಆಮೇಲೆನು?ಯಾಕ್ಚುಲಿ ಫಸ್ಟ್ ನೈಟಲೇನಾಗತ್ತೆ ? ಹೇಗಾಗತ್ತೆ? ನಾವ್ ಏನ್ ಮಾಡ್ಬೇಕು?ನನಗ್ ಗೊತ್ತಿಲ್ವಾ? ಗೊತ್ತಪ್ಪಾ….ಎಷ್ಟ್ ಫಿಲಂ ನಲ್ಲಿ ನೋಡಿಲ್ಲ.ಫ್ರೆಂಡ್ಸೂ ಹೇಳಿದಾರೆ…ನನಗ್ ಗೊತ್ತು…ಆದ್ರು ಗೊತ್ತಿಲ್ಲ.ಎಕ್ಸಾಮ್ ಹೆಂಗಿರತ್ತೆ ಅಂತ ಗೊತ್ತಿದವ್ನಿಗೂ ಎಕ್ಸಾಮ್ ಬರಿಯೋವಾಗ ಟೆನ್ಷನ್ ನಲ್ಲಿ ಒದ್ದಾಡ್ಲೇಬೇಕು.ಸಿನಿಮಾದಲ್ಲಿ ತೋರ್ಸೊ ಫಸ್ಟ್ ನೈಟಲ್ ಏನಾಗತ್ತೆ? ಹೀರೊಯಿನ್ ಹಾಲಿನ್ ಲೋಟ ಹಿಡಕೊಂಡ್ ಬರ್ತಾಳೆ.ಹೀರೊ ಕಾಯ್ತಾ ಕೂತಿರ್ತಾನೆ.ಮಾತಾಡ್ತಾರೆ,ಆಮೇಲೆ ಲೈಟ್ ಆಫ್ ಆಗತ್ತೆ,ಅಥ್ವ ಒಂದ್ ಸಾಂಗ್ ಬರತ್ತೆ ಅಷ್ಟೆ.ಅಷ್ಟೆ.ಸಿನಿಮಾ ಸಿನಿಮಾನೆ .ಲೈಫು ಲೈಫೇ.ಅದು ರೀಲು ಇದು ರಿಯಲ್ಲು.

ಲವ್ ಮ್ಯಾರಿಯೇಜ್ ಆಗಿದ್ರೆ ಇಷ್ಟೆಲ್ಲಾ ಸಮಸ್ಯೇನೆ ಆಗ್ತಿರ್ಲಿಲ್ಲ ಅನ್ಸತ್ತೆ.ನಾನ್ ನನ್ನ ಮದುವೇ ಆಗೋಳ್ ಜೊತೆ ಹೆಚ್ಚಿಗೆ ಮಾತಾಡೆ ಇಲ್ಲ.ಫೋನ್ ನಲ್ಲಿ ಮಾತಾಡಿದ್ರು ಅದು ನಮ್ ನಮ್ ಕೆಲ್ಸದ್ ಬಗ್ಗೆ ಅವ್ರ್ ಫ್ಯಾಮಿಲಿ ಬಗ್ಗೆ ನಮ್ ಫ್ಯಾಮಿಲಿ ಬಗ್ಗೆ ಬಿಟ್ರೆ ಸಿನಿಮಾಗಳ್ ಬಗ್ಗೆ ಅಷ್ಟೆ.ಇಂಪಾರ್ಟೆಂಟಾಗಿ ಮಾತಾಡ್ಬೇಕಾಗಿದ್ದು ನಮ್ ಬಗ್ಗೆ , ನಮ್ ಮುಂದಿನ್ ಲೈಫ್ ಬಗ್ಗೆ ಆದ್ರೆ ಆ ಮಾತು ನಡೆದೆ ಇಲ್ಲ ನಮ್ಮ ನಡುವೆ.ಹೀಗಿರುವಾಗ ನಾಳೆ ಅವಳು ನನ್ನ ಪಕ್ಕ ಬಂದು ಕೂತಾಗ ನಾನು ಹೇಗೆ ಮಾತು ಆರಂಭಿಸಲಿ?ಹೇಗೆ ಅವಳ ಹತ್ತಿರ ಹೋಗಲಿ?