3256

ಪ್ರೇಮ ಗೀಮ ಜಾನೇ ದೋ

ಮೆಜೆಸ್ಟಿಕ್ ಗೆ ಬಂದು ಇಳಿದಾಗ ಶನಿವಾರ ಬೆಳಿಗ್ಗೆ 6 ಗಂಟೆ. ರೂಮ್ ಗೆ ಹೋಗಿ ಎರಡು ತಾಸು ಮಲಗಿ ಎದ್ದು ರೆಡಿ ಆಗಿ ಸ್ಟೇಷನ್ ಗೆ ಹೋದೆ. ಸಾಹೇಬರು ಆಗಲೇ ಬಂದಿದ್ದರು. ಅವರಿಗೆ ಅಲ್ಲೇ ವೀರಶೈವ ಖಾನಾವಳಿ ಇಂದ ತಿಂಡಿ ಪಾರ್ಸಲ್ ತಂದು‌ ಕೊಟ್ಟೆ. ಆಮೇಲೆ ಪಾಸ್ ಪೋರ್ಟ್ ವರಿಫಿಕೇಷನ್ ಕೆಲಸದ ನಿಮಿತ್ತ ಫೈಲ್ ತಗೊಂಡು ಹೊರಟೆ. ನನ್ನ ಜೊತೆ ಕಾನ್ ಸ್ಟೇಬಲ್ ಕಾವ್ಯ ಅವರು ಕೂಡ ಬಂದಿದ್ದರು. ನಾವಿಬ್ಬರೂ ಆ ಸ್ಕೂಟಿಯಲ್ಲಿ ಕುಳಿತು 4-5 ಜನರ ಪಾಸ್ ಪೋರ್ಟ್ ಅರ್ಜಿದಾರರ ಫೈಲ್ ಕ್ಲೀಯರ್ ಮಾಡಿದ ಮೇಲೆ ವಾಪಸ್ ಸ್ಟೇಷನ್ ಗೆ ಹೋಗಿ ಫೈಲ್ ಕೊಡೋಣ ಎಂದು ಯೋಚಿಸಿದೆವು. ಆದರೆ ಅದಕ್ಕೂ ಮುಂಚೆ ಅಯ್ಯಂಗಾರ್ ಬೇಕರಿ ಕಾಣಿಸಿತು. ಅವರು ವೆಜ್ ಪಫ್ ತಗೊಂಡರು, ನಾನು ಒಂದು ಮಜ್ಜಿಗೆ ಪ್ಯಾಕೆಟ್ ತಗೊಂಡೆ. ಶಿವಾ ಅಂತ ಕುಡಿದು ಮುಗಿಸುವ ಹೊತ್ತಿಗೆ ಸಾಹೇಬರು ಫೋನ್ ಬಂತು.

ನಾನು: “ಹ್ಞೂಂ ಸಾ, ಹ್ಞೂಂ ಸಾ, ಬರ್ತಾ ಇದ್ದೀವಿ ಸಾ, ಇಲ್ಲೇ 23ನೇ ಕ್ರಾಸ್ ಅಲ್ಲಿ ಇದ್ದೀವಿ ಸಾ”

ನಾನು‌ ಮಾತನಾಡುತ್ತಾ ಇದ್ದಿದ್ದು ಇನ್ಸ್ಪೆಕ್ಟರ್ ಸಾಹೇಬರ ಜೊತೆ ಅಂತ ಕಾವ್ಯ ಅವರಿಗೆ ಗೊತ್ತಾಯಿತು.

ನಾನು: “ಆಯ್ತು ಸಾ, ನಾವು ಇಲ್ಲೇ ಪಕ್ಕ ಇದ್ದೀವಿ, ನಾವು ಹೋಗಿರ್ತೀವಿ, ನೀವು ಬನ್ನಿ ಸಾರ್”.

ಕಾವ್ಯ ಅವರ ಮುಖದಲ್ಲಿ ಕುತೂಹಲ ಮನೆ ಮಾಡಿತು.”ಏನಾಯಿತು, ಏನು ವಿಷಯ?” ಅಂತ ಕೇಳಿದರು.

