3159

ಕೆಂಪು ಗುಲಾಬಿ: ಒಂದು ಹೂ, ಮೂರು ಕಥೆಗಳು

  • By Arun Kumar PT
  • Tuesday, September 4th, 2018
  • Things You Should Know

ಲೋಕೋಭಿನ್ನ‌ ರುಚಿ.

ಐದು ಬೆರಳುಗಳು ಹೇಗೆ ಒಂದೇ ಸಮನೆ ಇರುವುದಿಲ್ಲವೋ ಹಾಗೇ ಒಂದೇ ತಾಯಿಯ ಮಕ್ಕಳಾದರೂ ಪಾಂಡವರು ಐದೂ ಜನ ಒಂದೊಂದು ರೀತಿ ಇರುವುದನ್ನು ಕಾಣಬಹುದು. ಒಬ್ಬ ಪೊಲೀಸ್, ಒಬ್ಬ ಲಾಯರ್ ಮತ್ತು ಒಬ್ಬ ಕಳ್ಳನಿಗೆ ತಲಾ ಒಂದು ಲಕ್ಷ ಕೊಟ್ಟರೆ ಅವರು ಅದನ್ನು ಬಳಸುವ / ಉಳಿಸುವ ಮಾರ್ಗ ಬೇರೆಯಾಗಿರುತ್ತದೆ, ಅದರಲ್ಲೇನು ಡೌಟ್ ಬೇಡ. ಇಂತಿಪ್ಪ ಸಂದರ್ಭದಲ್ಲಿ ಕನ್ನಡದ ನನ್ನ ಮೆಚ್ಚಿನ ನಿರ್ದೇಶಕರಾದ ಯೋಗರಾಜ್ ಭಟ್, ಸೂರಿ ಮತ್ತು ಉಪೇಂದ್ರ ಸೃಷ್ಟಿ ಮಾಡಿರುವ ಈ ಪ್ರಖ್ಯಾತ ಪಾತ್ರಗಳ ಕಥೆಯನ್ನು ಒಂದು ಗುಲಾಬಿ ಹೂವಿನ ಮೂಲಕ ಪ್ರಸ್ತುತ ಪಡಿಸುವ ಒಂದು ಹೊಸ ಬಗೆಯ ಪ್ರಯತ್ನ ಈ ಅಂಕಣ. ಓದಿ, ಮುಂದೆ ನಿಮಗೇ ಎಲ್ಲಾ ಅರ್ಥ ಆಗುತ್ತೆ.

ಪ್ರೀತಮ್ (ಮುಂಗಾರು ಮಳೆ)

ನಂದಿನಿ ಪ್ರೀತಮ್ ನನ್ನು ಬಿಟ್ಟು ಅರೇಂಜ್ ಮ್ಯಾರೇಜ್ ಆದ ನಂತರ ಪ್ರೀತಮ್ ಅಕ್ಷರಶಃ ಏಕಾಂಗಿಯಾಗಿ ಹೋಗಿದ್ದ. ವಾಪಸ್ ಬೆಂಗಳೂರಿಗೆ ಬಂದು ತನ್ನ ಸಹಜ ಜೀವನಕ್ಕೆ ಮರಳಲು ಇನ್ನಿಲ್ಲದಷ್ಟು ಪ್ರಯತ್ನ ಪಟ್ಟರೂ ಅವಳ ಬಗ್ಗೆ ಏನೋ ಒಂದು ನೆನಪಾಗಿ ಏನು ಮಾಡುತ್ತಿದ್ದೆ ಎಂಬುದು ಮರೆತು ಹೋಗುತ್ತಿತ್ತು. ಫಾರಿನ್ ಟೂರ್ ಹೋಗಿ ಬಂದರೂ, ರೂಮ್ ಲಾಕ್ ಮಾಡಿಕೊಂಡು ಒಬ್ಬನೇ ಕೂತರೂ, ಅಪ್ಪನ ವಿಸ್ಕಿ ಬಾಟಲ್ ಗಳನ್ನು ಬ್ಯಾಕ್ ಟು ಬ್ಯಾಕ್ ಖಾಲಿ ಮಾಡಿದರೂ ಈ ಬ್ರೇಕಪ್ ಇಂದ move on ಆಗಲು ಪ್ರೀತಮ್ ಗೆ ಸಾಧ್ಯವಾಗಲಿಲ್ಲ. ಒಂದು ದಿನ ಬೆಳಿಗ್ಗೆ ಪಬ್ ನಲ್ಲಿ ಕುಡಿದು ಬಂದು‌ ಕಾರ್ ಸ್ಟಾರ್ಟ್ ಮಾಡಲು ಕೂಡ ಸಾಧ್ಯವಾಗದೇ ಸುಸ್ತಾಗಿ ಅಲ್ಲೇ ಮಲಗಿ ಬಿಡುತ್ತಾನೆ. ಎಚ್ಚರವಾದಾಗ ತನ್ನ ಬದುಕು ಟ್ರ್ಯಾಕ್ ತಪ್ಪುತ್ತಿದೆ ಎಂದು ಅರಿವಾಗಿ ಅಪ್ಪನ ಬ್ಯುಸಿನೆಸ್ ಕಡೆ ಗಮನ ಹರಿಸುವುದೇ ಸರಿ ಎಂದು ನಿರ್ಧರಿಸಿ ಆಫೀಸ್ ಗೆ ಹೋಗಿ ಕುಳಿತುಕೊಳ್ಳುತ್ತಾನೆ.

