806

ಈ ಮಹಿಳೆಯ ಸ್ಪೂರ್ತಿದಾಯಕ ಜೀವನದ ಕಥೆ ನಿಮಗೆ ನಿಮ್ಮ ಜೀವನವನ್ನು ಇನ್ನಷ್ಟು ಸುಂದರವಾಗಿ ಅನುಭವಿಸಲು ಪ್ರೇರೇಪಣೆ ನೀಡುತ್ತದೆ

ಈ ನೈಜ ಕಥೆಯನ್ನು ಬಹಳ ಸೂಕ್ಷ್ಮವಾಗಿ ಓದಿ ..

“”ಕಣ್ಣಿನ ಮಾತು ಕೇಳಬೇಡಿ, ಮನಸಿನ ಮಾತಿಗೆ ಕಿವಿಗೊಡಿ” .
ಒಂದೆರಡು ಜೀವಕ್ಕಾದರೂ ಸ್ಪೂರ್ತಿ ಸಿಗಬಹುದೆಂಬ ಚಿಕ್ಕ ಆಸೆಯೊಂದಿಗೆ ನನ್ನ ಜೀವನದ ಈ ಎರಡು ಸಾಲುಗಳು..

ಕಣ್ಣಿನ ಮಾತು ಕೇಳಬೇಡಿ, ಮನಸ್ಸಿನ ಮಾತಿಗೆ ಕಿವಿಗೊಡಿ”

ನನ್ನ ಹೆಸರು ವಿನುತಾ. ಹುಟ್ಟಿದ್ದು ತೀರ್ಥಹಳ್ಳಿಯಲ್ಲಿ. ಬೆಳೆದಿದ್ದು ಕುಂದಾಪುರದ ಹುಣ್ಸೆಮಕ್ಕಿಯಲ್ಲಿ. ನಾನು ತುಂಬಾ ಮುದ್ದಾಗಿದಿನಿ ಅಂತ ಮನೇಲಿ ತುಂಬಾ ಮುದ್ದು ಮಾಡ್ತಿದ್ರು. ಕ್ಲಾಸಿನಲ್ಲೂ ಎಲ್ಲಾ ಟೀಚರ್ಸ್ ನನ್ನನ್ನು ಕಂಡರೆ ಅಕ್ಕರೆ. ಡಾನ್ಸ್, ಸಂಗೀತ, ಎಲ್ಲಾ ಚಟುವಟಿಕೇಲೂ ನಾನೇ ಮುಂದು ನಮ್ಮಪ್ಪ ಹೋಟೇಲ್ ಬ್ಯುಸಿನೆಸ್ ಮಾಡ್ತಾರೆ. ನಮ್ಮ ಊರಿಂದ ಸ್ವಲ್ಪ ದೂರದಲ್ಲೇ ನಮ್ಮ ಹೋಟೇಲ್ ಇರೋದು. ದಿನಾಲೂ ಶಾಲೆ ಮುಗಸ್ಕೊಂಡು ಹೋಟೇಲ್ ಗೆ ಹೋಗೋ ಅಭ್ಯಾಸ ನಂದು. ಅಲ್ಲಿ ಅಕ್ಕಪಕ್ಕದೋರು ನನ್ನ ತುಂಬಾ ಮುದ್ದಿನಿಂದ “ಪುಟ್ಟಿ ಪುಟ್ಟಿ “ಅಂತ ಕರಿಯೋರು. ನನಗೆ ನಾನು ರಾಣಿ ಅನ್ನೊ ಭಾವನೆ. ಆದ್ರೂ ಯಾವ್ದೂ ಹೆಚ್ಚು ದಿನ ನಮ್ಮ ಜೊತೇಲಿ ಇರಲ್ಲ.