ನಾನು: “ಬನ್ನಿ, ಬನ್ನಿ, ಬನ್ನಿ, ಅದನ್ನು ಅಲ್ಲಿ ಹೋದಾಗಲೇ ಹೇಳುತ್ತೀನಿ”, ಅಂದು ಅವರನ್ನು ಹಿಂದೆ ಕೂರಿಸಿಕೊಂಡು ಎಷ್ಟ್ ಆಗುತ್ತೋ ಅಷ್ಟು ಸ್ಪೀಡಾಗಿ ನ್ಯೂಸ್ 23 ಚಾನಲ್ ಕಛೇರಿ ಕಡೆ ಹೋದೆವು.

ಅಲ್ಲಿ ಒಬ್ಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ ನ್ಯೂಸ್23 ಚಾನಲ್ ಕಛೇರಿಯ ತಾರಸಿ ಮೇಲೆ ಹತ್ತಿ ನಿಂತಿದ್ದ. ಘಟನೆ ನೆಡೆದ ಸುಮಾರು 8 ನಿಮಿಷದಲ್ಲಿ ನಾವು ಜಾಗ ತಲುಪಿದ್ದೆವು. ಈಗಂತೂ 24×7 ನ್ಯೂಸ್ ಚಾನಲ್ ಗಳ ಸಂಖ್ಯೆ ಹೆಚ್ಚಾಗಿ ದಾರಿಯಲ್ಲಿ ಯಾರಾದರೂ ಜಾರಿ ಬಿದ್ದರೂ ನ್ಯೂಸ್ ಆಗುತ್ತೆ, ಸೀಟ್ ಗಾಗಿ ಬಿಎಂಟಿಸಿ ಬಸ್ ಅಲ್ಲಿ ವಾಗ್ವಾದ ಆದರೂ ಸದ್ದಾಗುತ್ತೆ. ಇನ್ನೂ ಆತ್ಮಹತ್ಯೆ ಪ್ರಯತ್ನ, ಅದೂ ನ್ಯೂಸ್ ಚಾನಲ್ ಕಛೇರಿ ಮೇಲೆ! ಪ್ರಸಾರವಾಗುತ್ತಿದ್ದ ಕಾಮಿಡಿ ಕಾರ್ಯಕ್ರಮ ನಿಲ್ಲಿಸಿ ಇದನ್ನೇ ಲೈವ್ ತೋರಿಸಲು ಶುರು ಮಾಡಿದರು.

“ಅವನ ಹೆಸರು ಶ್ರೀಕಂಠ. ಅಲ್ಲೇ ಪಕ್ಕದ ಶಾಪಿಂಗ್ ಮಾಲ್ ನ ಬಟ್ಟೆ ಅಂಗಡಿಯೊಂದರಲ್ಲಿ‌‌ ಕೆಲಸ ಮಾಡುತ್ತಿದ್ದ. ಮಂಡ್ಯ ಸಮೀಪದ ಹಳ್ಳಿಯಿಂದ ಹತ್ತನೇ ಕ್ಲಾಸ್ ಫೇಲ್ ಆದ ಮೇಲೆ ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದ. ಹಲವಾರು ಕೆಲಸಗಳನ್ನು ಮಾಡಿದ ಬಳಿಕ ಕೊನೆಗೆ ಈಲೈಟ್ ಶಾಪಿಂಗ್ ಮಾಲ್ ನಲ್ಲಿ ಕೆಲಸ ದಕ್ಕಿಸಿಕೊಂಡಿದ್ದ. ಅದು ಆಗಿ ಆರು ವರ್ಷಗಳಿಂದ ಖಾಯಂ ಕೆಲಸಗಾರನಾಗಿದ್ದ. ಊಟಕ್ಕೆ ಮೊಬೈಲ್ ಕ್ಯಾಂಟೀನ್, ಬಸ್ ಚಾರ್ಜು, ಮಲಗೋಕೆ ಜಾಗ, ಮತ್ತು ₹8000 ಸಂಬಳ ಸಿಗುತ್ತಾ ಇದ್ದದ್ದರಿಂದ ಶ್ರೀಕಂಠನಿಗೆ ಬೇರೆ ಯಾವ ಚಿಂತೆ ಇರಲಿಲ್ಲ. ಈಗ ಇದ್ದಕ್ಕಿದ್ದ ಹಾಗೆ ಏನಾಯಿತೋ ಗೊತ್ತಾಗಿಲ್ಲ ಸಾರ್” ಅಂತ ಒಬ್ಬ ಆತ್ಮಹತ್ಯೆ ಮಾಡಿಕೊಳ್ಳಲು ಮೇಲೆ ನಿಂತಿದ್ದ ವ್ಯಕ್ತಿಯ ಸಂಪೂರ್ಣ ಬಯೋ ಡೇಟಾ ಹೇಳಿದ. ಯಾರು ಅಂತ ನೋಡಿದಾಗ ಶ್ರೀಕಂಠನ ಥರದ ಸೇಮ್ ಯೂನಿಫಾರ್ಮ್ ಅವನು ಧರಿಸಿದ್ದ. ಸಹೋದ್ಯೋಗಿ ಅಂತ ಗೊತ್ತಾಯಿತು.

