- By ಮಂಜುನಾಥ್ ಹಿಲಿಯಾಣ
- Wednesday, May 24th, 2017
ಮಾನಸಿಕ ಸ್ವಾಸ್ಥ್ಯವನ್ನು ಸಂಪೂರ್ಣವಾಗಿ ಕಳೆದುಕೊಂಡು ಈ ಸಮಾಜದಿಂದ “ಹುಚ್ಚ” ಎಂದು ಕರೆಸಿಕೊಂಡು ಎಲ್ಲರಿಂದಲೂ ದೂರವಾಗಿ ನರಕದ ಬದುಕನ್ನು ನೆಡೆಸುತ್ತಿರುವ ಅಸಂಖ್ಯ ಮಂದಿಯ ಬಗ್ಗೆ ಕರುಣೆ ತೋರಿಸುವ, ಅವರ ಸಮಸ್ಯೆಯನ್ನು ಅರಿಯುವ, ಆಲಿಸುವ, ಚಿಕಿತ್ಸೆ ಕೊಡಿಸುವ ಮಹತ್ವದ ದಿನ!!
ಎಷ್ಟೂ ಸಾರಿ ನಾವು ಬಸ್ಸಿನಲ್ಲಿ ಆಚೀಚೆ ಪಯಣಿಸುವಾಗ, ಬಸ್ ನಿಲ್ದಾಣಗಳಲ್ಲಿ ನಿಂತಾಗ ನಮ್ಮೆದುರು ಹಾದು ಹೋಗುವ ಚಿತ್ತ ವೈಕಲ್ಯದ ವ್ಯಕ್ತಿಗಳನ್ನು ನೋಡಿದಾಗ “ಮರ್ಲ, ಹುಚ್ಚ” ಎಂಬ ನಿರ್ಲಿಪ್ತ ಭಾವವಷ್ಟೇ ನಮ್ಮೂಳಗೆ ಮೂಡಿ ಮರೆಯಾಗುತ್ತದೆ.. ಉದಾಸೀನದ ನಗು ಚೆಲ್ಲಿ ನಾವು ಅವರನ್ನು ಮರೆಯುತ್ತವೆ.!
ಹೀಗಾಗಕೂಡದು.. ಮೆದುಳಿನ ವಿಪರೀತ ನರ ದೌರ್ಬಲ್ಯಗಳಿಂದ ಈ ಸಮಸ್ಯೆ ಕಂಡು ಬರುತ್ತದೆ. ಸರಿಯಾದ ಸಮಯದಲ್ಲಿ ಸರಿಯಾದ ಚಿಕಿತ್ಸೆ, ಮನೆಯವರ ಪ್ರೀತಿ ಮಮತೆ ದೊರಕಿದರೆ ಅವರು ಕೂಡ ಮತ್ತೆ ಮೊದಲಿನಂತಾಗಲು ಸಾಧ್ಯ.
ಹಿಂದೊಂದು ಕಾಲವಿತ್ತು. ಹಿಂದೆಲ್ಲಾ ಕುಟುಂಬದ ಸದಸ್ಯನಿಗೆ ಈ ಸಮಸ್ಯೆ ಬಂದಾಗ ಬೇರೆ ಯಾವುದೇ ಪರಿಹಾರ ದೊರಕಿಸಿಕೊಳ್ಳಲು ಅವರಿಗೆ ತಿಳಿಯುತ್ತಿರಲಿಲ್ಲ. ಅದಕ್ಕೆ ದೈವ ಭೂತದ ಉಪದ್ರ ಎಂಬ ಪಟ್ಟ ಕಟ್ಟಿ, ಸರಪಳಿ, ಚೈನುಗಳಿಂದ ಬಂಧಿಸಿ ಪ್ರಾಣಿಗಳ ಹಾಗೇ ಅವರನ್ನು ಹಿಂಸಿಸಿ ನರಕ ಮಾಡಲಾಗುತಿತ್ತು.
ಆದರಿವತ್ತು ಕಾಲ ಬದಲಾಗಿದೆ. ಸ್ಕಿಜೋಪ್ರೀನಿಯಾಕ್ಕೆ ಚಿಕಿತ್ಸೆಗಳು ಲಭ್ಯವಿದೆ. ಆರಂಭದಲ್ಲೇ ಈ ಸಮಸ್ಯೆಯನ್ನು ಗುರುತಿಸಿ ಮನೋವೈದ್ಯರನ್ನು ಕಂಡು ಸರಿಯಾದ ಚಿಕಿತ್ಸೆ ಪಡೆದರೆ ಖಂಡಿತಾ ವಾಸಿಯಾದಿತು.
ನಮ್ಮಲ್ಲಿ ಪ್ರೇಮಿಗಳ ದಿನ, ಅಮ್ಮನ ದಿನ, ಅಪ್ಪನ ದಿನವೆಂಬ ಅದೆಷ್ಟೂ ಅಸಂಬಂಧ ದಿನಗಳಿದೆ. ಆದರೆ ಇಂದು ಬಹುಮುಖ್ಯವಾದ ವಿಶ್ವ ಸ್ಕಿಜೋಪ್ರೀನಿಯಾ ದಿನ. ಇದೊಂದು ಮಾನಸಿಕ ಸಮಸ್ಯೆ ಎಂಬ ಅರಿವೆ ಇರದ ಅದೆಷ್ಟೂ ಮಂದಿ ನಮ್ಮ ನಡುವೆ ಇದ್ದಾರೆ. ಹಾಗಾಗಿ ಈ ಸಮಸ್ಯೆಯ ಬಗ್ಗೆ ಅರಿಯುವ, ಈ ಸಮಸ್ಯೆ ಇರುವವರ ಬಗ್ಗೆ ಅಂತಃಕರಣದ ಕಾಳಜಿ ತೋರುವ ಮಹತ್ವದ ದಿನ ಇಂದು.
ಈ ಸಮಾಜ ವೈರುಧ್ಯಗಳ ಸಂತೆ. ಇಲ್ಲಿರುವ ಪ್ರತಿಯೊಬ್ಬರಿಗೂ ಬದುಕುವ ಹಕ್ಕಿದೆ. ಈ ಸಮಸ್ಯೆ ಇರುವವರ ಬಗ್ಗೆ ಒಂದಿನಿತು ಪ್ರೀತಿ, ಕರುಣೆ, ಮಮತೆ ತೋರಿಸಿದರೆ, ನಮ್ಮ ಮನಸ್ಸು ಅವರ ಬಗ್ಗೆ ಚೂರು ಮಿಡಿದರೆ, ನೊಂದರೆ ಈ ದಿನಕ್ಕೊಂದು ಅರ್ಥ ಬಂದಿತು..ಏನಂತೀರಿ??