2563

ಒಂದು ವಿಯೋಗಕ್ಕೆ ಹುಡುಗಿಯ ಆಂತರ್ಯದ ಸಿದ್ಧತೆ

ಅವನೆಂದರೆ ಇಷ್ಟ ಆದರೆ ಇಷ್ಟ ಎಂದು ಹೇಳಿಕೊಳ್ಳುವಷ್ಟಲ್ಲ.
ಇಂಥ ಭಾವ ತುಡಿತಗಳು ಹೆಣ್ಣಿನ ಮನಸ್ಸಲ್ಲಿ ಇರುತ್ತದೆ.
ಅಪ್ಪಿತಪ್ಪಿ ಅವಳು ಭಾವ ತೀವ್ರತೆಗೊಳಗಾದರೆ ಪ್ರೇಮಕ್ಕೆ ಜಾರುವ ಸಂಬಂಧಗಳವು. ಸಂಬಂಧಕ್ಕೆ ಹೆಸರಿಡುವ ತವಕ ಹೆಸರಿಟ್ಟರೆ ನಿರೂಪಿಸುವ ಗೋಳು. ಇಂಥ ಭಾವಾತಿರೇಕಕ್ಕೆ ತಡೆಯೊಡ್ಡುವ ಪ್ರಯತ್ನದ ಎರಡು ಹಾಡುಗಳು ಒಂದೇ ಸಿನಿಮಾದಲ್ಲಿ ಬಂದಿವೆ. ನೀವು ಗಮನಿಸಿರಲಿಕ್ಕಿಲ್ಲ. ಆ ಚಿತ್ರವೇ “ಮುಂಗಾರು ಮಳೆ.”

ಇವನು ಗೆಳೆಯನಲ್ಲ
ಮತ್ತೊಂದು “ಅರಳುತಿರು ಜೀವದ ಗೆಳೆಯ.” ಈ ಎರಡು ಹಾಡುಗಳು ಒಂದಕ್ಕೊಂದು ತುಂಬಾ ಪೂರಕ. ಎರಡು ಹಾಡುಗಳಲ್ಲಿ ಕಥಾನಾಯಕಿ ತನ್ನ ಮನಸ್ಸಿನೊಂದಿಗೆ ಮಾತಾಡುತ್ತಾಳೆ. ಮೊದಲನೇಯ ಹಾಡಿನಲ್ಲಿ ಅವಳು ತನ್ನ ಮನಸ್ಸನ್ನು ತಹಬಂದಿಗೆ ತರಲು ಪ್ರಯತ್ನಿಸಿದರೆ ಎರಡನೇಯ ಹಾಡಿನಲ್ಲಿ ದಕ್ಕದ ಪ್ರೀತಿಗಾಗಿ ಸಾಂತ್ವನ ಹೇಳಿಕೊಳ್ಳುತ್ತಾಳೆ. ಸಾಹಿತ್ಯ ಇಂತಿದೆ.

“ಇವನು ಗೆಳೆಯನಲ್ಲ ಗೆಳತಿ ನಾನು ಮೊದಲೇ ಅಲ್ಲ
ಇವನು ಇನಿಯನಲ್ಲ ತುಂಬಾ ಸನಿಹ ಬಂದಿಹನಲ್ಲ
ನೋವಿನಲ್ಲೂ ನಗುತಿಹನಲ್ಲ ಯಾಕೆ ಈ ಥರ
ಜಾಣ ಮನವೇ ಕೇಳು ಜಾರಬೇಡ ಇವನ ಕಡೆಗೆ
ಯಾಕೆ ನಿನಗೆ ಸಲ್ಲದ ಸಲಿಗೆ, ಇರಲಿ ಅಂತರ
ಒಲವ ಹಾದಿಯಲ್ಲಿ ಇವನು ನನಗೆ ಹೂವೋ ಮುಳ್ಳೊ
ಮನದ ಕಡಲಿನಲ್ಲಿ ಇವನು ಅಲೆಯೋ ಭೀಕರ ಸುಳಿಯೊ
ಅರಿಯದಂಥ ಹೊಸ ಕಂಪನವೊ ಯಾಕೋ ಕಾಣೆನೊ
ಅರಿತೊ ಮರೆತೊ ಜೀವ ವಾಲದಂತೆ ಇವನ ಕಡೆಗೆ
ಸೋಲದಂತೆ ಕಾಯೇ ಮನವೆ ಉಳಿಸು ನನ್ನನು