ಅಲ್ಲ ಹತ್ತಿರ ಹೋಗ್ಲೇಬೇಕಾ?ಇಲ್ಲಪ್ಪ ಹೋಗ್ಲೇಬೇಕು.ಫಸ್ಟ್ ನೈಟ್ ಒಂದೆ ಸಲ ಬರೋದು.ಅವಳ ಬಳಿ ಸರಿಯಾಗಿ ಮಾತನಾಡದೆ ಇರುವ ನಾನು ಅವಳ ಅಂದವನ್ನು ಹೊಗಳುವುದು ಹೇಗೆ? ಮುಟ್ಟುವುದು ಹೇಗೆ ? ಮುದ್ದಿಸುವುದು ಹೇಗೆ?ಮೆಲ್ಲಗೆ ಅವಳ ಹತ್ತಿರ ಹೋಗಿ ” ನಿಮ್ಮ….” ನಿಮ್ಮ ಅನ್ಭೇಕೊ ಅಥ್ವ ” ನಿನ್ನ ” ಅನ್ಬೇಕೊ.ಅವ್ಳು ನನ್ ಹೆಂಡ್ತಿ ಅಲ್ವಾ?.” ನಿನ್ನ ” ಅಂತಾನೆ ಕರಿಯೋಣ ಅದಕ್ಕೇನು.”ಒಂದೆ ಏಟಿಗೆ ನಿನ್ನ ಸೀರೆ ತುಂಬಾ ಚೆನಾಗಿದೆ” ಎನ್ನಲೆ.ಆಗ ಅವಳು ” ಸೀರೆ ಚೆನಾಗಿದೆ ..ನಾನ್ ಚೆನಾಗಿಲ್ವಾ ?” ಅಂತ ತಪ್ಪ್ ತಿಳಿದುಕೊಂಡ್ ಬಿಟ್ರೆ?ಮೆಲ್ಲಗೆ ಹತ್ತಿರ ಹೋಗಿ ಅವಳ ಕೈಮೇಲೆ ನನ್ನ ಕೈಇಡಲೆ?” ಇವನಿಗೆಷ್ಟು ಆತುರನಪ್ಪಾ ?” ಎಂದು ತಪ್ಪು ತಿಳಿದುಕೊಂಡರೆ?ನಂತರ ನಿಧಾನವಾಗಿ ಅವಳ ಅಂದವನ್ನು ಹೊಗಳುತ್ತಾ ಸೆರಗಿಗೆ ಕೈ ಹಾಕಲೆ? ಚೆ ಚೆ….ನನ್ನ ಬಗ್ಗೆ ತಪ್ಪು ತಿಳಿದರೆ.?ಹೇಗೆ ಆರಂಭಿಸಲಿ?ಇಲ್ಲಾ…ತುಂಬಾ ಜವಬ್ದಾರಿಯುತ ಮನುಷ್ಯನ ಹಾಗೆ ” ನಾವು ಲೈಫಲ್ಲಿ ಒಂದ್ ಲೆವೆಲ್ಲಿಗೆ ಸೆಟಲ್ ಆಗೊ ವರ್ಗೂ ನಮ್ಗೆ ಮಕ್ಳುಮರಿ ಬೇಡ” ಎಂದು ಹೇಳಿ ಯಾಪಲನ್ನು ಅರ್ಧ ತಿಂದಿಟ್ಟು ಮಲಗಿ ಬಿಡಲೆ? ಚೆ ಆಗಂತೂ ಖಂಡಿತವಾಗಿಯೂ ತಪ್ಪು ತಿಳಿದಾಳು.” ಮಕ್ಕಳು ಬೇಕಿದ್ರೆ ನಿಧಾನಕ್ ಆಗ್ಲಿ ಫಸ್ಟ್ ನೈಟು…” ಎಂದು ಅವಳೆ ಅಂದು ಬಿಟ್ಟರೆ ? ಗಂಡು ಜಾತಿಗೆಷ್ಟು ಅವಮಾನ ಅಲ್ವೆ?