2092

ದೇವರನ್ನು ಹುಡುಕುತ್ತಾ…

ಇದು ಎಲ್ಲ ನಾಸ್ತಿಕರ ಮನಸ್ಸಲ್ಲಿರುವ ಪ್ರಶ್ನೆ. ನಾವು ದೇವರನ್ನು ನಂಬುತ್ತೇವೆ. ಆರಾಧಿಸುತ್ತೇವೆ. ಪೂಜಿಸುತ್ತೇವೆ. ಆದರೆ ಇದುವರೆಗೆ ದೇವರನ್ನು ನೇರವಾಗಿ ನೋಡಿದವರಿಲ್ಲ. ಅದರ ಬಗ್ಗೆ ಪುರಾವೆಗಳೂ ಇಲ್ಲ. ಹಾಗಾದರೆ ದೇವರು ನಿಜವಾಗಲು ಇದ್ದಾನೆಯೇ? ಇದ್ದರೆ ಎಲ್ಲಿದ್ದಾನೆ? ಹೇಗಿದ್ದಾನೆ? ಅದನ್ನ ತಿಳಿಯುವ ಮುನ್ನ ಈ ಕಥೆ ಕೇಳಿ.

ಒಂದೂರಲ್ಲಿ ಒಂದು ಹಳೆಯದಾದ ಶಿವನ ದೇಗುಲವಿತ್ತು. ಅದು ಅಲ್ಲಿನ ಪ್ರಸಿದ್ದ ದೇವಾಲಯವಾಗಿದ್ದು, ಎಲ್ಲರೂ ಪ್ರತಿ ನಿತ್ಯ ಬಂದು ಪೂಜೆ ಸಲ್ಲಿಸಿ ಹೋಗುತ್ತಿದ್ದರು. ತಮ್ಮ ಇಷ್ಟಾರ್ಥ ಈಡೇರಿಸುವ ಆರಾಧ್ಯ ದೇವರಾಗಿ ನಂಬಿದ್ದರು. ಹೀಗಿರುವಾಗ ಇದ್ದಕ್ಕಿದ್ದಹಾಗೆ ಆ ದೇವಾಲಯದ ಹುಂಡಿಯ ಹಣ ರಾತ್ರೋರಾತ್ರಿ ಕಳವಾಗಿತ್ತು. ಮಾರನೇ ದಿನ ಊರಿನ ಜನರಿಗೆಲ್ಲ ಇದು ನಂಬಲಸಾಧ್ಯವಾದ ಸುದ್ದಿಯಾಗಿತ್ತು. ದುಷ್ಟ ಶಿಕ್ಷಕ, ಶಿಷ್ಟ ರಕ್ಷಕ ಎಂದುಕೊಂಡಿದ್ದ ಶಿವನ ದೇವಾಲಯವೇ ಕಳವಾಗಿದ್ದು, ಜನರಲ್ಲಿ ಭೀತಿಯ ಭಾವನೆಯನ್ನು ಬಿತ್ತಿತ್ತು.