ನಾನಾಗ 2ನೇ ತರಗತಿಲಿ ಇದ್ದೆ. ಎಂದಿನಂತೆ ಆ ದಿನಾನೂ ಹೋಗಿದ್ದೆ. ಆವತ್ತು ಶನಿವಾರ. ಮಧ್ಯಾನದ ಶಾಲೆ ಮುಗಿಸ್ಕೊಂಡು ಅಮ್ಮನ ಜೊತೆ ಹೋಗಿದ್ದೆ. ನನಗೆ ಅಲ್ಲಿ ಒಬ್ಬ ಫ್ರೆಂಡ್ ಇದ್ದ. ಸರಿಯಾಗಿ ಅಷ್ಟು ನೆನಪಿಲ್ಲ. ಆದರೆ ಅವನನ್ನ ನಾನು ಎತ್ಕೊಂಡು ತಿರ್ಗ್ತಿದ್ದೆ. ದಿನಾಲೂ ನಮ್ಮಮ್ಮ ಮುಖಕ್ಕೆ ಫೇರ್ ಅಂಡ್ ಲವ್ಲಿ ಹಚ್ಕೊತಿದ್ದನ್ನ ನಾನು ನೋಡ್ತಿದ್ದೆ ಆದರೆ ಯಾಕೆ ಏನು ಅಂತ ನನ್ನ ಬುದ್ದಿಗೆ ಬಂದಿಲ್ಲ.

ಆವತ್ತು ನಾನು ಅವನು ಆಟ ಆಡೋವಾಗ ಅವರ ಮನೇಲಿದ್ದ ಝಂಡು ಬಾಮನ ಎತ್ಕೊಂಡು ಹೋಗಿ ಅದನ್ನ ಅಮ್ಮ ಯಾವಾಗ್ಲೂ ಹಚ್ಕೋತಿದ್ದ ಫೇರ್ ಅಂಡ್ ಲವ್ಲಿ ಅಂದ್ಕೊಂಡು ಅವ್ನ ಮುಖಕ್ಕೆ ಹಚ್ಚಿ ನಾನು ಹಚ್ಕೊಂಡ್ವಿ. ಸ್ವಲ್ಪ ಸಮಯದ ಬಳಿಕ ಮುಖ ತುಂಬಾ ಉರಿಯಲು ಶುರುವಾಯ್ತು. ನನಗೆ ಕಣ್ಣು ತೆರೆಯಲಿಕ್ಕೇ ಆಗ್ತಿರ್ಲಿಲ್ಲ. ಹಾಗೆ ಅಳ್ತಾ ಅಲ್ಲಿಂದ ಓಡಿ ಅಮ್ಮ ಇದ್ದಲ್ಲಿಗೆ ಬಂದೆ. ನಮ್ಮಮ್ಮ ಸಿಕ್ಕಾಪಟ್ಟೆ ಬೈದು ಬಿಟ್ಟರು. ಅಷ್ಟೋತ್ತಾಗ್ಲೇ ಮನೆಗ ಹೋಗೋ ಸಮಯ ಆಗಿತ್ತು. ನಾನು ಅಮ್ಮನ ಜೊತೆ ಹೊರ್ಟೆ ಆದರೆ ಚಪ್ಪಲಿ ಕಾಣ್ಸ್ತಿರ್ಲಿಲ್ಲ. ಅಮ್ಮನ ಬೈಗುಳ ಜಾಸ್ತಿ ಆಯ್ತು.

“ನೀನು ಇಲ್ಲೇ ಇರು. ನಾನು ಹೋಗ್ತೀನಿ ಮನೆಗೆ. ಚಪ್ಪಲಿ ಇಲ್ದೇ ನನ್ನ ಜೊತೆ ಬರ್ಬೇಡ ಅಂದ್ರು.”

ಸರಿಯಾಗಿ ನೆನಪ ಮಾಡ್ಕೊಂಡೆ ಈ ಝಂಡು ಬಾಮ್ ಗಡಿಬಿಡಿಲಿ ಚಪ್ಪಲಿನ ಅಲ್ಲೇ ಬಿಟ್ಟು ಬಂದಿದಿನಿ ಅಂತ. ನಾನು ಅಲ್ಲಿಗೆ ಹೋದ್ರೆ ತಡವಾಗತ್ತೆ ಅಂತ ಅಮ್ಮಂಗೆ ಹೇಳ್ದೆ.”ನಾನು ಚಪ್ಪಲಿ ಹುಡ್ಕೊಂಡು ಅಪ್ಪನ ಜೊತೆ ಆಮೇಲೆ ಬರ್ತೀನಿ” ಅಂತ.

ಅಮ್ಮ ಸರಿ ಎಂದು ನನ್ನ ಅಲ್ಲೇ ಬಿಟ್ಟು ಮನೆಗ ಹೋದ್ರು.