ಇವನು ಇನಿಯಲ್ಲ ತುಂಬ ಸನಿಹ ಬಂದಿಹನಲ್ಲ

ತಿಳಿದು ತಿಳಿದು ಇವನು ತನ್ನ ತಾನೇ ಸುಡುತಿಹನಲ್ಲ
ಒಲುಮೆ ಎಂಬ ಸುಳಿಗೆ ಈಜು ಬರದೆ ಇಳಿದಿಹನಲ್ಲ
ಸಾವಿನಲ್ಲು ನಗುವುದ ಬಲ್ಲ ಏನೋ ಕಳವಳ
ಮುಳುಗುವವನ ಕೂಗು ಚಾಚುವಂತೆ ಮಾಡಿದೆ ಕೈಯ
ಜಾರಿ ಬಿಡುವುದೇ ಈ ಹೃದಯ ಏನೋ ತಳಮಳ
ಇವನು ಇನಿಯನಲ್ಲ ತುಂಬ ಸನಿಹ ಬಂದಿಹನಲ್ಲ.”

ಹಾಡಿನುದ್ದಕ್ಕೂ ಹುಡುಗಿಗೆ ತಾನು ಸೋಲುತ್ತೇನೆ ಎಂಬ ಆತಂಕವಿದೆ. ಮನಸ್ಸಿಗೆ ಬುದ್ದಿಹೇಳುತ್ತಾ ಸಾಗುತ್ತಾಳೆ.
ಮೊದಲ ಚರಣದಲ್ಲಿ ಅವಳ ಮನಸ್ಸು ನಿಯಂತ್ರಣದಲ್ಲಿಲ್ಲದ್ದು ಎದ್ದು ಕಾಣುತ್ತದೆ. ಯಾವುದೇ ಹುಡುಗಿ ಹುಡುಗನನ್ನು ದೂರವಿಡುವಾಗ ಒಮ್ಮೆಲೇ ದೂರ ಮಾಡಿದಂತೆ ಕಂಡರು. ಆಂತರ್ಯದಲ್ಲಿ ಅವಳು ಇಷ್ಟಿಷ್ಟೆ ಬಿಡುತ್ತಾ ಸಾಗುತ್ತಾಳೆ. ಮನಸ್ಸನ್ನು ಒಂದು ದೊಡ್ಡ ವಿಯೋಗಕ್ಕೆ ಸಿದ್ಧ ಪಡಿಸಿಕೊಳ್ಳುತ್ತಾಳೆ.
ಕೆಲವೊಮ್ಮೆ ಅತಿಯಾದ ಸಲಿಗೆ ಅವನೆಡಿಗಿನ ಸೆಳೆತವನ್ನು ಜಾಸ್ತಿ‌ ಮಾಡುವುದು ಎಂಬ ಆತಂಕದಿಂದ ಆ ಸಲಿಗೆಯನ್ನು ಕಡಿಮೆ ಮಾಡುತ್ತಾಳೆ. ಯಾಕೆಂದರೆ ಅವನು ಪ್ರೇಮಿಯೆಂದು ಒಪ್ಪಲು ಮನಸ್ಸು ಬಿಡುವುದಿಲ್ಲ ‌. ಒಲವ ಹಾದಿಯಲ್ಲಿ ಇವನು ನನಗೆ ಹೂವೋ ಮುಳ್ಳೊ ಎಂಬ ಗೊಂದಲವಿದೆ. ಅಕಸ್ಮಾತ ಮನಸ್ಸು ಜಾರಿಬಿಟ್ಟರೆ ಅಲೆಯಾಗಿದ್ದರೆ ತೇಲಿ ಹೋಗಿ ಬಿಡಬಹುದು. ತನ್ನೊಳಗೆ ನುಂಗಿ ಬಿಡುವ ಭೀಕರ ಸುಳಿಯಾದರೆ?
ನನ್ನ ಹೃದಯದ ಹೊಸ ಕಂಪನ ಯಾವುದಕ್ಕೆ ಯಾವ ಪುರುಷಾರ್ಥಕ್ಕೆ ಯಾವುದಿದು ಹೆಸರೇ ಇಡದ ಸಂಬಂಧ. ಯಾರಿವ ಗುರುತೇ ಹತ್ತದ ಆದರೂ ಸೆಳೆಯುವ ಹುಡುಗ? ಹೀಗೆ ಮನಸ್ಸಿನ ದ್ವಂದ್ವ ಯಕ್ಷಪ್ರಶ್ನೆಗಳಿಗೆ ನಿರುತ್ತರಳಾಗಿ ನಿಸ್ಸಹಾಯಕಳಾಗಿ ಬಿಡುತ್ತಾಳೆ. ಇಂಥ ಅರಿಯದವನ ಕಡೆ ನೀನು ವಾಲ ಬೇಡವೆಂದು ಪರಿ ಪರಿಯಾಗಿ ಮನಸ್ಸಿಗೆ ವಿನಂತಿಸುತ್ತಾಳೆ.

