726

ಟ್ರೈನ್ ‘ಮಿಸ್’ ಆದಾಗ…!

ನನಗಿನ್ನೂ ನೆನಪಿದೆ ಅವತ್ತು ಜೂನ್ ತಿಂಗಳ ಕೊನೇ ವಾರ.ಸೆಮ್ ಎಕ್ಸಾಮ್ ಮುಗ್ಸಿ ಮನೆ ಕಡೆ ಹೋದೋಳು ಕಾಲೇಜು ಆರಂಭ ಆಗಿ ಹತ್ತು ದಿನ ಆದ್ರೂ ಬೆಂಗಳೂರಿನ ಕಡೆ ತಲೆ ಹಾಕಿನೂ ಮಲಗಿರ್ಲಿಲ್ಲ..ಆದ್ರೆ ಜುಲೈ ಒಂದಕ್ಕೆ ಎಲ್ಲ್ರೂ ಬರ್ಲೇಬೇಕು ಅನ್ನೋ ಒಂದು ಫೋನ್ ಕಾಲ್ ಕಾಲೇಜಿಂದ ಬಂದ್ಮೇಲೆ,ನಾನು ಇರ್ತೀನಿ ಅಂದ್ರೂ,ಅಮ್ಮ “ಬೇಡ ಮತ್ತೆ ಮುಂದಿನ ತಿಂಗಳು ಬರ್ಬೋದು,ಚನ್ನಾಗಿ ಓದ್ಬೇಕಲ್ಲಾ, ನೀನು ಹೊರಡು” ಅಂದ್ಲು.ಸ್ವಲ್ಪ ಬೇಜಾರ್ ಅನ್ಸಿದ್ರೂ ಅಮ್ಮ ಹೇಳೋದು ಸರಿ ಅನ್ಸಿ ಜೂನ್ 30ಕ್ಕೆ ಹೊರಡೋದು ಅಂತ ಫಿಕ್ಸ್ ಆಯ್ತು..
 
ಹೇಳಿ ಕೇಳಿ ಮಳೆಗಾಲ,ಮಲೆನಾಡಲ್ಲಿ ಮಳೆಗಾಲ ಅಂದ್ರೆ ಕೇಳ್ಬೇಕಾ…ಹಿಗ್ಗಾ-ಮುಗ್ಗಾ ಮಳೆ,ತುಂಗೆ ತುಂಬಿ ಹರೀತಾ ಇದ್ಲು…
 
“ಈ ಸಲ ರಾತ್ರಿ ಬಸ್ಸಲ್ಲಿ,ಈ ಮಳೇಲಿ,ಒಬ್ಳೇ ಹೋಗೋದೆಲ್ಲ ಬೇಡ.ಬೆಳಗ್ಗೆ ಬೇಗ ಶಿವಮೊಗ್ಗ ತನಕ ಹೋಗಿ ಅಲ್ಲಿಂದ ಬೆಳಿಗ್ಗೆ 11ಕ್ಕೆನೇ ಬೆಂಗಳೂರಿಗೆ ಟ್ರೈನ್ ಇದ್ಯಂತೆ,ಅದ್ಕೇ ಹೋಗು.ಹಾಸ್ಟೆಲ್ ಹೋಗಿ ರಾತ್ರಿ ಪೂರ್ತಿ ನಿದ್ದೆ ಮಾಡಿ ,ಬೆಳ್ಗೆ ಕಾಲೇಜಿಗೆ ಹೋಗ್ಬಹುದು” ಅನ್ನೋ ಅಮ್ಮನ ಮಾತಿಗೆ ಮರು ಮಾತಾಡ್ದೇ ಒಪ್ಪಿದ್ದೆ..
 
 
ಅಮ್ಮ ಮತ್ತೆ ಅಜ್ಜಿ ಸೇರಿ ನನ್ಗೆ ಅಂತ ಮಾಡಿದ ತಿಂಡೀನೇ ಒಂದ್ ಬ್ಯಾಗ್ ಆಗಿತ್ತು.ಜೊತೆಗೇ ನನ್ನದೆರೆಡು ಮಣಭಾರದ ಬ್ಯಾಗ್ ಹೊತ್ತು ಸದ್ಯಕ್ಕೆ ಮನೆಗೊಂದು ಬೇಸರದ ವಿದಾಯ ಹೇಳಿ,ಮನಸ್ಸಿಲ್ಲದ ಮನ್ಸಲ್ಲಿ ಶಿವಮೊಗ್ಗದ ಬಸ್ಸ್ ಹತ್ತಿದ್ದೆ..
 