ಸಂಜೆ 7 ಗಂಟೆ. ಹಳ್ಳಿ ಕಡೆ ವಿದ್ಯುತ್ ಸರಿಯಾಗಿ ಕೈ ಕೊಡೋದೇ ಆ ಸಮಯದಲ್ಲಿ. ಆವತ್ತು ಅದೇ ಸಮಯಕ್ಕೆ ಕರೆಂಟ್ ಹೋಯ್ತು. ಹಳ್ಳಿ ಕಡೆ ಹೆಚ್ಚಾಗಿ ಉಪಯೋಗಿಸೋದೇ ಸೀಮೆ ಎಣ್ಣೆ ದೀಪ. ಅಪ್ಪ ದೀಪನ ಟೇಬಲ್ ಮೇಲೆ ಹಚ್ಚಿಟ್ಟಿದ್ದರು. ಅಷ್ಟೇ ಹೊತ್ತಿಗೆ ಅಪ್ಪನ ಮಾತಾಡಿಸೋದಕ್ಕೆ ಅಂತ ಅವರ ಗೆಳೆಯ ಒಬ್ರು ಬಂದಿದ್ರು. ಅವರು ನನ್ನ ತುಂಬಾ ಇಷ್ಟ ಪಡೋರು. ನಾವಿಬ್ರು ಆಟ ಆಡ್ತಿದ್ವಿ. ಏನಾಯ್ತೋ ಇವತ್ತಿಗೂ ನೆನಪು ಆಗ್ತಿಲ್ಲ ದೀಪ ಬಿತ್ತು. ನೈಲನ್ ಫ್ರಾಕ್ ಹಾಕಿದ್ದ ನನ್ನ ಮೈಮೇಲೆ ದೀಪ ಹೊತ್ಕೊಂಡು ಉರಿಯಲು ಶುರುವಾಯ್ತು.

ನನ್ನ ದೇಹ ತುಂಬಾನೇ ಸುಡ್ತಿತ್ತು. ನಾನು ತುಂಬಾ ಕೂಗ್ತಿದ್ದೆ, ಅಪ್ಪನ್ನ ಹುಡ್ಕ್ತಿದ್ದೆ ಅವರೂ ನನ್ನನ್ನ ಹಿಡ್ಕೊಳ್ಳೋದಕ್ಕೆ ಬರ್ತಿದಾರೆ. ಅವರೂ ತುಂಬಾ ತಬ್ಬಿಬ್ಬು ಆಗ್ಬಿಟ್ಟಿದ್ರು. ಏನ್ ಮಾಡೋದಕ್ಕೂ ಅವರಿಗೆ ತೋಚ್ತಿಲ್ಲ. ಪಾಪ ಅವರು ತುಂಬಾ ಕೂಗ್ತಿದ್ರು. ನನಗಿಂತ ಹೆಚ್ಚು ನೋವಾಗಿದ್ದೆ ಅವರಿಗೆ. ನನ್ನ ಗೋಳಾಟ ಮುಂದುವರೀತಾನೆ ಇದೆ. ಕೊನೆಗೂ ಹೇಗೋ ಬೆಂಕಿ ಆರಿತ್ತು. ನಾನು ನೆಲದ ಮೇಲೆ ಮಲ್ಗಿದ್ದೆ. ನನ್ನ ಮೈ ತುಂಬಾ ಸುಟ್ಟಿತ್ತು. ಅದಾದ ಕೂಡಲೇ ಅಪ್ಪ ನನ್ನನ್ನ ಹಿಡ್ಕೊಂಡು ಅಳೋದಕ್ಕೆ ಶುರು ಮಾಡಿದ್ರು. ನನಗೆ ನನ್ನ ನೋವಿಗಿಂತ ಅವರು ಅಳೋದನ್ನೆ ನೋಡಕ್ಕೆ ಆಗಿಲ್ಲ. ಅದನ್ನು ನೋಡಿ ನಾನು ಅಳ್ತಿದ್ದೆ.

ನನ್ನನ್ನು ಕೂಡಲೇ ಯಾವುದೋ ಲಾರಿಲಿ ಹಾಕ್ಕೊಂಡು ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರ್ಕೊಂಡು ಹೋದರು. ಅಷ್ಟೇ ನನಗೆ ನೆನಪಿರೋದು. ಮನೇಲಿ ಹೇಳೀದ ರೀತಿಲಿ ಅಲ್ಲಿ

ನನಗೆ ಮೈ ತುಂಬಾ ಬ್ಯಾಂಡೇಜ್ ಮಾಡಿ “ಇಲ್ಲಿ ಆಗಲ್ಲ ಉಳಿಯೋದು ಕಷ್ಟ. ಕರ್ಕೊಂಡು ಹೋಗಿ ಮನೆಗೆ” ಅಂದ್ರಂತೆ. ಯಾರೆ ಏನೇ ಅಂದ್ರು ಹೆತ್ತವ್ರು ಸುಮ್ನೆ ಬಿಡಲ್ಲ.