ಪ್ರೇಮವೆಂಬ ಸಂಬಂಧಕ್ಕೆ ಮನಸ್ಸು ಸಿದ್ಧಗೊಂಡಿರುವುದಿಲ್ಲ ವಿನಃ
ಅದು ಹುಡುಗನೆಡೆಗಿನ ದ್ವೇಷವಲ್ಲ. ಅವನೆಡೆಗೆ ಅನುಕಂಪವಿದೆ ಇದು ಹಾಡಿನ ಎರಡನೇ ಚರಣದಲ್ಲಿದೆ. ನಮ್ಮ ಸಂಬಂಧ ತೆಲಿಸಿಕೊಂಡು ಹೋಗುವ ನದಿಯಲ್ಲಿ ಅದು ಸುಳಿ. ಗೊತ್ತಿದ್ದು ಇವನು ಅಂತ ಸುಳಿಗೆ ಇಳಿದಿದ್ದಾನಲ್ಲ.ಪ್ರೇಮವನ್ನು ನಿಭಾಯಿಸುವುದು ಉಭಯ ಮನಸ್ಸುಗಳಿಗೂ ಸುಳಿಯ ವಿರುದ್ಧ ಈಜಿದಂತೆ. ಈಜು ಬರದೇ ಇಳಿದ ಭಂಡತನದವನು ಅವನು.
ಕಣ್ಣ ಮುಂದೆ ಅವನು ಮುಳುಗುವಾಗಿನ ಆಕ್ರಂದನ ಕೇಳಿ ಕೈಚಾಚಿ ಬಿಡುವಂತೆ ಮನಸ್ಸಲ್ಲೊಂದು ಕಳವಳವಿದೆ. ಆದರೂ ಕೈಚಾಚಿ ಬಿಟ್ಟರೆ ಸಂಬಂಧಕ್ಕೆ ಸಮ್ಮತಿ ಇತ್ತಂತೆ ಎಂದು ದೂರ ನಿಲ್ಲುತ್ತಾಳೆ. ಸ್ಪಷ್ಟವಾಗಿ ಅದೊಂದು ಅನುಕಂಪ ಅದನ್ನು ಅನುರಾಗಕ್ಕೆ ತಿರುಗಿಸಲು ಅವಳ ಆಂತರ್ಯ ಒಪ್ಪಿಗೆ ನೀಡುತ್ತಿಲ್ಲ. ಆದರೂ ತನ್ನನ್ನೇ ತಾನು ಸುಟ್ಟುಕೊಂಡು ಪ್ರೀತಿಯನ್ನು ನಿರೂಪಿಸುವ ಅವನ ಬಗೆಯನ್ನು ಕಂಡಾಗಲೆಲ್ಲ ಅವಳ ಮನಸ್ಸು ತಳಮಳಗೊಳ್ಳುತ್ತದೆ.