ನಾನು: ಕ್ಯಾಮೆರಾ ಮ್ಯಾನ್, ಬನ್ನಿ ಇಲ್ಲಿ.

ಕ್ಯಾಮೆರಾ ಮ್ಯಾನ್: ಸಾರ್ ಹೇಳಿ ಸಾರ್.

ನಾನು: ಮೇಲೆ ಯಾರಾದರೂ ಹೋಗಿ ಕೆಳಗೆ ಕರ್ಕೊಂಡು ಬರೋದಲ್ವಾ, ಏನ್ nuisance ಮಾಡ್ತಾ ಇದ್ದೀರಾ ಎಲ್ಲಾ ಇಲ್ಲಿ.

ಕ್ಯಾಮೆರಾ ಮ್ಯಾನ್: ಸಾರ್, ನಮ್ ಮ್ಯಾನೇಜರ್ ಸರ್ ಮೇಲೆ ಹೋಗಿದ್ದರು ಸಾರ್, ಯಾರಾದರೂ ಮೇಲೆ ಬಂದರೆ ಜಂಪ್ ಮಾಡ್ತೀನಿ ಅಂತ ಒಂದು ಕಾಲು ಬಿಲ್ಡಿಂಗ್ ಇಂದ‌ ಮುಂದೆ ತಂದ ಸಾರ್. ಭಯ ಆಗಿ, ಸ್ಟೇಷನ್ ಗೆ ಫೋನ್ ಮಾಡಿದ್ವಿ ಸಾರ್.

ನಾನು: ಆಯ್ತು ಆಯ್ತು, ಸಾಹೇಬರು ಬರ್ತಾ ಇದ್ದಾರೆ. ಅಷ್ಟೊಂದು ಟೈಮ್ ಇಲ್ಲ. ಮೈಕ್ ಮತ್ತು ಸ್ಪೀಕರ್ ವ್ಯವಸ್ಥೆ ಆಗಬೇಕಲ್ಲಾ, ನಾನು ಇಲ್ಲಿಂದ ಮಾತಾಡಿದ್ರೆ ಅಲ್ಲಿಗೆ ಕೇಳುತ್ತಾ?!?

ಕ್ಯಾಮೆರಾ ಮ್ಯಾನ್: ಆಯ್ತು ಸಾರ್, ರೆಡಿ ಮಾಡ್ತೀನಿ.

ಒಂದೇ ನಿಮಿಷದಲ್ಲಿ ಮೈಕ್ ನನ್ನ ಕೈ ಸೇರಿತ್ತು.

ನಾನು: ಶ್ರೀಕಂಠ.. ಶ್ರೀಕಂಠ.. ನನ್ನ ಹೆಸರು ರಾಜಶೇಖರ್, ನಾನು‌ ಪೊಲೀಸ್ ಕಾನ್ಸ್‌ಟೇಬಲ್. ಆತುರ ಪಡಬೇಡಿ, ದಯವಿಟ್ಟು ಪ್ಲೀಸ್, ನಾನು ಹೇಳೋದು‌ ಕೇಳಿಸುತ್ತಾ?!?