ಗಂಟೆ ಬೆಳಿಗ್ಗೆ 2 ಅಲ್ಲಿಂದ ಪ್ರಜ್ಞೆ ಇಲ್ಲದಿರೋ ನನ್ನ ಎತ್ಕೊಂಡು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ಬಂದ್ರು ಅಲ್ಲಿ” 70000 ಬಿಲ್ ಕಟ್ಟಿ ಜೀವ ಉಳಿಯೋದು ತುಂಬಾನೇ ಕಷ್ಟ. ಯಾವ್ದಕ್ಕೂ ಗ್ಯಾರಂಟಿ ಕೊಡಕ್ಕೆ ಆಗಲ್ಲ” ಅಂದ್ರಂತೆ. ಅಷ್ಟೊತ್ತಲ್ಲಿ ಅಷ್ಟು ದುಡ್ಡು ಎಲ್ಲಿಂದ ತರ್ತಾರೆ. ಈಗಿನ ತರ ಏಟಿಎಮ್ ಕೂಡ ಇಲ್ಲ.

ಬೇಸತ್ತ ಇವರು ಒಂದ್ಸಲ ಮನೆಗೆ ಕರ್ಕೊಂಡು ಹೋಗಿ ಅಜ್ಜಿಗೆ ಕೊನೇ ಬಾರಿ ನನ್ನ ಮುಖ ತೋರಿಸೋದಕ್ಕ ಮನೆಗೆ ಕರ್ಕೊಂಡು ಬಂದ್ರಂತೆ. ಅಷ್ಟು ರಾತ್ರಿಲಿ ಊರವ್ರೆಲ್ಲ ನಮ್ಮ ಮನೆ ಮುಂದೆ ಸೇರಿದ್ರಂತೆ. ಊರವ್ರು., ಮನೆಯವ್ರು ಎಲ್ಲರ ಗೋಳಾಟದ ಮಧ್ಯೆನೂ ನಮ್ಮ ಚಿಕ್ಕಪ್ಪ ನನ್ನನ್ನ ತೀರ್ಥಹಳ್ಳಿ ಆಸ್ಪತ್ರೆಗೆ ಕರ್ಕೊಂಡು ಹೋಗೋದಕ್ಕೆ ಉಪಾಯ ಮಾಡಿದ್ರಂತೆ.

ಅಲ್ಲಿಂದ ಮುಂದೆ ಪ್ರಯಾಣ ತೀರ್ಥಹಳ್ಳಿಗೆ. ಅಲ್ಲಿ ನನ್ನ ಬ್ಯಾಂಡೇಜ್ ನೋಡಿ ಅವರೇ ದಿಗಿಲು. “ಅದ್ನೆಲ್ಲ ಬಿಡ್ಸಕೊಂಡು ಬನ್ನಿ ಉಳ್ಸಕೊಳ್ಳೊದಕ್ಕೆ ಪ್ರಯತ್ನ ಮಾಡ್ತೀವಿ”ಅಂದ್ರಂತೆ. ಬ್ಯಾಂಡೇಜ್ ಬಿಡ್ಸಕ್ಕಾದ್ರೂ ಡಾಕ್ಟ್ರ್ ಬೇಕಲ್ವ? ಅಲ್ಲಿನ ಆಸೆ ಬಿಟ್ಟು ಅವರು ಹಾಗೆ ಹೊರಗಡೆ ಬರಬೇಕಾದರೆ ಅಲ್ಲಿಯೇ ಕೆಲಸ ಮಾಡ್ತಿದ್ದ ಸೆಕ್ಯೂರಿಟಿ ಅಂಕಲ್ ನನನ್ನ ನೋಡಿ ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ಕರ್ಕೊಂಡು ಹೋಗೋದಕ್ಕೆ ಹೇಳಿದ್ರಂತೆ.

