- By Guest Writer
- Tuesday, December 20th, 2016
-ಅವಳ ಕಥೆ
ಅವಳು ಕೃಷ್ಣ ಸುಂದರಿ.ಉಷ್ಣ ಸುಂದರಿ ಒಟ್ಟಾರೆ ಸುಂದರಿಯವಳು.ದೂರದಿಂದ ನೋಡಲು.ಹತ್ತಿರದಿಂದ?ಏನೊಪ ನಾನವಳ ಹತ್ತಿರ ಹೋಗಿಲ್ಲ.ಹೋದವರೆಲ್ಲಾ ಅವಳ ಸೌಂದರ್ಯ ನೋಡಿ ಹೋದರೆ? ಉಹುಂ ಸುತಾರಾಂ ಅಲ್ಲ.ಅವಳಿಗೂ ಒಬ್ಬನೇ ಗಂಡನಿದ್ದ.ಅವನು ಗಂಡನಾಗೇ ಇದ್ದ,ಅವಳ ಮಕ್ಕಳಿಗೆ ಅಪ್ಪನಾಗಲೇ ಇಲ್ಲ.ಅವರಿಬ್ಬರಿಗ್ಯಾಕೆ ಮಕ್ಕಳಾಗಲಿಲ್ಲ.ಫ್ಯಾಮಿಲಿ ಪ್ಲಾನಿಂಗ್ ಏನಾದ್ರು ನಡೆದಿತ್ತೇ?ಫ್ಯಾಮಿಲಿಯೇ ಇಲ್ಲ ಇನ್ನೆಲಿಯ ಪ್ಲಾನಿಂಗು?ಅವನಿಗೆ ಎಲ್ಲರೂ ಡಿಂಗ ಎನ್ನುತಿದ್ದೆವು,ಹಿಂದಿನಿಂದ.ಯಾರು “ಬಾಲಮಂಗಳ”ದ ಡಿಂಗನೇ?ಗೊತ್ತಿಲ್ಲ.ಅದ್ಯಾಕೆ “ಡಿಂಗ”ಎಂದು ಹೆಸರು ಬಂತು?ಗೊತ್ತಿಲ್ಲ.ಆ ಹೆಸರಿಟ್ಟ ಪುಣ್ಯಾತ್ಮನೇ ಅದನ್ನು ಹೇಳಬೇಕು.ಅವನನ್ನು ಡಿಂಗ ತುಂಬಾ ಹುಡುಕಿದ್ದಾನೆ ಆದರೆ ಸಿಕ್ಕಿಲ್ಲ ಅವನು.ಡಿಂಗ ಯಾವಾಗಲೂ ಅರಾಮಾವಾಗಿರುತ್ತಿದ್ದ.ಮಕ್ಕಳು ಗೋಲಿಯಾಡುವಾಗ,ಬುಗುರಿ,ಚಿನ್ನಿದಾಂಡು,ಮರಕೋತಿ ಮತ್ತೊಂದು ಆಡುವಾಗಲೆಲ್ಲಾ ಕಾಯಂ ಪ್ರೇಕ್ಷಕನಾತ.ಕೈಯಲ್ಲೊಂದು ಬೀಡಿ ಹಿಡಿದು ಇನ್ನೊಂದು ಕೈಯಲ್ಲಿ ಆಗಾಗ ಕೆರೆದ ಕಡೆಯೆಲ್ಲಾ ಕೆರೆದುಕೊಳ್ಳುತ್ತಾ ಕೂತು ಬಿಡುತ್ತಿದ್ದ.ವಿಪರೀತವಾಗಿ ಕುಡಿಯುತ್ತಿದ್ದ.ಕುಡಿಯುವ ಸಲುವಾಗಿಯೇ ಆಗಾಗ ಕೆಲಸವೂ ಮಾಡುತಿದ್ದ,ಬಹುಷಃ….ಬಹುಷಃ.ನಾನಂತೂ ನೋಡಿಲ್ಲ ಅವನು ಕೆಲಸ ಮಾಡುವುದನ್ನು.ಆದರೆ ಕುಡಿಯುವುದನ್ನು ನೋಡಿದ್ದೇನೆ.ಅವನು ಹಗಲು ಕೆಲಸ ಮಾಡುತ್ತಿದ್ದನೊ ಏನೊ ಗೊತ್ತಿಲ್ಲ ಆದರೆ ರಾತ್ರಿಯಂತೂ ಯಾವ ಕೆಲಸವೂ ಮಾಡಲಾಗಲಿಲ್ಲ ಎಂಬುದು ಸತ್ಯ.ಊರಿಗೇ ತಿಳಿದ ಸತ್ಯ.
