1657

SPEED THRILLS BUT IT KILLS.

ಇತ್ತೀಚಿನ ವರ್ಷಗಳ ಬಹುದೊಡ್ಡ ಬ್ರೇಕಿ೦ಗ್ ನ್ಯೂಸ್ ರಸ್ತೆ ಅಪಫಾತಗಳದ್ದು.
ಮನೆಯಿ೦ದ ಕೆಲಸಕ್ಕೆ ಹೊರಹೋದ ವ್ಯಕ್ತಿ ಮನೆಗೆ ಬಂದಾಗಲೇ ಗ್ಯಾರ೦ಟಿ ಎನ್ನುವ ಮಾತು ಚಾಲ್ತಿಯಲ್ಲಿದೆ.
ಭಾರತದಲ್ಲಿ ಅಪಘಾತಗಳಿಂದಲೇ ಗಂಟೆಗಳ ಲೆಕ್ಕದಲ್ಲಿ ಜನ ಸಾಯುತ್ತಿದ್ದಾರೆ ಮತ್ತು ಅಂಗವಿಕಲರಾಗುತ್ತಿದ್ದಾರೆ. ಹಿರಿಯರನ್ನು ನೋಡಿದಾಗ ಇಷ್ಟೊ೦ದು ಅವ್ಯವಸ್ಥೆಯ ವಾಹನಗಳ ಭರಾಟೆಯಲ್ಲಿ ಇವರು ಹೇಗೆ ಇನ್ನೂ ಜೀವಂತವಿದ್ದಾರೆ ಎಂದು ಆಶ್ಚರ್ಯವಾಗುತ್ತದೆ !!.

ಏಕೆ ಹೀಗೆ ?.

ರಸ್ತೆಗಳೇ ಎದ್ದು ಬಂದು ಜನರನ್ನು ಕೊಲ್ಲುತ್ತವೆಯೇ ?
ಅಥವಾ
ವಾಹನಗಳು ಬೇಕಂತಲೇ ಜನರನ್ನು ಬೀಳಿಸುತ್ತವೆಯೇ ?
ಅಥವಾ
ಜನಸಂಖ್ಯೆ ಕಡಿಮೆ ಮಾಡಲು ಪ್ರಕೃತಿಯ ಆಟ ಇರಬಹುದೇ ?
ಯೋಚಿಸಬೇಕಾಗಿದೆ.

ನಮ್ಮಲ್ಲಿ ರಸ್ತೆಗಳ ಗುಣಮಟ್ಟ ಸರಿ ಇಲ್ಲ ನಿಜ. ಆದರೆ ಅದರ ಮೇಲೆ ಓಡಾಡುವ ಜನರಿಗೆ ಕಣ್ಣು ಕಿವಿ ಬುದ್ದಿ ಇದೆಯಲ್ಲವೇ !

ನಮ್ಮಲ್ಲಿ ವಾಹನಗಳು ಅತ್ಯಧಿಕ. ನಿಜ.ಆದರೆ ಅದನ್ನು ಚಲಾಯಿಸುವುದು ನಾಗರಿಕ ಮನುಷ್ಯನಲ್ಲವೇ. ವಾಹನಗಳು ಜಾಸ್ತಿಯಾಗಿರುವುದರಿಂದ ಅವೇ ತಮ್ಮ ತಮ್ಮಲ್ಲಿ ಗುದ್ದಾಡುವುದಿಲ್ಲವಲ್ಲವೇ !.

ನಮ್ಮಲ್ಲಿ ಸಂಚಾರಿ ನಿಯಮಗಳು ಸರಿ ಇಲ್ಲ ಹಾಗೂ ಚಾಲನಾ ತರಬೇತಿ ಮತ್ತು ಲೈಸೆನ್ಸ್ ವ್ಯವಸ್ಥೆ ಭ್ರಷ್ಟಗೊಂಡಿದೆ. ನಿಜ.ಅದರಲ್ಲಿ ವಿಶೇಷವೇನಿಲ್ಲ.ಎಲ್ಲಾ ವ್ಯವಸ್ಥೆಗಳಂತೆ ಅದೂ ಇದೆ.ಸದ್ಯಕ್ಕೆ ಬದಲಾಗುವ ಸಾಧ್ಯತೆಯು ಇಲ್ಲ.