ಶ್ರೀಕಂಠ: ನಾನು ಯಾರ ಮಾತನ್ನೂ ಕೇಳೋ ಇದರಲ್ಲಿ ಇಲ್ಲ‌ ಸಾರ್, ನನ್ನ ಬಿಟ್ಟು ಬಿಡಿ. ನಾನು ನೆಮ್ಮದಿಯಾಗಿ ಸತ್ತು ಹೋಗ್ತೀನಿ. ನನ್ನ ಕಷ್ಟ ಯಾರಿಗೂ ಬೇಡ.

ನಾನು: ನೋಡಿ ಶ್ರೀಕಂಠ.. ಕೇಳಿಸುತ್ತಾ?!? ದುಡುಕಿ ನಿರ್ಧಾರ ತಗೋಬೇಡಿ, ತುಂಬಾ ಜನ ನಿಂತಿದ್ದಾರೆ ಇಲ್ಲಿ, ಎಲ್ಲಾ ಮೈಕ್ ಅಲ್ಲಿ ಮಾತಾಡಕ್ಕೆ ಆಗಲ್ಲ. ನಿಮ್ಮ ನಂಬರ್ ಗೆ ಫೋನ್ ಮಾಡ್ತೀನಿ, ಫೋನ್ ಪಿಕ್ ಮಾಡಬೇಕು. ಓಕೆ?? ಓಕೆ??

ಶ್ರೀಕಂಠನ ಸಹೋದ್ಯೋಗಿ ಇಂದ ನಂಬರ್ ತೆಗೆದುಕೊಂಡು ನನ್ನ ಫೋನ್ ನಿಂದ ಫೋನ್ ಮಾಡಿದೆ. ಅವನು ಫೋನ್ ಎತ್ತಲಿಲ್ಲ. ಮೈಕ್ ನಲ್ಲಿ ಫೋನ್ ರಿಸೀವ್ ಮಾಡುವಂತೆ ಮನವಿ ಮಾಡಿ ಮತ್ತೆ ಫೋನ್ ಮಾಡಿದೆ. ಅಳುವಿನ ಕಂಗಳೆಲ್ಲಾ ಕೆಂಪಾಗಿದ್ದ ಅವನು‌ ಕೊನೆಯ ರಿಂಗ್ ನಲ್ಲಿ ಫೋನ್ ಎತ್ತಿಕೊಂಡ.

ನಾನು: ಶ್ರೀಕಂಠ.., ಸಾಹೇಬರು ಬಂದರೆ ನನಗೆ ನಿಮಗೆ ಇಬ್ಬರಿಗೂ ತೊಂದರೆ, ಏನೇ ಪ್ರಾಬ್ಲಮ್ ಇದ್ದರೂ ಮಾತಾಡಿ ಬಗೆ ಹರಿಸಿಕೊಳ್ಳೋಣ, ಓಕೆ?? ಓಕೆ? ಕೇಳಿಸ್ತಾ‌ ಇದೆಯಲ್ಲಾ?!! ನಾನು ಮೇಲೆ ಬರ್ತೀನಿ, ಜಂಪ್ ಮಾಡಬಾರದು, ಪ್ಲೀಸ್. ನನ್ನ ಮಾತು‌ ಕೇಳಿ, ಓಕೆ, ಓಕೆ?

ಶ್ರೀಕಂಠ: ಸಾರ್, ನಾನು ಸಾಯ್ತೀನಿ ಸಾರ್, ನಂಗೆ ಈ‌ ದುಃಖ, ಅಳು ಎಲ್ಲಾ ಸಹಿಸಕೆ ಆಗ್ತಾ ಇಲ್ಲ, ಪ್ಲೀಸ್ ಸಾರ್, ಬಿಟ್ಟು ಹೋಗಿ ನೀನು.

ಅವನು‌ ಮಾತು‌ ಮುಗಿಸುವುದರೊಳಗೆ ನಾನು ಟೆರೇಸ್ ಮೇಲೆ ಹೋಗಿದ್ದೆ. ಕಾವ್ಯ ಅವರು ಲೈವ್ ಪ್ರಸಾರವನ್ನು ನಿಲ್ಲಿಸಲು ಕಮಿಷನರ್ ಹೇಳಿದ್ದಾರೆ ಅಂತ ಮ್ಯಾನೇಜರ್ ಗೆ ತಮ್ಮ ಫೋನ್ ಕೊಡಲು ಹೋದರು. ಘಟನೆಯ ನೇರ‌ಪ್ರಸಾರ ನಿಂತಿತು. ವರದಿಗಾರರು ನಿಂತು ಎಲ್ಲವನ್ನೂ ಬರೆದುಕೊಳ್ಳುತ್ತಿದ್ದರು.