ಒಂದು ದಿನ ಡಿಂಗ ಖಾಯಿಲೆ ಬಿದ್ದ.ಇನ್ನೊಂದು ದಿನ ಸತ್ತೆ ಹೋದ.ಡಿಂಗನ ಕಥೆ ಎರಡೇ ದಿನದಲ್ಲೇ ಮುಗಿದು ಹೋಯಿತು.ಇಷ್ಟು ದಿನಗಳ ಕಾಲ ರಸಿಕರಿಗೆ ತೆರೆದಿದ್ದ ಅವಳ ಮನೆಯ ಹಿಂದಿನ ಬಾಗಿಲು ಮುಚ್ಚಿತು.ಮುಂದಿನ ಬಾಗಿಲು ತೆರೆದುಕೊಂಡಿತು.ಬೀಡಿ ಸೇದುತ್ತಾ ಅವಳ ಬಗ್ಗೆ ವ್ಯಂಗ್ಯ ಮಾಡುತ್ತಿದ್ದವರೆಲ್ಲಾ ಅವಳ ರಾತ್ರಿಯ ಅತಿಥಿಯಾದರು.ಇದೇನು ಊರಿಗೆ ತಿಳಿಯದೇ ಹೋಯಿತೇ?ಇಲ್ಲ.ಎಲ್ಲರಿಗೂ ತಿಳಿದಿತ್ತು.ಹೆಂಗಸರಿಗಂತೂ ತುಂಬಾ ಡೀಟೇಲ್ ಆಗೆ ತಿಳಿದಿತ್ತು,ಅವಳ ಬಗ್ಗೆ.ಆದರೆ ಯಾರಾದರೂ ಅವಳನ್ನು “ಸೂಳೆ” ಎಂದು ಕರೆದರೆ?ಇಲ್ಲ.ಯಾಕೆ?ಅವಳನ್ನು ಸೂಳೆ ಎಂದು ಕರೆದರೆ, ತಮ್ಮ ತಮ್ಮ ಗಂಡಂದಿರು ಸೂಳೆಯ ಸಹವಾಸ ಮಾಡುತಿದ್ದಾರೆ ಎಂದಾಗುವುದಿಲ್ಲವೇ?ಕರೆಕ್ಟ್.ಹೆಂಡತಿ ತನ್ನ ಪಾತಿವ್ರತ್ಯವನ್ನು ಬಿಟ್ಟುಕೊಟ್ಟರೂ ಗಂಡನನ್ನು ಬಿಟ್ಟುಕೊಡುವುದಿಲ್ಲ.ಬಿಟ್ಟುಕೊಡಬಾರದು ನೋಡಿ.ಅವಳ ಗಂಡ,ಅದೇ ಡಿಂಗ ಸತ್ತಾಗ ತುಂಬಾ ಅತ್ತಳು.ತುಂಬಾ ಅಂದರೆ ತುಂಬಾ,ವಿಪರೀತವಾಗಿ ಅತ್ತಳು.”ನನ್ನನ್ನು ಬಿಟ್ಟು ಹೋದ್ರಲ್ಲಾ?ನನ್ನೊಬ್ಳನ್ನೇ ಬಿಟ್ಟು ಹೋದ್ರಲಾ?ನಾನೊಂಟಿ ಆದ್ನಲ್ಲಾ?ಅಯ್ಯಯ್ಯೊ…..ಇನ್ನು ನಂಗ್ಯಾರಿದ್ದಾರೆ? ನಾನೇನ್ ಮಾಡ್ಲಿ,? ನಾನೊಂಟಿ ಆಗ್ ಹೋದ್ನೆ?ಅಯ್ಯಯ್ಯೊ…ದೇವ್ರೆ.ನಾನೊಬ್ಳೆ ಏನ್ ಮಾಡ್ಲಿ?ಅಯ್ಯಯ್ಯೊ….”ಇದನ್ನೆಲ್ಲಾ ಅವಳು ಡಿಂಗನಿಗೆ ಹೇಳುತ್ತಿದ್ದಳೇ?ಇಲ್ಲ,ಖಂಡಿತ ಇಲ್ಲ.ಒಂದೊಂದು ಬಾರಿ ಅವಳು ನಾನೊಂಟಿ, ನಾನೊಂಟಿ ಎಂದಾಗಲೆಲ್ಲಾ ನೆರೆದಿದ್ದ ಒಬ್ಬೊಬ್ಬ ರಸಿಕನ ಕಿವಿಯೂ ನೆಟ್ಟಗಾಗುತಿತ್ತು.ಅವರ ಪಾಲಿಗೆ ಅದು ಅವಳ ಅಳುವಲ್ಲ.ಆಹ್ವಾನ ಆಹ್ವಾನ.