10 ವರ್ಷಗಳ ನಂತರ, ಒಂದು ಕಂಪನಿ ನೆಡೆಸಲು ಬೇಕಾಗುವ educational qualification ಇರುವ ಯಾವುದೇ post graduation holder ಗಿಂತಲೂ ಉತ್ತಮ qualified manager ಆಗಿರುತ್ತಾನೆ ಪ್ರೀತಮ್. ಆತ ಒಂದು ದಿನ ಆಫೀಸ್ ಗೆ ಹೋಗದಿದ್ದರೆ ಆ ದಿನದ ಸಂಪೂರ್ಣ ಕೆಲಸ ಏರುಪೇರಾಗುವ ಮಟ್ಟಕ್ಕೆ ಪ್ರೀತಮ್ irreplaceable ಆಗಿರುತ್ತಾನೆ.

ಹೀಗಿರುವಾಗ ಪ್ರೀತಮ್ ಒಂದು ದಿನ ಪ್ರೀತಮ್ ತನ್ನ ಆಫೀಸ್ ಮುಗಿಸಿಕೊಂಡು ಮನೆಗೆ ಹೋಗಲು ಪಾರ್ಕಿಂಗ್ ಲಾಟ್ ಗೆ ಬರುತ್ತಾನೆ. ಇನ್ನೇನೂ door unlock ಮಾಡಿ ಬಾಗಿಲು ತೆಗೆಯುವಷ್ಟರಲ್ಲಿ‌ ನೆಲದ ಮೇಲೆ ಕೆಂಪು ಗುಲಾಬಿ ಒಂದು ಬಿದ್ದಿರುತ್ತದೆ. ಆ ಹೂವನ್ನು ಕೈಗೆತ್ತಿಕೊಂಡು ಸುತ್ತಲೂ ನೋಡುತ್ತಾನೆ, ಅಲ್ಲಿ ಎಲ್ಲೂ ಯಾರೂ ಕಾಣುವುದಿಲ್ಲ. ಸರಿ ಅಂತ ಡ್ಯಾಶ್ ಬೋರ್ಡ್ ಮೇಲೆ ಇದ್ದ ಗಣೇಶ ಮೂರ್ತಿ ಎದುರು ಗುಲಾಬಿ ಇಟ್ಟು ಮನೆಗೆ ಹೊರಡುತ್ತಾನೆ. ಅಲ್ಲೇ ಪಕ್ಕದ ಪಿಲ್ಲರ್ ಹಿಂದೆ ಬಚ್ಚಿಟ್ಟುಕೊಂಡಿದ್ದ ಹುಡುಗಿಯೊಬ್ಬಳು ಪ್ರೀತಮ್ ಹೋಗುವುದನ್ನೇ ನೋಡುತ್ತಾ ಮುಗುಳುನಗುತ್ತಾಳೆ. ಮತ್ತು ಈ ರೀತಿಯಾಗಿ ಪ್ರೀತಮ್ ನ ಜೀವನದ ಇನ್ನೊಂದು ಅಧ್ಯಾಯ ಶುರುವಾಗುತ್ತದೆ.