ನಾನು: ಶ್ರೀಕಂಠ.., ಬಾ ಹೋಗೋಣ, ಬಾ.

ಶ್ರೀಕಂಠ: ಸಾರ್, ಬರಬೇಡಿ ಸಾರ್, ನೀವು ಒಂದು ಹೆಜ್ಜೆ ಮುಂದೆ ಇಟ್ಟರೂ ನಾನು‌ ಇಲ್ಲಿಂದ ಜಂಪ್ ಮಾಡಿ‌ ಬಿಡ್ತೀನಿ. ನನಗೆ ಈ ಲೋಕ ಸಾಕಾಗಿದೆ ಸಾರ್.

ನಾನು: ಶ್ರೀಕಂಠ.., ನೋಡಪ್ಪ., ಏನ್ ನಿನ್ನ ಪ್ರಾಬ್ಲಮ್ಮು?? ಪ್ರಾಬ್ಲಮ್ಸ್ ಯಾರಿಗೆ ಇರಲ್ಲ? ಅದಕ್ಕೆಲ್ಲಾ ಸೂಸೈಡ್ ಮಾಡ್ಕೊಳ್ತಾರೇನೋ, ಬಾ.., ಬನ್ನಿ ಹೋಗೋಣ.

ಶ್ರೀಕಂಠ ನಿಂತಲ್ಲಿಯೇ ಬಿಕ್ಕಿ‌ ಬಿಕ್ಕಿ ಅಳಲು ಶುರುಮಾಡಿದ. ಸುಸ್ತಾಗಿ ಕೆಳಗೆ ಕುಸಿಯುವಂತಾಗಿದ್ದ. ಓಡಿ ಹೋಗಿ ಹಿಡಿದು ಕೆಳಗೆ ಕೂರಿಸಿಕೊಂಡು ನೀರು ಕೊಟ್ಟೆ.

ಶ್ರೀಕಂಠ: ಸಾರ್, ನಾನು‌ ಒಂದು ಹುಡುಗಿಯನ್ನು ಪ್ರೀತಿಸ್ತಾ ಇದ್ದೀನಿ ಸಾರ್. ಅವಳು ನಾನು ಕೆಲಸ ಮಾಡೋ ಹತ್ತಿರ ಮೇಕಪ್ ಅಂಗಡಿಯಲ್ಲಿ ಕೆಲಸ ಮಾಡ್ತಾಳೆ. ನಾನು ಅವಳು ನಾಲ್ಕು ವರ್ಷದಿಂದ ಲವ್ ಮಾಡ್ತಾ ಇದ್ದೀವಿ ಆರ್. ಈಗ ಅವಳಿಗೆ ಬಲವಂತವಾಗಿ ಮದುವೆ ಮಾಡ್ತಿದ್ದಾರೆ ಸಾರ್ ಹಾಸನದಲ್ಲಿ. ಕೇಳೋಕೆ ಹೋಗಿದ್ದಕ್ಕೆ ಕಣ್ಣಿಗೆ ಬಟ್ಟೆ ಕಟ್ಟಿ ತೋಟಕ್ಕೆ ಕರ್ಕೊಂಡು ಹೋಗಿ ಸರಿಯಾಗಿ ಬಾರ್ಸಿದ್ದಾರೆ ಆರ್, ಇಲ್ನೋಡಿ ಸಾರ್ ಗಾಯ, ಅವಳು ಇಲ್ಲದೇ ನಂಗೇನೂ‌ ಇಲ್ಲ ಸಾರ್.