ಫಸ್ಟ್ ಕಮ್ ಫಸ್ಟ್ ಸರ್ವ್.ಯಾರ್ಯಾರು ಹೋದರೋ ,ಯಾರ್ಯಾರು ವಾಪಾಸ್ಸು ಬಂದರೋ? ಎಲ್ಲಾ ಪ್ರಶ್ನಾರ್ಥಕ.ಅವಳ ಅಕ್ಕ ಪಕ್ಕದ ಮನೆಯ ಹೆಂಗಸರು ತಮ್ಮ ಗಂಡಂದಿರನ್ನು ಸೆರಗಿನಲ್ಲಿ ಕಟ್ಟಿಕೊಂಡು ಮಲಗಲು ಆರಂಭಿಸಿದರು.ಒಂದಿಷ್ಟು ದಿನ ಹೀಗೆ ನಡೆಯಿತು.ನಂತರ ಏನಾಯಿತು?ಅವರೆಲ್ಲಾ ತಮ್ಮ ಗಂಡಂದಿರನ್ನು ಬಿಟ್ಟುಕೊಟ್ಟರೆ?ಇಲ್ಲ ಬಿಟ್ಟುಕೊಡಲಿಲ್ಲ.ಬಿಟ್ಟುಕೊಡುವವರೂ ಅಲ್ಲ.ಅವರೆಲ್ಲಾ ನೈಟಿ ಹಾಕಲು ಆರಂಭಿಸಿದರು ಅಷ್ಟೆ.ಅವಳ ಮನೆ ಇದ್ದದ್ದೆ ಮರೆಯಲ್ಲಿ.ಹಂಚಿನ ಮನೆಯದು.ಹಂಚಿದ ಮನೆಯದು.ಅವಳ ಮನೆ ಚಿಕ್ಕದಿರಬಹುದು(ನಾನು ನೋಡಿಲ್ಲ).ಆದರೆ ಮನಸ್ಸು ದೊಡ್ದದಂತೆ(ಕೇಳಿದ್ದು).ಅವಳಿಗೆ ಗಂಡನಿಲ್ಲ ಆದರೂ ಅವಳು ವಿಧವೆಯಲ್ಲ.ಅವಳಿಗೆ ಮಕ್ಕಳಿಲ್ಲ ಆದರೂ ಅವಳು ಬಂಜೆಯಲ್ಲ.”ಮಕ್ಕಳನ್ನು ಹಡೆಯದವಳಲ್ಲ ಬಂಜೆ.ಮಕ್ಕಳನ್ನು ಪ್ರೀತಿಸದವಳು ಬಂಜೆ” ಹೇಳಿಲ್ಲವೇ ನಮ್ಮ ಗುರುಪ್ರಸಾದ್ ರವರು “ಮಠ” ಚಿತ್ರದಲ್ಲಿ.