ಕಡ್ಡಿಪುಡಿ (ಕಡ್ಡಿಪುಡಿ)

ಆನಂದ ಅಲಿಯಾಸ್ ಕಡ್ಡಿಪುಡಿ ಉಮಾಳನ್ನು ಎಲೆಕ್ಷನ್ ನಿಲ್ಲಿಸಿ ಗೆದ್ದಾಯ್ತು. ರೌಡಿಸಂ ಇಂದ ನಿವೃತ್ತರಾದ ತನ್ನಂಥವರಿಗೆ ಬದುಕಲು ಏನೋ ಒಂದು ‘ಅಧಿಕಾರ’ ಬೇಕು ಅಂತ ಆ ಪೊಲೀಸ್ ಅಧಿಕಾರಿ ಹೇಳಿದ್ದ ಮಾತು ಕಡ್ಡಿಪುಡಿಗೆ ನಿಧಾನವಾಗಿ ಅರ್ಥವಾಗಿತ್ತು. ಮತ್ತೊಂದು ಎಲೆಕ್ಷನ್ ಬರುವ ಹೊತ್ತಿಗೆ ಉಮಾ ಮತ್ತು ಕಡ್ಡಿಪುಡಿ ಬೇರೆಯಾಗಿದ್ದರು. ಮಾಜಿ ರೌಡಿ ತನ್ನ ಪತಿ ಎಂಬ ವಿಷಯ ತನ್ನ ರಾಜಕೀಯ ವರ್ಚಸ್ಸಿಗೆ ಮುಳುವಾಗುತ್ತದೆ ಎಂದು ಯೋಚಿಸಿ ಉಮಾ ಕಡ್ಡಿಪುಡಿಯನ್ನು ಬಿಟ್ಟು ಹೋಗಿದ್ದಳು. ಕಡ್ಡಿಪುಡಿ ತನ್ನ ಗೆಳೆಯ ‘ಗಾಳಿ’ಯ ಹೆಸರು ಚಿರವಾಗಿರಬೇಕೆಂದು ಯೋಚಿಸಿ ಅವನ ಹೆಸರಲ್ಲಿ ರಿಯಲ್ ಎಸ್ಟೇಟ್ ವ್ಯಾಪಾರ ಶುರು ಮಾಡುತ್ತಾನೆ.

