359

ನಮ್ಮೊಳಗಿನ ತಲ್ಲಣಗಳನ್ನು ಬಿಚ್ಚಿಡುವ “ಯುಗಾದಿ”.

“ಇನ್ನೇನು ಎಲ್ಲೆಲ್ಲೂ ಬೆಳಕೇ ಬೆಳಕು ಎಂಬ ಭಾವನೆಯನ್ನು ಮೂಡಿಸಿ, ಆ ವಾಹನಗಳು ಮುಂದೆ ಹೋಗಿಬಿಡುತ್ತಿದ್ದವು. ಬೆಳಕು ಕಣ್ಮರೆಯಾದ ತಕ್ಷಣ ಮೂಡಿದ ಕತ್ತಲೆ, ಮೊದಲಿದ್ದ ಕತ್ತಲೆಗಿಂತಲೂ ಭೀಕರವೆನಿಸುತ್ತಿತ್ತು.” ಹತಾಶೆ ನಿರಾಶೆಯ ಬದುಕಿಗೆ ಎಲ್ಲೋ ಮೂಡುವ ಹುಸಿಭರವಸೆಯ ಆಶಾಕಿರಣ ಅರೆಕ್ಷಣ ಆಹ್ಲಾದದ ಅನುಭವ ನೀಡುತ್ತೆ. ಇನ್ನೇನು ಕಷ್ಟಗಳೆಲ್ಲ ತೀರಿತು ಅಂತಿರುವಾಗ ಮತ್ತೊಮ್ಮೆ ಬದುಕು ಮೂಲಸ್ಥಿತಿಗೆ ಮರಳುತ್ತೆ ನೋಡಿ. ಆಗಿನ ವಾಸ್ತವ ಈ ಹಿಂದಿನ ದಿನಗಳಿಗಿಂತ ಅಸಹನೀಯವಾಗಿರುತ್ತದೆ. ಮುಖಪುಟದಲ್ಲೆ ಇಂಥ ಸಾಲುಗಳಿಂದ first impression create ಮಾಡುವ ಯು.ಆರ್.ಅನಂತಮೂರ್ತಿ ಪ್ರಶಸ್ತಿ ಮತ್ತು ವರ್ಧಮಾನ ಉದಯೋನ್ಮುಖ ಪ್ರಶಸ್ತಿಗೆ ಭಾಜನವಾದ ಕಥಾಸಂಗ್ರಹ ವಸುಧೇಂದ್ರ ಅವರ “ಯುಗಾದಿ.” ಒಟ್ಟು ೨೪ ಕಥೆಗಳಿದ್ದು ಅದರಲ್ಲಿ ಹನ್ನೆರಡು ಕಥೆಗಳು ಒಂದೇ ಪುಟದಷ್ಟಿವೆ. ಆದರೆ ಚಿಕ್ಕದರಲ್ಲಿ ಹೇಳಬೇಕಾದನ್ನು ಹೇಳಿ ಮುಗಿಸುತ್ತವೆ.