ಆ ಆಸೆಯ ಮೇಲೆ ನನ್ನನ್ನ ಕರ್ಕೊಂಡು ಅಜ್ಜರಕಾಡು ಆಸ್ಪತ್ರೆಗೆ ಬಂದ್ರಂತೆ. ಅಲ್ಲಿ ನನ್ನನ್ನ ತುಂಬಾ ಚೆನ್ನಾಗಿ ಆರೈಕೆ ಮಾಡಿದಾರೆ. ಮೂರು ತಿಂಗಳ ಕಾಲ ಅಲ್ಲೇ ಇದ್ದು ಸ್ವಲ್ಪ ಹುಷಾರಾದ ಮೇಲೆ ಮನೆಗೆ ಬಂದೆ. ನನಗೆ ಎಲ್ಲನೂ ಹೊಸದು ಅನ್ಸೋಕೆ ಶುರು ಆಗಿತ್ತು.

ಸ್ಕೂಲಿಗೆ ಬಂದಾಗ ನನ್ನನ್ನು ಎಲ್ಲರಂತೆ ಕಾಣ್ತಿದ್ರು. ನನ್ನ ಮುಖದಲ್ಲಿ ಸುಟ್ಟ ಕಲೆಗಳು ಹಾಗೆ ಇದ್ರು ಯಾವತ್ತಿಗೂ ನನಗೆ ಅದು ಹೊಸದು ಅಂತ ಅನ್ನಿಸಲೇ ಇಲ್ಲ.

ಅಲ್ಲಿಂದ ನನ್ನ ವಿದ್ಯಾಭ್ಯಾಸ ಮುಗಿದು ಏನಾದ್ರೂ ಸಾಧಿಸ್ಬೇಕು ಅಂತ ಕಾರವಾರದ ಸೀ ಬರ್ಡ ನಲ್ಲಿ ಕೆಲಸ ತಗೋಬೇಕು ಅನ್ನೋದು ನನ್ನ ಆಸೆ ಆಗಿತ್ತು. ಆದರೆ ಅವರು ನನ್ನ ನೋಡಿ “ಸಾರಿ ಮೇಡಮ್ ನಿಮ್ಮ ಮುಖದಲ್ಲಿ ಕಲೆಗಳು ಇರೋದ್ರಿಂದ ಕೆಲಸ ಕೊಡೋದಕ್ಕೆ ಆಗಲ್ಲ” ಅಂತ. ಆಗ್ಲೇ ನನಗನ್ಸಿದ್ದು ಮುಖದ ಅಂದ ತುಂಬಾ ಮುಖ್ಯ. ಚೆನ್ನಾಗಿಲ್ದೇ ಇರೋರ್ಗೇ ಬೆಲೆ ಇಲ್ಲ ಅನ್ಸೋಕೆ ಶುರು ಆಯ್ತು.

ಕೆಲ್ಸ ಮಾಡಬೇಕು ಜೊತೆಗೆ ಏನಾದ್ರೂ ಸಾಧಿಸಬೇಕು ಅನ್ನೋ ಆಸೆ ಕೂಡ ಆದರೆ ನನ್ನ ಮುಖ ನನಗೆ ತುಂಬಾ ಹಿಂಸೆ ಮಾಡ್ತಿತ್ತು. ಹೊಸಬರನ್ನ ಭೇಟಿ ಮಾಡೋದಕ್ಕೇ ಸಾಧ್ಯ ಆಗ್ತಿರ್ಲಿಲ್ಲ. ಏನೋ ಅಂಜಿಕೆ, ಭಯ. ಎಲ್ಲಾದ್ರೂ ನನ್ನ ಮನಸ್ಸಿಗೆ ನೋವು ಮಾಡ್ತಾರೇನೋ ಅಂತ.

ಹಾಗೋ ಹೀಗೋ ಬೆಂಗಳುರಿಗೆ ಬಂದೆ. ನನ್ನ ಅಂಜಿಕೆಯಿಂದ ಯಾವುದೇ ಒಳ್ಳೆ ಸಂಸ್ಥೆಗೆ ಇಂಟರವ್ಯೂವ್ ಹೋಗೋದಕ್ಕೂ ಭಯ. ಹೇಗೋ ಒಂದು ಕಡೆ ಕೆಲ್ಸ ತಗೊಂಡೆ.