ಡಿಂಗ ಗಂಡಸಲ್ಲ.ಅಲ್ಲ ಅಲ್ಲ.ಅವನಿಗೆ ಗಂಡಸ್ತನವಿರಲಿಲ್ಲ.ಅಲ್ಲ ಅಲ್ಲ.ಅವನಿಗೆ ಏನೊ ಒಂದು ಸಮಸ್ಯೆಯಿದ್ದಿತ್ತು ಎನ್ನುವುದು ಎಲ್ಲರಿಗೂ ತಿಳಿದ ದಿನವದು.ಸ್ವರ್ಗದಲ್ಲಿ ಬೀಡಿ ಸೇದುತ್ತಾ ಓಡಾಡುತಿದ್ದ ಡಿಂಗನ ಕಿವಿಗೆ ಬಿತ್ತು ಒಂದು ಅನೌನ್ಸ್ ಮೆಂಟ್.ಯಾರೊ ಬಂದು ಅನೌನ್ಸ್ ಮಾಡಿಬಿಟ್ಟರು.”ಅವಳು ಬಸುರಿಯಂತೆ…ಯಾರಿಗೂ ಹೇಳ್ಬೇಡಿ ಅವಳು ಬಸುರಿಯಂತೆ”.ಡಿಂಗನಿಗೆ ಸಿಕ್ಕ ಮರಣೋತ್ತರ ಪ್ರಶಸ್ತಿಯದು.ತುಂಬಾ ಮೊದಲೇ ಬರಬೇಕಿತ್ತು ಆ ಪ್ರಶಸ್ತಿ.ಡಿಂಗನಿಗಾಗದವರು ಯಾರು,ಎಲ್ಲಿ,ಹೇಗೆ,ತಡೆ ಹಿಡಿದಿದ್ದರೋ ಏನೊ ಆ ಪ್ರಶಸ್ತಿ ಬರುವುದನ್ನು.ಅನೌನ್ಸ್ ಮೆಂಟ್ ಕೇಳುತ್ತಲೇ ಕೈಯಲ್ಲಿದ್ದ ಬೀಡಿಯ ಎಸೆದುಬಿಟ್ಟ ಡಿಂಗ.ಮತ್ತೆ ಕೇಳಿಬಂತು ಅನೌನ್ಸ್ ಮೆಂಟ್ ” ಅವಳು ಬಸುರಿಯಂತೆ…ಯಾರಿಗೂ ಹೇಳ್ಬೇಡಿ” ಎಂದು.ಡಿಂಗನ ಕಣ್ಣಲ್ಲಿ ನೀರು ಜಿನುಗಿದ್ದು ಅವನಿಗೇ ತಿಳಿಯಲಿಲ್ಲ.”ಹೌದೇ ನನ್ನವಳು ಕಡೆಗೂ ತಾಯಿಯಾಗುವಳೇ?”ಡಿಂಗನ ಖುಷಿಯ ಕಟ್ಟೆ ಒಡೆಯಿತು.ಸೀದ ಹೋಗಿದ್ದು ಯಮನ ಎದುರು ಲೀವ್ ಅಪ್ಲೈ ಮಾಡಲು.”ಸ್ವಾಮಿ ಕೇಳಿದಿರಾ? ನನ್ನವಳು ಬಸುರಿಯಂತೆ.ಕಡೆಗೂ ಅವಳು ತಾಯಿಯಾಗಲಿದ್ದಾಳೆ.ಸ್ವಾಮಿ ಒಂದು ದಿನದ ಮಟ್ಟಿಗೆ ಭೂಲೋಕಕ್ಕೆ ಹೋಗಿ ಬರಲೇ?ಅವಳನ್ನು ಕಂಡು ಬರಲೇ?ಪ್ಲೀಸ್…”ಯಮ ಗಹಗಹಿಸಿ ನಗಲಾರಂಭಿಸಿದ.”ಎಲ್ಲಾ ಭೂಪ ನೀನಿಲ್ಲಿಗೆ ಬಂದು ಸಾಕಷ್ಟು ತಿಂಗಳುಗಳೇ ಆಯಿತು.ಈಗ ನಿನ್ನ ಹೆಂಡತಿ ಬಸುರಾದರೆ ಖುಷಿ ಪಡುತ್ತಿದ್ದೀಯಲ್ಲಾ?