ಪ್ರಥಮ ಕಥೆ “ಯುಗಾದಿ” ಗೋಪಣ್ಣ ಮಾಸ್ತರ ಮತ್ತು ಅವರ ಮಗನ ಮಧ್ಯದ ಭಾವುಕತೆ ಮತ್ತು ವಾಸ್ತವಿಕತೆಯ ನಡುವಿನ ಸಂಘರ್ಷದಂತಿದೆ. ಯಾಂತ್ರಿಕ ಜಗತ್ತಿನ ನಂಟಿಗೆ ಬಿದ್ದ ಪ್ರಹ್ಲಾದನಿಗೆ ಸಂಬಂಧಗಳ ಪರಿವೇ ಇಲ್ಲದ ಬದುಕು ರೂಢಿಯಾಗಿಬಿಟ್ಟಿರುತ್ತದೆ ಅಥವಾ ಅಂಥ ಬದುಕಿಗೆ ಹೊಂದಿಕೊಂಡು ಬಿಟ್ಟಿರುತ್ತಾನೆ. ಆದರೆ ಕಥೆಯ ಕೊನೆಗೆ ಮಾಸ್ತರರ ಕೈಯಲ್ಲಿ ಕಲಿತ ರಾಧಾ ಎಂಬ ವಿದ್ಯಾರ್ಥಿನಿಯ ಗುರುಪ್ರೇಮದ ಮುಂದೆ ಪ್ರಹ್ಲಾದ ಹಣ ಕ್ಷುಲ್ಲಕವಾಗಿ ಬಿಡುತ್ತದೆ. ಹೆಂಡತಿಯ ಹೆರಿಗೆ ಬೆನೆಯ ಸಮಯ ನರ್ಸ್ ರೂಪದಲ್ಲಿ ಅವತರಿಸುವ ರಾಧಾಳ ಪಾತ್ರ “ನಾವು ಇಲ್ಲಿಯವರೆಗೆ ಗಳಿಸಿದ್ದೇನು ?ಪ್ರೀತಿಯನ್ನೇ ಅಥವಾ ಬರೀ ಸಂಪತ್ತನ್ನೇ?” ಎಂದು ಓದುಗನನ್ನೇ ಅರೆಗಳಿಗೆ ಆತ್ಮವಿಮರ್ಶೆಗೆ ಹಚ್ಚುತ್ತದೆ. ಇದೇ ರೀತಿ ಸಾಪ್ಟ್ ವೇರ್ ಉದ್ಯೋಗಿಗಳ ನಿರ್ಭಾವುಕ ಬದುಕು ಮತ್ತು ಆ ಬದುಕಿಗೆ ತಕ್ಕನಾಗಿ ಬದಲಾಗಬೇಕಾದ ಅನಿವಾರ್ಯತೆ ಅದರ ಮಧ್ಯ ಅವರ ವೈಯಕ್ತಿಕ ಬದುಕಿಗೆ ಬೀಳುವ ಪೆಟ್ಟುಗಳನ್ನು “ಹೆಡ್ ಹಂಟರ್”, “ಕಣ್ತೆರದು ನೋಡು ಗೆದ್ದಲು ಮರ ಕೆಡವಲಿದೆ”, “ನಮ್ಮ ನಮ್ಮೊಳಗೆ” ಕಥೆಗಳು ಕಟ್ಟಿಕೊಡುತ್ತವೆ. “ಅಡತಡೆಗೆ ಕಂಗೆಡದೆ ನಡೆ” ಎಂಬ ಕಥೆ ಇಂತದ್ದೇ ಸಾಪ್ಟ್ ವೇರ್ ಉದ್ಯೋಗಿಯು ಬದುಕಿನ ಸವಾಲನ್ನು ಗೆದ್ದುಬರುವ ಕಥೆಯನ್ನು ಹೇಳುತ್ತದೆ.