ನಿಜ ಹೇಳ್ಬೇಕು ಅಂದ್ರೆ ಬೆಂಗಳೂರಿಗೆ ಹಗಲಿನಲ್ಲಿ ಪ್ರಯಾಣ ಬೆಳೆಸಿದ್ದು ಅದೇ ಮೊದ್ಲು.ಶಿವಮೊಗ್ಗ ಹತ್ರ ಆಗ್ತಾ ಇದ್ದಂಗೆ ಮನೆಯಿಂದ ಹೊರ್ಟಿರೋ ಬೇಸರ ಸ್ವಲ್ಪ ಮಟ್ಟಿಗೆ ತಿಳಿ ಆಗ್ತಾ ಇತ್ತು..ಎಲ್ಲ್ರೂ ಜೀವನವೂ ಹೀಗೇನೇ,ಒಂದೇ ಕಡೇ ಇರೋದಿಲ್ಲ,ನಿಂತಲ್ಲೇ ನಿಲ್ಲೋದೂ ಇಲ್ಲ,ಯಾವಾಗ್ಲೂ ಸಾಗ್ತಾನೇ ಇರ್ಬೇಕು ಅನ್ನೋದು ಅರ್ಥ ಆಗಿತ್ತು..
 
ಬಸ್ಸ್ ಸ್ವಲ್ಪ ತಡವಾಗಿ ಶಿವಮೊಗ್ಗ ತಲುಪಿದ್ರಿಂದ ಗಡಿಬಿಡಿಯಿಂದ ಆಟೋ ಹಿಡಿದಿದ್ದೆ…ಅರ್ಧ ದಾರೀಲಿ ಹೋಗ್ತಾ ಇದ್ದಾಗ “ಅಯ್ಯೋ ಇನ್ನೊಂದ್ ಬ್ಯಾಗ್ ಎಲ್ಲಿ,ಡ್ರೈವರ್ ಸೀಟ್ ಹತ್ರ ಇಟ್ಟಿದ್ನಲ್ಲ,ಗಡಿಬಿಡೀಲಿ ಮರೆತು ಬಿಟ್ಟೆ” ಅಂತ ನೆನಪಾಗಿದ್ದೇ ತಡ ಬಸ್ಸ್ ಇನ್ನೂ ಅಲ್ಲೇ ಇರತ್ತೆ,ತಂದು ಬಿಡೋಣ ಅಂತ ಆಟೋ ತಿರುಗಿಸೋಕೆ ಹೇಳ್ಬಿಟ್ಟೆ..ನನ್ನ ಪುಣ್ಯಕ್ಕೆ ಬಸ್ಸ್ ಅಲ್ಲೇ ನಿಂತಿತ್ತು.ಬ್ಯಾಗ್ ತಗೊಂಡು ಮತ್ತದೇ ಆಟೋ ಹತ್ತಿದ್ದೇ ಸರಿ ಮಳೆ ಶುರುವಾಯ್ತು…ಹೇಗೋ ಕಷ್ಟ ಪಟ್ಟು ರೈಲ್ವೇ ಸ್ಟೇಷನ್ ಮೆಟ್ಟಿಲು ಹತ್ತಿದ್ದೊಂದೇ ಗೊತ್ತು.ಆ ಕಡೇ ಟ್ರೈನ್ ಹೊರಟು ಬಿಟ್ಟಿತ್ತು.ಸಿನಿಮಾದಲ್ಲಿ ತೋರಿಸೋ ಹಾಗೆ ಇರೋ ಮೂರು ಬ್ಯಾಗ್ ಜೊತೆ,ಟಿಕೆಟ್ ಇಲ್ದೇ, ಓಡಿಕೊಂಡ್ ಹೋಗಿ ಟ್ರೈನ್ ಹತ್ತೋ ಹರಸಾಹಸ ಈ ಟೈಮ್ನಲ್ಲಿ ಮಾಡೋದು ಬೇಡ ಅಂತನೂ ಅನ್ಸ್ತು..ಕಣ್ಣ್ ಮುಂದೇನೇ ರೈಲು ಮಿಸ್ಸಾಗಿತ್ತು..ಸಂಜೆ ತನಕ ಕಾದು, ಬರೋ ಟ್ರೈನ್ಗೆ ಹೋದ್ರೆ ಬೆಂಗಳೂರು ತಲುಪೋದು ಮಧ್ಯರಾತ್ರಿ ಆಗಿಬಿಡತ್ತೆ,ಅವೆಲ್ಲ ರಿಸ್ಕ್ ಬೇಡ,ಇವಾಗ ಏನ್ ಮಾಡೋದು?ಬಿಡದೇ ಸುರೀತಾ ಇರೋ ಮಳೆ ಜೊತೆಗೆ ಸಣ್ಣಗೆ ಅಳು,ಏನೋ ಬೇಸರ,ಕಾಡುವ ಒಂಟಿತನ..ನಿಂತಲ್ಲೇ ಒಂದರ್ಧ ಗಂಟೆ ಯೋಚ್ನೆ ಮಡ್ತಾ ಇದ್ದೆ..ಅಮ್ಮಂಗೆ ಹೇಳಿದ್ರೆ ವಾಪಾಸ್ ಮನೆಗೆ ಬಂದ್ಬಿಡು ಅಂತಾಳೆ.ನಾನು ಹೊರಟಿದ್ದಾಗಿದೆ, ಇನ್ನೇನು ವಾಪಾಸ್ ಹೋಗ್ಲಿ..!! ಆಗಿದ್ದಾಗ್ಲಿ ಅಂತ ಮತ್ತೆ ಆಟೋ ಹಿಡಿದು ಬಸ್ಸ್ ಸ್ಟಾಪ್ ಬಂದೆ.ಕೆಲ ಹೊತ್ತು ಅಲ್ಲಿ-ಇಲ್ಲಿ ಪೇಚಾಡಿ,ಮಳೆ ನಿಂತ ಮೇಲೆ ಬೆಂಗಳೂರಿಗೆ ಹೋಗೋ ಬಸ್ಸ್ ಹತ್ತಿ, ಕಿಟಕಿ ಪಕ್ಕದ ಸೀಟ್ ಹಿಡಿದು ದೊಡ್ಡದೊಂದು ನಿಟ್ಟುಸಿರು ಬಿಟ್ಟಿದ್ದೆ..ಪ್ರತೀ ಜರ್ನಿಯನ್ನೂ ತುಂಬಾ ಇಷ್ಟ ಪಡೋ ನನ್ಗೆ ಟ್ರೈನ್ ಮಿಸ್ ಮಾಡಿಕೊಂಡು ಒದ್ದಾಡಿದ್ದು ಬೇಜಾರಾಗಿತ್ತು..ಬಸ್ಸ್ ಹೊರಟಿದ್ದೇ ಕಿಟಕಿ ತೆಗ್ದು ಕಿವಿಗೆ ಈಯರ್ ಫೋನ್ ಸಿಕ್ಕಿಸಿದಾಗ ಬರ್ತಾ ಇದ್ದ ಭಾವಗೀತೆ ನನ್ಗೆ ಸಮಾಧಾನ ಮಾಡಿತ್ತು..ಮನ್ಸು ಸಣ್ಗಗೆ ನಗ್ತಾ ಇತ್ತು..ಬೆಂಗಳೂರು ನನ್ಗೆ ನೆಮ್ಮದಿಯ ಸ್ವಾಗತ ಕೋರಿದಂತೆ ಅನ್ಸಿ ಬಿಡ್ತು…
 