ಒಂದು ಸಲ ಸ್ವಾತಂತ್ರ್ಯ ದಿನಾಚರಣೆಯ ದಿನ ಸನ್ನಡತೆಯ ಮೇಲೆ ಐದು ಜನ ಖೈದಿಗಳನ್ನು ಬಿಡುಗಡೆ ಮಾಡುವ ಕಾರ್ಯಕ್ರಮಕ್ಕೆ ಕಡ್ಡಿಪುಡಿಯನ್ನು ಮುಖ್ಯ ಅತಿಥಿಗಳಲ್ಲಿ ಒಬ್ಬರನ್ನಾಗಿ ಬಳ್ಳಾರಿ ಜೈಲಿಗೆ ಕರೆಸಿರುತ್ತಾರೆ. ಉಳಿದ ಖೈದಿಗಳ ಮನಃ ಪರಿವರ್ತನೆ ಮಾಡುವ ಸಲುವಾಗಿ ಕಡ್ಡಿಪುಡಿಗೆ ಮಾತನಾಡಲು ಅನುವು ಮಾಡಿಕೊಡುತ್ತಾರೆ. ಜೈಲರ್ ಸಾಹೇಬರು ವಂದನಾರ್ಪಣೆ ಭಾಷಣ ಮುಗಿಸಿದ ಬಳಿಕ ಅವರ ಆರು ವರ್ಷದ ಮಗಳು ಬಂದು ಎಲ್ಲಾ ಮುಖ್ಯ ಅತಿಥಿಗಳಿಗೆ ಕೆಂಪು ಗುಲಾಬಿ ಕೊಡುತ್ತಾಳೆ. ಕಾರ್ಯಕ್ರಮ ಮುಗಿಸಿ ಹೋಗೋಣ ಎನ್ನಿವ ಹೊತ್ತಿಗೆ ಗುಲಾಬಿ ಹೂವು ತನಗೆ ಕೊಡು ಅಂತ ಜಿಂಕೆ ತುಂಬಾ ಪೀಡಿಸುತ್ತಾನೆ. ಕಡ್ಡಿಪುಡಿ ಹೂ ಕೊಟ್ಟ ನಂತರ ಡ್ರೈವರ್ ರಾಜಪ್ಪ, ಜಿಂಕೆ ಕಾರ್ ಕಡೆ ಹೋಗುತ್ತಾರೆ. ಈ ಕಡೆ ಸಂಡೂರಿನ ಎಸಿಪಿ ಸತ್ಯಮೂರ್ತಿ ಅವರ ಜೊತೆ ಮಾತನಾಡುತ್ತಾ ನಿಂತಾಗ ಜೈಲಿನ ಹೊರಗೆ ಶೂಟ್ ಔಟ್ ಆಗಿ ಆರು ಜನ ಖೈದಿಗಳು ಎಸ್ಕೇಪ್ ಆಗುತ್ತಾರೆ. ಎಲ್ಲಾ ಮುಗಿದು ಹೊರ ಬಂದಾಗ ಜಿಂಕೆ ಕಾರ್ ಪಕ್ಕ ಸತ್ತು ಬಿದ್ದಿರುತ್ತಾನೆ. ಎಸಿಪಿ ಸತ್ಯಮೂರ್ತಿ ಕಡೆಯಿಂದ ಇದು ಕಡ್ಡಿಪುಡಿಯನ್ನು ಟಾರ್ಗೆಟ್ ಮಾಡಿದ್ದ ಹೊಸ ಹುಡುಗರು ಮಾಡಿರುವ ಶೂಟೌಟ್ ಎಂದು ಗೊತ್ತಾಗುತ್ತದೆ. ಕಡ್ಡಿಪುಡಿ ಜಿಂಕೆಯ ಎದೆಗೊರಗಿ ಅಳುತ್ತಾನೆ. ಜಿಂಕೆಯ ಜೇಬಿನಲ್ಲಿದ್ದ ಗುಲಾಬಿಯಿಂದ ರಕ್ತ ಜಿನುಗುತ್ತಿರುತ್ತದೆ. ಎಲ್ಲಾ ಮುಗಿದಿತ್ರು ಎಂದುಕೊಂಡಿದ್ದ ಕಡ್ಡಿಪುಡಿ ಬದುಕಿನ ಇನ್ನೊಂದು ಅಧ್ಯಾಯ ಶುರುವಾಗುತ್ತದೆ. ಹಿನ್ನಲೆಯಲ್ಲಿ ಕಡ್ಡಿಪುಡಿ BGM ಶುರುವಾಗುತ್ತದೆ.

ಸೂರ್ಯ (ಎ)

