- By Guest Writer
- Thursday, March 10th, 2016
ಎಲೆಕ್ಷನ್ ಅಂದಾಗ ನನಗೆ ನೆನಪಾಗೋದು ನನ್ನ ಏಳನೇ ತರಗತಿಯ ದಿನಗಳು, ‘ಎಸ್.ಪಿ.ಎಲ್’ ಕ್ಯಾಂಡಿಡೇಟ್ ಆಗಿ ನಿಂತಿದ್ದೆ. ಪ್ರತಿ ಸ್ಪರ್ಧಿಯಾಗಿ ಇನ್ನೂ ಮೂವರು ನಿಂತಿದ್ದರು. ಅಪರಾಹ್ನ ಬಿಸಿಊಟದ ಬಳಿಕ ನಮ್ಮ ಕ್ಯಾನ್ ವಾಸ್ ಪ್ರಾರಂಭವಾಗುತ್ತಿತ್ತು.
ಇದ್ದ ಬದ್ದ ಕ್ಲಾಸಿಗೆ ಕೈ ಮುಗಿದು ವೋಟು ಕೇಳಿ ಬರುವುದು ಅಂದಿನ ಒಂದು ರೀವಾಜು,
ಅದರೊಂದಿಗೆ ಪೊಳ್ಳು ಆಶ್ವಾಸನೆ ಕೊಟ್ಟು ಮಾರ್ಡನ್ ರಾಜಕಾರಣಿಗಳ ಹಾಗೇ ಬೆಳೆಸಿಕೊಂಡು ಬಂದಿದ್ದೆ ಒಂಥರಾ ಈಮೇಜು. ನಾನೇ ಗೆಲ್ತೇನೆ ಎಂಬ ಓವರ್ ಆತ್ಮವಿಶ್ವಾಸ
ಒಂದು ಕಡೆ ಸಂಪೂರ್ಣ ನೆಲೆಯೂರಿತ್ತು. ಇದ್ದ ಬದ್ದವರೆಲ್ಲ ಮುದ್ದು ಮುದ್ದು ಮಾತುಗಳಾಡಿ ಬೆಣ್ಣೆ ಸವರಿ ಹೋಗಿದ್ದರು.
ಕನಸಲ್ಲೂ ಸಹಿತ ನಾನೇ ವಿದ್ಯಾರ್ಥಿ ನಾಯಕ ಇನ್ನೂ ನನ್ನದೇ ರಾಜ್ಯಭಾರ ಎಂದು ಆ ದಿನದಿಂದ ನಿದ್ದೆ ಬಿಟ್ಟೇ ಬಿಟ್ಟಿದ್ದೆ. ಹಾಗೋ, ಹೇಗೋ, ಎಲೆಕ್ಷನ್ ದಿನ ಬಂತು,
ಮೊದಲು ಅಭ್ಯರ್ಥಿಗಳು ಮತ ಹಾಕಬೇಕು ಎಂಬುದಾಗಿ ನಮ್ಮ ಮುಖ್ಯೋಪಧ್ಯಾಯರು
ಆದೇಶ ಹೊರಡಿಸಿದರು.
ಮೊದಲು ನಾನು ಮತಗಟ್ಟೆಯ ಎದುರು ನಿಂತು ಒಮ್ಮೆಗೆ ಚಿಂತಿಸಿದೆ ನನ್ನ ಈ ವೋಟನ್ನು ,ನನ್ನ ಪ್ರತಿಸ್ಪರ್ಧಿಗೆ ಹಾಕಿದ್ರೆ ಹೇಗೆ? ಒಂದು ಟಫ್ ಕಾಂಪಿಟೇಶನ್ ಆದ್ರೂ ಬರಬಹುದು.
ಅದೇ ಹೊತ್ತಿಗೆ ಬೇಡ ಮೊದಲ ವೋಟು ಬೇರೆ ,ಅದು ನನಗೆ ಬೀಳಲಿ ಎಂದು ನನ್ನ ಮತವನ್ನೂ ನನಗೆ ಹಾಕಿ ಅಲ್ಲೇ ಪಕ್ಕದಲ್ಲೇ ಹೋಗಿ ನಿಂತೆ, ಒಟ್ಟು 250 ವಿದ್ಯಾರ್ಥಿಗಳು ಮತ ಚಲಾವಣೆ ಮಾಡಿದ್ದರು,
ಕೆಲ ಹೊತ್ತಿನಲ್ಲಿ ಮತ ಎಣಿಕೆ ಆರಂಭವಾಯಿತು,
ಆ ಮತ ಎಣಿಕೆ ನಿಜವಾಗಿಯೂ ಶೇರು ಮಾರುಕಟ್ಟೆಯ ಸೂಚ್ಯಾಂತಕದ ಕುಸಿತದಂತೆ ಕಣ್ಗೆ ಕಾಣ ತೊಡಗಿತು.
ವಾಸ್ತವನ್ನು ನಂಬುವುದೇ ಕಷ್ಟ ಅನಿಸಿತ್ತು. ಫಲಿತಾಂಶ ನಂಬಬೇಕೋ ಬೇಡವೋ ಎಂಬ ಗೊಂದಲದಲ್ಲಿ ನನ್ನ ನಿಲ್ಲುವಂತೆ ಮಾಡಿತು. ಫಲಿತಾಂಶದಲ್ಲಿ ನನ್ನ ವೋಟು ಮಾತ್ರ ನನ್ನ ಪರವಾಗಿ ಇತ್ತು..
ವಾಸ್ತವ ನನ್ನನ್ನು ಅಕ್ಷರಶಃ ನೆಲಕ್ಕೆ ಉರುಳಿಸಿತ್ತು.
ಒಂದೋಟು ,ಒಂದೋಟು, ಹೇಳಿ ಆ ಒಂದು ವರುಷ ಎಲ್ಲರ ಬಾಯಿಂದ ಅಪಹಾಸ್ಯಕ್ಕಿಡಾಗಿ ಬದುಕಬೇಕಾಗಿ ಬಂತು. ಆದರೆ ಇವತ್ತು ಮಾತ್ರ ಅದನೆಲ್ಲಾ ನೆನಪಿನಂಗಳದಲ್ಲಿ ನೆನಯಲು ಖುಷಿಯಾಗುತಿದೆ.
ನನ್ನದೂ ಹೀಗೊಂದು ಕಥೆಯಿತ್ತು ಮಾರಾರ್ಯೆ ಅನ್ನೋಕೆ ಮುಜುಗರವಾಗುತ್ತಿಲ್ಲ, ನಿಜವಾಗಿಯೂ ಹೆಮ್ಮೆಯಾಗುತ್ತಿದೆ.
Contributed by : ಪರಮ್ ಭಾರದ್ವಾಜ್