ಅಷ್ಟು ಹೊತ್ತಿಗೆ ಸಬ್ ಇನ್ಸ್ಪೆಕ್ಟರ್ ಸಾಹೇಬರು ಬಂದರು. ಅವರನ್ನು ನೋಡಿ ಹೆದರಿದ ಶ್ರೀಕಂಠ ಧಡಾರ್ ಎಂದು ಕೆಳಗೆ ಧುಮುಕಲು ಅಣಿಯಾದ. ನಾನು ಅವನನ್ನು ಬಿಗಿಯಾಗಿ ಹಿಡಿದುಕೊಂಡು ತಪ್ಪಿಸಲು ಹೋದೆ. ಆಯ ತಪ್ಪಿ ಇಬ್ಬರೂ 10 ಅಡಿ ಕೆಳಗೆ ಶೆಲ್ಫ್ ಮೇಲೆ ಬಿದ್ದೆವು. ಆಮೇಲೆ ಎಲ್ಲಾ ಬಂದು ನನ್ನನ್ನು ಮತ್ತು ಶ್ರೀಕಂಠನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ನನಗೆ ತಲೆಗೆ ಪೆಟ್ಟು ಬಿದ್ದು ಏನೂ ಕಾಣಿಸಲಿಲ್ಲ. ಎರಡು ದಿನದ ನಂತರ ಎದ್ದಾಗ ನನ್ನ ಮುಂದೆ ಕಾವ್ಯ ಕುಳಿತಿದ್ದರು‌. ನೆಡೆದದ್ದನ್ನು ವಿವರಿಸಿ ಶ್ರೀಕಂಠನಿಗೆ ಯಾವುದೇ ಕೇಸ್ ಬುಕ್ ಮಾಡದೇ ಸಾಹೇಬರು ವಾಪಸ್ ಕಳುಹಿಸಿದರು ಎಂದು ಗೊತ್ತಾಯಿತು. ಅದಾಗಿ ಒಂದು ವಾರದ ಬಳಿಕ ಶ್ರೀಕಂಠನ ನಂಬರ್ ಗೆ ಫೋನ್ ಮಾಡಿದೆ. ಎಲ್ಲಿದ್ದಾನೆ, ಏನು ಕಥೆ ಎಂದು ವಿಚಾರಿಸೋಣ ಅಂತ.

ಶ್ರೀಕಂಠ: ಸಾರ್, ನಾನು ಈಗ ಹಾಸನದಲ್ಲಿ ಇದ್ದೀನಿ. ಇಲ್ಲಿ ಏನಾಗ್ತಿದೆ ಅಂತ ಇನ್ನೂ ಅರ್ಧ ಗಂಟೆಯಲ್ಲಿ ನಿಮಗೆ ಟಿವಿಯಲ್ಲಿ ಗೊತ್ತಾಗುತ್ತೆ.

ನಾನು: ಸ್ಟುಪಿಡ್ ಥರ ಮಾತನಾಡಬೇಡ ಶ್ರೀಕಂಠ, ನನ್ನ ಮಾತು ಕೇಳು. ಓಕೆ?!? ಎಲ್ಲಿದ್ದಯೋ, ಹೆಂಗಿದ್ದೀಯೋ ಹಂಗೆ ಬೆಂಗಳೂರಿಗೆ ಬಾ. ನಿಂಗೆ ಏನು ಸಹಾಯ ಬೇಕೋ ಎಲ್ಲಾ ಸಾಹೇಬರು ಮಾಡಿ ಕೊಡ್ತಾರೆ. ನನ್ನ ಮಾತು‌ ಕೇಳು ಪ್ಲೀಸ್.. ಪ್ಲೀಸ್..