ಚಾಂದಿನಿ ಸಾವಿನ ನಂತರ ನಿರ್ದೇಶಕ ಸೂರ್ಯ ಸುಮಾರು ರಿಯಲಿಸ್ಟಿಕ್ ಕಲ್ಟ್ ಫಿಲಂ ಗಳನ್ನು ಮಾಡಿ ತನ್ನದೇ ಆದ ಒಂದು ಬೃಹತ್ ಪ್ರೇಕ್ಷಕ ವರ್ಗವನ್ನು ಹುಟ್ಟು ಹಾಕಿ ಗೆಲ್ಲುತ್ತಾನೆ. ನಿರ್ಮಾಪಕರು‌ ಮೊದಲು ಡೈರೆಕ್ಟರ್ ಸೂರ್ಯ ಹತ್ತಿರ ಅಡ್ವಾನ್ಸ್ ಕೊಟ್ಟು, ಡೇಟ್ಸ್ ಖಾತರಿ ಮಾಡಿಕೊಂಡು ಆಮೇಲೆ ಹೀರೋಗಳ ಕಾಲ್ ಶೀಟ್ ಕೇಳಲು ಹೋಗುವ ಮಟ್ಟಿಗೆ ಸೂರ್ಯ ಬೆಳೆದು‌ ನಿಂತಿರುತ್ತಾನೆ. ಇದೆಲ್ಲಾ ಮುಗಿದು 15 ವರ್ಷಗಳ ನಂತರ ನಿರ್ದೇಶಕ ಸೂರ್ಯ, still unmarried! ಈಗ 2 – 3 ವರ್ಷಗಳಿಂದ ಹೊಸ ನಿರ್ದೇಶಕರ ಜ಼ಮಾನ ಶುರುವಾಗಿ ಸೂರ್ಯ ಸಿನಿಮಾಗಳು ಇರುವ ಥಿಯೇಟರ್ ಮುಂದೆ ‘ಚಿತ್ರಮಂದಿರ ತುಂಬಿದೆ’ ಬೋರ್ಡು‌ ಬಿದ್ದಿರುವುದಿಲ್ಲ. ಇದೂ ಒಂದು ಲೆಕ್ಕದಲ್ಲಿ ಒಳ್ಳೆಯದೇ ಆಯಿತು ಎಂದೆಣಿಸಿ ಒಂದು ಬ್ರೇಕ್ ಇರಲಿ ಎಂದು ಸೂರ್ಯ ಫಿಜಿಗೆ ಹೋಗುತ್ತಾನೆ. ಫಿಜಿಯ ತಂಪಾದ ಬೀಚ್ ನಲ್ಲಿ ಮುಸ್ಸಂಜೆ ವಿಸ್ಕಿ ಹೀರುತ್ತಾ sunset ನೋಟವನ್ನು ಆನಂದಿಸುತ್ತಾ ಕುಳಿತಾಗ ‘I love you, Surya. I still love you’ ಎಂಬ ಚಾಂದಿನಿ ಧ್ವನಿ‌ ಮನದಲ್ಲಿ ಗಿರಕಿ ಹೊಡೆಯುತ್ತಿರುತ್ತದೆ. ವಿಸ್ಕಿ ಒಂದೊಂದು ಪೆಗ್ ಖಾಲಿ ಆದಂತೆ ಚಾಂದಿನಿ ಮಾತು, ನೋಟ, ನಗು, ಆಪ್ತ ಕ್ಷಣಗಳು ಲೂಪ್ ನಲ್ಲಿ ಪ್ಲೇ ಆಗುತ್ತಿರುತ್ತದೆ. ಇದೆಲ್ಲಾ ಭ್ರಮೆ ಅನಿಸಿದರೂ ಚಾಂದಿನಿ ಇನ್ನೂ ಕನಸಲ್ಲ, ವಾಸ್ತವ ಎಂದು ಸೂರ್ಯ sure ಆಗಿ ನಂಬುತ್ತಾನೆ. ಯಾಕೋ ಕುಡಿದದ್ದು ಜಾಸ್ತಿಯಾಯಿತು ಎಂದು ಸೂರ್ಯ ರೂಮ್ ಗೆ ಹೋಗಲು ಅಣಿಯಾಗುತ್ತಾನೆ. ಬಾರ್ಟೆಂಡರ್ ಚಾರ್ಲಿ ಸೂರ್ಯನನ್ನು ಕರೆದು ರೋಸ್ ಕೊಟ್ಟು “ಒಂದು ಹುಡುಗಿ ಹೂವು ಕೊಟ್ಟು ಹೋದರು, ಬೀಚ್ ಆ ಬದಿಯಲ್ಲಿ ನಿಮಗೋಸ್ಕರ ಕಾಯುತ್ತಾ ಇದ್ದಾರೆ” ಎಂದು ಹೇಳುತ್ತಾನೆ. ಸೂರ್ಯ ಆ ಗುಲಾಬಿಯನ್ನು ಅಲ್ಲೇ ಪಕ್ಕದ ಡಸಗಟ್ ಬಿನ್ ಗೆ ಎಸೆದು ರೂಮ್ ಗೆ ಹೋಗುತ್ತಾನೆ. ಎಷ್ಟೋ ಹೊತ್ತು ಮಲಗಲು ಪ್ರಯತ್ನಿಸಿದರೂ ನಿದ್ದೆ ಮಾತ್ರ ಹತ್ತಿರ‌ ಸುಳಿಯಲಿಲ್ಲ. ಚಾಂದಿನಿ ದೂರವಾಗಿ ಇಷ್ಟು ದಿನಗಳಾದರೂ ಈ‌ ದಿನದಷ್ಟು ಗಾಢವಾಗಿ ಎಂದೂ ಕಾಡಿರಲಿಲ್ಲ ಎನ್ನಬಹುದು. ಸರಿ ಅದು ಯಾವು ಹುಡುಗಿ ನೋಡೇ ಬಿಡೋಣ ಅಂತ ಸೂರ್ಯ ಮತ್ತೆ ಬೀಚ್ ಹತ್ತಿರ ಬಂದಾಗ ಅಲ್ಲಿ ಚಾಂದಿನಿ ಕೆಂಪು ಡ್ರೆಸ್ ನಲ್ಲಿ ಅದೇ ಗುಲಾಬಿ ಮುಡಿದು ಸೂರ್ಯನಿಗಾಗಿ ಕಾಯುತ್ತಾ ನಿಂತಿರುತ್ತಾಳೆ. ಸೂರ್ಯನಿಗೆ ಚಾಂದಿನಿ ಹೌದೋ, ಅಲ್ಲವೋ‌ ಅಂತ ಒಂದೆರಡು ಸಲ ಡೌಟ್ ಬಂದರೂ ಹತ್ತಿರ ಬಂದಾಗ ಇವಳು ಚಾಂದಿನಿಯೇ ಎಂದು ಖಾತರಿಯಾಗುತ್ತದೆ. ಓಡಿ ಬಂದು ಒಬ್ಬರು‌ ಇನ್ನೊಬ್ಬರನ್ನು ಬಿಗಿದಪ್ಪಿಕೊಳ್ಳುತ್ತಾರೆ. ಲೋಕದ ಪರಿವೆಯ ಮರೆತು ಒಬ್ಬರ ಕಣ್ಣಲ್ಲಿ ಇನ್ನೊಬ್ಬರನ್ನು ನೋಡುವ ಟೈಮಿಗೆ ಸುಮ್ ಸುಮ್ನೆ ನಗ್ತಾಳೆ ಹಾಡು ಶುರುವಾಗುತ್ತದೆ. ನಿರ್ದೇಶಕ ಸೂರ್ಯ‌ ಬದುಕಲ್ಲಿ ಮುಗಿದೇ ಹೋಗಿದ್ದ ಅಧ್ಯಾಯ ಮತ್ತೆ ಮುಂದುವರೆದಿರುತ್ತದೆ. And so the story continues.