 
ಒಂದೊಂದ್ ಸಲ ಈ ಮರೆವು,ಕೋಪ,ಗಡಿಬಿಡಿ ಎಲ್ಲವೂ ಸೇರಿ ನಮ್ಮನ್ನ ಗೇಲಿ ಮಾಡಿಬಿಡ್ತಾವೆ..ಜೀವನಕ್ಕೆ ಇದನ್ನ ಹೋಲಿಸಿ ನೋಡಿದ್ರೆ,ಟ್ರೈನ್ ಮಿಸ್ಸಾಯ್ತು ಅಂತ ಹೆದರಿ ಕೂರೋ ಬದಲು ಬೇರೇನು ದಾರಿ ಇದೆ ಅಂತ ಹುಡುಕೋದೇ ಒಳ್ಳೇದು ಅನ್ಸುತ್ತೆ..
 
ಹಾಗೇ ಲೈಫ್ನಲ್ಲಿ  ಏನೇ ಮಿಸ್ ಆಗಿದ್ರೂ ಚಿಂತೆ ಮಾಡ್ಕೊಂಡು ಅಳ್ತಾ ಕೂರೋದು ಬಿಟ್ಟು,ಮಿಸ್ಸಾಗಿರೋದನ್ನ ಪಡೆದುಕೊಳ್ಳೋಕೆ ಬೇರೆ ದಾರಿ ಹುಡುಕಿ ಬಿಟ್ರೆ ಗೆಲುವನ್ನೋದು ನಮ್ಮ ಜೊತೆ ಇದ್ದೇ ಇರತ್ತೆ. ಆಗ ಜೀವನವೂ ಖುಷಿಯಾಗಿರತ್ತೆ…ಏನಂತೀರಾ..?

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..