ಬುದ್ದಿ ಇದೆಯಾ ನಿನಗೆ?” ಸ್ವಾಮಿ ನನ್ನನ್ನು ಹೋಗಲು ಬಿಡಿ ಪ್ಲೀಸ್.”ಒಂದೇ ದಿನದಲ್ಲಿ ವಾಪಾಸ್ಸು ಬರುತ್ತೇನೆ ಖಂಡಿತ”.”ಎಲಾ ಮೂಢ ಅದು ನಿನ್ನ ಮಗುವಲ್ಲ” ಯಮ ಕಿರುಚಾಡಿ ಕಣ್ಣನ್ನು ಕೆಳಗೆ ಹಾಯಿಸಿದರೆ ಡಿ೦ಗ ಅವನ ಕಾಲು ಹಿಡಿದಿದ್ದ.”ಸ್ವಾಮಿ ಒಂದೇ ದಿನ”.ಯಮ ಚಿತ್ರಗುಪ್ತನನ್ನು ಹತ್ತಿರ ಕರೆದು ಮೆಲ್ಲಗೆ ಕೇಳಿದ.”ಚಿತ್ರಗುಪ್ತರೇ ಏನಿದು?”ಚಿತ್ರಗುಪ್ತ ನಿಧಾನವಾಗಿ ಹೇಳಿದ ” ಸ್ವಾಮಿ ಇದನ್ನೇ ಭೂಲೋಕದಲ್ಲಿ “ನಂಬಿಕೆ” ಎನ್ನುವುದು” ಕೊನೆಗೂ ಯಮನ ಸನ್ಮತಿ ದೊರೆಯಿತು.ಡಿ೦ಗ ಹೊರಟ,ಬರಿಗೈಯಲ್ಲಿ.
ಡಿ೦ಗ ಭೂಲೋಕದಲ್ಲಿರುವ ತನ್ನ ಊರಿಗೆ ಬಂದು ನಿಂತಿದ್ದಾನೆ.ಜನರೆಲ್ಲಾ ಒಂದೆಡೆ ಸೇರಿದ್ದಾರೆ.ಊರ ಹಿರಿಯರು(ವಯಸ್ಸಿನಲ್ಲಿ) ಬಿಳಿ ಬಟ್ಟೆ ತೊಟ್ಟು ಕುಳಿತ್ತಿದ್ದಾರೆ.ಅವಳು ಸಂಪೂರ್ಣವಾಗಿ ಸೆರಗು ಮುಚ್ಚಿಕೊಂಡು ನೆಲವನ್ನೇ ನೋಡುತ್ತಾ ನಿಂತಿದ್ದಾಳೆ.ಗಂಡಸರ ಕಣ್ಣುಗಳೆಲ್ಲಾ ಅವಳ ಮೇಲಿವೆ.ಹೆಂಗಸರ ಕಣ್ಣುಗಳೆಲ್ಲಾ ಗಂಡಸರ ಮೇಲಿವೆ.ಡಿಂಗನ ಹೆಜ್ಜೆಗಳು ಮುಂದೆ ಹೋಗಲು ಒಪ್ಪಲಿಲ್ಲ.ಅಲ್ಲೇ ನಿಂತ.ಪಂಚಾಯಿತಿ ಮುಂದುವರಿಯಿತು.ಊರ ಹಿರಿಯರೊಬ್ಬರು ಆರಂಭಿಸಿದರು.”ಹೇಳಮ್ಮಾ ಯಾರು ಈ ಕೆಲಸ ಮಾಡಿರೋದು?ನೀನೇನು ಹೆದರಬೇಡ ನಾನೀದೀನಿ.ಥೊ ನಾವಿದೀವಿ ಹೇಳು ಯಾರು ಅಂತ”ಅವಳು ಮುಲಾಜೇ ಇಲ್ಲದೇ ಬೆರಳೆತ್ತಿ ತೋರಿಸಿ ಬಿಟ್ಟಳು.ಯಾರನ್ನು?ಇನ್ನೊಬ್ಬನನ್ನು.ಊರಿನ ಪಂಚಾಯಿತಿ ಧಂಗಾಯಿತು.ಡಿಂಗ ವಾಪಾಸ್ಸು ಬಂದು ಯಮನ ಎದುರಿಗೆ ನಿಂತ.”