“ಕಣ್ತೆರೆದು ನೋಡು ಗೆದ್ದಲು ಮರ ಕೆಡವಲಿದೆ” ಕಥೆಯಲ್ಲಿ ಬರುವ ಮೋಹನ ಎಂಬ ಪಾತ್ರ “ಪರಾಧೀನ” ಎಂಬ ಕಥೆಯ ವೆಂಕಣ್ಣಾಚಾರ್ಯರ ಪಾತ್ರಗಳು ತಮ್ಮದಲ್ಲದ ಕ್ಷೇತ್ರಕ್ಕೆ ಬಂದು ಒದ್ದಾಡುವ ಜನರ ಬಗ್ಗೆ ಮತ್ತು ಅವರ ಮೂರ್ಖತನದ ಬಗ್ಗೆ ತಿಳಿ ಹೇಳುತ್ತವೆ. ವೃತ್ತಿಯಲ್ಲೇ ಆಗಿರಲಿ ಪ್ರವೃತ್ತಿಯಲ್ಲೇ ಆಗಿರಲಿ ನಮಗೆ ಪರಿಣಿತ ಕ್ಷೇತ್ರ ಆಯ್ದುಕೊಳ್ಳದೇ ಇದ್ದರೆ ಬದುಕು ಅವಳಿ ದೋಣಿಯ ಪಯಣದಂತೆ ಯಾವ ದಡವೂ ಸೇರಲಾರದೇ ಜಡವಾಗಿ ಬಿಡುತ್ತದೆ. ಎಲ್ಲವನ್ನೂ ಮಾಡಿಬಿಡಬಲ್ಲೇ ಎಂಬ ವೆಂಕಣ್ಣಾಚಾರ್ಯರ ಹಾಗೆ ಆಗಿದ್ದೆಲ್ಲವೂ ನನ್ನಿಂದಲೇ ಅನ್ನುವ ಮತ್ತೊಂದು ಪಾತ್ರ ಅವತರಿಸುತ್ತದೆ ಅದೇ “ಮಂಗಳಾರತಿ ಗೋಪಣ್ಣ”ನದು. ಪ್ರಾಕೃತಿಕ ಕ್ರಿಯೆಯಾದ ಮಳೆಯನ್ನು ತಡೆಹಿಡಿಯಬಲ್ಲ ಶಕ್ತಿ ತನ್ನ ಮಂಗಳಾರತಿಗೆ ಮಾತ್ರವಿದೆ ಅಂದುಕೊಂಡ ಗೋಪಣ್ಣನ ಕಥೆ ನಗಿಸುತ್ತಲೇ ಸಾಗುತ್ತದೆ. ಅಂತ್ಯದಲ್ಲಿ “ಕಾಸಿಂ ಸಾಬ”ರ ದಿಢೀರ್ ಸಾವಿನೊಂದಿಗೆ ಬದುಕಿನ ನಶ್ವರತೆಯನ್ನು ಸರ್ವಶಕ್ತನ ಮುಂದೆ ನಮ್ಮದೇನು ಇಲ್ಲವೆಂಬ ಪರಮ ಸತ್ಯವನ್ನು ಹೇಳಿ ಹೋಗುತ್ತದೆ. “ಅಪಸ್ವರದಲ್ಲೊಂದು ಆರ್ತನಾದ”, “ಹುಲಿಗೆ ಕಾಡೇ ರಕ್ಷೆ, ಕಾಡಿಗೆ ಹುಲಿಯೇ ರಕ್ಷೆ ” ,”ಪಾರ್ಥೇನಿಯಂ ” ಕಥೆಗಳು ಮಧ್ಯಮ ವರ್ಗದ ಕುಟುಂಬಗಳಲ್ಲಿನ ಕಷ್ಟಗಳು, ಅಲ್ಪತೃಪ್ತಿ ,ಆಸೆ, ಕನಸುಗಳನ್ನು ಹೇಳುತ್ತವೆ. ಅಂಥ ಕಷ್ಟಸಹಿಷ್ಣು ಕುಟುಂಬದ ಸದಸ್ಯರ ನಡುವಿನ ಭಾಂದವ್ಯದ ಗಟ್ಟಿತನವನ್ನೂ ಸೂಚಿಸುತ್ತವೆ. ಮಂಜಿ ಅವರಮ್ಮ, ಅಕ್ಕನಿಗೆ ಅನುಕಂಪದಾಧಾರದ ನೌಕರಿಗಾಗಿ ತಿರುಗಾಡುವ ತಮ್ಮ, ಮುಗ್ಧ ತಂದೆ ಗಟ್ಟಿಗಿತ್ತಿ ತಾಯಿಯ ಪಾತ್ರಗಳು ಬಹುಕಾಲ ಮನಸಲ್ಲೇ ಉಳಿಯುವ ಪಾತ್ರಗಳಾಗಿವೆ.ಸಂಗ್ರಹದ ಕೊನೆಯಲ್ಲಿ ಬರುವ “ಬೇರೆನಿಲ್ಲ ಒಂಚೂರು ಪ್ರೀತಿ” ಎಂಬ ಕಥೆ ಬದುಕು ಬಗ್ಗಡವಾದಾಗ ಮನುಷ್ಯ ಬೊಗಸೆ ಪ್ರೀತಿಗೆ ಮತ್ತು ನಾಲ್ಕು ಭರವಸೆಯ ಮಾತುಗಳಿಗೆ ಹಪಹಪಿಸುತ್ತಿರುತ್ತಾನೆ. ಅಷ್ಟು ಸಿಕ್ಕೊಡನೆ ಎಲ್ಲವನ್ನೂ ಮರೆತು ಹೊಸ ಸವಾಲುಗಳಿಗೆ ಸಿದ್ಧನಾಗುತ್ತಾನೆ ಎಂಬುದನ್ನು ತಿಳಿಸುತ್ತದೆ. “ಬದುಕು ಎಲ್ಲರಿಗುಂಟು” ಎಂಬ ಕಥೆ ಇದರ ಮತ್ತೊಂದು ಹೃಸ್ವರೂಪವೇ ಸರಿ.