ಚೆ ಏನ್ ಮಾಡ್ಬಾರ್ದು ಏನ್ ಮಾಡ್ಬೇಕು ಫಸ್ಟ್ ನೈಟಲ್ಲಿ ? ಮತ್ತೆ ಯೋಚಿಸಲಾರಂಭಿಸಿದೆ.ಮತ್ತೆ ಚಡಪಡಿಕೆ.ಮನಸಲ್ಲೆನೊ ಹೇಳಲಾಗದ ಭಾವನೆಗಳ ಕಲಹ.ಫ್ರೆಂಡ್ಸ್ ಯಾರಿಗಾದ್ರು ಸಲಹೆ ಕೇಳಲೆ? ಬೇಡ…ನನ್ ಫಸ್ಟ್ ನೈಟ್ ಗೆ ಇನ್ನೊಬ್ಬ ನಿರ್ದೇಶಕ ಯಾಕೆ? ನನಗ್ ಗೊತ್ತಿಲ್ವಾ ಏನ್ ಮಾಡ್ವೇಕು ಅಂತ .ಗೊತ್ತಾ? ಇಲ್ಲ ಗೊತ್ತಿಲ್ಲ..ಆದ್ರು ಅವ್ರನೆಲ್ಲ್ಲಾ ಕೇಳಿದ್ರೆ ನಾನೆ ನಗೆಪಾಟಲಿಗೆ ಗುರಿಯಾಗೊ ಸಾಧ್ಯತೆ ಇದೆ.ಬೇಡ…ಈ ಟಾಪಿಕ್ಕೆ ಬೇಡ.ಏನೊ ಓದದೆ ಸೀದ ಹೋಗಿ ಅದೆಷ್ಟು ಎಕ್ಸಾಮ್ ಪಾಸ್ ಮಾಡಿಲ್ವಾ ? ಇದು ಹಂಗೆ.ಆದ್ರು ಈಗ ಕಾಡ್ತಾ ಇರೊ ಈ ದರಿದ್ರ ನಿದ್ರಾಹೀನತೆಗೇನು ಪರಿಹಾರ.ನಾಳೆ ಕೋಳಿಗಳು ಕೂಗೋದೆ ಅದು ನನ್ನನ್ನ ಬೇಗ ಎಬ್ಸೋಕೆ.ಮಲಗ್ಬೇಕು.ಮಲಗ್ಬೇಕು….ಆದ್ರೆ ನಿದ್ರೆ ಬರ್ತಾ ಇಲ್ವೆ? ಹೇಳಿದ್ನಲ್ಲಾ ಮಲ್ಗೋದೇ ಬೇರೆ ನಿದ್ದೇನೆ ಬೇರೆ ಅಂತ.ನಿದ್ದೆ ಬರೊವರ್ಗು ಯಾರಿಗಾದ್ರೂ ಕಾಲ್ ಮಾಡಿ ಮಾತಾಡ್ಲಾ? ಯಾರಿಗ್ ಮಾಡ್ಲಿ?ಹಾಂ ಫ್ರೆಂಡ್ಸು…ಡಬ್ಬಾ ನನ್ ಮಕ್ಳು ಟೈಟಾಗಿರ್ತಾರೆ.ನಾಳೆ ನನ್ ಮದ್ವೇ ಅನ್ನೋದನ್ನೆ ಮರ್ತು ಮಗ ಸ್ವಲ್ಪ ಎಣ್ಣೆ ಕಮ್ಮಿ ಆಗಿದೆ ತಂದ್ ಕೊಡ್ತಿಯಾ ಅಂತ ಕೇಳಿದ್ರೂ ಕೇಳ್ಬಹುದು.ಬೇಡ…..ಮತ್ತ್ ಯಾರಿಗ್ ಮಾಡ್ಲಿ? ಉಂ…..ಹಾಂ ಅವ್ಳಿಗ್ ಕಾಲ್ ಮಾಡಿದ್ರೆ ಹೇಗೆ?ಚೆ ಮಲಗಿರ್ಬೋದು.