ಸ್ವಾಮಿ ಭೂಲೋಕದಲ್ಲಿ ಸತ್ತರೆ ಇಲ್ಲಿಗೆ ಬರುತ್ತೇವೆ.ಇಲ್ಲಿ ಸತ್ತರೆ ಇನ್ನೆಲ್ಲಿಗೆ?.”ಇನ್ನೊಂದು ಜನ್ಮ ಸಿಗುವುದು ಮತ್ತೆ ಭೂಲೋಕಕ್ಕೆ ಹೋಗುತ್ತೀಯ”ಯಮ ನುಡಿದ.ಡಿಂಗ ಚಿತ್ರಗುಪ್ತನನ್ನು ಕರೆದು ಕೇಳಿದ “ಸ್ವಾಮಿ ನನಗೆ ನರಕದ ದಾರಿ ತೋರಿಸಿ”.ಯಮ ಚಿತ್ರಗುಪ್ತನತ್ತ ನೋಡಿದ.”ಆ..ಸ್ಟ್ರೈಟ್..ಡೆಡ್ ಎಂಡ್ ಲೆಫ್ಟ್”ಚಿತ್ರಗುಪ್ತ ನರಕದ ದಾರಿ ತೋರಿಸಿ ಮುಗಿಸುವ ಮುಂಚೆಯೇ ಡಿಂಗನ ಬೆನ್ನು ಕಾಣಿಸಿತು.”ಚಿತ್ರಗುಪ್ತರೆ …ಏನಿದು?”ಯಮ ಚಿತ್ರಗುಪ್ತರಲ್ಲಿ ಕೇಳಿದ.”ಸೃಷ್ಟಿಯ ದುಷ್ಟತನ ಸ್ವಾಮಿ”.”ಇದರಲ್ಲಿ ನಮ್ಮದೇನಾದರೂ ತಪ್ಪಿದೆಯಾ ಚಿತ್ರಗುಪ್ತರೇ?”.”ಇದೆ ಸ್ವಾಮಿ.ಈ ಮ್ಯಾಟ್ರ್ ಸಾಯಂಕಾಲ ಕುಳಿತು ಮಾತಾಡೊಣವೇ?”.”ಸೀರಿಯಸ್ ವಿಚಾರಗಳಿಗೆ ಸಾಯಂಕಾಲವೇ ಸೂಕ್ತ.ಆಗಲಿ ಚಿತ್ರಗುಪ್ತರೆ.”ಚಿತ್ರಗುಪ್ತ ಅಲ್ಲಿಂದ ಹೊರಟು ಹೋದ.ಯಮ ಅವನನ್ನೇ ನೋಡುತ್ತಾ ನಿಂತ.
ಇತ್ತ ಪಂಚಾಯಿತಿ ಮುಗಿಯಿತು.ಇನ್ನೊಬ್ಬನ ಕಥೆ ಆರಂಭವಾಯಿತು.ಜನರೆಲ್ಲಾ ಆಡಿಕೊಂಡದ್ದು ಮಾತ್ರ “ಇವನ ಕಥೆ ಮುಗಿಯಿತು” ಎಂದೇ.ಅವಳು ಅವನಾನ್ಯಾಕೇ ತೋರಿಸಿದಳು?ಅವನು ನಿಜವಾಗಿಯೂ ಅವಳ ಮಗುವಿನ ಅಪ್ಪನೆ?ಇರಬಹುದು.ಆದರೆ ಅವನಲ್ಲ ಎನ್ನುವುದು ಊರ ಮಾತು.ಆದರೆ ಇಲ್ಲಿ ಅವಳ ಮಾತೆ ಫೈನಲ್. ಅವಳೇ ಆಟಗಾರ್ತಿ ಅವಳೇ ಅಂಪಾಯರ್.ಇಲ್ಲಿ ಅಂಪಾಯರ್ ತೀರ್ಮಾನವೇ ಅಂತಿಮ ತೀರ್ಮಾನ .ಯಾವುದೇ ಚರ್ಚೆಗೆ ಅವಕಾಶವಿಲ್ಲ.”ಇನ್ನೊಬ್ಬ”ನಿಗೆ ಸುಂದರವಾದ ಹೆಂಡತಿಯಿದ್ದಾಳೆ.ಎರಡು ಮಕ್ಕಳಿವೆ.