“ಬ್ರಹ್ಮಸೃಷ್ಟಿ”ಯಲ್ಲಿ ಬರುವ ಬಣ್ಣಗಳು ಅದಲು ಬದಲಾಗಿ ಕಾಣುವ ಅಂಗವೈಕಲ್ಯವನ್ನು ಸರಿಪಡಿಸಿಕೊಂಡು ಹೊರಗಿನ ಜಗತ್ತಿಗೆ ಹೊಂದಿಕೊಂಡು ಬದುಕುವ ಪಾತ್ರ ನಮ್ಮೆಲ್ಲರದೂ ಹೌದು. ನಮ್ಮ ಹಲವು ಬಲಹೀನತೆಗಳನ್ನು ಮುಚ್ಚಿಟ್ಟುಕೊಂಡು ಸಮಾಜಕ್ಕೆ ಹೊಂದಿಕೊಂಡು ಬದುಕುವುದು ಮತ್ತು ಮತ್ತೊಬ್ಬರ ಬಲಹೀನತೆಗಳ ಬಗ್ಗೆ ಮಾತಾಡುವುದು ಎರಡು ತಪ್ಪೆಂಬುದೇ ಕಥೆಯ ತಾತ್ಪರ್ಯ. ಮತ್ತೊಬ್ಬರೆಡೆಗೆ ಬೆರಳು ಮಾಡಿ ಅವರು ದೆವ್ವನಿರಬಹುದೇ ಎಂದುಕೊಂಡವನ ಮನಸ್ಸಲ್ಲೇ ದೆವ್ವದ ಒಂದು ರೂಪ ಮೂರ್ತವೆತ್ತಿರುತ್ತದೆ ಎಂಬುದನ್ನು”180° “ಎಂಬ ಕಥೆ ಹೇಳುತ್ತೆ. ನಾವು ಮತ್ತೊಬ್ವರ ಬಗ್ಗೆ ಹೊಂದಿದ ಅಭಿಪ್ರಾಯವನ್ನೇ ಮತ್ತೊಬ್ಬರು ನಮ್ಮ ಬಗ್ಗೆ ಹೊಂದಿರುತ್ತಾರೆ ಎಂಬುದನ್ನು ” ಬೆಟ್ಟದ ನೆಲ್ಲಿ ಸಮುದ್ರದ ಉಪ್ಪು”,”ಗೋಲ” ಕಥೆ ಹೇಳುತ್ತದೆ. ಈ ಎಲ್ಲ ಕಿರುಗತೆಗಳ ಸಾರಾಂಶ ಮತ್ತೊಬ್ಬರ ಬಗ್ಗೆ ಒಂದು ಅಭಿಪ್ರಾಯವನ್ನು ತಳೆಯುವ ಮುನ್ನ ಅವರ ಅನಿವಾರ್ಯತೆಗಳೇನು? ಸಂದಿಗ್ಧಗಳೇನು? ಎಂಬುದನ್ನು ಅರಿತಿರಬೇಕು ಎಂಬುದಾಗಿದೆ.

ಒಟ್ಟು ಇಪತ್ನಾಲ್ಕು ಕಥೆಗಳು ಬದುಕಿನ ಸಣ್ಣ ಸಂಗತಿಗಳನ್ನು ಹಿಡಿದಿಟ್ಟು ಓದುವಾಗ ನಮ್ಮ ನಡುವಿನ ಕಥೆಯನ್ನೇ ಪುಟಕ್ಕಿಳಿಸಿದಂತೆ ಅಥವಾ ನಮ್ಮನ್ನೇ ಆತ್ಮಾವಲೋಕನಕ್ಕೆ ಹಚ್ಚುವಷ್ಟು ಅಪ್ಯಾಯಮಾನವಾದ ಅಪರೂಪದ ಕೃತಿಯೇ “ಯುಗಾದಿ.”

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..