ಅದೇ ಊರಿನ ಮುದುಕನೊಬ್ಬ, ಎಲ್ಲರ ಹಾಗೆ ಆ ದೇವರ ಭಕ್ತನಾಗಿದ್ದು, ತನ್ನ ಚಿಕ್ಕ ವಯಸ್ಸಿನಿಂದ ಆ ದೇವರ ಬಗ್ಗೆ ನಂಬಿಕೆ ಇಟ್ಟುಕೊಂಡಿದ್ದ. ಕಳವಾದ ವಿಷಯ ಈತನಿಗೂ ಆಘಾತ ಉಂಟುಮಾಡಿತ್ತು. ಎಷ್ಟೇ ದಿನವಾದರೂ ಕಳ್ಳರು ಪತ್ತೆಯಾಗದ ಕಾರಣ, ಈ ಮುದುಕ ತಾನೇ ದೇವರ ಕುರಿತು ತಪಸ್ಸು ಮಾಡಿದ. ಈತನ ಭಕ್ತಿಗೆ ಒಲಿದ ಶಿವ ಪ್ರತ್ಯಕ್ಷನಾಗಿ, ತನ್ನ ತಪಸ್ಸಿಗೆ ಕಾರಣವೇನೆಂದು ಕೇಳಿದ. ಅದಕ್ಕೆ ನಿನ್ನ ದೇವಾಲಯದ ಹುಂಡಿಯ ಕಳವು ಮಾಡಿದವರಾರು? ಅವರನ್ನು ನೀನೇಕೆ ಶಿಕ್ಷಿಸಲಿಲ್ಲ? ಎಂದ. ಅದಕ್ಕೆ ದೇವರು ನಗುತ್ತ ಹೇಳಿದ, ” ಆ ಹಣವನ್ನು ಕದ್ದವ ನಿಮ್ಮ ಊರಿನ ಒಬ್ಬ ಬಡ ಕಳ್ಳ. ವಿಷಯ ತಿಳಿದಿದ್ದೂ, ನಾನು ಸುಮ್ಮನಿದ್ದೆ ಕಾರಣ , ಆ ಹಣವನ್ನು ಕದ್ದವ ಒಬ್ಬ ರಾತ್ರಿ ಕಳ್ಳನಾದರೆ, ಆ ಹುಂಡಿಗೆ ಹಣ ಹಾಕಿದವರು, ಹಗಲುಗಳ್ಳರು. ಯಾರಿಗೋ ವ್ಯವಹಾರದ ಹೆಸರಲ್ಲಿ ಮೋಸ ಮಾಡಿದ ಹಣ ಅದು. ಒಬ್ಬ ಕಳ್ಳನ ಹಣ, ಇನ್ನೊಬ್ಬ ಕಳುವಾಗ, ನಾನ್ಯಾಕೆ ಮಧ್ಯೆ ಪ್ರವೇಸಿಸಲಿ” ಎಂದ.

ಅಂದರೆ ದೇವರಿಗೆ ನಮ್ಮ ಭಕ್ತಿಯ ಸಾರವೇ ಬೇಕು ಹೊರತು, ನಾವು ಹರಕೆಯ ರೂಪದಲ್ಲಿ ನೀಡುವ ಹಣವಲ್ಲ. ಇತ್ತೀಚಿನ ದಿನಗಳಲ್ಲಿ ದೇವಾಲಯವೇ ಕಳವಾದಾಗ, ನಮ್ಮ ಮನಸ್ಸಲ್ಲಿರುವ ಪ್ರಶ್ನೆ ಇದೆ ಆಗಿತ್ತು. ಅಂದರೆ ದೇವರಿದ್ದಾನೆ, ಅವನನ್ನು ಕಾಣಲೂಬಹದು. ಆದರೆ ಅದು ನಮ್ಮ ಭಕ್ತಿಯ ಮಾರ್ಗದ ಮೂಲಕ. ದೇವಾಲಯದಲ್ಲಿ ನಮಗೆ ಸಿಗುವ ನೆಮ್ಮದಿಗಿಂತ, ಅಧಿಕ ನೆಮ್ಮದಿ ನಮಗೆ, ಕಷ್ಟದಲ್ಲಿರುವವರಿಗೆ ಸಹಾಯ ಮಾಡಿದಾಗ ಸಿಗುತ್ತದೆ. ನೀವು ಹಾಕಿದ ಹುಂಡಿಯ ಹಣ ನೇರವಾಗಿ ಸರ್ಕಾರಕ್ಕೆ ಹೋಗಿ, ಬೇರೆ ಯಾರದೋ ಪಾಲಾಗುತ್ತದೆ ಹೊರತು, ದೇವರಿಗಲ್ಲ. ನಾನಂತೂ ದೇವಾಲಯದಲ್ಲಿ, ನನ್ನ ಭಕ್ತಿಯನ್ನು ತೋರಿಸುತ್ತೇನೆ ಹೊರತು, ನನ್ನ ಜೇಬಿನಲ್ಲಿರುವ ಹಣವನ್ನಲ್ಲ. ನೀವು ಅದರ ಬಗ್ಗೆ ಯೋಚಿಸುತ್ತಿರಾ ???

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..