ಒಂದಿನ ನಾನು ಬಸ್ಸಿನಲ್ಲಿ ಹೋಗ್ತಿದ್ದೆ ಬಸ್ ತುಂಬಾ ರಶ್ ಇದ್ರಿಂದ ನಾನು ನಿಂತಿದ್ದೆ, ಒಬ್ರು ವಯಸ್ಸಾದ ಅಂಕಲ್ ನನ್ನನ್ನು ಕೂಗ್ತಿದಾರೆ. ಹಿಂದಿರುಗು ನೋಡ್ತಿನಿ ಅವರು ನನ್ನನ್ನ ಕೂಗಿ ಮುಖ ಮುಚ್ಕೊಳ್ಳೊವಂತೆ ಹೇಳ್ತಿದ್ರು. ನನಗೆ ತುಂಬಾ ಭಯ ಆಯ್ತು ಜೊತೆಗೆ ತುಂಬಾ ನಾಚಿಕೆ ಆಯ್ತು. ಸ್ವಲ್ಪ ಮುಂದಿನ ನಿಲ್ದಾಣದಲ್ಲಿ ಅವರು ಇಳಿಬೇಕಿತ್ತು ಅನ್ಸತ್ತೆ. ಅವರು ನನ್ನ ಹತ್ತಿರ ಬಂದು” ನಿಮಗೆ ಹೇಳಿದ್ದು ಕೇಳ್ಸ್ತಾ? ಇನ್ಮೆಲೆ ಮುಖ ಮುಚ್ಕೊಂಡು ಓಡಾಡಿ. ಮಕ್ಕಳೂ ಹೆದ್ರಕೋತಾರೆ. ನಮಗೂ ಗಾಬರಿ ಅನ್ಸತ್ತೆ” ಅಂದ್ರು.

ಅದನ್ನ ಕೇಳಿದ ನನಗೆ ಭೂಮಿ ಬಾಯ್ಬಿಟ್ಟು ನನ್ನನ್ನ ನುಂಗ್ಬಾರ್ದಾ ಅನ್ಸ್ತು. ತುಂಬಾನೇ ಅಳು ಬಂತು. ಬಸ್ಸಿನಲ್ಲಿ ಅಳೊಕಾಗಲ್ಲ ಅಂತ ಮುಂದಿನ ಸ್ಟಾಪಲ್ಲೇ ಇಳ್ಕೊಂಡು ಮನೆಗೆ ನಡ್ಕೊಂಡು ಬಂದೆ.

ನಾನು ಹೋಗಿದ ಕಡೆಲೇಲ್ಲ ನನ್ನ ವಿಚಿತ್ರವಾಗಿ ನೋಡೋರು. ನೋಡಿದ ಕೂಡ್ಲೇ ಮುಖ ತಿರ್ಗ್ಸೋರು. ಇದ್ನೆಲ್ಲ ನೋಡಿದಾಗ ನಾನು ಊರಿಗೆ ಹೋಗೋದೇ ಒಳ್ಳೆದು. ಇಲ್ಲಿ ನನಗೆ ಬೆಲೆ ಇಲ್ಲ ಅನ್ಸ್ತಿತ್ತು. ಆದರೂ ನನ್ನ ಸಾಧನೆ ಮಾಡ್ಬೇಕು ಅನ್ನೋ ಗುರಿ ನನ್ನನ್ನ ಹಿಂದೆ ಸರಿಸ್ಲಿಲ್ಲ.

ಮೊದ್ಲಿಂದಲೂ ನಟನೆಯಲ್ಲಿ ಒಲವಿದ್ದ ನನಗೆ ಎಲ್ಲವೂ ಮೂಲೆ ಗುಂಪಾಗ್ತಿದೆ ಅನ್ಸೋಕೆ ಶುರು ಆಯ್ತು.