ಅದು ಅಲ್ದೆ ಇಷ್ಟೊತ್ತಲ್ಲಿ …ಉಹುಂ ಬೇಡ.ಸರಿ ಆಗಲ್ಲ.ತಕ್ಷಣ ಮಗ್ಗಲು ಬದಲಿಸಿದೆ.ಮತ್ತೆ ಯೋಚನೆ ,ಅಲ್ಲಾ ನಾಳೆ ಏನ್ ಮಾಡ್ಬೇಕು ಅಂತ ಯೋಚನೆ ಮಾಡ್ತಾ ಇರೊ ನನಗೆ ನಿದ್ದೆ ಬರ್ತಿಲ್ಲ….ಇನ್ನು ನಾಳೆ ಏನ್ ಮಾಡ್ ಬಿಡ್ತಾನಪ್ಪಾ?ಅಂತ ಯೋಚನೆ ಮಾಡ್ತಾ ಇರೊ ಅವ್ಳಿಗೆ….ಉಹುಂ ನಿದ್ದೆ ಬಂದಿರೋಕ್ ಸಾಧ್ಯಾನೆ ಇಲ್ಲ.ನನಗೆ ಹೇಳದೆ ಕೇಳದೆ ಅವಳ ನಂಬರ್ ಗೆ ಡಯಲ್ ಮಾಡಿದ್ದವು ಬೆರಳುಗಳು.” ಹಲೊ” ಅಬ್ಬಾ ಅದೆಷ್ಟು ಮಧುರ ದ್ವನಿ ಅವಳದು.” ಹಾಯ್ “ಏನು ಇಷ್ಟೊತ್ತಲ್ಲಿ ಕಾಲ್ ಮಾಡಿದ್ದು? ನಿದ್ದೆ ಬಂದಿಲ್ವಾ?” ಅವಳು ನನಗೆ ಕೇಳಿದ ಪ್ರಶ್ನೆಯಲ್ಲೆ ಅವಳಿಗೂ ನಿದ್ದೆ ಬಂದಿಲ್ಲ ಎನ್ನುವುದು ಖಚಿತವಾಗಿತ್ತು.” ನೀವ್ ಯಾಕ್ ಇನ್ನು ಮಲ್ಗಿಲ್ಲ?” ಅವಳ ಪ್ರಶ್ನೆಗೆ ನನಗೆ ಉತ್ತರ ಗೊತ್ತಿರಲಿಲ್ಲ.ಹಾಗಾಗಿ ಆ ಪ್ರಶ್ನೆಯನ್ನು ಬಿಟ್ಟು ಮುಂದಿನ ಪ್ರಶ್ನೆಗೆ ಹೋದೆ.ಹೀಗೆ ಮಾತು ಮುಂದುವರಿಯುತ್ತಾ ಹೋದಂತೆ ನಾನು ಮುಂದುವರಿಯುತ್ತಾ ಹೋದೆ.ಅವಳ ಮಾತಿನಲ್ಲೆ ಮುಳುಗಿದ ನಾನು,ಹೊರ ಬರುವುದರೊಳಗೆ,ನಾಳೆ ಏನ್ ಮಾಡ್ಬೇಕು? ಏನ್ ಮಾಡ್ಬಾರ್ದು ಅಂತ ಗೊತ್ತಾಗಿತ್ತು.ಈವತ್ತೆ ಇಷ್ಟ್ ರೊಮ್ಯಾಂಟಿಕ್ ಆಗಿದ್ಮೇಲೆ ಇನ್ನು ನಾಳೆ?ಮುಗುಳ್ನಗುತ್ತಲೆ ಕಾಲ್ ಕಟ್ ಮಾಡಿ,ಮುಚ್ಕೊಂಡು ಮಲಕ್ಕೊಂಡೆ.

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..