ಪ್ರಾಯಶಃ ಉಳಿದವರು ಕಂಡಂತೆ ಸಿನಿಮಾ ನೀವು ನೋಡಿರಬಹುದು. ಒಂದು ಘಟನೆಯನ್ನು ನೋಡಿರುವ ವ್ಯಕ್ತಿಗಳು ತಮ್ಮದೇ ದೃಷ್ಟಿಕೋನದಲ್ಲಿ ಕಥೆ ವಿವರಿಸುವ ಬಗೆ ಕನ್ನಡದ ಮಟ್ಟಿಗೆ ಹೊಸದಾದರೂ ಇಂತಹ ಸುಮಾರು ಸಿನಿಮಾಗಳು ಇಂಗ್ಲೀಷ್ ನಲ್ಲಿ ಈಗಾಗಲೇ ಬಂದು ಹೋಗಿವೆ. ಅದೇ ರೀತಿ ಒಂದು ಗುಲಾಬಿ ಹೂವನ್ನು ಕೇಂದ್ರಬಿಂದುವಾಗಿ ಇರಿಸಿಕೊಂಡು ನಮ್ ಕಾಲದ ಅಪ್ರತಿಮ ನಿರ್ದೇಶಕರಾದ ಯೋಗರಾಜ್ ಭಟ್, ಸೂರಿ ಮತ್ತು ಉಪೇಂದ್ರ ಕಥೆ ಹೇಳಿದರೆ ಯಾವ ರೀತಿ‌‌ ಇರಬಹುದು ಎಂಬ ಕಾಲ್ಪನಿಕ ರಚನೆ ಈ ಅಂಕಣ. ಇಷ್ಟು ಓದಿದ ಮೇಲೆ, ಅಂಕಣ ಹೇಗಿದೆ ಅಂತ ಸ್ವಲ್ಪ ಹಂಗೇ ಕಾಮೆಂಟ್ ಮಾಡ್ತೀರಾ? ಇಲ್ಲಾ, ಅದನ್ನೂ ನಾವೇ ಊಹಿಸಿಕೊಳ್ಳಬೇಕಾ?!? 😜😜😜

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..