ನನ್ನೊಬ್ಬ ಗೆಳಯ ರಂಗಭೂಮಿಯಲ್ಲಿರೋ ಕಾರಣ ನನ್ನನ್ನು ಯಾವಾಗ್ಲೂ ಕರಿತಿದ್ದ. ನನ್ನ ಪ್ರಶ್ನೆ ಒಂದೇ ಅವನಿಗೆ ಹಿಂಸೆ ಮಾಡ್ತಿತ್ತು. “ಚೆನ್ನಾಗಿಲ್ದೇ ಇರೋರ್ನ ತಗೋತಾರಾ” ಅಂತ. ಆದರೆ ಆವನು ಯಾವಾಗ್ಲೂ ಗದರಿಸುತ್ತಿದ್ದ. “ನಿಂಗೆ ತಲೆ ಕೆಟ್ಟಿದೆ ಅದಕ್ಕೆ ಹೀಗೆಲ್ಲಾ ಮಾತಾಡ್ತಿದಿಯ ರಂಗಭೂಮಿಗೆ ಬೇಕಾಗಿರೋದು ಧೈರ್ಯ, ಒಳ್ಳೆಯ ಪ್ರತಿಭೆ ಅಷ್ಟೇ ಅಂತ. ಸರಿ ಅಂತ ಏನೋ ಧೈರ್ಯ ಮಾಡ್ಕೊಂಡು ಹೋದ್ರೆ ಅಲ್ಲಿನ ಪ್ರಪಂಚನೇ ಸುಂದರ. ನಾನ್ಯಾರೋ ಹೊಸಬಳು ಆನ್ನೋ ಭಾವನೇನೇ ಅವರಿಗಿಲ್ಲ. ಅವರು ತೋರಿಸಿದ ಆಸರೆ, ಪ್ರೀತಿ, ಆದರ, ನನ್ನ ಜೀವನದಲ್ಲಿ ಎಲ್ಲೂ ಸಿಕ್ಕಿಲ್ಲ ಸಿಗೋದು ಇಲ್ಲ ಆನ್ಸತ್ತೆ.

ನನ್ನ ಮನಸ್ಸಿಗೆ ಬೆಲೆ ಕೊಡೋ ಒಳ್ಳೆ ಸಂಸ್ಥೆ ಸೇರಿದ್ದೇನೆ. ಸಾದನೆಯ ಹಾದಿ ದೂರವಿಲ್ಲ. ಜಿವಕ್ಕೆ ಜೀವ ಕೊಡೋ ರಂಗಭೂಮಿ ನನ್ನ ಜೊತೆ ಇದೆ. ನನಗೆ ನೋವಾದ್ರೆ ಸಮಾಧಾನ ಮಾಡಿ ನನ್ನ ಜೊತೆ ಅಳೋದಕ್ಕೆ ಬೆಂಗಾವಲಾಗಿ ನನ್ನ ಗೆಳೆಯರಿದ್ದಾರೆ. ಇಷ್ಟು ಸಾಕು ನನ್ನ ಜೀವನಕ್ಕೆ.

ಮುಖಕ್ಕೆ ಬೆಲೆ ಕೊಡೋ ಮನಸ್ಸುಗಳಿಗೆ ನಾನು ಹೇಳೋದಿಷ್ಟೇ “ಜೀವನದಲ್ಲಿ ನಮ್ಮ ದೇಹಕ್ಕಿಂತ ಬೆಲೆ ಬಾಳೋದು ಮತ್ತೊಂದಿಲ್ಲ. ಆದರೆ ಅದೇ ದೇಹಕ್ಕೆ ಜೀವನ ಪೂರ್ತಿ ಗ್ಯಾರಂಟಿ ಇಲ್ಲ ಅದು ಯಾವಾಗ ಬೇಕಾದ್ರು ಬಿದ್ದು ಹೋಗಬೋದು. ಅಂದ್ಮೆಲೆ ಸೌಂದರ್ಯ ಅನ್ನೋದು ಎಷ್ಟು ಗ್ಯಾರಂಟಿ ನೀವೇ ಹೇಳಿ. ನಿಮ್ಮ ಸೌಂದರ್ಯ ನಿಮ್ಮ ಜೊತೆ ಬರೋದು ನಮ್ಮ ಯೌವ್ವನದಲ್ಲಿ ಮಾತ್ರ ಆಮೇಲೆ ನೀವು ಬದುಕಬೇಕಾಗಿರೋದು ಒಳ್ಳೆ ಮನಸ್ಸಿನ ಜೊತೆ ಹೊರತು. ಸೌಂದರ್ಯದ ಜೊತೆ ಅಲ್ಲ.

“ಕಣ್ಣಿನ ಮಾತು ಕೇಳಬೇಡಿ, ಮನಸ್ಸಿನ ಮಾತಿಗೆ ಕಿವಿಗೊಡಿ”

ವಿ‌ನುತಾ ವಿಶ್ವನಾಥ್…”

Original Post by vinutha

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..