ಅವನಿಗ್ಯಾಕೆ ಈ ತೆವಲು? ಹೆಂಡತಿ ಅವಳಿಗಿಂತ ಸುಂದರವಾಗಿಯೇ ಇದ್ದಾಳೆ.ಅವಳು ಸೀರೆಯನ್ನು ಉಡುತ್ತಾಳೆ.ಮತ್ಯಾಕೆ ಅವನಿಗೆ ಅವಳ ಮನೆಯ ಬಾಗಿಲು ತಟ್ಟುವ ಅವಶ್ಯಕತೆ ಇದೆ?ಅವಳ ರಾತ್ರಿಯ ಅತಿಥಿಗಳ ಸಂಭಾವ್ಯರ ಪಟ್ಟಿಯಲ್ಲಿ ಇವನ ಹೆಸರಿರಬಹುದು ಆದರೆ ಆ ಪಟ್ಟಿಯಲ್ಲಿ ಕಂಗೊಳಿಸುತ್ತಿರುವ ಒಂದಷ್ಟು ಹೆಸರುಗಳಿವೆ. ಇದನ್ನೆಲ್ಲಾ ಪಂಚಾಯಿತಿ ವಿಚಾರಿಸಿತೇ ?ಉಹುಂ ಇಲ್ಲ.ಹೇಳಲಿಲ್ಲವೇ ಅಲ್ಲಿ ಅವಳ ತೀರ್ಮಾನವೇ ಮುಖ್ಯವಾಗಿತ್ತು.ಅಂಪಾಯರ್ ತೀರ್ಮಾನವೇ ಅಂತಿಮ.ಯಾವುದೇ ಚರ್ಚೆಗೆ ಅವಕಾಶವಿರಲಿಲ್ಲ.ನಂತರ ಅವಳಿಗೆ ಬೇಕಾದವರ ಸಹಾಯದಿಂದ ಅಪ್ಪನಿಲ್ಲದ ಆ ಮಗುವನ್ನು ಅಬಾರ್ಷನ್ ಮಾಡಿಸಿ ತೆಗೆಸಿಕೊಂಡು ಬರಲಾಯಿತು.ಆದರೆ ಅದನ್ಯಾರೂ ಅನೌನ್ಸ್ ಮಾಡಲೇ ಇಲ್ಲ.ಮಗು ಅಳುವ ಸದ್ದು ಯಾರಿಗೆ ಕೇಳಲೂ ಇಲ್ಲ.ತಾಯಿಯೊಬ್ಬಳನ್ನು ಬಿಟ್ಟು.
ವಿಷಯ ತಿಳಿದ ನರಕದಲ್ಲಿದ್ದ ಡಿಂಗ ತಕ್ಷಣ ಸ್ವರ್ಗಕ್ಕೆ ಭೇಟಿ ಕೊಟ್ಟ.”ಸ್ವಾಮಿ ನನ್ನ ಮಗು ಇಲ್ಲಿಗೆ ಬಂದು ತಲುಪಿತೇ?”
“ಬಂದಿತ್ತು ಆದರೆ ನಾನದನ್ನು ಕೊಂದು ಮತ್ತೆ ಭೂಲೋಕಕ್ಕೆ ಕಳುಹಿಸಿದ್ದೇನೆ.ಅದು ಮತ್ತೆ ಹುಟ್ಟುವುದು ಸಕ್ರಮವಾಗಿ.ಈ ಬಾರಿ ತನ್ನ ಅಪ್ಪನ್ಯಾರು ಎಂದು ತಿಳಿದಿರುವುದು ಅದಕ್ಕೆ.ಯೋಚಿಸಬೇಡ ಸಂತೋಷವಾಗಿರುವುದು ಆ ನಿನ್ನ ಕಂದ.”ಡಿಂಗನ ಮುಖದಲ್ಲಿ ಖುಷಿ ಕಾಣಿಸಿತು.”ಸ್ವಾಮಿ ನನ್ನ ಲಗೇಜು ತರಲೇ?””ಚಿತ್ರಗುಪ್ತರೇ…..ಡಿಂಗನಿಗೆ ಸ್ವರ್ಗಕ್ಕೆ ವಾಪಾಸ್ಸು ಬರಲು ವ್ಯವಸ್ಥೆ ಮಾಡಿ”ಯಮ ಡಿಂಗನನ್ನು ಕಂಡು ಮುಗುಳುನಗು ಬೀರಿದ.