ಮುಂದಕ್ಕೆ ಮಾತು ಆಡುವುದರಲ್ಲಿ ಫೋನ್ ಕಟ್ ಆಯಿತು. ರೀಡಯಲ್ ಮಾಡುವ ಹೊತ್ತಿಗೆ ಪೋನ್ ಸ್ವಿಚ್ ಬರುತ್ತಿತ್ತು. ಯಾವುದಕ್ಕೂ ಇರಲಿ‌ ಅಂತ ಸಾಹೇಬರಿಗೆ ಫೋನ್ ಮಾಡಿ ತಿಳಿಸಿದೆ. ಅವರು ಹಾಸನ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅವರಿಗೆ ಫೋನ್ ಮಾಡಿ ಕೇಸ್ ನ ಹಿಂದಿನ ವೃತ್ತಾಂತ ತಿಳಿಸಿದರು‌. ಶ್ರೀಕಂಠ ಕೆಲಸ ಮಾಡುತ್ತಿದ್ದ ಶಾಪಿಂಗ್ ಮಾಲ್ ಸಿಬ್ಬಂದಿಗೆ ಫೋನ್ ಮಾಡಿ ಹಾಸನ ಹುಡುಗಿ ವಿಳಾಸ ಪತ್ತೆ ಮಾಡಿ ಅಲ್ಲಿಗೆ ಹೋಗಿವುದರೊಳಗೆ ಒಂದು ಹಲ್ಲೆ ಮತ್ತು ಆತ್ಮಹತ್ಯೆ ನೆಡೆದು ಹೋಗಿತ್ತು.‌ ಶ್ರೀಕಂಠ ತನ್ನ ಹುಡುಗಿ ಒನ್ನೊಬ್ಬರನ್ನು‌ ಮದುವೆಯಾಗುವುದನ್ನು ನೋಡಲಾಗದೆ ಅವಳ ಮುಂದೆ ಆತ್ಮಹತ್ಯೆ ಮಾಡಿಕೊಳ್ಳಲು ಬಂದಿದ್ದ. ಶ್ರೀಕಂಠನ ವಿಷಯ ಊರಲ್ಲಿ ಎಲ್ಲರಿಗೂ ಗೊತ್ತಾಗುವ ಮುನ್ನ ತರಾತುರಿಯಲ್ಲಿ ಅವಳಿಗೆ 10 ದಿನ ಮೊದಲೇ ಮದುವೆ ಮಾಡಲಾಯಿತು. ಶ್ರೀಕಂಠ ಬಂದಾಗ ಅವಳ ಕೊರಳಲ್ಲಿ ತಾಳಿ ಮಿನುಗುತ್ತಿತ್ತು. ಅವಳು ಸಾಯುವಂತೆ ಅವಳ ಮೇಲೆ ಹಲ್ಲೆ ಮಾಡಿದ. ಓಡಿ ಹೋಗಿ ಹತ್ತಿರದ ಟೆಲಿಫೋನ್ ಟವರ್ ಹತ್ತಿ ಕೆಳಗೆ ತಾನೂ ಪ್ರಾಣ ಬಿಟ್ಟ. ಅದೃಷ್ಟವಶಾತ್ ಅವಳು ಆಸ್ಪತ್ರೆಯಲ್ಲಿ ಬದುಕಿದಳು. ಶ್ರೀಕಂಠನ ಶವವನ್ನು ಮಂಡ್ಯ ಸಮೀಪದ ಅವನ ಹಳ್ಳಿಗೆ ಕಳುಹಿಸಲಾಯಿತು. ಹಾಸನ‌ ಪೊಲೀಸ್ ಅಧಿಕಾರಿಗಳು ಹೋಗಿ ಘಟನೆಯನ್ನು ಮಹಜರ್ ಮಾಡಿ ಬಂದರು. ಆ ಹುಡುಗಿ ಈಗ ರಿಕವರಿ ಆಗುತ್ತಿದ್ದಾಳೆ.