ಹಾಗಾದರೆ ವಾಸ್ತವ ಮತ್ತು ಸತ್ಯಕ್ಕೆ ಹತ್ತಿರದ ಕಾರಣ ಏನಿರಬಹುದು ..
ತೀರಾ ಆಳಕ್ಕೆ ಇಳಿಯದೆ ಸಹಜವಾಗಿ ಹೇಳಬೇಕೆಂದರೆ,
ನಾವು ನಮ್ಮ ವಿವೇಚನೆಯನ್ನು ಸರಿಯಾಗಿ ಬಳಸಿ ಸಂದರ್ಭಕ್ಕೆ ಸರಿಯಾಗಿ ಪರಿಸ್ಥಿತಿ ಅವಲೋಕಿಸಿ ಒಂದಷ್ಟು ಪ್ರಜ್ಞೆಯಿಂದ, ಭಯ ಭಕ್ತಿ ವಿನಯದಿಂದ ವಾಹನ ಚಲಾಯಿಸಿದ್ದೇ ಆದರೆ ಈ ಕ್ಷಣದಿಂದಲೇ ಶೇಕಡ 80% ರಷ್ಟು ಅಪಘಾತಗಳು ನಿಲ್ಲುತ್ತವೆ. ಇದಕ್ಕೆ ಯಾವ ನೀತಿ ನಿಯಮಗಳು ಗೊಣಗಾಟಗಳು ವ್ಯವಸ್ಥೆಯ ಬದಲಾವಣೆಗಳು ಬೇಕಾಗಿಲ್ಲ.
ಇನ್ನುಳಿದ ಶೇಕಡ 20% ರಷ್ಟು ತಾಂತ್ರಿಕ ತೊಂದರೆ, ನಿಯಂತ್ರಿಸಲಾಗದ ಅನೀರೀಕ್ಷಿತ ಆಕಸ್ಮಿಕ ಇತ್ಯಾದಿ ಕಾರಣಗಳು ಇರಬಹುದು.
ಬೇಜವಾಬ್ದಾರಿ, ಆತುರ, ಹುಡುಗಾಟಿಕೆ, ಮಾನಸಿಕ ಕ್ಷೋಬೆ ಕಡಿಮೆ ಮಾಡಿಕೊಂಡು, ನಮ್ಮ ವ್ಯಕ್ತಿತ್ವದಲ್ಲಿ ಬದಲಾವಣೆ ತಂದುಕೊಂಡು ನಮ್ಮ ಪ್ರಾಣಕ್ಕೆ ನಾವೇ ಜವಾಬ್ದಾರರು ಎಂದು ಅರ್ಥಮಾಡಿಕೊ೦ಡು,
ವಾಸ್ತವವಾಗಿ ವ್ಯವಸ್ಥೆ ಸರಿಯಿಲ್ಲ, ರಸ್ತೆಗಳಲ್ಲಿ ಎಲ್ಲಿ ಬೇಕಾದರೂ ಅಪಾಯಕಾರಿ ಸ್ಥಿತಿ ಇರಬಹುದು, ಜನ ಅನಿರೀಕ್ಷಿತವಾಗಿ ಹುಚ್ಚರಂತೆ ಹೇಗೆ ಬೇಕಾದರೂ ಅಡ್ಡ ಬರಬಹುದು ಅವರಿಗೆ ರಸ್ತೆಯ ಜ್ಞಾನವೇ ಇಲ್ಲವೇ ಇಲ್ಲ ಎಂದು ಭಾವಿಸಿ ವೇಗವನ್ನು 60/90 ರ ಮಿತಿಯಲ್ಲಿ ಓಡಿಸಿದ್ದೇ ಆದರೆ ನಿಮಗೆ ವಾಹನದ ಮೇಲೆ ನಿಯಂತ್ರಣ ಇದ್ದು ಅಪಘಾತದ ಸಾಧ್ಯತೆ ಖಂಡಿತ ಕಡಿಮೆಯಾಗುತ್ತದೆ.
ಇಲ್ಲ ಇದೆಲ್ಲ ಹಳೆಯ ಕಾಲದ ಹೇಳಿಕೆಗಳು. ಈಗೇನಿದ್ದರೂ ವೇಗಕ್ಕೆ ಪ್ರಾಮುಖ್ಯತೆ ಎಂದು ನೀವು ಭಾವಿಸುವುದಾದರೆ ಆ ವೇಗದ ಲಾಭ ನಷ್ಟಗಳು ನಿಮ್ಮವೇ.
ಸತ್ತ ನಂತರದ Police – Hospital – Insurance ಮತ್ತು ಎಲ್ಲಕ್ಕೂ ಮುಖ್ಯವಾಗಿ ನಿಮ್ಮ ನಂಬಿದವರ ಮತ್ತು ಪ್ರೀತಿ ಪಾತ್ರರ ನೋವು ಕಷ್ಟ ನರಕಯಾತನೆಗೆ ನಿಮ್ಮದೇ ಕೊಡುಗೆ ಬಹಳಷ್ಟಿರುತ್ತದೆ ನೆನಪಿರಲಿ.

SPEED THRILLS BUT IT KILLS.
ಪ್ರತಿ ಅಪಘಾತದ ನನ್ನವರ ಸಾವು ಅನಾವಶ್ಯಕ.
ದಯವಿಟ್ಟು ಒಂದಷ್ಟು ಸ್ಪಂದಿಸಿ. ಕಳೆದುಕೊಳ್ಳುವುದೇನೂ ಇಲ್ಲ.

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..