ಯಮಧರ್ಮ ಮತ್ತು ಚಿತ್ರಗುಪ್ತ ಸಾಯಂಕಾಲ ಕುಳಿತ್ತಿದ್ದಾರೆ.ನೆಲದ ಮೇಲೆ ಐದು ಬೀಯರ್,ಎರಡು ವಿಸ್ಕಿ,ಒಂದು ಸೋಡಾ ಬಾಟಲ್ ಗಳು ಬಿದ್ದು ಹೊರಳಾಡುತ್ತಿವೆ.ಸೈಡ್ಸ್ ಗಾಗಿ ನರಕದಿಂದ ಒಂದಿಷ್ಟು ಕೋಳಿ ಕುರಿ ಮಾಂಸವನ್ನು ತರಿಸಿಕೊಳ್ಳಲಾಗಿದೆ.
ಚಿತ್ರಗುಪ್ತ: ಸ್ವಾಮಿ…ನಿಮಗೇನಾದ್ರೂ ಆ ಮಗುವಿನ ನಿಜವಾದ ತಂದೆ ಯಾರೆಂದು ತಿಳಿಯಿತೇ?
ಯಮ:ಇಲ್ಲ ಯಾವನೋ ಒಬ್ಬ ಬಿಡಪ್ಪ.ಆ ಕಬಾಬ್ ಈ ಕಡೆ ಕೊಡು.
ಚಿತ್ರಗುಪ್ತ:ಹಾಂ ಸ್ವಾಮಿ ಅವಳು ಬೇಕಂತಲೇ ಸುಳ್ಳು ಹೇಳಿರಬಹುದು…ಅಥವಾ ಕತ್ತಲಲ್ಲಿ ಅವಳಿಗೆ ಯಾರೆಂದು ಗೊತ್ತಾಗಲಿಲ್ಲವೇ?ಹ ಹ ಹ …
ಯಮ:ಹ ಹ ಹ ಹ….. ಆ ಮಗುವಿನ ತಂದೆ ಯಾರು ಅನ್ನೋದನ್ನು ತೊರಸ್ತೀವಿ ಚಿಕ್ಕದೊಂದು ಬ್ರೇಕ್ ನ ನಂತರ.
(ಇಬ್ಬರೂ ಗಹಗಹಿಸಿ ನಗುತ್ತಿರುವರು.ಮೆಲ್ಲಗೆ ಅಲ್ಲಿಗೆ ಡಿಂಗ ಬಂದು ನಿಲ್ಲುವನು)
ಡಿಂಗ:ಸ್ವಾಮಿ ಏನಿದು?ನನ್ನ ಜೀವನ ನಿಮಗೆ ವ್ಯಂಗ್ಯವೇ?
ಚಿತ್ರಗುಪ್ತ: ಬಾ ಡಿಂಗ ಪ್ರಪಂಚದಲ್ಲಿ ಒಬ್ಬರಿಗೆ ಯಾವಾಗಲೂ ಇನ್ನೊಬ್ಬರ ಜೀವನ ವ್ಯಂಗ್ಯವಾಗಿಯೇ ಕಾಣುತ್ತದೇ.ಕುಡಿದಾಗ ನಮ್ಮ ನಮ್ಮ ಜೀವನವೇ ನಮಗೆ ವ್ಯಂಗ್ಯವಾಗಿ ಕಾಣುತ್ತದೆ. ಬಾ ಕುಡಿ ಬಾ…