ಸಮಾಜ ಕುಟುಂಬ ಇಂತವೇ ಹಲವಾರು ಸಂದಿಗ್ಧತೆಯಲ್ಲಿರುವ ಹುಡುಗಿಗೆ ಸುಲಭಕ್ಕೆ ವಿಯೋಗಿಸಲು ಆಗದ ಒಪ್ಪಿಕೊಳ್ಳಲು ಆಗದ ಅಮೂರ್ತ ಸಂಬಂಧವನ್ನು ಹಾಡಿನಲ್ಲಿ ಕಟ್ಟಿಕೊಟ್ಟ ಬಗೆ ಚೆನ್ನಾಗಿದೆ.

ಕೆಲವೊಮ್ಮೆ ಇಂಥ ಸುದೀರ್ಘ ಹಾಡಿನ ಅರ್ಥವನ್ನು ಒಂದೇ ಸಾಲಿನಲ್ಲಿ ಕಟ್ಟಿಕೊಡುವಂತಹ ಮತ್ತೊಂದು ಹಾಡುಗಳಿರುತ್ತವೆ.
ಲಾಕ್ ಸಂಬಾಲೋ ಏ ಮೇರೆ ದಿಲ್ ಕೋ ದಿಲ್ ದಡಕೇ ಹೀ ಜಾಯೆ
ಎಂಬಂಥ ಹಿಂದಿಯ “ಕಲ್ ಹೋ ನಾ ಹೋ” ಹಾಡಿನ ಸಾಲು ಈ ಇಡೀ ಹಾಡನ್ನು ಒಂದೇ ಸಾಲಿನಲ್ಲಿ ಕಟ್ಟಿಕೊಡುತ್ತದೆ.
ಈ ಹಾಡನ್ನು ಪ್ರೇಮ ವಿಯೋಗಕ್ಕೆ ಹುಡುಗಿಯ ಆಂತರ್ಯದ ಸಿದ್ಧತೆ ಎಂದು ಹೇಳಬಹುದು. ಹೌದು ಅವಳು ಒಮ್ಮೆಲೇ ಬಿಟ್ಟಿರುವುದಿಲ್ಲ. ಒಳಗೊಳಗೆ ಬೆಂದಿರುತ್ತಾಳೆ. ಅದು ನಮಗೆ ಗೊತ್ತಾಗುವುದಿಲ್ಲ‌. ಕಠೋರಿಯೆಂದು ದೂಷಿಸುವ ಮುನ್ನ ಅವಳ ಸಂದಿಗ್ಧವನ್ನು ನೋಡಲೇಬೇಕಲ್ಲವೇ? ಇನ್ನೊಂದು ಹಾಡನ್ನು ಮುಂದಿನ ವಾರ ನೋಡೋಣ.

ಹಾಡು ಜಾಡು ಎರಡನೇ ಅಂಕಣ ಓದಲು ಇಲ್ಲಿ ಕ್ಲಿಕ್ಕ್ ಮಾಡಿ

ಹಾಡು ಜಾಡು ಮೊದಲನೇ ಅಂಕಣ ಓದಲು ಇಲ್ಲಿ ಕ್ಲಿಕ್ಕ್ ಮಾಡಿ

 

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..