ಪೊಲೀಸ್ ಕೆಲಸದ ಪ್ರಾಬ್ಲಮ್ ಗಳಲ್ಲಿ ಇದೂ ಒಂದು. ನೀವು ಆಫೀಸ್ ಇಂದ ಮನೆಗೆ ಹೋಗುವ ದಾರಿಯಲ್ಲಿ ಹೆಚ್ಚೆಂದರೆ ಎರಡು ಮೂರು ವರ್ಷಕ್ಕೆ ಒಂದು ಆ್ಯಕ್ಸಿಡೆಂಟ್ ನೋಡಬಹುದು.‌ ಆದರೆ ನಮ್ ಕಥೆ ಹಾಗಲ್ಲ, ದಿನ ಬೆಳಗಾದರೆ ಅದೇ ಸಾವು, ಗೋಳು ನೋಡಿ ನೋಡಿ ಮನಸ್ಸು ಜಡವಾಗಿ ಹೋಗಿರುತ್ತೆ. ಸಾವಿನ ಸುತ್ತ ಅಳು ಬರಲ್ಲ ಅಂತ ಅಲ್ಲ, ಸ್ವಲ್ಪ ಕಮ್ಮಿ. ಇಷ್ಟೆಲ್ಲಾ ಆದರೂ ಶ್ರೀಕಂಠನ ಕಥೆ ಒಮ್ಮೊಮ್ಮೆ ರಾತ್ರಿ ನಿದ್ದೆಗೆಡಿಸುತ್ತೆ. Butterfly Effect, ಯಾವತ್ತೋ ಎಲ್ಲೋ ಮಾಡಿದ ನಿರ್ಧಾರಗಳು ಅದರ ನಂತರದ ಸರಣಿ ನಿರ್ಧಾರಗಳ ಫಲವಾಗಿ ನಾವಿಂದು ಇಲ್ಲಿ ನಿಂತಿದ್ದೇವೆ. ಶ್ರೀಕಂಠನ ಜೀವನದಲ್ಲಿ ಆ ಬಗೆಯ ಯಾವ ಒಂದು ನಿರ್ಧಾರ ಬೇರೆಯಾಗಿದ್ದರೆ ಇಷ್ಟು ಹೊತ್ತಿಗೆ ಆತ ಬದುಕಿರುತ್ತಿದ್ದ ಎಂದೆಲ್ಲಾ ಯೋಚಿಸುತ್ತಾ ಕುಳಿತಿರುತ್ತೇನೆ. ಇಷ್ಟೇನಾ ಪ್ರೀತಿ ಅಂದರೆ?!? ಪ್ರೀತಿ ಇಲ್ಲದಾಗ ನೋವು ಆಗುತ್ತೆ ನಿಜ, ಆದರೆ ಅ ನೋವನ್ನು ನೀಗುವುದೂ ಕೂಡ ಪ್ರೀತಿಯೇ ಅಲ್ಲವೇ?! ಪ್ರೀತಿ ಇಲ್ಲದ alternate universe ಅನ್ನು ಊಹಿಸಿಕೊಳ್ಳುವುದೂ ಕೂಡ ಅಸಾಧ್ಯ. ತಂದೆ ತಾಯಿ ಸಾಲ ಮಾಡಿ ಮಕ್ಕಳನ್ನು ಶಾಲೆಗೆ ಸೇರಿಸುವುದು, ಅವರು ದೊಡ್ಡವರಾಗಿ ದುಡಿದು ಮನೆಗೆ ಹಣ ಕಳುಹಿಸುವುದು, ಸ್ನೇಹಿತರ ಮದುವೆಯ ಖುಷಿ, ಆಪ್ತರ ಸಾವಿನ ದುಃಖ, ಇವೆಲ್ಲಾ ಪ್ರೀತಿಯಿಂದೆಲೇ ತಾನೇ?!? ಪ್ರೀತಿ ಇಲ್ಲದ ಜಗದಲ್ಲಿ ನಮ್ಮದು ನಿಮ್ಮದೆಲ್ಲಾ ಏನಿದೆ? Actually ಶ್ರೀಕಂಠ ಕೆಟ್ಟವನೇನೂ ಅಲ್ಲ. ಸಾವಿಲ್ಲದ ಮನೆಯಲ್ಲಿ ಸಾಸಿವೆ ತರುವ ಹಾಗೆ ಪ್ರೀತಿಗೆ ಸೋಲದ / ಪ್ರೀತಿಯಲ್ಲಿ ಸೋಲದ ಜೀವವೇ ಇಲ್ಲ ಎನ್ನಬಹುದು. ಇಂತಿಪ್ಪ ಸಂದರ್ಭದಲ್ಲಿ ಪ್ರೀತಿ ಇಲ್ಲದ ಮೇಲಿನ ನಮ್ಮ ನಿರ್ಧಾರಗಳು ಯಾವ ರೀತಿಯದ್ದು ಎಂಬುದು ನಮ್ಮನ್ನು define ಮಾಡುತ್ತದೆ. ಎಷ್ಟೇ ಆಗಲಿ ಈ ಜೀವನ ತುಂಬಾ ಚಿಕ್ಕದು, ನಗೋಣ, ನಗು ಹಂಚೋಣ, ಹಾಗೇ ತುಸು ಪ್ರೀತಿಯನ್ನು.

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..